ಭಾರತ ರತ್ನಗಳ ಮೇಲೆ ಅಶ್ರುವಾಯು,ಲಾಠಿ!
ಈ ದೇಶದ ರೈತ ಸಮುದಾಯದ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ರಾಜಕಾರಣಿ ಚರಣ್ ಸಿಂಗ್ ಮತ್ತು ಕೃಷಿ ವಿಜ್ಞಾನಿ ಸ್ವಾಮಿನಾಥನ್ಗೆ ಮರಣೋತ್ತರ ಭಾರತ ರತ್ನ ನೀಡುವ ಮೂಲಕ ಕೆಲವು ದಿನಗಳ ಹಿಂದೆ ತನ್ನನ್ನು ತಾನು ರೈತಪರವೆಂದು ಕೇಂದ್ರ ಸರಕಾರ ಘೋಷಿಸಿಕೊಂಡಿತ್ತು. ಈ ಪ್ರಶಸ್ತಿಯನ್ನು ದೇಶದ ಸಕಲ ರೈತರಿಗೆ ಸಂದ ಪ್ರಶಸ್ತಿಯೆಂಬಂತೆ ಮಾಧ್ಯಮಗಳು ಬಣ್ಣಿಸಿದವು. ವಿಪರ್ಯಾಸವೆಂದರೆ, ಹಾಗೆ ಪ್ರಶಸ್ತಿ ಘೋಷಣೆ ಮಾಡಿದ ಕೆಲವೇ ದಿನಗಳಲ್ಲಿ, ಸರಕಾರ ದೇಶದ ರೈತರ ಮೇಲೆ ಅಶ್ರುವಾಯು, ಲಾಠಿ, ಜಲಫಿರಂಗಿಗಳನ್ನು ಪ್ರಯೋಗಿಸಲು ಮುಂದಾಗಿದೆ. ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ದಿಲ್ಲಿ ಚಲೋ ನಡೆಸುತ್ತಿದ್ದ ಸಾವಿರಾರು ರೈತರನ್ನು ಚದುರಿಸಲು ಹರ್ಯಾಣದ ಪೊಲೀಸರು ಬುಧವಾರ ಅಶ್ರುವಾಯು ಶೆಲ್ಗಳನ್ನು ಸಿಡಿಸಿದ್ದಾರೆ. ರೈತರ ಮೇಲೆ ಪೊಲೀಸರು ದೌರ್ಜನ್ಯಗಳನ್ನು ಎಸಗುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಇದೇ ಸಂದರ್ಭದಲ್ಲಿ ಕನಿಷ್ಠ ಬೆಂಬಲ ಬೆಲೆ ಕಾನೂನನ್ನು ತರಾತುರಿಯಲ್ಲಿ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಕೇಂದ್ರ ಕೃಷಿ ಸಚಿವ ಅರ್ಜುನ ಮುಂಡಾ ಮಂಗಳವಾರ ತಿಳಿಸಿದ್ದಾರೆ. ಮರಣೋತ್ತರ ಭಾರತ ರತ್ನಗಳನ್ನು ಅಣಕಿಸುವಂತೆ ಪೊಲೀಸರ ಮೂಲಕ, ಮುಳ್ಳು ಬೇಲಿಗಳ ಮೂಲಕ, ಕೋವಿಗಳ ಮೂಲಕ ರೈತರನ್ನು ಕೇಂದ್ರ ಸರಕಾರ ಬಗ್ಗು ಬಡಿಯಲು ಸಿದ್ಧತೆ ನಡೆಸಿದೆ. ರೈತರು ಮತ್ತು ಕೇಂದ್ರ ಸರಕಾರದ ನಡುವಿನ ಸಮರದ ಎರಡನೇ ಅಧ್ಯಾಯವೊಂದು ಈ ಮೂಲಕ ತೆರೆದುಕೊಂಡಿದೆ.
ಹಿಂದಿನ ತಪ್ಪುಗಳಿಂದ ಕೇಂದ್ರ ಸರಕಾರ ಪಾಠ ಕಲಿತಂತೆ ಕಾಣುತ್ತಿಲ್ಲ. ಕೇಂದ್ರ ಸರಕಾರ ಜಾರಿಗೆ ತರಲು ಮುಂದಾಗಿದ್ದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಸುಮಾರು ಒಂದು ವರ್ಷಗಳ ಕಾಲ ಭಾರೀ ಹೋರಾಟವೊಂದನ್ನು ರೈತರು ಹಮ್ಮಿಕೊಂಡಿದ್ದರು. ಕಾರ್ಪೊರೇಟ್ ಹಿತಾಸಕ್ತಿಯನ್ನು ಹೊಂದಿದ್ದ ಈ ಕಾನೂನುಗಳು ಅಂಬಾನಿ, ಅದಾನಿಗಳ ಉದ್ಧಾರಕ್ಕಾಗಿ ರಚಿಸಲಾಗಿತ್ತೇ ಹೊರತು, ರೈತರ ಹಿತಾಸಕ್ತಿಗಾಗಿ ಅಲ್ಲ ಎನ್ನುವುದು ರೈತ ನಾಯಕರ ಆರೋಪಗಳಾಗಿದ್ದವು. ದೇಶದಲ್ಲೇ ಮೊದಲ ಬಾರಿಗೆ ‘ರೈತ ಗಣರಾಜ್ಯೋತ್ಸವ’ ಆಚರಿಸಲಾಯಿತಲ್ಲದೆ, ಪೊಲೀಸರ ಪಡೆಗಳನ್ನು ದಾಟಿ ಕೆಂಪು ಕೋಟೆಯಲ್ಲಿ ರೈತರ ಬಾವುಟಗಳು ಹಾರಾಡಿದವು. ಮಳೆ, ಚಳಿಯೆನ್ನದೆ ರೈತರು ದಿಲ್ಲಿಯಲ್ಲಿ ಧರಣಿ ಕೂತರು. ಹಸಿವಿನಿಂದ, ಕಾಯಿಲೆಯಿಂದ, ಪೊಲೀಸರ ಹಲ್ಲೆಗಳಿಂದ ಧರಣಿ ಕೂತ ನೂರಕ್ಕೂ ಅಧಿಕ ರೈತರು ಈ ಸಂದರ್ಭದಲ್ಲಿ ಮೃತಪಟ್ಟರು. ಪ್ರತಿಭಟನಾ ನಿರತ ರೈತರ ಮೇಲೆ ರಾಜಕಾರಣಿಗಳ ಕಾರುಗಳು ಹರಿದವು. ರೈತರ ರಕ್ತದಿಂದ ದಿಲ್ಲಿಯ ಬೀದಿಗಳು ಒದ್ದೆಯಾದವು. ಗದ್ದೆಗಳಿಗೆ ಹರಿಯಬೇಕಾಗಿದ್ದ ನೀರು ಜಲಫಿರಂಗಿಗಳಾಗಿ ರೈತರ ಮೇಲೆ ಪ್ರಯೋಗಿಸಲ್ಪಟ್ಟವು. ಗೋಲಿಬಾರ್ಗಳು ನಡೆದವು. ರೈತರನ್ನು ಉಗ್ರವಾದಿಗಳು, ಖಾಲಿಸ್ತಾನಿಗಳು ಎಂದು ಕರೆದು ಸರಕಾರ ಬಗ್ಗು ಬಡಿಯಲು ಹೊರಟಿತು. ಹಲವು ರೈತ ನಾಯಕರ ಬಂಧನವೂ ನಡೆಯಿತು. ಇಷ್ಟಾದರೂ ರೈತರು ಜಗ್ಗಲ್ಲಿಲ್ಲ. ದಿಲ್ಲಿಯ ಹೋರಾಟ ನಿಧಾನಕ್ಕೆ ದೇಶದ್ಯಾಂತ ವಿಸ್ತರಿಸತೊಡಗಿತು.
ಪರಿಸ್ಥಿತಿ ಕೈ ಮೀರುತ್ತಿದ್ದಂತೆಯೇ ೨೦೨೧ರಲ್ಲಿ ಪ್ರಧಾನಿ ಮೋದಿಯವರು ನೂತನ ಕೃಷಿ ಕಾನೂನುಗಳನ್ನು ಹಿಂದೆಗೆದುಕೊಳ್ಳುತ್ತೇವೆ ಎನ್ನುವ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ, ಬೆಂಬಲ ಬೆಲೆಯ ಕಾನೂನು ಜಾರಿಗಾಗಿ ಒಂದು ಸಮಿತಿಯನ್ನು ಸರಕಾರ ರಚಿಸಿತು. ಸಮಿತಿ ರಚನೆಯಾಗಿ ಎರಡು ವರ್ಷ ಕಳೆದಿದೆಯಾದರೂ, ಬೆಂಬಲ ಬೆಲೆ ನಿಗದಿಯ ಬಗ್ಗೆ ಸರಕಾರ ಯಾವುದೇ ತೀರ್ಮಾನವನ್ನು ತೆಗೆದುಕೊಂಡಿಲ್ಲ. ಆಡಳಿತ ನಡೆಸುವುದೆಂದರೆ ಹೊಸ ಹೊಸ ಕಾನೂನುಗಳನ್ನು ಜಾರಿಗೊಳಿಸುವುದು ಎಂದು ಬಲವಾಗಿ ನಂಬಿರುವ ಸರಕಾರಕ್ಕೆ, ಬೆಂಬಲ ಬೆಲೆ ಕಾನೂನನ್ನು ಮಾತ್ರ ಜಾರಿಗೊಳಿಸಲು ಸಾಧ್ಯವಾಗದೇ ಇರುವುದು ಅಚ್ಚರಿಯಾಗಿದೆ. ರೈತರೇನೂ ತರಾತುರಿಯಲ್ಲಿ ಕಾನೂನು ಜಾರಿಗೊಳಿಸಲು ಒತ್ತಾಯಿಸಿಲ್ಲ. ಸುಮಾರು ಎರಡು ವರ್ಷಗಳ ಸಮಯವನ್ನು ಸರಕಾರಕ್ಕೆ ರೈತರು ನೀಡಿದ್ದಾರೆ. ಪಂಜಾಬ್ನಲ್ಲಿ ಖಾಲಿಸ್ತಾನಿಗಳ ದಮನದ ಹೆಸರಿನಲ್ಲಿ ಪರೋಕ್ಷವಾಗಿ ರೈತ ನಾಯಕರ ಮೇಲೆ ಕಾನೂನನ್ನು ಬಿಗಿಗೊಳಿಸುತ್ತಾ ಬಂದಿರುವ ಸರಕಾರ, ಬೆಂಬಲ ಬೆಲೆ ನಿಗದಿಯನ್ನು ಮರೆತಂತೆ ನಟಿಸಿತು. ರಾಮಮಂದಿರವೇ ಎಲ್ಲದಕ್ಕೂ ಪರಿಹಾರವಾಗಿ ಭಾವಿಸಿತು. ಅದರ ಪರಿಣಾಮವಾಗಿ ಇದೀಗ ರೈತರು ಮತ್ತೆ ಬೀದಿಗೆ ಇಳಿಯುವಂತಾಗಿದೆ.
ರೈತರು ಬೀದಿಗಿಳಿಯುತ್ತಿದ್ದಂತೆಯೇ ‘ಪ್ರತಿಭಟನೆ ನಡೆಸುತ್ತಿರುವವರು ರೈತರಲ್ಲ. ರೈತರು ಹೊಲದಲ್ಲಿ ದುಡಿಯುತ್ತಿದ್ದಾರೆ’ ಎನ್ನುವ ಹೇಳಿಕೆಯನ್ನು ಪುನರುಚ್ಚರಿಸುತ್ತಿದೆ. ಇದರ ಜೊತೆ ಜೊತೆಗೇ ಈ ಹೋರಾಟಕ್ಕೆ ಖಾಲಿಸ್ತಾನಿ ಉಗ್ರವಾದಿಗಳ ಸಂಬಂಧವನ್ನು ಜೋಡಿಸಲು ಪ್ರಯತ್ನಿಸುತ್ತಿದೆ. ಸರಕಾರದ ಪ್ರಚೋದನೆಗಳು ಪಂಜಾಬ್ನಲ್ಲಿ ಉಗ್ರವಾದವನ್ನು ಬೆಳೆಸುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿರುವಾಗಲೇ ಕೆನಡಾ ಮತ್ತು ಅಮೆರಿಕಾದಲ್ಲಿ ಸಿಖ್ ಉಗ್ರವಾದಿಗಳ ಹತ್ಯೆ ಮತ್ತು ಹತ್ಯೆ ಯತ್ನ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದವು. ಇದರ ಬೆನ್ನಿಗೇ ಅಮೆರಿಕದಲ್ಲಿ ಕುಳಿತು ಖಾಲಿಸ್ತಾನಿ ಉಗ್ರವಾದಿಯೊಬ್ಬ ಪ್ರಧಾನಿಯ ಹತ್ಯೆ ಬೆದರಿಕೆ ಒಡ್ಡಿರುವುದನ್ನು ಮಾಧ್ಯಮಗಳಲ್ಲಿ ಸುದ್ದಿ ಮಾಡಲಾಯಿತು. ಒಟ್ಟಿನಲ್ಲಿ, ಪಂಜಾಬ್, ಹರ್ಯಾಣಗಳಲ್ಲಿ ಖಾಲಿಸ್ತಾನಿ ವಾದಿಗಳು ಸಕ್ರಿಯರಾಗಿದ್ದಾರೆ ಎನ್ನುವುದನ್ನು ಘೋಷಿಸುತ್ತಾ, ಎಲ್ಲ ಪ್ರತಿಭಟನೆಗಳು, ಹೋರಾಟಗಳನ್ನು ದೇಶವಿರೋಧಿ ಹೋರಾಟಗಳನ್ನಾಗಿಸಲು ಪ್ರಯತ್ನಿಸುತ್ತಾ ಬಂದಿದೆ. ರೈತರ ಹೋರಾಟವನ್ನು ಖಾಲಿಸ್ತಾನಿಗಳ ಖಾತೆಗೆ ಸೇರಿಸಿ ಈ ಬಾರಿ ಸುಲಭದಲ್ಲಿ ಬಗ್ಗು ಬಡಿಯಬಹುದು ಎಂದು ಸರಕಾರ ಭಾವಿಸಿದಂತಿದೆ. ಅದಕ್ಕಾಗಿಯೇ ಬೆಂಬಲ ಬೆಲೆ ನಿಗದಿ ಕಾನೂನಿನ ಬಗ್ಗೆ ಕುಂಟು ನೆಪಗಳನ್ನು ಹೇಳುತ್ತಿದೆ.
ಸರಕಾರಕ್ಕೆ ನಿಜಕ್ಕೂ ಬೆಂಬಲ ಬೆಲೆ ನಿಗದಿ ಕಾನೂನನ್ನು ಜಾರಿಗೊಳಿಸುವ ಉದ್ದೇಶವಿದ್ದರೆ ಇಷ್ಟೊಂದು ತಡ ಮಾಡುವ ಅಗತ್ಯವಿದ್ದಿರಲಿಲ್ಲ. ೨೦೨೨ರಲ್ಲಿ ರಚನೆಯಾದ ಸಮಿತಿಯ ಬಗ್ಗೆಯೇ ರೈತ ನಾಯಕರಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಮೂರು ಕೃಷಿ ಕಾನೂನುಗಳನ್ನು ಬೆಂಬಲಿಸಿದ್ದ ಕೃಷಿ ನಾಯಕರನ್ನು ಸಮಿತಿಯಲ್ಲಿ ಸೇರಿಸಿರುವುದೇ, ಬೆಂಬಲ ಬೆಲೆ ನಿಗದಿಯ ವಿರುದ್ಧ ಸರಕಾರದ ತೀರ್ಮಾನವನ್ನು ಎತ್ತಿ ಹಿಡಿಯಲು ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದರು. ೩೦ಕ್ಕೂ ಅಧಿಕ ಸಭೆ, ಕಾರ್ಯಾಗಾರಗಳ ಬಳಿಕವೂ ಸಮಿತಿ ಯಾವುದೇ ಶಿಫಾರಸನ್ನು ಮಾಡಿಲ್ಲ. ಬೆಂಬಲ ಬೆಲೆಯ ಬಗ್ಗೆ ಚರ್ಚಿಸಬೇಕಾಗಿದ್ದ ಸಮಿತಿಗಳು ಇನ್ನಿತರ ವಿಷಯಗಳನ್ನು ಚರ್ಚಿಸುತ್ತಾ ಸಮಯ ವ್ಯಯ ಮಾಡುತ್ತಿದೆ ಎಂದು ಹಲವು ರೈತ ನಾಯಕರು ಆರೋಪಿಸಿದ್ದರು. ಅಂದರೆ, ರೈತರ ಬೇಡಿಕೆಯನ್ನು ಮನ್ನಿಸಿದಂತೆ ನಟಿಸುವುದು, ಆದರೆ ಬೆಂಬಲ ಬೆಲೆ ಕಾನೂನು ಜಾರಿಯಾಗದಂತೆ ನೋಡಿಕೊಳ್ಳುವುದು ಸಮಿತಿಯ ಗುರಿಯಾಗಿತ್ತು. ಇದೀಗ ‘ತರಾತುರಿಯಲ್ಲಿ ಕಾನೂನು ಜಾರಿ ಮಾಡಲು ಸಾಧ್ಯವಿಲ್ಲ’ ಎನ್ನುವ ಕೃಷಿ ಸಚಿವರ ಮಾತುಗಳು ಈ ಕಾರಣಕ್ಕಾಗಿಯೇ ಪ್ರಶ್ನಾರ್ಹವಾಗಿದೆ. ಜಾರಿಗೊಳಿಸುವುದಿಲ್ಲ ಎಂದು ತಿರಸ್ಕರಿಸಲಾಗಿರುವ ಕಾನೂನುಗಳನ್ನು ಮತ್ತೆ ಹಿಂಬಾಗಿಲ ಮೂಲಕ ರೈತರ ಮೇಲೆ ಹೇರುವ ದುರುದ್ದೇಶವನ್ನು ಸರಕಾರ ಹೊಂದಿದೆ. ಆದುದರಿಂದಲೇ, ಅದು ಸಮಿತಿಯನ್ನು ತೋರಿಸುತ್ತಾ ಬೆಂಬಲ ಬೆಲೆ ನಿಗದಿಯನ್ನು ಮುಂದೆ ಹಾಕುತ್ತಿದೆ. ಸರಕಾರ ಕಾನೂನು ಜಾರಿಗೊಳಿಸುವುದಕ್ಕೆ ಬೃಹತ್ ಕಾರ್ಪೊರೇಟ್ ಸಂಸ್ಥೆಗಳು ತಡೆಯಾಗಿವೆ. ಮೇಲ್ನೋಟಕ್ಕೆ ಇದು ಸರಕಾರ ಮತ್ತು ರೈತರ ನಡುವಿನ ತಿಕ್ಕಾಟದಂತೆ ಕಾಣುತ್ತಿದ್ದರೂ, ಕೃಷಿಯ ಮೇಲೆ ತನ್ನ ಪೂರ್ಣ ನಿಯಂತ್ರಣವನ್ನು ಸಾಧಿಸಲು ಬಯಸುವ ಕಾರ್ಪೊರೇಟ್ದೊರೆಗಳು ಮತ್ತು ರೈತರ ನಡುವಿನ ತಿಕ್ಕಾಟವಾಗಿದೆ. ಹಿಂದೆ ಮಾಡಿದ ತಪ್ಪುಗಳಿಂದ ಆದ ಅನಾಹುತಗಳನ್ನು ಸರಕಾರ ಕಣ್ಣೆದುರು ತಂದು, ತಕ್ಷಣ ರೈತರ ಅಳಲಿಗೆ ಕಿವಿಯಾಗಬೇಕಾಗಿದೆ. ಇಲ್ಲದೆ ಇದ್ದರೆ ಈ ಹೋರಾಟದ ಕಿಚ್ಚು ಇಡೀ ದೇಶವನ್ನು ಆವರಿಸುವ ಸಾಧ್ಯತೆಗಳಿವೆ. ಕನಿಷ್ಠ ಕೃಷಿ ತಜ್ಞ ಸ್ವಾಮಿನಾಥನ್ ಅವರು ಬೆಂಬಲ ಬೆಲೆ ನಿಗದಿಯ ಬಗ್ಗೆ ತಳೆದ ಅಭಿಪ್ರಾಯವನ್ನಾದರೂ ಗೌರವಿಸಿ, ಅವರಿಗೆ ನೀಡಿದ ಭಾರತ ರತ್ನ ಗೌರವವು ಹರ್ಯಾಣದ ಬೀದಿಯಲ್ಲಿ ಮಣ್ಣುಪಾಲಾಗದಂತೆ ನೋಡಿಕೊಳ್ಳುವುದು ಸರಕಾರದ ಹೊಣೆಗಾರಿಕೆಯಾಗಿದೆ.