ರಾಜ್ಯಪಾಲರ ಕಿವಿ ಹಿಂಡಿದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | PC : PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಲ್ಲಿನ ಸರಕಾರಗಳೊಂದಿಗೆ ಸಂಘರ್ಷಕ್ಕೆ ಇಳಿದು ಸಲ್ಲದ ಕಿರಿ ಕಿರಿ ಮಾಡುತ್ತಿರುವ ರಾಜ್ಯಪಾಲರುಗಳಿಗೆ ಸುಪ್ರೀಂ ಕೋರ್ಟ್ ಎಪ್ರಿಲ್ 8ರಂದು ನೀಡಿರುವ ಐತಿಹಾಸಿಕ ತೀರ್ಪು ಎಚ್ಚರಿಕೆಯ ಗಂಟೆಯಾಗಿದೆ. ಅಷ್ಟೇ ಅಲ್ಲ ಒಕ್ಕೂಟ ವ್ಯವಸ್ಥೆಯ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಿದೆ. ಶಾಸನ ಸಭೆಗಳು ಅಂಗೀಕರಿಸಿದ ವಿಧೇಯಕಗಳಿಗೆ ಅಂಕಿತ ಹಾಕದೆ ಅಥವಾ ವಾಪಸ್ ಕಳಿಸದೆ ತಮ್ಮ ಬಳಿ ಇಟ್ಟುಕೊಳ್ಳುವುದಕ್ಕೆ ರಾಜ್ಯಪಾಲರುಗಳಿಗೆ ಪರಮಾಧಿಕಾರ ಇಲ್ಲ. ಸಂವಿಧಾನ ಬದ್ಧವಾಗಿ ನಿರ್ದಿಷ್ಟ ಕಾಲಮಿತಿಯೊಳಗೆ ಅಂಕಿತ ಹಾಕುವುದು ಅವರ ಕರ್ತವ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ. ಇದು ತಮಿಳುನಾಡಿಗೆ ಸಂಬಂಧಿಸಿದ ತೀರ್ಪಾದರೂ ಎಲ್ಲ ರಾಜ್ಯಗಳಿಗೂ ಅನ್ವಯವಾಗುತ್ತದೆ. ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ ಅವರು ರಾಜ್ಯ ವಿಧಾನಸಭೆ ಅಂಗೀಕರಿಸಿರುವ 10 ವಿಧೇಯಕಗಳನ್ನು ರಾಷ್ಟ್ರಪತಿಯವರ ಪರಿಶೀಲನೆಯ ನೆಪ ಹೇಳಿ ತಮ್ಮ ಬಳಿ ಇರಿಸಿಕೊಂಡಿದ್ದು ಸಂವಿಧಾನ ವಿರೋಧಿ ನಡೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ವಿಧಾನಸಭೆ ಅಂಗೀಕರಿಸಿದ 10 ವಿಧೇಯಕಗಳಿಗೆ ಅಂಕಿತ ಹಾಕದೆ ಇಟ್ಟುಕೊಂಡಿರುವ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ತಮಿಳುನಾಡು ಸರಕಾರ ಸಲ್ಲಿಸಿದ ಅರ್ಜಿಯ ಕುರಿತು ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ರಾಜ್ಯಪಾಲರುಗಳಿಗೆ ಅವರ ಸಾಂವಿಧಾನಿಕ ಕರ್ತವ್ಯದ ಬಗ್ಗೆ ಕಿವಿ ಹಿಂಡಿ ಬುದ್ಧಿ ಹೇಳಿದೆ. ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಹಾಗೂ ನ್ಯಾಯಮೂರ್ತಿ ಆರ್. ಮಹಾದೇವನ್ ಅವರಿದ್ದ ದ್ವಿ ಸದಸ್ಯ ಪೀಠವು ವಿಧೇಯಕಗಳಿಗೆ ಅಂಕಿತ ಹಾಕದೆ ಅವನ್ನು ತಮ್ಮ ಬಳಿ ಇರಿಸಿಕೊಂಡಿದ್ದ ರಾಜ್ಯಪಾಲ ರವಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಸಕಾರಣವಿಲ್ಲದೇ ಕುಂಟು ನೆಪ ಹೇಳಿಕೊಂಡು ರಾಷ್ಟ್ರಪತಿ ಗಳ ಅಂಗಳಕ್ಕೆ ವಿಧೇಯಕಗಳನ್ನು ಕಳಿಸುವುದು ಕೂಡ ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸಿದಂತಾಗಿದೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದೆ. ರಾಜ್ಯಪಾಲರು ತಮ್ಮ ಮನಬಂದಂತೆ ವರ್ತಿಸದೆ ಜನರಿಗೆ ಉತ್ತರದಾಯಿಯಾದ ಚುನಾಯಿತ ಸರಕಾರಕ್ಕೆ ಗೌರವ ನೀಡಬೇಕು ಎಂದು ಹೇಳಿದೆ. ವಿಧಾನ ಮಂಡಲ ಎಂಬುದು ಜನರ ಪ್ರಾತಿನಿಧಿಕ ಸಂಸ್ಥೆ. ವಿಧಾನ ಮಂಡಲದ ತೀರ್ಮಾನಕ್ಕೆ ವಿರುದ್ಧವಾಗಿ ಯಾವುದೇ ಕ್ರಮ ಕೈಗೊಂಡರೂ ರಾಜ್ಯಪಾಲರುಗಳು ತಾವು ಅಧಿಕಾರ ವಹಿಸಿಕೊಳ್ಳುವ ಮುನ್ನ ಸ್ವೀಕರಿಸಿದ ಪ್ರತಿಜ್ಞೆಗೆ ವಿರುದ್ಧವಾಗಿ ನಡೆದುಕೊಂಡಂತೆ ಎಂದು ಸುಪ್ರೀಂ ಕೋರ್ಟ್ ಕಿವಿ ಮಾತು ಹೇಳಿದೆ.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ರಾಜ್ಯಪಾಲರಾಗಿ ನೇಮಕಗೊಂಡವರಲ್ಲಿ ಬಹುತೇಕ ಮಂದಿ ರಾಜ್ಯಗಳ ಚುನಾಯಿತ ಸರಕಾರಗಳಿಗೆ ಕಿರಿ ಕಿರಿ ನೀಡುತ್ತಲೇ ಬಂದರು. ತಮಿಳುನಾಡು ಮಾತ್ರವಲ್ಲ ಕರ್ನಾಟಕದ ರಾಜ್ಯಪಾಲರು ಕೂಡ ವಿಧಾನ ಮಂಡಲದಲ್ಲಿ ಅಂಗೀಕೃತಗೊಂಡ ಕೆಲವು ವಿಧೇಯಕಗಳಿಗೆ ಸ್ಪಷ್ಟೀಕರಣವನ್ನು ಬಯಸಿ ವಾಪಸ್ ಕಳಿಸಿದ ಸಂಗತಿ ಎಲ್ಲರಿಗೂ ಗೊತ್ತಿದೆ. ಸದ್ಯದ ಉದಾಹರಣೆಯೆಂದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯದ ಕುಲಪತಿ ನೇಮಕ ಸೇರಿದಂತೆ ರಾಜ್ಯಪಾಲರಿಗೆ ದತ್ತವಾದ ಕೆಲವು ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ವರ್ಗಾಯಿಸುವ ಕುರಿತ ವಿಧೇಯಕ ರಾಜ ಭವನದಲ್ಲಿ ಇನ್ನೂ ಬಾಕಿ ಉಳಿದಿದೆ. ಈ ಕುರಿತು ರಾಜ್ಯ ಸರಕಾರ ಸ್ಪಷ್ಟೀಕರಣ ನೀಡಿದ ನಂತರವೂ ರಾಜ್ಯಪಾಲರು ಅಂಕಿತ ಹಾಕಿಲ್ಲ. ಇದು ಮಾತ್ರವಲ್ಲ ಕರ್ನಾಟಕ ಸಹಕಾರಿ ಸೊಸೈಟಿಗಳ ವಿಧೇಯಕ-2024, ಗದಗ-ಬೆಟಗೇರಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ-2023, ಕರ್ನಾಟಕ ಧಾರ್ಮಿಕ ಮತ್ತು ಧರ್ಮದಾಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ-2024 ಹಾಗೂ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕಗಳಿಗೆ ರಾಜ್ಯಪಾಲರು ಅಂಕಿತ ಹಾಕದೆ ಸರಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ನೀಡಿರುವ ತೀರ್ಪು ಗಮನಾರ್ಹವಾಗಿದೆ.
ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿಯವರಂತೂ 2021ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಅಲ್ಲಿನ ಚುನಾಯಿತ ಸರಕಾರದ ಜೊತೆಗೆ ಸಂಘರ್ಷ ನಡೆಸುತ್ತಲೇ ಬಂದರು. ವಿಧಾನ ಮಂಡಲ ಅಂಗೀಕರಿಸಿದ ವಿಧೇಯಕಗಳನ್ನು ವಾಪಸ್ ಕಳುಹಿಸುವುದು ಇಲ್ಲವೇ ಅಂಕಿತ ಹಾಕದೇ ಉಳಿಸಿಕೊಳ್ಳುವುದು, ಮುಖ್ಯಮಂತ್ರಿಗಳ ಒಪ್ಪಿಗೆ ಇಲ್ಲದೆ ಮಂತ್ರಿಯೊಬ್ಬರನ್ನು ಸಂಪುಟದಿಂದ ವಜಾ ಮಾಡುವುದು, ಮಂತ್ರಿಯೊಬ್ಬರಿಗೆ ಪ್ರಮಾಣ ವಚನ ಬೋಧಿಸಲು ನಿರಾಕರಿಸುವುದು, ತಮಿಳುನಾಡು ರಾಜ್ಯಕ್ಕೆ ಆ ಹೆಸರಿಗಿಂತ ‘ತಮಿಳಗಂ’ ಹೆಸರು ಸೂಕ್ತ ಎಂದು ಬಹಿರಂಗವಾಗಿ ಹೇಳುವುದು ಇಂತಹ ವಿವಾದಾತ್ಮಕ ವರ್ತನೆಗೆ ರವಿ ಹೆಸರಾಗಿದ್ದರು. ಅನಗತ್ಯವಾಗಿ ದ್ರಾವಿಡ ಚಳವಳಿಯನ್ನು ಟೀಕಿಸುವುದು ಅವರ ಇನ್ನೊಂದು ಚಾಳಿಯಾಗಿತ್ತು. ಇತ್ತೀಚೆಗೆ 10 ವಿಧೇಯಕಗಳನ್ನು ರಾಷ್ಟ್ರಪತಿ ಅವರಿಗೆ ಕಳಿಸುವ ಮೂಲಕ ರವಿ ಅವರು ರಾಜ್ಯದ ಸ್ಟಾಲಿನ್ ನೇತೃತ್ವದ ಡಿಎಂಕೆ ಸರಕಾರದ ಜೊತೆಗೆ ನೇರವಾಗಿ ಸಂಘರ್ಷಕ್ಕೆ ಇಳಿದಿದ್ದರು. ವಿ. ಸೆಂಥಿಲ್ ಬಾಲಾಜಿ ಅವರನ್ನು ರಾಜ್ಯ ಸಚಿವ ಸಂಪುಟದಿಂದ ವಜಾಗೊಳಿಸಿದ ಅವರ ಕ್ರಮದ ವಿರುದ್ಧ ರಾಜ್ಯ ಸರಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.
ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಲ್ಲಿನ ರಾಜ್ಯಪಾಲರು ಕೇಂದ್ರ ಸರಕಾರದ ಏಜೆಂಟರಂತೆ ಕಾರ್ಯ ನಿರ್ವಹಿಸುತ್ತಾ ಅಲ್ಲಿನ ಚುನಾಯಿತ ಸರಕಾರಗಳಿಗೆ ಕಿರುಕುಳ ನೀಡುತ್ತಲೇ ಬಂದಿರುವುದು ಎಲ್ಲರೂ ತಿಳಿದ ಸಂಗತಿ. ಕೇರಳದ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಕೂಡ ಅಲ್ಲಿನ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರಕಾರದ ಜೊತೆ ಸಂಘರ್ಷ ನಡೆಸುತ್ತಲೇ ಬಂದರು. ಈಗ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ. ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿಯವರಂತೂ ಭಾರತದ ಶಾಸಕಾಂಗ ಇತಿಹಾಸದ ಸಂಪ್ರದಾಯದ ಪ್ರಕಾರ ಚುನಾಯಿತ ಸರಕಾರ ಸಿದ್ಧಪಡಿಸಿದ ಭಾಷಣದ ಕೆಲವು ಭಾಗಗಳನ್ನು ಸದನದಲ್ಲಿ ಓದಲು ನಿರಾಕರಿಸಿದರು ಮಾತ್ರವಲ್ಲ ತಮ್ಮದೇ ಕೆಲವು ಮಾತುಗಳನ್ನು ಭಾಷಣದಲ್ಲಿ ಸೇರಿಸಿ ತಮ್ಮ ಕಾರ್ಯವ್ಯಾಪ್ತಿಯನ್ನು ಮೀರಿ ವರ್ತಿಸಿದರು. ಸಂವಿಧಾನದ ಪ್ರಕಾರ ರಾಜ್ಯ ಸರಕಾರ ಸಿದ್ಧಪಡಿಸಿದ ಭಾಷಣದಲ್ಲಿ ಏನನ್ನಾದರೂ ತೆಗೆದುಹಾಕುವ ಇಲ್ಲವೇ ಸೇರಿಸುವ ಅಧಿಕಾರ ರಾಜ್ಯಪಾಲರಿಗಿಲ್ಲ. ಆದರೂ ತಮಿಳುನಾಡಿನ ರಾಜ್ಯಪಾಲ ರವಿಯವರು ತಮ್ಮ ವ್ಯಾಪ್ತಿಯನ್ನು ಮೀರಿ ವರ್ತಿಸಿ ಸಂವಿಧಾನಕ್ಕೆ ಅಪಚಾರ ಮಾಡಿದರು.
ಸುಪ್ರೀಂ ಕೋರ್ಟಿನ ಈ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯಪಾಲರ ಹುದ್ದೆಯ ಔಚಿತ್ಯದ ಬಗ್ಗೆ ಮತ್ತೆ ಪ್ರಸ್ತಾಪಿಸಬೇಕಾಗಿದೆ. ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ರಾಜ್ಯಪಾಲರು ಈ ರೀತಿ ವರ್ತಿಸಿಲ್ಲವೆಂದಲ್ಲ, ಆದರೆ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಬಂದ ನಂತರವಂತೂ ಬಹುತೇಕ ರಾಜ್ಯಪಾಲರು ರಾಜ್ಯಗಳ ಚುನಾಯಿತ ಸರಕಾರಗಳ ಜೊತೆಗೆ ಸಂಘರ್ಷಕ್ಕಿಳಿದ ಉದಾಹರಣೆಗಳು ಸಾಕಷ್ಟಿವೆ. ಆದ್ದರಿಂದಲೇ ಬೊಕ್ಕಸಕ್ಕೆ ಭಾರವಾಗಿರುವ ಈ ಹುದ್ದೆಯನ್ನು ರದ್ದುಪಡಿಸುವ ಸಲಹೆಗಳು ರಾಜಕೀಯ ಶಾಸ್ತ್ರ ಪರಿಣಿತರಿಂದ ಬರುತ್ತಲೇ ಇವೆ. ಈಗಂತೂ ಕೇಂದ್ರ ಸರಕಾರ ತನ್ನ ರಾಜಕೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ವಯಸ್ಸಾದ ಹಾಗೂ ಅತೃಪ್ತ ರಾಜಕಾರಣಿಗಳಿಗೆ ಪುನರ್ವಸತಿ ಕಲ್ಪಿಸುವ ಸಲುವಾಗಿ ಈ ರಾಜ್ಯಪಾಲರ ಹುದ್ದೆಯನ್ನು ಉಳಿಸಿಕೊಂಡು ಬರುತ್ತಿದೆ. ರಾಜ್ಯಪಾಲರಿಗೆ ಇರುವ ಅಧಿಕಾರದ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸಂವಿಧಾನದ ಪ್ರಕಾರ ರಾಜ್ಯಪಾಲರಿಗೆ ಸ್ವತಂತ್ರ ಅಧಿಕಾರ ಇಲ್ಲ. ರಾಜ್ಯದ ಚುನಾಯಿತ ಸರಕಾರದ ನೀತಿ ಧೋರಣೆಗೆ ಅನುಗುಣವಾಗಿ ರಾಜ್ಯಪಾಲರು ಕಾರ್ಯ ನಿರ್ವಹಿಸಬೇಕು. ಇದು ಹಲವಾರು ಸಲ ಚರ್ಚೆಯಾಗಿ ಎಲ್ಲರೂ ಒಪ್ಪಿಕೊಂಡ ಅಂಶವಾಗಿದೆ.
ಪ್ರಸಕ್ತ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ರಾಜ್ಯಪಾಲರಿಗೆ ಹಾಕಿರುವ ಕಾಲ ಮಿತಿಯ ಪ್ರಕಾರ ವಿಧಾನ ಮಂಡಲ ಅಂಗೀಕರಿಸಿದ ವಿಧೇಯಕವನ್ನು ರಾಷ್ಟ್ರಪತಿಗಳಿಗೆ ಕಳುಹಿಸುವುದಿದ್ದರೆ ಒಂದು ತಿಂಗಳಲ್ಲಿ ಕಳುಹಿಸಬೇಕು. ವಿಧೇಯಕಗಳನ್ನು ರಾಜ್ಯಪಾಲರು ತಡೆಹಿಡಿದರೆ ಅದನ್ನು ಮೂರು ತಿಂಗಳೊಳಗೆ ವಿಧಾನಸಭೆಗೆ ಮರಳಿ ಕಳುಹಿಸಬೇಕು. ವಿಧಾನಸಭೆ ವಿಧೇಯಕವನ್ನು ಮರುಪರಿಶೀಲನೆ ಮಾಡಿ ರಾಜ್ಯಪಾಲರಿಗೆ ವಾಪಸ್ಕಳುಹಿಸಿದಾಗ ರಾಜ್ಯಪಾಲರು ಅಂಕಿತ ಹಾಕಿ ಒಂದು ತಿಂಗಳಲ್ಲಿ ಕಳುಹಿಸಬೇಕು. ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳಲು ರಾಜ್ಯಪಾಲರು ವಿಫಲರಾದಲ್ಲಿ ನ್ಯಾಯಾಂಗವು ಆ ವೈಫಲ್ಯವನ್ನು ಪರಿಶೀಲನೆಗೆ ಒಳಪಡಿಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಸುಪ್ರೀಂ ಕೋರ್ಟ್ ಮಂಗಳವಾರ ನೀಡಿರುವ ಈ ತೀರ್ಪು ಇತರ ರಾಜ್ಯಗಳ ರಾಜ್ಯಪಾಲರುಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ರಾಜ್ಯಪಾಲರು ಇನ್ನು ಮುಂದಾದರೂ ಕೇಂದ್ರ ಸರಕಾರದ ಏಜೆಂಟರಂತೆ ಕೆಲಸ ಮಾಡುವುದನ್ನು ನಿಲ್ಲಿಸಬೇಕಾಗಿದೆ. ವಿಧೇಯಕಗಳ ಕುರಿತಂತೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿ ಈ ರೀತಿ ತೀರ್ಪು ನೀಡಿರುವುದು ಇದೇ ಮೊದಲ ಸಲವಾಗಿದೆ.