ನಕಲಿ ಔಷಧಿಗಳ ಹಾವಳಿ
ಸಾಂದರ್ಭಿಕ ಚಿತ್ರ ( freepik)
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ನಮ್ಮ ವ್ಯವಸ್ಥೆ ಎಷ್ಟು ಹದಗೆಟ್ಟಿದೆಯೆಂದರೆ ಮನುಷ್ಯನ ಜೀವ ಉಳಿಸಲು ತಯಾರಿಸಲ್ಪಡುವ ಔಷಧಿಗಳು ಜೀವವನ್ನು ರಕ್ಷಿಸುವ ಬದಲಾಗಿ ಜೀವವನ್ನು ತೆಗೆಯುವ ಪಾಷಾಣವಾಗಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಈ ಅಕ್ರಮಗಳನ್ನು ತಡೆಯಬೇಕಾದ ಸರಕಾರಗಳ ಹೆದರಿಕೆಯೂ ಲಾಭಕೋರ ಔಷಧಿ ಮಾರಾಟಗಾರರಿಗೆ ಇಲ್ಲದಂತಾಗಿದೆ. ಅದರಲ್ಲೂ ಖಾಸಗಿ ಔಷಧಿ ಮಳಿಗೆಗಳಲ್ಲಿ ಇಂಥ ಕಾನೂನು ಬಾಹಿರವಾದ ಔಷಧಿಗಳ ಮಾರಾಟ ವ್ಯಾಪಕವಾಗಿ ನಡೆದಿವೆ. ಇತ್ತೀಚೆಗೆ ರಾಜ್ಯದ ಕೆಲವೆಡೆ ಔಷಧಿ ನಿಯಂತ್ರಣ ಇಲಾಖೆ ನಡೆಸಿರುವ ತಪಾಸಣೆಯಿಂದ ಇದು ಬೆಳಕಿಗೆ ಬಂದಿದೆ. ಇಂಥ ಒಂದು ಸಾವಿರಕ್ಕೂ ಅಧಿಕ ಖಾಸಗಿ ಔಷಧಿ ಮಳಿಗೆಗಳ ಪರವಾನಿಗೆಯನ್ನು ಅಮಾನತಿನಲ್ಲಿ ಇಡಲಾಗಿದೆ.
ರಾಜ್ಯದಲ್ಲಿ ಸುಮಾರು 37 ಸಾವಿರಕ್ಕೂ ಅಧಿಕ ಔಷಧಿ ಮಳಿಗೆಗಳಿವೆ. 23 ಜನ ಸಂಜೀವಿನಿ ಕೇಂದ್ರಗಳಿವೆ. 278 ಜನೌಷಧಿ ಕೇಂದ್ರಗಳಿವೆ. ಇವುಗಳಲ್ಲಿ ಬಹುತೇಕ ಖಾಸಗಿ ಮಳಿಗೆಗಳಲ್ಲಿ ನಕಲಿ ಔಷಧಿಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತದೆ. ಸರಕಾರಿ ಆಸ್ಪತ್ರೆಗಳಲ್ಲೂ ಇಂಥ ಕಳಪೆ ಔಷಧಿಗಳನ್ನು ರೋಗಿಗಳಿಗೆ ಕೊಡಲಾಗುತ್ತಿರುವುದೂ ಬಯಲಾಗಿದೆ. ಬಳ್ಳಾರಿಯ ವಿಮ್ಸ್ನಲ್ಲಿ ಸಂಭವಿಸಿರುವ ಬಾಣಂತಿಯರ ಸಾವುಗಳಿಗೆ ಇಂಥ ನಕಲಿ ಔಷಧಿಗಳ ಸೇವನೆ ಕಾರಣವೆಂದು ರಾಜ್ಯ ಸರಕಾರ ನೇಮಿಸಿದ ತನಿಖಾ ಸಮಿತಿ ನೀಡಿರುವ ವರದಿಯಿಂದ ಗೊತ್ತಾಗಿದೆ. ಇದು ಕರ್ನಾಟಕದಲ್ಲಿ ಮಾತ್ರವಲ್ಲ ದೇಶದ ವಿವಿಧ ಕಡೆ ನಡೆಯುತ್ತಲೇ ಇವೆ. ತನಿಖಾ ವರದಿಯ ಪ್ರಕಾರ ಈ ಲೋಪಕ್ಕೆ ಔಷಧಿ ನಿಯಂತ್ರಣ ಮಂಡಳಿಯ ನಿರ್ಲಕ್ಷ್ಯವೇ ಕಾರಣವೆಂದು ತಿಳಿದು ಬಂದಿದೆ.
ಔಷಧಿ ನಿಯಂತ್ರಣ ಇಲಾಖೆ 2023-24ನೇ ವರ್ಷದಲ್ಲಿ 21,694 ಔಷಧಿ ಮಳಿಗೆಗಳಲ್ಲಿ ಪರಿಶೀಲನೆ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ಕಂಡು ಬಂದ ಸಂಗತಿ ಅಂದರೆ ರಾಜ್ಯದಲ್ಲಿ ಸಾವಿರಾರು ಖಾಸಗಿ ಔಷಧಿ ಮಳಿಗೆಗಳು ನಿಯಮಬಾಹಿರವಾಗಿ ಕಾರ್ಯವನ್ನು ನಿರ್ವಹಿಸುತ್ತಿವೆ. ಈ ಪರಿಶೀಲನೆ ನಂತರ 2,245 ಖಾಸಗಿ ಔಷಧಿ ಮಳಿಗೆಗಳ ಪರವಾನಿಗೆಯನ್ನು ಅಮಾನತುಗೊಳಿಸಲಾಗಿದೆ ಹಾಗೂ 292 ಔಷಧಿ ಮಳಿಗೆಗಳ ಪರವಾನಿಗೆಯನ್ನು ರದ್ದುಗೊಳಿಸಲಾಗಿದೆ.
ಇಂಥ ಖಾಸಗಿ ಔಷಧಿ ಮಳಿಗೆಗಳಲ್ಲಿ ವೈದ್ಯರ ಸಲಹಾ ಚೀಟಿಗಳಿಲ್ಲದೆ ಔಷಧಿ ಮಾರಾಟ ವ್ಯಾಪಕವಾಗಿ ನಡೆದಿದೆ. ಬಯಲಿಗೆ ಬಂದ ಇನ್ನೊಂದು ಸಂಗತಿಯೆಂದರೆ ಅವಧಿ ಮೀರಿದ ಔಷಧಿಗಳ ಮಾರಾಟ. ಅನೇಕ ಕಡೆ ಸರಕಾರ ಗೊತ್ತುಪಡಿಸಿದ ದರಕ್ಕಿಂತ ಹೆಚ್ಚಿನ ಹಣ ಪಡೆದು ಔಷಧಿಗಳನ್ನು ಮಾರಾಟ ಮಾಡುತ್ತಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಖಾಸಗಿ ಔಷಧಿ ಮಳಿಗೆಗಳಲ್ಲಿ ಅಗತ್ಯವಾದ ನಿರ್ದಿಷ್ಟ ವಿದ್ಯಾರ್ಹತೆ ಇಲ್ಲದವರು ಕೆಲಸ ಮಾಡುತ್ತಾರೆ. ಇಂಥ ಹಲವಾರು ಅಕ್ರಮಗಳು ನಡೆದಿರುವುದು ತಪಾಸಣೆ ಮಾಡಿದಾಗ ತಿಳಿದು ಬಂದಿದೆ.
ಔಷಧಿ ನಿಯಂತ್ರಣಾಧಿಕಾರಿಗಳನ್ನೊಳಗೊಂಡ ಪರಿಶೀಲನೆ ಮಾಡುವ ತಂಡವು ನಡೆಸಿದ ಕಾರ್ಯಾಚರಣೆ ವೇಳೆ ಕಂಡು ಬಂದ ಇನ್ನೊಂದು ಕಳವಳಕಾರಿ ಸಂಗತಿಯೇನೆಂದರೆ ಕೆಲವು ಔಷಧಿ ಮಳಿಗೆಗಳಲ್ಲಿ ಕಾನೂನಿಗೆ ವಿರುದ್ಧವಾದ ಮಾದಕ ಔಷಧಿವನ್ನು ಲಂಗುಲಗಾಮಿಲ್ಲದೆ ಮಾರಾಟ ಮಾಡಲಾಗುತ್ತಿದೆ. ಇಂಥ ಅಕ್ರಮ ವ್ಯವಹಾರ ರಾಜಧಾನಿ ಬೆಂಗಳೂರಿನಲ್ಲಿ ಉಳಿದ ಜಿಲ್ಲೆಗಳಿಗಿಂತ ಜಾಸ್ತಿ ಪ್ರಮಾಣದಲ್ಲಿ ನಡೆಯುತ್ತಿದೆ.
ಜಾಗತೀಕರಣ ಹಾಗೂ ನವ ಉದಾರೀಕರಣದ ಆರ್ಥಿಕ ನೀತಿಯ ಪರಿಣಾಮವಾಗಿ ಯಾವುದೇ ವಸ್ತುವಿನ ಉತ್ಪಾದನೆ ಮತ್ತು ಮಾರಾಟ ಜನಸಾಮಾನ್ಯರ ಅಗತ್ಯಗಳಿಗಾಗಿ ನಡೆಯುತ್ತಿಲ್ಲ. ಜನರ ಆರೋಗ್ಯಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಚಾರದಲ್ಲೂ ಹಣ ಗಳಿಸುವುದೊಂದೇ ಔಷಧಿ ಕಂಪೆನಿಗಳ ಹಾಗೂ ಖಾಸಗಿ ದವಾಖಾನೆಗಳ ಉದ್ದೇಶವಾಗಿದೆ. ಹರ್ಯಾಣ ಮತ್ತು ಹಿಮಾಚಲ ಪ್ರದೇಶಗಳಂಥ ರಾಜ್ಯಗಳಲ್ಲಿ ಮಾರಾಟಕ್ಕೆ ಬೇಕಾದ ಔಷಧಿಗಳನ್ನು ಕೇಳಿದ ತಕ್ಷಣ ತಯಾರಿಸಿಕೊಡುವ ಕಾರ್ಖಾನೆಗಳಿವೆ ಎಂಬುದು ಅತ್ಯಂತ ಆತಂಕದ ಸಂಗತಿ. ಮಾರುಕಟ್ಟೆಗಾಗಿ ಹಾಗೂ ಲಾಭಕ್ಕಾಗಿ ತಯಾರಿಸುವ ಇಂಥ ಕಾರ್ಖಾನೆಗಳಲ್ಲಿ ಯಾವುದೇ ಸುರಕ್ಷತಾ ಮಾನದಂಡಗಳನ್ನು ಅನುಸರಿಸುವುದಿಲ್ಲ. ಯಾವುದೇ ಗುಣಮಟ್ಟವನ್ನು ಕಾಯ್ದುಕೊಳ್ಳುವುದಿಲ್ಲ. ಈಗಂತೂ ನಕಲಿ ಔಷಧಿಗಳನ್ನು ತಯಾರಿಸುವುದು ದೊಡ್ಡ ದಂಧೆಯಾಗಿದೆ. ಬಹುತೇಕ ಕಡೆ ಇಂಥ ನಕಲಿ ಔಷಧಿ ತಯಾರಿಸುವ ಕಂಪೆನಿಗಳ ಜೊತೆ ಸರಕಾರದ ದೊಡ್ಡ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬುದು ಬರೀ ಆರೋಪವಲ್ಲ.
ಇದು ಒಂದು ಊರಿನ, ಜಿಲ್ಲೆಯ, ರಾಜ್ಯದ ಸಮಸ್ಯೆ ಮಾತ್ರವಲ್ಲ. ಇದು ಎಲ್ಲ ರಾಜ್ಯಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಆಹಾರ ಧಾನ್ಯಗಳಲ್ಲಿ, ತಿಂಡಿ ಪದಾರ್ಥಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕಲಬೆರಕೆ ಹಾಗೂ ನಕಲಿ ವಸ್ತುಗಳ ಮಾರಾಟ ಈಗ ಜನರ ಆರೋಗ್ಯಕ್ಕೆ ಸಂಬಂಧಿಸಿದ ಔಷಧಿಗಳ ಉತ್ಪಾದನಾ ವಲಯಕ್ಕೂ ವಿಸ್ತರಣೆಯಾಗಿದೆ. ದೇಶ ವ್ಯಾಪಿಯಾಗಿ ಹಬ್ಬಿರುವ ಈ ನಕಲಿ ಔಷಧಿ ಜಾಲವನ್ನು ಪತ್ತೆ ಹಚ್ಚಿದ ಕೇಂದ್ರೀಯ ಔಷಧಿ ಮಾನಕ ನಿಯಂತ್ರಣ ಸಂಸ್ಥೆ 111 ಔಷಧಿಗಳ ಸ್ಯಾಂಪಲ್ಗಳನ್ನು ಪರೀಕ್ಷಿಸಿ ಕಳಪೆಯಾದ ಅವುಗಳನ್ನು ರದ್ದು ಮಾಡಿದೆ.
ವ್ಯಾಪಕವಾಗಿರುವ ಇಂಥ ಕಳಪೆ ನಕಲಿ ಔಷಧಿಗಳಿಂದಾಗಿ ಜನಸಾಮಾನ್ಯರ ಆರೋಗ್ಯ ಹದಗೆಡುವುದಲ್ಲದೆ ಔಷಧಿಗಳನ್ನು ತಯಾರಿಸುವ ಉದ್ಯಮಗಳ ಬಗ್ಗೆ ಜನರ ನಂಬಿಕೆಯೂ ಹೊರಟು ಹೋಗುತ್ತದೆ. ಜನಸಾಮಾನ್ಯರ ಆರೋಗ್ಯದ ಜೊತೆಗೆ ಆಟವಾಡುತ್ತಿರುವ ಔಷಧಿ ತಯಾರಿಕೆ ಕಾರ್ಖಾನೆಗಳು ಹಾಗೂ ಮಾರಾಟಗಾರರ ಮೇಲೆ ಹಾಗೂ ಇದರಲ್ಲಿ ಶಾಮೀಲಾಗಿರುವ ಪ್ರಭಾವಿ ವ್ಯಕ್ತಿಗಳು ಮತ್ತು ಕಾರ್ಖಾನೆಗಳ ಮೇಲೆ ಸರಕಾರ ಯಾವುದೇ ಮುಲಾಜಿಲ್ಲದೆ ಉಗ್ರ ಕ್ರಮಗಳನ್ನು ಕೈಗೊಳ್ಳಬೇಕು. ಬರೀ ಸರಕಾರ ಮಾತ್ರವಲ್ಲ ಸಾರ್ವಜನಿಕರು ಅಪಾಯಕಾರಿ ಔಷಧಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಆದರೆ ಬಹುತೇಕ ರಾಜಕಾರಣಿಗಳು ಪರಸ್ಪರ ದೂರುವುದು ಹಾಗೂ ಭಾವನಾತ್ಮಕ ವಿಷಯಗಳ ಬಗ್ಗೆ, ಜನರಲ್ಲಿ ದ್ವೇಷದ ವಿಷಬೀಜವನ್ನು ಬಿತ್ತುವುದರ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಜನರೇ ಎಚ್ಚೆತ್ತು ಹೋರಾಟಕ್ಕೆ ಮುಂದಾಗಬೇಕಾಗಿದೆ. ಇಂಥ ಪರಿಸ್ಥಿತಿಯಲ್ಲಿ ಸರಕಾರ, ಔಷಧಿ ನಿಯಂತ್ರಣ ಸಂಸ್ಥೆಗಳು, ಔಷಧಿ ಮಾರಾಟಗಾರರು ಮತ್ತು ಸಾರ್ವಜನಿಕರು ಒಗ್ಗಟ್ಟಿನಿಂದ ಧ್ವನಿಯೆತ್ತಬೇಕಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಔಷಧಿ ತಯಾರಿಸುವ ಕಂಪೆನಿಗಳು ತಾವು ಉತ್ಪಾದಿಸುವ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಉತ್ತರದಾಯಿಯಾಗಿರಬೇಕು. ನಕಲಿ ಔಷಧಿಗಳನ್ನು ಪತ್ತೆ ಹಚ್ಚಲು ಮತ್ತು ಅಂಥ ಅಪಾಯಕಾರಿ ಔಷಧಿಗಳನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯಲು ಔಷಧಿ ನಿಯಂತ್ರಕ ಸಂಸ್ಥೆಗಳ ಜೊತೆ ಸಹಕಾರ ನೀಡಬೇಕು. ಎಲ್ಲಕ್ಕಿಂತ ಜನರ ಆರೋಗ್ಯ ಮುಖ್ಯವಾಗಿದೆ. ಆರೋಗ್ಯದ ವಿಷಯದಲ್ಲಿ ಸರಕಾರ ಯಾವುದೇ ಒತ್ತಡಕ್ಕೂ ಮಣಿಯದೆ ನಕಲಿ ಔಷಧಿ ತಯಾರಕರ ಮೇಲೆ ಕ್ರಮಗಳನ್ನು ಕೈಗೊಳ್ಳಲು ಹಿಂಜರಿಯಬಾರದು. ಆಲೋಪತಿ ಮಾತ್ರವಲ್ಲ ಮಾರುಕಟ್ಟೆಗೆ ಬಿಡುವ ನಕಲಿ ಆಯುರ್ವೇದ ಹಾಗೂ ಹೋಮಿಯೋಪತಿ ಔಷಧಿಗಳ ಬಗ್ಗೆಯೂ ನಿಗಾ ಇಡಬೇಕು.
ನಕಲಿ ಔಷಧಿಗಳು ಮಾತ್ರವಲ್ಲ ಬಹುತೇಕ ಖಾಸಗಿ ಆಸ್ಪತ್ರೆಗಳು ಕೂಡ ತಮ್ಮ ಆಸ್ಪತ್ರೆಗಳಿಗೆ ಬರುವ ರೋಗಿಗಳಿಂದ ದುಡ್ಡು ದೋಚುವ ದಂಧೆಯಲ್ಲಿ ನಿರತವಾಗಿವೆ. ಇಂಥ ಖಾಸಗಿ ಆಸ್ಪತ್ರೆಗಳ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು. ಅಷ್ಟೇ ಅಲ್ಲ ಸರಕಾರಿ ಆರೋಗ್ಯ ವ್ಯವಸ್ಥೆಯನ್ನು ಬಲ ಪಡಿಸಬೇಕು.