ವೈದ್ಯಕೀಯ ಕ್ಷೇತ್ರದ ನೈತಿಕ ಶಕ್ತಿಯನ್ನು ಕುಗ್ಗಿಸುತ್ತಿರುವ ಪತಂಜಲಿ
Photo: fb.com/Patanjali
ಆಯುರ್ವೇದವನ್ನು, ವೈದ್ಯಕೀಯ ಕ್ಷೇತ್ರವನ್ನು ಪತಂಜಲಿ ದಾರಿ ತಪ್ಪಿಸುತ್ತಿದೆ ಎಂದು ಸುಪ್ರೀಂಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ ಮಾತ್ರವಲ್ಲ, ಈ ಬಗ್ಗೆ ಮಧ್ಯ ಪ್ರವೇಶಿಸುವಂತೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ. ಪತಂಜಲಿ ಸಂಸ್ಥೆಯ ಸುಳ್ಳು ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರಕ್ಕೆ ಛೀಮಾರಿ ಹಾಕಿರುವ ಸರ್ವೋಚ್ಚ ನ್ಯಾಯಾಲಯ ‘‘ಕೇಂದ್ರ ಸರಕಾರ ಈ ಬಗ್ಗೆ ಯಾಕೆ ಕಣ್ಣು ಮುಚ್ಚಿ ಕೂತಿದೆ?’’ ಎಂದು ಪ್ರಶ್ನಿಸಿದೆ. ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ) ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ 2022 ಆಗಸ್ಟ್ 23ರಂದು ಕೇಂದ್ರ ಆರೋಗ್ಯ ಸಚಿವಾಲಯ, ಆಯುಷ್ ಸಚಿವಾಲಯ ಹಾಗೂ ಪತಂಜಲಿ ಆಯುರ್ವೇದ ಲಿಮಿಟೆಡ್ಗೆ ನೋಟಿಸ್ ಜಾರಿ ಮಾಡಿತ್ತು. ಲಸಿಕೆ ಅಭಿಯಾನ ಹಾಗೂ ಆಧುನಿಕ ವೈದ್ಯಕೀಯದ ವಿರುದ್ಧ ಪತಂಜಲಿಯ ಸ್ಥಾಪಕ ರಾಮ್ದೇವ್ ಅಪ ಪ್ರಚಾರ ನಡೆಸಿದ್ದಾರೆ ಎಂದು ಐಎಂಎ ಅರ್ಜಿಯಲ್ಲಿ ಆರೋಪಿಸಿತ್ತು. ನ್ಯಾಯಾಲಯ ಈ ಹಿಂದೆಯೂ ಪತಂಜಲಿಗೆ ಎಚ್ಚರಿಕೆಯನ್ನು ನೀಡಿತ್ತಾದರೂ, ಅದು ತನ್ನ ಲಜ್ಜೆಗೆಟ್ಟ ಪ್ರವೃತ್ತಿಯನ್ನು ಮುಂದುವರಿಸಿದೆ. ಇದೀಗ ಪತಂಜಲಿ ಸಂಸ್ಥೆಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಲಾಗಿದೆ.
ಪತಂಜಲಿ ರಾಮ್ದೇವ್ ಪಕ್ಕಾ ಉದ್ಯಮಿಯೇ ಆಗಿದ್ದು ತನ್ನ ವಾಣಿಜ್ಯ ಉತ್ಪಾದನೆಗಳ ಬಗ್ಗೆ ಜಾಹೀರಾತು ನೀಡಿದ್ದರೆ ಇಷ್ಟು ಗಂಭೀರವಾಗಿ ಸ್ವೀಕರಿಸಬೇಕಾಗಿಲ್ಲ. ಉದಾಹರಣೆಗೆ ಸೋಪು, ಶಾಂಪು, ಅಗರ್ಬತ್ತಿ ಇತ್ಯಾದಿಗಳ ಮಾರಾಟದ ಸಂದರ್ಭದಲ್ಲಿ ಪ್ರಸಾರ ಮಾಡುವ ಜಾಹೀರಾತುಗಳು ಅತಿರೇಕಗಳಿಂದ ಕೂಡಿದರೂ ಜನರು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಪತಂಜಲಿ ಇಂದು ಕೇವಲ ಸೋಪು, ಪೇಸ್ಟ್ ಇತ್ಯಾದಿಗಳನ್ನಷ್ಟೇ ಉತ್ಪನ್ನ ಮಾಡುತ್ತಿಲ್ಲ. ರಾಮ್ದೇವ್ ಸ್ವಯಂಘೋಷಿತ ವೈದ್ಯನಾಗಿಯೂ ಗುರುತಿಸಿಕೊಂಡಿದ್ದಾರೆ. ಅಪ್ಪಟ ಆಯುರ್ವೇದ ಔಷಧಿಗಳ ಉತ್ಪನ್ನಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವ್ಯವಹರಿಸುತ್ತಿದ್ದಾರೆ. ಆಯುರ್ವೇದ, ಸ್ವದೇಶಿ ಉತ್ಪನ್ನಗಳೆಂದು ಜನರನ್ನು ಭಾವನಾತ್ಮಕವಾಗಿ ಮರುಳು ಮಾಡುತ್ತಾ ತನ್ನ ಔಷಧಿಗಳನ್ನು ಮಾರ್ಕೆಟಿಂಗ್ ಮಾಡುತ್ತಿದ್ದಾರೆ. ಕಾವಿಯನ್ನು ಧರಿಸಿದರೂ ಅತ್ತ ಸನ್ಯಾಸಿಯೂ ಅಲ್ಲದ, ಇತ್ತ ಅಧಿಕೃತವಾಗಿ ತನ್ನನ್ನು ತಾನು ಉದ್ಯಮಿಯೆಂದೂ ಘೋಷಿಸಿಕೊಳ್ಳದೆ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಸುತ್ತಿದ್ದಾರೆ. ಆದರೆ ಇವರ ಉತ್ಪನ್ನಗಳಲ್ಲಿ ಅಲೋಪತಿ ಅಂಶಗಳನ್ನು ಸೇರಿಸಲಾಗುತ್ತದೆ ಎನ್ನುವ ಆರೋಪಗಳನ್ನು ಹಲವರು ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಮಾಂಸ ಜನ್ಯ ಪದಾರ್ಥಗಳನ್ನು ತಮ್ಮ ಔಷಧಿಗಳಲ್ಲಿ ಮತ್ತು ಇತರ ಉತ್ಪನ್ನಗಳಲ್ಲಿ ಇವರು ಬಳಸುತ್ತಿರುವ ಬಗ್ಗೆ ಹಲವರು ದೂರು ನೀಡಿದ್ದಾರೆ. ಬಾಬಾ ರಾಮ್ದೇವ್ ‘ಯೋಗದ ಮೂಲಕ ಸಕಲ ರೋಗ ವಾಸಿಯಾಗುತ್ತದೆ’ ಎಂದು ಪ್ರಚಾರ ಮಾಡುತ್ತಿರುವವರು. ಯೋಗವನ್ನೇ ಒಂದು ಉದ್ಯಮವನ್ನಾಗಿಸಿಕೊಂಡು ಅದರಿಂದಲೂ ಕೋಟ್ಯಂತರ ರೂಪಾಯಿ ಸಂಪಾದಿಸುತ್ತಿದ್ದಾರೆ. ಆದರೆ ಕಾವಿ ಬಟ್ಟೆಯನ್ನು ಧರಿಸಿ ವೈದ್ಯಕ್ಕೀಯ ಕ್ಷೇತ್ರಕ್ಕೂ ಕಾಲಿಡುವ ಮೂಲಕ ಅವರು ಆಯುರ್ವೇದಕ್ಕೂ, ಆಧುನಿಕ ವೈದ್ಯಕೀಯ ಲೋಕಕ್ಕೂ ಭಾರೀ ದ್ರೋಹವನ್ನು ಎಸಗುತ್ತಿದ್ದಾರೆ.
ಕೊರೋನ ಕಾಲದಲ್ಲಿ ಜನಸಾಮಾನ್ಯರು ಸಾಂಕ್ರಾಮಿಕ ರೋಗದಿಂದ ತತ್ತರಿಸಿ ಕೂತ ಹೊತ್ತಿನಲ್ಲಿ, ಕೊರೋನಕ್ಕೆ ಔಷಧಿ ಕಂಡು ಹಿಡಿದಿದ್ದೇನೆ ಎಂದು ಪತ್ರಿಕಾಗೋಷ್ಠಿ ನಡೆಸಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ರಾಮ್ದೇವ್ ಛೀಮಾರಿ ಹಾಕಿಸಿಕೊಂಡಿದ್ದರು. ತನ್ನ ಔಷಧಿಗಳ ಬಗ್ಗೆ ಸುಳ್ಳು ಪ್ರಚಾರಗಳನ್ನು ಮಾಡುವುದು ಮಾತ್ರವಲ್ಲ, ಇವರು ಇನ್ನೂ ಒಂದುಹೆಜ್ಜೆ ಮುಂದೆ ಹೋಗಿ ಅಲೋಪತಿ ಔಷಧಗಳ ಬಗ್ಗೆ ತಪ್ಪು ಮಾಹಿತಿಗಳನ್ನು ನೀಡತೊಡಗಿದರು. ಅವುಗಳ ವಿರುದ್ಧ ಸಾರ್ವಜನಿಕ ವೇದಿಕೆಗಳಲ್ಲಿ ಟೀಕೆ ಮಾಡತೊಡಗಿದರು. ಬಾಬಾ ರಾಮ್ದೇವ್ಗೆ ದೇಶಾದ್ಯಂತ ಸಹಸ್ರಾರು ಹಿಂಬಾಲಕರು ಇರುವುದರಿಂದ, ಅವರ ಮಾತುಗಳು ಜನಸಾಮಾನ್ಯರನ್ನು ತಪ್ಪು ದಾರಿಗೆ ಎಳೆಯುವ ಎಲ್ಲ ಸಾಧ್ಯತೆಗಳಿದ್ದವು. ಬಿಪಿ, ಸಕ್ಕರೆ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದೂ ನಕಲಿ ಔಷಧಿಗಳನ್ನು ಮಾರುಕಟ್ಟೆಗೆ ಬಿಟ್ಟಿರುವ ಆರೋಪ ಅವರ ಮೇಲಿದೆ. ಆರೋಗ್ಯದ ವಿಷಯದಲ್ಲಿ ದೇಶ ಕಳಪೆ ನಿರ್ವಹಣೆ ತೋರಿಸುತ್ತಿರುವಾಗ, ಆಯುರ್ವೇದ ಉತ್ಪನ್ನದ ಹೆಸರಿನಲ್ಲಿ ನಕಲಿ ಔಷಧಿಗಳನ್ನು ಉತ್ಪಾದಿಸುವುದಲ್ಲದೆ, ವೈಜ್ಞಾನಿಕವಾಗಿ ಎಲ್ಲ ಪರೀಕ್ಷೆಗಳ ಬಳಿಕ ಮಾರುಕಟ್ಟೆಗೆ ಬಿಡುಗಡೆ ಮಾಡುವ ಅಲೋಪತಿ ಔಷಧಗಳ ಬಗ್ಗೆ ಅಪಪ್ರಚಾರ ಮಾಡುವುದು ದೇಶಕ್ಕೆ ಮಾಡುವ ಮಹಾದ್ರೋಹವೇ ಸರಿ. ಈ ಹಿನ್ನೆಲೆಯಲ್ಲಿಯೇ ಭಾರತೀಯ ವೈದ್ಯಕೀಯ ಸಂಘಟನೆ ಪದೇ ಪದೇ ಪತಂಜಲಿಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುತ್ತಿದೆ. ಇದು ಪತಂಜಲಿ ಮತ್ತು ಐಎಂಎ ನಡುವಿನ ಸಮಸ್ಯೆಯಲ್ಲ. ಇಡೀ ದೇಶದ ಆರೋಗ್ಯ ಕ್ಷೇತ್ರದ ಅಳಿವು ಉಳಿವಿನ ಪ್ರಶ್ನೆಯಾಗಿದೆ.
ಪತಂಜಲಿ ಸಂಸ್ಥೆಗಳು ಅಲೋಪತಿ ಔಷಧಿಗಳ ಕುರಿತಂತೆ ಜನರನ್ನು ದಾರಿ ತಪ್ಪಿಸುತ್ತಿದೆ ಮಾತ್ರವಲ್ಲ, ಆಯುಷ್ ಹೆಸರಿನಲ್ಲಿಯೂ ಜನಸಾಮಾನ್ಯರ ಹಣವನ್ನು ಲೂಟಿ ಹೊಡೆಯುತ್ತಿದೆ. ಜನಸಾಮಾನ್ಯರ ಆರೋಗ್ಯಕ್ಕಾಗಿ ಸರಕಾರ ಮೀಸಲಿಡುವ ಹಣದಲ್ಲಿ ಪತಂಜಲಿಯೂ ಬೇರೆ ಬೇರೆ ರೂಪದಲ್ಲಿ ತನ್ನ ಪಾಲನ್ನು ಪಡೆದುಕೊಳ್ಳುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಬಲವಂತವಾಗಿ ಆಯುರ್ವೇದ ಔಷಧಿಗಳ ಹೇರಿಕೆ ನಡೆಯುತ್ತಿದೆ. ಅಲೋಪತಿ ಔಷಧಿಗಳು ಸಿಗದೇ ಅನಿವಾರ್ಯವಾಗಿ ಆಯುಷ್ ಔಷಧಿಗಳನ್ನು ಪಡೆಯಬೇಕಾದ ಸ್ಥಿತಿಯೂ ನಿರ್ಮಾಣವಾಗಿದೆ. ಆಯುರ್ವೇದದಂತಹ ಔಷಧಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರ ಅಪಾರ ಹಣವನ್ನು ಬಿಡುಗಡೆ ಮಾಡುತ್ತಿದ್ದು, ಇದರ ಬಹುಪಾಲನ್ನು ಈ ಸಂಸ್ಥೆ ಬಾಚಿಕೊಳ್ಳುತ್ತಿದೆ. ಸ್ವದೇಶಿ ಉತ್ಪನ್ನ ಎನ್ನುವ ಹೆಸರಿನಲ್ಲಿ ಪತಂಜಲಿ ಸರಕಾರದಿಂದ ಜಮೀನು, ಹಣ ಎಂದು ಸಬ್ಸಿಡಿಗಳನ್ನು ಪಡೆಯುತ್ತಾ ಬರುತ್ತಿದ್ದರೆ ಸರಕಾರಿ ಆಸ್ಪತ್ರೆಗಳು ದಿನದಿನಕ್ಕೆ ಬಡವಾಗುತ್ತಾ ಹೋಗುತ್ತಿದೆ. ಕ್ಷಯ, ಎಚ್ಐವಿ, ಕ್ಯಾನ್ಸರ್ನಂತಹ ಮಾರಕ ರೋಗಗಳಿಗೆ ಬೇಕಾದ ಅಲೋಪತಿ ಔಷಧಿಗಳ ಕೊರತೆಯಿಂದಾಗಿ ಜನಸಾಮಾನ್ಯರು ಸಾಯುವಂತಹ ಸ್ಥಿತಿ ದೇಶದಲ್ಲಿದೆ.
ಪತಂಜಲಿಯ ಅಕ್ರಮಗಳ ಕುರಿತಂತೆ ಕೇಂದ್ರ ಸರಕಾರ ಯಾಕೆ ಕಣ್ಮುಚ್ಚಿ ಕುಳಿತಿದೆ? ಎಂದು ಸುಪ್ರೀಂಕೋರ್ಟ್ ಕೇಳಿದೆ. ಯಾಕೆ ಎನ್ನುವುದು ಗುಟ್ಟಿನ ವಿಷಯವೇನೂ ಅಲ್ಲ. ಸನ್ಯಾಸಿ ವೇಷದಲ್ಲಿರುವ ರಾಮ್ದೇವ್ ರಾಜಕೀಯ ವ್ಯಕ್ತಿಯೂ ಹೌದು. ಸಂದರ್ಭ ಬಂದಾಗ ಸರಕಾರದ ಪರವಾಗಿ ಸಾರ್ವಜನಿಕ ಹೇಳಿಕೆಗಳನ್ನು ನೀಡುವ, ದ್ವೇಷ ಭಾಷಣವನ್ನು ಮಾಡುವ ರಾಮ್ದೇವ್, ಈ ಹಿಂದೆ ಯುಪಿಎ ಸರಕಾರದ ವಿರುದ್ಧ ಧರಣಿ ಕೂರಲು ಹೊರಟು ನಗೆಪಾಟಲಿಗೀಡಾಗಿದ್ದರು. ಆ ಸಂದರ್ಭದಲ್ಲಿ ಸರಕಾರದ ವಿರುದ್ಧ ಹೇಳಿಕೆಗಳನ್ನು ನೀಡಿ, ‘ಪರ್ಯಾಯ ಸೇನೆಯನ್ನು ಕಟ್ಟುವ’ ಬೆದರಿಕೆಯನ್ನೂ ಒಡ್ಡಿದ್ದರು.
ಇಂದು ಕೇಂದ್ರ ಸರಕಾರಕ್ಕೆ ಪತಂಜಲಿಯನ್ನು ಎದುರು ಹಾಕಿಕೊಳ್ಳುವಷ್ಟು ಧೈರ್ಯವಿಲ್ಲ. ಅಗತ್ಯಬಿದ್ದರೆ ರಾಮ್ದೇವ್ ಮುಖಾಂತರವೂ ಅದು ಚುನಾವಣಾ ಪ್ರಚಾರಗಳನ್ನು ನಡೆಸಬೇಕಾಗುತ್ತದೆ. ಪತಂಜಲಿಗೆ ಸಂಘಪರಿವಾರದ ಜೊತೆಗೆ ಪರೋಕ್ಷ ನಂಟಿದೆ. 2014ರಲ್ಲಿ ಯುಪಿಎ ಸರಕಾರ ಉರುಳುವುದರ ಹಿಂದೆ ಬಾಬಾ ರಾಮ್ದೇವ್ ಪಾತ್ರವೂ ಇದೆ. ಈ ಕಾರಣಕ್ಕಾಗಿಯೇ ಸರಕಾರ ಪತಂಜಲಿಯ ಬಗ್ಗೆ ಮೃದು ನೀತಿ ಅನುಸರಿಸುತ್ತಿದೆ ಮಾತ್ರವಲ್ಲ, ಜನಸಾಮಾನ್ಯರ ಕೋಟ್ಯಂತರ ರೂಪಾಯಿಯನ್ನು ಸಬ್ಸಿಡಿ ಹೆಸರಿನಲ್ಲಿ ಪತಂಜಲಿಗೆ ನೀಡುತ್ತಿದೆ. ಸರಕಾರದಿಂದ ಸಬ್ಸಿಡಿಯಲ್ಲಿ ಭೂಮಿಯನ್ನು ಪಡೆದು ಅದನ್ನು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಬಳಸುತ್ತಿರುವ ಪತಂಜಲಿ ಆರ್ಥಿಕವಾಗಿಯೂ ಬಹುದೊಡ್ಡ ಶಕ್ತಿಯಾಗಿದೆ. ಭಾರತದ ಸೇನೆಗೂಔಷಧಗಳನ್ನು, ಆಹಾರಗಳನ್ನು ಪೂರೈಸುವ ಒಪ್ಪಂದವನ್ನು ಪತಂಜಲಿ ಮಾಡಿಕೊಂಡಿದೆ ಎನ್ನುವುದೇ ಅದರ ರಾಜಕೀಯ ಪ್ರಭಾವ ಎಲ್ಲಿಯವರೆಗೆ ಇದೆ ಎನ್ನುವುದನ್ನು ಹೇಳುತ್ತದೆ. ಪತಂಜಲಿಯ ವಿರುದ್ಧ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳದೇ ಇದ್ದರೆ ದೇಶದ ವೈದ್ಯಕೀಯ ಕ್ಷೇತ್ರದ ವಿಶ್ವಾಸಾರ್ಹತೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕುಸಿಯಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಪತಂಜಲಿಯ ವಿರುದ್ಧ ವ್ಯಕ್ತಪಡಿಸಿರುವ ಆಕ್ರೋಶ ಕೆಟ್ಟು ನಿಂತ ದೇಶದ ಆರೋಗ್ಯಕ್ಕೆ ನೀಡಿದ ಸಣ್ಣದೊಂದು ಚುಚ್ಚುಮದ್ದು.