ಇದು ಸಂವಿಧಾನಕ್ಕೆ ಮಾಡಿದ ಅಪಚಾರ
Photo: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ತರಾತುರಿಯಲ್ಲಿ ಅತ್ಯಂತ ವಿವಾದಾತ್ಮಕವಾದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿರುವ ಉದ್ದೇಶ ಪ್ರಾಮಾಣಿಕವಾದುದಲ್ಲ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಅಯೋಧ್ಯೆಯ ರಾಮ ಮಂದಿರ, ಕಾಶ್ಮೀರ ವಿಶೇಷ ಸ್ಥಾನಮಾನದ ರದ್ದತಿಯಂತೆ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಯನ್ನು ಚುನಾವಣಾ ಲಾಭದ ದೃಷ್ಟಿಯಿಂದ ಬಳಸಿಕೊಳ್ಳಲು ಮುಂದಾಗಿರುವುದು ಸ್ಪಷ್ಟವಾಗುತ್ತದೆ. ಈ ಕಾಯ್ದೆಯ ಜಾರಿಗೆ ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಕ್ರಮವನ್ನು ಕೈಗೊಳ್ಳದೇ ಈಗ ಒಮ್ಮಿಂದೊಮ್ಮೆಲೆ ಇದನ್ನು ಜಾರಿಗೆ ತರಲು ಹೊರಟಿರುವುದು ಸರಿಯಲ್ಲ.
ಈ ಕಾಯ್ದೆ ಯಾಕೆ ಸಂವಿಧಾನ ವಿರೋಧಿಯಾಗಿದೆಯೆಂದರೆ ಇದು ನಾಗರಿಕರಲ್ಲಿ ಧರ್ಮದ ಆಧಾರದಲ್ಲಿ ಭೇದ ಭಾವ ಮಾಡುವ ಉದ್ದೇಶದಿಂದ ಕೂಡಿದೆ. ಭಾರತದ ಅಕ್ಕಪಕ್ಕದ ಮುಸಲ್ಮಾನರು ಬಹುಸಂಖ್ಯೆಯಲ್ಲಿರುವ ದೇಶಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ದೌರ್ಜನ್ಯಕ್ಕೆ ಗುರಿಯಾಗಿ 2014 ಡಿಸೆಂಬರ್ 31 ಕ್ಕೆ ಮುಂಚೆ ಭಾರತವನ್ನು ಪ್ರವೇಶ ಮಾಡಿರುವ ಹಿಂದೂ, ಸಿಖ್, ಪಾರ್ಸಿ, ಜೈನ, ಬೌದ್ಧ ಹಾಗೂ ಕ್ರೈಸ್ತ ಸಮುದಾಯದ ಜನರಿಗೆ ಭಾರತದ ಪೌರತ್ವವನ್ನು ನೀಡುವ ಉದ್ದೇಶವನ್ನು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹೊಂದಿದೆ. ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮುನ್ನ ಅಧಿಸೂಚನೆ ಮೂಲಕ ಸರಕಾರ ಈ ಕುರಿತ ನಿಯಮಗಳನ್ನು ಪ್ರಕಟಿಸಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಚುನಾವಣೆಯಲ್ಲಿ ರಾಜಕೀಯ ಲಾಭಕ್ಕಾಗಿ ಬಿಜೆಪಿ ಸರಕಾರ ಇದನ್ನು ಜಾರಿಗೆ ತಂದಿರುವುದು ಸ್ಪಷ್ಟವಾಗುತ್ತದೆ. ಈ ಪಟ್ಟಿಯಲ್ಲಿ ಮುಸಲ್ಮಾನರನ್ನು ಕೈ ಬಿಟ್ಟಿರುವ ಉದ್ದೇಶವೇನು?. ಅಕ್ಕಪಕ್ಕದ ದೇಶಗಳಲ್ಲಿ ತೊಂದರೆಗೊಳಗಾಗಿ ಭಾರತಕ್ಕೆ ಬಂದವರಲ್ಲಿ ಮೇಲ್ಕಂಡ ಸಮುದಾಯಗಳ ಜನರು ಮಾತ್ರವಲ್ಲ ಮುಸಲ್ಮಾನರೂ ಇದ್ದಾರೆ. ಪಶ್ಚಿಮ ಬಂಗಾಳದಂಥ ರಾಜ್ಯವನ್ನು ನಿರ್ದಿಷ್ಟವಾಗಿ ಗುರಿಯಾಗಿರಿಸಿಕೊಂಡು ಇದನ್ನು ತರಲಾಗಿದೆ ಎಂಬುದು ವಾಸ್ತವ ಸಂಗತಿ. ಇದಕ್ಕಾಗಿ ನಾಲ್ಕು ವರ್ಷಗಳ ಕಾಲ ವಿಳಂಬ ಮಾಡಿದ ಉದ್ದೇಶವೇನು? ಇದಕ್ಕೆ ಸರಕಾರದಿಂದ ಸ್ಪಷ್ಟ ಉತ್ತರ ಬಂದಿಲ್ಲ.
ಈ ಕಾಯ್ದೆಯನ್ನು ನಾಲ್ಕು ವರ್ಷಗಳ ಹಿಂದೆ ಕೇಂದ್ರದ ಬಿಜೆಪಿ ಸರಕಾರ ತರಲು ಹೊರಟಾಗ ಭಾರೀ ವಿವಾದದ ಅಲೆ ಎದ್ದಿತು. ರಾಜಧಾನಿ ದಿಲ್ಲಿ ಮಾತ್ರವಲ್ಲ ಆಸ್ಸಾಂ ಸೇರಿದಂತೆ ದೇಶದ ಬಹುತೇಕ ಕಡೆ ವ್ಯಾಪಕ ಪ್ರತಿಭಟನೆ ಗಳು ನಡೆದವು. ಅನೇಕ ಕಡೆ ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿತು. ಅದೇ ಕಾಲಘಟ್ಟದಲ್ಲಿ ಕೋವಿಡ್ ಸಾಂಕ್ರಾಮಿಕ ಬಂದ ಕಾರಣ ಪ್ರತಿಭಟನೆ, ಚಳವಳಿಗಳು ಸ್ಥಗಿತಗೊಂಡವು. ಇದು ತಾರತಮ್ಯದಿಂದ ಕೂಡಿದ ಸಂವಿಧಾನ ವಿರೋಧಿ ಕಾಯ್ದೆ ಎಂಬುದು ಗುಟ್ಟಿನ ಸಂಗತಿಯಲ್ಲ. ಈ ಕಾಯ್ದೆಯನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.
ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿ ಇರುವ ಈ ವಿವಾದಾತ್ಮಕ ಕಾಯ್ದೆಯ ಬಗ್ಗೆ ಕೋರ್ಟ್ ಏನನ್ನೂ ಹೇಳುವ ಮುನ್ನ ಕೇಂದ್ರ ಸರಕಾರ ಅಧಿಸೂಚನೆ ಮೂಲಕ ಪೌರತ್ವ ಕಾಯ್ದೆಯ ತಿದ್ದುಪಡಿ ಕುರಿತ ನಿಯಮಗಳನ್ನು ಪ್ರಕಟಿಸಿದೆ. ತಾನು ನೀಡಿದ ಭರವಸೆಯಂತೆ ನಡೆದುಕೊಂಡಿರುವುದಾಗಿ ಸರಕಾರ ಸಮರ್ಥನೆ ಮಾಡಿಕೊಳ್ಳುತ್ತದೆ. ಆದರೆ ಇದು ಮತದಾರರನ್ನು ಧರ್ಮದ ಆಧಾರದಲ್ಲಿ ವಿಭಜನೆ ಮಾಡಿ ವೋಟ್ ಮೂಲಕ ರಾಜಕೀಯ ಲಾಭ ಮಾಡಿಕೊಳ್ಳುವ ದುರುದ್ದೇಶದಿಂದ ಕೂಡಿದೆ ಎಂಬ ಪ್ರತಿಪಕ್ಷಗಳ ಟೀಕೆಯಲ್ಲಿ ಹುರುಳಿಲ್ಲದಿಲ್ಲ.
ಜನರ ಆರ್ಥಿಕ ಮತ್ತು ಸಾಮಾಜಿಕ ಹಾಗೂ ಶೈಕ್ಷಣಿಕ ಏಳಿಗೆಗಾಗಿ ನೀಡಿದ್ದ ಯಾವ ಭರವಸೆಯನ್ನೂ ಈಡೇರಿಸಲು ಮೋದಿ ನೇತೃತ್ವದ ಬಿಜೆಪಿ ಸರಕಾರದಿಂದ ಸಾಧ್ಯವಾಗಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯ ಆಶ್ವಾಸನೆ ಕಸದ ಬುಟ್ಟಿಗೆ ಬಿದ್ದಿದೆ. ಜೀವನಾವಶ್ಯಕ ಪದಾರ್ಥಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಆಗಿಲ್ಲ. ಈ ವೈಫಲ್ಯಗಳನ್ನು ಮರೆಮಾಚಿ ಮತ್ತೆ ಚುನಾವಣೆಯಲ್ಲಿ ಜಯ ಸಾಧಿಸಲು ಸರಕಾರ ಈ ವಿವಾದಾತ್ಮಕ ಕಾಯ್ದೆಯನ್ನು ಜಾರಿಗೆ ತರಲು ಹೊರಟಿದೆಯೆಂದರೆ ಅತಿಶಯೋಕ್ತಿಯಲ್ಲ.
ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯ ವ್ಯಾಪ್ತಿಯಿಂದ ಉದ್ದೇಶಪೂರ್ವಕವಾಗಿ ಮುಸ್ಲಿಮರನ್ನು ಹೊರಗೆ ಇರಿಸಿರುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಕ್ರಮವಲ್ಲವೇ? ಪ್ರಸ್ತಾವಿತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಜಾರಿಗೆ ಬಂದರೆ ಮುಸಲ್ಮಾನರಿಗೆ ಭಾರತದ ಪೌರತ್ವವನ್ನು ನಿರಾಕರಿಸಬಹುದೆಂಬ ಆತಂಕ ಅಲ್ಪಸಂಖ್ಯಾತ ಸಮುದಾಯದಲ್ಲಿ ಮೂಡಿದೆ.
ಎನ್ಆರ್ಸಿ ಮತ್ತು ಸಿಎಎ ಒಟ್ಟಿಗೆ ಜಾರಿಗೆ ಬಂದರೆ ಸಮಾಜದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಬಹುದೆಂಬ ಭೀತಿ ಮೂಡಿದೆ. ದೇಶದ ರಾಜಕೀಯ ವ್ಯವಸ್ಥೆಯ ಸಮೀಕರಣದಲ್ಲಿ ಬದಲಾವಣೆ ಆಗಬಹುದು. ಇದರ ಪರಿಣಾಮಗಳ ಬಗ್ಗೆ ಯೋಚಿಸದೆ ಜಾರಿಗೆ ತರಲು ಹೊರಟಿರುವುದು ಸರಿಯಲ್ಲ.
ಅಕ್ಕಪಕ್ಕದ ದೇಶಗಳಲ್ಲಿ ದೌರ್ಜನ್ಯಕ್ಕೆ ಗುರಿಯಾಗಿ ನಿರಾಶ್ರಿತರಾಗಿ ಬರುವ ಜನರಿಗೆ ಆಸರೆ ನೀಡುವುದು ತಪ್ಪಲ್ಲ. ಟಿಬೆಟ್ನಿಂದ 1962ರಲ್ಲಿ ಬಂದ ಸಾವಿರಾರು ನಿರಾಶ್ರಿತರಿಗೆ ಭಾರತ ಆಸರೆ ನೀಡಿದೆ. ಈಗ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾ ದೇಶಗಳಿಂದ ಬರುವವರಿಗೆ ಪೌರತ್ವ ಕೊಡಲು ಯಾರ ತಕರಾರೂ ಇಲ್ಲ. ಆದರೆ ಈ ಪೌರತ್ವ ನೀಡುವಾಗ ಧರ್ಮವನ್ನು ಆಧಾರವಾಗಿ ಇಟ್ಟುಕೊಳ್ಳುವುದು ಸಂವಿಧಾನದ ಆಶಯಗಳಿಗೆ ಅಪಚಾರ ಮಾಡಿದಂತೆ. ಮುಸ್ಲಿಮ್ ಸಮುದಾಯದ ಜನರ ಬಗ್ಗೆ ತಾರತಮ್ಯ ಇದರಲ್ಲಿ ಎದ್ದು ಕಾಣುತ್ತದೆ. ರಾಜಕೀಯ ಲಾಭಗಳಿಕೆಗಾಗಿ ಸಂವಿಧಾನ ಬಾಹಿರವಾದ ಇಂಥ ಕಾಯ್ದೆಗಳನ್ನು ಜಾರಿಗೆ ತರುವುದು ದೇಶದ ಬಹುತ್ವದ ಸಂಸ್ಕೃತಿಯ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ.
ಭಾರತದ ಸಂವಿಧಾನ ಜಾತಿ, ಧರ್ಮ, ಭಾಷೆಯ ಆಧಾರದಲ್ಲಿ ನಾಗರಿಕರಲ್ಲಿ ಯಾವುದೇ ತಾರತಮ್ಯವನ್ನು ಉಂಟು ಮಾಡುವುದಿಲ್ಲ. ಆದರೆ ಕೇಂದ್ರ ಸರಕಾರ ತರಲು ಮುಂದಾಗಿರುವ ಪೌರತ್ವಕ್ಕೆ ಸಂಬಂಧಿಸಿದ ಕಾಯ್ದೆಗಳು ತಾರತಮ್ಯವನ್ನು ಉಂಟು ಮಾಡುತ್ತವೆ. ಮುಸ್ಲಿಮ್ ಸಮುದಾಯವನ್ನು ಉಳಿದವರಿಂದ ಪ್ರತ್ಯೇಕಿಸುವ ದುರುದ್ದೇಶದಿಂದ ಇದು ಕೂಡಿದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಾತ್ರವಲ್ಲ, ನಂತರವೂ ಈ ವಿವಾದಾತ್ಮಕ ಕಾಯ್ದೆ ದುರ್ಬಳಕೆ ಆಗುವ ಆತಂಕವಿದೆ. ಆದ್ದರಿಂದ ಸರಕಾರ ದುಡುಕಿನ ಹೆಜ್ಜೆ ಇಡುವುದು ಸರಿಯಲ್ಲ.
ಭಾರತ ಎಂಬುದು ಸರ್ವ ಜನಾಂಗದ ಶಾಂತಿಯ ತೋಟ. ಹಿಂದೂ, ಮುಸ್ಲಿಮ್, ಕ್ರೈಸ್ತ, ಜೈನ, ಬೌದ್ಧ, ಸಿಖ್ ಹೀಗೆ ಎಲ್ಲ ಸಮುದಾಯದ ಜನರು ಸೇರಿ ಕಟ್ಟಿದ ದೇಶವಿದು. ಸೋದರರಂತೆ ಬದುಕುತ್ತಿರುವ ಜನರಲ್ಲಿ ತಾರತಮ್ಯವನ್ನು ಮಾಡುವುದು ಸರಿಯಲ್ಲ.