ವಿದ್ಯಾರ್ಥಿನಿಯ ಬರ್ಬರ ಕೊಲೆ: ಸಮಾಜದ ಪಾಲೆಷ್ಟು?
ಎರಡು ದಿನಗಳ ಹಿಂದೆ ಎಸೆಸೆಲ್ಸಿ ಪರೀಕ್ಷೆ ಹೊರ ಬಿತ್ತು. ಫಲಿತಾಂಶದಲ್ಲಿ ‘ಬಾಲಕಿಯರ ಮೇಲುಗೈ’ ಎಂದು ನಾಡು ಹೆಮ್ಮೆ ಪಡುತ್ತಿರುವಾಗಲೇ, ಅತ್ತ ಕೊಡಗಿನಿಂದ ಬರ್ಬರ ಕೃತ್ಯವೊಂದು ನಾಡನ್ನು ಬೆಚ್ಚಿ ಬೇಳಿಸಿತು. ಎಸೆಸೆಲ್ಸಿಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣಳಾದ ಸಂಭ್ರಮದಲ್ಲಿದ್ದ ವಿದ್ಯಾರ್ಥಿನಿಯೊಬ್ಬಳನ್ನು ದುಷ್ಕರ್ಮಿಯೊಬ್ಬ ಅತ್ಯಂತ ಭೀಕರವಾಗಿ ಕೊಲೆ ಮಾಡಿದ್ದ. ಕೊಡಗಿನ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿಯ ಕುಂಬಾರ ಗಡಿಗೆ ಎಂಬಲ್ಲಿ ಈ ಕೃತ್ಯ ನಡೆದಿತ್ತು. ಕೊಲೆಯ ಭೀಕರತೆಯೇ, ಆರೋಪಿ ಸೈಕೋಪಾತ್ ಎನ್ನುವುದನ್ನು ಹೇಳುತ್ತಿತ್ತು. ಬಂಧಿತ ಆರೋಪಿ ಪ್ರಕಾಶ್, ವಿದ್ಯಾರ್ಥಿನಿಯ ತಲೆ ಕತ್ತರಿಸಿ ಕೊಲೆ ಮಾಡಿದ್ದಾನೆ. ಸಂತ್ರಸ್ತೆಯ ರುಂಡವನ್ನು ಆಕೆಯ ನಿವಾಸದಿಂದ ಸುಮಾರು 100 ಮೀಟರ್ ದೂರದ ಕಾಡಿನ ನಡುವೆ ಪತ್ತೆ ಮಾಡಲಾಗಿದೆ. ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರಂಭದಲ್ಲಿ ವದಂತಿ ಹಬ್ಬಿತ್ತು. ಆದರೆ ಬಳಿಕ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದನ್ನು ಒಂದು ಬರ್ಬರ ಅಪರಾಧ ಪ್ರಕರಣವಾಗಿಯಷ್ಟೇ ನೋಡುವಂತಿಲ್ಲ. ಇದು ಬರೀ ಕೊಲೆಯಲ್ಲ.. ಬಹುಶಃ ಕೊಲೆ ಮಾಡಿದವನು ನಿರ್ದಿಷ್ಟ ಸಮುದಾಯಕ್ಕೆ ಸೇರಿದ್ದು ಕೊಲೆಯಾದವಳು ಇನ್ನೊಂದು ಧರ್ಮಕ್ಕೆ ಸೇರಿದ್ದಿದ್ದರೆ ಈ ಕೃತ್ಯ ರಾಜಕೀಯ ತಿರುವು ಪಡೆದುಕೊಳ್ಳುತ್ತಿತ್ತು. ಕೊಲೆಯಾದ ವಿದ್ಯಾರ್ಥಿನಿಯ ಮನೆಗೆ ರಾಜಕಾರಣಿಗಳ ದಂಡು ಭೇಟಿ ನೀಡುತ್ತಿತ್ತು. ಬೀದಿಯಲ್ಲಿ ಪ್ರತಿಭಟನೆ ನಡೆಯುತ್ತಿತ್ತು ಮಾತ್ರವಲ್ಲ, ಇಡೀ ಕೊಲೆಗೆ ಕೊಲೆಗಾರ ಪ್ರತಿನಿಧಿಸುವ ಸಮುದಾಯವನ್ನೇ ಹೊಣೆ ಮಾಡಲಾಗುತ್ತಿತ್ತು. ಕೊಡಗು ಜಿಲ್ಲೆ ಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗುತ್ತಿತ್ತು. ಕೊಲೆ ಮಾಡಿದವನು ಆಕೆಯ ಸಮುದಾಯಕ್ಕೇ ಸೇರಿದ ಕಾರಣದಿಂದಾಗಿ ರಾಜಕಾರಣಿಗಳಿಗೆ ಈ ಕೊಲೆ ಆಘಾತಕಾರಿ ಅನ್ನಿಸಲಿಲ್ಲ. ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದೂ ಅನ್ನಿಸಿಲ್ಲ. ಯಾವುದೇ ಮಹಿಳಾ ಆಯೋಗದ ತಂಡ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನವನ್ನು ಹೇಳಿಲ್ಲ. ಇದು ಅತ್ಯಂತ ವಿಷಾದನೀಯವಾಗಿದೆ. ತಮ್ಮ ರಾಜಕೀಯ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಗೆ ಸಮಾಜವೇ ಕೊಲೆಗಾರ ಮನಸ್ಥಿತಿಯನ್ನು ಪೋಷಿಸುತ್ತಿದೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ.
ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿಯ ಕೊಲೆಗೂ ಇದಕ್ಕೂ ದೊಡ್ಡ ವ್ಯತ್ಯಾಸವಿಲ್ಲವಾದರೂ ಬರ್ಬರತೆಯಲ್ಲಿ ಹುಬ್ಬಳ್ಳಿಯ ಕೃತ್ಯವನ್ನು ಹಲವು ಪಟ್ಟು ಮೀರಿಸುತ್ತಿದೆ. ಇದು ಪ್ರೇಮ ಪ್ರಕರಣದ ಕಾರಣದಿಂದ ನಡೆದಿರುವ ಕೊಲೆಯಲ್ಲ. ಇಲ್ಲಿ ಕೊಲೆಗಾರನಿಗೆ ವಿದ್ಯಾರ್ಥಿನಿಯನ್ನು ಮದುವೆ ಮಾಡಿಕೊಡುವ ನಿರ್ಧಾರಕ್ಕೆ ಕುಟುಂಬಸ್ಥರು ಬಂದಿದ್ದರು. ಆದರೆ ಇದು ಸಮಾಜ ಕಲ್ಯಾಣ ಇಲಾಖೆಗೆ ತಿಳಿದು ಅಧಿಕಾರಿಗಳು ಮಧ್ಯಪ್ರವೇಶಿಸಿ ‘ಬಾಲ್ಯ ವಿವಾಹ’ ಎನ್ನುವ ಕಾರಣಕ್ಕಾಗಿ ಮದುವೆಯನ್ನು ತಡೆದರು. ಇಲ್ಲವಾದರೆ ಕೊಲೆಗಾರನ ಜೊತೆಗೆ ಆ ವಿದ್ಯಾರ್ಥಿನಿ ಮದುವೆಯಾಗಿ ಜೀವನ ಪೂರ್ತಿ ಏಗಬೇಕಾಗಿತ್ತು. ಹತ್ತನೇ ತರಗತಿಯ ವಿದ್ಯಾರ್ಥಿನಿಯನ್ನು ಈ ಸೈಕೋಪಾತ್‌ಗೆ ವಿವಾಹ ಮಾಡಿಸಿಕೊಡುವುದು ಯಾವ ಕೊಲೆಗಿಂತಲೂ ಕಡಿಮೆಯೇನೂ ಅಲ್ಲ. ಮದುವೆಯಾಗಿದ್ದರೆ ಈತನ ಜೊತೆಗೆ ಆಕೆ ಜೀವಚ್ಛವವಾಗಿ ಬದುಕಬೇಕಾಗಿತ್ತೇನೋ? ಈ ಮೂಲಕ, ಇನ್ನೂ ಹೇಗೆ ಗ್ರಾಮಾಂತರ ಪ್ರದೇಶದಲ್ಲಿ ಬಾಲ್ಯ ವಿವಾಹ ಜೀವಂತವಾಗಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಮದುವೆ ಮುರಿದು ಬಿದ್ದ ಒಂದೇ ಕಾರಣಕ್ಕಾಗಿ ಹುಡುಗಿಯನ್ನು ಕೊಂದು ಹಾಕುವ ಸ್ಥಿತಿಗೆ ಕೊಲೆಗಾರ ಯಾಕೆ ತಲುಪಿದ? ಇದರ ಹಿಂದೆ ಇನ್ನಷ್ಟು ಕಾರಣಗಳೂ ಇದ್ದಿರಬಹುದು. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಮಾತ್ರವಲ್ಲ, ಇಂತಹ ಬಾಲ್ಯ ವಿವಾಹಗಳಿಗೆ ಬಲಿಯಾಗಿ ನರಕದ ಜೀವನವನ್ನು ನಡೆಸುತ್ತಿರುವ ತರುಣಿಯರ ಬಗ್ಗೆಯೂ ಸಮಾಜ ಕಲ್ಯಾಣ ಇಲಾಖೆ ತನಿಖೆ ನಡೆಸಬೇಕು. ಈ ವಿದ್ಯಾರ್ಥಿನಿಯನ್ನು ಈತನಿಗೆ ಮದುವೆ ಮಾಡಿಸಲು ಹೊರಟ ಎಲ್ಲರೂ ಈ ಕೊಲೆ ಕೃತ್ಯದಲ್ಲಿ ಸಹಭಾಗಿಗಳಾಗಿದ್ದಾರೆ. ತಾನು ಮಾಡದ ತಪ್ಪಿಗೆ ವಿದ್ಯಾರ್ಥಿನಿ ಅತ್ಯಂತ ಬರ್ಬರವಾಗಿ ಕೊಲೆಗೀಡಾಗಬೇಕಾಯಿತು. ಈ ಹಿನ್ನೆಲೆಯಲ್ಲಿ ಮದುವೆಯ ನಿಶ್ಚಿತಾರ್ಥದಲ್ಲಿ ಶಾಮೀಲಾದ ಎಲ್ಲರನ್ನೂ ಪೊಲೀಸರು ವಶಕ್ಕೆ ಪಡೆದು ಇದರ ಹಿಂದಿರುವ ಇತರ ಕಾರಣಗಳನ್ನು ಬಯಲಿಗೆಳೆಯಬೇಕು.
ಒಬ್ಬ ಗಂಡು ತಾನು ಇಷ್ಟ ಪಟ್ಟ ಹೆಣ್ಣು ತನಗೆ ಸಿಕ್ಕಿಲ್ಲ ಎನ್ನುವ ಕಾರಣಕ್ಕಾಗಿ ಆಕೆಯನ್ನು ಕೊಲ್ಲುತ್ತಾನೆ ಎಂದಾದರೆ ಆತನ ‘ಇಷ್ಟ’ವೇ ಪ್ರಶ್ನಾರ್ಹವಾಗಬೇಕಾಗುತ್ತದೆ. ಯಾಕೆಂದರೆ ನಿಜಕ್ಕೂ ಆತ ಹುಡುಗಿಯನ್ನು ಪ್ರೀತಿಸಿದ್ದಿದ್ದರೆ ಆತ ಕೊಲೆ ಮಾಡಲು ಸಾಧ್ಯವಿಲ್ಲ. ಉಡುಪಿಯ ನೇಜಾರು ಪ್ರಕರಣ, ಹುಬ್ಬಳ್ಳಿಯ ನೇಹಾ ಪ್ರಕರಣ, ಕೊಡಗಿನ ಪ್ರಕರಣಗಳಲ್ಲಿ ಇವರೆಲ್ಲರೂ ಕೊಲೆಗಾರ ಮನಸ್ಥಿತಿಯನ್ನು ಹೊಂದಿದ್ದರು. ಹೆಣ್ಣಿನ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸುವ ಪುರುಷ ಅಹಂನ ಪ್ರದರ್ಶನ ಈ ‘ಇಷ್ಟ’ದಲ್ಲಿ ನಾವು ಗುರುತಿಸಬಹುದು. ತನ್ನ ಪ್ರೀತಿಗೆ ಧಕ್ಕೆಯಾದ ಕಾರಣಕ್ಕಾಗಿಯಲ್ಲ, ತನ್ನ ‘ಅಹಂ’ಗೆ ಧಕ್ಕೆಯಾದ ಕಾರಣಕ್ಕೇ ಇಲ್ಲಿ ಕೊಲೆಗಳು ನಡೆದಿವೆ. ಹೆಣ್ಣಿಗೆ ಗಂಡನ್ನು ತಿರಸ್ಕರಿಸುವ ಅಧಿಕಾರವಿಲ್ಲ ಎನ್ನುವ ಪುರುಷಾಂಹಕಾರ ಇದರ ಹಿಂದಿದೆ. ಕೊಡಗಿನಲ್ಲಿ ನಡೆದ ಕೊಲೆ ಕೃತ್ಯದಲ್ಲಿ ಆರೋಪಿ ಮಾತ್ರವಲ್ಲ, ಕುಟುಂಬ, ಸಮಾಜ ಕೂಡ ಸಹಭಾಗಿಗಳು ಎನ್ನುವುದನ್ನು ನಾವು ಮರೆಯಬಾರದು. ಸಮಾಜ ಆಧುನಿಕವಾದಷ್ಟು ಪುರುಷನ ಮನಸ್ಸು ಸಂಕುಚಿತವಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಹೆಣ್ಣಿನ ಕುರಿತಂತೆ ಆತನಲ್ಲಿರುವ ಕೀಳರಿಮೆ, ಅಭದ್ರ ಭಾವನೆಗಳು ಅಂತಿಮವಾಗಿ ಆತನನ್ನು ಕೊಲೆಗಾರನನ್ನಾಗಿಸುತ್ತಿರುವುದು ಆತಂಕಕಾರಿಯಾಗಿದೆ. ಇತ್ತೀಚೆಗೆ ಬರುತ್ತಿರುವ ಸಿನೆಮಾಗಳು, ಸಾಮಾಜಿಕ ಜಾಲತಾಣದ ಪ್ರಭಾವಗಳು ಮತ್ತು ಅದಕ್ಕೆ ಪೂರಕವಾಗಿ ಯುವಕರನ್ನು ತನ್ನ ಜಾಲದಲ್ಲಿ ಕೆಡಹುತ್ತಿರುವ ಮಾದಕ ದ್ರವ್ಯಗಳ ಮೊದಲ ಬಲಿಪಶುಗಳು ಮಹಿಳೆಯರೇ ಆಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಹೆಣ್ಣಿನ ಮೇಲೆ ಅತ್ಯಾಚಾರ ಅಥವಾ ಇನ್ನಿತರ ಲೈಂಗಿಕ ದೌರ್ಜನ್ಯಗಳು ನಡೆದಾಗ ಸಮಾಜ ಹೆಣ್ಣಿಗೆ ಇನ್ನಷ್ಟು ಕಠಿಣವಾದ ಕಟ್ಟುಪಾಡುಗಳನ್ನು ವಿಧಿಸುತ್ತದೆ. ಆದರೆ ಇದೇ ಸಂದರ್ಭದಲ್ಲಿ ಕೃತ್ಯ ಎಸಗಿದ ಪ್ರಮುಖ ಆರೋಪಿ ‘ಪುರುಷ’ನಿಗೆ ಕಟ್ಟುಪಾಡುಗಳನ್ನು ವಿಧಿಸುವ ಅಗತ್ಯವಿದೆ ಎನ್ನುವುದನ್ನು ಮರೆತು ಬಿಡುತ್ತದೆ. ನೈತಿಕತೆಗೆ ಸಂಬಂಧಿಸಿದ, ಚಾರಿತ್ರ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ನಾವು ಹೆಣ್ಣಿನ ಕಡೆಯಿಂದಷ್ಟೇ ನಿರೀಕ್ಷಿಸುವುದರಿಂದ, ಹೆಣ್ಣಿನ ವಿರುದ್ಧ ಅಪರಾಧಗಳನ್ನು ಎಸಗಲು ಗಂಡಿಗೆ ಪರೋಕ್ಷ ಪರವಾನಿಗೆ ನೀಡಿದಂತಾಗಿದೆ. ಕೌಟುಂಬಿಕವಾಗಿ ಅಡುಗೆ ಕೆಲಸದಿಂದ ಹಿಡಿದು ಎಲ್ಲ ರೀತಿಯ ನೈತಿಕ ಜವಾಬ್ದಾರಿಗಳನ್ನು ಗಂಡು ಹೆಣ್ಣುಗಳಿಗೆ ಸಮಾನವಾಗಿ ಬೋಧಿಸುವ ಅಗತ್ಯವಿದೆ. ಹೆಣ್ಣಿನ ಬಗ್ಗೆ ವಹಿಸುವ ಕಾಳಜಿಯನ್ನು ಸಮಾಜ ಗಂಡಿನ ಕುರಿತಂತೆಯೂ ವಹಿಸಬೇಕಾಗಿದೆ. ಹೆಣ್ಣಿಗಿರುವಂತೆ ಆತನಿಗೂ ಚಾರಿತ್ರ್ಯ, ಶೀಲ ಎನ್ನುವುದು ಇದೆ ಎನ್ನುವುದನ್ನು ಬಾಲ್ಯದಲ್ಲೇ ಬೋಧಿಸಬೇಕು. ಇದೇ ಸಂದರ್ಭದಲ್ಲಿ ಮನರಂಜನೆಯ ಹೆಸರಿನಲ್ಲಿ ‘ಕಬೀರ್ ಸಿಂಗ್’ ‘ಅನಿಮಲ್’ನಂತಹ ಕ್ರೌರ್ಯ ಪ್ರಧಾನ, ಪುರುಷಾಹಂಕಾರವನ್ನು ವೈಭವೀಕರಿಸುವ, ಪೋಷಿಸುವ ಚಿತ್ರಗಳನ್ನು ಗೆಲ್ಲಿಸುತ್ತಾ ನಾವು ನಮ್ಮ ಸಮಾಜವನ್ನು ಸೋಲಿಸುತ್ತಿದ್ದೇವೆ ಎನ್ನುವ ಎಚ್ಚರಿಕೆ ಇರಬೇಕು. ಡ್ರಗ್ಸ್ ನಂತಹ ಮಾದಕ ದ್ರವ್ಯಗಳ ಬಗ್ಗೆ ಜಾಗೃತಿ ಮೂಡಿಸಿದಂತೆಯೇ ಯುವಕರಲ್ಲಿ ಇಂತಹ ಸಿನೆಮಾಗಳ ಬಗ್ಗೆಯೂ ಜಾಗೃತಿ ಮೂಡಿಸಬೇಕು.