ಉಗ್ರವಾದದ ವಿರುದ್ಧ ದ್ವಂದ್ವ ನಿಲುವು ಬೇಡ
ಸಂಸತ್ ಭವನ Photo: wikipedia.org
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸಂಸತ್ ಭವನದ ಮೇಲೆ ಉಗ್ರರು ನಡೆಸಿದ ದಾಳಿಗೆ 22 ವರ್ಷಗಳು ಸಂದಿವೆ. ವಾಜಪೇಯಿ ನೇತೃತ್ವದ ಎನ್ಡಿಎ ಸರಕಾರ ಈ ದೇಶವನ್ನು ಆಳುತ್ತಿದ್ದಾಗ 2001 ಡಿಸೆಂಬರ್ 13ರಂದು ಈ ದಾಳಿ ನಡೆಯಿತು. ಈ ಆರೋಪದ ಮೇಲೆ ಅಫ್ಝಲ್ ಗುರುವನ್ನು ನೇಣಿಗೇರಿಸಲಾಯಿತು. ಇದೀಗ ಆ ಸಂಸತ್ ದಾಳಿಯ ಗಾಯ ಮತ್ತೊಮ್ಮೆ ತೆರೆದುಕೊಂಡಿದೆ. ಸಂಸತ್ಭವನ ದಾಳಿಯ ವರ್ಷಾಚರಣೆ ದಿನವಾದ ಡಿಸೆಂಬರ್ 13 ಅಥವಾ ಅದಕ್ಕೆ ಮುನ್ನ ಸಂಸತ್ನ ಅಡಿಪಾಯಗಳೇ ಕಂಪಿಸುವಂತಹ ಕೃತ್ಯವೊಂದನ್ನು ಎಸಗುವುದಾಗಿ ಅಮೆರಿಕದಲ್ಲಿ ನೆಲೆಸಿರುವ ಖಾಲಿಸ್ತಾನ್ ಪರ ಉಗ್ರಗಾಮಿ ಗುರು ಪತ್ವಂತ್ ಸಿಂಗ್ ಪನ್ನೂನ್ ಭಾರತಕ್ಕೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. 2013ರಲ್ಲಿ ಗಲ್ಲಿಗೇರಿಸಲ್ಪಟ್ಟ ಉಗ್ರ ಅಫ್ಝಲ್ ಗುರುವಿನ ಭಾವಚಿತ್ರವಿರುವ ಪೋಸ್ಟರ್ನೊಂದಿಗೆ ತನ್ನ ಫೋಟೊ ಇರುವ ವೀಡಿಯೋವೊಂದನ್ನು ಪನ್ನೂನ್ ಬಿಡುಗಡೆ ಗೊಳಿಸಿದ್ದು , ಅದರಲ್ಲಿ ಈ ಎಚ್ಚರಿಕೆಯನ್ನು ಆತ ನೀಡಿದ್ದಾನೆ ಎನ್ನಲಾಗಿದೆ. ಈ ಬೆದರಿಕೆ ಆರೋಪವನ್ನು ಪನ್ನೂನ್ ಈವರೆಗೆ ನಿರಾಕರಿಸಿಲ್ಲವಾದುದರಿಂದ ಅದು ಆತನದೇ ವೀಡಿಯೋ ಎಂದು ಭಾವಿಸಬೇಕಾಗುತ್ತದೆ. ಸಂಸತ್ ಭವನದ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ಪನ್ನೂನ್ ಈ ಬೆದರಿಕೆ ಒಡ್ಡಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಬಾಡಿಗೆ ಹಂತಕನ ಮೂಲಕ ಭಾರತ ಸರಕಾರವು ಪನ್ನೂನ್ನನ್ನು ಕೊಂದು ಹಾಕಲು ಯತ್ನಿಸಿದೆ ಎನ್ನುವ ಆರೋಪವನ್ನು ಅಮೆರಿಕ ಮಾಡಿದ ಬೆನ್ನಿಗೇ ಆತನಿಂದ ಈ ಬೆದರಿಕೆ ಹೊರ ಬಿದ್ದಿದೆ.
ಮೋದಿ ಸರಕಾರ ಉಗ್ರವಾದವನ್ನು ದಮನಿಸಲು ಸಂಪೂರ್ಣ ಯಶಸ್ವಿಯಾಗಿದೆ ಎಂದು ಮಾಧ್ಯಮಗಳಲ್ಲಿ ಕೇಂದ್ರ ಸರಕಾರ ಪದೇ ಪದೇ ಹೇಳಿಕೆ ನೀಡುತ್ತಿರುವ ಸಂದರ್ಭದಲ್ಲೇ ಸಂಸತ್ ಮೇಲೆ ದಾಳಿ ಬೆದರಿಕೆ ಬಂದಿರುವುದು ಸರಕಾರದ ವರ್ಚಸ್ಸಿಗೆ ಭಾರೀ ಧಕ್ಕೆ ತಂದಿದೆ. ಮೋದಿ ನೇತೃತ್ವದ ಸರಕಾರ ಅಧಿಕಾರ ಹಿಡಿದ ದಿನದಿಂದ ಪಂಜಾಬ್ನಲ್ಲಿ ಖಾಲಿಸ್ತಾನ್ ವಾದಿಗಳ ಚಟುವಟಿಕೆ ಚಿಗುರ ತೊಡಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಭಯೋತ್ಪಾದನೆ, ಉಗ್ರವಾದದ ಕುರಿತ ಸರಕಾರದ ದ್ವಂದ್ವ ನಿಲುವುಗಳೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಒಂದೆಡೆ ಅದಾನಿ, ಅಂಬಾನಿಗಳ ಮೂಗಿನ ನೇರಕ್ಕೆ ಆರ್ಥಿಕ ನೀತಿಗಳನ್ನು ರೂಪಿಸುತ್ತಾ ಹೋದ ಸರಕಾರ ಪಂಜಾಬ್ನ ರೈತರ ಅಸಮಾಧಾನವನ್ನು ಮಡಿಲಲ್ಲಿ ಕಟ್ಟಿಕೊಂಡಿತು. ಜೊತೆ ಜೊತೆಗೇ ಇಲ್ಲಿನ ಸಂಘಪರಿವಾರ ಪಂಜಾಬ್ನಲ್ಲಿ ನಡೆಸಿದ ಹಸ್ತಕ್ಷೇಪಗಳು ಕೂಡ ಪರೋಕ್ಷವಾಗಿ ಉಗ್ರವಾದಕ್ಕೆ ನೀರೆರೆಯಿತು. ಭಾರತವನ್ನು ‘ಹಿಂದೂರಾಷ್ಟ್ರ’ವನ್ನಾಗಿಸುವ ಸಂಘಪರಿವಾರದ ನಿಲುವುಗಳು ಸಿಖ್ಖರಲ್ಲಿ ಅಭದ್ರತೆಯ ಭಾವನೆಯನ್ನು ಬಿತ್ತಿತು. ಭಿಂದ್ರನ್ ವಾಲೆಯ ಹತ್ಯೆ ಬಳಿಕ ಪಂಜಾಬ್ನಲ್ಲಿ ಭಯೋತ್ಪಾದನೆಯನ್ನು ಭಾಗಶಃ ಮಟ್ಚ ಹಾಕಲಾಗಿತ್ತು. ಒಳಗಿನ ಗಾಯಗಳು ಒಣಗಿದಂತೆಲ್ಲ ಮತ್ತೆ ಭಾರತೀಯ ಅಸ್ಮಿತೆಯ ಜೊತೆಗೆ ಪಂಜಾಬ್ ಒಂದಾಯಿತು. ಆದರೆ ಪ್ರಜಾಸತ್ತಾತ್ಮಕವಾದ ಭಾರತದಲ್ಲಿ ‘ಹಿಂದೂರಾಷ್ಟ್ರ’ದ ಕಲ್ಪನೆ ಬಲ ಪಡೆಯುತ್ತಿದ್ದಂತೆಯೇ ಪಂಜಾಬ್ನ ಒಣಗಿದ ಗಾಯ ಮತ್ತೆ ತೆರೆದಿದೆ. ಗೋಡ್ಸೆ, ಸಾವರ್ಕರ್ರಂತಹ ಉಗ್ರವಾದಿಗಳ ಚಿಂತನೆಗಳಿಗೆ ಭಾರತ ಸರಕಾರ ಪರೋಕ್ಷವಾಗಿ ನೀರೆರೆಯುತ್ತಿದ್ದಂತೆಯೇ ಅವುಗಳ ಜೊತೆ ಜೊತೆಗೇ ಭಿಂದ್ರನ್ ವಾಲೆ ಚಿಂತನೆಗಳು ಕೂಡ ಮತ್ತೆ ಚಿಗುರತೊಡಗಿದವು. ರೈತರ ಪ್ರತಿಭಟನೆಯ ದಮನ, ಅವರನ್ನು ಭಯೋತ್ಪಾದಕರೆಂದು ಕರೆದು ಪೊಲೀಸರು ನಡೆಸಿದ ದೌರ್ಜನ್ಯಗಳೆಲ್ಲವೂ ಪಂಜಾಬ್ನ ಪ್ರತ್ಯೇಕತಾ ವಾದಿಗಳಿಗೆ ಸಹಾಯ ಮಾಡತೊಡಗಿದವು. ಹಿಂದುತ್ವವಾದವು ಸಿಖ್ಖರ ವಿರುದ್ಧ ಸಂಚನ್ನು ನಡೆಸುತ್ತಿದೆ ಮತ್ತು ಅದಕ್ಕೆ ಸರಕಾರ ಕುಮ್ಮಕ್ಕು ನೀಡುತ್ತಿದೆ ಎನ್ನುವ ಅಸಮಾಧಾನ ಪಂಜಾಬ್ನಲ್ಲಿ ವ್ಯಾಪಕವಾಗಿದೆ.
ಕೇಂದ್ರ ಸರಕಾರ ಕಾಶ್ಮೀರದಲ್ಲಿ ನಡೆಸಿದ ಕಾರ್ಯಾಚರಣೆ ಕೂಡ ಪಂಜಾಬ್ನ ಪ್ರತ್ಯೇಕತಾವಾದಿಗಳಿಗೆ ಅನುಕೂಲವನ್ನುಂಟು ಮಾಡಿತು. ಕಾಶ್ಮೀರದ ಜನದನಿಯನ್ನು ಸಂಪೂರ್ಣ ದಮನಿಸಿ, ಕಳೆದ ಕೆಲವು ವರ್ಷಗಳಿಂದ ಸೇನೆ ಕಾಶ್ಮೀರದಲ್ಲಿ ನಡೆಸುತ್ತಿರುವ ದೌರ್ಜನ್ಯಗಳು ಕೂಡ ಪಂಜಾಬನ್ನು ಆತಂಕಕ್ಕೆ ತಳ್ಳಿದೆ. ಕಾಶ್ಮೀರದಲ್ಲಿ ಸಂಭವಿಸಿದ್ದು ಭವಿಷ್ಯದಲ್ಲಿ ಪಂಜಾಬ್ನಲ್ಲೂ ನಡೆಯಬಹುದು ಎನ್ನುವ ಆತಂಕ ಅವರಲ್ಲಿದೆ. ಪ್ರತ್ಯೇಕತಾವಾದಿಗಳು ಈ ಅಂಶವನ್ನು ಕೂಡ ತಮಗೆ ಪೂರಕವಾಗಿ ಬಳಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ನಡೆದ ಬೇರೆ ಬೇರೆ ಅಹಿತಕರ ಘಟನೆಗಳಲ್ಲಿ ಸಂಘಪರಿವಾರದ ಉಗ್ರವಾದಿ ಸಂಘಟನೆಗಳು ಪಾಲುಗೊಂಡಿರುವುದು ಮಾಧ್ಯಮಗಳಲ್ಲಿ ಬೆಳಕಿಗೆ ಬರತೊಡಗಿದವು. ಮಾಲೆಗಾಂವ್ ಸ್ಫೋಟ, ಮಕ್ಕ್ಕಾ ಮಸೀದಿ ಸ್ಫೋಟಗಳಂತಹ ಪ್ರಕರಣಗಳಲ್ಲಿ ಸಂಘಪರಿವಾರ ಹಿನ್ನೆಲೆಯ ನಾಯಕರ ಹೆಸರುಗಳು ಕೇಳಿ ಬರ ತೊಡಗಿದವು. ಮಾಲೆಗಾಂವ್ ಸ್ಫೋಟದಲ್ಲಿ ಆರೋಪಿಯಾಗಿದ್ದ ಪ್ರಜ್ಞಾ ಠಾಕೂರ್ಗೆ ಸ್ವತಃ ಬಿಜೆಪಿ ಸರಕಾರವೇ ಟಿಕೆಟ್ ನೀಡಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿ ಸಂಸತನ್ನು ಪ್ರವೇಶಿಸುವಂತೆ ನೋಡಿಕೊಂಡಿತು. ಉಗ್ರವಾದದ ಕುರಿತಂತೆ ಸರಕಾರದ ಈ ದ್ವಂದ್ವ ನಿಲುವು ಪಂಜಾಬ್ನ ಪ್ರತ್ಯೇಕತಾವಾದಿಗಳಿಗೆ ಆತ್ಮಸ್ಥೈರ್ಯವನ್ನು ನೀಡಿತು. ಇತ್ತೀಚೆಗೆ ಕೆನಡಾದಲ್ಲಿ ಹತ್ಯೆಗೀಡಾದ ಖಾಲಿಸ್ತಾನ್ ಪ್ರತ್ಯೇಕತಾವಾದಿಯ ಹತ್ಯೆಯನ್ನು ಭಾರತ ಸರಕಾರವೇ ನಡೆಸಿದೆ ಎಂದು ಅಲ್ಲಿನ ಸರಕಾರ ಆರೋಪಿಸಿದೆ. ಆದರೆ ಭಾರತ ಇದನ್ನು ತಿರಸ್ಕರಿಸಿದೆ. ವಿಚಾರಣೆ ನಡೆಸದೆಯೇ ಬೇಹುಗಾರಿಕಾ ಇಲಾಖೆ ಪ್ರತ್ಯೇಕತಾವಾದಿಗೆ ಮರಣದಂಡನೆಯನ್ನು ಘೋಷಿಸುವುದು ಮತ್ತು ಏಜೆಂಟರ ಮೂಲಕ ಕೊಲ್ಲಿಸುವುದು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕುರಿತಂತೆ ತಪ್ಪು ಸಂದೇಶಗಳು ರವಾನೆಯಾಗುತ್ತವೆ. ತನ್ನ ಮೇಲಿನ ಆರೋಪವನ್ನು ಭಾರತ ತಿರಸ್ಕರಿಸಿದೆಯಾದರೂ, ಕೆನಡಾ ವ್ಯಕ್ತಪಡಿಸಿರುವ ಹಲವು ಪ್ರಶ್ನೆಗಳಿಗೆ ಭಾರತ ಇನ್ನೂ ಸ್ಪಷ್ಟ ಉತ್ತರವನ್ನು ನೀಡಿಲ್ಲ. ಅದರ ಬೆನ್ನಿಗೇ, ಅಮೆರಿಕದಲ್ಲಿ ಪನ್ನೂನ್ ಎಂಬಾತನ ಹತ್ಯೆ ಯತ್ನದ ಆರೋಪ ಭಾರತವನ್ನು ಸುತ್ತಿಕೊಂಡಿದೆ. ಪನ್ನೂನ್ ವಿಫಲ ಹತ್ಯೆಯ ಪ್ರಯತ್ನ ಪ್ರಕರಣದ ಮುಂದಿನ ಭಾಗವಾಗಿದೆ, ಸಂಸತ್ ದಾಳಿಯ ಬೆದರಿಕೆ.
ಸಾವಿರಾರು ಕೋಟಿ ರೂ.ಗಳನ್ನು ಸೇನೆಗಾಗಿ ವ್ಯಯಿಸಿ, ಇಡೀ ಕಾಶ್ಮೀರವನ್ನು ಸಂಪೂರ್ಣ ದಿಗ್ಬಂಧನದಲ್ಲಿಟ್ಟೂ ಕೇಂದ್ರ ಸರಕಾರ ಅಲ್ಲಿ ಉಗ್ರವಾದಿಗಳ ಅಟ್ಟಹಾಸವನ್ನು ನಿಯಂತ್ರಿಸಲು ವಿಫಲವಾಗಿದೆ. ಸೇನಾಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಸರಣಿ ಹತ್ಯೆ ನಡೆಯುತ್ತ್ತಿದೆ. ಪಂಡಿತರು ಸರಕಾರಿ ಕೆಲಸ ತೊರೆದು ತಮ್ಮ ಊರುಗಳಿಗೆ ಮರಳುತ್ತಿದ್ದಾರೆ. ಇದೀಗ ಖಾಲಿಸ್ತಾನ್ ಪ್ರತ್ಯೇಕತಾವಾದಿಯೊಬ್ಬ ನೂತನ ಸಂಸತ್ ಭವನವನ್ನು ಸ್ಫೋಟಿಸುವ ಬೆದರಿಕೆಯನ್ನು ಹಾಕುವ ಧೈರ್ಯವನ್ನು ತೋರಿಸಿದ್ದಾನೆ. ಇವೆಲ್ಲವೂ ಭಯೋತ್ಪಾದನೆ ಮತ್ತು ಉಗ್ರವಾದವನ್ನು ದಮನಿಸುವಲ್ಲಿ ಕೇಂದ್ರ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸಿದೆ. ‘ಸಂಸತ್ನ ಬುನಾದಿಗಳನ್ನು ಕಂಪಿಸುವಂತೆ ಮಾಡುವೆ’ ಎನ್ನುವ ಪನ್ನೂನ್ ಬೆದರಿಕೆ ಹತ್ತು ಹಲವು ಅರ್ಥಗಳನ್ನು ಹೊರಸೂಸುತ್ತಿದೆ. ಸಂವಿಧಾನವೇ ಸಂಸತ್ನ ಬುನಾದಿಯಾಗಿದೆ. ಇಂದು ಈ ಬುನಾದಿಗೆ ಬೆದರಿಕೆ ಹಾಕುತ್ತಿರುವವರು ಕೇವಲ ಖಾಲಿಸ್ತಾನ್ವಾದಿಗಳು ಮಾತ್ರವಲ್ಲ. ಸಂವಿಧಾನದ ವಿರುದ್ಧ ಹೇಳಿಕೆಗಳನ್ನು ನೀಡುವ, ಸಂವಿಧಾನ ಪ್ರತಿಪಾದಿಸುವ ಜಾತ್ಯತೀತ ವಾದಿ ಆಶಯಗಳನ್ನು ವಿರೋಧಿಸಿ ಹಿಂದೂರಾಷ್ಟ್ರ ಸ್ಥಾಪನೆ ಮಾಡಲು ಮುಂದಾಗಿರುವ ಎಲ್ಲ ಶಕ್ತಿಗಳೂ ಪರೋಕ್ಷವಾಗಿ ಸಂಸತ್ನ ಬುನಾದಿಗೆ ಬೆದರಿಕೆಗಳೇ ಆಗಿವೆ. ಸರಕಾರ ಮೊತ್ತ ಮೊದಲು ಉಗ್ರವಾದದ ಕುರಿತಂತೆ ಅನುಸರಿಸುತ್ತಿರುವ ದ್ವಂದ್ವ ನಿಲುವಿನಿಂದ ಹಿಂದೆ ಸರಿಯಬೇಕಾಗಿದೆ. ದೇಶಾದ್ಯಂತ ಕೋಮುವಾದಿಗಳನ್ನು ಬೆಳೆಯಲು ಬಿಟ್ಟು, ಅಮಾಯಕರ ಬದುಕನ್ನು ಆತಂಕಕ್ಕೆ ತಳ್ಳುವುದು ಪರೋಕ್ಷವಾಗಿ ಕಾನೂನನ್ನು ಕೈಗೆತ್ತಿಕೊಳ್ಳಲು ಜನರಿಗೆ ಅವಕಾಶವನ್ನು ನೀಡಿದಂತೆ. ಉಗ್ರವಾದಿಗಳು, ಪ್ರತ್ಯೇಕತಾವಾದಿಗಳು ಜನಸಾಮಾನ್ಯರ ಈ ಅಭದ್ರತೆ, ಅಸಹಾಯಕತೆಗಳನ್ನು ತಮಗೆ ಪೂರಕವಾಗಿ ಬಳಸಿಕೊಳ್ಳುತ್ತಾರೆ. ಹಿಂದುತ್ವವಾದಿ ಗಳೂ ಸೇರಿದಂತೆ ಎಲ್ಲ ಬಗೆಯ ಉಗ್ರವಾದಿಗಳ ವಿರುದ್ಧವೂ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ಮುಂದಾದಾಗ ಮಾತ್ರ, ಪನ್ನೂನ್ ಬೆದರಿಕೆಯನ್ನು ಸಮರ್ಥವಾಗಿ ಎದುರಿಸಲು ಭಾರತ ಸಮರ್ಥವಾಗುತ್ತದೆ. ಇನ್ನೊಂದ್ ಸಂಸತ್ ದಾಳಿಗೆ ಭಾರತ ಯಾವ ಕಾರಣಕ್ಕೂ ಸಾಕ್ಷಿಯಾಗಬಾರದು. ಅಂತಹದು ಸಂಭವಿಸಿದ್ದೇ ಆದರೆ ಮೋದಿ ಸರಕಾರವನ್ನು ಭಾರತದ ಜನರು ಯಾವತ್ತೂ ಕ್ಷಮಿಸಲಾರರು.