ಕುಗ್ಗುತ್ತಿರುವ ಅರಣ್ಯ; ವಾಸ್ತವವೇನು?

ಒಂದು ಕಾಲದಲ್ಲಿ ವ್ಯಾಪಕವಾಗಿದ್ದ ಭಾರತದ ಅರಣ್ಯದ ಇಂದಿನ ಪರಿಸ್ಥಿತಿ ಏನು? ಈ ಕುರಿತು ವಾಸ್ತವ ಸಂಗತಿ ಏನನ್ನು ಹೇಳುತ್ತದೆ ಎಂಬುದಕ್ಕೆ ಭಾರತದ ಅರಣ್ಯದ ಸ್ಥಿತಿಗತಿಗಳ ಬಗ್ಗೆ ಈಚೆಗೆ ಬಿಡುಗಡೆಯಾದ ವಾರ್ಷಿಕ ವರದಿ (ಐಎಸ್‌ಎಫ್‌ಆರ್) ಹೊಸ ಬೆಳಕನ್ನು ಚೆಲ್ಲುತ್ತದೆ. ಸರಕಾರ ಏನೇ ಹೇಳಲಿ ಈ ವರದಿ ಮಾತ್ರ ಅತ್ಯಂತ ಆತಂಕಕಾರಿ ಅಂಶಗಳನ್ನು ಒಳಗೊಂಡಿದೆ. ದೇಶದ ಒಟ್ಟು ಭೂ ಪ್ರದೇಶದ ಶೇ. 25ರಷ್ಟು ಪ್ರದೇಶವು ಅರಣ್ಯದಿಂದ ತುಂಬಿದೆ ಹಾಗೂ ಒಂದು ವರ್ಷದಲ್ಲಿ 1,445 ಚದರ ಕಿಲೋಮೀಟರ್ ಅರಣ್ಯ ಪ್ರದೇಶ ಹೆಚ್ಚಳವಾಗಿದೆ ಎಂದು ಈ ವರದಿಯಿಂದ ತಿಳಿದು ಬರುತ್ತದೆ.
ಈ ವರದಿಯ ಪ್ರಕಾರ ಅರಣ್ಯ ಪ್ರದೇಶ ಜಾಸ್ತಿಯಾಗಿರುವ ಸಂಗತಿ ಶ್ಲಾಘನೀಯ ವಿಷಯ. ಆದರೆ ಒಮ್ಮಿಂದೊಮ್ಮೆಲೆ ಅರಣ್ಯ ಪ್ರದೇಶ ಹೇಗೆ ಹೆಚ್ಚಾಯಿತು ಎಂದು ಪರಿಶೀಲಿಸಲು ಹೊರಟರೆ ವಾಸ್ತವ ಸಂಗತಿ ಬೇರೆಯಾಗಿದೆ. ಅರಣ್ಯ ಎಂಬ ಪದದ ವ್ಯಾಖ್ಯಾನವನ್ನು ಸರಕಾರ ಬದಲಿಸಿದ ಪರಿಣಾಮವಾಗಿ ಅರಣ್ಯ ಪ್ರದೇಶ ಹೆಚ್ಚಾಗಿದೆ. ಇದಕ್ಕಾಗಿ ನಾವು ಖುಷಿ ಪಡಬೇಕಾಗಿಲ್ಲ. ಒಂದು ಹೆಕ್ಟೇರ್ ಪ್ರದೇಶದ ಶೇ. 10ರಷ್ಟು ಪ್ರದೇಶದಲ್ಲಿ ಗಿಡ ಮರಗಳಿದ್ದರೆ ಆ ಇಡೀ ಪ್ರದೇಶವನ್ನು ಅರಣ್ಯ ಎಂದು ಭಾರತದ ಅರಣ್ಯ ಸಮೀಕ್ಷಾ ವರದಿ ವ್ಯಾಖ್ಯಾನಿಸಿರುವುದರಿಂದ ಅರಣ್ಯ ಪ್ರದೇಶ ಹೆಚ್ಚಾದಂತಾಗಿದೆ. ಈ ವಾಸ್ತವ ಸಂಗತಿ ಅನೇಕರಿಗೆ ಗೊತ್ತಿಲ್ಲ.
ಭಾರತದ ಅರಣ್ಯ ಪ್ರದೇಶದ ಬಗ್ಗೆ ನೀಡಲಾದ ಈ ವರದಿ ತೋಟಗಳನ್ನು ಅರಣ್ಯ ಪ್ರದೇಶ ಎಂದು ವ್ಯಾಖ್ಯಾನಿಸಿ ಆಕ್ಷೇಪಕ್ಕೆ ಕಾರಣವಾಗಿದೆ. ತೋಟಗಳಲ್ಲಿ ಅರಣ್ಯಗಳಲ್ಲಿದ್ದಂತೆ ಒಣ ಮರಗಳು ಇರುವುದಿಲ್ಲ. ಅರಣ್ಯದಲ್ಲಿರುವ ವೈವಿಧ್ಯತೆಯೂ ತೋಟಗಳಲ್ಲಿ ಇರುವುದಿಲ್ಲ. ಹೀಗಾಗಿ ಈ ವರದಿಯಲ್ಲಿ ಗುರುತಿಸಲಾಗಿರುವ ಪ್ರದೇಶಗಳೆಲ್ಲವೂ ವಾಸ್ತವವಾಗಿ ಅರಣ್ಯ ಪ್ರದೇಶವಲ್ಲ. ಆದ್ದರಿಂದ ಅರಣ್ಯ ಪ್ರದೇಶ ಜಾಸ್ತಿಯಾಗಿದೆ ಎಂಬುದು ವಾಸ್ತವ ಸಂಗತಿಯಲ್ಲ. ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಬದ್ಧತೆಯನ್ನು ತೋರಿಸುವುದಕ್ಕಾಗಿ ಅರಣ್ಯ ಪ್ರದೇಶ ಹೆಚ್ಚಳವಾಗಿದೆ ಎಂದು ಉತ್ಪ್ರೇಕ್ಷೆಯ ವರದಿಯನ್ನು ಮಾಡಿಸಲಾಗಿದೆ ಎಂದರೆ ತಪ್ಪಲ್ಲ. ಇಂಥ ಅತಿರಂಜಿತ ವರದಿಗಳಿಂದ ಅರಣ್ಯ ಪ್ರದೇಶ ಹೆಚ್ಚಳವಾಗುವುದಿಲ್ಲ.
ಅಭಿವೃದ್ಧಿಯ ಹೆಸರಿನಲ್ಲಿ ದೇಶದ ನಿತ್ಯ ಹರಿದ್ವರ್ಣದ ಪಶ್ಚಿಮ ಘಟ್ಟದ ಕಾಡುಗಳು ಸೇರಿದಂತೆ ಬಹುತೇಕ ಅರಣ್ಯ ಪ್ರದೇಶವನ್ನು ದೊಡ್ಡ ಉದ್ಯಮಪತಿಗಳಿಗೆ ನೀಡಲಾಗುತ್ತಿದೆ. ಇದರಿಂದಾಗಿ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಸಾಕಷ್ಟು ಅಧ್ಯಯನ ವರದಿಗಳು ಬಂದಿವೆ. ಗಣಿಗಾರಿಕೆಗೆ ಸರಕಾರ ಅನುಮತಿ ನೀಡುತ್ತಲೇ ಇದೆ. ಅನುಮತಿ ಇಲ್ಲದೆ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವವರೇ ಇಲ್ಲದಂತಾಗಿದೆ. ಇದರ ಬಗ್ಗೆ ಉತ್ತರ ನೀಡಲಾಗದ ಸರಕಾರ ಅರಣ್ಯದ ಬಗ್ಗೆ ಇಂಥ ವರದಿ ನೀಡಿ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಿದೆ.
ವಾಸ್ತವವಾಗಿ ದೇಶದ ಹಲವಾರು ಕಡೆ ಅರಣ್ಯ ಭೂಮಿ ಕುಗ್ಗಿರುವುದನ್ನು ಈ ವರದಿಯೂ ಒಪ್ಪುತ್ತದೆ. ಬೇಸಿಗೆಯಲ್ಲಿ ಉಂಟಾಗುವ ಕಾಡ್ಗಿಚ್ಚು ಹಾಗೂ ಅರಣ್ಯೇತರ ಉದ್ದೇಶಗಳಿಗಾಗಿ ಅರಣ್ಯಗಳ ಬಳಕೆ, ಇವುಗಳಿಂದಾಗಿ ಇಂಗಾಲ ಹೀರುವಿಕೆಯ ಪ್ರಮಾಣವು ಕಡಿಮೆಯಾಗಿದೆ. ಈಶಾನ್ಯ ರಾಜ್ಯಗಳ ಅರಣ್ಯ ಪ್ರದೇಶ ಹಾಗೂ ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶ ಈಗ ಸಾಕಷ್ಟು ಕುಗ್ಗಿದೆ. ಕರ್ನಾಟಕವನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡರೆ ಕಳೆದ ಎರಡು ವರ್ಷಗಳಲ್ಲಿ 469 ಚದರ ಕಿಲೋಮೀಟರ್ ಅರಣ್ಯ ನಾಶವಾಗಿದೆ. ಜೀವ ವೈವಿಧ್ಯ ತಾಣಗಳಾದ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಅದರಲ್ಲೂ ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಅರಣ್ಯ ನಾಶವಾಗಿದೆ. ಈ ರೀತಿ ನಾಶವಾದ ಅರಣ್ಯವನ್ನು ಹೊಸದಾಗಿ ಮರು ಸೃಷ್ಟಿ ಮಾಡಲು ಆಗುವುದಿಲ್ಲ. ಹೀಗಾಗಿ ತೋಟಗಳನ್ನು ಅರಣ್ಯ ಎಂದು ವ್ಯಾಖ್ಯಾನ ಮಾಡಿ ಸಮರ್ಥಿಸಿಕೊಳ್ಳಲು ಇಂಥ ವರದಿ ನೀಡಲಾಗಿದೆಯೇ ಎಂಬ ಸಂದೇಹ ಸಹಜವಾಗಿ ಬರುತ್ತದೆ.
ಅಮೂಲ್ಯ ಅರಣ್ಯ ಪ್ರದೇಶದಲ್ಲಿ ಲಂಗುಲಗಾಮಿಲ್ಲದ ಗಣಿಗಾರಿಕೆ ಸೇರಿದಂತೆ ಅಭಿವೃದ್ಧಿ ಯೋಜನೆಗಳ ಪರಿಣಾಮವಾಗಿ ದೇಶದ ಬಹುತೇಕ ಕಡೆ ಭೂ ಕುಸಿತ ಸೇರಿ ಹಲವಾರು ಅನಾಹುತಗಳು ಸಂಭವಿಸುತ್ತಲೇ ಇವೆ. ಕೆಲವು ವರ್ಷಗಳ ಹಿಂದೆ ಕೊಡಗಿನಲ್ಲಿ ಸಂಭವಿಸಿದ ಭೂ ಕುಸಿತ ಹಾಗೂ ಇತ್ತೀಚೆಗೆ ಕೇರಳದ ವಯನಾಡಿನಲ್ಲಿ ಉಂಟಾದ ಭೂ ಕುಸಿತ ಹಾಗೂ ಅದರಿಂದ ಆಗಿರುವ ಅನಾಹುತ ಅಧಿಕಾರದಲ್ಲಿರುವವರಿಗೆ ಗೊತ್ತಿಲ್ಲವೆಂದಲ್ಲ. ಆದರೂ ಇದನ್ನು ತಡೆಯಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ.
ಅರಣ್ಯ ನಾಶಕ್ಕೆ ಏನು ಕಾರಣ ಎಂದು ಹುಡುಕಲು ಹೊರಟರೆ ನಮ್ಮ ಮತ್ತು ನಾವು ಚುನಾಯಿಸಿದ ಸರಕಾರಗಳ ಲೋಪದೋಷಗಳು ಸ್ಪಷ್ಟವಾಗಿ ಗೋಚರಿಸುತ್ತವೆ.ಸ್ವಾತಂತ್ರ್ಯ ದ ಮುಂಚಿನಿಂದಲೂ ನಡೆಯುತ್ತಿರುವ ಅರಣ್ಯ ಭೂಮಿಯ ಒತ್ತುವರಿ ಈಗಲೂ ಅವ್ಯಾಹತವಾಗಿ ನಡೆದಿದೆ. ಕೃಷಿ ಉದ್ದೇಶಗಳಿಗಾಗಿ ನಡೆಯುತ್ತಿರುವ ಈ ಒತ್ತುವರಿಯ ಫಲಾನುಭವಿಗಳು ಭಾರೀ ಭೂಮಾಲಕರು, ಕಾಫಿ, ರಬ್ಬರ್ ಮತ್ತು ತಾಳೆ ತೋಟಗಳ ಮಾಲಕರು ಎಂದರೆ ತಪ್ಪಲ್ಲ. ಇದಲ್ಲದೆ ಮೂಲಭೂತ ಸೌಕರ್ಯಗಳ ಹೆಸರಿನಲ್ಲಿ ನಡೆಯುತ್ತಿರುವ ಅರಣ್ಯ ನಾಶ ಮಿತಿ ಮೀರಿದೆ.
ಎಲ್ಲಾದರೂ ಭೂ ಗರ್ಭದಲ್ಲಿ ಕಬ್ಬಿಣದ ಅದಿರು ಸಿಗುತ್ತದೆ ಅಂದರೆ ಸಾಕು, ಅಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ಹಾಗೂ ಭಾರೀ ಉದ್ಯಮಪತಿಗಳು ಕಣ್ಣು ಹಾಕುತ್ತಾರೆ. ಅವರಿಗೆ ಪರಿಸರಕ್ಕಿಂತ ಲಾಭ ದೋಚುವುದು ಮುಖ್ಯ. ಇದರ ಪರಿಣಾಮವಾಗಿ ನಮ್ಮ ರಾಜ್ಯದ ಬಳ್ಳಾರಿ ಜಿಲ್ಲೆಯ ಪರಿಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ದೇಶದ ಎಲ್ಲರಿಗೂ ಸೇರಿದ ಅದಿರು ಸಂಪತ್ತನ್ನು ಕೊಳ್ಳೆ ಹೊಡೆದವರು ರಾಜಕೀಯ ಸೇರಿ ಸರಕಾರದ ಮೇಲೆ ಹಿಡಿತ ಸಾಧಿಸಿ ಮಾಡಿರುವ ಅನಾಹುತ ಉಳಿದವರಿಗಿಂತ ಕರ್ನಾಟಕದ ಜನರಿಗೆ ಚೆನ್ನಾಗಿ ಗೊತ್ತಿದೆ. ಇಂಥವರೇ ಈಗ ಉತ್ತರ ಕರ್ನಾಟಕದ ಅಮೂಲ್ಯ ಅರಣ್ಯ ಸಂಪತ್ತನ್ನು ಹೊಂದಿರುವ ಕಪ್ಪತ ಗುಡ್ಡದ ಮೇಲೆ ಕಣ್ಣು ಹಾಕಿದ್ದಾರೆ. ಅದನ್ನು ಉಳಿಸಿಕೊಳ್ಳುವ ಸವಾಲು ನಮ್ಮ ಎದುರಿಗಿದೆ.
ಅರಣ್ಯ ನಾಶ ಕಾಯ್ದೆ 1980ಕ್ಕೆ ಕಳೆದ ವರ್ಷ ಸರಕಾರ ತಂದಿರುವ ತಿದ್ದುಪಡಿ ಅರಣ್ಯ ನಾಶಕ್ಕೆ ಇನ್ನಷ್ಟು ಉತ್ತೇಜನ ನೀಡುತ್ತದೆ. ಈ ತಿದ್ದುಪಡಿ ಪ್ರಕಾರ ಅರಣ್ಯಗಳಲ್ಲಿ ಇರುವ ಮರಗಳನ್ನು ಕಡಿಯಲು ಈ ಕಾಯ್ದೆ ಅವಕಾಶ ಮಾಡಿಕೊಡುತ್ತದೆ. ಕರಾವಳಿಯಲ್ಲಿ ಇರುವ ಕಾಂಡ್ಲಾ ಕಾಡುಗಳ ಪ್ರದೇಶದ ವ್ಯಾಪ್ತಿ ಕೂಡ ಕುಗ್ಗತೊಡಗಿದೆ. ಬಹುತೇಕ ಕಡೆ ಹಸಿರು ಪ್ರದೇಶ ಕಡಿಮೆಯಾಗಿದೆ. ಅರಣ್ಯ ನಾಶ ಮಾತ್ರವಲ್ಲದೆ ಗಿಡ ಮರಗಳು ಕಡಿಮೆಯಾಗುತ್ತಿರುವ ಸಮಸ್ಯೆ ಕೂಡ ಇದೆ. ಅನೇಕ ಕಡೆ ದಟ್ಟ ಅರಣ್ಯ ಪ್ರದೇಶವು ಈಗ ಕುರುಚಲು ಕಾಡು ಪ್ರದೇಶವಾಗಿ ಬದಲಾಗಿದೆ. ಕಾಡ್ಗಿಚ್ಚು ಹಾಗೂ ಒತ್ತುವರಿಯಿಂದಾಗಿ ಅರಣ್ಯ ಪ್ರದೇಶಕ್ಕೆ ಅಪಾಯ ಎದುರಾಗಿದೆ. ಈ ಬಗ್ಗೆ ಸರಕಾರ ಮಾತ್ರವಲ್ಲ ಸಾರ್ವಜನಿಕರು, ಪರಿಸರವಾದಿಗಳು ಚಿಂತನೆ ಮಾಡಿ ಅಮೂಲ್ಯ ಅರಣ್ಯ ಸಂಪತ್ತನ್ನು ಉಳಿಸಲು ಮುಂದಾಗಬೇಕಾಗಿದೆ.