ಸೇನೆಯ ನೈತಿಕ ಸ್ಥೈರ್ಯವನ್ನು ಕುಗ್ಗಿಸದಿರಲಿ ಖಾಸಗಿ ಸೈನಿಕ ಶಾಲೆಗಳು
ಸಂವಿದ್ ಗುರುಕುಲಂ ಬಾಲಕಿಯರ ಸೈನಿಕ ಶಾಲೆ Photo: twitter.com/ProDefLko
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೆಲವು ವರ್ಷಗಳ ಹಿಂದೆ ಸೈನಿಕರಿಗೆ ನೀಡುವ ಆಹಾರ ತೀವ್ರ ಚರ್ಚೆಗೊಳಗಾಯಿತು. ಸೇನೆಯಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಸೈನಿಕನೇ ವೀಡಿಯೊ ಮಾಡಿ ಹಂಚಿದ್ದ. ತನ್ನ ತಪ್ಪನ್ನು ತಿದ್ದಿಕೊಳ್ಳುವ ಬದಲು ಗೋಳನ್ನು ತೋಡಿಕೊಂಡ ಸೈನಿಕನ ವಿರುದ್ಧವೇ ಸರಕಾರ ಮೊಕದ್ದಮೆಯನ್ನು ದಾಖಲಿಸಿತು. ಪಿಂಚಣಿಯಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ನಿವೃತ್ತ ಸೈನಿಕರು ನಡೆಸುತ್ತಿರುವ ಹೋರಾಟ, ಇನ್ನೂ ಮುಂದುವರಿಯುತ್ತಲೇ ಇದೆ. ಕಳೆದ ಫೆಬ್ರವರಿಯಲ್ಲಿ ಈ ಅಕ್ರಮದ ವಿರುದ್ಧ ನಿವೃತ್ತ ಸೈನಿಕರು ರ್ಯಾಲಿಯನ್ನು ಹಮ್ಮಿಕೊಂಡಿದ್ದರು. ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ನಿವೃತ್ತ ಸೈನಿಕರು, ಪಿಂಚಣಿ ಅಕ್ರಮ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಕಳೆದೆರಡು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದಾರಾದರೂ, ಸರಕಾರ ಸ್ಪಂದಿಸಿಲ್ಲ. ಇದೇ ಸಂದರ್ಭದಲ್ಲಿ ಸೈನಿಕರನ್ನು ನಾಲ್ಕು ವರ್ಷಗಳ ಗುತ್ತಿಗೆಯಾಧಾರದಲ್ಲಿ ನೇಮಕ ಮಾಡುವ ‘ಅಗ್ನಿಪಥ್’ ಯೋಜನೆಯ ವಿರುದ್ಧವೂ ರಾಜಸ್ಥಾನ, ಹರ್ಯಾಣದ ಜನರು ತಿರುಗಿ ಬಿದ್ದಿದ್ದಾರೆ. ಈ ಯೋಜನೆ ಭಾರತೀಯ ಸೇನೆಯ ಗುಣಮಟ್ಟವನ್ನು ಬುಡಮೇಲು ಗೊಳಿಸಲಿದೆ ಮಾತ್ರವಲ್ಲ, ಸೈನಿಕರು ಸರಕಾರದ ಸವಲತ್ತಿನಿಂದ ವಂಚಿತರಾಗಲಿದ್ದಾರೆ ಎನ್ನುವುದು ಅವರ ಆರೋಪವಾಗಿದೆ.
ಯೋಧರು ಅಪಾಯಕಾರಿ ಪ್ರದೇಶಗಳಲ್ಲಿ ಕೆಲಸ ಮಾಡಬೇಕಾಗಿರುವುದರಿಂದ ಸುದೀರ್ಘ ತರಬೇತಿಯನ್ನು ಪಡೆಯಬೇಕಾಗುತ್ತದೆ. ಸಾಧಾರಣವಾಗಿ ನಾಲ್ಕು ವರ್ಷಗಳಿಗಿಂತಲೂ ಅಧಿಕ ಕಾಲ ಸೈನಿಕರು ಬೇರೆ ಬೇರೆ ರೀತಿಯ ದೈಹಿಕ ತರಬೇತಿಗಳನ್ನು ಪಡೆಯುತ್ತಾರೆ. ಆದರೆ ಅಗ್ನಿವೀರರು ಕೇವಲ ಆರು ತಿಂಗಳ ತರಬೇತಿಯನ್ನು ಪಡೆದು ಅಪಾಯಕಾರಿಯಾದ ಸ್ಥಳಗಳಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ದೇಶದ ಆಂತರಿಕ ಭದ್ರತೆಯ ಮೇಲೆ ಭಾರೀ ಪರಿಣಾಮವನ್ನು ಬೀರುವ ಈ ನೇಮಕದ ವಿರುದ್ಧ ಈಗಾಗಲೇ ಹೋರಾಟ, ಪ್ರತಿಭಟನೆಗಳು ನಡೆದಿವೆ. ನಾಲ್ಕು ವರ್ಷಗಳ ಬಳಿಕ ಈ ಯುವಕರ ಉದ್ಯೋಗದ ಗತಿಯೇನು? ಅವರು ಎಲ್ಲಿಗೆ ಹೋಗಬೇಕು? ಈ ಗುತ್ತಿಗೆ ಆಧಾರದ ನೇಮಕಾತಿಯನ್ನು ದುಷ್ಕರ್ಮಿಗಳು ದುರುಪಯೋಗ ಪಡಿಸುವ ಸಾಧ್ಯತೆಗಳನ್ನು ನಿರಾಕರಿಸುವಂತಿಲ್ಲ. ದೇಶ ವಿರೋಧಿ ಶಕ್ತಿಗಳು ತಮ್ಮ ಅಭ್ಯರ್ಥಿಗಳನ್ನು ಈ ಸೇನೆಯೊಳಗೆ ಸೇರಿಸಿ ಬಳಿಕ ಅವರಿಂದ ಭದ್ರತೆಗೆ ಸಂಬಂಧ ಪಟ್ಟ ಮಾಹಿತಿಗಳನ್ನು ಪಡೆದುಕೊಳ್ಳುವ ಅಪಾಯಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಶಸ್ತ್ರಾಸ್ತ್ರರ ತರಬೇತಿ ಪಡೆದ ಈ ಯುವಕರು ಮತ್ತೆ ಸಮಾಜದೊಳಗೆ ಸೇರ್ಪಡೆಯಾಗುತ್ತಾರೆ. ಈ ಸಂದರ್ಭದಲ್ಲಿ ಸಿಕ್ಕಿದ ತರಬೇತಿಯನ್ನು ಸಮಾಜದಲ್ಲಿ ದುಷ್ಕೃತ್ಯಗಳಿಗೆ ಬಳಸಬಹುದು. ಪ್ರತೀ ವರ್ಷ ಶಸ್ತ್ರಾಸ್ತ್ರ ತರಬೇತಿ ಪಡೆದ ಸಾವಿರಾರು ಯುವಕರು ಸಮಾಜಕ್ಕೆ ಸೇರ್ಪಡೆಯಾಗುವುದು ಸ್ವಸ್ಥ ಸಮಾಜದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ. ದೇಶದೊಳಗೆ ಸಂಘಪರಿವಾರ ತನ್ನ ಕಾರ್ಯಕರ್ತರನ್ನು ಸೇನೆಯೊಳಗೆ ತುಂಬುವ ಅಥವಾ ಅವರಿಗೆ ಪರೋಕ್ಷವಾಗಿ ಶಸ್ತ್ರಾಸ್ತ್ರ ತರಬೇತಿ ನೀಡಲು ಈ ಅಗ್ನಿಪಥ್ ಯೋಜನೆಯನ್ನು ದುರುಪಯೋಗಗೊಳಿಸುವ ಸಾಧ್ಯತೆಗಳಿವೆ ಎಂದು ಹಲವರು ಶಂಕೆ ವ್ಯಕ್ತಪಡಿಸಿದ್ದರು. ಈ ಶಂಕೆ ಇದೀಗ ನಿಜವಾಗುವ ಹಂತದಲ್ಲಿದೆ.
ಅಗ್ನಿಪಥ್ ಯೋಜನೆ ಜಾರಿಗೆ ತರುವ ಮೊದಲೇ, 2021ರಲ್ಲಿ ದೇಶದಲ್ಲಿ ಸೈನಿಕ ಶಾಲೆಗಳನ್ನು ನಡೆಸಲು ಖಾಸಗಿಯವರಿಗೆ ಅವಕಾಶ ಕಲ್ಪಿಸಲು ಕೇಂದ್ರ ನಿರ್ಧರಿಸಿತ್ತು. ಆ ವರ್ಷ ಮಂಡಿಸಿದ ಬಜೆಟ್ನಲ್ಲಿ ದೇಶಾದ್ಯಂತ 100 ಹೊಸ ಸೈನಿಕ ಶಾಲೆಗಳನ್ನು ಸ್ಥಾಪಿಸುವ ಯೋಜನೆಯನ್ನು ಪ್ರಕಟಿಸಿತ್ತು. ಈ ಖಾಸಗಿ ಶಾಲೆಗಳಿಂದ ಹೊರಬರುವ ಸೈನಿಕರಿಗೆ ಅಗ್ನಿಪಥ್ ಯೋಜನೆ ಪೂರಕವಾಗಿದೆ. ವಿಪರ್ಯಾಸವೆಂದರೆ, ರಕ್ಷಣಾ ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತಿರುವ ಸ್ವಾಯತ್ತ ಸಂಸ್ಥೆ ಸೈನಿಕ ಸ್ಕೂಲ್ಸ್ ಸೊಸೈಟಿ (ಎಸ್ಎಸ್ಎಸ್)ಯು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಸೈನಿಕ ಶಾಲೆಗಳನ್ನು ನಡೆಸಲು ಈವರೆಗೆ ಮಾಡಿಕೊಂಡಿರುವ 40 ಸೈನಿಕ ಶಾಲೆ ಒಪ್ಪಂದಗಳಲ್ಲಿ ಕನಿಷ್ಠ ಶೇ.62ರಷ್ಟು ಸಂಘ ಪರಿವಾರ ಸಂಘಟನೆಗಳು, ಬಿಜೆಪಿ ರಾಜಕಾರಣಿಗಳು, ಹಿಂದುತ್ವ ಗುಂಪುಗಳಿಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಪಾಲಾಗಿವೆ ಎನ್ನುವುದು ಮಾಧ್ಯಮಗಳ ವರದಿಗಳಿಂದ ಬೆಳಕಿಗೆ ಬಂದಿವೆ. 2022,ಮೇ 5 ಮತ್ತು 2023,ಡಿ.27ರ ನಡುವೆ ಕನಿಷ್ಠ 40 ಖಾಸಗಿ ಶಾಲೆಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದ್ದು,ಈ ಪೈಕಿ 11 ಶಾಲೆಗಳು ಬಿಜೆಪಿ ನಾಯಕರ ಒಡೆತನದಲ್ಲಿವೆ. ಎಂಟು ಶಾಲೆಗಳನ್ನು ಆರೆಸ್ಸೆಸ್ ಮತ್ತು ಅದರೊಂದಿಗೆ ಒಳ ಸಂಬಂಧಗಳಿರುವ ಸಂಘಟನೆಗಳು ನಿರ್ವಹಿಸುತ್ತಿವೆ. ಆರು ಶಾಲೆಗಳು ಹಿಂದುತ್ವ ಗುಂಪುಗಳು ಅಥವಾ ತೀವ್ರ ಬಲಪಂಥೀಯ ನಾಯಕರು ಮತ್ತು ಇತರ ಹಿಂದೂ ಧಾರ್ಮಿಕ ಸಂಸ್ಥೆಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿವೆ. ವಿಶ್ವ ಹಿಂದೂ ಪರಿಷತ್ನ ಮಹಿಳಾ ಘಟಕ ದುರ್ಗಾವಾಹಿನಿಯ ಸ್ಥಾಪಕಿ ಹಾಗೂ ರಾಮಮಂದಿರ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿಂದೂ ರಾಷ್ಟ್ರವಾದಿ ಸಿದ್ಧಾಂತಿ ಸಾಧ್ವಿ ಋತಂಬರಾ ವಾರಣಾಸಿಯಲ್ಲಿ ಸಂವಿದ್ ಗುರುಕುಲಂ ಬಾಲಕಿಯರ ಸೈನಿಕ ಶಾಲೆಯನ್ನು ಮತ್ತು ಸೋಲನ್ನಲ್ಲಿ ರಾಜ ಲಕ್ಷ್ಮೀ ಸೈನಿಕ ಶಾಲೆಯನ್ನು ನಡೆಸುತ್ತಿದ್ದಾರೆ.
ಸೇನೆಯಲ್ಲಿ ಸರಕಾರ ನಡೆಸುತ್ತಿರುವ ಎಲ್ಲ ಹಸ್ತಕ್ಷೇಪಗಳು ಸಂಘಪರಿವಾರಕ್ಕೆ ಮುಖ್ಯವಾಗಿ ಆರೆಸ್ಸೆಸ್ಗೆ ಪೂರಕವಾಗಿದೆ ಎನ್ನುವುದು ಕಾಕತಾಳೀಯ ಖಂಡಿತ ಅಲ್ಲ. ದೇಶದ ಸೇನೆಯನ್ನು ಹಂತ ಹಂತವಾಗಿ ತನ್ನ ಮುಷ್ಟಿಯೊಳಗೆ ತೆಗೆದುಕೊಳ್ಳಲು ಆರೆಸ್ಸೆಸ್ ನಡೆಸುತ್ತಿರುವ ಸಂಚಿಗೆ ಸರಕಾರ ಸಹಕರಿಸುತ್ತಿದೆಯೇ ಎಂದು ಪ್ರಾಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆರೆಸ್ಸೆಸ್ ಮತ್ತು ಸಂಘಪರಿವಾರಕ್ಕೆ ಈ ದೇಶದ ಪ್ರಜಾಸತ್ತೆ, ಸಂವಿಧಾನದ ಮೇಲೆ ಎಷ್ಟರಮಟ್ಟಿಗೆ ಗೌರವವಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ ಆಗಿದೆ. ದೇಶದ ಪ್ರಜಾಸತ್ತೆಯ ಮೇಲೆಯೇ ನಂಬಿಕೆಯಿಲ್ಲದ, ಈ ದೇಶದಲ್ಲಿ ನಡೆದಿರುವ ನೂರಾರು ಸಂವಿಧಾನ ವಿರೋಧಿ ಕೃತ್ಯಗಳಲ್ಲಿ, ದಂಗೆಗಳಲ್ಲಿ, ಕೋಮುಗಲಭೆಗಳಲ್ಲಿ ಗುರುತಿಸಿಕೊಂಡಿರುವ ಸಂಘಟನೆಗಳು ಸೈನಿಕ ಶಾಲೆಗಳನ್ನು ನಡೆಸುತ್ತವೆ ಮತ್ತು ಇದರಿಂದ ಹೊರ ಬಂದ ಯುವಕರು ಈ ದೇಶದ ಸೇನೆ ಸೇರುತ್ತಾರೆ ಎಂದಾದರೆ, ದೇಶದ ಸಾರ್ವಭೌಮತೆಯ ಗತಿಯೇನಾಗಬೇಕು ?. 2006ರ ನಾಂದೇಡ್ ಬಾಂಬ್ ಸ್ಫೋಟ ಮತ್ತು 2008ರ ಮಾಲೇಗಾಂವ್ ಸ್ಫೋಟಗಳ ಆರೋಪಿಗಳು ತರಬೇತಿ ಪಡೆದಿರುವ ಶಾಲೆಯ ಹೆಸರು ಸೆಂಟ್ರಲ್ ಹಿಂದೂ ಮಿಲಿಟರಿ ಎಜ್ಯುಕೇಷನ್ ಸೊಸೈಟಿ ನಡೆಸುತ್ತಿರುವ ನಾಸಿಕ್ನ ಭೋನ್ಸಾಲಾ ಮಿಲಿಟರಿ ಸ್ಕೂಲ್. 1937ರಲ್ಲಿ ಹಿಂದೂ ಬಲಪಂಥೀಯ ಸಿದ್ಧಾಂತವಾದಿ ಬಿ.ಎಸ್.ಮೂಂಜೆ ಸ್ಥಾಪಿಸಿದ್ದ ಸಂಸ್ಥೆ ಇದು. ಈ ಸೈನಿಕ ಶಾಲೆಯ ಜೊತೆಗೂ ರಕ್ಷಣಾ ಸಚಿವಾಲಯ ಒಪ್ಪಂದ ಮಾಡಿಕೊಂಡಿದೆ. ಈ ಎಲ್ಲ ಶಾಲೆಗಳು ಒಬ್ಬ ಯುವಕನಿಗೆ ಸೇನಾ ತರಬೇತಿಯನ್ನಷ್ಟೇ ನೀಡುವುದಿಲ್ಲ, ಅದರ ಜೊತೆ ಜೊತೆಗೆ ಪ್ರಜಾಸತ್ತೆಯ ವಿರುದ್ಧ, ಸಂವಿಧಾನದ ವಿರುದ್ಧ ಅಸಹನೆಯನ್ನೂ ತುಂಬಿಸುತ್ತದೆ. ಧರ್ಮ, ಜಾತಿ ಹೆಸರಿನಲ್ಲಿ ದ್ವೇಷವನ್ನೂ ಕಲಿಸುತ್ತವೆ.
ದೇಶದ ಪ್ರಜಾಪ್ರಭುತ್ವದ ಮೇಲೆ ಎಳ್ಳಷ್ಟು ನಂಬಿಕೆಯಿಲ್ಲದ ಸಂಸ್ಥೆಗಳು ಸಿದ್ಧಗೊಳಿಸುವ ಖಾಸಗಿ ಸೈನಿಕರು ಅಂತಿಮವಾಗಿ ಪ್ರಜಾಪ್ರಭುತ್ವದ ವಿರುದ್ಧ ಕೋವಿ ಎತ್ತುವುದಿಲ್ಲ ಎಂದು ನಂಬುವುದು ಹೇಗೆ? ಇಂತಹ ಶಾಲೆಗಳಿಂದ ಅಗ್ನಿವೀರರಾಗಿ ಸೇನೆ ಸೇರಿ ಅಲ್ಲಿ ಶಸ್ತ್ರಾಸ್ತ್ರ ತರಬೇತಿಗಳನ್ನು ಪಡೆದು ಸಮಾಜಕ್ಕೆ ಮರಳಿದರೆ ಅವರನ್ನು ಸಂಘಟನೆಗಳು ದುರುಪಯೋಗಗೊಳಿಸುವ ಎಲ್ಲ ಸಾಧ್ಯತೆಗಳಿಲ್ಲವೆ? ಸೇನಾ ತರಬೇತಿಗಳನ್ನು ನಡೆಸುವ ಯಾವುದೇ ಖಾಸಗಿ ಸಂಸ್ಥೆಗಳು ಯಾವುದೇ ರಾಜಕೀಯ ಸಿದ್ಧಾಂತಗಳ ಜೊತೆಗೆ ಸಂಬಂಧವನ್ನು ಹೊಂದಿರಬಾರದು. ಹೊಂದಿದ್ದರೆ, ತಾನು ಸಿದ್ಧಪಡಿಸಿದ ಸೈನಿಕರನ್ನು ಆ ಸಿದ್ಧಾಂತಕ್ಕೆ ದುರ್ಬಳಕೆ ಮಾಡಿಕೊಳ್ಳುವ ಅಪಾಯಗಳಿವೆ. ಅಧಿಕಾರಕ್ಕೇರಿದ ದಿನಗಳಿಂದ ಭಾರತೀಯ ಸೇನೆಯನ್ನು ತನ್ನ ರಾಜಕೀಯಕ್ಕಾಗಿ ದುರ್ಬಳಕೆ ಮಾಡಿಕೊಂಡೇ ಬಂದಿರುವ ಸರಕಾರ, ಇದೀಗ ಸಂಘಪರಿವಾರ ಬೆಂಬಲಿತ ಖಾಸಗಿ ಸೈನಿಕ ಶಾಲೆಗಳ ಜೊತೆಗೆ ಮಾಡಿಕೊಂಡಿರುವ ಒಪ್ಬಂದಗಳು ಈ ದೇಶದ ಆಂತರಿಕ ಭದ್ರತೆಯನ್ನು ಇನ್ನಷ್ಟು ಆತಂಕಕ್ಕೆ ತಳ್ಳಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.