ಸರಕಾರಿ ಅಧಿಕಾರಿಗಳ, ಸೇನಾಪಡೆ ಯೋಧರ ದುರ್ಬಳಕೆ
Photo: twitter.com/NewsArenaIndia (ಸಾಂದರ್ಭಿಕ ಚಿತ್ರ)
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಈ ವರೆಗೆ ಯಾರೂ ಸಾಗದಂತಹ ಅಡ್ಡಹಾದಿಯನ್ನು ಹಿಡಿದಿದೆ. ಕಳೆದ ಒಂಭತ್ತು ವರ್ಷಗಳ ತನ್ನ ಸರಕಾರದ ಸಾಧನೆಗಳನ್ನು ಜನರಿಗೆ ವಿವರಿಸಲು ಸರಕಾರಿ ಅಧಿಕಾರಿಗಳನ್ನು ಮತ್ತು ಸೇನಾಪಡೆ ಯೋಧರನ್ನು ಮಾರುಕಟ್ಟೆ ಏಜೆಂಟರಂತೆ ಬಳಸಿಕೊಳ್ಳಲು ಮುಂದಾಗಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಡೀ ಆಡಳಿತ ವ್ಯವಸ್ಥೆಯನ್ನೇ ಬಿಜೆಪಿ ಪ್ರಚಾರದಲ್ಲಿ ತೊಡಗಿಸಲು ಹೊರಟಿರುವುದು ಅಧಿಕಾರದ ಅಗ್ಗದ ದುರ್ಬಳಕೆಯಲ್ಲದೆ ಬೇರೇನೂ ಅಲ್ಲ.
ಸರಕಾರದ ಹಿರಿಯ ಅಧಿಕಾರಿಗಳನ್ನು ಜಿಲ್ಲಾ ಮಟ್ಟದಲ್ಲಿ ‘ರಥ ಪ್ರಭಾರಿ’ ಗಳೆಂದು ಹೆಸರು ಕೊಟ್ಟು ಕಳೆದ ಒಂಭತ್ತು ವರ್ಷಗಳ ಮೋದಿ ಸರಕಾರದ ಸಾಧನೆಗಳ ಪ್ರಚಾರದಲ್ಲಿ ತೊಡಗಿಸಲು ಹೊರಟಿರುವುದು ನಿರ್ಲಜ್ಜತನದ ಪರಮಾವಧಿಯಾಗಿದೆ. ವಾರ್ಷಿಕ ರಜೆ ಪಡೆದು ಊರಿಗೆ ಹೋಗಿರುವ ಸೇನಾಪಡೆಗಳ ಯೋಧರು ಬಿಜೆಪಿ ಪ್ರಚಾರಕರಾಗಬೇಕಾಗಿ ಬಂದಿದೆ. ಸಂಘ ಪರಿವಾರ ಇಂತಹವರಿಗೆ ಸಂಸ್ಕೃತ ಬೂಯಿಷ್ಟ ಪದಗಳನ್ನು ಹುಡುಕಿ ನಾಮಕರಣ ಮಾಡುವಲ್ಲಿ ಕುಖ್ಯಾತಿ ಗಳಿಸಿದೆ. ಬಿಜೆಪಿ ಸರಕಾರದ ಸಾಧನೆಗಳ ಪ್ರಚಾರಕರು ‘ರಥ ಪ್ರಭಾರಿ’ಗಳಂತೆ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಚುನಾವಣೆಗಳು ಸಮೀಪಿಸಿರುವಾಗ ಸರಕಾರದ ಆಡಳಿತ ಯಂತ್ರ ರಾಜಕಾರಣ ದಿಂದ ದೂರದಲ್ಲಿ ಇರಬೇಕು. ಹಿಂದಿನ ಯಾವ ಸರಕಾರವೂ ಈ ರೀತಿ ಆಡಳಿತ ಸಿಬ್ಬಂದಿಯನ್ನು ಚುನಾವಣಾ ಪ್ರಚಾರಕ್ಕೆ ದುರುಪಯೋಗ ಮಾಡಿಕೊಂಡಿಲ್ಲ. 765 ಜಿಲ್ಲೆಗಳಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಸಮನ್ವಯಕ್ಕೆ ಸರಕಾರದ ಜಂಟಿ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗಳನ್ನು ‘ರಥ ಪ್ರಭಾರಿ’ಗಳನ್ನಾಗಿ ನೇಮಕ ಮಾಡಲಾಗುವುದಂತೆ, ಇದು ಸರಕಾರಿ ನೌಕರರ ಸೇವಾ ನಿಯಮಾವಳಿಗಳ ಉಲ್ಲಂಘನೆಯಲ್ಲವೇ?. ಸರಕಾರದ ನಿಯಮಾವಳಿ ಪ್ರಕಾರ ಯಾವುದೇ ಸರಕಾರಿ ನೌಕರ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಆದರೆ ಮೋದಿ ಸರಕಾರ ಈ ನಿಯಮಾವಳಿಗಳನ್ನು ಗಾಳಿಗೆ ತೂರಿದೆ.
ಆರೆಸ್ಸೆಸ್ ನಿಯಂತ್ರಿತ ಮೋದಿ ನೇತೃತ್ವದ ಬಿಜೆಪಿ ಸರಕಾರ ಪ್ರತಿಪಕ್ಷಗಳನ್ನು ಮತ್ತು ಭಿನ್ನಾಭಿಪ್ರಾಯ ಹೊಂದಿದವರನ್ನು ಹತ್ತಿಕ್ಕಲು ಈಗಾಗಲೇ ಸಿಬಿಐ, ಜಾರಿ ನಿರ್ದೇಶನಾಲಯ, ತೆರಿಗೆ ಇಲಾಖೆ ರಾಷ್ಟ್ರೀಯ ತನಿಖಾ ಸಂಸ್ಥೆಗಳನ್ನು ಮನ ಬಂದಂತೆ ಬಳಸಿಕೊಳ್ಳುತ್ತಾ ಬಂದಿದೆ. ತನ್ನ ಕೋಮುವಾದಿ, ಫ್ಯಾಶಿಸ್ಟ್ ಸಿದ್ಧಾಂತವನ್ನು ಒಪ್ಪಿಕೊಳ್ಳಲು ನಿರಾಕರಿಸುವ ಹಾಗೂ ಅದನ್ನು ವಿರೋಧಿಸುವ ಎಲ್ಲರನ್ನೂ ಹತ್ತಿಕ್ಕಲು ಮುಂದಾಗಿರುವುದು ಖಂಡನೀಯವಾಗಿದೆ.
ಸರಕಾರದ ಸೌಲಭ್ಯಗಳ ಬಗ್ಗೆ ಸರಕಾರಿ ಅಧಿಕಾರಿಗಳು ಜನರಿಗೆ ಮಾಹಿತಿ ನೀಡುವುದು ತಪ್ಪಲ್ಲ, ಆದರೆ ಅದರ ಬದಲಿಗೆ ಬಿಜೆಪಿ ಸರಕಾರದ ಸಾಧನೆಗಳ ಪ್ರಚಾರಕರಾಗುವುದು ಸರಿಯಲ್ಲ. ಸರಕಾರದ ಸಾಧನೆಗಳು ಅಂದರೆ ಸ್ವಾತಂತ್ರ್ಯಾನಂತರದ ಎಲ್ಲಾ ಸರಕಾರಗಳ ಸಾಧನೆ, ಕಾರ್ಯಕ್ರಮಗಳನ್ನು ಜನರಿಗೆ ವಿವರಿಸಿದರೆ ಅಭ್ಯಂತರವಿಲ್ಲ. ಆದರೆ ಮೋದಿ ಸರಕಾರ ಈಗ ಮಾಡಲು ಹೊರಟಿರುವುದು ಕಳೆದ ಒಂಭತ್ತು ವರ್ಷಗಳ ಬಿಜೆಪಿ ಸರಕಾರದ ಸಾಧನೆಗಳ ಪ್ರಚಾರಕ್ಕೆ ಮಾತ್ರ.
ದೇಶದ ಗಡಿಯಲ್ಲಿ ಕೊರೆಯುವ ಚಳಿ ಮತ್ತು ಮಳೆಯಲ್ಲಿ ಪ್ರಾಣವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸುವ ಯೋಧರು ವರ್ಷಕ್ಕೊಮ್ಮೆ ತಮ್ಮ ಕುಟುಂಬದ ಸದಸ್ಯರ ಜೊತೆ ಕಳೆಯಲು ಊರಿಗೆ ಹೋಗುತ್ತಾರೆ. ಅವರ ರಜೆಯನ್ನು ಅನುಭವಿಸುವ ಸ್ವಾತಂತ್ರ್ಯ ಅವರಿಗಿರಬೇಕು. ಆದರೆ ರಕ್ಷಣಾ ಸಚಿವಾಲಯವು ಅಕ್ಟೋಬರ್ 9ರಂದು ಹೊರಡಿಸಿದ ಆದೇಶದ ಪ್ರಕಾರ ಯೋಧರು ರಜೆಯ ಅವಧಿಯಲ್ಲಿ ಬಿಜೆಪಿ ಸರಕಾರದ ಸಾಧನೆಗಳ ಪ್ರಚಾರಕ್ಕೆ ಹೋಗಬೇಕಾಗುತ್ತದೆ. ಇದು ರಾಷ್ಟ್ರ ಭಕ್ತಿಯ ಬಗ್ಗೆ ಪುಗಸಟ್ಟೆ ಮಾತಾಡುತ್ತಾ ಕಾರ್ಪೊರೇಟ್ ಬಂಡವಾಳಿಗರ ಹಿತಾಸಕ್ತಿಗಳನ್ನು ರಕ್ಷಿಸುವ ಪಕ್ಷದ ನಿಜಸ್ವರೂಪವೆಂದರೆ ಅತಿಶಯೋಕ್ತಿಯಲ್ಲ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೇನಾಪಡೆಗಳ ಯೋಧರ ನಿಷ್ಠೆ ದೇಶಕ್ಕೆ ಮತ್ತು ಸಂವಿಧಾನಕ್ಕೆ ಇರಬೇಕೇ ಹೊರತು ಯಾವುದೇ ಪಕ್ಷಕ್ಕೆ ಅಲ್ಲ. ಬಿಜೆಪಿ ತನ್ನ ಚುನಾವಣಾ ಸ್ವಾರ್ಥಕ್ಕೆ ಇಷ್ಟು ಕೀಳುಮಟ್ಟಕ್ಕೆ ಇಳಿಯಬಾರದಿತ್ತು. ಆದರೆ ಕಳೆದ ಒಂಭತ್ತು ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಯಾವ ಸಾಧನೆಯನ್ನೂ ಮಾಡದ, ದೇಶವನ್ನು ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿಸಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ತನ್ನ ಮಾನ ಮುಚ್ಚಿ ಕೊಳ್ಳಲು ಸರಕಾರದ ಉನ್ನತ ಅಧಿಕಾರಿಗಳನ್ನು ಮತ್ತು ಸೇನಾ ಪಡೆಗಳ ಯೋಧರನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಅದು ತಲುಪಿದ ಅಧೋಗತಿಗೆ ಉದಾಹರಣೆಯಾಗಿದೆ.
ಈ ರೀತಿ ಸರಕಾರದ ಅಧಿಕಾರಿಗಳನ್ನು ಬಿಜೆಪಿ ಸರಕಾರ ತನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವುದರಿಂದ ಮುಂದಿನ ಒಂದು ವರ್ಷ ಆಡಳಿತ ವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯಗೊಳ್ಳಲಿದೆ. ಇದು ದೈನಂದಿನ ಆಡಳಿತದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಅಷ್ಟೇ ಅಲ್ಲ ಇಂಥ ಕೆಟ್ಟ ಸಂವಿಧಾನ ಬಾಹಿರ ಸಂಪ್ರದಾಯವನ್ನು ಹುಟ್ಟುಹಾಕುವ ಮೂಲಕ ಮುಂದಿನ ಸರಕಾರಗಳು ಕೂಡ ಇದನ್ನು ಅನುಸರಿಸುವಂತಹ ಅಪಾಯವೂ ಇದೆ. ಸರಕಾರದ ಸಾಧನೆಗಳ ಪ್ರಚಾರಕ್ಕೆ ಬಿಜೆಪಿಗೆ ಯಾವ ಕೊರತೆಯೂ ಇಲ್ಲ. ಆರೆಸ್ಸೆಸ್ ಸ್ವಯಂ ಸೇವಕರ ಪಡೆಯೇ ಇದೆ. ಕಾರ್ಪೊರೇಟ್ ಕಂಪೆನಿಗಳ ಕೋಟಿ, ಕೋಟಿ ಹಣ ಹರಿದುಬರುತ್ತದೆ. ಭಾರತೀಯರನ್ನು ಕೋಮು ಆಧಾರದಲ್ಲಿ ವಿಭಜಿಸಲು ಸಾವರ್ಕರ್, ಗೊಳ್ವಾಲ್ಕರ್, ಗೋಡ್ಸೆ ಸಿದ್ಧಾಂತಗಳಿವೆ. ರಕ್ತಪಾತ ಮಾಡಲು ಹೇಸದ ಫ್ಯಾಶಿಸ್ಟ್ ಕ್ರೌರ್ಯವಿದೆ.ಇಷ್ಟೆಲ್ಲಾ ಇದ್ದಾಗಲೂ ಪಕ್ಷದ ಪ್ರಚಾರಕ್ಕೆ ಸರಕಾರದ ಉನ್ನತ ಅಧಿಕಾರಿಗಳನ್ನು ಮತ್ತು ಸೇನಾ ಪಡೆಯ ಯೋಧರನ್ನು ದುರುಪಯೋಗ ಮಾಡಿಕೊಳ್ಳಲು ಹೊರಟಿರುವುದನ್ನು ಗಮನಿಸಿದರೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತು ಅವರ ಪಕ್ಷಕ್ಕೆ ಸೋಲಿನ ಭೀತಿ ಬೆಂಬತ್ತಿ ಕಾಡುತ್ತಿದೆ ಎನ್ನಿಸುತ್ತಿದೆ.
ಮೋದಿ ಸರಕಾರ ಈಗಾಗಲೇ ಸರಕಾರಿ ಮಾಧ್ಯಮಗಳನ್ನು ತನ್ನ ರಾಜಕೀಯ ಹಿತಾಸಕ್ತಿಗಳ ಸಲುವಾಗಿ ಬಳಸಿಕೊಳ್ಳುತ್ತಿದೆ. ಆಡಳಿತಾಂಗ ಮಾತ್ರವಲ್ಲ ನ್ಯಾಯಾಂಗದಲ್ಲೂ ಹಸ್ತಕ್ಷೇಪ ಮಾಡಿದ ಉದಾಹರಣೆಗಳಿವೆ. ಸುಪ್ರೀಂ ಕೋರ್ಟ್ ಕೊಲಿಜಿಯಂ ನ್ಯಾಯಾಧೀಶರ ನೇಮಕ ಮಾಡಿಕೊಳ್ಳುವಂತೆ ಸೂಚಿಸಿದರೂ ನೇಮಕ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದೆ ಸ್ವತಂತ್ರ ಮಾಧ್ಯಮಗಳ ಕತ್ತು ಹಿಸುಕಲು ಯತ್ನಿಸುತ್ತಿದೆ, ಹೀಗಾಗಿ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಅಪಾಯದಲ್ಲಿವೆ.
ಜನತೆ ಇನ್ನಾದರೂ ಎಚ್ಚೆತ್ತುಕೊಳ್ಳದೇ ಇದ್ದಲ್ಲಿ ದೇಶ ಅಧೋಗತಿಗೆ ಸಾಗುವುದಂತೂ ನಿಶ್ಚಿತ.