ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಸರಕಾರದ ನಕಾರಾತ್ಮಕ ಧೋರಣೆ
Photo: wikipedia.org/wiki/Right_to_Information
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಆಡಳಿತ ಮತ್ತು ಸರಕಾರಿ ನಿಯಂತ್ರಣದ ಸಾರ್ವಜನಿಕ ಸಂಘ ಸಂಸ್ಥೆಗಳ ಕಾರ್ಯನಿರ್ವಹಣೆ ಪಾರದರ್ಶಕವಾಗಿರಲೆಂದು ಹದಿನೆಂಟು ವರ್ಷಗಳ ಹಿಂದೆ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದರು. ಅಕ್ರಮ ವ್ಯವಹಾರಗಳಲ್ಲಿ ತೊಡಗಿದ ಭ್ರಷ್ಟರಲ್ಲಿ ನಡುಕು ಹುಟ್ಟಿಸಿದ್ದ ಈ ಮಾಹಿತಿ ಹಕ್ಕು ಕಾಯ್ದೆ(ಆರ್ಟಿಐ) ಈಗ ಸಂಪೂರ್ಣ ನಿಷ್ಕ್ರಿಯ ವಾದಂತೆ ಕಾಣುತ್ತದೆ. ನಾನೂ ತಿನ್ನುವುದಿಲ್ಲ ಇತರರನ್ನೂ ತಿನ್ನಲು ಬಿಡುವುದಿಲ್ಲ ಎಂದು ಹೇಳುತ್ತಲೇ ಅಧಿಕಾರಕ್ಕೆ ಬಂದವರ ನಕಾರಾತ್ಮಕ ಧೋರಣೆಯಿಂದಾಗಿ ಈ ಮಾಹಿತಿ ಹಕ್ಕು ಕಾಯ್ದೆಯ ಭವಿಷ್ಯ ಅತಂತ್ರವಾಗಿದೆ. ಯಾವುದೇ ಕಾಯ್ದೆಯನ್ನು ರಚಿಸಿದರೆ ಸಾಲದು ಸರಕಾರ ಯಾರದೇ ಇರಲಿ ಆ ಕಾಯ್ದೆಯ ಅನುಷ್ಠಾನದ ಬಗ್ಗೆ ಆಸಕ್ತಿ ಕಳೆದುಕೊಂಡರೆ ಆ ಕಾಯ್ದೆ ದುರ್ಬಲವಾಗುತ್ತದೆ. ಈ ಕುರಿತು ಸ್ವಯಂ ಸೇವಾ ಸಂಸ್ಥೆಯೊಂದು ಅಧ್ಯಯನ ನಡೆಸಿ ನೀಡಿರುವ ವರದಿಯ ಪ್ರಕಾರ ದೇಶದ ಬಹುತೇಕ ಕಡೆ ಈ ಮಾಹಿತಿ ಹಕ್ಕು ವ್ಯವಸ್ಥೆ ಸಂಪೂರ್ಣ ವಾಗಿ ನಿಷ್ಕ್ರಿಯವಾಗಿದೆ.
ಅತ್ಯಂತ ವ್ಯವಸ್ಥಿತವಾಗಿ ಈ ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಲಗೊಳಿಸಲಾಗಿದೆ. ಸಾರ್ವಜನಿಕರು ಮಾಹಿತಿಯನ್ನು ಬಯಸಿ ಸಲ್ಲಿಸಿರುವ ಅರ್ಜಿಗಳು, ದೂರುಗಳು ಮತ್ತು ಮೇಲ್ಮನವಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ.ಆದರೆ ಇವುಗಳ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲ. ಕೆಲವು ರಾಜ್ಯಗಳಲ್ಲಿ ಮಾಹಿತಿ ಹಕ್ಕು ಆಯುಕ್ತರ ನೇಮಕವನ್ನೇ ಮಾಡಿಲ್ಲ. ಹೀಗಾಗಿ ಮಾಹಿತಿ ಹಕ್ಕು ಆಯೋಗ ಹೆಸರಿಗೆ ಮಾತ್ರ ಉಳಿದಿದೆ. ಮಾಹಿತಿ ಹಕ್ಕು ಆಯೋಗದ ನೈಜ ಉದ್ದೇಶಗಳು ಜಾರಿಯಾಗದಂತೆ ತಡೆಯಲು ಕೆಲವು ಕಾಯ್ದೆಗಳನ್ನು ಸರಕಾರ ರೂಪಿಸಿದೆ. ಸರಕಾರದ ಉದ್ದೇಶಪೂರ್ವಕವಾದ ಈ ನಕಾರಾತ್ಮಕ ಧೋರಣೆಯಿಂದ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಸ್ವಯಂ ಸೇವಾ ಸಂಸ್ಥೆಯಾದ ಸತರ್ಕ ನಾಗರಿಕ ಸಂಘಟನೆ ಸಮೀಕ್ಷೆ ಮಾಡಿ ಸಿದ್ಧಪಡಿಸಿರುವ ವರದಿಯ ಪ್ರಕಾರ ಮೂರು ರಾಜ್ಯಗಳಲ್ಲಿ ಮಾಹಿತಿ ಹಕ್ಕು ಆಯೋಗಗಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿವೆ. ಐದು ರಾಜ್ಯಗಳಲ್ಲಿ ಮಾಹಿತಿ ಹಕ್ಕು ಆಯೋಗಗಳಿಗೆ ಮುಖ್ಯಸ್ಥರೇ ಇಲ್ಲ. ಕೇಂದ್ರ ಮಾಹಿತಿ ಹಕ್ಕು ಆಯೋಗದಲ್ಲಿ ಏಳು ಹುದ್ದೆಗಳು ಖಾಲಿ ಇವೆ. ನಾಲ್ಕು ಮಂದಿ ಆಯುಕ್ತರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಕೆಲವು ಕಡೆ ನೇಮಕ ಮಾಡಲಾದ ಆಯುಕ್ತರ ಅರ್ಹತೆ ಬಗ್ಗೆ ಹಾಗೂ ವಿಶ್ವಾಸಾರ್ಹತೆ ಬಗ್ಗೆ ಸಾಕಷ್ಟು ಸಂದೇಹಗಳು ವ್ಯಕ್ತವಾಗಿವೆ. ವಿವಿಧ ಮಾಹಿತಿ ಹಕ್ಕು ಆಯೋಗಗಳಲ್ಲಿ 3.21 ಲಕ್ಷ ಮೇಲ್ಮನವಿಗಳು ವಿಲೇವಾರಿ ಆಗದೇ ಬಾಕಿ ಉಳಿದಿವೆ. ಹೀಗಾಗಿ ಕ್ರಮೇಣ ಮಾಹಿತಿ ಹಕ್ಕು ವ್ಯವಸ್ಥೆಯನ್ನೇ ಸಾಯಿಸುವ ಹುನ್ನಾರ ನಡೆದಿದೆಯೇನೋ ಎಂದೆನಿಸುತ್ತದೆ.
ಪಶ್ಚಿಮ ಬಂಗಾಳದಲ್ಲಿ ಈ ವರ್ಷದ ಜುಲೈ ತಿಂಗಳಲ್ಲಿ ಸಲ್ಲಿಸಲಾದ ಮೇಲ್ಮನವಿ ವಿಲೇವಾರಿ ಆಗಲು 24 ವರ್ಷ ಹಾಗೂ ಒಂದು ತಿಂಗಳು ಬೇಕಾಗಬಹುದು. ಕರ್ನಾಟಕದಲ್ಲಿ 41,047 ಮೇಲ್ಮನವಿಗಳು ವಿಲೇವಾರಿ ಆಗದೇ ಬಾಕಿ ಉಳಿದಿವೆ. ಇವುಗಳು ವಿಲೇವಾರಿ ಆಗಲು ಒಂದು ವರ್ಷ ಹನ್ನೊಂದು ತಿಂಗಳು ಬೇಕಾಗುತ್ತದೆ. ಕೇಂದ್ರ ಮಾಹಿತಿ ಹಕ್ಕು ಆಯೋಗ ಹಾಗೂ ರಾಜ್ಯ ಮಾಹಿತಿ ಹಕ್ಕು ಆಯೋಗಗಳಿಗೆ ಖಾಲಿ ಉಳಿದ ಸ್ಥಾನಗಳಿಗೆ ಮಾಹಿತಿ ಹಕ್ಕು ಆಯುಕ್ತರನ್ನು ನೇಮಕ ಮಾಡಲು ಸರಕಾರಗಳು ಯಾಕೆ ಆಸಕ್ತಿ ತೋರಿಸುತ್ತಿಲ್ಲ ಎಂಬ ಪ್ರಮುಖ ಪ್ರಶ್ನೆಗೆ ಉತ್ತರ ಬೇಕಾಗಿದೆ. ಅಷ್ಟೇ ಅಲ್ಲ ಸಾರ್ವಜನಿಕರು ಬಯಸಿದ ಮಾಹಿತಿಯನ್ನು ನೀಡಲು ಆಸಕ್ತಿ ತೋರದ ಅಥವಾ ವಿಫಲರಾದ ಹಾಗೂ ತಪ್ಪು ಮಾಹಿತಿ ನೀಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಸರಕಾರ ಹಿಂದೇಟು ಹಾಕುತ್ತಿದೆ. ಹೀಗಾಗಿ ಸರಕಾರದ ಪ್ರಾಮಾಣಿಕತೆ ಬಗ್ಗೆ ಸಹಜವಾಗಿ ಸಂದೇಹ ಉಂಟಾಗುತ್ತದೆ.
ಆಡಳಿತದಲ್ಲಿ ಭ್ರಷ್ಟಾಚಾರವನ್ನು ತಡೆಯುವ ನಿಟ್ಟಿನಲ್ಲಿ ಮಾಹಿತಿ ಹಕ್ಕು ಕಾಯ್ದೆ ಪರಿಣಾಮಕಾರಿ ಪಾತ್ರ ವಹಿಸಿದೆ. ಇದರಿಂದಾಗಿ ಟೆಲಿಕಾಂನಂತಹ ಬಹುದೊಡ್ಡ ಹಗರಣಗಳು ಹಾಗೂ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಗಣಿ ಲೂಟಿ ಬಯಲಿಗೆ ಬರಲು ಸಾಧ್ಯವಾಗಿದೆ. ಪಾರದರ್ಶಕತೆ ಇದ್ದಾಗ ಭ್ರಷ್ಟಾಚಾರ ಮಾಡಿ ದಕ್ಕಿಸಿಕೊಳ್ಳಲು ಆಗುವುದಿಲ್ಲ. ಆದರೆ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರಕ್ಕೆ ಈ ವ್ಯವಸ್ಥೆಯೇ ಬೇಡವಾಗಿದೆಯೇನೋ; ಮೋದಿಯವರು ಗುಜರಾತಿನ ಮುಖ್ಯಮಂತ್ರಿ ಆಗಿದ್ದಾಗಲೂ ಮಾಹಿತಿ ಹಕ್ಕು ಆಯುಕ್ತರನ್ನು ನೇಮಕ ಮಾಡಿರಲಿಲ್ಲ ಎಂಬುದನ್ನು ಗಮನಿಸಬಹುದು.
ಸರಕಾರದ ಆಡಳಿತ ಯಾವುದೇ ಪಕ್ಷದ್ದಾಗಿರಲಿ ಜನಸಾಮಾನ್ಯರಿಗೆ ಅವರು ಬಯಸುವ ಮಾಹಿತಿ ಸುಲಭವಾಗಿ ಲಭ್ಯವಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಹಿತಿ ಪಡೆಯುವುದು ಸಾರ್ವಜನಿಕರ ಮೂಲಭೂತ ಹಕ್ಕು. ಆಯುಕ್ತರ ನೇಮಕ ಮಾಡದ ಸರಕಾರದ ಉಪೇಕ್ಷೆಯ ಧೋರಣೆ ಮಾಹಿತಿ ಪಡೆಯುವ ಸಾರ್ವಜನಿಕರ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ.
ಅಧಿಕಾರದಲ್ಲಿ ಇರುವ ರಾಜಕಾರಣಿಗಳಿಗೆ ಮತ್ತು ಸರಕಾರದ ಉನ್ನತ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಆಯೋಗದಂಥ ಸಂಸ್ಥೆ ಅಸ್ತಿತ್ವದಲ್ಲಿ ಇರುವುದು ಬೇಕಾಗಿಲ್ಲವೇನೋ ಅಂತಲೇ ಸಾರ್ವಜನಿಕರಿಗೆ ಬೇಕಾದ ಮಾಹಿತಿ ಸಿಗದಂತೆ ಮಾಡುವ ಹುನ್ನಾರ ನಡೆದಿದೆ ಎಂಬ ಸಂದೇಹ ಬರುತ್ತದೆ.
ಸರಕಾರ ಇತ್ತೀಚೆಗೆ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದು ಮಾಹಿತಿ ಹಕ್ಕು ಆಯೋಗದ ಆಯುಕ್ತರ ಸ್ಥಾನ ಮಾನಗಳನ್ನು ದುರ್ಬಲಗೊಳಿಸಿದೆ. ಇದೀಗ ಡಿಜಿಟಲ್ ವೈಯಕ್ತಿಕ ಮಾಹಿತಿ ರಕ್ಷಣೆ ಕಾಯ್ದೆ 2023 ಜಾರಿಗೆ ಬಂದಿದೆ. ಇದರಿಂದಾಗಿ ಸಾರ್ವಜನಿಕ ಹುದ್ದೆಯಲ್ಲಿ ಇರುವವರ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕ ಮಹತ್ವ ಇದ್ದಾಗಲೂ ಪಡೆಯುವುದು ಅಸಾಧ್ಯವಾಗಿದೆ. ಕೆಲವು ರಾಜ್ಯಗಳಲ್ಲಿ ಆನ್ಲೈನ್ ಮೂಲಕ ಮಾಹಿತಿ ಬಯಸಿ ಅರ್ಜಿ ಸಲ್ಲಿಕೆಯ ಸೌಲಭ್ಯವೇ ಇಲ್ಲ. ಕೆಲವೆಡೆ ಈ ಸೌಲಭ್ಯ ಇದ್ದರೂ ಅದನ್ನು ಕ್ಲಿಷ್ಟಕರಗೊಳಿಸಲಾಗಿದೆ. ಇದು ಜನಸಾಮಾನ್ಯರ ಜನತಾಂತ್ರಿಕ ಹಕ್ಕುಗಳನ್ನು ದುರ್ಬಲಗೊಳಿಸಿದಂತಾಗಿದೆ ಎಂದರೆ ಅತಿಶಯೋಕ್ತಿಯಲ್ಲ.