ಪ್ರೊ. ಸಾಯಿಬಾಬಾ ಸಾವು: ಜೈಲು ವ್ಯವಸ್ಥೆಯ ಪಾಲೆಷ್ಟು?
PC: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಖ್ಯಾತ ಮಾನವ ಹಕ್ಕು ಹೋರಾಟಗಾರ, ದಿಲ್ಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಪ್ರೊ. ಜಿ. ಎನ್. ಸಾಯಿಬಾಬಾ ನಿಧನರಾಗಿದ್ದಾರೆ. ಆದಿವಾಸಿಗಳ, ದಮನಿತರ ಪರವಾಗಿ ಧ್ವನಿಯೆತ್ತಿದ ಕಾರಣಕ್ಕಾಗಿ ಸರಕಾರದ ಕಣ್ಣಿಗೆ ಶಂಕಿತ ನಕ್ಸಲರಂತೆ ಕಂಡ ಸಾಯಿಬಾಬಾ, ಯುಎಪಿಎ ಕರಾಳ ಕಾಯ್ದೆಯಡಿ ಬಂಧಿತರಾಗಿ ಸುಮಾರು 10 ವರ್ಷಗಳನ್ನು ಜೈಲಿನಲ್ಲಿ ಕಳೆದರು. ಅವರ ಮೇಲಿದ್ದ ಆರೋಪಗಳೆಲ್ಲ ನಿರಾಧಾರವೆನ್ನುವುದು ಸಾಬೀತಾಗಿ ಬಿಡುಗಡೆಗೊಂಡ ಸುಮಾರು ಏಳು ತಿಂಗಳ ಬಳಿಕ ಇದೀಗ ಕೊನೆಯುಸಿರೆಳೆದಿದ್ದಾರೆ. ಹತ್ತು ವರ್ಷಗಳ ಕಾಲ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿ ಕಳೆದ ಸಾಯಿಬಾಬಾ ದೋಷಮುಕ್ತರಾದರೇನೋ ನಿಜ. ಆದರೆ ಮಾಡದ ತಪ್ಪಿಗೆ ಶಿಕ್ಷೆಯನ್ನಂತೂ ಆ ಹತ್ತು ವರ್ಷಗಳಲ್ಲಿ ಅವರು ಅನುಭವಿಸಿದ್ದರು. ಆ ಹತ್ತು ವರ್ಷಗಳಲ್ಲಿ ಅವರು ಅನುಭವಿಸಿದ ದೌರ್ಜನ್ಯಗಳ ಪರಿಣಾಮವಾಗಿ ತೀವ್ರ ಅನಾರೋಗ್ಯಕ್ಕೊಳಗಾಗಿದ್ದ ಅವರು ಬಿಡುಗಡೆಯಾದ ಬರೇ ಏಳು ತಿಂಗಳಲ್ಲಿ ಮೃತಪಟ್ಟರು. ಮಾನವ ಹಕ್ಕು ಹೋರಾಟಗಾರ ಸ್ಟ್ಯಾನ್ ಸ್ವಾಮಿ ಬರ್ಬರ ಸಾವಿನ ಮುಂದುವರಿದ ಭಾಗ ಇದಾಗಿದೆ. ತೀವ್ರ ಅಸ್ವಸ್ಥರಾಗಿ ಅವರ ಪ್ರಾಣಕ್ಕೆ ಅಪಾಯವಿದ್ದ ಸಂದರ್ಭದಲ್ಲೂ ವೈದ್ಯಕೀಯ ಜಾಮೀನನ್ನು ಅವರಿಗೆ ನಿರಾಕರಿಸಲಾಗಿತ್ತು. ಬಿಡುಗಡೆಯಾಗುವ ಹೊತ್ತಿಗೆ ಜೈಲು ಅವರ ಜೀವ ಚೈತನ್ಯವನ್ನು ಬಸಿದು ಬಿಟ್ಟಿತ್ತಾದರೂ, ಹೋರಾಟದ ಕೆಚ್ಚನ್ನು ಮಾತ್ರ ಅವರು ಕಳೆದುಕೊಂಡಿರಲಿಲ್ಲ.
ಸಾಯಿಬಾಬಾ ಅವರೇ ಹೇಳಿಕೊಂಡಿರುವಂತೆ, ಹತ್ತು ವರ್ಷಗಳ ಹಿಂದೆ ಅವರನ್ನು ಬಂಧಿಸುವ ಸಂದರ್ಭದಲ್ಲಿ ಪೋಲೀಯೊದಿಂದ ಅವರು ಕಾಲುಗಳನ್ನು ಕಳೆದುಕೊಂಡಿದ್ದರು. ತನ್ನ ಸಾರ್ವಜನಿಕ ಹೋರಾಟಗಳನ್ನೆಲ್ಲ ಅವರು ವೀಲ್ಚೇರ್ ಮೂಲಕವೇ ಮುಂದುವರಿಸಿದ್ದರು. ಇಂತಹ ವ್ಯಕ್ತಿಯನ್ನು ಕರಾಳ ಕಾಯ್ದೆಯಡಿ ಬಂಧಿಸಿದ ಸರಕಾರ, ಆರೋಪ ಸಾಬೀತಾಗುವ ಮುನ್ನವೇ ಅವರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಿತ್ತು. ಪೊಲೀಸರ ಹಿಂಸೆಯಿಂದ ಅವರ ಮೆದುಳಿನ ಸಂಪರ್ಕದ ನರವ್ಯವಸ್ಥೆಗೆ ಹಾಗೆಯೇ ಎಡಭಾಗದ ಪಕ್ಕೆಲುಬಿಗೆ ಹಾನಿಯಾಗಿತ್ತು. ಪರಿಣಾಮವಾಗಿ ಅವರ ಎಡಗೈ ನಿಷ್ಕ್ರಿಯವಾಗಿತ್ತು. ಬೆನ್ನುಮೂಳೆ, ಹೃದಯದ ಎಡಭಾಗಕ್ಕೂ ಹಾನಿಯಾಗಿತ್ತು. ಎಡ ಹೃದಯವು ಕೇವಲ ಶೇ. 55ರಷ್ಟು ಮಾತ್ರ ಕೆಲಸ ಮಾಡುತ್ತಿದೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಜೈಲಿನಲ್ಲಿ ನಡೆದ ದೌರ್ಜನ್ಯವೇ ಇಂದು ಸಾಯಿಬಾಬಾರನ್ನು ಬಲಿತೆಗೆದುಕೊಂಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಪೋಲಿಯೊ ಪೀಡಿತರಾಗಿ ವೀಲ್ಚೇರ್ನಲ್ಲಿದ್ದ ವ್ಯಕ್ತಿಯ ಮೆಡಿಕಲ್ ಬೇಲ್ನ್ನು ಹೈಕೋರ್ಟ್ ಎರಡೆರಡು ಬಾರಿ ತಿರಸ್ಕರಿಸಿತ್ತು. ಇದೇ ಸಂದರ್ಭದಲ್ಲಿ, ಕಾಲಕಾಲಕ್ಕೆ ಅವರಿಗೆ ಚಿಕಿತ್ಸೆ ನೀಡಬೇಕು ಎನ್ನುವ ಹೈಕೋರ್ಟ್ನ ಆದೇಶವನ್ನು ಪೊಲೀಸರು ತಿರಸ್ಕರಿಸಿದ್ದರು. ಸ್ಟ್ಯಾನ್ ಸ್ವಾಮಿ ಅವರೊಂದಿಗೆ ನಡೆದುಕೊಂಡಂತೆಯೇ ಸಾಯಿಬಾಬ ಅವರ ಜೊತೆಗೂ ಪೊಲೀಸರು ಅತ್ಯಂತ ಕ್ರೂರವಾಗಿ ನಡೆದುಕೊಂಡಿದ್ದರು.
ಸ್ಟ್ಯಾನ್ ಸ್ವಾಮಿ ಮತ್ತು ಸಾಯಿಬಾಬಾ ಅವರ ಸಾವು ಈ ದೇಶದ ಯುಎಪಿಎ ಕರಾಳ ಕಾನೂನಿನ ದುರ್ಬಳಕೆಗೆ ಸಾಕ್ಷಿಯಾಗಿದೆ. ಇದೇ ಸಂದರ್ಭದಲ್ಲಿ ಹಲವು ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಿರುವ ನೂರಾರು ವಿಚಾರಣಾಧೀನ ಕೈದಿಗಳ ಬಿಡುಗಡೆಯ ಬಗ್ಗೆಯೂ ಚರ್ಚೆ ನಡೆಯಬೇಕಾಗಿದೆ. ವಿಚಾರಣಾಧೀನ ಕೈದಿಗಳ ಚಿಂತಾಜನಕ ಸ್ಥಿತಿಯ ಬಗ್ಗೆ ಸ್ಟ್ಯಾನ್ ಸ್ವಾಮಿಯವರು 2018ರಲ್ಲೇ ಜಾರ್ಖಂಡ್ ಹೈಕೋರ್ಟ್ನ ಗಮನ ಸೆಳೆದಿದ್ದರು. ಜಾರ್ಖಂಡ್ನಲ್ಲಿ 3,000ಕ್ಕೂ ಅಧಿಕ ಜನರು ವಿಚಾರಣಾಧೀನ ಕೈದಿಗಳಾಗಿ ಕೊಳೆಯುತ್ತಿರುವುದನ್ನು ಅವರು ಗುರುತಿಸಿದ್ದರು. ಸ್ವಾಮಿ ಅವರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಹೈಕೋರ್ಟ್, ಈ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲು ಆದೇಶವನ್ನು ನೀಡಿತ್ತು. ವಿಪರ್ಯಾಸವೆಂದರೆ, ಅಂತಿಮವಾಗಿ ಸ್ವತಃ ಸ್ಟ್ಯಾನ್ ಸ್ವಾಮಿಯವರೇ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲೇ ಕೊನೆಯುಸಿರೆಳೆದು, ಭಾರತೀಯ ಜೈಲುಗಳ ದಯನೀಯ ಸ್ಥಿತಿಯನ್ನು ವಿಶ್ವಕ್ಕೆ ತೆರೆದಿಟ್ಟರು. ಭಾರತೀಯ ಅಪರಾಧ ಬ್ಯೂರೋಗಳ ಪ್ರಕಾರ ಭಾರತದ ಜೈಲುಗಳಲ್ಲಿ ಇರುವ ಕೈದಿಗಳಲ್ಲಿ ಶೇ. 77ರಷ್ಟು ಮಂದಿ ವಿಚಾರಣಾಧೀನ ಕೈದಿಗಳು. 2021ರಲ್ಲಿ 5,54,034 ಸಾವಿರ ಕೈದಿಗಳಿದ್ದರೆ ಅವರಲ್ಲಿ, 4,27.135 ಮಂದಿ ವಿಚಾರಣಾಧೀನ ಕೈದಿಗಳಾಗಿದ್ದರು. 2020ರಲ್ಲಿ 3, 71,348 ವಿಚಾರಣಾಧೀನ ಕೈದಿಗಳಿದ್ದರು. ಎಂದರೆ, ಒಂದೇ ವರ್ಷದಲ್ಲಿ ಸಂಖ್ಯೆ ಶೇ. 14ರಷ್ಟು ಹೆಚ್ಚಳವಾಗಿದೆ. ಜಿಲ್ಲಾ ಕಾರಾಗೃಹಗಳು ಅತಿ ಹೆಚ್ಚು ವಿಚಾರಣಾಧೀನ ಕೈದಿಗಳ ಪಾಲು ಹೊಂದಿದ್ದು, ಜಿಲ್ಲಾ ಕಾರಾಗೃಹಗಳ ಒಟ್ಟು ಕೈದಿಗಳಲ್ಲಿ ಶೇ. 52ರಷ್ಟು ಕೈದಿಗಳು ವಿಚಾರಣಾಧೀನ ಕೈದಿಗಳಾಗಿದ್ದಾರೆ.
ವಿಚಾರಣಾಧೀನ ಕೈದಿಗಳು ಬಿಡುಗಡೆಯಾಗದೇ ಜೈಲಿನಲ್ಲೇ ಉಳಿಯಲು ಸಾಮಾಜಿಕ, ರಾಜಕೀಯ ಕಾರಣಗಳಿವೆ. ಸರಕಾರ, ಪ್ರಭುತ್ವದ ವಿರುದ್ಧ ಮಾತನಾಡುವ, ಹೋರಾಟಗಾರರ ಬಂಧನದ ಹಿಂದೆ ರಾಜಕೀಯ ಶಕ್ತಿಗಳ ಕೈವಾಡವಿರುವುದು ಅವರು ಜೈಲಿನಿಂದ ಹೊರಬರದೇ ಇರುವುದಕ್ಕೆ ಮುಖ್ಯ ಕಾರಣವಾಗಿದೆ. ಯುಎಪಿಎ ಕಾಯ್ದೆಯಡಿಯಲ್ಲಿ ಬಂಧಿತರಾದವರಂತೂ ಯಾವುದೇ ವಿಚಾರಣೆಗಳಿಲ್ಲದೆಯೇ ಶಿಕ್ಷೆಯನ್ನನುಭವಿಸುತ್ತಿದ್ದಾರೆ. ಜೈಲಿನಲ್ಲೇ ಅವರ ಮಾರಣಹೋಮ ನಡೆಯುತ್ತಿದೆ. ಪತ್ರಕರ್ತರು, ವಿದ್ಯಾರ್ಥಿ ನಾಯಕರು, ಸಾಮಾಜಿಕ ಹೋರಾಟಗಾರರು, ಮಾನವ ಹಕ್ಕು ಕಾರ್ಯಕರ್ತರು ಸೇರಿದಂತೆ ನೂರಾರು ಜನರು ಜೈಲಿನಲ್ಲಿ ವಿಚಾರಣೆಯ ಹೆಸರಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದು ಇವರು ಬಿಡುಗಡೆಯಾಗುವುದು ಸರಕಾರಕ್ಕೆ ಬೇಕಾಗಿಲ್ಲ. ತನ್ನ ವಿರುದ್ಧ ಮಾತನಾಡುವವರನ್ನೆಲ್ಲ ಜೈಲಿನಲ್ಲಿಟ್ಟು ಅವರ ಮಾತುಗಳನ್ನು, ಅವರ ಚಟುವಟಿಕೆಗಳನ್ನು ದಮನಿಸುವ ಉದ್ದೇಶ ಇದರ ಹಿಂದಿದೆ. 2015-2019ರ ನಡುವೆ ಯುಎಪಿಎ ಅಡಿಯಲ್ಲಿ 7,840 ಮಂದಿಯನ್ನು ಬಂಧಿಸಲಾಗಿದೆ ಮತ್ತು ಅವರಲ್ಲಿ ಬಹುತೇಕರು ಇನ್ನೂ ಜೈಲಿನಲ್ಲಿ ವಿಚಾರಣೆಯ ಹೆಸರಿನಲ್ಲಿ ದೌರ್ಜನ್ಯವನ್ನು ಅನುಭವಿಸುತ್ತಿದ್ದಾರೆ. ಇವರಲ್ಲಿ ಶೇ. 2 ರಷ್ಟು ಮಂದಿಯ ಆರೋಪಗಳಷ್ಟೇ ಸಾಬೀತಾಗಿವೆ.
ಉಳಿದಂತೆ ವಿಚಾರಣಾಧೀನ ಕೈದಿಗಳ ಹೆಚ್ಚಳಕ್ಕೆ ಸಾಮಾಜಿಕ ಕಾರಣಗಳನ್ನು ಊಹಿಸುವುದು ಕಷ್ಟವಿಲ್ಲ. ಒಂದೆಡೆ ಪ್ರಕರಣಗಳು ವಿಲೇವಾರಿ ಮಾಡಲು ನ್ಯಾಯಾಲಯಗಳು ಹೆಣಗಾಡುತ್ತಿವೆ. ವಿಚಾರಣೆಯ ನೆಪದಲ್ಲಿ ಪ್ರಕರಣಗಳನ್ನು ಮುಂದಕ್ಕೆ ಹಾಕುವುದು ನ್ಯಾಯ ವ್ಯವಸ್ಥೆಯ ಹಳೆಯ ಚಾಳಿಯಾಗಿದೆ. ಇದೇ ಸಂದರ್ಭದಲ್ಲಿ ಜಾಮೀನು ನೀಡಲು ಜನ, ಹಣ ಬಲವಿಲ್ಲದೆ ಜೈಲಿನೊಳಗೆ ಕೊಳೆಯುತ್ತಿರುವವರ ಸಂಖ್ಯೆ ಬಹುದೊಡ್ಡದಿದೆ. ಇವರೆಲ್ಲರೂ ಶೋಷಿತ ಸಮುದಾಯಕ್ಕೆ ಸೇರಿದ ಕೈದಿಗಳು ಎನ್ನುವುದು ವ್ಯವಸ್ಥೆಯ ಇನ್ನೊಂದು ದುರಂತವಾಗಿದೆ. ಸರಿಯಾದ ಕಾನೂನು ಸಹಾಯದ ಕೊರತೆಯಿಂದಲೂ ಜೈಲಿನಲ್ಲಿ ದಿನಕಳೆಯುವವರಿದ್ದಾರೆ. ಇವರು ಎಸಗಿರುವ ಕೃತ್ಯಕ್ಕೆ ಹೋಲಿಸಿದರೆ, ಇವರು ಜೈಲಿನಲ್ಲಿ ಕಳೆದ ಅವಧಿ ಕಾನೂನಿಗೆ ಮೀರಿದ ಶಿಕ್ಷೆಯೇ ಸರಿ. ವಂಚನೆ ಆರೋಪವೊಂದಕ್ಕೆ ಏಳು ವರ್ಷಕ್ಕಿಂತ ಹೆಚ್ಚು ಶಿಕ್ಷೆಯಾಗಿದ್ದರೆ ಅವರನ್ನು ಬಂಧನಕ್ಕೊಳಪಡಿಸಬಾರದು ಎಂದು ಸುಪ್ರೀಂಕೋರ್ಟ್ ಸ್ಪಷ್ಟ ಪಡಿಸಿದೆಯಾದರೂ, ಅದನ್ನು ಪೊಲೀಸರು ಪಾಲಿಸುತ್ತಿಲ್ಲ. ವರ್ಷದಿಂದ ವರ್ಷಕ್ಕೆ ವಿಚಾರಣಾಧೀನ ಕೈದಿಗಳ ಹೆಚ್ಚಳದಿಂದಾಗಿ ಜೈಲುಗಳ ನಿರ್ವಹಣೆಯೂ ಕಷ್ಟ ಎನ್ನುವಂತಾಗಿದೆ. ಇದರ ಪರಿಣಾಮವನ್ನು ಮತ್ತೆ ಅನುಭವಿಸುವವರು ಇದೇ ಕೈದಿಗಳಾಗಿದ್ದಾರೆ.
ಸಾಯಿಬಾಬಾ ಅವರ ಸಾವು ನಮ್ಮ ಜೈಲು ವ್ಯವಸ್ಥೆಯನ್ನು ಮತ್ತು ಕಾನೂನು ವ್ಯವಸ್ಥೆಯ ಕ್ರೌರ್ಯವನ್ನು ಪ್ರಶ್ನಿಸುವುದಕ್ಕೆ ಒಂದು ನೆಪವಾಗಬೇಕಾಗಿದೆ. ಹಾಗೆಯೇ, ಇನ್ನೂ ಜಾಮೀನು ಸಿಗದೆ ಜೈಲಿನಲ್ಲಿ ಪರೋಕ್ಷ ಶಿಕ್ಷೆ ಅನುಭವಿಸುತ್ತಿರುವ ನೂರಾರು ಸಾಮಾಜಿಕ ಕಾರ್ಯಕರ್ತರ ಬಿಡುಗಡೆಗಾಗಿ ಒಂದು ಜನಾಂದೋಲನ ರೂಪುಗೊಳ್ಳುವ ಅಗತ್ಯವನ್ನು ಕೂಡ ಇದು ಹೇಳುತ್ತಿದೆ.