ಇದು ಒಕ್ಕೂಟ ವ್ಯವಸ್ಥೆಗೆ ಮಾರಕ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಒಂದೇ ದೇಶ, ಒಂದೇ ಪಕ್ಷ, ಒಬ್ಬನೇ ನಾಯಕ ಎಂಬ ಸಿದ್ಧಾಂತವನ್ನು ಆಧರಿಸಿ ಈಗ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾವನೆಗೆ ಮತ್ತೆ ಚಾಲನೆ ನೀಡಲಾಗಿದೆ. ಈ ಸಂಬಂಧದಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ನೇತೃತ್ವದಲ್ಲಿ ರಚಿಸಲಾಗಿರುವ ಉನ್ನತಾಧಿಕಾರ ಸಮಿತಿ ಕಾರ್ಯೋನ್ಮುಖವಾಗಿದೆ. ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ ತಮ್ಮ ಅನಿಸಿಕೆ ಮತ್ತು ಸಲಹೆಗಳನ್ನು ನೀಡುವಂತೆ ಸಮಿತಿಯು ಸಾರ್ವಜನಿಕರಲ್ಲಿ ಈಗಾಗಲೇ ಮನವಿ ಮಾಡಿತ್ತು. ಇದಕ್ಕಾಗಿ ಜನವರಿ 5ರಿಂದ 15ರವರೆಗಿನ ಕಾಲಾವಕಾಶವನ್ನು ನಿಗದಿಪಡಿಸಿತ್ತು. ಇದಕ್ಕೆ ಬಂದ 20,972 ಪ್ರತಿಕ್ರಿಯೆಗಳನ್ನು ಸಮಿತಿ ಸ್ವೀಕರಿಸಿದೆ. ಅವುಗಳ ಪ್ರಕಾರ ಶೇ. 81ರಷ್ಟು ಮಂದಿ ಪ್ರಸ್ತಾವನೆಯ ಪರವಾಗಿದ್ದಾರೆ ಎಂದು ತಿಳಿದು ಬಂದಿದೆ. 17 ರಾಜಕೀಯ ಪಕ್ಷಗಳು ಕೂಡ ಪ್ರಸ್ತಾವನೆ ಕುರಿತು ತಮ್ಮ ನಿಲುವನ್ನು ಸಮಿತಿಗೆ ತಿಳಿಸಿವೆ. ಕೋವಿಂದ್ ಅವರು ಸದರಿ ಪ್ರಸ್ತಾವನೆಯ ಕುರಿತು ನಿವೃತ್ತ ಮುಖ್ಯ ನ್ಯಾಯಾಧೀಶರು ಮತ್ತು ನಿವೃತ್ತ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಹಿರಿಯ ನ್ಯಾಯ ಶಾಸ್ತ್ರಜ್ಞರು ಮತ್ತು ಉದ್ಯಮಿಗಳ ಜೊತೆಗೆ ಮಾತುಕತೆಯನ್ನು ನಡೆಸಿದ್ದಾರೆ. ಈಗಿನ ವೇಗವನ್ನು ಗಮನಿಸಿದರೆ ‘ಒಂದು ದೇಶ, ಒಂದೇ ಚುನಾವಣೆ’ ಪ್ರಸ್ತಾವ ಅಂದುಕೊಂಡದ್ದಕ್ಕಿಂತ ಮೊದಲೇ ಜಾರಿಗೆ ಬರುವ ಸೂಚನೆಗಳು ಕಾಣುತ್ತಿವೆ.
ಎಲ್ಲ ಪ್ರಕ್ರಿಯೆಗಳು ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿವೆ. ಒಂದು ದೇಶ,ಒಂದು ಚುನಾವಣೆ ಪ್ರಸ್ತಾವನೆಗೆ ಕೇಂದ್ರ ಕಾನೂನು ಆಯೋಗ ಮತ್ತು ನೀತಿ ಆಯೋಗಗಳು ಸಹಮತವನ್ನು ವ್ಯಕ್ತಪಡಿಸಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರಂತೂ ಹಲವಾರು ಸಲ ಬಹಿರಂಗವಾಗಿ ಈ ಪ್ರಸ್ತಾವನೆಯ ಪರವಾಗಿ ಮಾತನಾಡಿದ್ದಾರೆ.ಕೋವಿಂದ್ ಅವರು 2017ರಲ್ಲಿ ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನ ವನ್ನು ಉದ್ದೇಶಿಸಿ ಮಾತನಾಡುವಾಗಲೂ ಈ ಬಗ್ಗೆ ಪ್ರಸ್ತಾವಿಸಿದ್ದರು. ಉನ್ನತಾಧಿಕಾರ ಸಮಿತಿಯ ಇತರ ಸದಸ್ಯರು ಕೂಡ ಒಂದು ದೇಶ, ಒಂದು ಚುನಾವಣೆ ಪ್ರಸ್ತಾವನೆಯ ಪರವಾಗಿ ಒಲವು ಹೊಂದಿದ್ದಾರೆಂದು ಹೇಳಲಾಗುತ್ತಿದೆ. ಸಮಿತಿಯಲ್ಲಿರುವ ಕಾಂಗ್ರೆಸ್ ಸದಸ್ಯ ಅಧೀರ್ ರಂಜನ್ ಚೌಧರಿ ಅವರು ಮಾತ್ರ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಅವರು ಸಮಿತಿಯ ಸಭೆಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಉನ್ನತಾಧಿಕಾರ ಸಮಿತಿ ಹಾಗೂ ಅದಕ್ಕೆ ಸದಸ್ಯರ ನೇಮಕ ಮಾಡಿರುವ ಅಂಶಗಳನ್ನು ಗಮನಿಸಿದರೆ ಸರಕಾರ ಸಮಿತಿಯಿಂದ ಪ್ರಸ್ತಾವನೆಗೆ ಪೂರಕವಾದ ವರದಿಯನ್ನು ನಿರೀಕ್ಷಿಸುತ್ತಿದೆ ಎಂಬುದು ಗುಟ್ಟಿನ ಸಂಗತಿಯಲ್ಲ. ಆದರೆ ಸದರಿ ಸಮಿತಿಯ ವರದಿ ಮಾತ್ರ ಸಾಲದು ಇದರ ಬಗ್ಗೆ ಸೂಕ್ತವಾದ ಸಮಾಲೋಚನೆ ಅಗತ್ಯವಾಗಿದೆ. ಕಾಂಗ್ರೆಸ್ ಸೇರಿದಂತೆ ಬಹುತೇಕ ಪ್ರತಿಪಕ್ಷಗಳು ಈ ಪ್ರಸ್ತಾವನೆಯನ್ನು ವಿರೋಧಿಸಿವೆ. ವಾಸ್ತವವಾಗಿ ಈ ಪ್ರಸ್ತಾವನೆ ಜಾರಿಗೆ ಬಂದಲ್ಲಿ ಕೇಂದ್ರದಲ್ಲಿ ಈಗ ಅಧಿಕಾರದಲ್ಲಿ ಇರುವ ಪಕ್ಷಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ಆದಷ್ಟು ಬೇಗ ಏಕಕಾಲದಲ್ಲಿ ಚುನಾವಣೆ ನಡೆಸುವುದು ಬೇಕಾಗಿದೆ. ಆದರೆ 2029ಕ್ಕಿಂತ ಮೊದಲು ಏಕಕಾಲದಲ್ಲಿ ಚುನಾವಣೆ ನಡೆಸುವುದು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆಯೆನ್ನಲಾಗಿದೆ. ಯಾಕೆಂದರೆ ಏಕಕಾಲದಲ್ಲಿ ಚುನಾವಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಇಲೆಕ್ಟ್ರಾನಿಕ್ ಮತ ಯಂತ್ರಗಳು ಬೇಕಾಗುತ್ತವೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇದಷ್ಟೇ ಅಲ್ಲ ಈ ಪ್ರಸ್ತಾವನೆಯಲ್ಲಿ ಗಂಭೀರವಾದ ಕಾನೂನು ಮತ್ತು ರಾಜಕೀಯ ಸಮಸ್ಯೆಗಳು ಅಡಕವಾಗಿವೆ. ಈ ಪ್ರಸ್ತಾವನೆಯ ಜಾರಿಗಾಗಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಮೂಲಾಗ್ರ ಮಾರ್ಪಾಡು ಮಾಡಬೇಕಾಗುತ್ತದೆ. ಭಾರತ ಬಹುತ್ವ ದೇಶ, ಕೇಂದ್ರದಲ್ಲಿ ಒಂದು ಪಕ್ಷ ಅಧಿಕಾರದಲ್ಲಿ ಇದ್ದರೆ ರಾಜ್ಯಗಳಲ್ಲಿ ಬೇರೆ ಪಕ್ಷಗಳು ಅಧಿಕಾರದಲ್ಲಿ ಇರುತ್ತವೆ. ಈ ಭಿನ್ನತೆಗೆ ಹೊಂದಾಣಿಕೆಯಾಗುವಂತೆ ಚುನಾವಣಾ ಪದ್ಧತಿಯನ್ನು ಬದಲಿಸುವುದು ಸುಲಭವಾದ ಸಂಗತಿಯಲ್ಲ.
ತಮ್ಮ ರಾಜಕೀಯ ಅನುಕೂಲಕ್ಕಾಗಿ ಇಂಥ ಪ್ರಸ್ತಾವನೆಯನ್ನು ಮುಂದಿಡುವವರಿಗೆ ಭಾರತದ ಸಂವಿಧಾನದ ಬಗ್ಗೆ ಅರಿವಿಲ್ಲ. ಭಾರತ ಒಂದು ಒಕ್ಕೂಟ ವ್ಯವಸ್ಥೆ ಎಂಬುದನ್ನು ಅವರು ಒಪ್ಪಿಕೊಳ್ಳುವುದಿಲ್ಲ. ಈ ಭಾರತ ಒಂದೇ ಧರ್ಮ, ಒಂದೇ ಸಂಸ್ಕೃತಿ, ಒಂದೇ ಭಾಷೆ ಹಾಗೂ ಒಂದೇ ಜನಾಂಗಕ್ಕೆ ಸೇರಿದ ದೇಶವಲ್ಲ. ವಿಭಿನ್ನ ಧರ್ಮ, ಭಾಷೆ, ಸಂಸ್ಕೃತಿ, ಮತ್ತು ಸರ್ವ ಜನಾಂಗಗಳ ಶಾಂತಿಯ ತೋಟ ಇದು. ಇದನ್ನು ಆಳವಾಗಿ ಅಧ್ಯಯನ ಮಾಡಿದ ನಮ್ಮ ಸಂವಿಧಾನದ ನಿರ್ಮಾಪಕರು ಒಕ್ಕೂಟ ವ್ಯವಸ್ಥೆ ಭಾರತಕ್ಕೆ ಸೂಕ್ತ ಎಂದು ಅಳವಡಿಸಿದರು. ಈ ನೆಲದ ಜೀವಸತ್ವವಾದ ಈ ವೈವಿಧ್ಯತೆಯನ್ನು ನಾಶ ಮಾಡಿ ಏಕ ಧರ್ಮ, ಏಕ ಸಂಸ್ಕೃತಿ, ಏಕ ಭಾಷೆ ಹಾಗೂ ಏಕ ರಾಜಕೀಯ ಪಕ್ಷವನ್ನು ಹೇರಲು ಹೊರಟವರಿಗೆ ಏಕಕಾಲದಲ್ಲಿ ಚುನಾವಣೆ ನಡೆಯುವುದು ಬೇಕಾಗಿದೆ. ಆದರೆ ಇದು ಒಕ್ಕೂಟ ವ್ಯವಸ್ಥೆಗೆ ಮಾರಕವಾದ ಪ್ರಸ್ತಾವನೆಯಾಗಿದೆ. ಹಾಗಾಗಿ ಈ ಪ್ರಸ್ತಾವನೆಯನ್ನು ಕೈ ಬಿಡುವುದು ಸೂಕ್ತ.
ಒಂದೇ ದೇಶ, ಒಂದೇ ಚುನಾವಣೆಯ ಪ್ರಸ್ತಾವನೆಯ ಉದ್ದೇಶ ಪ್ರಾಮಾಣಿಕವಾದುದಲ್ಲ. ಭಾರತದ ಮೇಲೆ ಏಕಪಕ್ಷದ, ಏಕ ವ್ಯಕ್ತಿಯ ಸರ್ವಾಧಿಕಾರವನ್ನು ಹೇರುವ ದುರುದ್ದೇಶವನ್ನು ಇದು ಹೊಂದಿದೆ ಎಂದು ಬಹುತೇಕ ಪ್ರತಿಪಕ್ಷಗಳ ಮತ್ತು ಚಿಂತಕರ ಅಭಿಪ್ರಾಯವಾಗಿದೆ. ಇದು ಮೂಲಭೂತವಾಗಿ ಸಂವಿಧಾನ ವಿರೋಧಿ ಮತ್ತು ಜನತಂತ್ರ ವಿರೋಧಿಯಾಗಿದೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡಿ ಅಧ್ಯಕ್ಷೀಯ ಮಾದರಿಯ ಆಡಳಿತವನ್ನು ದೇಶದ ಮೇಲೆ ಹೇರುವುದು ಇವರ ಒಳಉದ್ದೇಶವಾಗಿದೆ. ಏಕಕಾಲದಲ್ಲಿ ಚುನಾವಣೆ ನಡೆಸಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಇದಕ್ಕಾಗಿ ವಿವಿಧ ರಾಜಕೀಯ ಪಕ್ಷಗಳು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಬೇಕಾಗುತ್ತದೆ. ಇದು ಸದ್ಯಕ್ಕಂತೂ ಸಾಧ್ಯವಾಗದ ಮಾತು.
ಅಧ್ಯಕ್ಷೀಯ ಮಾದರಿಯ ಆಡಳಿತ ವ್ಯವಸ್ಥೆಯಲ್ಲಿ ಕಾರ್ಯಾಂಗ ಮತ್ತು ಶಾಸಕಾಂಗಗಳಿಗೆ ನಿಶ್ಚಿತ ಅವಧಿಯನ್ನು ನಿಗದಿಪಡಿಸಬಹುದು. ಹಾಗೆಯೇ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಸದನದ ಅವಧಿಯನ್ನು ನಿಗದಿಪಡಿಸಲು ಆಗುವುದಿಲ್ಲ. ಯಾವುದೇ ಪಕ್ಷಕ್ಕೆ ಇಲ್ಲವೇ ಮೈತ್ರಿ ಕೂಟಕ್ಕೆ ಸದನದಲ್ಲಿ ಬಹುಮತ ಇಲ್ಲದಿದ್ದರೆ ಅವಧಿಗೆ ಮುನ್ನವೇ ಸದನವನ್ನು ವಿಸರ್ಜನೆ ಮಾಡಿ ಮಧ್ಯಂತರ ಚುನಾವಣೆಯನ್ನು ನಡೆಸಬೇಕಾಗುತ್ತದೆ. ಇದು ನಾವು ಈಗಾಗಲೇ ಒಪ್ಪಿಕೊಂಡ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಸಹಜ ಸ್ವರೂಪ. ಇದರ ಅರಿವಿಲ್ಲದೆ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾವನೆ ಮುಂದಿಟ್ಟು ತರಾತುರಿ ಮಾಡುತ್ತಿರುವುದು ಮೂರ್ಖತನದ ಪರಮಾವಧಿಯಾಗುತ್ತದೆ.
ಈ ದೇಶದಲ್ಲಿ 29 ರಾಜ್ಯಗಳಿವೆ. ಲೋಕಸಭೆ ಚುನಾವಣೆ ನಡೆದಾಗ ಈ ರಾಜ್ಯಗಳ ಮತದಾನದ ಸ್ವರೂಪ ಬೇರೆಯಾಗಿರುತ್ತದೆ. ಆದರೆ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆದಾಗ ಈ ರಾಜ್ಯಗಳ ಮತದಾನದ ಸ್ವರೂಪ ವಿಭಿನ್ನವಾಗಿರುತ್ತದೆ. ಲೋಕಸಭಾ ಚುನಾವಣೆಯಲ್ಲಿ ಒಂದು ಪಕ್ಷವನ್ನು ಬೆಂಬಲಿಸುವ ಮತದಾರರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಇನ್ನೊಂದು ಪಕ್ಷವನ್ನು ಬೆಂಬಲಿಸುತ್ತಾರೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸನ್ನು ಜನ ಬೆಂಬಲಿಸಿದರು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ನೀಡಿದರು. ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಿದ ಮತದಾರರು ಲೋಕಸಭಾ ಚುನಾವಣೆಯಲ್ಲಿ ಅದೇ ಪಕ್ಷವನ್ನು ಬೆಂಬಲಿಸಿದರು. ಒಕ್ಕೂಟ ವ್ಯವಸ್ಥೆಯಲ್ಲಿ ಜನಾದೇಶಗಳು ವಿಭಿನ್ನವಾಗಿ ವ್ಯಕ್ತವಾಗುತ್ತವೆ. ಇದು ಪ್ರಜಾಪ್ರಭುತ್ವದ ಸೌಂದರ್ಯ. ಈ ಜನಾದೇಶವನ್ನು ಏಕತ್ರಗೊಳಿಸುವ ದುಸ್ಸಾಹಸಕ್ಕೆ ಕೈ ಹಾಕಿದರೆ ದೇಶ ಒಂದಾಗಿ ಉಳಿಯುವುದಿಲ್ಲ.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ನಾಲ್ಕು ಸಾರ್ವತ್ರಿಕ ಚುನಾವಣೆಗಳು ಏಕಕಾಲದಲ್ಲಿ ನಡೆದವು ಎಂಬುದೇನೋ ನಿಜ. ಆಗ ಕೇಂದ್ರ ಮತ್ತು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು. ಆದರೆ 1967ರ ನಂತರ ಹಲವಾರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತವನ್ನು ಕಳೆದುಕೊಂಡಿತು. ಪ್ರತಿಪಕ್ಷಗಳು ಸಂಯುಕ್ತ ರಂಗ ಮಾಡಿಕೊಂಡು ಕೆಲವು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದವು. ಆನಂತರ ಸದನಗಳು ಅವಧಿಯ ಮುನ್ನವೇ ವಿಸರ್ಜನೆಯಾಗತೊಡಗಿದವು. ಹೀಗಾಗಿ ಕ್ರಮೇಣ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಬೇರೆ, ಬೇರೆ ಸಂದರ್ಭದಲ್ಲಿ ಚುನಾವಣೆ ನಡೆಸುವ ಅನಿವಾರ್ಯತೆ ಉಂಟಾಯಿತು. ವಿಸರ್ಜನೆಗೊಂಡ ಸದನವನ್ನು ಮುಂದಿನ ಐದು ವರ್ಷಗಳ ಕಾಲ ಅಮಾನತ್ನಲ್ಲಿ ಇಡಲು ಬರುವುದಿಲ್ಲ. ಮತ್ತೆ ಜನರ ಬಳಿಗೆ ಹೋಗಿ ಹೊಸ ಆದೇಶವನ್ನು ಪಡೆಯಬೇಕಾಗುತ್ತದೆ. ಹಣ ವ್ಯಯವಾಗುತ್ತದೆಂದು ಈ ಪ್ರಕ್ರಿಯೆಯನ್ನು ತಡೆದು ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾವನೆ ಸರಿಯಲ್ಲ. ಅದು ಇಡೀ ಚುನಾವಣಾ ವ್ಯವಸ್ಥೆಯ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡುತ್ತದೆ.