ಜಾತಿಗಣತಿಗೆ ವಿರೋಧವೆಂದರೆ ಜಾತಿ ಅಸಮಾನತೆಗೆ ಬೆಂಬಲ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೊನೆಗೂ ಜಾತಿಗಣತಿಯ ಪಂಡೋರಾ ಪೆಟ್ಟಿಗೆಯನ್ನು ತೆರೆದು ನೋಡುವ ಧೈರ್ಯವನ್ನು ಪ್ರದರ್ಶಿಸಿದೆ ರಾಜ್ಯ ಸರಕಾರ. ಎಪ್ರಿಲ್ 17ರಂದು ಜಾತಿ ಗಣತಿ ವರದಿಯ ಅನುಷ್ಠಾನದ ರೂಪುರೇಷೆಗಾಗಿ ವಿಶೇಷ ಸಂಪುಟ ಸಭೆಯನ್ನು ಕರೆದಿದೆ. ವರದಿ ಮಂಡನೆಯನ್ನು ಮುಂದೆ ಹಾಕುತ್ತಾ ಹೋಗುವುದರಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ ಎನ್ನುವುದು ಸರಕಾರಕ್ಕೆ ಕೊನೆಗೂ ಅರ್ಥವಾದಂತಿದೆ. ಸರಕಾರ ಜಾತಿಗಣತಿಯನ್ನು ಮಂಡಿಸಿ, ಆ ಬಗ್ಗೆ ಚರ್ಚಿಸಲು ಮುಂದಾಗುತ್ತಿದ್ದಂತೆಯೇ ಜಾತಿಗಣತಿ ವಿರೋಧಿ ಶಕ್ತಿಗಳು ಎಚ್ಚೆತ್ತುಕೊಂಡಿವೆ. ಬಿಜೆಪಿಯ ನಾಯಕರು ಮೊಸರಲ್ಲಿ ಕಲ್ಲು ಹುಡುಕುವುದಕ್ಕೆ ಶುರು ಹಚ್ಚಿದ್ದಾರೆ. ಒಬ್ಬ ನಾಯಕರು ‘ಜಾತಿ ಗಣತಿ ವೈಜ್ಞಾನಿಕವಾಗಿಲ್ಲ’ ಎಂದು ಹೇಳಿಕೆ ಕೊಟ್ಟರೆ, ಇನ್ನೊಬ್ಬರು ‘ಮುಸ್ಲಿಮರನ್ನು ಓಲೈಸುವುದಕ್ಕಾಗಿ ಜಾತಿಗಣತಿ ವರದಿಯನ್ನು ಸಿದ್ಧಪಡಿಸಲಾಗಿದೆ’ ಎಂದು ಹೇಳುತ್ತಿದ್ದಾರೆ. ಮತ್ತೊಬ್ಬರು ‘ಜಾತಿಗಣತಿ ಸೋರಿಕೆಯಾಗಿದೆ’ ಎಂದು ಹೇಳುತ್ತಿದ್ದಾರೆ. ‘ಜಾತಿಗಣತಿಯಿಂದ ಒಕ್ಕಲಿಗರನ್ನು ಮತ್ತು ಲಿಂಗಾಯತರನ್ನು ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಮಗದೊಬ್ಬ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಇದರ ಬೆನ್ನಿಗೇ ಕೆಲವು ಮಾಧ್ಯಮಗಳು ‘ಸೋರಿಕೆಯಾಗಿರುವ ಜಾತಿಗಣತಿಯ ಅಂಕಿಅಂಶಗಳನ್ನು’ ಬಿಡುಗಡೆ ಮಾಡಿ, ಹೇಗೆ ಗಣತಿ ಮುಸ್ಲಿಮರ ಪರವಾಗಿದೆ ಎನ್ನುವುದನ್ನು ಹೇಳಲು ಪ್ರಯತ್ನಿಸಿವೆ. ಇವರಾರಿಗೂ ಜಾತಿ ಗಣತಿ ವರದಿ ಜಾರಿಯಾಗುವುದು ಬೇಕಾಗಿಲ್ಲ. ಯಾಕೆಂದರೆ, ಜಾತಿ ಅಸಮಾನತೆ ಈ ನೆಲದ ಹೆಗ್ಗಳಿಕೆಯೆಂದು ಇವರೆಲ್ಲರೂ ಬಲವಾಗಿ ನಂಬಿದವರು. ಸಮಾಜದಲ್ಲಿ ಜಾತಿ ಬೇಕು. ಆದರೆ ಅದರ ಒಳಗಿನ ಹುಳುಕುಗಳು ಹೊರಗೆ ಬರಬಾರದು. ಅಂದರೆ, ಅವರಿಗೆ ಬೇಡವಾಗಿರುವುದು ಜಾತಿಗಣತಿ ವರದಿಯಲ್ಲ. ಶೋಷಿತ ಜಾತಿಗಳು ಅಭಿವೃದ್ಧಿಯಾಗುವುದು ಅವರಿಗೆ ಬೇಡವಾಗಿದೆ. ಅದನ್ನು ನೇರವಾಗಿ ಹೇಳಲು ಸಮಸ್ಯೆಗಳಿರುವುದರಿಂದ ಅವರು ಜಾತಿಗಣತಿ ವರದಿ ಜಾರಿಗೊಳ್ಳದಂತೆ ತಡೆಯಲು ಯತ್ನಿಸುತ್ತಿದ್ದಾರೆ.
‘‘ಸಮೀಕ್ಷೆ ವೈಜ್ಞಾನಿಕವಾಗಿ ನಡೆದಿಲ್ಲ’’ ಎಂದು ಬಿಜೆಪಿ ಆರೋಪಿಸುತ್ತಿದೆ. ಸಮೀಕ್ಷೆಯ ಯಾವುದೇ ವಿವರಗಳನ್ನು ಸರಕಾರ ಈವರೆಗೆ ಬಿಡುಗಡೆ ಮಾಡದೇ ಇರುವಾಗ, ಯಾವ ಆಧಾರದಲ್ಲಿ ಸಮೀಕ್ಷೆ ಅವೈಜ್ಞಾನಿಕವಾಗಿದೆ ಎಂದು ಬಿಜೆಪಿ ಹೇಳುತ್ತಿದೆ? ವೈಜ್ಞಾನಿಕವಾಗಿ ನಡೆದಿಲ್ಲ ಎನ್ನುವುದಕ್ಕೆ ಬೇಕಾದ ಆಧಾರಗಳನ್ನು ಬಿಜೆಪಿ ಈವರೆಗೆ ನೀಡಿಲ್ಲ. ಸಮೀಕ್ಷೆ ಪೂರ್ತಿಯಾದ ದಿನದಿಂದ ಬಿಜೆಪಿ ನಾಯಕರು ‘ಗಾಳಿಯಲ್ಲಿ ಗುಂಡು’ ಹಾರಿಸುತ್ತಿದ್ದಾರೆ. ಜಾತಿ ಗಣತಿ ವರದಿಯ ಮೂಲಕ, ಹಿಂದೂ ಸಮಾಜವನ್ನು ಒಡೆಯುವ ಪ್ರಯತ್ನವನ್ನು ಸರಕಾರ ಮಾಡುತ್ತಿದೆ ಎಂದು ಕೆಲವು ನಾಯಕರು ಆರೋಪಿಸುತ್ತಿದ್ದಾರೆ. ಇವರ ಮಾತುಗಳನ್ನು ಕೇಳುತ್ತಿದ್ದರೆ, ಕಾಂತರಾಜು ಆಯೋಗವೇ ಮನೆ ಮನೆಗೆ ತೆರಳಿ ಅವರಿಗೆ ಜಾತಿ ಗುರುತನ್ನು ನೀಡಿತೋ ಎಂದು ಭಾವಿಸುವಂತಾಗಿದೆ. ಈ ದೇಶದಲ್ಲಿ ನೂರಾರು ಜಾತಿಗಳನ್ನು ಮಾಡಿ ಹಿಂದೂ ಸಮಾಜವನ್ನು ನಿಜಕ್ಕೂ ಒಡೆದವರು ಯಾರು? ಮೊಗಲರು, ಬ್ರಿಟಿಷರು ಈ ದೇಶಕ್ಕೆ ಕಾಲಿಡುವ ಮೊದಲೇ ಈ ದೇಶ ಸಾವಿರಾರು ಜಾತಿಗಳಿಂದ ಒಡೆದು ವಿಚ್ಛಿದ್ರವಾಗಿತ್ತು. ಅಷ್ಟೇ ಅಲ್ಲ, ತಮ್ಮ ಜಾತಿ ಕಾರಣಗಳಿಂದಲೇ ಸಾಮಾಜಿಕವಾಗಿ ನೂರಾರು ಸಮುದಾಯಗಳು ಹಿಂದುಳಿದಿದ್ದವು. ಶಿಕ್ಷಣ, ಆರೋಗ್ಯ, ಆಹಾರ, ಭೂಮಿ ಮೊದಲಾದ ಹಕ್ಕಿನಿಂದ ಅವರು ವಂಚಿತರಾಗಿದ್ದರು. ಇದೀಗ ಆರೆಸ್ಸೆಸ್‌ನವರು ಹಿಂದೂ ಸಮಾಜ ಎಂದು ಕರೆಯುತ್ತಿರುವುದೇ ಈ ದೇಶದ ಸಾವಿರಾರು ಜಾತಿಗಳ ಸಂಘಟಿತ ಘಟಕಗಳನ್ನು. ಈ ಜಾತಿಗಳು ಏಳಿಗೆಯಾದರೆ ಬಿಜೆಪಿ ಹೇಳುವ ಅದೇ ಹಿಂದೂ ಸಮಾಜ ಏಳಿಗೆಯಾಗುತ್ತದೆ. ಸರಕಾರದ ಸವಲತ್ತುಗಳನ್ನು ಎಲ್ಲ ಶೋಷಿತ ಸಮುದಾಯಕ್ಕೂ ಸಮಾನವಾಗಿ ಹಂಚಿ ಅವುಗಳನ್ನು ತಳಸ್ತರದಿಂದ ಮೇಲೆತ್ತ ಬೇಕಾದರೆ ಈ ದೇಶದ ಜಾತಿಗಳ ಜನಸಂಖ್ಯೆ, ಅವುಗಳ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳು ಬಹಿರಂಗವಾಗಬೇಕು. ಅದಕ್ಕಾಗಿಯೇ ಜಾತಿಗಣತಿಯನ್ನು ಮಾಡಲಾಗಿದೆ. ಜಾತಿಗಣತಿ ವರದಿ ಜಾರಿಯಾದರೆ ಅದರ ಆಧಾರದಲ್ಲಿ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸರಕಾರಕ್ಕೆ ಅನುಕೂಲವಾಗುತ್ತದೆ. ಮೀಸಲಾತಿ ಅರ್ಥಪೂರ್ಣವಾಗಿ ಅನುಷ್ಠಾನವಾಗುತ್ತದೆ. ಆದರೆ ಹಿಂದೂ ಸಮಾಜ ತಳಸ್ತರದಿಂದ ಅಭಿವೃದ್ಧಿಯಾಗುವುದು ಬಿಜೆಪಿ ಮತ್ತು ಆರೆಸ್ಸೆಸ್‌ಗೆ ಬೇಕಾಗಿಲ್ಲ.
ರಾಜ್ಯ ಸರಕಾರಕ್ಕೆ ಜಾತಿಗಣತಿ ವರದಿ ಜಾರಿಗೊಳಿಸಲು ನೇರವಾಗಿ ಸಮಸ್ಯೆಯಾಗಿರುವುದು ಬಿಜೆಪಿಯಲ್ಲ. ವರದಿಯ ವಿರುದ್ಧ ಬಿಜೆಪಿ ನೇರ ಹೋರಾಟವನ್ನು ಮಾಡದೆ, ಅಡ್ಡದಾರಿಯನ್ನು ಹಿಡಿದಿದೆ. ಅದು ಮೇಲ್‌ಜಾತಿಯ ವಿವಿಧ ಸಂಘಟನೆಗಳು ಮತ್ತು ಅವುಗಳ ಮುಖಂಡರನ್ನು ದಾರಿ ತಪ್ಪಿಸುತ್ತಿದೆ. ಜಾತಿ ಸಂಘಟನೆಗಳನ್ನು ಹೈಜಾಕ್ ಮಾಡಿ ಅವುಗಳ ಮುಖಂಡರೊಳಗೆ ತಪ್ಪು ಮಾಹಿತಿಗಳನ್ನು ಬಿತ್ತುವಲ್ಲಿ ಭಾಗಶಃ ಯಶಸ್ವಿಯಾಗಿದೆೆ. ಪರಿಣಾಮವಾಗಿ ವೀರಶೈವ ಲಿಂಗಾಯತ, ಒಕ್ಕಲಿಗ ಸಂಘಟನೆಗಳು ಜಾತಿ ಗಣತಿ ಜಾರಿಗೊಳ್ಳುವುದರ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸುತ್ತಿವೆ. ಈಗಾಗಲೇ, ಎರಡೂ ಜಾತಿಗಳ ಸಂಘಟನೆಗಳ ಮುಖಂಡರು ‘ಜಾತಿ ಗಣತಿ’ಯ ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ. ಈ ಸಂಘಟನೆಗಳ ನಾಯಕರು ಕಾಂಗ್ರೆಸ್‌ನಲ್ಲೂ ಇದ್ದಾರೆ. ಜಾತಿಗಣತಿಯ ಕುರಿತಂತೆ ಸರಕಾರ ಮೊದಲು ತನ್ನ ಪಕ್ಷದೊಳಗಿರುವ ಮೇಲ್‌ಜಾತಿಯ ನಾಯಕರನ್ನು ಸಾಕ್ಷರರನ್ನಾಗಿ ಮಾಡುವ ಅಗತ್ಯವಿತ್ತು. ಆದರೆ ಅದರಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿರುವುದರಿಂದ, ಪಕ್ಷದೊಳಗಿರುವ ಒಕ್ಕಲಿಗ, ಲಿಂಗಾಯತ ನಾಯಕರೇ ಬಿಜೆಪಿ ತೋಡಿರುವ ಖೆಡ್ಡಾಕ್ಕೆ ಬಿದ್ದಿದ್ದಾರೆ. ತಮ್ಮ ಜಾತಿಯ ಜನರ ಬೆಂಬಲವನ್ನು ಕಳೆದುಕೊಳ್ಳುವ ಭಯದಿಂದ ಅವರು, ಜಾತಿಗಣತಿ ವರದಿಗಳ ಬಗ್ಗೆ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಸರಕಾರ ಮೊದಲು, ತನ್ನ ಪಕ್ಷವನ್ನು ಗೆದ್ದು, ಬಳಿಕ ವಿರೋಧ ಪಕ್ಷವಾಗಿರುವ ಬಿಜೆಪಿಯನ್ನು ಗೆಲ್ಲಬೇಕಾಗಿದೆ. ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಸಂಪುಟದಲ್ಲಿ ಜಾತಿಗಣತಿ ಜಾರಿಯ ಬಗ್ಗೆ ಯಾವುದೇ ಆತುರದ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ವರದಿಯ ಅಧ್ಯಯನಕ್ಕಾಗಿ ವೀರಶೈವ ಸಂಘಟನೆಯ ನಾಯಕರು ಪ್ರತ್ಯೇಕ ಸಮಿತಿಯೊಂದನ್ನು ರಚಿಸಿದ್ದಾರೆ. ವರದಿ ಜಾರಿಗೊಂಡರೆ, ಈ ಜಾತಿ ಸಂಘಟನೆಗಳನ್ನು ಬಳಸಿಕೊಂಡೇ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದರಲ್ಲಿ ಅನುಮಾನವಿಲ್ಲ.
ಇದೇ ಸಂದರ್ಭದಲ್ಲಿ, ಕೆಲವು ಮಾಧ್ಯಮಗಳು ಸೋರಿಕೆಯಾದ ವರದಿ ಎನ್ನುತ್ತಾ ಕೆಲವು ಅಂಕಿ ಅಂಶಗಳನ್ನು ಮುಂದಿಟ್ಟಿವೆ. ಮಾಧ್ಯಮಗಳೇ ನೀಡಿರುವ ಅಂಕಿಅಂಶಗಳ ಪ್ರಕಾರ ಈ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಜನರು ಒಂದು ಕೋಟಿಯಷ್ಟಿದ್ದಾರೆ. ಇದು ಮಾಧ್ಯಮದೊಳಗಿರುವ ಬ್ರಾಹ್ಮಣ್ಯ ಶಕ್ತಿಗಳಿಗೆ ಇರುಸುಮುರಿಸುಂಟು ಮಾಡಿದಂತಿದೆ. ಆದುದರಿಂದ ಅದನ್ನು ಮುಚ್ಚಿ ಹಾಕಲು ‘ಮುಸ್ಲಿಮ್ ಗುಮ್ಮ’ವನ್ನು ಮುಂದಿಟ್ಟಿದ್ದಾರೆ. ತಾವೇ ಪ್ರಕಟಿಸಿದ ಅಂಕಿಅಂಶ ದಲಿತರು ಈ ರಾಜ್ಯದಲ್ಲಿ ಅತಿ ದೊಡ್ಡ ಜನಸಂಖ್ಯೆಯಾಗಿದ್ದಾರೆ ಎನ್ನುವುದನ್ನು ಹೇಳುತ್ತಿದ್ದರೂ ‘ಮುಸ್ಲಿವರು ನಂ. 1’ ಎಂದು ದಾರಿ ತಪ್ಪಿಸುತ್ತಿದ್ದಾರೆ. ಇವೆಲ್ಲವೂ, ಜಾತಿ ಗಣತಿ ವರದಿಯ ವಿರುದ್ಧ ಜನರನ್ನು ಪ್ರಚೋದಿಸಲು ಮಾಧ್ಯಮಗಳು ನಡೆಸುತ್ತಿರುವ ಸಂಚು ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿ ಬಿಡುತ್ತದೆ. ಇಂದು ಈ ರಾಜ್ಯ ಯಾಕೆ ಹಿಂದುಳಿದಿದೆಯೆಂದರೆ, ಇಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ಜಾತಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಅತ್ಯಂತ ಹಿಂದುಳಿದಿದೆ. ಅವರು ಮುಂದೆ ಬರುವುದನ್ನು ಇಷ್ಟಪಡದ ಶಕ್ತಿಗಳು ಜಾತಿಗಣತಿ ವರದಿಯ ವಿರುದ್ಧ ಸಂಘಟಿತವಾಗಿ ನಿಂತಿದೆ. ‘ಸಮೀಕ್ಷೆಯೇ ಸರಿಯಿಲ್ಲ’ ಎಂದು ಹೇಳುತ್ತಿರುವ ಜನರು ಕೂಡ, ಭವಿಷ್ಯದಲ್ಲಿ ಯಾವುದೇ ಹೊಸ ವರದಿಯನ್ನು ಒಪ್ಪಲಾರರು. ಯಾಕೆಂದರೆ ಅವರಿಗೆ ಈ ನಾಡಿನಲ್ಲಿ ಜಾತಿ ಅಸಮಾನತೆ ಶಾಶ್ವತವಾಗಿ ಉಳಿಯಬೇಕಾಗಿದೆ. ಕಾಂಗ್ರೆಸ್ ಪಕ್ಷ ತನ್ನ ಒಳಗಿರುವ ನಾಯಕರಿಗೆ ಜಾತಿಗಣತಿಯ ಮಹತ್ವವನ್ನು ಮನವರಿಕೆ ಮಾಡಿಸಲು ಯಶಸ್ವಿಯಾದಾಗ ಮಾತ್ರ, ಬಿಜೆಪಿಯ ಸಂಚುಗಳನ್ನು ವಿಫಲವಾಗಿಸುವ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಇಲ್ಲವಾದರೆ, ಎಪ್ರಿಲ್ 17ರಂದು ನಡೆಯುವ ಸಂಪುಟ ಸಭೆಗೆ, ಡಿ.ಕೆ. ಶಿವಕುಮಾರ್ ಹೇಳುವಂತೆ ಜಾತಿಗಣತಿಯ ಬಗ್ಗೆ ಯಾವುದೇ ನಿರ್ಧಾರಗಳನ್ನು ತೆಗೆದು ಕೊಳ್ಳಲು ಸಾಧ್ಯವಾಗುವುದಿಲ್ಲ.