ಮೃತ್ಯು ಸುರಂಗದಿಂದ ಕಾರ್ಮಿಕರ ರಕ್ಷಣೆ: ಸರಕಾರದ ಹೊಣೆಗಾರಿಕೆ ಮುಗಿಯಿತೆ?
Phorto: PTI
ಉತ್ತರಾಖಂಡದ ಉತ್ತರ ಕಾಶಿ ಜಿಲ್ಲೆಯ ಸಿಲ್ಕ್ಯಾರಾ-ಬಡಕೋಟ್ ಸುರಂಗದಲ್ಲಿ ಸಿಲುಕಿದ್ದ 41 ಮಂದಿ ಕಾರ್ಮಿಕರು 17 ದಿನಗಳ ಬಳಿಕ ಮೃತ್ಯು ಕೂಪದಿಂದ ಹೊರ ಬಂದಿದ್ದಾರೆ. ಕಾರ್ಮಿಕರನ್ನು ಉಳಿಸಲು ನಿರಂತರವಾಗಿ ನಡೆದ ಪ್ರಯತ್ನ ಕೊನೆಗೂ ಗೆದ್ದಿದೆ. ಬೃಹತ್ ಯಂತ್ರಗಳು, ತಂತ್ರಜ್ಞಾನಗಳು ಹಗಲು ರಾತ್ರಿ ನಡೆಸಿದ ಪ್ರಯತ್ನ ಕೊನೆ ಗಳಿಗೆಯಲ್ಲಿ ವಿಫಲವಾದಾಗ, ಸ್ಥಳೀಯ ಗಣಿ ಕಾರ್ಮಿಕರು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ನಡೆಸಿದ ‘ರ್ಯಾಟ್ ಹೋಲ್ ಮೈನಿಂಗ್ ವಿಧಾನ’ದ ಮೂಲಕ 41 ಕಾರ್ಮಿಕರ ಪ್ರಾಣವನ್ನು ಉಳಿಸಿದ್ದಾರೆ ಮಾತ್ರವಲ್ಲ, ಕುಸಿದ ಸುರಂಗದೊಳಗೆ ಅಮಾನವೀಯ ಸ್ಥಿತಿಯಲ್ಲಿ ಸಿಕ್ಕಿ ಬಿದ್ದಿದ್ದ ಮಾನವ ಘನತೆಗೆ ಉಸಿರು ತುಂಬಿದ್ದಾರೆ. ಈ ರ್ಯಾಟ್ ಹೋಲ್ ಕಲ್ಲಿದ್ದಲು ಕಾರ್ಮಿಕರ ಮಹಾ ಸಾಹಸದ ಕಾರಣದಿಂದಲೇ ಇಂದು ಉತ್ತರಾಖಂಡ ಸರಕಾರ ಮಾತ್ರವಲ್ಲ, ಕೇಂದ್ರ ಸರಕಾರವೂ ತನ್ನ ಮುಖ ಉಳಿಸಿಕೊಂಡು ಮಾಧ್ಯಮಗಳ ಮುಂದೆ ಹೇಳಿಕೆಗಳ ಮೇಲೆ ಹೇಳಿಕೆಗಳನ್ನು ನೀಡುತ್ತಿದೆ. ಕಾರ್ಮಿಕರ ರಕ್ಷಣೆಯ ಕಾರ್ಯ ಪೂರ್ತಿಯಾಗುತ್ತಿದ್ದಂತೆಯೇ ಉತ್ತರಾಖಂಡದ ಮುಖ್ಯಮಂತ್ರಿ ‘ಜೀವಂತ ಹೊರ ಬಂದಿರುವ ಕಾರ್ಮಿಕರಿಗೆ ತಲಾ 1 ಲಕ್ಷ ರೂ.’ಯನ್ನು ಘೋಷಿಸಿದ್ದಾರೆ. ಇದೇ ಸಂದರ್ಭದಲ್ಲಿ ಕಾರ್ಮಿಕರ ರಕ್ಷಣೆಯನ್ನು ತನ್ನ ಸಾಧನೆಯಾಗಿ ಬಿಂಬಿಸಿಕೊಳ್ಳಲು ಉತ್ತರಾಖಂಡ ಸರಕಾರ ಗರಿಷ್ಠ ಪ್ರಯತ್ನ ನಡೆಸುತ್ತಿದೆ. ಈ ಮೂಲಕ ಈ ದುರಂತದಲ್ಲಿ ತನ್ನ ವೈಫಲ್ಯಗಳನ್ನು ಮುಚ್ಚಿಡುವುದಕ್ಕೆ ಪ್ರಯತ್ನಿಸುತ್ತಿದೆ.
41 ಕಾರ್ಮಿಕರ ರಕ್ಷಣೆಯೊಂದಿಗೆ ಎಲ್ಲವೂ ಸುಖಾಂತ್ಯವಾಯಿತು ಎಂದು ತೆರೆ ಎಳೆದು ಬಿಡುವುದು, ಕಳೆದ 17 ದಿನಗಳಿಂದ ಮೃತ್ಯು ಕೂಪದಲ್ಲಿ ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ ಕಾರ್ಮಿಕರಿಗೆ ನಾವು ಮಾಡುವ ಬಹುದೊಡ್ಡ ಅನ್ಯಾಯವಾಗಿ ಬಿಡುತ್ತದೆ. ಚಾರ್ಧಾಮ್ ಮಹಾ ಹೆದ್ದಾರಿಯ ಭಾಗವಾಗಿ 2018ರಲ್ಲಿ ಬಾರ್ಕೋಟ್ - ಸಿಲ್ಕ್ಯಾರಾ ಸುರಂಗ ಯೋಜನೆಯನ್ನು ಘೋಷಿಸಲಾಯಿತು. ಸುಮಾರು 4.5 ಕಿ.ಮೀ. ಉದ್ದದ ದ್ವಿಪಥ ಸುರಂಗವಿದು. ಚಾರ್ಧಾಮ್ ಯೋಜನೆ 12,000 ಕೋಟಿ ರೂ. ವೆಚ್ಚದ್ದಾದರೆ, ಈ ಸುರಂಗ ಯೋಜನೆಗಾಗಿ 1, 383 ಕೋಟಿ ರೂ.ಯನ್ನು ವೆಚ್ಚ ಮಾಡಲಾಗಿದೆ. ಈ ಯೋಜನೆಯು ಕೇಂದ್ರ ಸರಕಾರದ ಎನ್ಎಚ್ಐಡಿಸಿಎಲ್ ವ್ಯಾಪ್ತಿಯಲ್ಲಿ ಬರುತ್ತದೆ. ಹೈದರಾಬಾದ್ ಮೂಲದ ನವಯುಗ್ ಇಂಜಿಯರಿಂಗ್ ಕಂಪೆನಿ ಈ ಯೋಜನೆಯ ನಿರ್ಮಾಣದ ಭಾಗವಾಗಿದೆ ಎಂದು ಮೂಲಗಳು ತಿಳಿಸುತ್ತವೆ. ಕಾರ್ಮಿಕರ ರಕ್ಷಣೆಯ ಭರಾಟೆಯಲ್ಲಿ ಈ ಕುಸಿತ ಹೇಗೆ ಸಂಭವಿಸಿತು ಎನ್ನುವ ಪ್ರಶ್ನೆ ಸಂಪೂರ್ಣ ಬದಿಗೆ ಸರಿದಿದೆ. ಕಾಮಗಾರಿಯ ಸಂದರ್ಭದಲ್ಲಿ ಕಂಪೆನಿಯು ನಿಯಮವನ್ನು ಉಲ್ಲಂಘಿಸಿ ಭಾರೀ ಸ್ಫೋಟಕಗಳನ್ನು ಬಳಸಿರುವುದೇ ಈ ಕುಸಿತಕ್ಕೆ ಕಾರಣವಾಗಿರಬಹುದು ಎನ್ನುವ ಅನುಮಾನವನ್ನು ಕೆಲವು ತಜ್ಞರು ವ್ಯಕ್ತಪಡಿಸುತ್ತಾರೆ. 2018ರಲ್ಲಿ ಸುರಂಗ ಯೋಜನೆಯನ್ನು ಶುರು ಮಾಡಿದಾಗ, ಅದರೊಳಗೆ ಪಾರಾಗುವ ಒಳಮಾರ್ಗಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಸರಕಾರ ಹೇಳಿಕೆಯನ್ನು ನೀಡಿತ್ತು. ಇಂತಹ ಸುರಂಗ ಮಾರ್ಗಗಳು ಪಾರಾಗುವುದಕ್ಕೆ ಬೇಕಾಗುವ ಸುರಕ್ಷಿತ ಒಳ ದಾರಿಗಳನ್ನು ಹೊಂದಿರಲೇಬೇಕು. ಅಂತಹ ಒಳಮಾರ್ಗಗಳು ಇದ್ದಿದ್ದರೆ ಕಾರ್ಮಿಕರು 17 ದಿನಗಳ ಕಾಲ ಸುರಂಗದಲ್ಲಿ ಸಾವು ಬದುಕಿನ ನಡುವೆ ಒದ್ದಾಡುವ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಪರಿಣಿತ ಇಂಜಿನಿಯರ್ಗಳ ಮೇಲ್ವಿಚಾರಣೆ ಇಲ್ಲದೇ ಇರುವುದೂ ಈ ದುರಂತಕ್ಕೆ ಇನ್ನೊಂದು ಕಾರಣವಾಗಿರುವ ಸಾಧ್ಯತೆಗಳಿವೆ. ಆದುದರಿಂದ ದುರಂತದ ಬಗ್ಗೆ ಗಂಭೀರ ತನಿಖೆಯೊಂದರ ಅಗತ್ಯವಿದೆ. ಈ ಲೋಪಗಳಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗುವ ಅಗತ್ಯವಿದೆ.
ಸರಕಾರ ಮತ್ತು ಇಂಜಿನಿಯರ್ಗಳ ಲೋಪಗಳಿಗೆ 41 ಜನ ಕಾರ್ಮಿಕರು ಬೆಲೆ ತೆರಬೇಕಾಯಿತು. ಇವರೆಲ್ಲ ಬದುಕಿ ಬಂದರು ಎನ್ನುವ ಮೂಲಕ ಸರಕಾರ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ. ಈ 17 ದಿನಗಳ ಕಾಲ ಅವರು ಅನುಭವಿಸಿದ ಜೀವ ಭಯ, ಸಾವಿನ ಜೊತೆಗೆಅವರು ನಡೆಸಿದ ಸಂಘರ್ಷ ಇವೆಲ್ಲವುಗಳಿಗೆ ಸೂಕ್ತ ಪರಿಹಾರವನ್ನು ಸರಕಾರ ನೀಡಲೇ ಬೇಕಾಗಿದೆ. ಸುರಂಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರಿಗೆ ಸರಕಾರ ನೀಡುತ್ತಿರುವ ವೇತನ ಎಷ್ಟಿರಬಹುದು ಎನ್ನುವುದು ಎಲ್ಲರಿಗೂ ಗೊತ್ತಿರುವಂತಹದ್ದೇ. ಇದೀಗ ಅವರು ಹೊರ ಬಂದಾಗ ರಾಜ್ಯ ಸರಕಾರ ತಲಾ ಒಂದು ಲಕ್ಷ ರೂ.ಯನ್ನು ಘೋಷಿಸಿ ಔದಾರ್ಯವನ್ನು ಮೆರೆದಿದೆ. ಒಬ್ಬ ಕಾರ್ಮಿಕ ಯಾರದೋ ತಪ್ಪಿಗೆ 17 ದಿನಗಳ ಕಾಲ ಅನುಭವಿಸಿದ ಚಿತ್ರಹಿಂಸೆ, ಸಾವು ಬದುಕಿನ ನಡುವಿನ ಒದ್ದಾಟ ಇವುಗಳೆಲ್ಲವನ್ನು ಒಂದು ಲಕ್ಷ ರೂ. ಪರಿಹಾರದಿಂದ ಸರಕಾರ ಸರಿದೂಗಿಸಿಕೊಳ್ಳಲು ಮುಂದಾಗಿದೆ. ಸರಕಾರ ಮೊದಲು ತನ್ನ ವೈಫಲ್ಯವನ್ನು ಒಪ್ಪಿಕೊಂಡು ಸುರಂಗದಲ್ಲಿ ಸಿಲುಕಿಕೊಂಡ ಕಾರ್ಮಿಕರ ಕ್ಷಮೆ ಯಾಚಿಸಬೇಕು. ಜೊತೆಗೆ ಅವರಿಗೆ ಯೋಗ್ಯ ಪರಿಹಾರವನ್ನು ನೀಡಬೇಕು. ಕುಸಿದು ಬಿದ್ದ ಸುರಂಗದ ಕಾರ್ಗತ್ತಲಲ್ಲಿ 17 ದಿನ ಧೈರ್ಯಗೆಡದೆ ಕಳೆದು ಬಂದ ಆ ಕಾರ್ಮಿಕರನ್ನು ಸಾರ್ವಜನಿಕವಾಗಿ ಅಭಿನಂದಿಸಬೇಕು. ಮನುಷ್ಯತ್ವ ಮತ್ತು ಆತ್ಮಸಾಕ್ಷಿಯಿರುವ ಸರಕಾರ ಮಾಡಬೇಕಾದ ಮೊತ್ತ ಮೊದಲ ಕೆಲಸ ಇದು.
ಇನ್ನು 41 ಕಾರ್ಮಿಕರನ್ನು ಹೊರತೆಗೆದ ಸಾಹಸಿಗರನ್ನು ಕೂಡ ಸರಕಾರ ಮರೆಯಬಾರದು. ಅವರಿಂದಾಗಿಯೇ ಸರಕಾರ ತನ್ನ ಮಾನವನ್ನು ಉಳಿಸಿಕೊಂಡಿದೆ. ಭಾರೀ ತಂತ್ರಜ್ಞಾನಗಳು ಗುರಿ ತಲುಪುವಲ್ಲಿ ವಿಫಲವಾದಾಗ ‘ರ್ಯಾಟ್ ಹೋಲ್ ಮೈನಿಂಗ್’ನಲ್ಲಿ ತೊಡಗಿಸಿಕೊಂಡ ಕಾರ್ಮಿಕರನ್ನು ಬಳಸಿಕೊಳ್ಳುವುದು ಅನಿವಾರ್ಯವಾಯಿತು. ಇದರಲ್ಲಿ ಪಾಲುಗೊಂಡ ಫಿರೋಝ್, ಮುನ್ನಾ ಖುರೇಷಿ, ರಶೀದ್, ನಸೀಮ್, ದೇವೇಂದರ್, ಅಂಕುರ್ ಮೊದಲಾದ ಕಾರ್ಮಿಕರ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ‘ರ್ಯಾಟ್ ಹೋಲ್ ಮೈನಿಂಗ್’ನ್ನು ಈ ಸುರಂಗ ಕಾರ್ಯಾಚರಣೆಯಲ್ಲಿ ಬಳಸಿದ ಒಂದು ತಂತ್ರವೆಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ನಿಜ ನೋಡಿದರೆ, ಅದೊಂದು ತಂತ್ರವಲ್ಲ. ಕಾರ್ಮಿಕರನ್ನು ರಕ್ಷಿಸುವಲ್ಲಿ ಇನ್ನೂ 15 ಮೀಟರ್ ಬಾಕಿ ಉಳಿದಾಗ, ಡ್ರಿಲ್ ಮಿಶನ್ ಮುರಿದು ಹೋಯಿತು. ಯಂತ್ರ ಭಾಗಶಃ ಅಸಹಾಯಕವಾಯಿತು. ಇಂತಹ ಸಂದರ್ಭದಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಸಲು ಬಳಕೆಯಾಗುತ್ತಿದ್ದ ರ್ಯಾಟ್ ಹೋಲ್ ಗಣಿ ಕಾರ್ಮಿಕರನ್ನು ಸರಕಾರ ಬಳಸುವುದು ಅನಿವಾರ್ಯವಾಯಿತು. ರ್ಯಾಟ್ಹೋಲ್ ಎನ್ನುವುದು ತಂತ್ರಜ್ಞಾನವಲ್ಲ. ಈಶಾನ್ಯ ರಾಜ್ಯವಾಗಿರುವ ಮೇಘಾಲಯದಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ಬಳಕೆಯಾಗುವ ಅತ್ಯಂತ ಅಪಾಯಕಾರಿ ಮತ್ತು ಅವೈಜ್ಞಾನಿಕವಾಗಿರುವ ವಿಧಾನ ಇದಾಗಿದೆ. 2019ರಲ್ಲಿ ಮೇಘಾಲಯದಲ್ಲಿ ನಡೆದ ದುರಂತವೊಂದರಲ್ಲಿ ಈ ರ್ಯಾಟ್ ಹೋಲ್ ಗಣಿಗಾರಿಕೆಗೆ 15 ಜನ ಬಲಿಯಾಗಿದ್ದಾರೆ. 2007ರಿಂದ 2014ರವರೆಗೆ ನಡೆದ ಬೇರೆ ಬೇರೆ ರ್ಯಾಟ್ ಹೋಲ್ ಗಣಿಗಾರಿಕೆ ದುರಂತದಲ್ಲಿ ಸುಮಾರು 15,000 ಕಾರ್ಮಿಕರು ಮೃತಪಟ್ಟಿದ್ದಾರೆ ಎನ್ನುವುದನ್ನು ಅಂಕಿಅಂಶಗಳು ಹೇಳುತ್ತವೆ. 2014ರಲ್ಲಿ ಈ ವಿಧಾನಕ್ಕೆ ಸರಕಾರ ನಿಷೇಧವನ್ನು ಹೇರಿದೆ.
41 ಜನರ ಪ್ರಾಣ ರಕ್ಷಣೆಗಾಗಿ ನಿಷೇಧಕ್ಕೊಳಗಾಗಿರುವ ರ್ಯಾಟ್ ಹೋಲ್ ಮೈನಿಂಗ್ ವಿಧಾನವನ್ನು ಸರಕಾರದ ನೇತೃತ್ವದಲ್ಲೇ ಬಳಸಲಾಯಿತು. ಅತ್ಯಂತ ತುರ್ತು ಸಂದರ್ಭವಾಗಿರುವುದರಿಂದ ನಾವಿದನ್ನು ಮಾನ್ಯ ಮಾಡೋಣ. ಆದರೆ ಈ ಕಾರ್ಮಿಕರು ತಮ್ಮ ಜೀವವನ್ನು ಒತ್ತೆಯಿಟ್ಟು 41 ಕಾರ್ಮಿಕರ ರಕ್ಷಣೆಗೆ ಮುಂದಾದರು ಎನ್ನುವುದು ಕೂಡ ಅಷ್ಟೇ ಮುಖ್ಯವಾಗಿದೆ. ುಸು ಏರುಪೇರಾಗಿದ್ದರೂ 41 ಕಾರ್ಮಿಕರ ಜೊತೆಗೆ ಈ ರ್ಯಾಟ್ ಹೋಲ್ ಕಾರ್ಮಿಕರ ಜೀವವೂ ಅಪಾಯದಲ್ಲಿ ಸಿಲುಕಿ ಬಿಡುತ್ತಿತ್ತು. ಆಗ ಅದರ ಹೊಣೆಯನ್ನು ಸರಕಾರವೇ ಹೊತ್ತುಕೊಳ್ಳಬೇಕಾಗುತ್ತಿತ್ತು. ಆದುದರಿಂದ ರ್ಯಾಟ್ ಹೋಲ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಕಾರ್ಮಿಕರಿಗೂ ಯೋಗ್ಯ ಗೌರವವನ್ನು ನೀಡುವುದು ಸರಕಾರದ ಕರ್ತವ್ಯವಾಗಿದೆ. ಈ ರಕ್ಷಣೆ ಕಾರ್ಯಾಚರಣೆಯಲ್ಲಿ ತಮ್ಮ ಪ್ರಾಣ ಒತ್ತೆಯಿಟ್ಟು ಭಾಗವಹಿಸಿರುವ ಕಾರ್ಮಿಕರಿಗೆ ಗರಿಷ್ಠ ಮಟ್ಟದ ಹಣವನ್ನು ನೀಡುವುದು ಮಾತ್ರವಲ್ಲ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಇವರೆಲ್ಲರೂ ದೇಶದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ಶೌರ್ಯ ಪ್ರಶಸ್ತಿಯನ್ನು ನೀಡಿ ಸನ್ಮಾನ ಮಾಡಬೇಕು. ಆಗ ಮಾತ್ರ, 41 ಕಾರ್ಮಿಕರ ರಕ್ಷಣೆಯ ಹೆಗ್ಗಳಿಕೆಯನ್ನು ಸರಕಾರ ತನ್ನದಾಗಿಸಿಕೊಳ್ಳುವ ಅರ್ಹತೆಯನ್ನು ಪಡೆಯುತ್ತ್ತದೆ.