ಕನ್ನಡತನವನ್ನು ಎತ್ತಿ ಹಿಡಿದ ಸಮ್ಮೇಳನಾಧ್ಯಕ್ಷರ ಭಾಷಣ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಈ ಬಾರಿ ಹತ್ತು ಹಲವು ವಿವಾದಗಳ ನಡುವೆ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ದೊರಕಿದೆ. ಸಕ್ಕರೆಯ ನಾಡು ಎಂದು ಜನರಿಂದ ಅಕ್ಕರೆಯಿಂದ ಕರೆಯಲ್ಪಡುತ್ತಿದ್ದ ಮಂಡ್ಯದ ಸೌಹಾರ್ದಕ್ಕೆ ಇತ್ತೀಚೆಗೆ ಕೆಲವು ರಾಜಕೀಯ ಸಮಾವೇಶಗಳು ಕಹಿ ಬೆರೆಸಿದ್ದವು. ಪರಿಣಾಮವಾಗಿ ಮಂಡ್ಯ ಕೆಲವು ದಿನಗಳ ಕಾಲ ಉದ್ವಿಗ್ನ ಸ್ಥಿತಿಯನ್ನು ಎದುರಿಸಿತ್ತು. ಗಲಭೆಗೆ ಮನೆ, ಮನಸ್ಸು ಘಾಸಿಗೊಂಡಿದ್ದವು. ಇದೀಗ ಆ ಗಾಯಗಳಿಗೆ ಮುಲಾಮು ಹಚ್ಚುವಂತೆ ಕನ್ನಡ ನಾಡು ನುಡಿ ಸಂಭ್ರಮಕ್ಕೆ ಮಂಡ್ಯ ತೆರೆದುಕೊಳ್ಳುತ್ತಿದೆ. ಕನ್ನಡದ ಸೌಹಾರ್ದ ಸಂಸ್ಕೃತಿಯ ಮೌಲ್ಯಗಳ ಚುಂಗನ್ನು
ಹಿಡಿದುಕೊಂಡು ನಾಡಿನ ಮೂಲೆ ಮೂಲೆಗಳಿಂದ ಸಹಸ್ರಾರು ಕನ್ನಡ ಸಾಹಿತ್ಯಾಭಿಮಾನಿಗಳು ಮಂಡ್ಯದಲ್ಲಿ ನೆರೆದಿದ್ದಾರೆ. ಮನುಷ್ಯರ ಮನಸ್ಸನ್ನು ಬೆಸೆಯುವ ರೀತಿಯ ಗೋಷ್ಠಿಗಳು ಆರಂಭವಾಗಿವೆ. ಇದೇ ಸಂದರ್ಭದಲ್ಲಿ ನಿರೀಕ್ಷೆಯಂತೆಯೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕರ್ನಾಟಕದ ವರ್ತಮಾನ ಮತ್ತು ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಅತ್ಯಂತ ಮಹತ್ವದ ಮಾತುಗಳನ್ನಾಡಿದ್ದಾರೆ.
ಕೇಂದ್ರ ಸರಕಾರ ಒಕ್ಕೂಟ ವ್ಯವಸ್ಥೆಯ ಮೇಲೆ ನಡೆಸುತ್ತಿರುವ ದಾಳಿಯ ಬಗ್ಗೆ ಗೊ.ರು.ಚ. ಅವರು ತಮ್ಮ ಮಾತಿನುದ್ದಕ್ಕೂ ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯಗಳ ಮೇಲೆ ಕೇಂದ್ರ ಸರಕಾರ ಉದ್ದೇಶಪೂರ್ವಕವಾಗಿ ಹಿಂದಿಯನ್ನು ಹೇರುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಇದನ್ನು ಪ್ರತಿರೋಧಿಸುವುದು ಇಂದಿನ ಅಗತ್ಯವಾಗಿದೆ ಎಂದು ಸಮ್ಮೇಳನದಲ್ಲಿ ಕರೆ ನೀಡಿದ್ದಾರೆ. ಈ ದೇಶದ ಬಹುತ್ವವನ್ನು ಕಾಪಾಡುತ್ತಲೇ ನಮ್ಮತನವನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎನ್ನುವುದನ್ನು ಅವರು ತಮ್ಮ ಮಾತಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರಕಾರದ ಅಧೀನದಲ್ಲಿರುವ ರಾಜ್ಯಗಳ ವಿವಿಧ ಇಲಾಖೆಗಳಲ್ಲಿ, ಮಂಡಳಿಗಳಲ್ಲಿ, ಬ್ಯಾಂಕುಗಳಲ್ಲಿ ಹಿಂದಿ ಮಾತುಗಳನ್ನು ಸಂವಹನವಾಗಿ ಬಳಸಲು ಅನಿವಾರ್ಯ ಸ್ಥಿತಿಯನ್ನು ಕೇಂದ್ರ ಸರಕಾರ ನಿರ್ಮಿಸುತ್ತಿದೆ. 351ನೇ ವಿಧಿಯ ಅನ್ವಯ ಹಿಂದಿ ಭಾಷೆಗೆ ಆದ್ಯತೆ ನೀಡುವ ಅವಕಾಶವಿದ್ದರೂ ಅದು ಹೇರಿಕೆ ಮತ್ತು ದಬ್ಬಾಳಿಕೆ ರೂಪದಲ್ಲಿ ಜಾರಿಗೆ ಬರಬಾರದು. ಕನ್ನಡನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಕನ್ನಡದ ಮೇಲೆ ಹಿಂದಿಯನ್ನು ಹೇರಲು ಕೇಂದ್ರ ಸರಕಾರದ ಜೊತೆಗೆ ಪರೋಕ್ಷವಾಗಿ ಕೈಜೋಡಿಸಿರುವ ಕನ್ನಡ ವಿರೋಧಿ ರಾಜಕಾರಣಿಗಳಿಗೆ ನೀಡಿರುವ ಎಚ್ಚರಿಕೆಯಾಗಿದೆ. ಇದರ ಜೊತೆ ಜೊತೆಗೆ ಇತರ ರಾಜ್ಯ ಭಾಷೆಗಳ ಜೊತೆಗೆ ಕನ್ನಡದ ಸಂಬಂಧವನ್ನು ಗಟ್ಟಿಗೊಳಿಸಲು ಕೆಲವು ಕಾರ್ಯಯೋಜನೆಗಳನ್ನು ವಿವರಿಸಿದ್ದಾರೆ. ಒಂದೆಡೆ ತನ್ನತನವನ್ನು ಕಾಯುತ್ತಲೇ, ಇತರ ಪ್ರಾದೇಶಿಕ ಭಾಷೆಗಳ ಜೊತೆಗೆ ಸೌಹಾರ್ದವನ್ನು ಸಾಧಿಸುತ್ತಾ ಹೋಗುವ ಅಗತ್ಯವನ್ನು ಅವರು ಎತ್ತಿ ಹಿಡಿದಿದ್ದಾರೆ.
ಭಾಷೆಯ ಜೊತೆಜೊತೆಗೇ ಕರ್ನಾಟಕದ ಆರ್ಥಿಕತೆಯ ಮೇಲೆ ಕೇಂದ್ರದ ಸರಕಾರ ಮಾಡುತ್ತಿರುವ ದಾಳಿಗಳ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ‘‘ನಬಾರ್ಡ್ ವಾರ್ಷಿಕವಾಗಿ ಕರ್ನಾಟಕಕ್ಕೆ ನೀಡುತ್ತಿದ್ದ ಹಣಕಾಸು ಸಾಲವನ್ನು 2024-25ರಲ್ಲಿ ಶೇ. 58ರಷ್ಟು ಕಡಿತಮಾಡಿದೆ. ಈ ಮಾತುಗಳನ್ನು ರಾಜಕೀಯ ಬಣ್ಣದ ಮೂಲಕ ನೋಡುವುದು ಸಲ್ಲ. ಇದು ಕರ್ನಾಟಕಸ್ಥರ ಬದುಕು ಮತ್ತು ಭವಿಷ್ಯದ ಪ್ರಶ್ನೆ, ರಾಜ್ಯಗಳು
ಆರ್ಥಿಕವಾಗಿ ಬೆಳೆದರೆ ಮಾತ್ರ ಭಾರತ ಬೆಳೆಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ಕೇಂದ್ರ-ರಾಜ್ಯಗಳ ನಡುವಣ ಸಂಬಂಧದ ಬಗ್ಗೆ, ಮುಖ್ಯವಾಗಿ ಹಣಕಾಸು ಸಂಬಂಧದ ಕುರಿತಂತೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕು ಮತ್ತು ಈ ಬಗ್ಗೆ ಕೇಂದ್ರ ಸರಕಾರವು ಸಂವಿಧಾನ ಮತ್ತು ಹಣಕಾಸು ತಜ್ಞರ ಒಂದು ವಿಶೇಷ ಆಯೋಗವನ್ನು ರಚಿಸಬೇಕು’’ ಎಂದು ಆಗ್ರಹಿಸಿದ್ದಾರೆ. ಕನ್ನಡ ನಾಡು ನುಡಿಯ ಅಭಿವೃದ್ಧಿ ಎಂದರೆ ಕೇವಲ ಭಾಷೆ, ಸಂಸ್ಕೃತಿಯ ಉದ್ಧಾರವಷ್ಟೇ ಅಲ್ಲ. ಕನ್ನಡವೆಂದರೆ ದುಡಿಯುವ ಜನರೂ ಹೌದು. ಆರ್ಥಿಕವಾಗಿ ಅವರನ್ನು ಮೇಲೆತ್ತದೆ ಕನ್ನಡವನ್ನು ಮೇಲೆತ್ತಲು ಸಾಧ್ಯವಾಗದು ಎನ್ನುವುದನ್ನು ಅವರು ಪ್ರತಿಪಾದಿಸಿದ್ದಾರೆ. ಕರ್ನಾಟಕಕ್ಕೆ ಆಗಿರುವ ತೆರಿಗೆ ಅನ್ಯಾಯದ ಬಗ್ಗೆ ಮೌನವಾಗಿರುವ ಸಂಸದರು ಕೂಡ ಈ ಮಾತನ್ನು ಗಂಭೀರವಾಗಿ ಸ್ವೀಕರಿಸಬೇಕು. ಕನ್ನಡದ ಅಭಿವೃದ್ಧಿಯ ವಿಷಯ ಬಂದಾಗ ಪಕ್ಷ ಭೇದ ಮರೆತು ಕೇಂದ್ರದ ವಿರುದ್ಧ ಹೋರಾಟ ಮಾಡಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.
ಸಮ್ಮೇಳನಾಧ್ಯಕ್ಷರು ಎತ್ತಿರುವ ಇನ್ನೊಂದು ಬಹುಮುಖ್ಯ ವಿಷಯವೆಂದರೆ, ಕೈಗಾರಿಕೋದ್ಯಮಗಳು ಕನ್ನಡಿಗರಿಗೇ ಉದ್ಯೋಗವನ್ನು ನೀಡಬೇಕು ಎನ್ನುವುದು. ಈ ಹಿಂದೆ ಕನ್ನಡಿಗರಿಗೆ ಖಾಸಗಿ ಉದ್ದಿಮೆಯಲ್ಲಿ ಮೀಸಲಾತಿಯ ಬಗ್ಗೆ ನಿರ್ಧಾರವನ್ನು ತೆಗೆದುಕೊಂಡು ಕೊನೆಯಕ್ಷಣದಲ್ಲಿ ರಾಜ್ಯ ಸರಕಾರ ಹಿಂದಕ್ಕೆ ಸರಿದಿತ್ತು. ಕನ್ನಡದ ನೆಲ, ಜಲವನ್ನು ಬಳಸಿಕೊಂಡು, ಸರಕಾರದ ಸಬ್ಸಿಡಿಯ ಸವಲತ್ತುಗಳನ್ನು ಪಡೆದುಕೊಂಡು ಕೈಗಾರಿಕೆಗಳನ್ನು ಆರಂಭಿಸುವ ಉದ್ಯಮಿಗಳು ಕನ್ನಡಿಗರ ಋಣಸಂದಾಯ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕನ್ನಡಿಗರಿಗೆ ಉದ್ಯೋಗವನ್ನು ನೀಡುವ ಬಗ್ಗೆ ಸರಕಾರ ಅವರಿಂದ ಮುಚ್ಚಳಿಕೆಯನ್ನು ಬರೆಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಕನ್ನಡಿಗರು ಇಂದು ಬೇರೆ ಬೇರೆ ಕ್ಷೇತ್ರಗಳಲ್ಲಿ ಭಾರೀ ಸಾಧನೆಗಳನ್ನು ಮಾಡಿದ್ದಾರೆ. ಐಟಿ, ಬಿಟಿ ಕ್ಷೇತ್ರಗಳಲ್ಲೂ ಅವರ ಕೊಡುಗೆ ಅಸಾಮಾನ್ಯವಾದುದು. ವಿಶ್ವೇಶ್ವರಯ್ಯರಂತಹ ಶ್ರೇಷ್ಠ ಇಂಜಿನಿಯರ್‌ಗಳು ಆಗಿ ಹೋದ ನೆಲ ನಮ್ಮದು. ಹೀಗಿರುವಾಗ ಕನ್ನಡಿಗರ ಪ್ರತಿಭೆಯ ಬಗ್ಗೆ ಖಾಸಗಿ ವಲಯ ಅನುಮಾನಿಸುವುದು ತಪ್ಪು ಎಂದು ಅವರು ಪರೋಕ್ಷವಾಗಿ ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲ, ಕನ್ನಡ ಭಾಷೆ ಮತ್ತು ಲಿಪಿಯನ್ನು ಆಧುನಿಕ ತಂತ್ರಜ್ಞಾನಗಳಿಗೆ ಪೂರಕವಾಗಿಸುವ ಮೂಲಕ ಕನ್ನಡವನ್ನು ಅರಿವಿನ ಮತ್ತು ಅನ್ನದ ಭಾಷೆಯಾಗಿ ಪರಿವರ್ತನೆಗೊಳಿಸಬೇಕು ಎಂದು ಅವರು ಸರಕಾರಕ್ಕೆ ಕರೆ ನೀಡಿದ್ದಾರೆ. ಅದಕ್ಕಾಗಿ ಕೆಲವು ಮಹತ್ವದ ಯೋಜನೆಗಳನ್ನು ಮುಂದಿಟ್ಟಿದ್ದಾರೆ. ಅವುಗಳನ್ನು ಕಾರ್ಯರೂಪಕ್ಕೆ ತರುವುದು ಸರಕಾರದ ಹೊಣೆಯಾಗಿದೆ. ಸರಕಾರಿ ಶಾಲೆಗಳನ್ನು ಮೇಲೆತ್ತುವ ಮೂಲಕ ಹೇಗೆ ಕನ್ನಡವನ್ನು ಉಳಿಸಿ ಬೆಳೆಸಬಹುದು ಎನ್ನುವ ಅವರ ಸಲಹೆಗಳನ್ನು ಕೂಡ ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಮಹಿಳಾ ಸಮಾನತೆಗಾಗಿ ಯೋಜನೆಗಳನ್ನು ಜಾರಿಗೊಳಿಸುವುದು, ಕರ್ನಾಟಕದ ಪಶ್ಚಿಮಘಟ್ಟಗಳನ್ನು ರಕ್ಷಿಸಿ ನೆಲಜಲವನ್ನು ಕಾಪಾಡುವುದು ಇವೆಲ್ಲವೂ ಕನ್ನಡಕ್ಕೆ ಸಂಬಂಧಿಸಿದ್ದು ಎನ್ನುವುದನ್ನು ಅವರು ಭಾಷಣದಲ್ಲಿ ಪದೇ ಪದೇ ಸರಕಾರಕ್ಕೆ ನೆನಪಿಸಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಮಂಡ್ಯದ ನೆಲದಲ್ಲಿ ನಿಂತು ಅವರು, ಜಾತಿ ಧರ್ಮದ ಹೆಸರಲ್ಲಿ ನಾಡನ್ನು ಒಡೆಯುವ ಜನರಿಗೂ ಎಚ್ಚರಿಕೆ ನೀಡಿದ್ದಾರೆ. ‘‘ಹಬ್ಬ-ಹರಿದಿನಗಳು, ಉತ್ಸವ- ಆರಾಧನೆಗಳು, ಧಾರ್ಮಿಕ ಮುಖಂಡರ ಜಯಂತಿಗಳು ಜನರನ್ನು ಒಟ್ಟಿಗೆ ತರುವ ಕೆಲಸಕ್ಕೆ ಬದಲಾಗಿ ಸಮಾಜವನ್ನು ಒಡೆಯುವ ಆಯುಧಗಳಾಗುತ್ತಿವೆ. ದಯೆಯ ಬದಲಾಗಿ ಹಿಂಸೆಯನ್ನು ವಿಜೃಂಭಿಸಲಾಗುತ್ತಿದೆ’’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಸಾಹಿತ್ಯ ಸಮಾಜವನ್ನು ಬೆಸೆಯಬೇಕು. ಈ ನಿಟ್ಟಿನಲ್ಲಿ ಮಂಡ್ಯದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಈ ನಾಡನ್ನು ಕನ್ನಡದ ಅಸ್ಮಿತೆಯಲ್ಲಿ ಒಂದಾಗಿಸಬೇಕಾಗಿದೆ. ಎಲ್ಲ ಜಾತಿ, ಧರ್ಮಗಳ ಹೆಸರಿನಲ್ಲಿರುವ ಕಳೆಗಳು ಕನ್ನಡ ಸಾಹಿತ್ಯದ ಪ್ರವಾಹದಲ್ಲಿ ಕರಗಿ ಹೋಗಬೇಕು. ಇದೇ ಸಂದರ್ಭದಲ್ಲಿ, ಅಧಿವೇಶನದಲ್ಲೇ ಒಬ್ಬ ಸಚಿವೆಯನ್ನು ರಾಜಕಾರಣಿಯೊಬ್ಬ ಅತ್ಯಂತ ಹೀನ ಭಾಷೆಯಲ್ಲಿ ನಿಂದಿಸಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಒಬ್ಬ ಮಹಿಳೆಯ ವಿರುದ್ಧ ಹಿರಿಯ ರಾಜಕಾರಣಿ ಅಂತಹದೊಂದು ಹೀನ ಭಾಷೆ ಬಳಸಿರುವುದಕ್ಕಾಗಿ ನಾಡು ತಲೆತಗ್ಗಿಸಿದೆ. ವಿಪರ್ಯಾಸವೆಂದರೆ, ಅದೇ ರಾಜಕಾರಣಿ ಶನಿವಾರ ಸಾಹಿತ್ಯ ಸಮ್ಮೇಳನದ ಗೋಷ್ಠಿಯೊಂದರಲ್ಲಿ ಉಪನ್ಯಾಸ ನೀಡಲಿದ್ದಾರೆ. ಕರ್ನಾಟಕವನ್ನು ‘ತಾಯಿ ಭುವನೇಶ್ವರಿ’ಗೆ ಅಂದರೆ ಹೆಣ್ಣಿಗೆ ಸಮೀಕರಿಸುವ ಪ್ರಯತ್ನವನ್ನು ಹಲವರು ಮಾಡಿದ್ದಾರೆ. ಅಂತಹ ಹೆಣ್ಣಿನ ಬಗ್ಗೆ ಹೀನಾಯ ಮಾತುಗಳನ್ನಾಡಿ ಆರೋಪಿ ಸ್ಥಾನದಲ್ಲಿ ನಿಂತಿರುವ ರಾಜಕಾರಣಿಗೆ ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ ಮಾತನಾಡಲು ಅವಕಾಶ ನೀಡುವುದು ಎಷ್ಟು ಸರಿ? ಇದು ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಮಾಡುವ ಅವಮಾನವಲ್ಲವೆ? ಈ ಕಾರಣದಿಂದ ಆ ರಾಜಕಾರಣಿ ಗೋಷ್ಠಿಯಲ್ಲಿ ಭಾಗವಹಿಸದಂತೆ ನೋಡಿಕೊಂಡು ಸಮ್ಮೇಳನವನ್ನು ಅರ್ಥಪೂರ್ಣವಾಗಿ ಸಮಾಪನಗೊಳಿಸುವುದು ಕಸಾಪ ಅಧ್ಯಕ್ಷರು ಮತ್ತು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಜಂಟಿ ಹೊಣೆಗಾರಿಕೆಯಾಗಿದೆ.