ಮಾಲ್ದೀವ್ಸ್‌ನಿಂದ ಸೇನೆ ಹಿಂದೆಗೆತ ಎತ್ತಿದ ಪ್ರಶ್ನೆಗಳು
ಮಾಲ್ದೀವ್ಸ್‌ನಿಂದ ಭಾರತೀಯ ಸೈನಿಕರ ಮೊದಲ ತಂಡ ವಾಪಸಾಗಿದೆ ಎನ್ನುವುದನ್ನು ಮಾಲ್ದೀವ್ಸ್ ನ ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಭಾರತೀಯ ರಕ್ಷಣಾ ಸಚಿವಾಲಯ ಹೇಳಿಕೆ ನೀಡಿಲ್ಲವಾದರೂ, ಮಾಲ್ದೀವ್ಸ್‌ನಿಂದ ತನ್ನ ಸೇನಾ ಸಿಬ್ಬಂದಿಯನ್ನು ಹಿಂದೆಗೆದುಕೊಳ್ಳುವುದಕ್ಕೆ ಭಾರತ ಮೊದಲ ಹೆಜ್ಜೆಯಿಟ್ಟಿದೆ ಎನ್ನುವುದು ಮಾಧ್ಯಮಗಳ ವರದಿಯಿಂದ ಸ್ಪಷ್ಟವಾಗುತ್ತದೆ. ಇದನ್ನೊಂದು ವಿಶೇಷ ಹಿನ್ನಡೆಯೆಂದು ಭಾವಿಸಬೇಕಾಗಿಲ್ಲವಾದರೂ, ಭಾರತವು ಮಾಲ್ದೀವ್ಸ್‌ನೊಂದಿಗೆ ತನ್ನ ಸಂಬಂಧವನ್ನು ಪೂರ್ಣ ಪ್ರಮಾಣದಲ್ಲಿ ಕೆಡಿಸಿಕೊಂಡಿರುವುದು ಬಹಿರಂಗವಾಗಿದೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರು ಲಕ್ಷದ್ವೀಪ ಭೇಟಿಯ ಸಂದರ್ಭದಲ್ಲಿ ನೀಡಿರುವ ಹೇಳಿಕೆ ಉಭಯ ದೇಶಗಳ ನಡುವಿನ ಒಳಗುದಿಗಳನ್ನು ಹೊರ ಹಾಕಿತ್ತು. ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುತ್ತಾ ಮಾಲ್ದೀವ್ಸ್ ನಂತಹ ದ್ವೀಪಕ್ಕೆ ಹೋಗುವ ಬದಲು ಇಲ್ಲಿಗೆ ಯಾಕೆ ಬರಬಾರದು? ಎಂಬ ಅರ್ಥ ಬರುವ ಹೇಳಿಕೆಯನ್ನು ಪ್ರಧಾನಿ ಮೋದಿಯವರು ನೀಡಿದ್ದರು. ಮಾಲ್ದೀವ್ಸ್ ಜೊತೆಗೆ ಲಕ್ಷದ್ವೀಪವನ್ನು ಹೋಲಿಸಿದ್ದು ಉದ್ದೇಶ ಪೂರ್ವಕ ಎಂದು ತಪ್ಪು ತಿಳಿದುಕೊಂಡ ರಾಜಕೀಯ ನಾಯಕರು ಪ್ರಧಾನಿ ಮೋದಿಯವರನ್ನು ಪ್ರತಿಯಾಗಿ ಟೀಕಿಸಿದ್ದರು. ಅವರನ್ನು ವಿದೂಷಕ ಎಂದು ತಮಾಷೆ ಮಾಡಿದ್ದಲ್ಲದೆ ಇಸ್ರೇಲ್‌ನ ಕೈಗೊಂಬೆ ಎಂದೂ ಅಣಕವಾಡಿದ್ದರು. ಇದು ಉಭಯ ದೇಶಗಳ ನಡುವಿನ ಸಂಬಂಧಗಳ ಅಸಲಿತನವನ್ನು ಬೆಳಕಿಗೆ ತಂದಿತು. ಮಾಲ್ದೀವ್ಸ್
ನಂತಹ ಪುಟ್ಟ ದೇಶದ ಕೆಲವು ನಾಯಕರು ಮಾಡಿರುವ ಟೀಕೆಯನ್ನು ವೈಯಕ್ತಿಕವಾಗಿ ತೆಗೆದುಕೊಂಡು ಭಾರತವೂ ಅಷ್ಟೇ ತೀವ್ರವಾಗಿ ಪ್ರತಿಕ್ರಿಯಿಸಿತು. ಮೋದಿಯ ವಿರುದ್ಧದ ಟೀಕೆಗಾಗಿ ಮಾಲ್ದೀವ್ಸ್ ರಾಯಭಾರಿಯನ್ನು ಕರೆಸಿಕೊಂಡ ಕೇಂದ್ರ ಸರಕಾರವು ತನ್ನ ಕಳವಳವನ್ನು ವ್ಯಕ್ತಪಡಿಸಿತು. ಹಾನಿಯನ್ನು ತಡೆಯುವುದಕ್ಕಾಗಿ ಮಾಲ್ದೀವ್ಸ್ ಸರಕಾರ ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವರನ್ನು ಅಮಾನತುಗೊಳಿಸಿತು ಮತ್ತು ಇದನ್ನೇ ಭಾರತದ ವಿಜಯವೆಂದು ಇಲ್ಲಿ ಕೆಲವು ಮೋದಿ ಅಭಿಮಾನಿಗಳು ಸಂಭ್ರಮಿಸಿದ್ದರು.
ಒಂದು ದೇಶದ ರಾಜಕೀಯ ನಾಯಕರ ಟೀಕೆಗಳನ್ನು ಅಲ್ಲಿನ ಸರಕಾರ ಭಾರತದ ಮೇಲೆ ನಡೆಸಿದ ಅಧಿಕೃತ ದಾಳಿಯೆಂದು ಬಗೆಯುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಈ ಸಂದರ್ಭದಲ್ಲಿ ಎದುರಾಗಿತ್ತು. ಮಾಲ್ದೀವ್ಸ್ ಪ್ರವಾಸೋದ್ಯಮವನ್ನು ಹಲವು ಸೆಲೆಬ್ರಿಟಿಗಳು ಬಹಿಷ್ಕರಿಸಿ ಆ ಪುಟ್ಟ ದೇಶದ ಮೇಲೆ ಒತ್ತಡವನ್ನು ಹೇರಲು ಪ್ರಯತ್ನಿಸಿರುವುದು ದೇಶಗಳ ನಡುವಿನ ಸಂಬಂಧ ಇನ್ನಷ್ಟು ಬಿಗಡಾಯಿಸಲು ಕಾರಣವಾಯಿತು. ಸೇನೆ ಹಿಂದೆಗೆತಕ್ಕೆ ಸಂಬಂಧಿಸಿ ಭಾರತ ಸರಕಾರ ಮಾಲ್ದೀವ್ಸ್‌ನೊಂದಿಗೆ ಮಾತುಕತೆ ನಡೆಸಿತಾದರೂ, ಒಮ್ಮತಕ್ಕೆ ಬರಲು ಉಭಯ ಸರಕಾರ ವಿಫಲವಾಯಿತು. ‘‘ಮೇ 10ರ ಬಳಿಕ ಮಾಲ್ದೀವ್ಸ್‌ನಲ್ಲಿ ಯಾವುದೇ ಭಾರತೀಯ ಸೈನಿಕರು ಇರುವುದಿಲ್ಲ. ಸಮವಸ್ತ್ರದಲ್ಲೂ, ನಾಗರಿಕ ದಿರಿಸಿನಲ್ಲೂ ಇರಲು ಅವಕಾಶ ನೀಡುವುದಿಲ್ಲ. ಇದನ್ನು ನಾನು ಆತ್ಮ ವಿಶ್ವಾಸದಿಂದ ಹೇಳುತ್ತೇನೆ’’ ಎಂದು ಮಾಲ್ದೀವ್ಸ್ ಅಧ್ಯಕ ಮುಹಮ್ಮದ್ ಮುಯಿಝ್ಝ ಕಳೆದ ವಾರ ಹೇಳಿಕೆ ನೀಡಿದ್ದರು. ಹೀಗೆ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಭಾರತ ತನ್ನ ಸೇನೆಯ ಮೊದಲ ತಂಡವನ್ನು ವಾಪಸ್ ಕರೆಸಿಕೊಂಡಿದೆ. ಮಾಲ್ದೀವ್ಸ್‌ನ ಈ ನಿರ್ಧಾರದಿಂದ ಆ ದೇಶಕ್ಕೆ ಎಷ್ಟರಮಟ್ಟಿಗೆ ಲಾಭವಿದೆ ಎನ್ನುವುದಕ್ಕಿಂತ, ಚೀನಾ ದೇಶವು ಮಾಲ್ದೀವ್ಸ್‌ಗೆ ಇನ್ನಷ್ಟು ಹತ್ತಿರವಾಗಿದೆ ಎನ್ನುವುದನ್ನು ಬೆಳವಣಿಗೆ ಹೇಳುತ್ತಿದೆ. ಆ ಕಾರಣಕ್ಕಾಗಿ ಈ ಹಿನ್ನಡೆ ಗಂಭೀರ ಚರ್ಚೆಗೆ ಅರ್ಹವಾಗಿದೆ. ಭಾರತ ಯಾಕೆ ನೆರೆ ಹೊರೆಯ ಸಣ್ಣ ಪುಟ್ಟ ದೇಶಗಳ ಜೊತೆಗೂ ಸಂಬಂಧವನ್ನು ಕೆಡಿಸಿಕೊಳ್ಳುತ್ತಿದೆ ಎನ್ನುವುದರ ಬಗ್ಗೆ ಆತ್ಮವಿಮರ್ಶೆ ನಡೆಯಬೇಕು. ತನ್ನ ‘ತಪ್ಪು ವಿದೇಶಾಂಗ ನೀತಿ’ಯ ಮೂಲಕ ಭೂತಾನ್, ಪಾಕಿಸ್ತಾನ, ಚೀನಾ, ಬಾಂಗ್ಲಾ, ಶ್ರೀಲಂಕಾ ಹೀಗೆ ತನ್ನ ಸುತ್ತಲಿರುವ ನೆರೆ ದೇಶಗಳ ಜೊತೆಗೆ ದಿನೇ ದಿನೇ ಭಾರತ ಸಂಬಂಧ ಕೆಡಿಸಿಕೊಳ್ಳುತ್ತಿರುವುದು ಯಾವ ರೀತಿಯಲ್ಲೂ ಭಾರತದ ಆಂತರಿಕ ಭದ್ರತೆಗೆ ಒಳಿತನ್ನು ಮಾಡುವುದಿಲ್ಲ. ಮೋದಿ ವಿಶ್ವಗುರುವಾಗುವ ಮೊದಲು ನೆರೆಹೊರೆಯ ದೇಶಕ್ಕೆ ಒಳ್ಳೆಯ ಮಿತ್ರನಾಗುವ ಬಗ್ಗೆ ಆದ್ಯತೆ ನೀಡಬೇಕಾಗಿರುವುದನ್ನು ಇದು ಹೇಳುತ್ತದೆ.
ಮಾಲ್ದೀವ್ಸ್ ಮತ್ತು ಭಾರತದ ನಡುವೆ ಕೆಲವು ತಿಂಗಳಿಂದ ಮುಸುಕಿನ ಗುದ್ದಾಟದ ರೂಪದಲ್ಲಿ ಹೇಳಿಕೆ, ಪ್ರತಿ ಹೇಳಿಕೆಗಳು ಹೊರ ಬೀಳುತ್ತಲೇ ಇವೆ. ಮುಖ್ಯವಾಗಿ, 2023 ನವೆಂಬರ್‌ನಲ್ಲಿ ನೂತನ ಅಧ್ಯಕ್ಷ ಮುಹಮ್ಮದ್ ಮುಯಿಝ್ಝ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಭಾರತಕ್ಕೆ ಮುಜುಗರ ತರುವ ಭಾಷಣವನ್ನು ಮಾಡಿದ್ದರು. ದ್ವೀಪ ಸಮೂಹದ ರಾಷ್ಟ್ರವಾಗಿರುವ ಮಾಲ್ದೀಮ್ಸ್ ನ ಸ್ವಾತಂತ್ರ್ಯ ಮತ್ತು ಸಾರ್ವಭೌಮತೆಯನ್ನು ಕಾಪಾಡುವ ಹಿನ್ನೆಲೆಯಲ್ಲಿ ಯಾವುದೇ ರಾಷ್ಟ್ರದ ಮಿಲಿಟರಿ ಶಕ್ತಿಯನ್ನು ದೇಶದಲ್ಲಿ ಉಳಿಯಲು ಬಿಡುವುದಿಲ್ಲ ಎಂದು ಅವರು ಹೇಳಿದ್ದರು. ಭಾರತ ಕೊನೆಗೂ ಮಾಲ್ದೀವ್ಸ್ ನ ಒತ್ತಡಕ್ಕೆ ಮಣಿದು ತನ್ನ ಸೇನೆಯನ್ನು ಹಿಂದೆಗೆಯಲು ತೊಡಗಿದೆ.
ಮಾಲ್ದೀವ್ಸ್ ನಂತಹ ಪುಟ್ಟ ದೇಶ ತನ್ನ ಆಂತರಿಕ ಭದ್ರತೆಯ ವಿಷಯದಲ್ಲಿ ಇಷ್ಟು ಗಂಭೀರ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದಾದರೆ, ಅದೇ ಕ್ರಮವನ್ನು ಭಾರತ ಯಾಕೆ ತೆಗೆದುಕೊಳ್ಳ ಲು ಹಿಂದೇಟು ಹಾಕುತ್ತಿದೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಮಾಲ್ದೀವ್ಸ್‌ನಲ್ಲಿ ಸಕ್ರಮವಾಗಿ ನೆಲೆಯಾಗಿದ್ದ ಭಾರತದ ಸೇನಾ ಸಿಬ್ಬಂದಿಯನ್ನು ಅಲ್ಲಿನ ಸರಕಾರ ತೆರವು ಗೊಳಿಸುತ್ತದೆ. ಇದೇ ಸಂದರ್ಭದಲ್ಲಿ ಲಡಾಖ್ ಸೇರಿದಂತೆ ಈಶಾನ್ಯ ಗಡಿಯಲ್ಲಿ ಚೀನಾ ಅಕ್ರಮವಾಗಿ ತನ್ನ ಸೇನಾ ನೆಲೆಗಳನ್ನು ನಿರ್ಮಾಣ ಮಾಡಿದೆ. ಭಾರತದ ನೆಲದಲ್ಲಿ ಝಂಡಾ ಹೂಡಿದೆ. ಅರುಣಾಚಲದ ಹಲವು ಗ್ರಾಮಗಳನ್ನು ವಶಪಡಿಸಿ ಅಲ್ಲಿ ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸಿದೆ. ಅವುಗಳನ್ನು ತೆರವುಗೊಳಿಸಲು ಮೋದಿ ಸರಕಾರಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ ಎನ್ನುವ ಪ್ರಶ್ನೆ ಮಹತ್ವವನ್ನು ಪಡೆದುಕೊಂಡಿದೆ. ಮಾಲ್ದೀವ್ಸ್‌ನ ಸರಕಾರಕ್ಕೆ ಒತ್ತಡ ಹೇರಿ, ಭಾರತದ ಸೇನಾ ಸಿಬ್ಬಂದಿಯನ್ನು ಚೀನಾ ತೆರವು ಗೊಳಿಸುತ್ತದೆಯಾದರೆ, ಭಾರತದ ನೆಲದೊಳಗೆ ಅನಧಿಕೃತವಾಗಿ ನುಸುಳಿ ಅಲ್ಲಿ ಕಾಮಗಾರಿಗಳನ್ನು ನಡೆಸುತ್ತಿರುವ ಚೀನಾ ಸೇನೆಯನ್ನು ತೆರವು ಗೊಳಿಸಲು ಮೋದಿ ನೇತೃತ್ವದ ಸರಕಾರಕ್ಕಿರುವ ಅಡ್ಡಿಯೇನು?
ಇದೇ ಸಂದರ್ಭದಲ್ಲಿ, ಆಫ್‌ಸ್ಟಾ ಹೆಸರಿನಲ್ಲಿ ತನ್ನದೇ ದೇಶದೊಳಗಿನ ಜನರನ್ನು ನಿಯಂತ್ರಿಸಲು ಹಲವು ರಾಜ್ಯಗಳಲ್ಲಿ ಸೇನೆಯನ್ನು ಹೇರಿಕೆ ಮಾಡಿದೆ. ಮಣಿಪುರ, ಕಾಶ್ಮೀರ ಸೇರಿದಂತೆ ಹಲವು ರಾಜ್ಯದ ಜನರು ವಿಶೇಷಾಧಿಕಾರದ ಹೆಸರಿನಲ್ಲಿ ನಡೆಯುತ್ತಿರುವ ಸೇನಾ ನಿಯಂತ್ರಣದ ವಿರುದ್ಧ ಧ್ವನಿಯೆತ್ತಿದ್ದಾರೆ. ಮಣಿಪುರ ಮತ್ತು ಕಾಶ್ಮೀರದಲ್ಲಿ ಈ ವಿಶೇಷಾಧಿಕಾರದಿಂದಾಗಿ ತಮ್ಮದೇ ನೆಲದಲ್ಲಿ ಸ್ವತಂತ್ರವಾಗಿ ಬದುಕುವ ಹಕ್ಕುಗಳನ್ನು ಅಲ್ಲಿನ ಜನರು ಕಳೆದುಕೊಂಡಿದ್ದಾರೆ. ಕಾಶ್ಮೀರವೂ ಸೇರಿದಂತೆ ಈಶಾನ್ಯದ ಜನರು ತಮ್ಮ ಮೇಲೆ ಸೇನೆ ನಡೆಸುತ್ತಿರುವ ದೌರ್ಜನ್ಯಗಳನ್ನು ಹಲವು ದಶಕಗಳಿಂದ ವಿರೋಧಿಸುತ್ತಿದ್ದಾರೆ. ಕಾಶ್ಮೀರದಲ್ಲಿ ವಿಶೇಷಾಧಿಕಾರದ ನೆರವಿನಿಂದ ಅಲ್ಲಿನ ಸೇನೆ ಜನರ ಮೇಲೆ ಎಸಗುತ್ತಿರುವ ಹಿಂಸಾಚಾರ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಲ್ಲಿದೆ. ಹೀಗಿರುವಾಗ, ತನ್ನ ನೆಲದಲ್ಲಿ, ತನ್ನದೇ ಜನರ ಮೇಲೆ ಹೇರಿರುವ ಸೇನೆಯನ್ನು ಭಾರತ ಸರಕಾರ ಯಾಕೆ ಹಿಂದಕ್ಕೆ ಕರೆಸುವುದಿಲ್ಲ? ಎನ್ನುವ ಪ್ರಶ್ನೆಯನ್ನು ಜನತೆ ಕೇಳುವಂತಾಗಿದೆ. ಸೇನೆಯ ಮೂಲಕ ಕಾಶ್ಮೀರವನ್ನು ನಿಯಂತ್ರಿಸಲು ಹೊರಟ ಮೋದಿ ನೇತೃತ್ವದ ಕೇಂದ್ರ ಸರಕಾರ ಅದರಲ್ಲಿ ಸಂಪೂರ್ಣ ವಿಫಲವಾಗಿದೆ ಎನ್ನುವುದನ್ನು ಅಲ್ಲಿ ಹೆಚ್ಚುತ್ತಿರುವ ಉಗ್ರವಾದ, ಹಿಂಸಾಚಾರಗಳೇ ಹೇಳುತ್ತಿವೆ. ಹಿಂದೆಂದೂ ಇಲ್ಲದಷ್ಟು ಆತಂಕದಿಂದ ಅಲ್ಲಿನ ಪಂಡಿತರು ದಿನಗಳೆಯುವಂತಹ ಸ್ಥಿತಿ ಕಾಶ್ಮೀರದಲ್ಲಿ ನಿರ್ಮಾಣವಾಗಿದೆ. ನೆರೆಹೊರೆಯ ದೇಶಗಳಷ್ಟೇ ಅಲ್ಲ, ಭಾರತದ ಒಳಗಿರುವ ರಾಜ್ಯಗಳ ಜೊತೆಗೂ ಕೇಂದ್ರದ ಸಂಬಂಧ ಹಳಸುತ್ತಿದೆ. ಸೇನೆಯ ಹಿಡಿತವಿರುವ ಕಾಶ್ಮೀರ, ಮಣಿಪುರ ಮಾತ್ರವಲ್ಲ, ದಕ್ಷಿಣದ ರಾಜ್ಯಗಳು ಕೇಂದ್ರ ಸರಕಾರದ ವಿರುದ್ಧ ದೊಡ್ಡ ಧ್ವನಿಯಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿವೆ. ಭಾರತದ ಒಕ್ಕೂಟ ವ್ಯವಸ್ಥೆ ದುರ್ಬಲಗೊಳ್ಳುತ್ತಿದೆ ಎನ್ನುವ ಆತಂಕ ವ್ಯಕ್ತವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸರಕಾರ ನೆರೆ ದೇಶಗಳ ಜೊತೆಗಿನ ಸಂಬಂಧವನ್ನು ಮಾತ್ರವಲ್ಲದೆ ದೇಶದೊಳಗಿರುವ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿರುವ ಬೆಳವಣಿಗೆಗಳನ್ನೂ ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿದೆ. ಮಾಲ್ದೀವ್ಸ್‌ನಲ್ಲಿ ಭಾರತಕ್ಕೆ ಎದುರಾದ ಮುಜುಗರದಿಂದ ನಮ್ಮ ಸರಕಾರ ಕಲಿತುಕೊಳ್ಳುವುದು ಬಹಳಷ್ಟಿದೆ.