ಮತ್ತೆ ಮತ್ತೆ ಕಿವಿ ಹಿಂಡುತ್ತಿರುವ ಸುಪ್ರೀಂ ಕೋರ್ಟ್
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಒಂಭತ್ತು ವರ್ಷಗಳ ಹಿಂದೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಒಕ್ಕೂಟ ಸರಕಾರದ ಅಧಿಕಾರ ಸೂತ್ರವನ್ನು ಹಿಡಿದ ನಂತರ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ದುರ್ಬಲಗೊಳಿಸುವ ಮಸಲತ್ತುಗಳು ನಡೆಯುತ್ತಲೇ ಇವೆ. ಈ ಅವಾಂತರಗಳಿಗೆಲ್ಲ ಸರ್ವೋಚ್ಚ ನ್ಯಾಯಾಲಯ ಕಿವಿ ಹಿಂಡಿ ಬುದ್ಧಿ ಹೇಳಬೇಕಾಗಿ ಬಂದಿದೆ. ಹೆಸರಾಂತ ಮಾನವ ಹಕ್ಕು ಹೋರಾಟಗಾರ್ತಿ, ನ್ಯಾಯವಾದಿ ತೀಸ್ತಾ ಸೆಟಲ್ವಾಡ್ ಬಂಧನದ ಪ್ರಕರಣ ಮತ್ತು ಸುಪ್ರೀಂ ಕೋರ್ಟ್ ಅವರಿಗೆ ನೀಡಿರುವ ಜಾಮೀನು ಇದಕ್ಕೆ ಇತ್ತೀಚಿನ ಉದಾಹರಣೆಯಾಗಿದೆ.
2002ರ ಗುಜರಾತ್ ಹತ್ಯಾಕಾಂಡದ ನಂತರ ಅಲ್ಲಿ ಹಿಂಸಾಚಾರಕ್ಕೆ ಬಲಿಯಾದವರು ಮತ್ತು ಅವರ ಕುಟುಂಬದವರಿಗೆ ನ್ಯಾಯ ಕೊಡಿಸಲು ವಕೀಲೆಯಾಗಿ ತೀಸ್ತಾ ಸೆಟಲ್ವಾಡ್ ಪರಿಶ್ರಮ ವಹಿಸಿದ್ದೇ ಅಪರಾಧವಾಗಿ ಅವರನ್ನು 2022 ಜೂನ್ 25ರಂದು ಗುಜರಾತಿನ ಪೊಲೀಸರು ಬಂಧಿಸಿದ್ದರು. ನಂತರ ಜಾಮೀನು ಕೋರಿ ತೀಸ್ತಾ ಸಲ್ಲಿಸಿದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿತು. ಬಳಿಕ ತೀಸ್ತಾ ಸೆಟಲ್ವಾಡ್ ಸುಪ್ರೀಂ ಕೋರ್ಟ್ ಮೊರೆ ಹೋದರು.ಸುಪ್ರೀಂ ಕೋರ್ಟ್ ತೀಸ್ತಾ ಸೆಟಲ್ವಾಡ್ ಅವರ ಮನವಿಯನ್ನು ಪುರಸ್ಕರಿಸಿ ಗುಜರಾತ್ ಹೈಕೋರ್ಟಿನ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ ಗುಜರಾತ್ ಪೊಲೀಸರು ತೀಸ್ತಾ ಸೆಟಲ್ವಾಡ್ ಅವರಿಗೆ ನೀಡುತ್ತಿರುವ ಕಿರುಕುಳ ಅನಾವಶ್ಯಕ ಮತ್ತು ಅಸಮರ್ಥನೀಯ ಎಂದು ತಿಳಿಸಿದೆ ಹಾಗೂ ಅವರಿಗೆ ಮಧ್ಯಂತರ ಜಾಮೀನು ನೀಡಿದೆ. ಗುಜರಾತ್ ಹೈಕೋರ್ಟ್ ಹಾಗೂ ಪೊಲೀಸರ ಬಗ್ಗೆ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದ ಕಟು ವಿಮರ್ಶೆ ಮುಟ್ಟಿ ನೋಡಿಕೊಳ್ಳುವಂತಿದೆ.
ತೀಸ್ತಾ ಸೆಟಲ್ವಾಡ್ ಅವರನ್ನು ಪೊಲೀಸ್ ವಶಕ್ಕಾಗಲಿ, ನ್ಯಾಯಾಂಗದ ಬಂಧನಕ್ಕಾಗಲಿ ಒಳಪಡಿಸುವ ಅಗತ್ಯವಿಲ್ಲ. ಅವರು ನ್ಯಾಯಾಲಯದ ವಿಚಾರಣೆಯಿಂದ ತಪ್ಪಿಸಿಕೊಂಡು ಪಲಾಯನ ಮಾಡುವುದಿಲ್ಲ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದಿಲ್ಲ ಹಾಗೂ ಸಾಕ್ಷ್ಯಾಧಾರಗಳನ್ನು ನಾಶ ಮಾಡಿಲ್ಲ. ಹಾಗಾಗಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಗುಜರಾತ್ ಹೈಕೋರ್ಟ್ ತೀರ್ಪು ಸಮರ್ಥನೀಯವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಗಮನಾರ್ಹವಾಗಿದೆ.
ನಾಗರಿಕರ ಜನತಾಂತ್ರಿಕ ಹಕ್ಕುಗಳನ್ನು ದಮನ ಮಾಡುತ್ತಿರುವ ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ವಿಫಲಗೊಂಡ ಸರಕಾರದ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದೆ. ಇತ್ತೀಚೆಗೆ ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲು ಮಾಡಿ ಮೆರವಣಿಗೆ ಮಾಡಿದ ಕೃತ್ಯದ ಬಗ್ಗೆ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ನಾವು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಹಾಗೂ ಮಣಿಪುರದ ಬಿಜೆಪಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಗಮನಿಸಬಹುದು.
ಇದಿಷ್ಟೇ ಅಲ್ಲ. ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಜಾರಿ ನಿರ್ದೇಶನಾಲಯ ಮತ್ತು ಸಿಬಿಐನಂಥ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಕೂಡ ಸರ್ವೋಚ್ಚ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದೆ.ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಛತ್ತೀಸ್ಗಡದಲ್ಲಿ 2,000 ಕೋಟಿ ರೂ. ಮೊತ್ತದ ಅಬಕಾರಿ ಹಗರಣದ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತು. ಲಕ್ಷಾಂತರ ಕೋಟಿ ರೂ. ಹಗರಣ ಮಾಡಿದವರು ಬಿಜೆಪಿಯ ಜೊತೆ ಸೇರಿದರೆ ದೋಷ ಮುಕ್ತಗೊಳ್ಳುವುದು, ಬಿಜೆಪಿ ಸೇರದಿದ್ದರೆ ಐಟಿ ದಾಳಿಯಾಗುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಇದಕ್ಕೆ ಇನ್ನೊಂದು ಉದಾಹರಣೆಯೆಂದರೆ ಮಹಾರಾಷ್ಟ್ರದ ಶರದ್ ಪವಾರ್ ನೇತೃತ್ವದ ರಾಷ್ಟ್ರವಾದಿ ಕಾಂಗ್ರೆಸ್ ನಾಯಕ ಅಜಿತ್ ಪವಾರ್ ಮತ್ತು ಪ್ರಫುಲ್ ಪಟೇಲರನ್ನು ಮಹಾ ಭ್ರಷ್ಟರೆಂದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಟೀಕಿಸಿದ್ದರು. ಆದರೆ ಇವರೆಲ್ಲ ಬಿಜೆಪಿ ಸೇರಿದ ನಂತರ ಅವರನ್ನು ಮಹಾರಾಷ್ಟ್ರದಲ್ಲಿ ಮಂತ್ರಿ ಸ್ಥಾನ ನೀಡಿ ಗೌರವಿಸಲಾಗಿದೆ. ಹಾಗಾಗಿಯೇ ಕೇಂದ್ರೀಯ ತನಿಖಾ ಸಂಸ್ಥೆಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿವೆ.
ಜಾರಿ ನಿರ್ದೇಶನಾಲಯದಲ್ಲಿ ತನಗೆ ಬೇಕಾದ ಅಧಿಕಾರಿಗಳ ಸೇವಾವಧಿಯನ್ನು ಮೋದಿ ಸರಕಾರ ನಿಯಮ ಮೀರಿ ವಿಸ್ತರಿಸುತ್ತಿರುವ ಬಗೆಗೂ ಸುಪ್ರೀಂ ಕೋರ್ಟ್ ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ಜಾರಿ ನಿರ್ದೇಶನಾಲಯ ದ ನಿರ್ದೇಶಕ ಎಸ್.ಕೆ. ಮಿಶ್ರಾ ಅವರ ಸೇವಾವಧಿಯನ್ನು ವಿಸ್ತರಣೆ ಮಾಡಿದ ಕೇಂದ್ರ ಸರಕಾರದ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಅಸಿಂಧುಗೊಳಿಸಿದೆ.ಇದರಿಂದಾಗಿ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಮುಖಭಂಗವಾದಂತಾಗಿದೆ.
ಸುಪ್ರೀಂ ಕೋರ್ಟ್ ತೀರ್ಪಿಗೆ ಗೃಹ ಮಂತ್ರಿ ಅಮಿತ್ ಶಾ ತಮ್ಮದೇ ವ್ಯಾಖ್ಯಾನ ನೀಡಿ ಯಾವುದೇ ಅಧಿಕಾರಿಯ ಸೇವಾವಧಿ ವಿಸ್ತರಣೆಯಾಗದಿದ್ದರೂ ವಂಶ ಪಾರಂಪರ್ಯದ ಕಾರಣದಿಂದ ವಿಶೇಷ ಸವಲತ್ತುಗಳನ್ನು ಹೊಂದುವುದನ್ನು ತಡೆಯಲು ಮತ್ತು ವ್ಯಾಪಕ ಭ್ರಷ್ಟಾಚಾರ ತಡೆಯಲು ಐಟಿ ದಾಳಿ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಅಮಿತ್ ಶಾ ಅವರ ಹೇಳಿಕೆಯನ್ನು ಗಮನಿಸಿದರೆ ಕೇಂದ್ರದ ಮೋದಿ ಸರಕಾರ ತನ್ನ ರಾಜಕೀಯ ವಿರೋಧಿಗಳ ಮೇಲೆ ದಾಳಿ ಮುಂದುವರಿಸುವ ಸೂಚನೆಗಳಿವೆ. ಸುಪ್ರೀಂ ಕೋರ್ಟ್ ಇದನ್ನು ಗಮನಿಸುತ್ತಿದೆ.
ಮಣಿಪುರ ಬೆತ್ತಲೆ ಪ್ರಕರಣ ನಡೆದು ಎರಡು ತಿಂಗಳಾಗುತ್ತಾ ಬಂದರೂ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ ನಂತರವೇ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಜಾಣ ಮೌನವನ್ನು ಮುರಿದು ಮಣಿಪುರದಲ್ಲಿ ಹೆಣ್ಣು ಮಕ್ಕಳ ಬೆತ್ತಲೆ ಮೆರವಣಿಗೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ತಪ್ಪುಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕಾಟಾಚಾರದ ಹೇಳಿಕೆಯನ್ನು ನೀಡಿದರು. ಆನಂತರವೂ ಮಣಿಪುರದ ಪರಿಸ್ಥಿತಿ ಸುಧಾರಿಸಿಲ್ಲ.
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ದುರುದ್ದೇಶಪೂರಿತ ಆಡಳಿತ ವೈಫಲ್ಯ ಮತ್ತು ರಾಜಕೀಯ ಹಾಗೂ ಸೈದ್ಧಾಂತಿಕ ವಿರೋಧಿಗಳ ಮೇಲೆ ಸೇಡು ತೀರಿಸಿಕೊಳ್ಳುವ ಚಾಳಿ, ಇವೆಲ್ಲದರ ಪರಿಣಾಮವಾಗಿ ಕಾನೂನು ಮತ್ತು ಸುವ್ಯವಸ್ಥೆ ಕುಸಿಯುತ್ತಿರುವುದರಿಂದ ಸುಪ್ರೀಂ ಕೋರ್ಟ್ ಪದೇ, ಪದೇ ಮಧ್ಯಪ್ರವೇಶ ಮಾಡಿ ಕಿವಿ ಹಿಂಡಿ ಬುದ್ಧಿ ಹೇಳಬೇಕಾಗಿ ಬಂದಿದೆ. ಸರಕಾರ ತನ್ನ ಲೋಪಗಳನ್ನು ಸರಿಪಡಿಸಿಕೊಂಡರೆ ಇಂತಹ ಅವಾಂತರಗಳು ನಡೆಯುವುದಿಲ್ಲ.