ಗುಜರಾತ್ ಬಿಜೆಪಿ ಸರಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸಂವಿಧಾನದ ಮೂಲಕ ಅಸ್ತಿತ್ವಕ್ಕೆ ಬಂದು ಸಂವಿಧಾನ ವಿರೋಧಿ ತೀರ್ಮಾನಗಳನ್ನು ಕೈಗೊಳ್ಳುವಲ್ಲಿ ಗುಜರಾತಿನ ಬಿಜೆಪಿ ಸರಕಾರ ಕುಖ್ಯಾತಿ ಗಳಿಸಿದೆ. ೨೦೦೨ರ ಹತ್ಯಾಕಾಂಡದ ಸಮಯದಲ್ಲಿ ಅಲ್ಲಿ ಅಧಿಕಾರದಲ್ಲಿದ್ದವರು ಯಾರೆಂದು ಎಲ್ಲರಿಗೂ ಗೊತ್ತಿದೆ. ಈಗಲೂ ಅವರದೇ ಪಕ್ಷದ ಸರಕಾರ ಅಲ್ಲಿದೆ. ಅದೇ ಹಳೆಯ ವ್ಯಕ್ತಿ ವಿಭಜಕ ರಾಜಕೀಯವನ್ನು ಮುಂದುವರಿಸಿದ್ದಾರೆ. ೨೦೦೨ರ ಗಲಭೆ, ಹತ್ಯಾಕಾಂಡದ ಸಮಯದಲ್ಲಿ ಅಮಾಯಕ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿ ನ್ಯಾಯಾಲಯದಿಂದ ಶಿಕ್ಷೆಯಾಗಿ ಜೈಲಿಗೆ ಹಾಕಲ್ಪಟ್ಟ ಅಪರಾಧಿಗಳಿಗೆ ಶಿಕ್ಷೆಯ ಅವಧಿ ಮುಗಿಯುವ ಮುನ್ನವೇ ಗುಜರಾತ್ ಬಿಜೆಪಿ ಸರಕಾರ ಕ್ಷಮಾದಾನ ನೀಡಿದೆ. ಬಿಲ್ಕಿಸ್ ಬಾನು ಪ್ರಕರಣದಲ್ಲಿ ದುಷ್ಕೃತ್ಯ ಎಸಗಿದ ಹನ್ನೊಂದು ಮಂದಿ ಅಪರಾಧಿಗಳಿಗೆ ಕ್ಷಮಾದಾನ ನೀಡಿದ ಗುಜರಾತ್ ಸರಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಈ ಅಪರಾಧಿಗಳಿಗೆ ಕ್ಷಮಾದಾನ ನೀಡುವುದಾದರೆ ಉಳಿದ ಅಪರಾಧಿಗಳಿಗೆ ಈ ಮಾನದಂಡವನ್ನು ಯಾಕೆ ಅನುಸರಿಸಿಲ್ಲ ಎಂದು ಪ್ರಶ್ನಿಸಿದೆ.
ಗುಜರಾತ್‌ನಲ್ಲಿ ೨೦೦೨ರಲ್ಲಿ ಮೋದಿ ನೇತೃತ್ವದ ಸರಕಾರ ಅಸ್ತಿತ್ವದಲ್ಲಿದ್ದಾಗ ನಡೆದ ಹತ್ಯಾಕಾಂಡ ಹಾಗೂ ಗಲಭೆಯ ವೇಳೆ ಯಾವುದೇ ರಾಜಕಾರಣಕ್ಕೆ ಸಂಬಂಧವಿಲ್ಲದ ಬಿಲ್ಕಿಸ್ ಬಾನು ಅವರ ಮೇಲೆ ಕೋಮು ದ್ವೇಷದ ನಶೆ ಏರಿಸಿಕೊಂಡ ಗುಂಪೊಂದು ಸಾಮೂಹಿಕ ಅತ್ಯಾಚಾರ ಮಾಡಿತು. ಅಷ್ಟೇ ಅಲ್ಲ, ಆಕೆಯ ಕುಟುಂಬದ ಸದಸ್ಯರನ್ನು ಹತ್ಯೆ ಮಾಡಿತು. ಈ ಪ್ರಕರಣದಲ್ಲಿ ಅಪರಾಧಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಮರಣ ದಂಡನೆ ನಂತರ ಎರಡನೇ ಅತಿ ದೊಡ್ಡ ಶಿಕ್ಷೆ ಇದಾಗಿದೆ. ಇಂತಹ ಅಪರಾಧಿಗಳಿಗೆ ಗುಜರಾತ್ ಸರಕಾರ ಕ್ಷಮಾದಾನ ನೀಡಿ ಬಿಡುಗಡೆ ಮಾಡಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ‘‘ಇದು ಅಪಾಯಕಾರಿ ಸನ್ನಿವೇಶಕ್ಕೆ ಕಾರಣವಾಗಬಹುದಾದ ಮನಸ್ಸಿಗೆ ತೋಚಿದ ತೀರ್ಮಾನ’’ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಈ ಪ್ರಕರಣದಲ್ಲಿ ಹನ್ನೊಂದು ಅಪರಾಧಿಗಳನ್ನು ಶಿಕ್ಷೆಯ ಅವಧಿ ಪೂರ್ಣಗೊಳ್ಳುವ ಮೊದಲೇ ಬಿಡುಗಡೆ ಮಾಡಿರುವ ಸರಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನಾ ಮತ್ತು ಉಜ್ವಲ ಭುಯಾನ್ ಅವರಿದ್ದ ವಿಭಾಗೀಯ ಪೀಠ ಕೈಗೆತ್ತಿಗೊಂಡು ಈ ಚಾಟಿ ಏಟು ನೀಡಿದೆ.
ಸುಪ್ರೀಂ ಕೋರ್ಟ್ ಸರಕಾರದ ಧೋರಣೆಯನ್ನು ತರಾಟೆಗೆ ತೆಗೆದುಕೊಂಡಿ ರುವುದು ನ್ಯಾಯ ಸಮ್ಮತವಾಗಿದೆ. ಅಪರಾಧಿಗಳು ಅಧಿಕಾರದಲ್ಲಿರುವ ಸಂಘಟನೆಗಳಿಗೆ ಸಂಬಂಧವಿರುವವರೆಂದು ಇಂತಹ ಅಕ್ರಮ ತೀರ್ಮಾನಗಳಿಂದ ಸ್ಪಷ್ಟವಾಗುತ್ತದೆ.
ಬಿಲ್ಕಿಸ್ ಬಾನು ಅತ್ಯಾಚಾರ ಮತ್ತು ಅವರ ಕುಟುಂಬದ ಸದಸ್ಯರ ಹತ್ಯೆಯ ಪ್ರಕರಣದಲ್ಲಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದ ಹನ್ನೊಂದು ಮಂದಿ ಕುಖ್ಯಾತ ಅಪರಾಧಿಗಳಿಗೆ ಕ್ಷಮಾದಾನ ನೀಡುವ ಮುನ್ನ ಗುಜರಾತ್ ಬಿಜೆಪಿ ಸರಕಾರ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಗೃಹ ಸಚಿವ ಖಾತೆಯ ಗಮನಕ್ಕೆ ತಂದು ಅನುಮತಿ ಕೋರಿತ್ತು. ಉಳಿದ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ವಿಳಂಬ ನೀತಿ ಅನುಸರಿಸುವ ಮೋದಿ ಅವರ ಸರಕಾರದ ಗೃಹ ಇಲಾಖೆ ಈ ಕ್ಷಮಾದಾನ ಪ್ರಸ್ತಾವನೆಗೆ ಒಂದೇ ವಾರದಲ್ಲಿ ಒಪ್ಪಿಗೆ ನೀಡಿತ್ತು. ‘‘ಅಪರಾಧಿಗಳು ನಮ್ಮವರಾದರೆ ಕ್ಷಮಾರ್ಹರು, ಬೇರೆಯವರಾದರೆ ದಂಡನಾರ್ಹರು’’ ಎಂಬ ಎರಡು ಸರಕಾರಗಳ ನೀತಿ ಸಂವಿಧಾನ ಮಾತ್ರವಲ್ಲ ಸಹಜ ನ್ಯಾಯಕ್ಕೂ ಕಳಂಕಕಾರಿಯಾಗಿದೆ ಅಂದರೆ ಅತಿಶಯೋಕ್ತಿಯಲ್ಲ.
ಗುಜರಾತ್ ಗಲಭೆ ಮತ್ತು ಹತ್ಯಾಕಾಂಡದ ಸಂದರ್ಭದಲ್ಲಿ ಐದು ತಿಂಗಳ ಗರ್ಭಿಣಿ ಬಿಲ್ಕಿಸ್ ಬಾನು ಮೇಲೆ ಈ ಪಿಶಾಚಿಗಳು ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯ ಮೂರು ವರ್ಷದ ಮಗುವನ್ನು ನೆಲಕ್ಕೆ ಅಪ್ಪಳಿಸಿ ಕೊಂದು ಹಾಕಿದ್ದರು. ಈ ಅಪರಾಧ ಎಸಗಿದವರು ಮೇಲ್ಜಾತಿಗಳಿಗೆ ಹಾಗೂ ಕೋಮುವಾದಿ ಸಂಘಟನೆಗಳಿಗೆ ಸೇರಿದವರು. ಭಾರತೀಯ ಸಮಾಜದಲ್ಲಿ ಮೇಲ್ಜಾತಿ ಮತ್ತು ಮೇಲ್ವರ್ಗದ ಜನ ಯಾವುದೇ ಅತ್ಯಾಚಾರ ಮತ್ತು ಕೊಲೆಗಳನ್ನು ಮಾಡಿ ದಕ್ಕಿಸಿಕೊಳ್ಳಬಲ್ಲರು ಎಂಬುದು ಈ ದೇಶದಲ್ಲಿ ಕೋಮುವಾದಿ ಶಕ್ತಿಗಳು ಪ್ರಭುತ್ವದ ಅಧಿಕಾರ ಸೂತ್ರ ಹಿಡಿದ ನಂತರ ಸಾಬೀತಾಗುತ್ತಲೇ ಇದೆ. ಈ ಶಕ್ತಿಗಳು ನ್ಯಾಯಾಲಯದ ತೀರ್ಪುಗಳನ್ನು ಬುಡಮೇಲು ಮಾಡುವಷ್ಟು ಪ್ರಬಲವಾಗಿವೆ ಎಂಬುದು ಜನಜನಿತ.
ಬಿಲ್ಕಿಸ್ ಬಾನು ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯವಾಗಿ ಅಪರಾಧಿಗಳನ್ನು ಗಲ್ಲಿಗೆ ಹಾಕಬೇಕಾಗಿತ್ತು. ಆದರೆ ಈ ಕಿರಾತಕರು ನ್ಯಾಯಾಲಯದ ಮೆಟ್ಟಿಲೇರಿ ಮರಣ ದಂಡನೆಯಿಂದ ತಪ್ಪಿಸಿಕೊಂಡು ಜೀವಾವಧಿ ಶಿಕ್ಷೆ ಎಂದು ಬದಲಿಸಿಕೊಂಡರು. ಈಗ ಹದಿನಾಲ್ಕು ವರ್ಷಗಳ ನಂತರ ಗುಜರಾತಿನ ಬಿಜೆಪಿ ಸರಕಾರದಿಂದ ಕ್ಷಮಾದಾನ ಪಡೆದು ಹೊರಗೆ ಬಂದಿದ್ದಾರೆ. ಬಿಡುಗಡೆಯಾಗಿ ಹೊರಗೆ ಬಂದ ಇವರನ್ನು ಹೂವಿನ ಹಾರ ಹಾಕಿ ಸ್ವಾಗತಿಸಿ, ಪಟಾಕಿ ಸಿಡಿಸಿ ಸಂಭ್ರಮಿಸುವಷ್ಟು ನಮ್ಮ ಸಮಾಜ ಅಧೋಗತಿಗೆ ಜಾರಿದೆ. ಮಾಧ್ಯಮಗಳು ಉದ್ಯಮಗಳಾದ ನಂತರ ಅವುಗಳು ಸೂಕ್ಷ್ಮತೆ ಕಳೆದುಕೊಂಡಿವೆ.
ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಎಲ್ಲ ಸಮುದಾಯಗಳ ಬಡವರಿಗೆ ಇಲ್ಲಿ ರಕ್ಷಣೆ ಇಲ್ಲದಂತಾಗಿದೆ. ಗುಜರಾತ್ ಮಾತ್ರವಲ್ಲ ಇವರದೇ ಪರಿವಾರದ ಆದಿತ್ಯನಾಥ್ ಅಧಿಕಾರದಲ್ಲಿರುವ ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಆಕೆಯ ದೇಹವನ್ನು ಪೊಲೀಸರೇ ಸುಟ್ಟು ಹಾಕಿದ ಪ್ರಕರಣ ಹಾಗೂ ಉನ್ನಾವ್‌ನ ಅತ್ಯಾಚಾರದ ಪ್ರಕರಣಗಳು ನಮ್ಮ ದೇಶದ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಯಾರು ಕಾರಣರೋ ಅವರೇ ಅಧಿಕಾರದಲ್ಲಿರುವುದಕ್ಕೆ ಸಾಕ್ಷಿಯಾಗಿವೆ. ಅನೇಕ ಬಾರಿ ಗುಜರಾತ್ ಹೈಕೋರ್ಟ್ ತೀರ್ಪುಗಳು ಕೂಡ ನ್ಯಾಯ ಸಮ್ಮತವಾಗಿಲ್ಲ ಎಂಬುದು ಸುಪ್ರೀಂ ಕೋರ್ಟಿನ ಇತ್ತೀಚಿನ ತೀರ್ಪುಗಳಿಂದ ಸ್ಪಷ್ಟವಾಗುತ್ತದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೆಂಪುಕೋಟೆಯ ಮೇಲೆ ನಿಂತು ನಾರಿ ಶಕ್ತಿಯ ಬಗ್ಗೆ ಧಾರಾಳವಾಗಿ ಭಾಷಣ ಬಿಗಿಯುತ್ತಾರೆ. ಇವರ ಸೈದ್ಧಾಂತಿಕ ಸಂಘಟನೆಯ ಸರ ಸಂಘಚಾಲಕ ಭಾಗವತರು ಮಹಿಳೆಯರನ್ನು ಮಾತೆಯರೆಂದು ಕರೆಯುತ್ತಾರೆ. ಆದರೆ ಇವರದೇ ಗುಜರಾತ್ ಸರಕಾರ ನಿಜವಾದ ಮಾತೆಯಾದ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ಮಾಡಿದವರಿಗೆ ಕ್ಷಮಾದಾನ ನೀಡಿ ಬಿಡುಗಡೆ ಮಾಡುತ್ತದೆ. ಇವರದೇ ಭಕ್ತರು ಬಿಡುಗಡೆಯಾಗಿ ಬಂದ ಅಪರಾಧಿಗಳಿಗೆ ಮಾಲಾರ್ಪಣೆ ಮಾಡಿ, ಹಣೆಗೆ ತಿಲಕವಿಟ್ಟು ಯುದ್ಧ ಗೆದ್ದು ಬಂದವರಂತೆ ಸ್ವಾಗತಿಸಿ ಸಂಭ್ರಮಿಸುತ್ತಾರೆ. ಇದು ಸ್ವತಂತ್ರ ಭಾರತದ ಇಂದಿನ ಸ್ಥಿತಿ. ಇದೇ ಪರಿಸ್ಥಿತಿ ಮುಂದುವರಿದರೆ ದೇಶ ಉಳಿಯಲಾರದು.
ಹಾಗಾಗಿ ಈ ದುರವಸ್ಥೆ ಮುಂದುವರಿಯದಂತೆ ಕಡಿವಾಣ ಹಾಕಬೇಕಾದ ಮಹತ್ತರ ಜವಾಬ್ದಾರಿ ದೇಶದ ನಾಗರಿಕರ ಮೇಲಿದೆ. ಈ ಹೊಣೆಗಾರಿಕೆಯನ್ನು ಆದಷ್ಟು ಬೇಗ ಅರಿತರೆ ದೇಶಕ್ಕೆ, ದೇಶದ ಜನರಿಗೆ ಒಳಿತು.