ಬೆಚ್ಚಿ ಬೀಳಿಸಿದ ಲೈಂಗಿಕ ಹಗರಣ: ಪ್ರಧಾನಿ ಮೌನ ಮುರಿಯಲಿ
Photo: X/darab_farooqui
ದೇಶವನ್ನೇ ತಲ್ಲಣಿಸುವಂತೆ ಮಾಡಿರುವ ಜೆಡಿಎಸ್ ಯುವ ನಾಯಕ ಪ್ರಜ್ವಲ್ ಗೌಡ ಅವರ ಲೈಂಗಿಕ ಹಗರಣ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕೇವಲ ಪ್ರಜ್ವಲ್ಗೆ ಸೀಮಿತವಾಗಿರುವ ಪ್ರಕರಣ ಇದು ಎಂದು ಆರಂಭದಲ್ಲಿ ಭಾವಿಸಲಾಗಿತ್ತು. ‘ದೇವೇಗೌಡರು ಮತ್ತು ನನ್ನ ಕುಟುಂಬವನ್ನು ಇದರಲ್ಲಿ ಎಳೆದು ತರಬೇಡಿ’ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಹಿಂದೆ ಮಾಧ್ಯಮಗಳಿಗೆ ಮನವಿ ಮಾಡಿದ್ದರು. ಇದೀಗ ನೋಡಿದರೆ, ಪ್ರಕರಣದಲ್ಲಿ ರೇವಣ್ಣ ಅವರ ಹೆಸರು ಕೇಳಿ ಬರುತ್ತಿದೆ ಮಾತ್ರವಲ್ಲ, ‘ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿ ಅಕ್ರಮ ಬಂಧನದಲ್ಲಿಟ್ಟು ಹಲ್ಲೆ ಮಾಡಿದ ಆರೋಪದಲ್ಲಿ’ ಪ್ರಜ್ವಲ್ ಗೌಡ ಅವರ ತಂದೆ ಶಾಸಕ, ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರನ್ನು ಮಾಜಿ ಪ್ರಧಾನಿ ದೇವೇಗೌಡರ ನಿವಾಸದಲ್ಲೇ ಬಂಧಿಸಲಾಗಿದೆ. ಪ್ರಕರಣಕ್ಕೂ ದೇವೇಗೌಡರಿಗೂ ಸಂಬಂಧವೇ ಇಲ್ಲದಿದ್ದರೆ, ಮಾಜಿ ಪ್ರಧಾನಿ ದೇವೇಗೌಡರು ತಮ್ಮ ನಿವಾಸದಲ್ಲಿ ಆರೋಪಿ ರೇವಣ್ಣ ಅವರಿಗೆ ಯಾಕೆ ಆಶ್ರಯ ನೀಡಿದ್ದರು ಎನ್ನುವ ಪ್ರಶ್ನೆ ಎದ್ದಿದೆ. ಇದು ಒಬ್ಬ ರಾಜಕೀಯ ವ್ಯಕ್ತಿ ಎಸಗಿರುವ ಲೈಂಗಿಕ ಹಗರಣವೋ ಅಥವಾ ಇದರ ಹಿಂದೆ ಇಡೀ ಕುಟುಂಬವೇ ಶಾಮೀಲಾಗಿದೆಯೇ ಎನ್ನುವ ಅನುಮಾನಗಳನ್ನು ಮಾಧ್ಯಮಗಳು ವ್ಯಕ್ತಪಡಿಸುತ್ತಿವೆ. ಇಂತಹದೊಂದು ಬೃಹತ್ ಲೈಂಗಿಕ ಹಗರಣದಲ್ಲಿ ಮಾಜಿ ಪ್ರಧಾನಿಯ ಪುತ್ರ, ಮಾಜಿ ಸಚಿವ, ಹಾಲಿ ಶಾಸಕನ ಬಂಧನವಾಗಿರುವುದು ದೇಶದ ಇತಿಹಾಸದಲ್ಲೇ ಮೊದಲಿರಬೇಕು. ರೇವಣ್ಣ ಅವರಿಗೆ ನ್ಯಾಯಾಲಯ ನಾಲ್ಕು ದಿನಗಳ ಸಿಟ್ ಕಸ್ಟಡಿಯನ್ನು ವಿಧಿಸಿದೆ.
ರೇವಣ್ಣ ಅವರ ಬಂಧನ ಇಡೀ ಪ್ರಕರಣಕ್ಕೆ ಸ್ಪಷ್ಟ ವಾಗಿ ರಾಜಕೀಯ ಬಣ್ಣವನ್ನು ನೀಡಿದೆ. ರೇವಣ್ಣ ಅವರು ಸ್ವತಃ ಲೈಂಗಿಕ ದೌರ್ಜನ್ಯ ಆರೋಪಿಗಳಾಗಿ ಕಟಕಟೆಯಲ್ಲಿ ನಿಂತಿದ್ದಾರೆ ಮಾತ್ರವಲ್ಲ, ತನ್ನ ಪುತ್ರನನ್ನು ರಕ್ಷಿಸಲು ಅವರು ಪೂರ್ಣ ಪ್ರಮಾಣದಲ್ಲಿ ಶ್ರಮಿಸಿದ್ದಾರೆ ಎನ್ನುವ ಆರೋಪ ಹೊತ್ತುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ರೇವಣ್ಣ ಅವರನ್ನು ಪೊಲೀಸರು ಮಾಜಿ ಪ್ರಧಾನಿ ದೇವೇಗೌಡರ ನಿವಾಸದಲ್ಲಿ ಬಂಧಿಸಿರುವುದರಿಂದ ಕಳಂಕವನ್ನು ದೇವೇಗೌಡರೂ ಸ್ವತಃ ಮೈಮೇಲೆ ಎಳೆದುಕೊಂಡಂತಾಗಿದೆ. ದಿಲ್ಲಿಗೆ ತೆರಳಿ ಮೋದಿಯ ಜೊತೆಗೆ ಹಸ್ತಲಾಘವ ನಡೆಸಿ ‘ಬಿಜೆಪಿ-ಜೆಡಿಎಸ್’ ಮೈತ್ರಿಯನ್ನು ಘೋಷಿಸಿರುವುದು ಸ್ವತಃ ಮಾಜಿ ಪ್ರಧಾನಿ ದೇವೇಗೌಡರು. ಹಾಸನ ಲೋಕಸಭಾ ಅಭ್ಯರ್ಥಿಯಾಗಿ ಪ್ರಜ್ವಲ್ ಪರವಾಗಿ ಪ್ರಧಾನಿ ಮೋದಿಯವರೇ ಪ್ರಚಾರ ನಡೆಸಿದ್ದಾರೆ. ಈ ದೇಶದ ಪ್ರಧಾನಿಯಾಗಿ ಮೋದಿಯವರಿಗೆ ಪ್ರಜ್ವಲ್ ಮೇಲಿರುವ ಆರೋಪಗಳ ಬಗ್ಗೆ ಅರಿವಿರಬೇಕಾಗಿತ್ತು. ಯಾಕೆಂದರೆ, ಈ ಲೈಂಗಿಕ ಹಗರಣಗಳು ಇತ್ತೀಚಿನದ್ದಲ್ಲ. ತನ್ನ ಲೈಂಗಿಕ ಹಗರಣಗಳ ಬಗ್ಗೆ ಮಾಧ್ಯಮಗಳು ಬರೆಯಬಾರದು ಎಂದು ಒಂದು ವರ್ಷದ ಹಿಂದೆಯೇ ಪ್ರಜ್ವಲ್ ಗೌಡ ನ್ಯಾಯಾಲಯದ ಮೊರೆ ಹೋಗಿದ್ದರು. ಹಾಸನದ ಜೆಡಿಎಸ್ನ ತಳಸ್ತರದ ನಾಯಕರಿಗೂ ಪ್ರಜ್ವಲ್ನ ಲೈಂಗಿಕ ವಿಕೃತಿಗಳ ಬಗ್ಗೆ ಅರಿವಿತ್ತು. ಹೀಗಿರುವಾಗ, ಪ್ರಧಾನಿ ಮೋದಿಯವರು ಮಾತ್ರ ಇದರ ಬಗ್ಗೆ ಅಮಾಯಕರಾಗಿದ್ದರು ಎನ್ನುವುದು ನಂಬುವುದಕ್ಕೆ ಅನರ್ಹವಾದುದು. ಪ್ರಜ್ವಲ್ ಲೈಂಗಿಕ ಹಗರಣಗಳನ್ನು ಮುಂದಿಟ್ಟುಕೊಂಡು ಜೆಡಿಎಸ್ನ್ನು ಬ್ಲ್ಯಾಕ್ಮೇಲ್ ಮಾಡಿ, ಚುನಾವಣಾ ಪೂರ್ವ ಮೈತ್ರಿಗೆ ಬಿಜೆಪಿ ಒಪ್ಪಿಸಿತ್ತು ಎನ್ನುವ ಅನುಮಾನಗಳನ್ನು ಈಗಾಗಲೇ ಹಲವರು ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಈ ಲೈಂಗಿಕ ಹಗರಣಗಳಿಂದ ಬಚಾವಾಗುವುದಕ್ಕಾಗಿ ಜೆಡಿಎಸ್ ಸ್ವತಃ ಬಿಜೆಪಿಯ ಮುಂದೆ ಮಂಡಿಯೂರಿತು ಎನ್ನುವ ಆರೋಪವೂ ಇದೆ.
ಮಾಜಿ ಪ್ರಧಾನಿಯ ನಿವಾಸದಲ್ಲೇ ರೇವಣ್ಣ ಅವರ ಬಂಧನವಾಗಿರುವುದರಿಂದ, ಪ್ರಧಾನಿ ಮೋದಿಯವರು ಪ್ರಕರಣದ ಬಗ್ಗೆ ದೇಶಕ್ಕೆ ಸ್ಪಷ್ಟೀಕರಣ ನೀಡಲೇ ಬೇಕಾಗಿದೆ. ಇದು ಬರೇ ಲೈಂಗಿಕ ಹಗರಣವಲ್ಲ, ಸರಣಿ ಅತ್ಯಾಚಾರ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ. ವಿಶ್ವದಲ್ಲೇ ಇಂತಹ ಹಗರಣ ಇದೇ ಮೊದಲು ಎಂಬ ಹೆಗ್ಗಳಿಕೆಯನ್ನೂ ಈ ಹಗರಣ ಹೊಂದಿದೆ. ಇಂತಹ ಕುಖ್ಯಾತ ಹಗರಣಗಳ ಹಿಂದಿರುವ ವ್ಯಕ್ತಿಯ ಪರವಾಗಿ ಪ್ರಧಾನಿ ಮೋದಿಯವರು ಚುನಾವಣಾ ಪ್ರಚಾರ ಮಾಡಿರುವುದರಿಂದ, ಅವರ ಹೆಸರು ಈ ಹಗರಣದಲ್ಲಿ ತಳಕು ಹಾಕಿಕೊಂಡಿದೆ. ಆರೋಪಿಯ ವಿರುದ್ಧ ಕೆಲವು ಬಿಜೆಪಿ ನಾಯಕರು ಹೇಳಿಕೆ ನೀಡಿದ್ದಾರಾದರೂ, ಪ್ರಧಾನಿ ಮೋದಿಯವರು ತನ್ನ ಕೃತ್ಯಕ್ಕಾಗಿ ದೇಶದ ಮುಂದೆ ಸ್ಪಷ್ಟನೆಯನ್ನು ನೀಡಲೇ ಬೇಕಾಗಿದೆ. ಇಲ್ಲವಾದರೆ, ಪ್ರಧಾನಿ ವರ್ಚಸ್ಸು ತನಿಖೆಯ ದಿಕ್ಕು ತಪ್ಪಿಸಬಹುದು. ಆರೋಪಿಯ ಪರವಾಗಿ ಪ್ರಧಾನಿಯ ಒಲವಿದೆ ಎನ್ನುವುದು ಅಧಿಕಾರಿಗಳಿಗೆ ನಿಷ್ಪಕ್ಷಪಾತ ತನಿಖೆ ನಡೆಸಲು ತೊಡಕುಂಟು ಮಾಡಬಹುದು. ಹಾಗೆಯೇ ಮಾಜಿ ಪ್ರಧಾನಿ ದೇವೇಗೌಡರ ನಿವಾಸದಲ್ಲಿ ಆರೋಪಿ ಪತ್ತೆಯಾಗಿರುವುದರಿಂದ, ದೇವೇಗೌಡರು ತಕ್ಷಣ ಮಾಧ್ಯಮಗಳ ಮುಂದೆ ಸ್ಪಷ್ಟನೆಯನ್ನು ನೀಡಬೇಕು. ಪ್ರಧಾನಿ ಮತ್ತು ಮಾಜಿ ಪ್ರಧಾನಿಗಳ ಮೌನ ಆರೋಪಿಗಳನ್ನು ರಕ್ಷಿಸುವಂತಿದೆ. ಹಾಗೆಯೇ ಜೆಡಿಎಸ್ನ ಜೊತೆಗಿನ ತನ್ನ ಮೈತ್ರಿಯ ಸ್ಥಿತಿಯೇನೂ ಎನ್ನುವುದನ್ನೂ ಪ್ರಧಾನಿ ಮೋದಿಯವರು ಸ್ಪಷ್ಟ ಪಡಿಸಬೇಕು.
ಪ್ರಜ್ವಲ್ ಗೌಡ ಅವರು ವಿದೇಶಕ್ಕೆ ಹಾರಲು ಯಾರು ಕಾರಣ ಎನ್ನುವುದರ ವಿಸ್ತೃತ ತನಿಖೆ ನಡೆಯಬೇಕಾಗಿದೆ. ಇದರ ಹಿಂದಿರುವ ಇನ್ನಿತರ ರಾಜಕೀಯ ಶಕ್ತಿಗಳನ್ನು ಗುರುತಿಸುವುದಕ್ಕೆ ಈಗ ಇರುವ ಸಿಟ್ ತಂಡ ಸಾಕಾಗಬಹುದೇ ಎನ್ನುವ ಶಂಕೆಯೂ ಎದ್ದಿದೆ. ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ‘ಪೆನ್ಡ್ರೈವ್ ಯಾರು ಬಹಿರಂಗ ಪಡಿಸಿದ್ದಾರೆ?’ ‘ಕಾರು ಚಾಲಕ ಮಲೇಶ್ಯಕ್ಕೆ ಹೋಗಿದ್ದು ಹೇಗೆ?’ ಎಂಬಿತ್ಯಾದಿ ಪ್ರಶ್ನೆಗಳ ಸುತ್ತಲೇ ಗಿರಕಿ ಹೊಡೆಯುತ್ತಿದ್ದಾರೆ. ಇಂತಹ ಹೀನ ಕೃತ್ಯವನ್ನು ಎಸಗಿದ್ದ ಆರೋಪಿಯ ವಿಚಾರಣೆ ಸುಗಮವಾಗಿ ನಡೆಯಬೇಕಾದರೆ ಆತ ದೇಶಕ್ಕೆ ಮರಳಬೇಕು. ತನಿಖೆಗೆ ಸಹಕರಿಸಬೇಕು. ಆದರೆ ಈವರೆಗೆ ಆತ ತನಿಖೆಗೆ ಯಾವುದೇ ಸಹಕಾರವನ್ನು ನೀಡಿಲ್ಲ. ಇದನ್ನು ಕುಮಾರಸ್ವಾಮಿಯವರು ಗಂಭೀರವಾಗಿ ತೆಗೆದುಕೊಂಡಂತಿಲ್ಲ. ಪ್ರಮುಖ ಆರೋಪಿಯನ್ನು ಬಂಧಿಸಲು ತಡವಾದಷ್ಟೂ ವಿಚಾರಣೆ ದಿಕ್ಕು ತಪ್ಪುವ ಸಾಧ್ಯತೆಗಳಿವೆ. ಸಂತ್ರಸ್ತರನ್ನು ಆಮಿಷ, ಬೆದರಿಕೆಗಳ ಮೂಲಕ ಬಾಯಿ ಮುಚ್ಚಿಸಬಹುದು. ಆರೋಪಿಯ ಬೆನ್ನಿಗೆ ಇರುವ ರಾಜಕೀಯ ವರ್ಚಸ್ಸು ತನಿಖಾಧಿಕಾರಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಈ ಪ್ರಕರಣಕ್ಕಿರುವ ರಾಜಕೀಯ ಆಯಾಮಗಳನ್ನು ಗುರುತಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ತನಿಖಾ ಸಂಸ್ಥೆಯೊಂದು ತನಿಖೆ ನಡೆಸುವ ಅಗತ್ಯವೂ ಇದೆ.