ಒಂದು ದೇಶ- ಒಂದು ಚುನಾವಣೆ: ಒಕ್ಕೂಟ ವ್ಯವಸ್ಥೆಯ ಮೇಲೆ ಇನ್ನೊಂದು ದಾಳಿ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಚುನಾವಣೆ ಬೇರೆ ಬೇರೆ ಕಾರಣಗಳಿಗಾಗಿ ಸುದ್ದಿಯಲ್ಲಿದೆ. ಸರಕಾರ ಚುನಾವಣಾ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಲು ಪ್ರಯತ್ನಿಸುತ್ತಿದೆ ಎನ್ನುವ ಆರೋಪವನ್ನು ವಿರೋಧ ಪಕ್ಷಗಳು ಕಾಲಕಾಲಕ್ಕೆ ಮಾಡುತ್ತಾ ಬಂದಿವೆ. ಆರಂಭದಲ್ಲಿ ಕೆಲವು ಪಕ್ಷಗಳು ಇವಿಎಂ ಬಗ್ಗೆ ತೀವ್ರ ಅನುಮಾನಗಳನ್ನು ವ್ಯಕ್ತಪಡಿಸಿದವು. ಚುನಾವಣೆಯಲ್ಲಿ ಇವಿಎಂ ತಿರುಚಲಾಗುತ್ತಿದೆ, ಮತಯಂತ್ರಗಳನ್ನು ಹ್ಯಾಕ್ ಮಾಡಲಾಗುತ್ತಿದೆ. ಆದುದರಿಂದ ಮತಯಂತ್ರಗಳನ್ನು ಹಿಂದಕ್ಕೆ ಪಡೆದು ‘ಮತ ಪತ್ರ’ಗಳ ಮೂಲಕ ಚುನಾವಣೆ ನಡೆಸಬೇಕು ಎಂದು ಹಲವು ಪಕ್ಷಗಳ ನಾಯಕರು ಚುನಾವಣಾ ಆಯೋಗವನ್ನು ಒತ್ತಾಯಿಸುತ್ತಾ ಬಂದಿದ್ದಾರೆ. ಆದರೆ ಆಯೋಗ ಆ ಮನವಿ, ಒತ್ತಾಯಗಳನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಹಲವೆಡೆ ಮತಯಂತ್ರಗಳ ದುರ್ಬಳಕೆಯಾಗಿದೆಯಾದರೂ, ದೇಶದ ಚುನಾವಣಾ ಫಲಿತಾಂಶಗಳನ್ನು ಪೂರ್ಣ ಪ್ರಮಾಣದಲ್ಲಿ ಎಲ್ಲೋ ಕುಳಿತು ಏರುಪೇರು ಮಾಡಬಹುದು ಎನ್ನುವುದನ್ನು ಸಾಬೀತು ಮಾಡಲು ವಿರೋಧ ಪಕ್ಷಗಳು ವಿಫಲವಾಗಿವೆ. ಇದೇ ಸಂದರ್ಭದಲ್ಲಿ ಮಾಧ್ಯಮಗಳನ್ನೆಲ್ಲ ಹಂತಹಂತವಾಗಿ ಕೈವಶ ಮಾಡಿಕೊಂಡು, ದ್ವೇಷ ರಾಜಕಾರಣದ ಮೂಲಕ ಜನರ ಮೆದುಳನ್ನೇ ಹ್ಯಾಕ್ ಮಾಡಿರುವಾಗ, ಮತಯಂತ್ರವನ್ನು ಪ್ರತ್ಯೇಕವಾಗಿ ಹ್ಯಾಕ್ ಮಾಡುವ ಅಗತ್ಯವೇನಿದೆ ಎಂದು ಪ್ರಜ್ಞಾವಂತರು ತಮಗೆ ತಾವೇ ಪ್ರಶ್ನಿಸಿಕೊಳ್ಳುವ ಸ್ಥಿತಿ ದೇಶದಲ್ಲಿದೆ.
ಇವುಗಳ ನಡುವೆಯೂ ಪ್ರಾದೇಶಿಕ ಹಿತಾಸಕ್ತಿಯ ಪ್ರಶ್ನೆ ಬಂದಾಗಲೆಲ್ಲ ರಾಜ್ಯದ ಜನರು ವಿಧಾನಸಭಾ ಚುನಾವಣೆಗಳಲ್ಲಿ ಕೇಂದ್ರ ಸರಕಾರದ ಸರ್ವಾಧಿಕಾರವನ್ನು ತಿರಸ್ಕರಿಸುತ್ತಾ ಬಂದಿದ್ದಾರೆ. ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರವಿದ್ದರೂ ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿಯೇತರ ಸರಕಾರಗಳಿವೆ. ಇದು ಕೇಂದ್ರಸರಕಾರವನ್ನು ನಿಯಂತ್ರಿಸಿ ತಮ್ಮ ಹಿತಾಸಕ್ತಿಯನ್ನು ಸಾಧಿಸಿಕೊಳ್ಳುತ್ತಿರುವ ಕೆಲವು ಶಕ್ತಿಗಳಿಗೆ ತಲೆನೋವಿನ ವಿಷಯವಾಗಿದೆ. ಇಷ್ಟಾದರೂ, ರಾಜ್ಯಗಳಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರಕಾರಗಳನ್ನು ಆಪರೇಷನ್ ಕಮಲದ ಹೆಸರಿನಲ್ಲಿ ಉರುಳಿಸಿ, ತನ್ನ ಸರಕಾರವನ್ನು ಸ್ಥಾಪಿಸಲು ಹಲವಡೆೆ ಬಿಜೆಪಿ ಯಶಸ್ವಿಯಾಗಿದೆ. ಆದರೆ ಇಂತಹ ತಂತ್ರಗಳು ಕೆಲವೆಡೆಗೆ ಬಿಜೆಪಿಗೆ ತಿರುಗುಬಾಣವಾದದ್ದೂ ಇದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಹಲವು ರ್ಯಾಲಿಗಳನ್ನು ನಡೆಸಿಯೂ ಬಿಜೆಪಿಯನ್ನು ಗೆಲ್ಲಿಸುವಲ್ಲಿ ವಿಫಲರಾದರು. ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ‘ಮೋದಿ ಭ್ರಮೆ’ಯನ್ನು ಒಡೆದಿತ್ತು. ಮೋದಿ ಹೆಸರಿನಲ್ಲಿ ಕೇಂದ್ರದಲ್ಲಿ ಅಧಿಕಾರವನ್ನು ತನ್ನದಾಗಿಸಿದಷ್ಟು ಸುಲಭವಾಗಿ, ರಾಜ್ಯಗಳಲ್ಲಿ ತನ್ನದಾಗಿಸಲು ಸಾಧ್ಯವಿಲ್ಲ ಎನ್ನುವುದು ಬಿಜೆಪಿಗೆ ಮತ್ತು ಅದರ ಹಿಂದಿರುವ ಶಕ್ತಿಗಳಿಗೆ ಸ್ಪಷ್ಟವಾಗಿ ಮನವರಿಕೆಯಾಯಿತು. ರಾಜ್ಯ ವಿಧಾನ ಸಭಾಚುನಾವಣೆಯಲ್ಲಿ ಪ್ರಾದೇಶಿಕ ಹಿತಾಸಕ್ತಿ ಆದ್ಯತೆ ಪಡೆಯುತ್ತಿರುವುದು ಅವರ ಗಮನಕ್ಕೆ ಬಂದಿದೆ. ಆ ಕಾರಣದಿಂದಲೇ, ಇದೀಗ ಚುನಾವಣಾ ಸುಧಾರಣೆಯ ಹೆಸರಿಲ್ಲಿ ‘ಒಂದು ದೇಶ-ಒಂದು ಚುನಾವಣೆ’ಯನ್ನು ಕೇಂದ್ರ ಸರಕಾರ ಅವಸರವಸರವಾಗಿ ಮುಂದಿಟ್ಟಿದೆ.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಾಲಕಾಲಕ್ಕೆ ಚುನಾವಣಾ ಸುಧಾರಣೆಗಳು ನಡೆದಿವೆ. ‘ಒಂದು ದೇಶ- ಒಂದು ಚುನಾವಣೆ’ ೬೦ ರ ದಶಕದಲ್ಲೇ ಚರ್ಚೆಗೆ ಬಂದಿತ್ತು. ಇದರಲ್ಲಿ ಹತ್ತು ಹಲವು ಲಾಭಗಳಿವೆ, ಹಾಗೆಯೇ ನಷ್ಟಗಳೂ ಇವೆ ಎನ್ನುವುದನ್ನು ತಜ್ಞರು ಪ್ರತಿಪಾದಿಸುತ್ತಾ ಬಂದಿದ್ದಾರೆ. ಆದರೆ, ಇರುವ ಚುನಾವಣಾ ವ್ಯವಸ್ಥೆಯನ್ನೇ ವಿರೂಪಗೊಳಿಸುತ್ತಿರುವ, ‘ಆಪರೇಷನ್ ಕಮಲ’ದ ಹೆಸರಿನಲ್ಲಿ ಚುನಾವಣೆಯ ಉದ್ದೇಶವನ್ನೇ ಮಣ್ಣು ಪಾಲು ಮಾಡುತ್ತಾ, ಪದೇ ಪದೇ ಜನರ ಮೇಲೆ ಚುನಾವಣೆಗಳನ್ನು ಹೇರುತ್ತಿರುವ ಬಿಜೆಪಿ ಸರಕಾರ ಏಕಾಏಕಿ ‘ಒಂದು ದೇಶ-ಒಂದು ಚುನಾವಣೆ’ಯನ್ನು ಮುಂದಿಟ್ಟು ಸುಧಾರಣೆಯ ಬಗ್ಗೆ ಮಾತನಾಡಿದರೆ ಅದರ ಬಗ್ಗೆ ಅಪನಂಬಿಕೆಗಳು ಹುಟ್ಟುವುದು ಸಹಜವೇ ಆಗಿದೆ. ಒಕ್ಕೂಟ ವ್ಯವಸ್ಥೆಯನ್ನು ಇನ್ನಷ್ಟು ದುರ್ಬಲಗೊಳಿಸಲು ಕೇಂದ್ರ ಸರಕಾರ ನಡೆಸುತ್ತಿರುವ ಸಿದ್ಧತೆ ಇದು ಎಂದು ಹಲವು ರಾಜ್ಯಗಳು ಕಳವಳ ವ್ಯಕ್ತಪಡಿಸಿವೆ.
ಒಂದು ದೇಶ ಒಂದು ಚುನಾವಣೆ ಜಾರಿಗೆ ತಂದರೆ ಅದು ಭಾರತದ ಒಕ್ಕೂಟ ವ್ಯವಸ್ಥೆಯ ಮೇಲೆ ಬೀರಬಹುದಾದ ಪರಿಣಾಮಗಳೇನು ಎನ್ನುವುದರ ಕುರಿತ ಚರ್ಚೆಗೆ ಆದ್ಯತೆಯನ್ನು ನೀಡಬೇಕಾಗಿದೆ. ಆದರೆ ಕೇಂದ್ರ ಸರಕಾರ, ‘ಹಣದ ಉಳಿತಾಯ ಮತ್ತು ಸಮಯದ ಉಳಿತಾಯ’ಗಳನ್ನು ಮುಂದಿಟ್ಟು ಆ ಕಾಯ್ದೆ ಜಾರಿಗೆ ಅತ್ಯಾತುರ ಪ್ರದರ್ಶಿಸುತ್ತಿದೆ. ಇಷ್ಟಕ್ಕೂ ಈ ವ್ಯವಸ್ಥೆ ನಿಜಕ್ಕೂ ದೇಶದ ಹಣಕಾಸಿನ ಉಳಿತಾಯಕ್ಕೆ ಸಹಾಯ ಮಾಡುತ್ತದೆಯೇ ಎಂದರೆ ಉತ್ತರ ನಿರಾಶಾದಾಯಕವಾಗಿದೆ. ಏಕಕಾಲದ ಚುನಾವಣೆಯ ಸಂದರ್ಭದಲ್ಲಿ ಎದುರಾಗುವ ಸವಾಲುಗಳನ್ನು ಚುನಾವಣಾ ಆಯೋಗ ಈಗಾಗಲೇ ಸರಕಾರದ ಮುಂದಿಟ್ಟಿದೆ. ಏಕಕಾಲದಲ್ಲಿ ಚುನಾವಣೆಗಳು ನಡೆದಲ್ಲಿ ಹೆಚ್ಚುವರಿ ಇವಿಎಂ ಮತ್ತು ವಿವಿಪ್ಯಾಟ್‌ಗಳ ಖರೀದಿಗೇ ಸುಮಾರು ೧೦,೦೦೦ ಕೋಟಿ ರೂ. ವೆಚ್ಚವಾಗುತ್ತದೆ ಎಂದು ಚುನಾವಾಣಾ ಆಯೋಗ ಅಂದಾಜಿಸಿದೆ. ಅಷ್ಟೇ ಅಲ್ಲ, ಪ್ರತೀ ೧೫ ವರ್ಷಗಳಿಗೊಮ್ಮೆ ಈ ಚುನಾವಣಾ ಯಂತ್ರಗಳನ್ನು ಬದಲಿಸಬೇಕಾಗುತ್ತದೆ. ಅಂದರೆ ಪ್ರತಿ ಹದಿನೈದು ವರ್ಷ ಈ ಹೆಚ್ಚುವರಿ ವೆಚ್ಚವನ್ನು ಹೊರಲು ದೇಶದ ಜನತೆ ಸಿದ್ಧವಾಗಿರಬೇಕಾಗುತ್ತದೆ. ಈಗಾಗಲೇ ದೇಶ ತೀವ್ರ ಆರ್ಥಿಕ ಸಂಕಟಗಳನ್ನು ಎದುರಿಸುತ್ತಿರುವಾಗ, ಏಕಕಾಲದ ಚುನಾವಣೆಯ ಹೆಸರಿಲ್ಲಿ ಇನ್ನಷ್ಟು ಆರ್ಥಿಕ ಹೊರೆಯನ್ನು ಮೈಮೇಲೆ ಹೇರಿಕೊಳ್ಳುವುದು ಎಷ್ಟು ಸರಿ?
ಚುನಾವಣಾ ವೆಚ್ಚಗಳ ಬಗ್ಗೆ ಮೋದಿ ನೇತೃತ್ವದ ಸರಕಾರಕ್ಕೆ ನಿಜಕ್ಕೂ ಕಾಳಜಿಯಿದ್ದಿದ್ದರೆ ‘ಆಪರೇಷನ್ ಕಮಲ’ ನಡೆಸಿ ಹಲವು ರಾಜ್ಯಗಳ ಮೇಲೆ ಪದೇ ಪದೇ ಉಪಚುನಾವಣೆಗಳನ್ನು ಯಾಕೆ ಹೇರಿತ್ತು? ಈ ಪ್ರಶ್ನೆ ಮುನ್ನಲೆಗೆ ಬರುತ್ತದೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಶಾಸಕರನ್ನು ಹಣಬಲದಿಂದ ಕೊಂಡು, ಇಡೀ ಚುನಾವಣಾ ಫಲಿತಾಂಶವನ್ನೇ ಬುಡಮೇಲು ಮಾಡಿದಾಗ ಈ ದೇಶಕ್ಕೆ ಆಗಿರುವ ಆರ್ಥಿಕ ನಷ್ಟಗಳೆಷ್ಟು ಎನ್ನುವುದನ್ನು ಪ್ರಧಾನಿಗೆ ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿದೆಯೆ? ಚುನಾವಣೆ ನಡೆದ ಒಂದು ವರ್ಷದಲ್ಲೇ ಆಪರೇಷನ್ ಕಮಲದ ಹೆಸರಿನಲ್ಲಿ ಅಕ್ರಮವಾಗಿ ರಾಜ್ಯ ಸರಕಾರಗಳನ್ನು ಉರುಳಿಸುವವರಿಗೆ ಏಕ ಚುನಾವಣೆಯ ಬಗ್ಗೆ ಮಾತನಾಡುವ ನೈತಿಕತೆಯಾದರೂ ಇದೆಯೆ? ಕರ್ನಾಟಕದಲ್ಲಿ ಭರ್ಜರಿ ಬಹುಮತದಿಂದ ಆಯ್ಕೆಯಾದ ಕಾಂಗ್ರೆಸ್ ಸರಕಾರವನ್ನು ಇಲ್ಲಿನ ಬಿಜೆಪಿ ನಾಯಕರು ಉರುಳಿಸುವ ಮಾತನಾಡುತ್ತಿರುವಾಗ, ಅತ್ತ ದಿಲ್ಲಿಯಲ್ಲಿ ಪ್ರಧಾನಿ ಮೋದಿಯವರು ‘ಒಂದು ದೇಶ-ಒಂದು ಚುನಾವಣೆ’ ಎಂದು ಉಪನ್ಯಾಸ ನೀಡುವುದರಲ್ಲ್ ಏನು ಅರ್ಥವಿದೆ?
ಲೋಕಸಭೆ ಮತ್ತು ರಾಜ್ಯದ ಚುನಾವಣೆಗಳು ಬೇರೆ ಬೇರೆ ಆದ್ಯತೆಗಳನ್ನು ಮುಂದಿಟ್ಟು ನಡೆಯುತ್ತವೆ. ಲೋಕಸಭಾ ಚುನಾವಣೆ ಮೋದಿ, ರಾಹುಲ್‌ರಂತಹ ರಾಷ್ಟ್ರೀಯ ಪಕ್ಷಗಳ ನಾಯಕರ ನಡುವೆ ನಡೆದರೆ, ರಾಜ್ಯದ ಚುನಾವಣೆಯ ಸಂದರ್ಭದಲ್ಲಿ ಪ್ರಾದೇಶಿಕ ನಾಯಕರ ನೇತೃತ್ವ ಪ್ರಾಮುಖ್ಯ ಪಡೆದುಕೊಳ್ಳುತ್ತದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡೆರಡು ಬಾರಿ ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ರ್ಯಾಲಿ ನಡೆಸಿದರೂ, ಸಿದ್ದರಾಮಯ್ಯ ವರ್ಚಸ್ಸಿಗೆ ಸರಿಸಾಟಿಯಾಗಿ ನಿಲ್ಲಲು ಅವರಿಗೆ ಸಾಧ್ಯವಾಗಲಿಲ್ಲ. ಚುನಾವಣೆಯಲ್ಲಿ ರಾಜ್ಯದ ಹಿತಾಸಕ್ತಿಗಳು ಚರ್ಚೆಗೆ ಬರದಂತೆ ನೋಡಿಕೊಳ್ಳುವ ಏಕೈಕ ಉದ್ದೇಶದಿಂದ ಏಕ ಚುನಾವಣೆಯನ್ನು ಆತುರಾತುರವಾಗಿ ದೇಶದ ಮೇಲೆ ಹೇರಲು ಹೊರಟಿದೆ ಎಂದು ಪ್ರಾದೇಶಿಕವಾದಿಗಳು ಈ ಕಾರಣಕ್ಕೆ ಆರೋಪಿಸುತ್ತಿದ್ದಾರೆ. ಲೋಕಸಭೆ ಮತ್ತು ರಾಜ್ಯ ವಿಧಾನಭಾ ಚುನಾವಣೆಯನ್ನು ಒಟ್ಟೊಟ್ಟಿಗೆ ಹಮ್ಮಿಕೊಂಡು ಜನರನ್ನು ಗೊಂದಲದಲ್ಲಿ ಸಿಲುಕಿಸಿ ರಾಜ್ಯಗಳನ್ನು ತನ್ನ ಕೈವಶ ಮಾಡಿಕೊಳ್ಳುವ ಸಂಚು ಇದರ ಹಿಂದಿದೆ. ಪ್ರಾದೇಶಿಕ ನಾಯಕರನ್ನು ಸ್ಥಳೀಯವಾಗಿ ಎದುರಿಸಲಾಗದೆ, ‘ಒಂದು ದೇಶ’ ಎನ್ನುವ ಮುಖವಾಡದಲ್ಲಿ ದಿಲ್ಲಿಯನ್ನೇ ಕೇಂದ್ರವಾಗಿಟ್ಟುಕೊಂಡು ಎದುರಿಸಲು ಮುಂದಾಗಿದ್ದಾರೆ. ಎಲ್ಲ ರಾಜ್ಯಗಳು ಒಂದಾಗಿ ಇದರ ವಿರುದ್ಧ ಧ್ವನಿಯೆತ್ತದೇ ಇದ್ದರೆ, ಶೀಘ್ರದಲ್ಲೇ ಒಕ್ಕೂಟ ವ್ಯವಸ್ಥೆ ಹೆಸರಿಗಷ್ಟೇ ಅಸ್ತಿತ್ವದಲ್ಲಿ ಉಳಿಯಲಿದೆ. ರಾಜ್ಯಗಳ ಒಳಿತು ಕೆಡುಕುಗಳನ್ನೆಲ್ಲ ದಿಲ್ಲಿಯಲ್ಲಿ ಕುಳಿತವರೇ ನಿರ್ಧರಿಸುವ ದಿನ ಬರಲಿದೆ.