ಕಪ್ಪತ ಗುಡ್ಡವನ್ನು ಕಾಪಾಡಿ
PC: google.com/maps
ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ನಾಡಿನ ಅಮೂಲ್ಯ ಸಂಪತ್ತನ್ನು ಕೊಳ್ಳೆ ಹೊಡೆಯುವುದು ಈಗ ಸಾಮಾನ್ಯವಾಗಿದೆ. ಮುಂದಿನ ನೂರಾರು ತಲೆಮಾರುಗಳಿಗೆ ಅಗತ್ಯವಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಈಗಲೇ ದೋಚಿ ತಮ್ಮ ತಿಜೋರಿಯನ್ನು ತುಂಬಿಕೊಳ್ಳುವುದಕ್ಕೆ ಇನ್ನೊಂದು ಹೆಸರು ಗಣಿಗಾರಿಕೆ. ರಾಜ್ಯದಲ್ಲಿ ಹಿಂದೆ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರಕಾರವಿದ್ದಾಗ ಬಳ್ಳಾರಿ, ಸಂಡೂರುಗಳ ಅದಿರುಗಳನ್ನು ಲೂಟಿ ಮಾಡಿದವರು ಯಾರೆಂಬುದು ಎಲ್ಲರಿಗೂ ಗೊತ್ತಿದೆ. ಆ ಹಣದಿಂದಲೇ ಕೆಲವರು ರಾಜಕೀಯ ಸೇರಿ ತಮ್ಮ ಅಕ್ರಮ ವ್ಯವಹಾರಗಳನ್ನು ಕಾಪಾಡಿಕೊಂಡರು.
ಸದಾ ರಾಷ್ಟ್ರೀಯತೆಯ ಬಗ್ಗೆ ಮಾತಾಡುವ ಹಾಗೂ ಭಾರತ ಮಾತೆಯೆಂದು ನಾಟಕ ಮಾಡುವ ಬಿಜೆಪಿ ಈ ಗಣಿ ಲೂಟಿಕೋರರನ್ನು ರಕ್ಷಿಸುತ್ತಾ ಬಂತು. ಕೇಂದ್ರ ಮಂತ್ರಿಯೂ ಆಗಿದ್ದ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಇಂತಹವರನ್ನು ತನ್ನ ಮಕ್ಕಳೆಂದು ಕರೆದು ಆಶೀರ್ವಾದ ಮಾಡಿದರು. ಇದರ ಪರಿಣಾಮವಾಗಿ ಬಳ್ಳಾರಿ ಮಾತ್ರವಲ್ಲ ಅಕ್ಕಪಕ್ಕದ ಊರುಗಳು ಗಣಿ ಧೂಳಿನಿಂದ ತತ್ತರಿಸಿ ಹೋದವು.
ದುಡ್ಡಿನ ಚೀಲ ಹಿಡಿದು ಎಲ್ಲರನ್ನೂ ಖರೀದಿ ಮಾಡುತ್ತಿದ್ದ ಇವರನ್ನು ಬಗ್ಗು ಬಡಿಯಲು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಿದ್ದು ಹಾಗೂ ಪರಿಸರವಾದಿ ಎಸ್.ಆರ್. ಹಿರೇಮಠರು ಸುಪ್ರೀಂ ಕೋರ್ಟ್ವರೆಗೆ ಹೋಗಿ ನ್ಯಾಯಾಂಗ ಸಮರ ನಡೆಸಿದ ಪರಿಣಾಮ ಗಣಿಗಾರಿಕೆಗೆ ಕಾರಣರಾದವರು ಜೈಲು ಸೇರಬೇಕಾಯಿತು. ಈಗ ಮತ್ತೆ ಗಣಿಗಾರಿಕೆಗೆ ಚಾಲನೆ ನೀಡಲು ಮಸಲತ್ತು ನಡೆಯುತ್ತಿದೆ. ಅದು ಮಾತ್ರವಲ್ಲ ಗದಗ ಸಮೀಪದ ಅತ್ಯಂತ ಅಮೂಲ್ಯ ತಾಣವಾದ ಕಪ್ಪತ ಗುಡ್ಡದಲ್ಲಿ ಗಣಿಗಾರಿಕೆ ನಡೆಸುವ ಹುನ್ನಾರಗಳು ನಡೆದಿವೆ.
ಈ ಕಪ್ಪತ ಗುಡ್ಡದಲ್ಲಿ ಅಮೂಲ್ಯವಾದ ಔಷಧೀಯ ಸಸ್ಯಗಳಿವೆ. ಈ ಗುಡ್ಡದ ಒಡಲಲ್ಲಿ ಅಪಾರ ಖನಿಜ ಸಂಪತ್ತಿದೆ. ಗದಗ ಜಿಲ್ಲೆಯ ಈ ಕಪ್ಪತ ಗುಡ್ಡವನ್ನು ಹಿಂದೆ ಸಂರಕ್ಷಿತ ಪ್ರದೇಶ ಎಂದು ರಾಜ್ಯದ ಅರಣ್ಯ ಮತ್ತು ಜೀವ ವಿಜ್ಞಾನ ಇಲಾಖೆ ಗುರುತಿಸಿತ್ತು. ಆದರೆ ಗಣಿ ಲಾಬಿಗಳ ಒತ್ತಡದಿಂದಾಗಿ ಹಿಂದೆ ಪಡೆದಿತ್ತು. ಈಗ ಮತ್ತೆ ಗಣಿ ಲೂಟಿಕೋರರು ಅಲ್ಲಿ ಕಣ್ಣು ಹಾಕಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ಒತ್ತಡಕ್ಕೆ ಮಣಿಯದಿದ್ದುದು ಹಾಗೂ ಗದಗ ಜಿಲ್ಲೆಯ ಜನತೆ ಗಣಿಗಾರಿಕೆಯನ್ನು ವಿರೋಧಿಸುತ್ತಿರುವುದರಿಂದ ಕಪ್ಪತ ಗುಡ್ಡ ಸದ್ಯಕ್ಕಂತೂ ಸುರಕ್ಷಿತವಾಗಿದೆ.
ಜೀವ ವೈವಿಧ್ಯದ ಸಂರಕ್ಷಣೆ ಮಾಡಬೇಕಾದ ಸರಕಾರಿ ಇಲಾಖೆ ಆಗಾಗ ನಿಲುವು ಬದಲಿಸುತ್ತಾ ಬಂದಿದೆ. ಕಪ್ಪತ ಗುಡ್ಡದ ಭೂಗರ್ಭದಲ್ಲಿ ಇರುವ ಉತ್ತಮ ದರ್ಜೆಯ ಕಬ್ಬಿಣದ ಅದಿರು, ಬಂಗಾರದ ನಿಕ್ಷೇಪದ ಮೇಲೆ ಕಣ್ಣು ಹಾಕಿರುವ ಗಣಿ ಉದ್ಯಮಿಗಳು ಸರಕಾರಕ್ಕೆ ಒತ್ತಡ ತರುತ್ತಲೇ ಇದ್ದಾರೆ. ಕಪ್ಪತ ಗುಡ್ಡವನ್ನು ಉಳಿಸಿಕೊಳ್ಳಲು ನಿರಂತರವಾಗಿ ಹೋರಾಟ ಮಾಡಿದ ಪರಿಣಾಮವಾಗಿ ರಾಜ್ಯ ಸರಕಾರ ಅದನ್ನು ಸಂರಕ್ಷಿತ ಪ್ರದೇಶ ಎಂದು ಗುರುತಿಸಿ ಘೋಷಣೆ ಮಾಡಿದೆ. ಈ ಕಪ್ಪತ ಗುಡ್ಡದಲ್ಲಿ 300ಕ್ಕೂ ಹೆಚ್ಚು ಔಷಧೀಯ ಸಸ್ಯಗಳಿವೆ ಎಂದು ತಿಳಿಸಿದ ರಾಜ್ಯದ ಅರಣ್ಯ ಕೈಗಾರಿಕಾ ನಿಗಮ ಇದರ ರಕ್ಷಣೆಗೆ ಕ್ರಮ ಕೈಗೊಳ್ಳಲು ಮುಂದಾಗಿತ್ತು.ಆದರೆ ಗಣಿ ಲಾಬಿಯ ನಿರಂತರ ಒತ್ತಡದಿಂದಾಗಿ ಈ ಕಪ್ಪತ ಗುಡ್ಡ ಪರಿಸರಕ್ಕೆ ಅಪಾಯ ತಪ್ಪಿದ್ದಲ್ಲ.
ರಾಜ್ಯದಲ್ಲಿ ಅರಣ್ಯ ಪ್ರದೇಶದ ವ್ಯಾಪ್ತಿ ಈಗಾಗಲೇ ಕುಸಿದಿದೆ. ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಮರಗಳ ಮಾರಣ ಹೋಮ ನಡೆದಿದೆ. ಇದರ ಪರಿಣಾಮವಾಗಿ ವಿಶ್ವದ ಇತರ ತಾಣಗಳಂತೆ ಕಪ್ಪತ ಗುಡ್ಡ ಕೂಡ ಅಪಾಯದ ಅಂಚಿನಲ್ಲಿದೆ. ಅದು ಅಳಿದರೆ ಮೊದಲೇ ಮಳೆಯ ಅಭಾವವನ್ನು ಎದುರಿಸುತ್ತಿರುವ ಗದಗ, ಗಜೇಂದ್ರಗಡ ಮುಂತಾದ ಪ್ರದೇಶಗಳು ಮಳೆಯಿಲ್ಲದೆ ಸಂಪೂರ್ಣ ಬರಗಾಲದ ದವಡೆಗೆ ಸಿಲುಕಲಿವೆ. ಇದರಿಂದ ನೇರವಾಗಿ ತೊಂದರೆಗೀಡಾಗುವವರು ಸ್ಥಳೀಯ ರೈತಾಪಿ ಜನ. ಆದ್ದರಿಂದ ಸರಕಾರ ಗಣಿ ಲಾಬಿಯ ಒತ್ತಡಕ್ಕೆ ಮಣಿದು ಯಾವುದೇ ಅವಸರದ ದುಡುಕಿನ ತೀರ್ಮಾನವನ್ನು ತೆಗೆದುಕೊಳ್ಳಬಾರದು.
ಐದಾರು ವರ್ಷಗಳ ಹಿಂದೆ ಅಧಿಕಾರಿಗಳ ಜೊತೆ ಶಾಮೀಲಾಗಿ ಗಣಿ ಉದ್ಯಮಿಗಳು ಮಸಲತ್ತು ನಡೆಸಿದಾಗ ಗದುಗಿನ ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮಿಗಳ ನೇತೃತ್ವದಲ್ಲಿ ಎಲ್ಲ ಜನಪರ ಹಾಗೂ ಪರಿಸರ ಪರ ಹೋರಾಟಗಾರರು ಮುಖ್ಯಮಂತ್ರಿಗಳನ್ನು ಬೆಳಗಾವಿಯಲ್ಲಿ ಭೇಟಿ ಮಾಡಿ ಕಪ್ಪತ ಗುಡ್ಡದ ಮಹತ್ವದ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ಸರಕಾರ ನಿರ್ಣಾಯಕ ಕ್ರಮ ಕೈಗೊಳ್ಳಲಿಲ್ಲ.
ಸುಮಾರು 17,872 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿರುವ ಕಪ್ಪತ ಗುಡ್ಡದಿಂದಾಗಿ ಗದಗ, ರೋಣ ಮುಂತಾದ ಪ್ರಮುಖ ಪ್ರದೇಶದಲ್ಲಿ ಚೂರು ಪಾರು ಹಸಿರು ಕಾಣುತ್ತಿದೆ. ಈಗಲಾದರೂ ಸರಕಾರ ಈ ಬಗ್ಗೆ ವಿಳಂಬ ಮಾಡದೇ ಸೂಕ್ತವಾದ ನಿಲುವನ್ನು ತಾಳಬೇಕು.
ಈ ಕಪ್ಪತ ಗುಡ್ಡ ಗಿರಿಶ್ರೇಣಿಯು 64 ಕಿ.ಮೀ.ಗಳಷ್ಟು ಉದ್ದವಾಗಿದೆ. ಕಪ್ಪತಗುಡ್ಡ ಪರಿಸರದಿಂದಾಗಿ ಗದಗ ಜಿಲ್ಲೆ ಮಾತ್ರವಲ್ಲ ಇಡೀ ಉತ್ತರ ಕರ್ನಾಟಕದಲ್ಲಿ ಒಂದಿಷ್ಟು ಮಳೆಯಾಗುತ್ತಿದೆ. ಮಳೆ ಬೀಳುವ ಸಮಯದಲ್ಲಿ ಇದು ಹಸಿರನ್ನು ಹೊತ್ತು ಬಹಳ ಸುಂದರವಾಗಿ ಕಾಣುತ್ತದೆ. ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಕರೆಯಲಾಗುವ ಈ ಕಪ್ಪತ ಗುಡ್ಡ ನಿಸರ್ಗದ ಈ ರಮ್ಯ ತಾಣವು ನಾನಾ ವಿಧದ ಪಶು, ಪಕ್ಷಿಗಳಿಗೆ ಆಸರೆ ನೀಡಿದ್ದು, ಇಂತಹ ಅಮೂಲ್ಯ ತಾಣ ಗಣಿಗಾರಿಕೆಗೆ ಸಿಕ್ಕರೆ ಆ ಪರಿಸರ ಮಾತ್ರವಲ್ಲದೆ ಸುತ್ತಮುತ್ತಲಿನ ಪರಿಸರವೂ ಸರ್ವನಾಶವಾಗುತ್ತದೆ.
ಇಂತಹ ಅತ್ಯಮೂಲ್ಯವಾದ ಕಪ್ಪತ ಗುಡ್ಡ ಪ್ರದೇಶಕ್ಕೆ ಯಾವುದೇ ಧಕ್ಕೆ ಯಾಗಬಾರದು. ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಯಾವುದೇ ಒತ್ತಡಕ್ಕೆ ಮಣಿಯದೇ ಇದನ್ನು ಕಾಪಾಡಲು ಕ್ರಮ ಕೈಗೊಳ್ಳಬೇಕು.