ಸಚಿವೆ ಶೋಭಾ ಕರಂದ್ಲಾಜೆ ರಾಜ್ಯದ ಜನತೆಯ ಮುಂದೆ ಕ್ಷಮೆ ಯಾಚಿಸಬೇಡವೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ತಾನು ನೀಡುತ್ತಿರುವ ವಿವೇಚನಾರಹಿತ ಹೇಳಿಕೆಗಳು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರನ್ನು ಮತ್ತೆ ಮತ್ತೆ ಇಕ್ಕಟ್ಟಿಗೆ ಸಿಲುಕಿಸುತ್ತಿವೆ. ಕಳೆದ ಮಾರ್ಚ್ ತಿಂಗಳಲ್ಲಿ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿ ನೀಡಿದ ಹೇಳಿಕೆ ಇದೀಗ ಅವರ ಕುತ್ತಿಗೆಗೆ ಬಂದಿದೆ. ಕರ್ನಾಟಕದಲ್ಲಿ ರಾಜ್ಯದ ಜನತೆಯ ವಿರುದ್ಧ ಇಂತಹ ಹೇಳಿಕೆಗಳನ್ನು ಹಲವು ಬಾರಿ ನೀಡಿ ದಕ್ಕಿಸಿಕೊಂಡಿದ್ದ ಶೋಭಾ ಅವರು, ತಮಿಳು ನಾಡಿನ ಜನರ ಬಗ್ಗೆ ಇಂತಹದೇ ಒಂದು ಹೇಳಿಕೆಯನ್ನು ನೀಡಲು ಹೋಗಿ ಸಿಕ್ಕಿ ಹಾಕಿಕೊಂಡಿದ್ದಾರೆ. ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಭಾಗಿಯಾದ ಉಗ್ರರು ತಮಿಳುನಾಡಿನಲ್ಲಿ ತರಬೇತಿ ಪಡೆದಿದ್ದಾರೆ ಎಂಬ ಅವರ ಹೇಳಿಕೆಯ ಕುರಿತಂತೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸಬೇಕು ಅಥವಾ ಕ್ರಿಮಿನಲ್ ಪ್ರಕರಣ ಎದುರಿಸಬೇಕು ಎಂದು ಮದ್ರಾಸ್ ಉಚ್ಚ ನ್ಯಾಯಾಲಯ ಕಳೆದ ಶುಕ್ರವಾರ ಎಚ್ಚರಿಕೆ ನೀಡಿದೆ. ಹೇಳಿಕೆಗೆ ಸಂಬಂಧಿಸಿದಂತೆ ತನ್ನ ವಿರುದ್ಧ ದಾಖಲಿಸಲಾದ ಎಫ್ಐಆರ್ನ್ನು ರದ್ದುಗೊಳಿಸುವಂತೆ ಕೋರಿ ಶೋಭಾ ಕರಂದ್ಲಾಜೆ ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಮದ್ರಾಸ್ ಹೈಕೋರ್ಟ್ ಈ ಸೂಚನೆಯನ್ನು ನೀಡಿದೆ. ತಮಿಳುನಾಡು ಸರಕಾರ ಕರಂದ್ಲಾಜೆಯವರ ಹೇಳಿಕೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದು, ತಾನು ಸಿದ್ಧಪಡಿಸಿದ ಕ್ಷಮಾಪಣಾ ಕರಡನ್ನು ಓದಿದರೆ ಮಾತ್ರ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯ ಎಂದು ಹೈಕೋರ್ಟಿಗೆ ಸ್ಪಷ್ಟಪಡಿಸಿದೆ.
ಎಲ್ಲಿ ಯಾವುದೇ ಸ್ಫೋಟ ಸದ್ದುಗಳು ಕೇಳಲಿ, ಅದನ್ನು ಯಾರು ಸ್ಫೋಟಿಸಿದರು, ಅವರು ಎಲ್ಲಿ ತರಬೇತಿ ಪಡೆದರು, ಅದರ ಹಿಂದೆ ಯಾರ್ಯಾರ ಕೈವಾಡವಿದೆ ಎನ್ನುವ ಮಾಹಿತಿಗಳು ಪೊಲೀಸರಿಗೆ ತಿಳಿಯುವ ಮುಂಚೆಯೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಗೊತ್ತಾಗಿ ಬಿಡುತ್ತದೆ. ಪೊಲೀಸರು ಪ್ರಕರಣ ದಾಖಲಿಸುವ ಮೊದಲೇ ಇವರು ಅಪರಾಧಿಗಳನ್ನು ಘೋಷಿಸಿ ಅವರನ್ನು ‘ನೇಣಿಗೇರಿಸಿ’ ಬಿಡುತ್ತಿದ್ದರು. ಬೆಂಗಳೂರು ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ನಡೆದ ಬೆನ್ನಿಗೇ, ತಮಿಳುನಾಡಿನಲ್ಲಿ ತರಬೇತಿ ಪಡೆದ ಉಗ್ರರು ಬಂದು ಈ ಕೃತ್ಯ ಎಸಗಿದ್ದಾರೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಬಿಟ್ಟರು. ಯಾವ ಆಧಾರದಲ್ಲಿ ಈ ಆರೋಪವನ್ನು ಮಾಡಿದರು ಎನ್ನುವ ಬಗ್ಗೆ ಯಾವ ವಿವರವೂ ಇರಲಿಲ್ಲ. ಅದಾಗಲೇ ಲೋಕಸಭಾ ಚುನಾವಣೆ ಘೋಷಣೆಯಾಗಿರುವುದರಿಂದ, ತಮಿಳುನಾಡು ಸರಕಾರ ಈ ಆರೋಪವನ್ನು ಗಂಭೀರವಾಗಿ ತೆಗೆದುಕೊಂಡಿತು ಮಾತ್ರವಲ್ಲ, ಇಂತಹದೊಂದು ಆಧಾರ ರಹಿತ ಹೇಳಿಕೆ ನೀಡಿದ ಶೋಭಾ ಕರಂದ್ಲಾಜೆಯವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಒತ್ತಾಯಿಸಿತು. ಶೋಭಾ ಹೇಳಿಕೆ ರಾಜ್ಯದಲ್ಲಿರುವ ತಮಿಳರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿದ್ದವು. ತಮಿಳುನಾಡಿನ ಬಿಜೆಪಿಗೂ ಇದು ತೀವ್ರ ಮುಜುಗರವುಂಟು ಮಾಡಿತ್ತು. ಪರಿಸ್ಥಿತಿ ಕೈ ಮೀರುತ್ತಿದ್ದಂತೆಯೇ, ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಕರಂದ್ಲಾಜೆ ಕ್ಷಮೆ ಯಾಚಿಸಿದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಯೊಂದನ್ನು ನೀಡಿದ ಅವರು ‘‘ನನ್ನ ಉದ್ದೇಶ ತಮಿಳರನ್ನು ಗುರಿ ಮಾಡುವುದು ಆಗಿರಲಿಲ್ಲ’’ ಎಂದರು. ಆದರೆ ಅದಾಗಲೇ ಕರಂದ್ಲಾಜೆಯವರನ್ನು ಮುಂದಿಟ್ಟು ತಮಿಳುನಾಡಿನಲ್ಲಿ ಬಿಜೆಪಿಯ ವಿರುದ್ಧ ಡಿಎಂಕೆ ದಾಳಿ ನಡೆಸಿತ್ತು. ಮಾತ್ರವಲ್ಲ, ಬೇಜವಾಬ್ದಾರಿಯ ಹೇಳಿಕೆಗಾಗಿ ಕಾನೂನು ಕ್ರಮ ತೆಗೆದುಕೊಂಡಿತು.
ಕರಂದ್ಲಾಜೆಯವರ ಹೇಳಿಕೆ ಕೇವಲ ತಮಿಳುನಾಡಿಗೆ ಮಾತ್ರವಲ್ಲ, ಕರ್ನಾಟಕಕ್ಕೂ ಅಗೌರವವನ್ನು ತಂದಿದೆ. ಇಡೀ ತನಿಖೆಯ ದಾರಿ ತಪ್ಪಿಸುವ ಉದ್ದೇಶವನ್ನೂ ಅವರು ಹೊಂದಿದ್ದರು. ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿ ಸಮಾಜದ ಶಾಂತಿಯನ್ನು ಕೆಡಿಸುವ ಮೂಲಕವೇ ರಾಜಕೀಯ ನಾಯಕಿಯಾಗಿ ಹೊರಹೊಮ್ಮಿರುವ ಕರಂದ್ಲಾಜೆಯವರಿಗೆ ತಮಿಳುನಾಡು ಸರಿಯಾದ ಪಾಠವನ್ನು ಕಲಿಸಿದೆ. ಒಂದು ವೇಳೆ ಅವರು ತನ್ನ ಬೇಜವಾಬ್ದಾರಿಗೆ ತಮಿಳುನಾಡಿನ ಕ್ಷಮೆ ಯಾಚಿಸುತ್ತಾರೆ ಎಂದಾದರೆ ಅವರು ಇಂತಹ ನೂರಾರು ಹೇಳಿಕೆಗಳನ್ನು ನೀಡಿ ಕರ್ನಾಟಕದ ವರ್ಚಸ್ಸಿಗೆ ಧಕ್ಕೆ ತಂದಿರುವುದಕ್ಕಾಗಿ ರಾಜ್ಯದ ಜನತೆಯ ಕ್ಷಮೆಯನ್ನೂ ಕೇಳಬೇಕು. ತಮಿಳುನಾಡು ಸರಕಾರ ಮಾಡಿದಂತೆಯೇ, ಅವರ ಬೇಜವಾಬ್ದಾರಿ ಹೇಳಿಕೆಗಾಗಿ ಕರ್ನಾಟಕ ಸರಕಾರವೂ ಪ್ರಕರಣ ದಾಖಲಿಸಲು ಹೊರಟ್ಟಿದ್ದಿದ್ದರೆ ಇಂದು ತನ್ನ ರಾಜಕೀಯ ಬದುಕನ್ನು ಕ್ಷಮೆಯಾಚನೆ ಮಾಡುತ್ತಲೇ ಮುಗಿಸುವ ಸ್ಥಿತಿ ನಿರ್ಮಾಣವಾಗಿ ಬಿಡುತ್ತಿತ್ತು. ಸಂಸದರಾಗಿ ಯಾವುದೇ ಜನಪರ ಕೆಲಸವನ್ನು ಮಾಡದೆ ಉಡುಪಿ-ಚಿಕ್ಕಮಗಳೂರಿನ ಬಿಜೆಪಿ ಕಾರ್ಯಕರ್ತರಿಂದಲೇ ಘೇರಾವಿಗೆ ಒಳಗಾಗಿ ಅಂತಿಮವಾಗಿ ಅಲ್ಲಿಂದ ಬೆಂಗಳೂರು ಉತ್ತರಕ್ಕೆ ಗುಳೆ ಹೋಗಿ ಚುನಾವಣೆಗೆ ನಿಲ್ಲಬೇಕಾಯಿತು. ಬೆಂಗಳೂರು ಉತ್ತರದಲ್ಲೂ ಇಂತಹದೇ ಕೋಮು ಉದ್ವಿಗ್ನಕಾರಿ ಹೇಳಿಕೆಗಳ ಮೂಲಕ ಚುನಾವಣೆಯನ್ನು ಎದುರಿಸಿ ಗೆದ್ದರು.
೨೦೧೭ರಲ್ಲಿ ತನ್ನ ಕೋಮು ರಾಜಕಾರಣಕ್ಕಾಗಿ ಜೀವಂತವಾಗಿದ್ದ ಹಿಂದೂಗಳನ್ನೇ ‘ಕೊಂದ’ ಹೆಗ್ಗಳಿಕೆಯನ್ನು ಶೋಭಾ ಕರಂದ್ಲಾಜೆ ಹೊಂದಿದ್ದಾರೆ. ಅಂದಿನ ಗೃಹಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರವನ್ನು ಬರೆದ ಶೋಭಾ ಕರಂದ್ಲಾಜೆ, ‘‘ರಾಜ್ಯದಲ್ಲಿ ಹಿಂದೂಗಳ ಮಾರಣಹೋಮ ನಡೆಯುತ್ತಿದ್ದು, ತಕ್ಷಣ ಕ್ರಮ ತೆಗೆದುಕೊಳ್ಳಬೇಕು....’’ ಎಂದು ಒತ್ತಾಯಿಸಿದ್ದರು. ಆ ಪತ್ರದಲ್ಲಿ ಕೊಲೆಯಾದ ಹಿಂದೂಗಳ ಪಟ್ಟಿಯೊಂದನ್ನು ನೀಡಿದ್ದರು. ಅವರು ಉಲ್ಲೇಖಿಸಿದ್ದ ಹತ್ಯೆಯಾದ ೨೩ ಹಿಂದೂಗಳ ಪಟ್ಟಿಯಲ್ಲಿ ಹಲವರು ಜೀವಂತವಿದ್ದರು. ಅಶೋಕ್ ಪೂಜಾರಿ ಎಂಬವರು ಸೆಪ್ಟಂಬರ್ ೨೦, ೨೦೧೫ರಂದು ಮೂಡುಬಿದಿರೆಯಲ್ಲಿ ಕೊಲ್ಲಲ್ಪಟ್ಟರು ಎಂದು ಪತ್ರದಲ್ಲಿ ಬರೆಯುತ್ತಾರೆ. ಆದರೆ, ಅವರು ಜೀವಂತವಾಗಿದ್ದರು ಮಾತ್ರವಲ್ಲ ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿ ‘‘ನನ್ನನ್ನು ಯಾರೂ ಕೊಂದಿಲ್ಲ’’ ಎಂದು ಸ್ಪಷ್ಟೀಕರಣ ನೀಡಿದ್ದರು. ಮೂಡಬಿದ್ರೆಯಲ್ಲಿ ೨೦೧೫ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವಾಮನ್ ಪೂಜಾರಿ ಎಂಬವರನ್ನು ಉಲ್ಲೇಖಿಸಿ ‘‘ಇವರನ್ನು ಸೆಪ್ಟಂಬರ್ ೨೦ರಂದು ಹತ್ಯೆ ಮಾಡಲಾಯಿತು’’ ಎಂದು ಗೃಹ ಸಚಿವರಿಗೆ ಬರೆದ ಪತ್ರದಲ್ಲಿ ತಪ್ಪು ಮಾಹಿತಿಯನ್ನು ರವಾನಿಸಿದ್ದರು. ತನ್ನ ಸಹೋದರಿ ಮತ್ತು ಆತನ ಗೆಳೆಯನ ಸಂಚಿನಿಂದ ಕೊಲೆಯಾದ ಕಾರ್ತಿಕ್ ರಾಜ್ರನ್ನು ಕೂಡ ಜಿಹಾದಿಗಳು ಕೊಂದಿದ್ದರು ಎಂದು ಪತ್ರದಲ್ಲಿ ಆರೋಪಿಸಿದ್ದರು. ಹಸಿ ಹಸಿ ಸುಳ್ಳುಗಳಿಂದ ಕೂಡಿದ ಈ ಪತ್ರ, ಕರ್ನಾಟಕದ ಘನತೆಗೆ ರಾಷ್ಟ್ರಮಟ್ಟದಲ್ಲಿ ಧಕ್ಕೆಯನ್ನುಂಟು ಮಾಡಿತು. ಕರಂದ್ಲಾಜೆಯವರ ಈ ಪತ್ರ, ಕರ್ನಾಟಕವನ್ನು ಪರೋಕ್ಷವಾಗಿ ‘ಕ್ರಿಮಿನಲ್ ರಾಜ್ಯ’ವಾಗಿ ಬಿಂಬಿಸಿತು. ಸಂಸದೆಯಾಗಿ ರಾಜ್ಯದ ಅಭಿವೃದ್ಧಿಗೆ ಎಳ್ಳಷ್ಟೂ ಕೊಡುಗೆಯನ್ನು ನೀಡದ ಶೋಭಾ ಕರಂದ್ಲಾಜೆ, ಈ ರಾಜ್ಯಕ್ಕೆ ಕಳಂಕವನ್ನು ತರುವ ವಿಷಯಗಳಲ್ಲಿ ಮಾತ್ರ ಸದಾ ಮುಂಚೂಣಿಯಲ್ಲಿರುವುದು ಅತ್ಯಂತ ವಿಷಾದನೀಯವಾಗಿದೆ. ದ್ವೇಷ ರಾಜಕಾರಣದ ಮೂಲಕ, ರಾಜ್ಯದ ಸೌಹಾರ್ದವನ್ನು, ಸಾಮರಸ್ಯ ಪರಂಪರೆಯನ್ನು ಕೆಡಿಸಿದ್ದು ಹೊರತು ಪಡಿಸಿದರೆ, ಇನ್ನಾವ ಕೊಡುಗೆಯನ್ನು ಇವರು ರಾಜ್ಯಕ್ಕೆ ನೀಡಿಲ್ಲ.
ಬಹುಶಃ ತಮಿಳುನಾಡು ಸರಕಾರ ಕರಂದ್ಲಾಜೆ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡಂತೆಯೇ, ಕಾಂಗ್ರೆಸ್ ಪಕ್ಷದ ನಾಯಕರು ಕರಂದ್ಲಾಜೆಯ ಪತ್ರವನ್ನು ಗಂಭೀರವಾಗಿ ತೆಗೆದುಕೊಂಡು ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಿದ್ದರೆ, ಇಂದು ಕರಂದ್ಲಾಜೆ ರಾಜ್ಯ ಹೈಕೋರ್ಟ್ ಕಟಕಟೆಯಲ್ಲಿ ನಿಲ್ಲಬೇಕಾಗಿತ್ತು. ತಮಿಳುನಾಡಿನ ಬಗ್ಗೆ ನೀಡಿದ ಹೇಳಿಕೆಗಾಗಿ ಶೋಭಾ ಕರಂದ್ಲಾಜೆ ಕ್ಷಮೆಯಾಚಿಸುವುದಾದರೆ, ಕರ್ನಾಟಕವನ್ನು ರಾಷ್ಟ್ರಮಟ್ಟದಲ್ಲಿ ಕ್ರಿಮಿನಲ್ ರಾಜ್ಯವಾಗಿ ಬಿಂಬಿಸಿದ್ದಕ್ಕೂ ಕ್ಷಮೆ ಯಾಚಿಸಬೇಕು. ತಮಿಳು ನಾಡಿನ ಬಗ್ಗೆ ಆಧಾರ ರಹಿತ ಆರೋಪ ಮಾಡುವುದು ತಪ್ಪೇ ಆಗಿದ್ದರೆ, ಕರ್ನಾಟಕದ ಬಗ್ಗೆಯೂ ಆಧಾರ ರಹಿತ ಆರೋಪಗಳನ್ನು ಮಾಡುವುದು, ಸುಳ್ಳು ಮಾಹಿತಿಗಳನ್ನು ಕೇಂದ್ರಕ್ಕೆ ನೀಡುವುದು ತಪ್ಪೇ ಅಲ್ಲವೆ? ಉಂಡ ಮನೆಗೆ ಎಸಗಿದ ಈ ದ್ರೋಹಕ್ಕಾಗಿ ಶೋಭಾ ಕರಂದ್ಲಾಜೆಯವರ ಕ್ಷಮೆಯಾಚನೆಗೆ ಒತ್ತಾಯಿಸುವುದಕ್ಕೆ ಇದೀಗ ಸಮಯ ಬಂದಿದೆ.