ಜನಾದೇಶವನ್ನೇ ಉಲ್ಟಾಪಲ್ಟಾ ಮಾಡುವ ರಾಜಕಾರಣಿಗಳು
Photo: FB.com/R. Ashoka
ಜನಾದೇಶ ಪ್ರಜಾಪ್ರಭುತ್ವ ಎಂಬ ವ್ಯವಸ್ಥೆಯ ಅಡಿಪಾಯ. ಜಗತ್ತಿನ ಎಲ್ಲ ಆಡಳಿತ ಪದ್ಧತಿಗಳಲ್ಲೇ ಅತ್ಯಂತ ಶ್ರೇಷ್ಠ ಎಂದು ಮನ್ನಣೆಗೆ ಪಾತ್ರವಾದ ಪ್ರಜಾಪ್ರಭುತ್ವ ಎಂಬ ವ್ಯವಸ್ಥೆ ನಿಂತಿರುವುದು ಜನಾದೇಶದ ಅಡಿಪಾಯದ ಮೇಲೆ. ಇದು ಜನರು ತಮಗಾಗಿ ತಾವು ಕಟ್ಟಿಕೊಂಡು, ತಾವೇ ನಡೆಸುತ್ತಿರುವ ವ್ಯವಸ್ಥೆ ಎಂಬ ಪ್ರತೀತಿಯನ್ನು ಹೊಂದಿದೆ.ತಮಗೆ ಬೇಕಾದ ಪ್ರತಿನಿಧಿಗಳನ್ನು ಜನರೇ ಚುನಾಯಿಸುತ್ತಾರೆ. ಅವಧಿ ಮುಗಿದ ನಂತರ ಕೆಲಸ ಮಾಡದವರನ್ನು ಮನೆಗೆ ಕಳಿಸಿ ಹೊಸಬರನ್ನು ಚುನಾಯಿಸುತ್ತಾರೆ.ಇದು ಅನೂಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯ. ಆದರೆ ರಾಜಕೀಯ ಅಧಿಕಾರವನ್ನು ತಮ್ಮ ಜಾತಿ, ಮತಗಳ ಹಿತಾಸಕ್ತಿಗಳಿಗೆ, ವೈಯಕ್ತಿಕ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುತ್ತಿರುವ ನಮ್ಮ ರಾಜಕಾರಣಿಗಳು ಜನಾದೇಶವನ್ನೇ ಕಸದ ಬುಟ್ಟಿಗೆ ಚೆಲ್ಲುವ, ತಮಗೆ ಬೇಕಾದಂತೆ ಅದನ್ನು ಬದಲಿಸಿಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕುತ್ತಿರುವುದು ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಿಂದ ಮತ್ತೊಮ್ಮೆ ಸಾಬೀತಾಗಿದೆ.
ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದಲ್ಲಿ ಒಂದು ಪಕ್ಷದ ಸರಕಾರವಿದ್ದರೆ ರಾಜ್ಯಗಳಲ್ಲಿ ಬೇರೆ ಪಕ್ಷಗಳ ಸರಕಾರಗಳಿರುವುದು ಸಹಜ. ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿ ಇದೆ. ರಾಜ್ಯಗಳಲ್ಲಿ ಪ್ರಾದೇಶಿಕ ಸೇರಿ ಬೇರೆ ಪಕ್ಷಗಳು ಅಧಿಕಾರದಲ್ಲಿವೆ.ಇಂಥ ಸಂದರ್ಭದಲ್ಲಿ ಆಡಳಿತವನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗಲು ಸಂವಿಧಾನ ಎಂಬ ಗ್ರಂಥ ಇದೆ. ಅದರ ಪ್ರಕಾರ ಆಡಳಿತ ನಡೆಸಿದರೆ ಯಾವುದೇ ಗೊಂದಲ ಉಂಟಾಗುವುದಿಲ್ಲ. ಆದರೆ ದೇಶದ ಮೇಲೆ ಏಕ ಪಕ್ಷದ, ಏಕ ನಾಯಕನ, ಏಕ ಸಿದ್ಧಾಂತದ ಆಡಳಿತವನ್ನು ಹೇರುವ ದುರಾಕಾಂಕ್ಷೆ ಕೇಂದ್ರದ ಆಡಳಿತ ಪಕ್ಷದಲ್ಲಿ ಮೊಳಕೆಯೊಡೆದರೆ ಪ್ರಜಾಪ್ರಭುತ್ವದ ಅವನತಿ ಆರಂಭವಾಗುತ್ತದೆ.
ಪಕ್ಷಾಂತರ ಮಾಡಿಸಿ ರಾಜ್ಯಗಳ ಚುನಾಯಿತ ಸರಕಾರಗಳನ್ನು ಉರುಳಿಸುವುದನ್ನು ತಡೆಯಲು ಪಕ್ಷಾಂತರ ನಿಷೇಧ ಕಾನೂನನ್ನು ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ತಂದರು. ಆದರೆ ರಂಗೋಲಿ ಕೆಳಗೆ ನುಸುಳುವ ಪ್ರಚಂಡರಾದ ರಾಜಕಾರಣಿಗಳು ಅದನ್ನು ನಿಷ್ಪ್ರಯೋಜಕವಾಗುವಂತೆ ರಾಜ್ಯಗಳ ಚುನಾವಣೆಗಳಲ್ಲಿ ಜನತೆ ನೀಡಿದ ಆದೇಶವನ್ನೇ ತಿರುಗಾ ಮುರುಗಾ ಮಾಡಿರುವುದನ್ನು ನೋಡಿದ್ದೇವೆ. ಅದರಲ್ಲೂ ಇಂಥ ‘ಮಹತ್ಕಾರ್ಯ’ದಲ್ಲಿ ಬಿಜೆಪಿಯನ್ನು ಮೀರಿಸಿದವರಿಲ್ಲ. ಇತ್ತೀಚಿನ ತಾಜಾ ಉದಾಹರಣೆಯೆಂದರೆ ರಾಜ್ಯಸಭಾ ಚುನಾವಣೆ. ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಶಾಸಕರು ಅಡ್ಡ ಮತದಾನ ಮಾಡಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನೇ ಸೋಲಿಸಿದರು. ಹೀಗೆ ಈ ಎರಡೂ ರಾಜ್ಯಗಳಲ್ಲಿ ಸೂಕ್ತ ಸದಸ್ಯ ಬಲವಿಲ್ಲದಿದ್ದರೂ ಹೆಚ್ಚುವರಿಯಾಗಿ ತಲಾ ಒಂದು ಸ್ಥಾನವನ್ನು ತನ್ನದಾಗಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಯಿತು. ದಿಲ್ಲಿಯಲ್ಲಿ ಕುಳಿತು ಇಂಥ ಕರಾಮತ್ತನ್ನು ಮಾಡುವ ವ್ಯಕ್ತಿಗೆ ಚಾಣಕ್ಯ ಎಂದು ಮಾಧ್ಯಮಗಳು ವರ್ಣಿಸುತ್ತವೆ. ಇದು ಅನೈತಿಕ ರಾಜಕೀಯವಲ್ಲದೆ ಬೇರೇನೂ ಅಲ್ಲ.
ಪಕ್ಷಾಂತರ ತಡೆಗೆ ಶಾಸನ ತಂದರೆ ಮಾತೃಪಕ್ಷವನ್ನೇ ಒಡೆದು ಪ್ರತ್ಯೇಕ ಬಣ ಕಟ್ಟಿಕೊಂಡು ರಾಜ್ಯ ಸರಕಾರವನ್ನು ಬುಡಮೇಲು ಮಾಡುವುದು ಭಾರತದ ರಾಜಕಾರಣದ ಹೊಸ ಶೈಲಿಯಾಗಿದೆ. ಒಡೆದು ಹೊರ ಬಂದ ಶಾಸಕರ ಪಕ್ಷವೇ ನಿಜವಾದ ಪಕ್ಷವೆಂದು ಹೆಸರಿಗೆ ಮಾತ್ರ ಸ್ವಾಯತ್ತ ಸಂಸ್ಥೆಯಾಗಿ ಉಳಿದುಕೊಂಡಿರುವ ಚುನಾವಣಾ ಆಯೋಗ ಮಾನ್ಯತೆ ನೀಡುತ್ತದೆ. 2022ರಲ್ಲಿ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಆಘಾಡಿ ಸರಕಾರವನ್ನು ಉರುಳಿಸಿದ ಬೆನ್ನಲ್ಲೇ ಬಿಹಾರದಲ್ಲಿ ಮಹಾ ಘಟಬಂಧನ್ ಎಂಬ ಮೈತ್ರಿ ಸರಕಾರವನ್ನು ಹೈಜಾಕ್ ಮಾಡಲಾಯಿತು. ಜೆಡಿಯು, ಆರ್ಜೆಡಿ ಮೈತ್ರಿ ಸರಕಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಿತ್ರ ಪಕ್ಷಗಳಿಗೆ ಕೈ ಕೊಟ್ಟು ಎನ್ಡಿಎ ಕೂಟಕ್ಕೆ ಹಾರಿದರು. ಹಳೆಯ ಸರಕಾರ ಹೋಗಿ ಹೊಸ ಸರಕಾರ ಬಂತು. ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮುಂದುವರಿದರು. ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರಕಾರ ಸದ್ಯ ಬಚಾವ್ ಆಗಿದ್ದರೂ ಅದನ್ನು ಉರುಳಿಸಲು ದಿಲ್ಲಿಯ ಚಾಣಕ್ಯರು ಮಸಲತ್ತು ನಡೆಸುತ್ತಲೇ ಇದ್ದಾರೆ. ತಮಿಳುನಾಡಿನ ಚುನಾಯಿತ ಸರಕಾರವನ್ನು ಉರುಳಿಸಬೇಕೆಂದು ಮೊನ್ನೆ ಅಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಬಹಿರಂಗವಾಗಿ ಹೇಳಿದ್ದಾರೆ. ಇದು ಭಾರತದ ಪ್ರಜಾಪ್ರಭುತ್ವದ ಇಂದಿನ ಸ್ಥಿತಿ.
ರಾಜ್ಯಸಭೆಯ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 10 ಸ್ಥಾನಗಳ ಪೈಕಿ ಏಳು ಸ್ಥಾನಗಳನ್ನು ಗೆಲ್ಲುವ ಸಾಮರ್ಥ್ಯ ಬಿಜೆಪಿಗೆ ಇತ್ತು. ಆದರೆ ಸಮಾಜವಾದಿ ಪಕ್ಷದ ಏಳು ಮಂದಿ ಶಾಸಕರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ ಪರಿಣಾಮವಾಗಿ ಅದು ಎಂಟು ಸ್ಥಾನಗಳನ್ನು ಗೆದ್ದು ಕೊಂಡಿತು. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ 40 ಶಾಸಕರ ಬಲವನ್ನು ಹೊಂದಿದೆ. ಮೂವರು ಪಕ್ಷೇತರ ಶಾಸಕರ ಬೆಂಬಲವೂ ಕಾಂಗ್ರೆಸ್ಗೆ ಇದೆ. ಬಿಜೆಪಿ ಶಾಸಕರ ಸಂಖ್ಯೆ 25 ಮಾತ್ರ. ಆದರೂ ರಾಜ್ಯಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ನ ಅಭಿಷೇಕ್ ಮನು ಸಿಂಘ್ವಿ ಸೋತರು. ಕಾಂಗ್ರೆಸ್ನ ಆರು ಮಂದಿ ಶಾಸಕರು ಹಾಗೂ ಮೂವರು ಪಕ್ಷೇತರರು ಬಿಜೆಪಿಗೆ ಮತ ಹಾಕಿದ ಪರಿಣಾಮವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ತಲಾ 34 ಮತಗಳು ಬಿದ್ದವು. ಕೊನೆಗೆ ಲಾಟರಿ ಮೂಲಕ ಫಲಿತಾಂಶದ ಪರಿಣಾಮವಾಗಿ ಬಿಜೆಪಿ ಅಭ್ಯರ್ಥಿ ಜಯಶಾಲಿಯಾದರು. ಈಗ ಅಲ್ಲಿನ ಕಾಂಗ್ರೆಸ್ನ ಚುನಾಯಿತ ಸರಕಾರವನ್ನು ಉರುಳಿಸುವ ಯತ್ನವನ್ನು ದಿಲ್ಲಿಯ ಚಾಣಕ್ಯರು ನಡೆಸಿದ್ದಾರೆ. ಬಿಜೆಪಿಗೆ ತನ್ನ ಕೋಮುವಾದಿ ಕಾರ್ಯಸೂಚಿ ಜಾರಿಗೆ ತರಲು ಭಾರತದ ಸಂವಿಧಾನವನ್ನು ಬದಲಿಸಿ ಹಿಂದೂ ರಾಷ್ಟ್ರ ಮಾಡಲು ರಾಜಕೀಯ ಅಧಿಕಾರ ಬೇಕು. ಅದಕ್ಕಾಗಿ ಅದು ಯಾವುದೇ ತಂತ್ರ, ಕುತಂತ್ರ ಮಾಡಲು ಹಿಂಜರಿಯುವುದಿಲ್ಲ. ಬಿಜೆಪಿ ಎಷ್ಟು ಕೆಳಮಟ್ಟಕ್ಕೆ ಹೋಗಿದೆಯೆಂದರೆ ಇತ್ತೀಚೆಗೆ ಚಂಡಿಗಡ ಮೇಯರ್ ಚುನಾವಣೆಯಲ್ಲಿ ನಡೆದ ಕುತಂತ್ರದಿಂದಾಗಿ ಎಂಟು ಮಂದಿ ಸದಸ್ಯರ ಮತಗಳನ್ನೇ ಅಸಿಂಧುಗೊಳಿಸಲಾಗಿತ್ತು. ಕೊನೆಗೆ ಸುಪ್ರೀಂ ಕೋರ್ಟ್ ಉಗಿಯಬೇಕಾಗಿ ಬಂತು.
ಬಿಜೆಪಿ ಇಂಥ ಕುಚೇಷ್ಟೆ ಮಾಡುತ್ತದೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಈ ವಿಷಯದಲ್ಲಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ತಮ್ಮ ಎಚ್ಚರಿಕೆಯಲ್ಲಿ ತಾವಿರಬೇಕು.ಆದರೆ ಕುತಂತ್ರಗಾರಿಕೆಯಲ್ಲಿ ಬಿಜೆಪಿಯನ್ನು ಮೀರಿಸುವ ಸಾಮರ್ಥ್ಯ ಪ್ರತಿಪಕ್ಷಗಳಿಗಿಲ್ಲ.ಕಾರಣ ಕೇಂದ್ರದ ಅಧಿಕಾರ ಸೂತ್ರ ಹಿಡಿದಿರುವ ಅದರ ಕೈಯಲ್ಲಿ ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಗಳೆಂಬ ಬ್ರಹ್ಮಾಸ್ತ್ರಗಳಿವೆ. ಅವುಗಳನ್ನು ಪ್ರಯೋಗಿಸಿ ಜನತೆ ಚುನಾಯಿಸಿದ ಯಾವುದೇ ಸರಕಾರವನ್ನು ಬುಡಮೇಲು ಮಾಡುವ ಸಾಮರ್ಥ್ಯ ಬಿಜೆಪಿಗಿದೆ. ಇದನ್ನು ತಡೆಯಬೇಕೆಂದರೆ ಕೇಂದ್ರ ಸರಕಾರವನ್ನು ಬಿಜೆಪಿ ಹಿಡಿತದಿಂದ ತಪ್ಪಿಸಲು ಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳು ಒಣ ಪ್ರತಿಷ್ಠೆಯನ್ನು ಬದಿಗೊತ್ತಿ ಒಂದಾದರೆ ಮಾತ್ರ ಸಾಧ್ಯವಾಗುತ್ತದೆ.
ಇದು ಬಿಜೆಪಿ ಕುತಂತ್ರದ ಒಂದು ಮಾದರಿಯಾದರೆ ಇನ್ನೊಂದು ಅತ್ಯಂತ ಆತಂಕದ ವಿಷಯವೆಂದರೆ ರಾಜ್ಯಸಭೆಯ ಅಭ್ಯರ್ಥಿ ಗಳ ಆಯ್ಕೆಯ ಮಾನದಂಡದ ಕುಸಿತ. ಹಿರಿಯರ ಸದನವಾದ ರಾಜ್ಯಸಭೆಗೆ ವಿಜ್ಞಾನ, ಇತಿಹಾಸ, ಸಂಗೀತ, ಸಾಹಿತ್ಯ, ಸಮಾಜ ಸೇವೆ ಕ್ಷೇತ್ರಗಳಲ್ಲಿ ಬಹುದೊಡ್ಡ ಸಾಧನೆ ಮಾಡಿದವರನ್ನು ಚುನಾಯಿಸುವ ಸಂಪ್ರದಾಯವಿತ್ತು. ಹೀಗಾಗಿ ಉನ್ನತ ಮಟ್ಟದ ಚರ್ಚೆಗೆ ರಾಜ್ಯಸಭೆ ಹೆಸರಾಗಿತ್ತು. ಆದರೆ ಈಗ ಈ ಸದನಕ್ಕೆ ರಿಯಲ್ ಎಸ್ಟೇಟ್ ಮಾಫಿಯಾಗಳು, ಮೈನಿಂಗ್ ಕುಳಗಳು, ಕಾರ್ಪೊರೇಟ್ ಉದ್ಯಮಿಗಳು ಸದಸ್ಯರಾಗಿ ಬರುತ್ತಿದ್ದಾರೆ. ಚುನಾವಣೆಯಲ್ಲಿ ಮಾತ್ರವಲ್ಲ ನಾಮ ನಿರ್ದೇಶನದಲ್ಲೂ ಇಂಥವರೇ ಆಯ್ಕೆಯಾಗುತ್ತಾರೆ. ರಾಜ್ಯಗಳ ವಿಧಾನ ಪರಿಷತ್ತುಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ.
ಒಂದು ಕಾಲದಲ್ಲಿ ಚಿಂತಕರ ಚಾವಡಿಗಳಾಗಿದ್ದ ರಾಜ್ಯಸಭೆ ಮತ್ತು ವಿಧಾನ ಪರಿಷತ್ತುಗಳು ಈಗ ನೇರ ಚುನಾವಣೆಯಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳನ್ನು ಪ್ರವೇಶಿಸಲು ಸಾಧ್ಯವಾಗದ ಅಧಿಕಾರದಾಹಿ ರಾಜಕಾರಣಿಗಳಿಗೆ ರಾಜಕೀಯ ಪುನರ್ವಸತಿ ಕಲ್ಪಿಸುವ ತಾಣಗಳಾಗಿವೆ. ಇದು ಭಾರತದ ಪ್ರಜಾಪ್ರಭುತ್ವ ಮತ್ತು ರಾಜಕಾರಣದ ಅಧೋಗತಿಯ ಲಕ್ಷಣವಲ್ಲದೆ ಬೇರೇನೂ ಅಲ್ಲ. ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಸುರಕ್ಷತೆಗಾಗಿ ಮಾನವಂತರು ಮತ್ತು ಜನಸಾಮಾನ್ಯರು ಒಂದಾಗಿ ಇದಕ್ಕೆ ತಕ್ಷಣ ಚಿಕಿತ್ಸೆ ನೀಡದಿದ್ದರೆ ದುರಂತ ಕಾದಿದೆ. ಇನ್ನೂ ಕಾಲ ಮಿಂಚಿಲ್ಲ. ಈಗಲಾದರೂ ಪ್ರಜ್ಞಾವಂತರು ಒಂದಾಗಿ ಈ ಅವನತಿಗೆ ಕಾರಣರಾದವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ.