ರೈಲ್ವೇ ಇಲಾಖೆ ಪ್ರಾಯೋಜಿತ ಕಾಲ್ತುಳಿತ

PC: x.com/Umm_e_meerann
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಬೃಹತ್ ಕುಂಭಮೇಳ, ಋಣಾತ್ಮಕ ಕಾರಣಕ್ಕಾಗಿ ಪದೇ ಪದೇ ಮಾಧ್ಯಮಗಳಲ್ಲಿ ಚರ್ಚೆಗೊಳಗಾಗುತ್ತಿರುವುದು ಅತ್ಯಂತ ವಿಷಾದನೀಯವಾಗಿದೆ. ಸುಮಾರು 143 ವರ್ಷಗಳಿಗೊಮ್ಮೆ ನಡೆಯುವ ಧಾರ್ಮಿಕ ಸಮಾವೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಕುಂಭಮೇಳ ಈ ದೇಶದ ಆಧ್ಯಾತ್ಮಿಕ ಹಿರಿಮೆಯನ್ನು ವಿಶ್ವದ ಮುಂದೆ ಪ್ರತಿನಿಧಿಸಬೇಕಾಗಿತ್ತು. ಆದರೆ ಸರಕಾರ ಈ ಸಮಾವೇಶವನ್ನು ಅತ್ಯಂತ ಕೆಟ್ಟದಾಗಿ ನಿರ್ವಹಿಸಿದ ಕಾರಣದಿಂದಾಗಿ, ಜಗತ್ತು ಕುಂಭಮೇಳದ ಕಡೆಗೆ ವಿಷಾದದಿಂದ ನೋಡುತ್ತಿದೆ. ಒಂದನೆಯದಾಗಿ, ಮೇಳದ ಹೆಸರಿನಲ್ಲಿ ಗಂಗಾನದಿಯ ಮೇಲೆ ನಡೆಯುತ್ತಿರುವ ದೌರ್ಜನ್ಯ ಅದೆಷ್ಟು ಭೀಕರವಾಗಿದೆಯೆಂದರೆ, ಮಲಿನಗೊಂಡಿರುವ ಗಂಗೆಯನ್ನು ಭವಿಷ್ಯದಲ್ಲಿ ಶುದ್ಧೀಕರಿಸುವುದೇ ಅಸಾಧ್ಯ ಎನ್ನುವ ಅನುಮಾನವನ್ನು ಪರಿಸರ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಿಗೇ ಕಳೆದ ಜನವರಿ 30ರಂದು ನಡೆದ ಭೀಕರ ಕಾಲ್ತುಳಿತವೂ ಕುಂಭಮೇಳದ ಅವ್ಯವಸ್ಥೆಯನ್ನು ಜಗತ್ತಿಗೆ ತೆರೆದಿಟ್ಟಿದೆ. ಆ ದುರಂತದ ಗಾಯ ಆರುವ ಮೊದಲೇ, ಇದೀಗ ಹೊಸದಿಲ್ಲಿಯ ರೈಲು ನಿಲ್ದಾಣದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ 18ಕ್ಕೂ ಅಧಿಕ ಯಾತ್ರಿಕರು ಮೃತಪಟ್ಟಿದ್ದಾರೆ. ‘ಕೋಟ್ಯಂತರ ಜನರು ಸೇರುವಲ್ಲಿ ಸಣ್ಣ ಪುಟ್ಚ ದುರಂತಗಳು ಸಂಭವಿಸುವುದು ಸಾಮಾನ್ಯ’ ಎಂದು ಪ್ರಯಾಗ ರಾಜ್ನ ಕಾಲ್ತುಳಿತ ದುರಂತವನ್ನು ಹಲವು ರಾಜಕೀಯ ನಾಯಕರು ಸಮರ್ಥಿಸಿಕೊಂಡಿದ್ದರು. ಆದರೆ, ಕುಂಭಮೇಳದ ಹೆಸರಿನಲ್ಲೇ, ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತವನ್ನು ಸರಕಾರ ಹೇಗೆ ಸಮರ್ಥಿಸಿಕೊಳ್ಳುತ್ತದೆ? ಅಥವಾ ಇಂತಹ ಕಾಲ್ತುಳಿತಗಳು ಕುಂಭಮೇಳದ ಹೆಗ್ಗಳಿಕೆಯೆಂದು ಸರಕಾರ ಭಾವಿಸಿದೆಯೆ? ಎಂದು ಜನರು ಶಂಕಿಸುವಂತಾಗಿದೆ.
ಶನಿವಾರ ತಡರಾತ್ರಿ ಹೊಸದಿಲ್ಲಿ ರೈಲ್ವೇ ನಿಲ್ದಾಣದಲ್ಲಿಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ತೆರಳುತ್ತಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 18 ಜನರು ಮೃತಪಟ್ಟಿದ್ದು ಹಲವಾರು ಜನರು ಗಾಯಗೊಂಡಿದ್ದಾರೆ. ಕುಂಭಮೇಳ ನಡೆಯುತ್ತಿರುವುದು ಪ್ರಯಾಗರಾಜ್ನಲ್ಲಾದರೂ, ಹೊಸದಿಲ್ಲಿಯಲ್ಲಿ ಕಾಲ್ತುಳಿತ ಹೇಗೆ ಸಂಭವಿಸಿತು? ಇದಕ್ಕೆ ಯಾರು ಕಾರಣ? ಎನ್ನುವುದಕ್ಕೆ ಪ್ರಧಾನಿಯೇ ಉತ್ತರಿಸಬೇಕು. ಹೊಸದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು, ಸರಕಾರ ರಚನೆಯ ಸಿದ್ಧತೆಯನ್ನು ಮಾಡುತ್ತಿದೆ. ಇದೇ ಹೊತ್ತಿಗೆ ಇಂತಹದೊಂದು ದುರಂತಕ್ಕೆ ದಿಲ್ಲಿ ಸಾಕ್ಷಿಯಾಗಿರುವುದು ಬಿಜೆಪಿ ಪಾಲಿಗೆ ಮುಜುಗರ ತರುವ ವಿಷಯವಾಗಿದೆ. ರೈಲ್ವೇ ಸಚಿವರು ಸಚಿವಾಲಯದಲ್ಲಿನ ವಾರ್ ರೂಮ್ನಿಂದ ನೇರ ಸಿಸಿಟಿವಿ ದೃಶ್ಯಾವಳಿಗಳ ಮೇಲೆ ನಿಗಾಯಿರಿಸಿದ್ದಾರೆ ಎಂದು ಹೇಳಿಕೊಳ್ಳುತ್ತಿರುವ ಹೊತ್ತಿಗೇ ಇಂತಹದೊಂದು ದುರಂತ ಹೇಗೆ ಸಂಭವಿಸಿತು? ಒಟ್ಟಿನಲ್ಲಿ ರೈಲೈ ಇಲಾಖೆ ಸಂಪೂರ್ಣ ಹಳಿ ತಪ್ಪಿರುವುದನ್ನು ಈ ದುರಂತ ಸ್ಪಷ್ಟಪಡಿಸಿದೆ. ರೈಲ್ವೇ ಇಲಾಖೆಯ ಬೇಜವಾಬ್ದಾರಿಯೇ ದುರಂತಕ್ಕೆ ನೇರ ಕಾರಣವಾಗಿರುವುದರಿಂದ ಸಚಿವರು ತಕ್ಷಣ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದು ಅತ್ಯಗತ್ಯವಾಗಿತ್ತು. ಆದರೆ ಸಚಿವರು ಈ ಬಗ್ಗೆ ಈವರೆಗೆ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ತಪ್ಪಿನ ಹೊಣೆ ಹೊತ್ತು ಇಲಾಖೆಗೆ ಸಂಬಂಧಿಸಿದ ಯಾವ ಮುಖ್ಯಸ್ಥರೂ ಈವರೆಗೆ ರಾಜೀನಾಮೆ ನೀಡಿಲ್ಲ. ಉನ್ನತ ಮಟ್ಟದ ಸಮಿತಿಯಿಂದ ತನಿಖೆ ನಡೆಸುವ ಭರವಸೆ ಮತ್ತು ಮೃತ ಕುಟುಂಬಗಳಿಗೆ ಪರಿಹಾರವನ್ನು ಘೋಷಿಸಿ ಸರಕಾರ ಕಾಲ್ತುಳಿತದ ಕಳಂಕವನ್ನು ತೊಳೆದುಕೊಳ್ಳಲು ಮುಂದಾಗಿದೆ.
ಕಳೆದ ಜನವರಿಯಲ್ಲಿ ಪ್ರಯಾಗರಾಜ್ನಲ್ಲಿ ಕಾಲ್ತುಳಿತ ಸಂಭವಿಸಿದಾಗ ಸರಕಾರ ತಪ್ಪನ್ನು ತಿದ್ದಿಕೊಳ್ಳುವ ಬದಲು ಮುಚ್ಚಿ ಹಾಕಲು ಯತ್ನಿಸಿತು. ತಪ್ಪಿನ ಕಾರಣಗಳನ್ನು ಹುಡುಕಿ ಸಂಬಂಧ ಪಟ್ಟವರ ಮೇಲೆ ಕಠಿಣ ಕ್ರಮ ಕೈಗೊಂಡಿದ್ದರೆ ದಿಲ್ಲಿ ದುರಂತ ಸಂಭವಿಸಲು ಸಾಧ್ಯವೇ ಇರುತ್ತಿರಲಿಲ್ಲ. ಅಂದು ಪ್ರಯಾಗ ರಾಜ್ನಲ್ಲಿ ದುರಂತ ಸಂಭವಿಸಿದ್ದು ಮುಂಜಾವು. ಆದರೆ ಅದನ್ನು ಮಧ್ಯಾಹ್ನದವರೆಗೂ ಸರಕಾರ ಮುಚ್ಚಿಟ್ಟಿತು. ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಲು ಮಾಧ್ಯಮಗಳಿಗೆ ಅವಕಾಶವನ್ನೇ ನೀಡಲಿಲ್ಲ. ಇಂದಿಗೂ ಆ ದುರಂತದಲ್ಲಿ ಸತ್ತವರ ಅಧಿಕೃತ ಅಂಕಿಸಂಖೆೆಗಳನ್ನು ಸರಕಾರ ಬಹಿರಂಗಪಡಿಸಿಲ್ಲ. ಬರೇ 30 ಮಂದಿ ಸತ್ತಿದ್ದಾರೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಆದರೆ ವಿರೋಧ ಪಕ್ಷದ ನಾಯಕರು ಮತ್ತು ಕೆಲವು ಪತ್ರಕರ್ತರು ದುರಂತದಲ್ಲಿ ನೂರಾರು ಮಂದಿ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಗಂಗಾನದಿಗೆ ಎಸೆಯಲಾಗಿದೆ ಎಂದು ಆರೋಪಿಸಿದ್ದಾರೆ. ಇಂತಹ ಗಂಭೀರ ಆರೋಪ ಕೇಳಿ ಬಂದ ಬಳಿಕವೂ ದುರಂತದ ಬಗ್ಗೆ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲು ಸರಕಾರ ಆದೇಶ ನೀಡಲಿಲ್ಲ. ಸಂಸತ್ತಿನಲ್ಲಿ ಕೇಳಿ ಬಂದ ಪ್ರಶ್ನೆಗಳಿಗೆ ಪ್ರಧಾನಿಯ ಬಳಿ ಉತ್ತರವೇ ಇರಲಿಲ್ಲ. ಇದರ ಬೆನ್ನಿಗೇ ಹೊಸದಿಲ್ಲಿಯಲ್ಲಿ ಕುಂಭಮೇಳದ ಹೆಸರಿನಲ್ಲೇ ಮತ್ತೆ ಕಾಲ್ತುಳಿತ ಸಂಭವಿಸಿದೆ.
ಕುಂಭಮೇಳವನ್ನು ಕೇಂದ್ರ ಸರಕಾರ ತನ್ನ ರಾಜಕೀಯ ಪ್ರತಿಷ್ಠೆಗೆ ಬಳಸುತ್ತಿರುವುದೇ ಎಲ್ಲ ದುರಂತಗಳಿಗೆ ಮೂಲ ಕಾರಣವಾಗಿದೆ. ಕಳೆದ ಹದಿನೈದು ದಿನಗಳಿಂದ ಕುಂಭ ಯಾತ್ರಿಗಳಿಂದ ರೈಲುಗಳಲ್ಲಿ ದಾಂಧಲೆಗಳು ನಡೆಯುತ್ತಿದ್ದರೂ ಇದರ ವಿರುದ್ಧ ಇಲಾಖೆ ಗಂಭೀರ ಕ್ರಮ ತೆಗೆದುಕೊಂಡಿಲ್ಲ. ಯಾತ್ರಿಗಳ ವಿರುದ್ಧ ಕ್ರಮ ಕೈಗೊಂಡರೆ ಅದು ರಾಜಕೀಯ ವಿಷಯವಾಗಿ ಪರಿವರ್ತನೆಗೊಳ್ಳಬಹುದು ಎನ್ನುವ ಭಯದಿಂದ ಇಲಾಖೆಯ ಅಧಿಕಾರಿಗಳು ಯಾತ್ರಿಗಳ ವೇಷದಲ್ಲಿರುವ ದುಷ್ಕರ್ಮಿಗಳ ವಿರುದ್ಧ ಮೃದು ನಿಲುವು ತಳೆಯುತ್ತಾ ಬಂದಿದ್ದಾರೆ. ರೈಲುಗಳ ಮೇಲೆ ದಾಳಿ ನಡೆಸಿರುವುದು, ಬಾಗಿಲುಗಳನ್ನು ಒದೆಯುತ್ತಿರುವುದು, ಪ್ರಯಾಣಿಕರಿಗೆ ತೊಂದರೆ ಕೊಡುತ್ತಿರುವುದು ಸೇರಿದಂತೆ ದುಷ್ಕರ್ಮಿಗಳ ಕೃತ್ಯಗಳ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದರೂ, ಕಾನೂನು ವ್ಯವಸ್ಥೆ ಕಣ್ಣಿದ್ದ್ದೂ ಕುರುಡನಂತೆ ವರ್ತಿಸುತ್ತಾ ಬಂದಿದೆ. ಕೆಲವೆಡೆ ಕಾಟಾಚಾರಕ್ಕಷ್ಟೇ ಕೆಲವರನ್ನು ಬಂಧಿಸಲಾಗಿದೆ. ರೈಲುಗಳಲ್ಲಿ ಯಾತ್ರಿಗಳು ನಡೆಸುವ ದಾಂಧಲೆಗಳನ್ನು ಸಮಾವೇಶದ ಹೆಗ್ಗಳಿಕೆಯಾಗಿ ಬಿಂಬಿಸುತ್ತಾ ಬರಲಾಗಿದೆ. ದಿಲ್ಲಿಯಲ್ಲಿ ದುರಂತಕ್ಕೆ ಕಾರಣ ಸ್ಪಷ್ಟವಿದೆ. ರೈಲ್ವೇ ಇಲಾಖೆ ನೀಡಿದ ಅನಗತ್ಯ ಪ್ರಕಟಣೆಗಳು, ಕೊನೆಯ ಕ್ಷಣದಲ್ಲಿ ವಿಶೇಷ ರೈಲುಗಳು ಸ್ಥಗಿತಗೊಂಡಿರುವುದು, ಭಾರೀ ಸಂಖ್ಯೆಯಲ್ಲಿ ಯಾತ್ರಿಗಳು ಬರುತ್ತಿದ್ದರೂ ಅವರನ್ನು ನಿಯಂತ್ರಿಸಲು ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದು, ಪ್ರಯಾಣಿಕ ರೈಲುಗಳಲ್ಲಿ ಅದರ ಸಾಮರ್ಥ್ಯಕ್ಕಿಂತ ಹಲವು ಪಟ್ಟು ಯಾತ್ರಿಗಳು ತುಂಬಲು ಅವಕಾಶ ನೀಡಿರುವುದು ಅಂತಿಮವಾಗಿ ದುರಂತದಲ್ಲಿ ಮುಕ್ತಾಯವಾಯಿತು. ಒಂದು ರೀತಿಯಲ್ಲಿ, ರೈಲ್ವೇ ಇಲಾಖೆಯೇ ಪ್ರಾಯೋಜಿಸಿದ ದುರಂತ ಇದು.
ಗಂಗೆಯಲ್ಲಿ ಮಿಂದರೆ ಪಾಪಗಳು ನಾಶವಾಗುತ್ತದೆ ಎನ್ನುವುದು ಭಾರತೀಯ ನಂಬಿಕೆ. ಆದರೆ, ಗಂಗೆಯಲ್ಲಿ ಮೀಯುವ ನೆಪದಲ್ಲೇ ನಡೆಯುತ್ತಿರುವ ಪಾಪಗಳನ್ನು ಗಂಗೆ ಅದು ಹೇಗೆ ತೊಳೆದಾಳು? ಅಮಾಯಕರ ಸಾವು ನೋವುಗಳಿಗೆ ನಾವೆಲ್ಲರೂ ಪರೋಕ್ಷ ಕಾರಣರಾಗುತ್ತಾ ಅದನ್ನೆಲ್ಲ ಗಂಗೆಯ ತಲೆಗೆ ಕಟ್ಟುತ್ತಿದ್ದೇವೆ. ಒಂದೆಡೆ ಭೌತಿಕವಾಗಿ, ಮಗದೊಂದೆಡೆ ನೈತಿಕವಾಗಿಯೂ ಆಕೆಯನ್ನು ನಾವು ಕಳಂಕಗೊಳಿಸುತ್ತಿದ್ದೇವೆ. ಪ್ರಯಾಗ ರಾಜ್ನ ನದಿಯ ನೀರಿನಲ್ಲಿ ಮಾನವ ಹಾಗೂ ಪ್ರಾಣಿಗಳ ಮಲದಲ್ಲಿ ಸಾಮಾನ್ಯವಾಗಿ ಕಂಡು ಬರುವ ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳ ಮಟ್ಟ ಅಧಿಕವಾಗಿದ್ದು ಅದು ಸ್ನಾನಕ್ಕೆ ಯೋಗ್ಯವಾಗಿಲ್ಲ ಎಂದು ಸರಕಾರದ ಅಧೀನದಲ್ಲಿರುವ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯೇ ಸೋಮವಾರ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ವರದಿ ಸಲ್ಲಿಸಿದೆ. ಜನವರಿ 12 ಮತ್ತು 13ರಂದು ಗಂಗಾನದಿಯ ನೀರಿನ ಸ್ಯಾಂಪಲನ್ನು ಪಡೆದು ಅದರ ವರದಿಯು ಇದೀಗ ಹೊರಬಿದ್ದಿದೆ. ಕುಂಭಮೇಳದಿಂದ ವಾಪಸಾದವರಲ್ಲಿ ಹಲವರಲ್ಲಿ ಭಾರೀ ಆರೋಗ್ಯ ಸಮಸ್ಯೆ ಕಂಡು ಬಂದಿರುವುದನ್ನು ಇದೇ ಸಂದರ್ಭದಲ್ಲಿ ದಿಲ್ಲಿಯ ಆಸ್ಪತ್ರೆಯ ಹಿರಿಯ ತಜ್ಞರೊಬ್ಬರು ಉಲ್ಲೇಖಿಸಿದ್ದರು. ಬರೇ ಚರಂಡಿಗಳಿಂದ ಹರಿದು ಬರುತ್ತಿರುವ ನೀರಷ್ಟೇ ಗಂಗೆಯನ್ನು ಇಷ್ಟರಮಟ್ಟಿಗೆ ಕೆಡಿಸಿಲ್ಲ. ನಮ್ಮನ್ನಾಳುವವರ ನೈತಿಕ ತಳಹದಿಯೇ ಕೆಟ್ಟು ಹೋಗಿರುವುದರಿಂದ ಗಂಗೆ ಇಂದು ಈ ಸ್ಥಿತಿಗೆ ಬಂದು ನಿಂತಿದ್ದಾಳೆ. ಪರಿಣಾಮವಾಗಿ ಕುಂಭಮೇಳ ಭಾರತದ ನೈತಿಕ ಶಕ್ತಿ, ಆಧ್ಯಾತ್ಮಿಕತೆಯನ್ನು ಜಗತ್ತಿನ ಮುಂದೆ ಎತ್ತಿ ಹಿಡಿಯುವ ಬದಲು ಇಲ್ಲಿನ ಅವ್ಯವಸ್ಥೆ, ರಾಜಕೀಯ ನಾಯಕರ ಲಾಲಸೆ, ಸ್ವಾರ್ಥ, ಭ್ರಷ್ಟತೆ, ಪರಿಸರವಾದಿಗಳ ಅಸಹಾಯಕತೆ, ಜನಸಾಮಾನ್ಯರ ಬೇಜವಾಬ್ದಾರಿತನ ಇತ್ಯಾದಿಗಳನ್ನು ಜಗತ್ತಿನ ಮುಂದಿಟ್ಟಿದೆ.