ತೇಪೆ ಹಚ್ಚಲು ಬಂದು ದ್ವೇಷ ಭಾಷಣ ಮಾಡಿದ ಪ್ರಧಾನಿ
Photo: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ದಕ್ಷಿಣ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಕೊನೆಗೊಳ್ಳುತ್ತಿದ್ದಂತೆ ಮಧ್ಯ ಕರ್ನಾಟಕದ ದಾವಣಗೆರೆ, ಮಲೆನಾಡಿನ ಶಿವಮೊಗ್ಗ ಮತ್ತು ಕರಾವಳಿಯ ಉತ್ತರ ಕನ್ನಡ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಕಾವೇರತೊಡಗಿದೆ. ಮುಖ್ಯವಾಗಿ ಈಗ ‘ಕಲ್ಯಾಣ ಕರ್ನಾಟಕ’ ಎಂದು ಕರೆಯಲ್ಪಡುವ ಹೈದರಾಬಾದ್ ಕರ್ನಾಟಕ ಮತ್ತು ‘ಕಿತ್ತೂರು ಕರ್ನಾಟಕ’ ಎಂದು ಮರುನಾಮಕರಣಗೊಂಡ ಮುಂಬೈ ಕರ್ನಾಟಕದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಾಗಿ ನಡೆದಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಸೇರಿದಂತೆ ಘಟಾನುಘಟಿ ನಾಯಕರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.
ತುಂಗಭದ್ರಾ ನದಿಯ ಉತ್ತರಕ್ಕಿರುವ ಕರ್ನಾಟಕ ಶರಣರು, ಸೂಫಿಗಳು ಆರೂಢರು, ಅವಧೂತರು ನಡೆದಾಡಿದ ಭೂ ಪ್ರದೇಶ. ಶತಮಾನಗಳಿಂದ ಸೌಹಾರ್ದ ಬೇರು ಬಿಟ್ಟ ಈ ನೆಲದಲ್ಲಿ ಇತ್ತೀಚಿನ ವರ್ಷಗಳಲ್ಲಿ ಜನವಿಭಜಕ ಕೋಮುವಾದಿ ಶಕ್ತಿಗಳ ಹಾವಳಿ ವಿಪರೀತ. ಆದರೆ ಈಗ ಅಲ್ಲಿನ ಪರಿಸ್ಥಿತಿ ಬದಲಾಗಿದೆ. ದ್ವೇಷ ರಾಜಕಾರಣದಿಂದ ರೋಸಿ ಹೋಗಿರುವ ಜನ ಈ ಸಲ ಅಂತಹವರಿಗೆ ಪಾಠ ಕಲಿಸಲು ಸಂಕಲ್ಪ ಮಾಡಿದ್ದಾರೆ.
ಬೀದರ್ನಿಂದ ಕಾರವಾರದವರೆಗೆ ಹರಡಿಕೊಂಡಿರುವ 14 ಲೋಕಸಭಾ ಕ್ಷೇತ್ರಗಳಲ್ಲಿ ಈ ಸಲ ಬಿಜೆಪಿಗೆ ಎಲ್ಲೂ ಪೂರಕ ವಾತಾವರಣವಿಲ್ಲ. ಇದಕ್ಕೆ ಮುಖ್ಯ ಕಾರಣ ಬಿಜೆಪಿಯೊಳಗಿನ ಗುಂಪು ಜಗಳ. ಎರಡನೆಯದಾಗಿ ಕಾಂಗ್ರೆಸ್ ಸರಕಾರ ತಂದ ಗ್ಯಾರಂಟಿ ಯೋಜನೆಗಳು. ಮೂರನೆಯ ಕಾರಣ ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರಕಾರದ ಬಗ್ಗೆ ಒಳಗೊಳಗೆ ಕುದಿಯುತ್ತಿರುವ ಅಸಮಾಧಾನ. ಇವೆಲ್ಲ ಮೇಳೈಸಿ ಅಚ್ಚರಿಯ ಫಲಿತಾಂಶ ಆ ಭಾಗದಿಂದ ಬರುವ ಸೂಚನೆಗಳಿವೆ.
ಬೀದರ್ನಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಅಭ್ಯರ್ಥಿ ಯನ್ನಾಗಿ ಮಾಡಲು ಬಿಜೆಪಿಯೊಳಗೇ ಸ್ಥಳೀಯವಾಗಿ ತೀವ್ರ ವಿರೋಧವಿತ್ತು.ಜಿಲ್ಲೆಯ ಬಿಜೆಪಿ ಶಾಸಕರು ಬಹಿರಂಗವಾಗಿ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಅಲ್ಲಿ ಖೂಬಾ ಅವರನ್ನು ಒತ್ತಾಯದಿಂದ ಹೇರಲಾಯಿತು. ಬಿಜಾಪುರ ಲೋಕಸಭಾ ಕ್ಷೇತ್ರದಲ್ಲಿ ರಮೇಶ್ ಜಿಗಜಿಣಗಿ ಅವರ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು. ಮಾಜಿ ಸಚಿವ ಗೋವಿಂದ ಕಾರಜೋಳರನ್ನು ಅಭ್ಯರ್ಥಿಯಾಗಿಸುವ ಯತ್ನ ನಡೆದಿತ್ತು. ಆದರೆ ಕೊನೆಗೆ ಜಿಗಜಿಣಗಿ ಅವರನ್ನೇ ಆಯ್ಕೆ ಮಾಡಲಾಯಿತು. ಹೀಗಾಗಿ ಅಲ್ಲೂ ಅತೃಪ್ತಿ ವ್ಯಾಪಕವಾಗಿದೆ. ಚಿತ್ರದುರ್ಗದಲ್ಲಿ ಹೊರಗಿನ ಜಿಲ್ಲೆಯ ಗೋವಿಂದ ಕಾರಜೋಳ ಅವರನ್ನು ಅಭ್ಯರ್ಥಿಯಾಗಿ ಮಾಡಿರುವ ಬಗ್ಗೆ ತೀವ್ರ ಭಿನ್ನಮತ ವ್ಯಕ್ತವಾಗಿದೆ. ಈಗ ತೇಪೆ ಹಚ್ಚುವ ಮೂಲಕ ಸಮಾಧಾನ ಪಡಿಸಲಾಗಿದೆ.
ಚಿಕ್ಕೋಡಿಯಿಂದ ಮತ್ತೆ ಸ್ಪರ್ಧಿಸಿರುವ ಬಿಜೆಪಿಯ ಅಣ್ಣಾ ಸಾಹೇಬ ಜೊಲ್ಲೆ ಹಿಂದೆ ಲೋಕಸಭಾ ಸದಸ್ಯರಾಗಿದ್ದವರು. ಮೂಲತಃ ವಾಣಿಜ್ಯೋದ್ಯಮಿಯಾದ ಇವರು ಚುನಾವಣೆಯಲ್ಲಿ ತಮ್ಮ ಸಾಧನೆಗಳನ್ನು ವಿವರಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಮುಖ ನೋಡಿ ಮತ ಕೊಡಿ ಎಂದು ಕೇಳುತ್ತಿದ್ದಾರೆ. ಈ ಸಲ ಪಕ್ಷದಲ್ಲೇ ಅವರು ಏಕಾಂಗಿ. ಅವರ ಪ್ರಚಾರಕ್ಕೆ ಕೆಎಲ್ಇ ಅಧ್ಯಕ್ಷ ಪ್ರಭಾಕರ ಕೋರೆ, ಬಿಜೆಪಿಯಲ್ಲಿರುವ ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಸೋದರರೂ ಬರುತ್ತಿಲ್ಲ. ಯಾರೂ ಬರದಾಗ ಗೂಳಿಯಂತೆ ನುಗ್ಗಿದ ಬಿಜಾಪುರದ ಬಸನಗೌಡ ಪಾಟೀಲ್ ಯತ್ನಾಳ್ ತಾನು ಮುಖ್ಯಮಂತ್ರಿಯಾದರೆ ತಕ್ಷಣ ಸಾವಿರ ಬುಲ್ಡೋಜರ್ ಖರೀದಿಸಿ ಮನೆಗಳನ್ನು ಕೆಡವುದಾಗಿ ಭಾಷಣ ಮಾಡುತ್ತಿದ್ದಾರೆ. ಯಾರನ್ನು ಉದ್ದೇಶಿಸಿ ಅವರು ಈ ಮಾತು ಹೇಳಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಇವರು ಈ ರೀತಿ ಭಾಷಣ ಮಾಡುತ್ತಾ ಹೋದರೆ ಜೊಲ್ಲೆಯವರಿಗೆ ಬೀಳುವ ಮತಗಳು ಬೇರೆ ಕಡೆ ಹೋಗುತ್ತವೆ ಎಂದು ಆ ಭಾಗದ ಬಿಜೆಪಿ ಕಾರ್ಯಕರ್ತರು ಲೊಚಗುಡುತ್ತಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಲೆಂದೇ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ ಎಂದು ಜನ ಮಾತಾಡುತ್ತಿದ್ದಾರೆ. ಸ್ಥಳೀಯವಾಗಿ ಅವರಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅವರ ಪರವಾಗಿ ಪ್ರಚಾರ ಮಾಡಲು ಸ್ಥಳೀಯ ಬಿಜೆಪಿ ನಾಯಕರು ಹಿಂದೇಟು ಹಾಕುತ್ತಿದ್ದಾರೆ. ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಉತ್ತರ ಕನ್ನಡದಲ್ಲಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪರಿಸ್ಥಿತಿಯೂ ಚೆನ್ನಾಗಿಲ್ಲ.
ಇದನ್ನೆಲ್ಲ ಹೊಲಿದು ತೇಪೆ ಹಚ್ಚಲು ರಾಜ್ಯದ ಬಿಜೆಪಿ ನಾಯಕರಿಂದ ಸಾಧ್ಯವಾಗುತ್ತಿಲ್ಲ. ಆ ಕೆಲಸಕ್ಕೆ ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ಬೆಳಗಾವಿ, ಶಿರಸಿ, ದಾವಣಗೆರೆ, ಬಳ್ಳಾರಿಗೆ ಬಂದು ಹೋದರೂ ತಮ್ಮ ಸರಕಾರದ ಸಾಧನೆಗಳ ಬಗ್ಗೆ ಎಲ್ಲೂ ಮಾತನಾಡದೆ ಸಂಘದ ಶಾಖೆಯಲ್ಲಿ ಬಾಲ್ಯದಲ್ಲಿ ಹೇಳಿಕೊಟ್ಟ ಅದೇ ಹಳೆಯ ಔರಂಗಜೇಬನ ಕತೆ ಹೇಳಿದರು. ಅವರ ಭಾಷಣ ನೂರಕ್ಕೆ ತೊಂಭತ್ತೊಂಭತ್ತು ಭಾಗ ಸುಳ್ಳಿನ ಕಂತೆಯಾಗಿತ್ತು. ಕಾಂಗ್ರೆಸ್ ನಾಯಕರು ಹಿಂದೂ ರಾಜ ಮಹಾರಾಜರನ್ನು ಟೀಕಿಸಿ ಮುಸ್ಲಿಮ್ ಸುಲ್ತಾನರು ಮತ್ತು ನವಾಬರನ್ನು ಹೊಗಳುತ್ತಾರೆ ಎಂದು ಹಳಿಯಿಲ್ಲದ ರೈಲು ಬಿಟ್ಟರು.
ಇಂತಹ ದ್ವೇಷ ಭಾಷಣಗಳಿಗಾಗಿ ಮೋದಿಯವರ ಮೇಲೆ ಚುನಾವಣಾ ಆಯೋಗಕ್ಕೆ ಈ ವರೆಗೆ 27 ದೂರುಗಳನ್ನು ನೀಡಲಾಗಿದೆ. ಆದರೆ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಳ್ಳದೆ ಜಾಣ ಮೌನ ತಾಳಿದೆ. ತೀವ್ರ ಒತ್ತಡ ಬಂದ ನಂತರ ನೋಟಿಸ್ ಜಾರಿ ಮಾಡಿದೆಯಾದರೂ ಮೋದಿಯವರಿಗೆ ನೇರವಾಗಿ ನೋಟಿಸ್ ನೀಡುವ ಧೈರ್ಯ ಸಾಲದೆ ಬಿಜೆಪಿ ಅಧ್ಯಕ್ಷ ನಡ್ಡಾ ಅವರಿಗೆ ನೋಟಿಸ್ ನೀಡಿದೆ. ಯಾವ ವ್ಯಕ್ತಿಯ ಮೇಲೆ ದೂರು ಬಂದಿದೆಯೋ ಅಂತಹ ವ್ಯಕ್ತಿಗೆ ನೋಟಿಸ್ ನೀಡದಿರಲು ಕಾರಣವೇನು? ಚುನಾವಣಾ ಆಯೋಗ ಹಲ್ಲು ಕಿತ್ತ ಹಾವು ಎಂಬುದು ಗೊತ್ತಿದ್ದೇ ಮೋದಿಯವರು ಬೆಳಗಾವಿ ಮತ್ತು ಶಿರಸಿ ಪ್ರಚಾರ ಸಭೆಗಳಲ್ಲಿ ಮತ್ತೆ ಮುಸಲ್ಮಾನರ ವಿರುದ್ಧ ದ್ವೇಷ ಕಾರಿದ್ದಾರೆ.
ಮನುಷ್ಯ ಹತಾಶನಾದಾಗ, ಎಲ್ಲ ಭರವಸೆಗಳನ್ನು ಕಳೆದುಕೊಂಡಾಗ ಆಡುವ ಮಾತುಗಳನ್ನೇ ಮೋದಿಯವರು ಆಡಿದ್ದಾರೆ. ಭಾರತದ ಚರಿತ್ರೆಯಲ್ಲಿ ಇಂತಹವರು ಎಷ್ಟೋ ಜನ ಬಂದು ಹೋಗಿದ್ದಾರೆ. ಶತಮಾನಗಳಿಂದ ಎಲ್ಲ ಸಮುದಾಯಗಳನ್ನು ಒಳಗೊಂಡ ಬಹುತ್ವ ಭಾರತ ಸುರಕ್ಷಿತವಾಗಿ ಉಳಿದಿದೆ.ಮುಂದೆಯೂ ಉಳಿಯುತ್ತದೆ.