ಭಾಷೆಯ ಹೆಸರಲ್ಲಿ ಮೊಸಳೆ ಕಣ್ಣೀರು ಬೇಡ

ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು
PC: x.com/Belagavi_BK
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಭಾಷೆಗಳಿರುವುದು ಜನರ ನಡುವಿನ ಸಂವಹನಗಳನ್ನು ಸುಲಭ ಮಾಡುವುದಕ್ಕೆ ಹೊರತು, ಅವರ ನಡುವೆ ಗೋಡೆಗಳನ್ನು ಬಿತ್ತುವುದಕ್ಕೆ ಅಲ್ಲ. ಭಾಷೆಗಳಿಂದ ಜಗಳಗಳು ಪರಿಹಾರವಾಗಬೇಕೇ ಹೊರತು, ಅದು ಜಗಳಗಳಿಗೆ, ಘರ್ಷಣೆಗಳಿಗೆ ಕಾರಣವಾಗಬಾರದು. ನೂರಾರು ಭಾಷೆಗಳ ತವರಾಗಿರುವ ಭಾರತದಲ್ಲಿ ರಾಜ್ಯಗಳನ್ನು ವಿಂಗಡಿಸಿರುವುದೇ ಭಾಷೆಗಳ ಆಧಾರದ ಮೇಲೆ. ಒಂದು ಭಾಷೆ, ಇನ್ನೊಂದು ಭಾಷೆಯ ಮೇಲೆ ಸವಾರಿ ಮಾಡುವ ಪ್ರಯತ್ನವನ್ನು ಮಾಡಬಾರದು. ಬದಲಿಗೆ ಅದರ ಮೂಲಕ ಕೊಡು-ಕೊಳ್ಳುಗಳು ನಡೆಯಬೇಕು ಎನ್ನುವುದು ನಮ್ಮ ಹಿರಿಯರ ಆಶಯವಾಗಿತ್ತು. ವೈವಿಧ್ಯಮಯ ಭಾಷೆಗಳು ನಮ್ಮ ದೇಶದ ಹೆಗ್ಗಳಿಕೆಯಾಗಿವೆೆ. ಈ ವೈವಿಧ್ಯವನ್ನು ನಾಶ ಮಾಡಲು ಹಿಂದಿ ಬಹುಕಾಲದಿಂದ ಪ್ರಯತ್ನಪಡುತ್ತಿದ್ದರೂ, ಅದರ ಹೇರಿಕೆಯನ್ನು ಮೀರಿ ಪ್ರಾದೇಶಿಕ ಭಾಷೆಗಳು ಬೆಳೆದು ನಿಂತಿವೆ. ಆ ಭಾಷೆಯ ಮೂಲಕವೇ ರಾಜ್ಯಗಳು ಅಭಿವೃದ್ಧಿಯ ಕಡೆಗೆ ದಾಪುಗಾಲುಗಳನ್ನು ಇಟ್ಟಿವೆ. ಇವುಗಳ ನಡುವೆಯೂ ಆಗಾಗ ಭಾಷೆಗಳ ನಡುವೆ ತಿಕ್ಕಾಟಗಳು ನಡೆಯುವುದಿವೆ. ಬೆಳಗಾವಿ ಗಡಿಭಾಗದಲ್ಲಿ ಮರಾಠಿ ಮತ್ತು ಕನ್ನಡ ಭಾಷೆಗಳ ನಡುವೆ ಘರ್ಷಣೆ ಇಂದು ನಿನ್ನೆಯದಲ್ಲ. ನಿಜಕ್ಕೂ ಇಲ್ಲಿ ಭಾಷೆ ಜನರ ಪಾಲಿಗೆ ಸಮಸ್ಯೆಯಾಗಿದೆಯೆ? ಅಥವಾ ರಾಜಕಾರಣಿಗಳು ಭಾಷೆಗಳನ್ನೇ ನಿಮ್ಮ ನಿಜವಾದ ಸಮಸ್ಯೆ ಎಂದು ಜನರನ್ನು ದಾರಿ ತಪ್ಪಿಸುತ್ತಿದ್ದಾರೆಯೆ? ಬಸ್ನಲ್ಲಿ ಪ್ರಯಾಣಿಕರು ಮತ್ತು ಕಂಡಕ್ಟರ್ ನಡುವೆ ಭಾಷೆಯ ಹೆಸರಿನಲ್ಲಿ ನಡೆದ ಸಣ್ಣ ತಿಕ್ಕಾಟ ಎರಡು ರಾಜ್ಯಗಳ ನಡುವಿನ ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿರುವುದು ನಿಜಕ್ಕೂ ಉಭಯ ರಾಜ್ಯಗಳಿಗೆ ಶೋಭೆ ತರುವ ವಿಷಯವೆ? ಕಳೆದೆರಡು ದಿನಗಳ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಮಗೆ ನಾವೇ ಕೇಳಿ ಕೊಳ್ಳಬೇಕಾದ ಪ್ರಶ್ನೆಗಳಿವು.
ಸರಕಾರಿ ಬಸ್ ಒಂದರಲ್ಲಿ ಟಿಕೆಟ್ ವಿಷಯದಲ್ಲಿ ಮಹಿಳೆ ಮತ್ತು ಕಂಡಕ್ಟರ್ ನಡುವೆ ಮಾತಿನ ಚಕಮಕಿ ನಡೆದಿದೆ. ಅಲ್ಲಿ ಭಾಷೆ ವಿವಾದದ ವಿಷಯವೇ ಆಗಿರಲಿಲ್ಲ. ಟಿಕೆಟ್ ಪಡೆಯಬೇಕೋ ಬೇಡವೋ ಎನ್ನುವುದು ಜಗಳದ ವಿಷಯವಾಗಿತ್ತು. ತೀರಾ ವೈಯಕ್ತಿಕವಾಗಿದ್ದ ಜಗಳವನ್ನು ಸಾರ್ವತ್ರಿಕಗೊಳಿಸುವುದಕ್ಕಾಗಿ ಇಬ್ಬರೂ ಅನಗತ್ಯವಾಗಿ ಭಾಷೆಯನ್ನು ಎಳೆದು ತಂದರು. ಮರಾಠಿ ಭಾಷೆ ಮಾತನಾಡದ ಕಾರಣಕ್ಕಾಗಿ ಕಂಡಕ್ಟರ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದರೆಂದು ಒಂದು ಗುಂಪು ಆರೋಪಿಸಿದರೆ, ಇನ್ನೊಂದು ಗುಂಪು, ಮಹಿಳೆಯ ಮೇಲೆ ಕಂಡಕ್ಟರ್ ದೌರ್ಜನ್ಯವೆಸಗಿದ್ದಾನೆ ಎಂದು ಮಹಿಳೆಯಿಂದ ಪೊಕ್ಸೋ ಕಾಯ್ದೆಯಡಿ ದೂರು ದಾಖಲಿಸಿದೆ. ಇಲ್ಲಿ ದುರುಪಯೋಗಗೊಂಡಿದ್ದು ಭಾಷೆ ಮಾತ್ರವಲ್ಲ, ಅಪ್ರಾಪ್ತ ವಯಸ್ಸಿನ ಮಕ್ಕಳ ರಕ್ಷಣೆಗಾಗಿರುವ ಕಾಯ್ದೆಯನ್ನೂ ದುರುಪಯೋಗಪಡಿಸಲಾಗಿದೆ. ಇದೀಗ ಬಸ್ ನಿರ್ವಾಹಕನ ಮೇಲಿನ ಪೊಕ್ಸೋ ದೂರನ್ನು ಹಿಂದೆಗೆಯುವುದಾಗಿ ದೂರುದಾರರು ಹೇಳಿಕೊಂಡಿದ್ದಾರೆ. ಆದರೆ ಆಗುವ ಅನಾಹುತ ಅಷ್ಟರಲ್ಲೇ ಆಗಿ ಬಿಟ್ಟಿದೆ. ಕಂಡಕ್ಟರ್ ಪರವಾಗಿ ಕರ್ನಾಟಕದ ಕನ್ನಡ ಪರ ಹೋರಾಟಗಾರರು ಜೊತೆಯಾದರೆ ಮಹಿಳೆಯರ ಪರವಾಗಿ ಬೆಳಗಾವಿಯಲ್ಲಿರುವ ಮರಾಠಿ ಸಂಘಟನೆಗಳು ಮಾತ್ರವಲ್ಲ, ಮಹಾರಾಷ್ಟ್ರ ಸರಕಾರದೊಳಗಿರುವ ನಾಯಕರೂ ಜೊತೆಯಾಗಿದ್ದಾರೆ. ಅಷ್ಟೇ ಅಲ್ಲ, ಕರ್ನಾಟಕದ ಇನ್ನೋರ್ವ ಬಸ್ನಿರ್ವಾಹಕನ ಮುಖಕ್ಕೆ ಕೇಸರಿ ಬಳಿದು ಶಿವಸೇನೆ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ. ಕರ್ನಾಟಕದ ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಇದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಬೆಳಗಾವಿ ಚಲೋ ಮಾಡಿ ಬಂಧನಕ್ಕೊಳಗಾಗಿದ್ದಾರೆ. ಮಹಾರಾಷ್ಟ್ರ ಮತ್ತು ಕರ್ನಾಟಕ ಉಭಯ ರಾಜ್ಯಗಳಲ್ಲೂ ಬಸ್ಗಳ ಮೇಲೆ ಕಲ್ಲು ತೂರಾಟ ನಡೆದಿವೆ. ಪರಿಣಾಮವಾಗಿ ಉಭಯ ರಾಜ್ಯಗಳ ನಡುವೆ ಬಸ್ ಸಂಚಾರ ಸ್ಥಗಿತಗೊಂಡಿವೆ. ವೈಯಕ್ತಿಕವಾಗಿರುವ ಒಂದು ಸಣ್ಣ ಜಗಳದಿಂದಾಗಿ ಉಭಯ ರಾಜ್ಯಗಳ ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಗಿದೆ. ರಾಜಕಾರಣಿಗಳು ಸಣ್ಣ ಕಿಡಿಯನ್ನು ಬೆಂಕಿಯ ಜ್ವಾಲೆಯಾಗಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ‘ಜೈ ಶಿವಾಜಿ’ ‘ಜೈ ಮಹಾರಾಷ್ಟ್ರ’ ‘ಜೈ ಭವಾನಿ’ ಮೊದಲಾದ ಘೋಷಣೆಗಳಿಂದ ಬೆಂಕಿಗೆ ತುಪ್ಪ ಸುರಿಯುವ ಕೆಲಸವೂ ಇವರ ಅನುಯಾಯಿಗಳಿಂದ ನಡೆಯುತ್ತಿದೆ.
ಬೆಳಗಾವಿ ಗಡಿ ಭಾಗದ ಸಮಸ್ಯೆ ಬರೇ ಭಾಷೆಯ ಸಮಸ್ಯೆಯಾಗಿ ಉಳಿದಿಲ್ಲ. ಒಂದು ಕಾಲದಲ್ಲಿ ಈ ಗಡಿಭಾಗದಲ್ಲಿ ಬಹುಸಂಖ್ಯಾತರು ಕನ್ನಡ ಮಾತನಾಡುವವರಾಗಿದ್ದರು. ಇಂದು ಅವರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಇಳಿಕೆಯಾಗಿದೆ. ಈ ಭಾಗದಲ್ಲಿ ಮರಾಠಿಗರ ಪ್ರಭಾವ ಜಾಸ್ತಿಯಾಗುವುದಕ್ಕೆ, ಮರಾಠರ ಕುರಿತಂತೆ ಕರ್ನಾಟಕದ ಕೆಲವು ರಾಜಕೀಯ ನಾಯಕರಿಗಿರುವ ಮೃದು ನಿಲುವು ಕೂಡ ಕಾರಣ. ಮುಖ್ಯವಾಗಿ ರಾಜ್ಯದ ಬಿಜೆಪಿ ನಾಯಕರು, ಆರೆಸ್ಸೆಸ್ ಮತ್ತು ಸಂಘಪರಿವಾರ ನಾಯಕರು ಇಲ್ಲಿ ಮರಾಠಿಗರು ಪ್ರಬಲರಾಗಿ ಬೆಳೆಯುವುದಕ್ಕೆ ಮುಖ್ಯ ಕಾರಣರಾಗಿದ್ದಾರೆ. ಕರ್ನಾಟಕದ ಅಸ್ಮಿತೆಗಳನ್ನು ಮೂಲೆಗುಂಪು ಮಾಡಿ, ಕರ್ನಾಟಕದ ಮೇಲೆ ಮರಾಠಿ ಗುರುತುಗಳನ್ನು ಹೇರುವಲ್ಲಿ ಇವರ ಪಾತ್ರ ಸಣ್ಣದೇನೂ ಅಲ್ಲ. ಬಿಜೆಪಿ ಮತ್ತು ಹಿಂದುತ್ವವಾದಿ ನಾಯಕರಿಗೆ ಕನ್ನಡ ಧ್ವಜ, ಕನ್ನಡದ ಇತಿಹಾಸ, ಸಂಸ್ಕೃತಿ ಬೇಡ. ಕನ್ನಡದ ನೆಲದಲ್ಲಿ ಹುಟ್ಟಿ ಬೆಳೆದ ಬಸವಣ್ಣ, ಬೆಳವಡಿ ಮಲ್ಲಮ್ಮ, ಟಿಪ್ಪುಸುಲ್ತಾನ್ನಂತಹ ಐಕಾನ್ಗಳು ಪಥ್ಯವಾಗುವುದಿಲ್ಲ. ಇವರು ಸಂದರ್ಭ ಬಂದಾಗಲೆಲ್ಲ ಕರ್ನಾಟಕದ ಮೇಲೆ ಮರಾಠರ ಅಸ್ಮಿತೆಯಾಗಿರುವ ಶಿವಾಜಿಯನ್ನು ಹೇರುತ್ತಾರೆ. ಕನ್ನಡದ ಬಾವುಟದ ಬದಲಿಗೆ ಮರಾಠಿ ಬಾವುಟಗಳನ್ನು ಹಾರಿಸಿ, ಇದೇ ನಾಯಕರು ಮರಾಠಿ ಪರವಾಗಿರುವ ಘೋಷಣೆಗಳನ್ನು ಕೂಗುತ್ತಾರೆ. ಕರ್ನಾಟಕದ ಮೇಲೆ ದಾಳಿ ನಡೆಸಿ ಇಲ್ಲಿನ ಜನರನ್ನು ದೋಚಿದ ಪೇಶ್ವೆಗಳು ಇವರಿಗೆ ಪ್ರಾತಃ ಸ್ಮರಣೀಯರು. ಅವರನ್ನು ಎದುರಿಸಿ ಪ್ರಾಣತ್ಯಾಗ ಮಾಡಿದ ಟಿಪ್ಪು, ಬೆಳವಡಿ ಮಲ್ಲಮ್ಮನಂತಹ ಕನ್ನಡಿಗರು ಇವರಿಗೆ ದೇಶದ್ರೋಹಿಗಳು. ಇಂತಹ ನಾಯಕರಿರುವಾಗ ಬೆಳಗಾವಿ ಗಡಿಯಲ್ಲಿ ಮರಾಠಿಗರು ಪ್ರಾಬಲ್ಯವನ್ನು ಪಡೆಯದೇ ಇನ್ನೇನಾಗುತ್ತದೆ? ಕರ್ನಾಟಕದ ಸೌಹಾರ್ದ ನೆಲೆಗಳಿಗೆ, ಪರಂಪರೆಗಳಿಗೆ ಇವರೇ ಬೆಂಕಿ ಹಚ್ಚುತ್ತಾರೆ. ಹಂಪಿ ವಿಶ್ವವಿದ್ಯಾನಿಲಯ ಸೂಕ್ತ ಅನುದಾನವಿಲ್ಲದೆ ಕೊರಗುತ್ತಿರುವ ಸಂದರ್ಭದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಮರಾಠಿ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲು ಮುಂದಾಯಿತು. ರಾಜಕಾರಣಿಗಳೇ ಒಂದೆಡೆ ಮರಾಠಿ ಭಾಷೆಯನ್ನು ರಾಜ್ಯದೊಳಗೆ ಪ್ರೋತ್ಸಾಹಿಸುತ್ತಾ, ಸಾರ್ವಜನಿಕವಾಗಿ ಮಾತ್ರ ಕನ್ನಡದ ಪರವಾಗಿ ಮೊಸಳೆ ಕಣ್ಣೀರು ಸುರಿಸಿದ ಫಲವಾಗಿ ಇಂದು ಬೆಳಗಾವಿ ಗಡಿ ಭಾಗದಲ್ಲಿ ಮರಾಠಿ ಭಾಷಿಗರ ಸಂಖ್ಯೆ ಹೆಚ್ಚಾಗಿದೆ. ಗಡಿಭಾಗದಲ್ಲಿ ಮರಾಠಿ-ಕನ್ನಡ ಸಂಘರ್ಷ ಜೀವಂತವಾಗಿರುವುದು ಉಭಯ ರಾಜ್ಯಗಳ ನಾಯಕರಿಗೂ ಅತ್ಯಗತ್ಯವಾಗಿದೆ. ಆದರೆ ಇದೇ ಸಂದರ್ಭದಲ್ಲಿ ನೆರೆ ಬಂದಾಗ, ಬರ ಬಂದಾಗ, ಕೊರೋನ ಬಂದಾಗ ಇವರ್ಯಾರಿಗೂ ಬೆಳಗಾವಿ ಗಡಿಭಾಗದಲ್ಲಿರುವ ಜನರು ನೆನಪಾಗಲಿಲ್ಲ. ಭಾಷೆಯ ಜಗಳವಾದಾಗಲಷ್ಟೇ ಬೆಳಗಾವಿಯ ಮೇಲೆ ಹಕ್ಕು ಸಾಧಿಸುವ ಉಭಯ ರಾಜ್ಯಗಳ ನಾಯಕರು, ಅಲ್ಲಿನ ಜನರಿಗೆ ಸಂಕಟ ಎದುರಾದಾಗ ‘ನಮ್ಮ ಜನರು’ ಎಂದು ನೆರವು ನೀಡಲು ಇವರಲ್ಲಿ ಸ್ಪರ್ಧೆ ನಡೆಯುವುದೇ ಇಲ್ಲ. ಅಲ್ಲೂ ಇಲ್ಲೂ ಸಲ್ಲದೆ ಬೆಳಗಾವಿಯ ಗಡಿ ಭಾಗದ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರ ಬಗ್ಗೆ ಉಭಯ ರಾಜ್ಯಗಳೂ ಮೌನವಾಗಿವೆ.
ಬೆಳಗಾವಿಯ ಗಡಿಭಾಗದ ಜನರು ಯಾವ ಭಾಷೆಯನ್ನು ಆಡಬೇಕು, ಬೆಳಗಾವಿ ಯಾರಿಗೆ ಸೇರಬೇಕು ಎನ್ನುವ ನಿರ್ಧಾರವನ್ನು ಮಾಡುವ ಹಕ್ಕಿರುವುದು ಅಲ್ಲಿ ವಾಸಿಸುವ ಜನರಿಗೇ ಹೊರತು, ಹೊರಗಿನಿಂದ ಜಗಳಕ್ಕೆ ಕುಮ್ಮಕ್ಕು ನೀಡುವ ರಾಜಕಾರಣಿಗೆ ಅಲ್ಲ. ಬೆಳಗಾವಿಯ ಮೇಲೆ ಯಾವ ಸರಕಾರ ಅಭಿವೃದ್ಧಿಗಾಗಿ ಹೆಚ್ಚು ಕ್ರಮಗಳನ್ನು ತೆಗೆದುಕೊಳ್ಳುತ್ತದೆಯೋ, ಬೆಳಗಾವಿಯ ಯೋಗಕ್ಷೇಮವನ್ನು ಯಾವ ರಾಜ್ಯ ನೋಡಿಕೊಳ್ಳುತ್ತದೆಯೋ ಆ ರಾಜ್ಯಕ್ಕೆ ಬೆಳಗಾವಿ ಸಲ್ಲುತ್ತದೆ. ಇದೇ ಸಂದರ್ಭದಲ್ಲಿ, ಮಹಾರಾಷ್ಟ್ರವನ್ನು ಭಾಗಶಃ ಹಿಂದಿಮಯವಾಗಿಸುವಲ್ಲಿ ಉತ್ತರ ಭಾರತ ಯಶಸ್ವಿಯಾಗಿದೆ. ಅದರ ವಿರುದ್ಧ ಮಹಾರಾಷ್ಟ್ರ ಮೊದಲು ಮಾತನಾಡಲಿ. ಹಾಗೆಯೇ, ಬಸ್ನಲ್ಲಿ ಕಂಡಕ್ಟರ್ ಯಾವ ಭಾಷೆಯಲ್ಲಿ ಮಾತನಾಡಬೇಕು ಎನ್ನುವ ಚರ್ಚೆಗಿಂತ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಹಿಂದಿ ಭಾಷೆಯ ಹೇರಿಕೆಯ ವಿರುದ್ಧ ಕರ್ನಾಟಕ ಒಂದಾಗಬೇಕಾಗಿದೆ. ಬೆಳಗಾವಿಯ ಗಡಿಭಾಗದ ಜನರು ಮರಾಠಿ-ಕನ್ನಡವನ್ನು ಬದುಕಿಗೆ ಸೇತುವೆಯಾಗಿ ಬಳಸಿಕೊಳ್ಳಲು ಉಭಯ ರಾಜ್ಯಗಳೂ ಅವಕಾಶ ನೀಡಬೇಕು. ಅವರ ನಡುವೆ ಭಾಷೆಯ ಹೆಸರಲ್ಲಿ ಗೋಡೆಕಟುವ್ಟ ರಾಜಕೀಯ ಪಕ್ಷಗಳ ಸಂಚುಗಳನ್ನು ಉಭಯ ರಾಜ್ಯಗಳ ಜನರೇ ಒಂದಾಗಿ ವಿಫಲಗೊಳಿಸಬೇಕಾಗಿದೆ.