ಭದ್ರತಾ ಲೋಪ: ಯಾರು ಹೊಣೆ?

ಸಾಂದರ್ಭಿಕ ಚಿತ್ರ | PTI File Photo
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘‘ಇಷ್ಟೊಂದು ದೊಡ್ಡ ದಾಳಿ ನಡೆದಿದೆ. ಆದರೆ ಸರಕಾರದ ಸುದ್ದಿಯೇ ಇಲ್ಲ. ಅವರಿಗೆ ಇದರ ಬಗ್ಗೆ ಗೊತ್ತೇ ಇರಲಿಲ್ಲ. ಪಕ್ಕದಲ್ಲೇ ಇದ್ದ ಸೇನಾ ನೆಲೆಯಿಂದ ಒಂದು ಗಂಟೆ ಕಳೆದರೂ ಯಾರೂ ನೆರವಿಗೆ ಬರಲೇ ಇಲ್ಲ’’ ಹೀಗೆಂದು ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದು ಗುಜರಾತ್ನ ಸೂರತ್ನ ಪುಟ್ಟ ಬಾಲಕ ನಕ್ಷ್ ಕಲ್ತಿಯಾ. ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ ಈ ಬಾಲಕನ ತಂದೆ ಮೃತಪಟ್ಟಿದ್ದರು. ನೂರಾರು ಪ್ರವಾಸಿಗರು ಪ್ರತಿನಿತ್ಯ ಬಂದು ಹೋಗುವ ಸ್ಥಳದಲ್ಲಿ ಸರಕಾರ ಯಾಕೆ ಒಬ್ಬನೇ ಒಬ್ಬ ಭದ್ರತಾ ಸಿಬ್ಬಂದಿಯನ್ನು ಗಸ್ತಿಗಾಗಿ ಇಟ್ಟಿರಲಿಲ್ಲ ? ಎನ್ನುವ ಪ್ರಶ್ನೆ ಇನ್ನೂ ಉತ್ತರವಿಲ್ಲದೆ ಬಿದ್ದುಕೊಂಡಿದೆ. ಉಗ್ರರ ದಾಳಿಯಲ್ಲಿ ತಮ್ಮ ಕುಟುಂಬಸ್ಥರನ್ನು ಕಳೆದುಕೊಂಡವರೆಲ್ಲರ ಕಟ್ಟ ಕಡೆಯ ಪ್ರಶ್ನೆ ‘ಸರಕಾರದ ಭದ್ರತೆ’ಯ ಲೋಪವನ್ನೇ ಗುರಿಯಾಗಿಸಿಕೊಂಡಿದೆ. ಬರೇ ನಾಲ್ಕು ಮಂದಿ ಉಗ್ರರು ಕೈಯಲ್ಲಿ ಬಂದೂಕುಗಳನ್ನು ಹಿಡಿದುಕೊಂಡು ಬಂದು, ಪ್ರವಾಸಿಗರ ಮೇಲೆ ದಾಳಿ ನಡೆಸುತ್ತಾರೆ. ಗಸ್ತು ಪಡೆ ಇದ್ದಿದ್ದರೆ ಅವರನ್ನು ಎದುರಿಸುವುದು ಕಷ್ಟ ಸಾಧ್ಯವೇನೂ ಆಗಿರಲಿಲ್ಲ. ಇಷ್ಟೊಂದು ಸಾವು ನೋವಂತೂ ಖಂಡಿತಾ ನಡೆಯುತ್ತಿರಲಿಲ್ಲ. ಕನಿಷ್ಠ ಆ ಉಗ್ರರನ್ನಾದರೂ ಕೊಂದು ಹಾಕಿ ಬಿಡಬಹುದಾಗಿತ್ತು. ಎಲ್ಲ ಸಂತ್ರಸ್ತ ಕುಟುಂಬಗಳೂ ಇದನ್ನೇ ಪದೇ ಪದೇ ಉಲ್ಲೇಖಿಸುತ್ತಿವೆ. ಉಗ್ರರ ಹೇಯ ಕೃತ್ಯ ಖಂಡನೀಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಉಗ್ರರನ್ನು ಸಂಪೂರ್ಣ ದಮನ ಮಾಡಲು ದೇಶ ಎಲ್ಲ ಪಕ್ಷ, ಧರ್ಮ, ಜಾತಿ ಭೇದಗಳನ್ನು ಬದಿಗಿಟ್ಟು ಒಂದಾಗಿವೆ. ಉಗ್ರವಾದಿಗಳ ವೃತ್ತಿಯೇ ಕೊಲ್ಲುವುದಾಗಿದೆ ಮತ್ತು ಸಾಯುವುದಕ್ಕೂ ಅವರು ಸಿದ್ಧರಾಗಿಯೇ ಬರುತ್ತಾರೆ. ಆದರೆ ಕಾಯಬೇಕಾಗಿದ್ದ ಭದ್ರತಾ ಸಿಬ್ಬಂದಿ ಎಲ್ಲಿದ್ದರು? ಸಂತ್ರಸರು ಈ ಪ್ರಶ್ನೆಯನ್ನು ದೊಡ್ಡ ಧ್ವನಿಯಲ್ಲಿ ಕೇಳುತ್ತಿದ್ದಾರೆ. ಸರಕಾರ ಸಂತ್ರಸ್ತರಿಗೆ ಉತ್ತರಿಸಲೇಬೇಕಾಗಿದೆ.
ಕಳೆದ ಐದು ವರ್ಷಗಳ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರ ಮೇಲೆ ಸೇನೆ ಸಂಪೂರ್ಣ ಗೆಲುವು ಸಾಧಿಸಿದೆ ಎಂಬ ಅಮಿತ್ ಶಾ ಮಾತುಗಳನ್ನು ದೇಶ ನಂಬಿದೆ. ಆ ನಂಬಿಕೆಯ ಬಲದಿಂದಲೇ, ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಈಗಲೂ ಕಾಶ್ಮೀರ ಕೇಂದ್ರ ಸರಕಾರದ ನಿಯಂತ್ರಣದಲ್ಲಿದೆ. ಸೇನಾ ಪಡೆಗಳು ಮತ್ತು ಪೊಲೀಸರ ನಿಯಂತ್ರಣ ಕೇಂದ್ರ ಸರಕಾರದ ಬಳಿಯೇ ಇದೆ. ಕಾಶ್ಮೀರಕ್ಕೆ ಇನ್ನೂ ರಾಜ್ಯದ ಸ್ಥಾನಮಾನ ದೊರಕಿಲ್ಲ. ಒಂದು ಚುನಾಯಿತ ಸರಕಾರ ಅಲ್ಲಿ ಅಸ್ತಿತ್ವದಲ್ಲಿದೆಯಾದರೂ, ಅದರ ಅಧಿಕಾರ ಸೀಮಿತವಾದುದು. ಸ್ಥಳೀಯ ಸರಕಾರ ಕಾಶ್ಮೀರಕ್ಕೆ ಭದ್ರತೆ ನೀಡುವುದಕ್ಕೆ ಸಾಮರ್ಥ್ಯವನ್ನು ಹೊಂದಿಲ್ಲ ಎನ್ನುವ ಕಾರಣಕ್ಕಾಗಿಯೇ ಅಲ್ಲಿನ ಸರಕಾರವನ್ನು ವಜಾಗೊಳಿಸಿ ಇಡೀ ಕಾಶ್ಮೀರವನ್ನು
ಕೇಂದ್ರ ಸರಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಈ ಕಾರಣದಿಂದ, ಎಲ್ಲೇ ಭದ್ರತಾ ಲೋಪಗಳು ನಡೆದರೂ ಅದರ ಹೊಣೆಗಾರಿಕೆಯನ್ನು ಕೇಂದ್ರ ಸರಕಾರವೇ ಹೊತ್ತುಕೊಳ್ಳಬೇಕಾಗುತ್ತದೆ. ಉಗ್ರರ ದಾಳಿಯ ಕುರಿತಂತೆ ಸಂತ್ರಸ್ತ ಪ್ರವಾಸಿಗರು ನಾಲ್ಕು ವಿಷಯಗಳನ್ನು ದೇಶದ ಮುಂದಿಟ್ಟಿದ್ದಾರೆ. ಒಂದು, ಉಗ್ರರು ದೊಡ್ಡ ಸಂಖ್ಯೆಯಲ್ಲೇನೂ ಇರಲಿಲ್ಲ. ನಾಲ್ಕೇ ನಾಲ್ಕು ಜನರು ಇಷ್ಟು ದೊಡ್ಡ ಹಿಂಸಾಚಾರವನ್ನು ಎಸಗಿದ್ದರು. ಅವರು ಯಾವುದೇ ಬಾಂಬ್ ಸ್ಫೋಟ ಅಥವಾ ಆತ್ಮಹತ್ಯಾ ದಾಳಿಯ ಮೂಲಕ ಹಿಂಸಾಚಾರ ಎಸಗಿರಲಿಲ್ಲ. ಅತ್ಯಂತ ನಿರ್ಭಯವಾಗಿ, ಸಾವಧಾನದಿಂದ ಕೆಲವರ ಧರ್ಮಗಳನ್ನು ವಿಚಾರಣೆ ನಡೆಸಿ ಗುಂಡು ಹಾರಿಸಿದ್ದರು. ಎರಡನೆಯದು, ಈ ಸಂದರ್ಭದಲ್ಲಿ ಆ ಪರಿಸರದಲ್ಲಿ ಒಬ್ಬನೇ ಒಬ್ಬ ಭದ್ರತಾ ಸಿಬ್ಬಂದಿಯಿರಲಿಲ್ಲ. ಅಲ್ಲಿಗೆ ಉಗ್ರರು ನುಸುಳಿರುವುದು ಹೇಗೆ ಎನ್ನುವುದು ಇನ್ನೊಂದು ಪ್ರಶ್ನೆ. ಹಿಂಸಾಚಾರ ನಡೆದ ಬಳಿಕವೂ ಸುಮಾರು ಒಂದು ಗಂಟೆಗಳ ಕಾಲ ಯಾವುದೇ ಆ್ಯಂಬ್ಯುಲೆನ್ಸ್ ಅಥವಾ ಭದ್ರತಾ ಪಡೆಗಳು
ನೆರವಿಗೆ ಧಾವಿಸಿ ಬಂದಿರಲಿಲ್ಲ. ಇದು ಕೇಂದ್ರ ಸರಕಾರದ ನಿಯಂತ್ರಣದಲ್ಲಿರುವ ಭದ್ರತಾ ಪಡೆಗಳು ಉಗ್ರರನ್ನು ನಿಯಂತ್ರಿಸುತ್ತಿರುವ ಮತ್ತು ನಾಗರಿಕರಿಗೆ ರಕ್ಷಣೆ ನೀಡುತ್ತಿರುವ ರೀತಿ. ಈ ಸಂದರ್ಭದಲ್ಲಿ ಪ್ರವಾಸಿಗರ ಜೊತೆಗೆ ನಿಂತು, ಅವರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದವರು ಸ್ಥಳೀಯ ಕಾಶ್ಮೀರಿಗಳು. ಯೋಧರು ಬರುವವರೆಗೆ ಅವರು ಕಾಯಲಿಲ್ಲ. ಗಾಯಾಳುಗಳನ್ನು ಮತ್ತು ಬದುಕುಳಿದವರನ್ನು ಸುರಕ್ಷಿತ ಸ್ಥಳಗಳಿಗೆ ಸೇರಿಸುವಲ್ಲಿ ಅವರು ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಕೆಲಸ ಮಾಡಿದರು. ಎಲ್ಲ ಪ್ರವಾಸಿಗರು ಒಕ್ಕೊರಲಿನಲ್ಲಿ ಕಾಶ್ಮೀರಿಗಳನ್ನು ಶ್ಲಾಘಿಸಿದ್ದಾರೆ ಮತ್ತು ಅವರೆಲ್ಲರೂ ಸರಕಾರದ ಭದ್ರತಾ ಲೋಪಗಳನ್ನು ಆಕ್ರೋಶ ಭರಿತವಾಗಿ ಖಂಡಿಸಿದ್ದಾರೆ.
ವಿದೇಶದಲ್ಲಿದ್ದ ಪ್ರಧಾನಿ ಮೋದಿಯವರು ತಕ್ಷಣ ಭಾರತಕ್ಕೇನೋ ಆಗಮಿಸಿದರು. ಆದರೆ ಅವರು ತೆರಳಿದ್ದು ಚುನಾವಣೆ ನಡೆಯಲಿರುವ ಬಿಹಾರಕ್ಕೆ. ಸರ್ವ ಪಕ್ಷ ಸಭೆಯಲ್ಲಿ ಪ್ರಧಾನಿ ಭಾಗವಹಿಸಲೇ ಇಲ್ಲ. ಯಾಕೆಂದರೆ, ಅಲ್ಲಿ ಕೇಂದ್ರ ಸರಕಾರದ ಭದ್ರತಾ ಲೋಪಗಳನ್ನು ವಿರೋಧ ಪಕ್ಷಗಳು ಪ್ರಶ್ನಿಸುತ್ತವೆ. ಅದಕ್ಕೆ ಉತ್ತರ ಅವರ ಬಳಿ ಇರಲಿಲ್ಲ. ಸರ್ವ ಪಕ್ಷ ಸಭೆಯಲ್ಲಿ ಭದ್ರತಾ ಲೋಪವನ್ನು ಕೇಂದ್ರ ಸರಕಾರ ಒಪ್ಪಿಕೊಂಡಿದೆ. ಅದನ್ನು ಒಪ್ಪಿಕೊಳ್ಳದೇ ಇದ್ದರೆ ಸರಕಾರ ಇನ್ನಷ್ಟು ಟೀಕೆ, ಮುಜುಗರಗಳನ್ನು ಎದುರಿಸುವ ಸಾಧ್ಯತೆಗಳಿದ್ದವು. ಈಗಾಗಲೇ ಮಾಜಿ ಸೇನಾ ಮುಖ್ಯಸ್ಥರು, ಹಿರಿಯ ರಾಜಕೀಯ ತಜ್ಞರು ಘಟನೆಯಲ್ಲಿ ಕೇಂದ್ರ ಸರಕಾರದ ವೈಫಲ್ಯವನ್ನು ನೇರವಾಗಿ ಉಲ್ಲೇಖಿಸಿದ್ದಾರೆ. ‘‘ದಾಳಿಗೆ ಗುಪ್ತಚರ ವೈಫಲ್ಯ ಮುಖ್ಯ ಕಾರಣ. ಆ ಉಗ್ರರು ಹೇಗೆ ಗಡಿದಾಟಿ ಕಾಶ್ಮೀರದ ಪ್ರವಾಸಿ ಸ್ಥಳಕ್ಕೆ ಕಾಲಿಟ್ಟರು ಎನ್ನುವುದು ತನಿಖೆಗೆ ಅರ್ಹವಾಗಿದೆ’’ ಎಂದು ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ಶಂಕರ್ ರಾಯ್ ಚೌಧುರಿ ಆರೋಪಿಸಿದ್ದಾರೆ. ಇನ್ನೋರ್ವ ಹಿರಿಯ ನಿವೃತ್ತ ಸೇನಾಧಿಕಾರಿಯವರು ಕೇಂದ್ರ ಸರಕಾರದ ಭದ್ರತಾ ಲೋಪವನ್ನು ಉಲ್ಲೇಖಿಸುತ್ತಾ ‘‘ಅಗ್ನಿಪಥ ಯೋಜನೆಯ ಅನುಷ್ಠಾನವು ಸೇನೆಯ ಮೇಲೆ ದೊಡ್ಡ ಮಟ್ಟದ ಪರಿಣಾಮ ಉಂಟು ಮಾಡಿದೆ.
ಕಾಶ್ಮೀರದ ಭದ್ರತೆಯ ವಿಷಯದಲ್ಲಿ ಕೇಂದ್ರ ಸರಕಾರ ಬೇಜವಾಬ್ದಾರಿ ನೀತಿಯನ್ನು ಅನುಸರಿಸುತ್ತಿದೆ. ಭದ್ರತೆಗೆ ಬೇಕಾದ ಸೈನಿಕರ ಕೊರತೆ ಎದ್ದು ಕಾಣುತ್ತಿದೆ’’ ಎಂದು ಆರೋಪಿಸಿದ್ದಾರೆ.
ಭದ್ರತಾ ಲೋಪವನ್ನು ಒಪ್ಪಿಕೊಳ್ಳುವುದರಿಂದ ಸರಕಾರ ಹೊಣೆಗಾರಿಕೆ ಮುಗಿಯುವುದಿಲ್ಲ. ಈ ಹಿಂದೆ ಪುಲ್ವಾಮಾ ದಾಳಿಗೂ ಭದ್ರತಾ ಲೋಪವೇ ಕಾರಣವಾಗಿತ್ತು. ಅಷ್ಟೊಂದು ಪ್ರಮಾಣದ ಸ್ಫೋಟಗಳು ಗಡಿದಾಟಿ ಹೆದ್ದಾರಿಯ ಮೂಲಕ ಪುಲ್ವಾಮಾಗೆ ಹೇಗೆ ಬಂತು? ನೇರವಾಗಿ ಯೋಧರ ಮೇಲೆ ಇಂತಹದೊಂದು ದಾಳಿ ನಡೆಯುವ ಸಂಚು ನಡೆದಾಗ ಇದು ನಮ್ಮ ಭದ್ರತಾ ಸಿಬ್ಬಂದಿಯ ಗಮನಕ್ಕೆ ಯಾಕೆ ಬರಲಿಲ್ಲ? ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು? ಮೊದಲಾದ ಪ್ರಶ್ನೆಗಳಿಗೆ ಈವರೆಗೆ ಸರಕಾರ ಉತ್ತರಿಸಿಲ್ಲ. ಈ ಲೋಪಗಳಿಗೆ ಸಂಬಂಧಿಸಿ ಯಾವುದೇ ಅಧಿಕಾರಿಯ ಮೇಲಾಗಲಿ, ರಾಜಕಾರಣಿಯ ಮೇಲಾಗಲಿ ಸರಕಾರ ಕ್ರಮ ಕೈಗೊಂಡಿಲ್ಲ. ಪುಲ್ವಾಮಾದ ಭದ್ರತಾ ಲೋಪದ ಮುಂದುವರಿದ ಭಾಗ ಇದಾಗಿದೆ. ಈ ಲೋಪಕ್ಕೆ ಯಾರು ಕಾರಣ ಎನ್ನುವುದನ್ನು ಗುರುತಿಸುವ ಕೆಲಸಕ್ಕೆ ಈಗಲೂ ಸರಕಾರ ಸಿದ್ಧವಿಲ್ಲ. ಬದಲಿಗೆ, ಸರಕಾರವನ್ನು ಪ್ರಶ್ನಿಸಿದವರ ಮೇಲೆಯೇ ಪ್ರತಿದಾಳಿ ನಡೆಸಿ ಅವರ ಬಾಯಿ ಮುಚ್ಚಿಸುವ ಪ್ರಯತ್ನವನ್ನು ಸರಕಾರದೊಳಗಿರುವವರು ಮಾಡುತ್ತಿದ್ದಾರೆ. ಉಗ್ರರನ್ನು ದೇಶ ಒಕ್ಕೊರಲಲ್ಲಿ ಖಂಡಿಸಿದೆ. ಆದರೆ ಈ ಖಂಡನೆಗೆ ಹೆದರಿ ಉಗ್ರರು ತಮ್ಮ ಕಾರ್ಯಾಚರಣೆಯಿಂದ ಹಿಂದೆ ಸರಿಯಲಾರರು. ಸರಕಾರ ತನ್ನ ಲೋಪದೋಷಗಳನ್ನು ತಿದ್ದಿ ಉಗ್ರರನ್ನು ಮಟ್ಟಹಾಕಲು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಮಾತ್ರ ಕಾಶ್ಮೀರದಲ್ಲಿ ಉಗ್ರರನ್ನು ದಮನಿಸಲು ಸಾಧ್ಯ. ಇದೇ ಸಂದರ್ಭದಲ್ಲಿ ಉಗ್ರರ ದಾಳಿಯನ್ನು ಮುಂದಿಟ್ಟುಕೊಂಡು ಭಾರತದೊಳಗೆ, ಕೆಲವು ರಾಜಕೀಯ ಶಕ್ತಿಗಳು ಧರ್ಮದ ಹೆಸರಿನಲ್ಲಿ ಮನಸ್ಸು ಒಡೆಯುವ ಕೆಲಸದಲ್ಲಿ ತೊಡಗಿವೆ. ಉಗ್ರರ ದಾಳಿಯನ್ನು ಬಳಸಿಕೊಂಡು ಇಡೀ ಭಾರತದೊಳಗಿನ ಆಂತರಿಕ ಭದ್ರತೆಗೆ ಧಕ್ಕೆಯುಂಟು ಮಾಡಲು ಹವಣಿಸುತ್ತಿವೆ. ದೇಶದೊಳಗೆ ಅರಾಜಕತೆಯನ್ನು ಸೃಷ್ಟಿಸಲು ಮುಂದಾಗುತ್ತಿರುವ ಈ ಶಕ್ತಿಗಳು ಉಗ್ರರ ಇನ್ನೊಂದು ಮುಖವೇ ಆಗಿವೆ. ದೇಶಭಕ್ತರ ಮುಖವಾಡದಲ್ಲಿರುವ ಆ ಮುಖಗಳನ್ನು ಗುರುತಿಸಿ ಅವರ ಮೇಲೆ ಕಠಿಣ ಕ್ರಮ
ತೆಗೆದುಕೊಳ್ಳಬೇಕು. ಅಧಿಕೃತವಾಗಿ ಉಗ್ರ ಸಂಘಟನೆಯಲ್ಲಿ ಗುರುತಿಸಿಲ್ಪಟ್ಟಿರುವ ಉಗ್ರರಿಗಿಂತಲೂ, ಈ ದೇಶಭಕ್ತಿಯ ಮುಖವಾಡ ಧರಿಸಿ ಜನರ ನಡುವೆ ಒಡಕುಂಟು ಮಾಡುವ ಉಗ್ರವಾದಿಗಳು ದೇಶಕ್ಕೆ ಅತಿ ಹೆಚ್ಚು ಹಾನಿಯನ್ನು ಉಂಟು ಮಾಡಬಲ್ಲರು ಎನ್ನುವುದನ್ನು ಸರಕಾರ ಗಮನಿಸಬೇಕಾಗಿದೆ.