ಮಾಜಿ ನಕ್ಸಲೀಯರಿಗೆ ಪುನರ್ವಸತಿ: ಸರಕಾರ ಇದನ್ನೂ ಗಮನಿಸಬೇಕು!
ಸಾಂದರ್ಭಿಕ ಚಿತ್ರ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘‘ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿರುವವರು ಶರಣಾಗಿ ಮುಖ್ಯವಾಹಿನಿಗೆ ಬರಬೇಕು. ಶರಣಾಗತರಾದ ನಕ್ಸಲೀಯರಿಗೆ ಪುನರ್ವಸತಿ ಕಲ್ಪಿಸಲು ಸರಕಾರ ಬದ್ಧ’’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇತ್ತೀಚೆಗೆ ಕಾರ್ಕಳದಲ್ಲಿ ಶಂಕಿತ ನಕ್ಸಲೀಯ ವಿಕ್ರಮ್ ಗೌಡ ಎಂಬಾತನ ಎನ್ಕೌಂಟರ್ ಬಳಿಕ, ನಕ್ಸಲೀಯರ ಶರಣಾಗತಿಯ ಪ್ರಕ್ರಿಯೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿಂದೆ, ಸಿದ್ದರಾಮಯ್ಯ ನೇತೃತ್ವದ ಸರಕಾರದ ಅವಧಿಯಲ್ಲೇ, ಜನಪರ ವೇದಿಕೆಗಳ ಮಧ್ಯಸ್ಥಿಕೆಯ ಪರಿಣಾಮವಾಗಿ ಹಲವು ಪ್ರಮುಖ ನಕ್ಸಲ್ ಹೋರಾಟಗಾರರು ಮುಖ್ಯವಾಹಿನಿಗೆ ಕಾಲಿರಿಸಿದ್ದರು. ಇದು ರಾಜ್ಯದಲ್ಲಿ ಸಂಭವಿಸಬಹುದಾದ ಭಾರೀ ರಕ್ತಪಾತವನ್ನು ತಪ್ಪಿಸಿತು. ಇಷ್ಟಕ್ಕೂ ನಕ್ಸಲೀಯರೆಂದು ಕರೆಸಿಕೊಂಡವರು ನಮ್ಮದೇ ಊರಿನ ಮನೆ ಮಕ್ಕಳು. ಸರಕಾರದ ಜೊತೆಗಿನ ಭಿನ್ನಮತ ಉಲ್ಬಣಿಸಿ, ವ್ಯವಸ್ಥೆಯ ಬಗ್ಗೆ ಸಂಪೂರ್ಣ ನಂಬಿಕೆ ಕಳೆದುಕೊಂಡು ಉಗ್ರವಾದದ ಹಾದಿಯನ್ನು ಹಿಡಿದವರು. ಕೋವಿಯ ಮೂಲಕ ಕೊಂದು ಹಾಕಿ ಈ ಉಗ್ರವಾದವನ್ನು ಇಲ್ಲವಾಗಿಸಲು ಸಾಧ್ಯವಿಲ್ಲ. ಇವರಲ್ಲಿ ವ್ಯವಸ್ಥೆಯ ಕುರಿತಂತೆ, ಪ್ರಜಾಸತ್ತಾತ್ಮಕ ಹೋರಾಟದ ಕುರಿತಂತೆ ನಂಬಿಕೆ ಮೂಡಿಸಿ ಆ ಮೂಲಕ, ಉಗ್ರವಾದವನ್ನು ಹಂತ ಹಂತವಾಗಿ ಇಲ್ಲವಾಗಿಸಬೇಕು. ಈ ಹಿಂದೆ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ಗೌರಿಲಂಕೇಶ್, ಎ.ಕೆ. ಸುಬ್ಬಯ್ಯ ಮೊದಲಾದ ಹಿರಿಯರ ಮಧ್ಯಸ್ಥಿಕೆಯಲ್ಲಿ ಹಲವು ನಕ್ಸಲೀಯರು ಮುಖ್ಯವಾಹಿನಿಗೆ ಕಾಲಿಟ್ಟಿದ್ದು, ಇಂದು ಬೇರೆ ಬೇರೆ ಕ್ಷೇತ್ರಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ, ನಕ್ಸಲ್ ಚಳವಳಿಯ ತಳಸ್ತರದಲ್ಲಿದ್ದ ಶರಣಾಗತ ಕಾರ್ಯಕರ್ತರಿಗೆ ಪುನರ್ವಸತಿ ಮರೀಚಿಕೆಯಾಗಿದೆ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ. ಇವರಿಗೆ ನೀಡಿದ ಭರವಸೆಯನ್ನು ಸರಕಾರ ಈಡೇರಿಸಿಲ್ಲ ಮಾತ್ರವಲ್ಲ, ಶರಣಾಗತರಾದವರಲ್ಲಿ ಹಲವರು ಈಗಲೂ ಪೊಲೀಸರಿಗೆ ಹೆದರುತ್ತಾ ಬದುಕು ಸವೆಸುವ ಪರಿಸ್ಥಿತಿಯಿದೆ. ಹಾಗೆಯೇ ಸಮಾಜವೂ ಇವರನ್ನು ಪೂರ್ಣ ಪ್ರಮಾಣದಲ್ಲಿ ಸ್ವೀಕರಿಸದೇ ಇರುವುದರಿಂದ ಇವರ ಬದುಕು ಅತಂತ್ರವಾಗಿದೆ. ಆದುದರಿಂದ ಹೊಸ ಭರವಸೆಯನ್ನು ನೀಡುವ ಸಂದರ್ಭದಲ್ಲಿ ಈ ಹಿಂದೆ ನೀಡಿರುವ ಭರವಸೆ ಎಷ್ಟರಮಟ್ಟಿಗೆ ಅನುಷ್ಠಾನಗೊಂಡಿದೆ ಎನ್ನುವುದರ ಬಗ್ಗೆ ಸರಕಾರ ಅವಲೋಕನ ನಡೆಸಬೇಕು. ನಕ್ಸಲ್ ಚಳವಳಿಯ ನಾಯಕಸ್ಥಾನದಲ್ಲಿದ್ದವರು ಶರಣಾದರೆ ಅವರನ್ನು ಸರಕಾರ ಚೆನ್ನಾಗಿಯೇ ನಡೆಸಿಕೊಳ್ಳುತ್ತದೆ. ಆದರೆ ತಳಸ್ತರದ ಶರಣಾಗತ ಹುಡುಗರು ಸರಕಾರದಿಂದಲೂ ಸಮಾಜದಿಂದಲೂ ಸಂಪೂರ್ಣ ನಿರ್ಲಕ್ಷ್ಯವನ್ನು ಅನುಭವಿಸುತ್ತಾರೆ. ಶರಣಾಗತರಾದ ಬಳಿಕ ಇವರ ಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ.
ಯುವಕರೊಳಗೆ ನಕ್ಸಲ್ ಚಳವಳಿಗೆ ಧುಮುಕುವ ಅನಿವಾರ್ಯತೆಯನ್ನು ಸೃಷ್ಟಿಸಿ, ಬಳಿಕ ‘ಮುಖ್ಯವಾಹಿನಿಗೆ ಬನ್ನಿ. ಪುನರ್ವಸತಿ ಕಲ್ಪಿಸುತ್ತೇವೆ’ ಎಂದು ಭರವಸೆ ನೀಡುವುದಕ್ಕಿಂತ, ಅವರು ನಕ್ಸಲ್ ಚಳವಳಿಯಂತಹ ಉಗ್ರವಾದಿ ಹೋರಾಟಗಳಿಗೆ ಧುಮುಕದಂತೆ ನೋಡಿಕೊಳ್ಳುವುದಕ್ಕೆ ಸರಕಾರ ಆದ್ಯತೆಯನ್ನು ನೀಡಬೇಕು. ಶಸ್ತ್ರಾಸ್ತ್ರ ಕೆಳಗಿಟ್ಟು, ಪ್ರಜಾಸತ್ತಾತ್ಮಕ ಹೋರಾಟವನ್ನು ನಡೆಸಿ ಎಂದು ಕರೆ ನೀಡುವುದೇನೋ ಸರಿ. ಆದರೆ ಪ್ರಜಾಸತ್ತಾತ್ಮಕವಾಗಿ ನಡೆಯುತ್ತಿರುವ ಹೋರಾಟಗಳ ಜೊತೆಗೆ ಸರಕಾರ ಎಷ್ಟರಮಟ್ಟಿಗೆ ನ್ಯಾಯಯುತವಾಗಿ ನಡೆದುಕೊಂಡಿದೆ ಎನ್ನುವುದರ ಬಗ್ಗೆಯೂ ಆಳುವವರು ಆತ್ಮವಿಮರ್ಶೆ ನಡೆಸಬೇಕು. ಬೆಂಗಳೂರಿನ ದೇವನಹಳ್ಳಿ ಸಮೀಪ ರೈತರು ತಮ್ಮ ಜಮೀನನ್ನು ಭೂಸ್ವಾಧೀನ ಮಾಡಬಾರದು ಎಂದು ಕಳೆದ ಒಂದು ಸಾವಿರ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಸರಕಾರ ಇವರ ಕಡೆಗೆ ತಿರುಗಿಯೂ ನೋಡಿಲ್ಲ. ದಿಲ್ಲಿಯಲ್ಲಿ ರೈತರು ತಮ್ಮ ಹಕ್ಕಿಗಾಗಿ ಸುಮಾರು ಒಂದು ವರ್ಷಕ್ಕೂ ಅಧಿಕ ಕಾಲ ನಿರಂತರ ಹೋರಾಟ ನಡೆಸಿದರು. ನೂರಕ್ಕೂ ಅಧಿಕ ರೈತರು ಈ ಸಂದರ್ಭದಲ್ಲಿ ಮೃತಪಟ್ಟರು. ಇಂದಿಗೂ ಇವರ ಬೇಡಿಕೆ ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ. ಈಗಲೂ ಅವರು ಬೀದಿಯಲ್ಲೇ ಇದ್ದಾರೆ. ಪೊಲೀಸ್ ಲಾಠಿ ಚಾರ್ಜ್ಗಳನ್ನು ಎದುರಿಸುತ್ತಾ, ಪ್ರಜಾಸತ್ತಾತ್ಮಕ ಹೋರಾಟಗಳನ್ನು ಮುಂದುವರಿಸಿದ್ದಾರೆ. ರಾಜ್ಯದಲ್ಲಿ ಇಂತಹ ಹೋರಾಟಗಳು ಅದೆಷ್ಟೋ ನಡೆದಿವೆ ಮತ್ತು ನಡೆಯುತ್ತಿವೆ. ಬಹುತೇಕ ಪ್ರಜಾಸತ್ತಾತ್ಮಕ ಹೋರಾಟಗಳೆಲ್ಲ ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಅಷ್ಟೇ ಅಲ್ಲ, ಈ ಹೋರಾಟವನ್ನು ಸಂಘಟಿಸಿದ ರೈತ, ಕಾರ್ಮಿಕ ನಾಯಕರ ಮೇಲೆ ಪ್ರಕರಣಗಳನ್ನು ದಾಖಲಿಸಿ ಅವರನ್ನು ಪೊಲೀಸ್ ಠಾಣೆಗೆ ಅಲೆಯುವಂತೆ ಮಾಡಿ ಮಾನಸಿಕ ಚಿತ್ರಹಿಂಸೆ ನೀಡಲಾಗುತ್ತಿದೆ. ಇತ್ತೀಚೆಗೆ ಪೊಲೀಸ್ ಎನ್ಕೌಂಟರ್ನಲ್ಲಿ ಮೃತನಾದ ವಿಕ್ರಮ್ ಗೌಡ ಸೇರಿದಂತೆ ಆತನ ಹಲವು ಸಹಚರರು ಆರಂಭದಲ್ಲಿ ತಮ್ಮ ಹಕ್ಕಿಗಾಗಿ ಪ್ರಜಾಸತ್ತಾತ್ಮಕ ದಾರಿಯಲ್ಲೇ ಹೋರಾಟವನ್ನು ನಡೆಸಿದವರು. ಆದರೆ ಪೊಲೀಸರು, ಅರಣ್ಯಾಧಿಕಾರಿಗಳು ಬೇಟೆನಾಯಿಗಳಂತೆ ಇವರ ಹಿಂದೆ ಬಿದ್ದರು. ಪೊಲೀಸರ ಕಾಟ ತೀವ್ರವಾದಾಗ ತಲೆಮರೆಸಿಕೊಳ್ಳುವುದು ಇವರಿಗೆ ಅನಿವಾರ್ಯವಾಯಿತು.
ಪಶ್ಚಿಮಘಟ್ಟದಲ್ಲಿ ಆದಿವಾಸಿಗಳ ಒಕ್ಕಲೆಬ್ಬಿಸುವಿಕೆ ತೀವ್ರವಾದಾಗ ಸ್ಥಳೀಯ ಸಂಘಟನೆಗಳು ಆರಂಭದಲ್ಲಿ ಪ್ರಜಾಸತ್ತಾತ್ಮಕವಾದ ಹೋರಾಟಗಳನ್ನು ನಡೆಸಿದ್ದವು ಮತ್ತು ಆ ಹೋರಾಟಗಳನ್ನೆಲ್ಲ ಸರಕಾರವೇ ಬಗ್ಗು ಬಡಿಯಿತು. ಸ್ಥಳೀಯ ಜನರ ಎಲ್ಲ ಅಹವಾಲುಗಳನ್ನು ಸರಕಾರ ನಿರ್ಲಕ್ಷಿಸಿತು. ಆದರೆ ಅಲ್ಲಿ ಯಾವಾಗ ನಕ್ಸಲೀಯರು ತಲೆಯೆತ್ತಿದರೋ, ಅಲ್ಲಿಂದ ಏಕಾಏಕಿ ನಕ್ಸಲ್ ಪೀಡಿತ ಪ್ರದೇಶವೆಂದು ಘೋಷಿಸಿ ಅಲ್ಲಿನ ಮೂಲಭೂತ ಸೌಕರ್ಯದ ಕಡೆಗೆ ಗಮನ ಹರಿಸಿತು. ಕಾರ್ಕಳ, ಬೆಳ್ತಂಗಡಿ, ಚಿಕ್ಕಮಗಳೂರುಗಳ ಕೆಲವು ಕುಗ್ರಾಮಗಳು ನಾಗರಿಕ ಜಗತ್ತಿಗೆ ಪರಿಚಯವಾದದ್ದೇ ನಕ್ಸಲೀಯರ ಎನ್ಕೌಂಟರ್ಗಳು ನಡೆದ ಬಳಿಕ. ಜಿಲ್ಲಾಧಿಕಾರಿಗಳು ಈ ಭಾಗದ ಜನರನ್ನು ಭೇಟಿ ಮಾಡಿ ಅವರ ಸುಖಕಷ್ಟಗಳ ಬಗ್ಗೆ ವಿಚಾರಿಸತೊಡಗಿದ್ದು ಕೂಡ ಈ ಭಾಗದಲ್ಲಿ ನಕ್ಸಲೀಯರು ತಲೆಯೆತ್ತಿದ ಬಳಿಕ. ಈಗಲೂ ರಸ್ತೆ, ವಿದ್ಯುತ್ ಮೊದಲಾದ ಮೂಲಭೂತ ಸೌಕರ್ಯಗಳಿಲ್ಲದ ಗ್ರಾಮಗಳು ಈ ಭಾಗದಲ್ಲಿವೆ. ಇಂತಹ ಪ್ರದೇಶಗಳಿಂದಲೇ ಹೆಚ್ಚು ಜನರು ನಕ್ಸಲ್ ಚಳವಳಿಗೆ ಧುಮುಕಿದ್ದಾರೆ. ಇದೀಗ ಶರಣಾಗತರಾಗಲು ಸಿದ್ಧರಿರುವ ಹೆಚ್ಚಿನವರೂ ಈ ಭಾಗಕ್ಕೆ ಸೇರಿದವರು. ಅವರೇನು ಹೆಚ್ಚು ಕಲಿತವರಲ್ಲ. ಕೂಲಿ ಕೆಲಸಗಳನ್ನು ಮಾಡುತ್ತಾ ಬದುಕುತ್ತಿದ್ದವರು ಏಕಾಏಕಿ ಪ್ರಜಾಸತ್ತೆಯ ಮೇಲೆ ನಂಬಿಕೆ ಕಳೆದುಕೊಂಡು ಹಿಂಸಾತ್ಮಕ ಚಳವಳಿಗೆ ಧುಮುಕಿದರು. ಶರಣಾಗತರಾಗುವ ನಕ್ಸಲೀಯರಿಗೆ ಪುನರ್ವಸತಿ ಕಲ್ಪಿಸಿ ಕೊಟ್ಟು ಅವರಲ್ಲಿ ನಂಬಿಕೆಯನ್ನು ತುಂಬಿಸುವುದಷ್ಟೇ ಅಲ್ಲದೆ, ಈಗಾಗಲೇ ಪ್ರಜಾಸತ್ತಾತ್ಮಕವಾಗಿ ನಡೆಸುತ್ತಿರುವ ಹೋರಾಟಗಳನ್ನು ಗೌರವಿಸುವ ಮೂಲಕ ಸರಕಾರ ಉಗ್ರವಾದವನ್ನು ವಿಫಲಗೊಳಿಸಬೇಕಾಗಿದೆ. ಹಾಗೆಯೇ, ಎಲ್ಲೆಲ್ಲ ನಕ್ಸಲ್ ಪ್ರಭಾವಗಳಿವೆಯೋ ಅಂತಹ ಪ್ರದೇಶಗಳನ್ನು ಗುರುತಿಸಿ ಅಲ್ಲಿನ ಮೂಲಭೂತ ಸೌಕರ್ಯಗಳಿಗೆ ಸರಕಾರ ಆದ್ಯತೆಯನ್ನು ನೀಡಬೇಕು. ಹಾಗೆಯೇ ಸರಕಾರದ ಮೇಲೆ ನಂಬಿಕೆಯಿಟ್ಟು ಮುಖ್ಯವಾಹಿನಿಗೆ ಬಂದಿರುವ ತಳಸ್ತರಕ್ಕೆ ಸೇರಿದ ಮಾಜಿ ನಕ್ಸಲೀಯರ ಸ್ಥಿತಿಗತಿಯ ಬಗ್ಗೆ ಒಂದು ಅಧ್ಯಯನ ನಡೆಸಿ, ಅವರ ಬದುಕನ್ನು ಮೇಲೆತ್ತಲು ಸರಕಾರ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಹಾಗೆಯೇ ಸರಕಾರದಿಂದ ಪದೇ ಪದೇ ಅನ್ಯಾಯಕ್ಕೊಳಗಾಗುತ್ತಿದ್ದರೂ ಪ್ರಜಾಸತ್ತೆಯ ಮೇಲೆ ನಂಬಿಕೆ ಉಳಿಸಿಕೊಂಡು, ಯಾವ ಕಾರಣಕ್ಕೂ ಉಗ್ರವಾದವನ್ನು ತುಳಿಯದ ಭೂಮಿ, ಮನೆ ಇಲ್ಲದ ದಿನಗೂಲಿ ಕಾರ್ಮಿಕರು, ಈ ನೆಲದಲ್ಲಿದ್ದಾರೆ. ಅವರಿಗೆ ಪುನರ್ವಸತಿ ಕಲ್ಪಿಸಬೇಕಾದರೆ ‘ಮಾಜಿ ನಕ್ಸಲೀಯರು’ ಎಂದು ಗುರುತಿಸಲ್ಪಡುವುದು ಅವರಿಗೆ ಅನಿವಾರ್ಯವಾಗಿಸಬಾರದು. ಅದಕ್ಕೆ ಮೊದಲೇ ಅವರ ಅಭಿವೃದ್ಧಿಯ ಬಗ್ಗೆಯೂ ಸರಕಾರ ಕಾರ್ಯಕ್ರಮಗಳನ್ನು ಹಾಕಿ, ಅವರನ್ನು ಮುಖ್ಯವಾಹಿನಿಯಲ್ಲಿ ಉಳಿಸಿಕೊಳ್ಳಬೇಕು.