ಪ್ರಧಾನಿಯ ಕ್ಷಮೆಯಾಚನೆಗೆ ಕಾಯುತ್ತಿರುವ ‘ಕುಸಿತ’ಗಳು
PC: x.com/ndtvfeed
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮುಟ್ಟಿದ್ದೆಲ್ಲ ಭಸ್ಮ ಎಂಬಂತೆ ಪ್ರಧಾನಿ ಮೋದಿಯವರು ಉದ್ಘಾಟಿಸಿದ್ದೆಲ್ಲ ಒಂದೊಂದಾಗಿ ಕುಸಿದು ಬೀಳುತ್ತಿವೆೆ. ರಾಮಮಂದಿರ ಸೋರುತ್ತಿರುವುದು ಸುದ್ದಿಯಾದ ಬೆನ್ನಿಗೇ, ದಿಲ್ಲಿಯಲ್ಲಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಛಾವಣಿ ಕುಸಿದು ಬಿತ್ತು. ಇದನ್ನು ಬಿಜೆಪಿ ಸಮರ್ಥಿಸುತ್ತಿರುವ ಹೊತ್ತಿಗೇ ನೂತನವಾಗಿ ಉದ್ಘಾಟನೆಗೊಂಡ ಸಂಸತ್ ಭವನದ ಪ್ರಾಂಗಣವೇ ಸೋರುವ ಮೂಲಕ ಮಾಧ್ಯಮಗಳಿಗೆ ಆಹಾರವಾಯಿತು. ಇದೀಗ ಮಹಾರಾಷ್ಟ್ರದಲ್ಲಿ ಎಂಟು ತಿಂಗಳ ಹಿಂದೆ ಪ್ರಧಾನಿ ಮೋದಿಯವರು ಉದ್ಘಾಟಿಸಿದ್ದ 35 ಅಡಿ ಎತ್ತರದ ಶಿವಾಜಿ ಪ್ರತಿಮೆ ಕುಸಿದು ಬಿದ್ದಿದೆ. ಕಳೆದ ಡಿಸೆಂಬರ್ನಲ್ಲಿ ಭಾರತದ ನೌಕಾಪಡೆ ದಿನಾಚರಣೆಯ ಹಿನ್ನೆಲೆಯಲ್ಲಿ, ಸುಮಾರು ಎರಡೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಶಿವಾಜಿ ಪ್ರತಿಮೆಯನ್ನು ನಿರ್ಮಿಸಲಾಗಿತ್ತು. ಉದ್ಘಾಟನೆಯ ಸಂದರ್ಭದಲ್ಲಿ ‘ಈ ಪ್ರತಿಮೆ ದೇಶದ ಆತ್ಮಾಭಿಮಾನದ ಸಂಕೇತ’ ಎಂದು ಪ್ರಧಾನಿ ಬಣ್ಣಿಸಿದ್ದರು. ಇದೀಗ ಪ್ರತಿಮೆಯ ಜೊತೆ ಜೊತೆಗೆ ಮಹಾರಾಷ್ಟ್ರದ ಆತ್ಮಾಭಿಮಾನವೇ ಕುಸಿದು ಬಿದ್ದಂತಾಗಿದೆ. ಈ ಕುಸಿತ ಮಹಾರಾಷ್ಟ್ರದಲ್ಲಿ ಮಾಡುತ್ತಿರುವ ಸದ್ದಿಗೆ ಸ್ವತಃ ಪ್ರಧಾನಿ ಮೋದಿಯವರೇ ಬೆಚ್ಚಿ ಕ್ಷಮೆ ಯಾಚಿಸಿದ್ದಾರೆ. ‘‘ಪ್ರತಿಮೆ ಕುಸಿದ ಕಾರಣಕ್ಕಾಗಿ ಛತ್ರಪತಿ ಶಿವಾಜಿ ಮಹಾರಾಜ ಅವರ ಪಾದಗಳಿಗೆ ಶಿರಬಾಗಿ ಕ್ಷಮೆಯಾಚಿಸುತ್ತೇನೆ’’ ಎಂದು ಅವರು ಕಾರ್ಯಕ್ರಮವೊಂದರಲ್ಲಿ ಕೈ ಮುಗಿದು ಕೇಳಿಕೊಂಡಿದ್ದಾರೆ.
ಶೀಘ್ರದಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಲಿರುವ ಮಹಾರಾಷ್ಟ್ರದಲ್ಲಿ ಶಿವಾಜಿ ಪ್ರತಿಮೆ ಕುಸಿತದಿಂದ ವಿರೋಧ ಪಕ್ಷಗಳಿಗೆ ಹೊಸತೊಂದು ಅಸ್ತ್ರ ಸಿಕ್ಕಿದಂತಾಗಿದೆ. ಬಿಜೆಪಿಯ ಭ್ರಷ್ಟಾಚಾರದ ಪರಾಕಾಷ್ಠೆಯನ್ನು ಶಿವಾಜಿಯ ಪ್ರತಿಮೆ ಘಂಟಾ ಘೋಷವಾಗಿ ಹೇಳುತ್ತಿದೆ. ಇದೀಗ ಇದನ್ನು ಮುಂದಿಟ್ಟುಕೊಂಡು ಮಹಾರಾಷ್ಟ್ರದಲ್ಲಿ ಬಿಜೆಪಿಯ ವಿರುದ್ಧ ಪ್ರತಿಭಟನೆಗಳು ಆರಂಭವಾಗಿವೆ. ಕುಸಿದು ಬಿದ್ದ ಗೌರವವನ್ನು ಯಾವ ರೀತಿಯಲ್ಲಿ ಎತ್ತಿ ನಿಲ್ಲಿಸಬೇಕು ಎನ್ನುವುದು ತಿಳಿಯದೇ ರಾಜ್ಯ ಬಿಜೆಪಿ ನಾಯಕರು ಇಕ್ಕಟ್ಟಿನಲ್ಲಿದ್ದಾರೆ. ಈ ಕಾರಣದಿಂದಲೇ ಪ್ರಧಾನಿ ಮೋದಿಯವರು ಕ್ಷಮೆಯಾಚನೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಯಿತು. ಕ್ಷಮೆಯಾಚನೆಯ ಸಂದರ್ಭದಲ್ಲಿ ‘‘ಛತ್ರಪತಿ ಶಿವಾಜಿ ಮಹಾರಾಜರು ನಮಗೆ ಒಂದು ಹೆಸರು ಮಾತ್ರವೇ ಅಲ್ಲ. ಆರಾಧ್ಯ ದೈವ’’ ಎಂದು ಮೋದಿ ಮಾತಿನಲ್ಲಿ ಜನರಿಗೆ ಬೆಣ್ಣೆ ತಿನ್ನಿಸಲು ಮುಂದಾಗಿದ್ದಾರೆ. ಶಿವಾಜಿ ಪ್ರತಿಮೆ ಕುಸಿದಿರುವುದು ನೋವು ತಂದಿದೆ ಎನ್ನುವ ಪ್ರಧಾನಿ ಮೋದಿಯವರು, ಕುಸಿದದ್ದು ಯಾವುದೇ ಪ್ರಾಕೃತಿಕ ವಿಕೋಪದಿಂದಲ್ಲ, ಕೇಂದ್ರ ಮತ್ತು ರಾಜ್ಯ ಸರಕಾರದ ಭ್ರಷ್ಟಚಾರದಿಂದ ಎನ್ನುವುದನ್ನು ಮುಚ್ಚಿ ಹಾಕಿದ್ದಾರೆ.
ಹಾಗೆ ನೋಡಿದರೆ ಈ ದೇಶದಲ್ಲಿ ನೂರಾರು ’ಕುಸಿತ’ಗಳು ಪ್ರಧಾನಿ ಮೋದಿಯವರ ಕ್ಷಮೆಯಾಚನೆಗಾಗಿ ಕಾಯುತ್ತಿವೆ. ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ದಿನದಿಂದ ಈ ದೇಶದಲ್ಲಿ ಕುಸಿಯುವಿಕೆಯನ್ನೇ ಸಾಧನೆಯಾಗಿ ಆಚರಿಸಲಾಗುತ್ತಿದೆ. ಬಿಹಾರದಲ್ಲಿ ಒಂದೇ ತಿಂಗಳಲ್ಲಿ ಹದಿನೈದಕ್ಕೂ ಅಧಿಕ ಸೇತುವೆಗಳು ಕುಸಿದು ಬಿದ್ದವು. ಯಾವುದೇ ಪ್ರತಿಮೆಗಳಿಗಿಂತ ಜನರ ಮೂಲಭೂತ ಅಗತ್ಯ ಸೇತುವೆಗಳಾಗಿವೆ. ಈ ಸೇತುವೆಗಳು ಕುಸಿದಾಗ ಪ್ರಧಾನಿ ಮೋದಿಯವರಿಗೆ ಕೈ ಮುಗಿದು ಕ್ಷಮೆಯಾಚನೆ ಮಾಡಬೇಕು ಎಂದು ಅನ್ನಿಸಲಿಲ್ಲ. ಬಿಹಾರದಲ್ಲಿ ಆಳುತ್ತಿರುವ ಮುಖ್ಯಮಂತ್ರಿ ಕೇಂದ್ರ ಸರಕಾರದ ಭಾಗವಾಗಿದ್ದಾರೆ. ಅಲ್ಲಿನ ಭ್ರಷ್ಟಾಚಾರದಲ್ಲಿ ಪರೋಕ್ಷವಾಗಿ ಬಿಜೆಪಿಯೂ ಕೈ ಜೋಡಿಸಿದೆ. ಕಳೆದ ನಾಲ್ಕು ತಿಂಗಳಲ್ಲಿ ಗುಜರಾತ್, ದಿಲ್ಲಿ ಮತ್ತು ಮಧ್ಯಪ್ರದೇಶದಲ್ಲಿ ಏರ್ಪೋರ್ಟ್ ಒಂದರ ಹಿಂದೆ ಒಂದರಂತೆ ಛಾವಣಿಗಳು ಕುಸಿದವು. ಎರಡು ದಿನಗಳ ಹಿಂದೆ, ಗುಜರಾತ್ನ ರಾಜಕೋಟ್ ಏರ್ಪೋರ್ಟ್ನಲ್ಲಿ ರನ್ವೇಯ 15 ಅಡಿ ಎತ್ತರದ ಗೋಡೆ ಕುಸಿದು ಬಿತ್ತು. ಈ ಕಳಪೆ ಕಾಮಗಾರಿಗಳು ದೇಶದ ಜನತೆಗೆ ಮಾಡಿದ ವಂಚನೆಯಲ್ಲವೆ? ಶಿವಾಜಿ ಪ್ರತಿಮೆ ಕುಸಿತಕ್ಕೆ ಕ್ಷಮೆ ಯಾಚಿಸಿದ ಪ್ರಧಾನಿಯವರು ಈ ಬಗ್ಗೆ ಕ್ಷಮೆಯಾಚಿಸಲಿಲ್ಲ ಎಂದಾದರೆ, ಈ ಸಾಲು ಸಾಲು ಕುಸಿತಗಳನ್ನು ಪ್ರಧಾನಿ ಮೋದಿಯವರು ತಮ್ಮ ಸರಕಾರದ ಸಾಧನೆಗಳಾಗಿ ಗುರುತಿಸಿದ್ದಾರೆಯೆ?
ನೋಟು ನಿಷೇಧದ ವೈಫಲ್ಯದಿಂದ ಈ ದೇಶದ ಆರ್ಥಿಕತೆಯೇ ಕುಸಿದು ಬಿತ್ತು. ದೇಶದೊಳಗಿರುವ ಕಪ್ಪು ಹಣವನ್ನು ಹೊರ ತರುತ್ತೇನೆ ಎಂದು ಪ್ರಧಾನಿ ಮೋದಿಯವರು ರಾತ್ರೋ ರಾತ್ರಿ 500 ರೂಪಾಯಿ ಮತ್ತು ಒಂದು ಸಾವಿರ ರೂಪಾಯಿಯ ನೋಟನ್ನು ನಿಷೇಧ ಮಾಡಿದಾಗ ಈ ದೇಶದೊಳಗೆ ಬಚ್ಚಿಡಲಾಗಿದ್ದ ಕಪ್ಪು ಹಣ ಹೊರ ಬೀಳುತ್ತದೆ ಎಂದು ಜನರೂ ನಂಬಿದ್ದರು. ಆ ಕಾರಣಕ್ಕಾಗಿ ಎಲ್ಲ ನಾಶ ನಷ್ಟಗಳನ್ನು ಜನರು ಸಹಿಸಿದರು. ತಮ್ಮದೇ ಹಣಕ್ಕಾಗಿ ಬ್ಯಾಂಕಿನ ಮುಂದೆ ಕ್ಯೂ ನಿಂತರು. ಆದರೆ ಇಂದಿನವರೆಗೆ ಎಷ್ಟು ಕಪ್ಪು ಹಣ ಹೊರಬಂತು ಎನ್ನುವುದನ್ನು ಪ್ರಧಾನಿ ಮೋದಿಯವರು ಬಹಿರಂಗ ಪಡಿಸಿಲ್ಲ. ಈ ಸಂದರ್ಭದಲ್ಲಿ ದೇಶ ಆರ್ಥಿಕತೆ ಸಂಪೂರ್ಣ ನೆಲಕಚ್ಚಿತು. ದೇಶ ಹತ್ತು ವರ್ಷ ಹಿಂದಕ್ಕೆ ಚಲಿಸಿತು. ಪ್ರಧಾನಿ ಮೋದಿಯವರು ಕ್ಷಮೆ ಯಾಚಿಸುವುದಾಗಿದ್ದರೆ, ತನ್ನ ಅಪ್ರಬುದ್ಧ ನಡೆಯಿಂದ ಈ ದೇಶದ ಆರ್ಥಿಕತೆ ಕುಸಿದು ಬಿದ್ದಾಗ ಕ್ಷಮೆ ಯಾಚಿಸಬೇಕಾಗಿತ್ತು. ಇಂದಿಗೂ ತನ್ನ ವೈಫಲ್ಯವನ್ನು ಪ್ರಧಾನಿ ಮೋದಿಯವರು ಒಪ್ಪಿಕೊಂಡೇ ಇಲ್ಲ. ವಿಶ್ವ ಸಂಸ್ಥೆ ಕೊರೋನ ಬಗ್ಗೆ ಜಾಗರೂಕರಾಗಲು ಜಗತ್ತನ್ನು ಎಚ್ಚರಿಸುತ್ತಿರುವ ಸಂದರ್ಭದಲ್ಲೇ, ಗುಜರಾತ್ನಲ್ಲಿ ‘ನಮಸ್ತೆ ಟ್ರಂಪ್’ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಕೊರೋನಕ್ಕಾಗಿ ತೆರೆದಿಟ್ಟರು. ಮುಂದೇನಾಯಿತು ಎನ್ನುವುದು ಗೊತ್ತೇ ಇದೆ. ಕೊರೋನದಿಂದ ವಿಶ್ವದಲ್ಲೇ ಅತ್ಯಧಿಕ ಸಾವು ನೋವುಗಳು ಸಂಭವಿಸಿದ್ದು ಭಾರತದಲ್ಲಿ. ಗಂಗಾನದಿಯ ತಟದಲ್ಲಿ ದಫನಗೊಂಡ ಸಾಲು ಸಾಲು ಹೆಣಗಳನ್ನು ನರಿ, ನಾಯಿಗಳು ಎಳೆದು ತಿನ್ನುತ್ತಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಯಿತು. ಗಂಗಾನದಿಯಲ್ಲೂ ಕೊರೋನದಿಂದ ಮೃತಪಟ್ಟವರ ಮೃತದೇಹಗಳು ತೇಲಿದವು. ದೇಶದಲ್ಲಿ ಆಕ್ಸಿಜನ್ ಕೊರತೆಯಿಂದಾಗಿಯೇ ಸಾವಿರಾರು ಜನರು ಮೃತಪಟ್ಟರು. ಯಾವುದೇ ಪೂರ್ವ ಸಿದ್ಧತೆಯಿಲ್ಲದ ಲಾಕ್ಡೌನ್ನಿಂದಾಗಿ ವಲಸೆ ಕಾರ್ಮಿಕರ ಮಾರಣ ಹೋಮ ನಡೆಯಿತು. ಕೊರೋನಾ ಕಾಲದಲ್ಲಿ ಈ ದೇಶದ ಆರೋಗ್ಯ ವ್ಯವಸ್ಥೆಯ ಕುಸಿದು ಬಿತ್ತು. ಆಗ ಪ್ರಧಾನಿ ಮೋದಿಯವರು ಕ್ಷಮೆಯಾಚಿಸಬೇಕಾಗಿತ್ತು. ಆದರೆ ಅದನ್ನೆಲ್ಲ ಅವರು ತನ್ನ ಆಡಳಿತದ ಸಾಧನೆಯ ಪಟ್ಟಿಯಲ್ಲಿ ಸೇರಿಸಿಕೊಂಡರು.ಲಸಿಕೆಯಲ್ಲೂ ಕೋಟ್ಯಂತರ ರೂಪಾಯಿಯ ಹಗರಣಗಳು ನಡೆದವು. ಜನರು ಆಹಾರ, ಉದ್ಯೋಗಗಳನ್ನು ಕೇಳುತ್ತಿದ್ದಾಗ, ಪ್ರಧಾನಿ ಮೋದಿಯವರು ದೇಶದ ಮೇಲೆ ಬಲವಂತವಾಗಿ ಲಸಿಕೆಯನ್ನು ಹೇರಿದರು. ಅದಾಗಲೇ ಹಲವು ನುರಿತ ತಜ್ಞರು ಈ ಲಸಿಕೆಯ ವಿಶ್ವಾಸಾರ್ಹತೆಯ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಆದರೂ ಆತುರಾತುರವಾಗಿ ಲಸಿಕೆಯನ್ನು ಮಾರುಕಟ್ಟೆಗೆ ಬಿಡಲು ಕಾರಣವಾದರು. ಇದೀಗ ನೋಡಿದರೆ, ಲಸಿಕೆಯಿಂದಲೇ ಜನರು ಸಾಯುವ ಸ್ಥಿತಿ ನಿರ್ಮಾಣವಾಗಿದೆ. ಲಸಿಕೆಯ ದುಷ್ಪರಿಣಾಮಗಳ ಬಗ್ಗೆ ಲಸಿಕಾ ಸಂಸ್ಥೆಗಳೇ ಒಪ್ಪಿಕೊಂಡಿವೆ. ಲಸಿಕೆ ಪ್ರಮಾಣ ಪತ್ರದಲ್ಲಿ ತನ್ನ ಭಾವಚಿತ್ರವನ್ನು ಛಾಪಿಸಿದ್ದ ಪ್ರಧಾನಿ ಮೋದಿಯವರು ಲಸಿಕೆಯ ವೈಫಲ್ಯದಲ್ಲಿ ನೇರ ಪಾಲುದಾರರು. ಆದರೆ ಈವರೆಗೆ ಪ್ರಧಾನಿ ಮೋದಿಯವರು ಅದಕ್ಕಾಗಿ ಕ್ಷಮೆ ಯಾಚನೆ ಮಾಡಿಲ್ಲ.
ಮಣಿಪುರದಲ್ಲಿ ಮಾನವೀಯತೆಯೇ ಧ್ವಂಸಗೊಂಡು ಬಿದ್ದಿದೆ. ಮಹಿಳೆಯರನ್ನು ಸಾರ್ವಜನಿಕವಾಗಿ ಸಂಪೂರ್ಣ ಬೆತ್ತಲೆ ಗೊಳಿಸಿ ಮೆರವಣಿಗೆ ಮಾಡಿ, ಬಳಿಕ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದರು. ನೂರಾರು ಜನರು ಮೃತಪಟ್ಟರು. ನೂರಾರು ಚರ್ಚುಗಳು ಧ್ವಂಸಗೊಂಡಿವೆ. ಹಿಂಸಾಚಾರ ಇನ್ನೂ ಮುಂದುವರಿಯುತ್ತಲೇ ಇದೆ. ಇಡೀ ವಿಶ್ವವೇ ಮಣಿಪುರದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿತು. ಶಿವಾಜಿಯ ಪ್ರತಿಮೆಯಷ್ಟೇ, ಮಣಿಪುರದ ಮಹಿಳೆ, ಮಕ್ಕಳ ಮಾನ, ಪ್ರಾಣ ಕೂಡ ಈ ದೇಶಕ್ಕೆ ಮುಖ್ಯ. ಅವುಗಳ ಮೇಲೆ ನಡೆದ ದಾಳಿ ಪ್ರಧಾನಿ ಮೋದಿಯವರ ವೈಫಲ್ಯದ ಭಾಗವಾಗಿದೆ. ಆದರೆ ಈವರೆಗೆ ಪ್ರಧಾನಿ ಮೋದಿಯವರು ಅದಕ್ಕಾಗಿ ಕ್ಷಮೆಯಾಚಿಸಿಲ್ಲ. ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಮಹಿಳೆಯರನ್ನು ಸಾಮೂಹಿಕ ಅತ್ಯಾಚಾರಗೈದು, ಕೊಂದು ಹಾಕಿದ ಪಾಪಕ್ಕಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ಆರೋಪಿಗಳನ್ನು ಸರಕಾರವೇ ಬಿಡುಗಡೆಗೊಳಿಸಿತು. ಕೇಂದ್ರ ಸರಕಾರದ ಪಾತ್ರವನ್ನು ಇದರಲ್ಲಿ ಗುರುತಿಸಲಾಗಿತ್ತು. ಬಳಿಕ, ಸುಪ್ರೀಂಕೋರ್ಟ್ ಈ ಆರೋಪಿಗಳ ಬಿಡುಗಡೆಯನ್ನು ಪ್ರಶ್ನಿಸಿ, ಅವರನ್ನು ಶರಣಾಗಲು ಹೇಳಿತು. ಇದಕ್ಕಾಗಿಯೂ ಪ್ರಧಾನಿ ಮೋದಿ ಕ್ಷಮೆಯಾಚಿಸಬೇಕಾಗಿತ್ತು. ತಮ್ಮ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯವನ್ನು ಪ್ರಶ್ನಿಸಿ ಈ ದೇಶದ ಮಹಿಳಾ ಕ್ರೀಡಾಪಟುಗಳು ಬೀದಿಗಿಳಿದರು. ಆದರೆ ಪೊಲೀಸರು ಅವರ ಮೇಲೆ ಲಾಠಿ ಪ್ರಯೋಗಿಸಿ ಪ್ರತಿಭಟನೆಯನ್ನು ದಮನಿಸಿದರು. ಈ ದೇಶದ ಕ್ರೀಡಾ ಸ್ಫೂರ್ತಿಯೇ ಈ ಪ್ರಕರಣದಲ್ಲಿ ಕುಸಿದು ಬಿತ್ತು. ಕ್ರೀಡಾ ಕ್ಷೇತ್ರದೊಳಗಿನ ಭ್ರಷ್ಟ ರಾಜಕೀಯದಿಂದಾಗಿ ದೇಶ ಒಲಿಂಪಿಕ್ಸ್ನಲ್ಲಿ ಒಂದು ಚಿನ್ನವನ್ನೇ ಕಳೆದುಕೊಳ್ಳಬೇಕಾಯಿತು. ಮೋದಿ ಇವೆಲ್ಲಕ್ಕಾಗಿ ಕ್ಷಮೆಯಾಚಿಸುತ್ತಾರೆಂದು ದೇಶ ಇನ್ನೂ ಕಾಯುತ್ತಲೇ ಇದೆ. ಶಿವಾಜಿಯ ಪ್ರತಿಮೆಯಂತೆಯೇ ಈ ದೇಶದ ಹೆಣ್ಣು ಮಕ್ಕಳ ಮಾನ ಪ್ರಾಣವೂ ದೇಶದ ಪ್ರತಿಷ್ಠೆಯ ವಿಷಯವಾದಾಗ ಮಾತ್ರ, ಪ್ರಧಾನಿ ಇದಕ್ಕೆಲ್ಲ ಕ್ಷಮೆ ಯಾಚಿಸಲು ಸಾಧ್ಯ.