ಪಟಾಕಿ ಸುಟ್ಟು ಪಡೆದುಕೊಂಡದ್ದೇನು?
ವಾಯು ಮಾಲಿನ್ಯದಿಂದಾಗಿ ದಿಲ್ಲಿಯಲ್ಲಿ ಶಾಲೆ, ಕಾಲೇಜುಗಳನ್ನು ಮುಚ್ಚುವಂತಹ ಸ್ಥಿತಿ ನಿರ್ಮಾಣವಾಗಿದ್ದ ಹೊತ್ತಿಗೆ, ಸರಕಾರದ ಕಟ್ಟು ನಿಟ್ಟಿನ ಆದೇಶಗಳನ್ನು ಅಣಕಿಸುವಂತೆ ದೀಪಾವಳಿ ಪಟಾಕಿಗಳು ಮಾರುಕಟ್ಟೆಗೆ ಬಂದವು. ಎಂದಿನಂತೆಯೇ ಈ ಬಾರಿಯೂ ದೀಪಾವಳಿಗೆ ಮುನ್ನವೇ ಪಟಾಕಿಗಳು ಸುದ್ದಿ ಮಾಡತೊಡಗಿದವು. ಒಂದೆಡೆ ಹಲವು ಪಟಾಕಿ ಅಂಗಡಿಗಳಿಗೆ ಬೆಂಕಿ ಬಿದ್ದು ಸಾವು ನೋವುಗಳು ಸಂಭವಿಸಿದವು. ಇದು ನಮ್ಮನ್ನು ಯಾವ ರೀತಿಯಲ್ಲೂ ತಟ್ಟಿ ಎಚ್ಚರಿಸಲಿಲ್ಲ. ಪರಿಸರ ಮಾಲಿನ್ಯವನ್ನು ಮುಂದಿಟ್ಟುಕೊಂಡು ಸರಕಾರ ‘ಪಟಾಕಿ ನಿಷೇಧಿಸುವುದಕ್ಕೆ’ ಮುಂದಾದರೆ, ಸರಕಾರದ ಈ ನಿಲುವುಗಳನ್ನು ಸಂಘಪರಿವಾರ ಸಂಘಟನೆಗಳು ‘ಹಿಂದೂ ವಿರೋಧಿ’ ಎಂದು ಕರೆದವು. ಹಿಂದೂ ಧರ್ಮ ಪ್ರಕೃತಿಯನ್ನು ಆರಾಧಿಸುತ್ತದೆ ಎನ್ನುವ ಸಂಘಪರಿವಾರ ಮುಖಂಡರೇ, ಈ ಪ್ರಕೃತಿ, ಪರಿಸರವನ್ನು ಉಳಿಸಲು ಸರಕಾರ ಕ್ರಮ ತೆಗೆದುಕೊಂಡಾಗ ಹಿಂದೂ ಧರ್ಮ ವಿರೋಧಿ ಎಂದು ಅಬ್ಬರಿಸುತ್ತವೆ. ನಮ್ಮ ನದಿ, ವಾಯು, ಮಣ್ಣು ಇತ್ಯಾದಿಗಳನ್ನು ಮಾಲಿನ್ಯದಿಂದ ಉಳಿಸುವುದು ಪರೋಕ್ಷವಾಗಿ ಅವುಗಳಲ್ಲಿ ದೇವರನ್ನು ಕಂಡ ಹಿಂದೂ ಧರ್ಮಕ್ಕೆ ನೀಡುವ ಗೌರವ ಎನ್ನುವುದು ಅವರಿಗೆ ಮರೆತು ಹೋಗುತ್ತದೆ. ದೀಪಾವಳಿಯ ಸಂದರ್ಭದಲ್ಲಂತೂ ಸಂಘಪರಿವಾರ ಮತ್ತು ಪ್ರಕೃತಿಯ ನಡುವಿನ ಸಂಘರ್ಷ ತಾರಕಕ್ಕೇರುತ್ತದೆ. ಎಲ್ಲ ನಿಷೇಧ ಕಾನೂನನ್ನು ಮೀರಿ ಈ ಬಾರಿಯೂ ಸಾವಿರಾರು ಕೋಟಿ ರೂ.ಯ ಪಟಾಕಿಗಳನ್ನು ಸುಟ್ಟು ಬೂದಿ ಮಾಡಲಾಗಿದೆ.
ಕಳೆದ ವರ್ಷ ದೀಪಾವಳಿಯ ಹೆಸರಿನಲ್ಲಿ ಪಟಾಕಿ ಉದ್ಯಮದ ಮಾರಾಟ ೬,೦೦೦ ಕೋಟಿ ರೂ.ಗೆ ಏರಿಕೆಯಾಗಿತ್ತು. ಕೊರೋನ ಕೂಡ ಪಟಾಕಿ ಉದ್ಯಮದ ಮೇಲೆ ಯಾವ ದುಷ್ಪರಿಣಾಮವನ್ನೂ ಬೀರಿರಲಿಲ್ಲ. ಮಹಾರಾಷ್ಟ್ರ ಪಟಾಕಿ ಮಾರಾಟಕ್ಕಾಗಿ ಅಗ್ರಸ್ಥಾನದಲ್ಲಿತ್ತು. ಈ ಬಾರಿ ಕಟ್ಟು ನಿಟ್ಟಿನ ನಿಯಮಗಳ ನಡುವೆಯೂ ಕೋಟ್ಯಂತರ ರೂ. ಪಟಾಕಿಗಳನ್ನು ಸುಡಲಾಗಿದೆ. ಮುಂಬೈ, ಬೆಂಗಳೂರು ಮೊದಲಾದ ನಗರಗಳಲ್ಲಿ ಪಟಾಕಿ ಸುಡಲು ಬಹುದೊಡ್ಡ ಪೈಪೋಟಿಯೇ ನಡೆಯಿತು. ಹಸಿರು ಪಟಾಕಿಗಳ ಜೊತೆ ಜೊತೆಗೇ ಭಾರೀ ಸದ್ದುಗಳುಳ್ಳ , ಗಂಧಕಗಳುಳ್ಳ ಪಟಾಕಿಗಳನ್ನು ಅಕ್ಷರಶಃ ಸ್ಫೋಟಿಸಲಾಗಿದೆ ಮತ್ತು ಇವುಗಳನ್ನು ಕೆಲವು ಸಂಘಪರಿವಾರ ಸಂಘಟನೆಗಳು ಧರ್ಮದ ಹೆಸರಿನಲ್ಲಿ ಸಮರ್ಥನೆ ಮಾಡಿಕೊಂಡಿವೆ. ಆದರೆ ವಾಸ್ತವವೇನೆಂದರೆ ಈ ಸಂಘಟನೆಗಳ ಬೆನ್ನ ಹಿಂದೆ ನಿಂತು ನಿಜಕ್ಕೂ ಮಾತನಾಡಿರುವುದು ಪಟಾಕಿ ಉದ್ಯಮ ಲಾಬಿಗಳು . ಇಂದು ಪಟಾಕಿ ಉದ್ಯಮ ಕೇವಲ ದೀಪಾವಳಿ ಸಂಭ್ರಮಕ್ಕಷ್ಟೇ ಸೀಮಿತವಾಗಿಲ್ಲ. ಈ ಉದ್ಯಮದ ಜೊತೆಗೆ ಗಣಿಗಾರಿಕೆ ಉದ್ಯಮಿಗಳು, ಪಾತಕ ಲೋಕಗಳೂ ಶಾಮೀಲಾಗಿವೆ. ಸರಕಾರ ಪಟಾಕಿಗಳ ಮೇಲೆ ನಿಯಂತ್ರಣ ಹೇರಿದಷ್ಟು ಈ ಎಲ್ಲ ವಲಯಗಳಿಗೆ ಸಮಸ್ಯೆಯಾಗುತ್ತವೆ. ಇಂದು ಪಟಾಕಿಗಳ ಹೆಸರಿನಲ್ಲಿ ಗೋದಾಮುಗಳಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿಡುವ ಪ್ರವೃತ್ತಿಗಳು ಹೆಚ್ಚುತ್ತಿವೆ. ಅಲ್ಲಲ್ಲಿ ಭಾರೀ ದುರಂತಗಳು ಸಂಭವಿಸಿದಾಗೊಮ್ಮೆ ಈ ದಾಸ್ತಾನು ತನಿಖೆಗೊಳಗಾಗುತ್ತವೆ. ದೇಶದಲ್ಲಿ ದುಷ್ಕೃತ್ಯಗಳನ್ನು ನಡೆಸಲು ಪಟಾಕಿ ಕಾರ್ಖಾನೆಗಳನ್ನು ದುಷ್ಕರ್ಮಿಗಳು ವ್ಯಾಪಕವಾಗಿ ಬಳಸಿಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಲಾಟರಿ ಟಿಕೆಟ್‌ಗಳನ್ನು ನಿಷೇಧಿಸುವ ಸಂದರ್ಭದಲ್ಲಿ ಉದ್ಯಮಿಗಳು ಲಾಟರಿ ಉದ್ಯಮವನ್ನು ನೆಚ್ಚಿಕೊಂಡ ಉದ್ಯೋಗಿಗಳನ್ನು ಗುರಾಣಿಯಾಗಿಸಿದ್ದರು. ರಾಜ್ಯದಲ್ಲಿ ಲಾಟರಿಯನ್ನು ನಿಷೇಧಿಸಿದರೆ ಇದನ್ನು ನೆಚ್ಚಿಕೊಂಡ ಸಾವಿರಾರು ಸಿಬ್ಬಂದಿ ನಿರುದ್ಯೋಗಿಗಳಾಗುತ್ತಾರೆ, ಬೀದಿಗೆ ಬೀಳುತ್ತಾರೆ ಎಂದು ಹುಯಿಲೆಬ್ಬಿಸಿದರು. ಆದರೆ ಈ ಲಾಟರಿಯನ್ನು ಕೊಂಡು ಬೀದಿಗೆ ಬಿದ್ದ ಸಾವಿರಾರು ಕುಟುಂಬಗಳಿಗೆ ಹೋಲಿಸಿದರೆ ಇದು ಏನೇನೂ ಆಗಿರಲಿಲ್ಲ. ಈಗ ಪಟಾಕಿ ಉದ್ಯಮವನ್ನು ನಿಷೇಧಿಸಬೇಕು ಎಂದಾಗಲೂ ಅದನ್ನು ನೆಚ್ಚಿಕೊಂಡಿರುವ ಉದ್ಯೋಗಿಗಳ ಕಡೆಗೆ ಬೆರಳು ತೋರಿಸುತ್ತಿದ್ದಾರೆ. ಈ ಪಟಾಕಿ ಕಾರ್ಖಾನೆಗಳು ನೆಚ್ಚಿಕೊಂಡಿರುವುದು ಮಹಿಳೆಯರು ಮತ್ತು ಬಾಲ ಕಾರ್ಮಿಕರನ್ನು. ಅವರ ಶೋಷಣೆಗಾಗಿ ಈ ಕಾರ್ಖಾನೆಗಳು ಕುಖ್ಯಾತಿಯನ್ನು ಪಡೆದಿವೆ. ಯೋಗ್ಯ ವೇತನವನ್ನು ನೀಡದೆ, ಅನಾರೋಗ್ಯ ಪೀಡಿತ ಸಿಬ್ಬಂದಿಗೆ ಪರಿಹಾರವನ್ನು ನೀಡದಿರುವ ಬಗ್ಗೆ ಕಾರ್ಖಾನೆಗಳ ಮಾಲಕರನ್ನು ಸಾಮಾಜಿಕ ಕಾರ್ಯಕರ್ತರು ಪ್ರಶ್ನಿಸುತ್ತಾ ಬಂದಿದ್ದಾರೆ. ಆ ಪ್ರಶ್ನೆಗಳಿಗೆ ಈವರೆಗೆ ಸೂಕ್ತ ಉತ್ತರ ದೊರಕಿಲ್ಲ. ಪಟಾಕಿ ಉದ್ಯಮದಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿರುವ ಬಡ ಶ್ರಮಿಕರಿಗೆ ಪುನರ್‌ವಸತಿಯನ್ನು ಏರ್ಪಡಿಸುವುದರ ಜೊತೆ ಜೊತೆಗೇ ಈ ಉದ್ಯಮಕ್ಕೆ ಬೀಗ ಜಡಿಯಬೇಕಾಗಿದೆ. ಪಟಾಕಿಯನ್ನು ಸುಟ್ಟು ಸಂಭ್ರಮಿಸುವ ನಾಗರಿಕ ಸಮಾಜ, ಈ ಪಟಾಕಿಯ ಹಿಂದಿರುವ ಮಹಿಳೆಯರು ಮತ್ತು ಮಕ್ಕಳ ದುರಂತ ಬದುಕಿನ ಬಗ್ಗೆ ಗಂಭೀರವಾಗಿ ಯೋಚಿಸುವ ಅಗತ್ಯವಿದೆ.
ಪಟಾಕಿಗಳಿಗೂ ದೀಪಾವಳಿಗೂ ಯಾವ ಸಂಬಂಧವೂ ಇಲ್ಲ. ಒಂದು ರೀತಿಯಲ್ಲಿ ಪಟಾಕಿಗಳು ಹಿಂದೂ ಧರ್ಮದ ಹಬ್ಬಗಳು ಸಾರುವ ಮೌಲ್ಯಗಳನ್ನು ವಿರೋಧಿಸುತ್ತವೆ. ಹಿಂದೂ ಧರ್ಮದ ಎಲ್ಲ ಹಬ್ಬಗಳು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ. ಪಟಾಕಿಗಳು ಈ ಪ್ರಕೃತಿಯ ಲಯವನ್ನು ಕೆಡಿಸುವ ಉದ್ದೇಶವನ್ನು ಹೊಂದಿವೆ. ಒಂದೆಡೆ ಪರಿಸರ ಮಾಲಿನ್ಯಕ್ಕೆ ಕಾರಣವಾದರೆ ಇನ್ನೊಂದೆಡೆ ಪಕ್ಷಿ, ಪ್ರಾಣಿಗಳ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತವೆ. ಇದೇ ಸಂದರ್ಭದಲ್ಲಿ ಮನುಷ್ಯನ ನೆಮ್ಮದಿಗಳನ್ನೂ ಪಟಾಕಿಗಳು ಕೆಡಿಸಿ ಬಿಡುತ್ತವೆ. ನಗರ ಪ್ರದೇಶಗಳ ಆಸ್ಪತ್ರೆಗಳಲ್ಲಿರುವ ರೋಗಿಗಳು ಈ ಪಟಾಕಿ ಸದ್ದು ಮತ್ತು ವಾಯು ಮಾಲಿನ್ಯಗಳಿಂದ ಅನುಭವಿಸುವ ತೊಂದರೆಗಳು ಅಪಾರ. ಈ ಬಾರಿ ಕರ್ನಾಟಕ ರಾಜ್ಯವೊಂದರಲ್ಲೇ ಪಟಾಕಿಗಳಿಂದ ಕಣ್ಣುಗಳಿಗೆ ಹಾನಿ ಮಾಡಿಕೊಂಡ ಪ್ರಕರಣ ನೂರಕ್ಕೂ ಹೆಚ್ಚು. ಸಾವಿರಾರು ಕೋಟಿ ರೂ. ಬೆಲೆಯ ಪಟಾಕಿಯನ್ನು ಯಾವ ಲಾಭವೂ ಇಲ್ಲದೆ ಸುಟ್ಟು ಬೂದಿ ಮಾಡಿದ ನಷ್ಟ ಒಂದೆಡೆ. ಕಳೆದುಕೊಂಡ ಕಣ್ಣುಗಳಿಗಂತೂ ಬೆಲೆಯನ್ನೇ ಕಟ್ಟುವುದಕ್ಕೆ ಸಾಧ್ಯವಿಲ್ಲ. ಜೊತೆಗೆ ಪರಿಸರಕ್ಕೆ ಆದ ನಷ್ಟವನ್ನು ಯಾವ ಮಾನದಂಡದಲ್ಲಿ ಅಳೆಯುವುದು? ಪಟಾಕಿಯ ಕ್ಷಣಿಕ ಸಂಭ್ರಮಕ್ಕಾಗಿ ನಮ್ಮ ಬದುಕಿಗೆ ಅನಿವಾರ್ಯವಾಗಿರುವ ಗಾಳಿ, ನೀರು, ಮಣ್ಣು ಇವೆಲ್ಲವು ಕೆಡಿಸಿಕೊಳ್ಳುವುದೆಂದರೆ ನಮಗೆ ನಾವೇ ದ್ರೋಹವೆಸಗಿಕೊಂಡಂತೆ.
ದೀಪಾವಳಿ ಬೆಳಕಿನ ಹಬ್ಬ ಎನ್ನುವುದನ್ನು ಹಿರಿಯರು ಹೇಳುತ್ತಲೇ ಬಂದಿದ್ದಾರೆ. ಕತ್ತಲನ್ನು ಕಳೆದು ಬೆಳಕನ್ನು ಹರಿಸುವುದಕ್ಕಾಗಿ ದೀಪಾವಳಿ ಬರುತ್ತದೆ. ಆದರೆ ಪಟಾಕಿಯಿಂದ ಕಣ್ಣು ಕಳೆದುಕೊಂಡ ನೂರಾರು ಮಕ್ಕಳು ತಮ್ಮ ಬೆಳಕನ್ನು ಈ ಹಬ್ಬದಲ್ಲಿ ಶಾಶ್ವತವಾಗಿ ಕಳೆದುಕೊಂಡಿದ್ದಾರೆ. ಪಟಾಕಿಗೆ ಸುರಿಯುವ ಹಣವನ್ನು ನಾವು ಹಣತೆಗಳಿಗೆ, ಬೆಳಕನ್ನು ಹಚ್ಚುವ ಬೇರೆ ಬೇರೆ ಮಣ್ಣಿನ ಪಾತ್ರೆಗಳಿಗೆ ಸುರಿದಿದ್ದರೆ ಈ ದೇಶದ ಗ್ರಾಮೀಣ ಪ್ರದೇಶದಲ್ಲಿ ಕುಂಬಾರಿಕೆಯನ್ನು ನೆಚ್ಚಿಕೊಂಡ ಸಾವಿರಾರು ಕುಂಬಾರರು ಹಬ್ಬವನ್ನು ಸಂಭ್ರಮದಿಂದ ಆಚರಿಸಬಹುದಿತ್ತು. ಪಟಾಕಿಯ ಹೆಸರಿನಲ್ಲಿ ಸಾವಿರಾರು ಕೋಟಿ ರೂ.ಯನ್ನು ಸುಡುವ ಬದಲು ಹಬ್ಬದ ಸಂದರ್ಭದಲ್ಲಿ ಬಡ ಮಕ್ಕಳ ಮೂಲಭೂತ ಅಗತ್ಯಗಳನ್ನು ಈಡೇರಿಸಿದ್ದರೆ ಅವರ ಕಣ್ಣುಗಳಲ್ಲಿ ಬೆಳಗುವ ಬೆಳಕು ಈ ಸಮಾಜದ ಭವಿಷ್ಯಕ್ಕೆ ದಾರಿ ದೀಪವಾಗಿ ಬಿಡಬಹುದಿತ್ತು. ಪಟಾಕಿಗಳು ಸದ್ದು ಮಾಡುತ್ತಾ ಗಾಢ ಮೌನವನ್ನಷ್ಟೇ ಉಳಿಸಿ ಹೋಗಿದೆ. ಬೆಳಕಿನ ಭ್ರಮೆ ಹುಟ್ಟಿಸಿ ನಮ್ಮ ಕೈಗೆ
ಬೂದಿಯನ್ನಷ್ಟೇ ಕೊಟ್ಟು ಹೋಗಿದೆ. ದೀಪಾವಳಿ ಹಬ್ಬದ ಉದ್ದೇಶವನ್ನು ಪ್ರಶ್ನಾರ್ಹ ವಾಗಿಸಿದ ಇಂತಹ ಪಟಾಕಿಗಳನ್ನು ಶಾಶ್ವತವಾಗಿ ನಿಷೇಧಿಸಲು ಸರಕಾರಕ್ಕೆ ಇನ್ನೆಷ್ಟು ದಿನಬೇಕು? ಎಂದು ಪಟಾಕಿಗೆ ಬದುಕನ್ನು ಬೆಲೆಯಾಗಿ ತೆತ್ತ ಮಕ್ಕಳು ಪ್ರಶ್ನಿಸುತ್ತಿದ್ದಾರೆ.