ಇಂಟರ್‌ನೆಟ್ ಸ್ಥಗಿತದ ಮೂಲಕ ಮಣಿಪುರವನ್ನು ಕತ್ತಲಲ್ಲಿಟ್ಟವರು!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮಣಿಪುರದಲ್ಲಿ ನಡೆದ ಮಹಿಳೆಯರ ಮೇಲಿನ ಭೀಕರ ದೌರ್ಜನ್ಯ ರಾಷ್ಟ್ರಮಟ್ಟದ ಮಾಧ್ಯಮಗಳಲ್ಲಿ ಹರಿದಾಡತೊಡಗಿರುವುದು ಜುಲೈ ತಿಂಗಳಲ್ಲಿ. ಮಹಿಳೆಯರ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಗಳ ಸರಣಿಗಳು ಜುಲೈ ತಿಂಗಳಲ್ಲಿ ಒಂದೊಂದಾಗಿ ಮಾಧ್ಯಮ ಪುಟಗಳಲ್ಲಿ ತೆರೆದುಕೊಳ್ಳತೊಡಗಿದವು. ವಿಪರ್ಯಾಸವೆಂದರೆ, ಈ ಎಲ್ಲ ಕೃತ್ಯಗಳು ನಡೆದಿರುವುದು ಮೇ ತಿಂಗಳಲ್ಲಿ. ಸುಮಾರು ಒಂದೂವರೆ ತಿಂಗಳ ಬಳಿಕ ಈ ಕೃತ್ಯಗಳ ವಿರುದ್ಧ ದೇಶ ದೊಡ್ಡ ಧ್ವನಿಯಲ್ಲಿ ಮಾತನಾಡತೊಡಗಿತು. ಮಣಿಪುರ ಭಾರತದ ಭಾಗವಾಗಿದ್ದರೂ, ಇಲ್ಲಿ ನಡೆದಿರುವ ನೂರಾರು ಜನರ ಬರ್ಬರ ಕೊಲೆಗಳು ಸುಮಾರು ಒಂದು ತಿಂಗಳ ಬಳಿಕ ಬೆಳಕಿಗೆ ಬರಲು ಕಾರಣವೇನು? ಇದನ್ನು ವ್ಯವಸ್ಥಿತವಾಗಿ ಮುಚ್ಚಿಟ್ಟವರು ಯಾರು? ಇಂದು ವಿಶ್ವದ ಯಾವುದೇ ಮೂಲೆಯಲ್ಲಿರುವ ಘಟನೆಗಳು ಕ್ಷಣಮಾತ್ರದಲ್ಲಿ ಜಗತ್ತಿನ ಇನ್ನೊಂದು ಮೂಲೆಗೆ ತಲುಪುವ ತಂತ್ರಜ್ಞಾನಗಳಿರುವಾಗಲೂ, ನಮ್ಮದೇ ದೇಶದಲ್ಲಿ ನಡೆದಿರುವ ಈ ಮಾರಣಹೋಮದ ಸುದ್ದಿ ನಮಗೆ ಸುಮಾರು ಒಂದೂವರೆ ತಿಂಗಳ ಬಳಿಕ ತಲುಪಲು ಕಾರಣಗಳೇನು? ಮಣಿಪುರ ಹಿಂಸಾಚಾರಗಳ ಬಗ್ಗೆ ಚರ್ಚಿಸುವ ಸಂದರ್ಭದಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಅತ್ಯಗತ್ಯವಾಗಿದೆ.
ಇತ್ತೀಚೆಗೆ ನಡೆದಿರುವ ಯಾವುದೇ ಹಿಂಸಾಚಾರಗಳ ಹಿನ್ನೆಲೆ ನೋಡಿದರೂ ಅದರ ಹಿಂದೆ ಸುಳ್ಳು ಸುದ್ದಿಗಳು ವ್ಯವಸ್ಥಿತವಾಗಿ ಕೆಲಸ ಮಾಡಿರುವುದನ್ನು ಕಾಣಬಹುದು. ಮೊದಲು, ಇಂಟರ್‌ನೆಟ್‌ಗಳ ಮೂಲಕ ವದಂತಿಗಳನ್ನು, ಸುಳ್ಳು ಸುದ್ದಿಗಳನ್ನು ಹರಡಿ ಹಿಂಸಾಚಾರಕ್ಕೆ ವೇದಿಕೆಯನ್ನು ಸೃಷ್ಟಿಸಲಾಗುತ್ತದೆ. ಹಿಂಸಾಚಾರ ಭುಗಿಲೆದ್ದಾಗ ಅಲ್ಲಿ ನಡೆಯುವ ಅನ್ಯಾಯಗಳನ್ನು ಇತರ ಭಾಗಗಳಿಗೆ ತಲುಪದಂತೆ ನೋಡಿಕೊಳ್ಳಲು ಇಂಟರ್‌ನೆಟ್‌ಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಇಂಟರ್‌ನೆಟ್‌ಗಳ ಮೂಲಕ ಸುಳ್ಳು ಸುದ್ದಿಗಳನ್ನು ಹರಡಿ ಹಿಂಸಾಚಾರಕ್ಕೆ ಕಾರಣರಾದವರ ಮೇಲೆ ಯಾವ ಕ್ರಮ ತೆಗೆದುಕೊಳ್ಳುವುದಕ್ಕೂ ಆಸಕ್ತಿ ವಹಿಸದ ಸರಕಾರ, ಹಿಂಸಾಚಾರಕ್ಕೆ ಅಮಾಯಕರು, ಮಹಿಳೆಯರು ಬಲಿಯಾದ ಸುದ್ದಿಗಳು ಹೊರಜಗತ್ತಿಗೆ ತಲುಪದಂತೆ ನೋಡಿಕೊಳ್ಳುವ ಸಂದರ್ಭದಲ್ಲಿ ಮಾತ್ರ ಇಂಟರ್‌ನೆಟ್‌ಗಳ ಕೈಗಳನ್ನು ಕಟ್ಟಿ, ಬಾಯಿಯನ್ನು ಮುಚ್ಚಿಸುತ್ತದೆ. ಹಿಂಸಾಚಾರಗಳು ಸಂಭವಿಸಿದಾಗ ಅವುಗಳು ಹೊರಜಗತ್ತಿಗೆ ತಲುಪದಂತೆ ನೋಡಿಕೊಳ್ಳುವುದರಲ್ಲ್ಲಿ ಎರಡು ಉದ್ದೇಶಗಳಿವೆ. ಒಂದು, ಹಿಂಸೆಗಳನ್ನು ಎಸಗುವುದಕ್ಕೆ ಆ ಮೂಲಕ ದುಷ್ಕರ್ಮಿಗಳಿಗೆ ಮುಕ್ತ ವಾತಾವರಣವನ್ನು ನಿರ್ಮಿಸುವುದು. ಇನ್ನೊಂದು, ದುಷ್ಕರ್ಮಿಗಳನ್ನು ರಕ್ಷಿಸುವುದು. ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆದ ದಿನವೇ ಅದು ಹೊರ ಜಗತ್ತಿಗೆ ತಿಳಿದು ಹೋಗಿದ್ದರೆ, ಸರಕಾರದ ವಿರುದ್ಧ ಒತ್ತಡಗಳು ಹೆಚ್ಚಿ ಈ ಪರಿಯ ಹಿಂಸಾಚಾರಕ್ಕೆ ಅವಕಾಶ ಸಿಗುತ್ತಿರಲಿಲ್ಲ. ಆದರೆ ಸರಕಾರ ಎಲ್ಲ ಇಂಟನೆಟ್ ಸೇವೆಗಳನ್ನು ಸ್ಥಗಿತಗೊಳಿಸುವ ಮೂಲಕ ಮಣಿಪುರವನ್ನು ದ್ವೀಪವಾಗಿಸಿತು. ಎಲ್ಲ ಮುಗಿದ ಬಳಿಕ ಇದೀಗ ಇಂಟರ್‌ನೆಟ್‌ಗಳಿಗೆ ಭಾಗಶಃ ಅನುಮತಿ ನೀಡಿದೆ. ಕೋಟೆ ಸೂರೆ ಹೋದ ಬಳಿಕ ಮಾಧ್ಯಮಗಳು ದಿಡ್ಡಿ ಬಾಗಿಲನ್ನು ಹಾಕುವ ಪ್ರಯತ್ನ ನಡೆಸುತ್ತಿವೆ.
ಹಿಂಸಾಚಾರ ವ್ಯಾಪಿಸದಂತೆ ತಡೆಯುವುದಕ್ಕಾಗಿ ಇಂಟರ್‌ನೆಟ್‌ಗಳನ್ನು ಸ್ಥಗಿತಗೊಳಿಸುತ್ತೇವೆ ಎನ್ನುವ ಸಮರ್ಥನೆಯನ್ನು ಕೇಂದ್ರ ಸರಕಾರ ನೀಡುತ್ತದೆ. ಆದರೆ ಇಂಟರ್‌ನೆಟ್ ಸ್ಥಗಿತಗೊಂಡರೂ ಹಿಂಸಾಚಾರ ವಿಸ್ತರಿಸುತ್ತಲೇ ಹೋಗುತ್ತಿರುವುದನ್ನು ಮರೆಮಾಚುತ್ತದೆ. ಕಾಶ್ಮೀರದಲ್ಲಿ, ಮಣಿಪುರದಲ್ಲಿ, ಅಸ್ಸಾಮಿನಲ್ಲಿ ಸರಕಾರ ತನ್ನ ಮಾನವನ್ನು ಉಳಿಸಿಕೊಳ್ಳಲು ಇಂಟರ್‌ನೆಟ್ ಸ್ಥಗಿತಗೊಳಿಸುವುದು ಪರಿಪಾಠವಾಗಿ ಹೋಗಿದೆ. ಇಂಟರ್‌ನೆಟ್ ಸ್ಥಗಿತಗೊಳಿಸುವಾಗ ಸರಕಾರವು ಪಾಲಿಸಬೇಕಾದ ನಿಯಮಗಳ ಬಗ್ಗೆ ಸುಪ್ರೀಂ ಕೋರ್ಟ್ 2020ರಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿದೆಯಾದರೂ, ಅವುಗಳನ್ನು ಉಲ್ಲಂಘಿಸುವುದು ತನ್ನ ಹಕ್ಕು ಎಂದು ಸರಕಾರ ಭಾವಿಸಿದಂತಿದೆ. ಕಳೆದ ಐದು ವರ್ಷಗಳಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಬಾರಿ ಇಂಟರ್‌ನೆಟ್ ಸಂಪರ್ಕ ಸ್ಥಗಿತಗೊಳಿಸಿದ ದಾಖಲೆಯನ್ನು ಭಾರತ ಹೊಂದಿದೆ. ಇಂಟರ್‌ನೆಟ್ ಸ್ಥಗಿತಗೊಂಡ ಅವಧಿಯಲ್ಲಿ ಆ ರಾಜ್ಯಗಳಲ್ಲಿ ಅತಿ ಹೆಚ್ಚು ಮಾನವ ಹಕ್ಕು ದಮನಗಳು ನಡೆದಿವೆ. ಅನುಪಾತ ಮತ್ತು ಅಗತ್ಯಕ್ಕೆ ತಕ್ಕಂತೆ ಇಂಟರ್‌ನೆಟ್ ಸ್ಥಗಿತಗೊಳಿಸುವಾಗ ಸರಕಾರವು ಪಾಲಿಸಬೇಕಾದ ಮಾರ್ಗದರ್ಶಿ ಸೂತ್ರಗಳನ್ನು 2020 ಜನವರಿಯಲ್ಲಿ ಸುಪ್ರೀಂ ಕೋರ್ಟ್ ಹೊರಡಿಸಿತ್ತು. 2019ರ ಆಗಸ್ಟ್‌ನಲ್ಲಿ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ಅದರ ರಾಜ್ಯದ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ರಾಜ್ಯದಲ್ಲಿ ಅನಿರ್ದಿಷ್ಟಾವಧಿ ಇಂಟರ್‌ನೆಟ್ ನಿಲುಗಡೆಯನ್ನು ಹೇರಿರುವುದನ್ನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋಗಲಾಗಿತ್ತು. ಸುಪ್ರೀಂ ಕೋರ್ಟ್ ಕಾಶ್ಮೀರದಲ್ಲಿ ಹೇರಲಾಗಿದ್ದ ಇಂಟರ್‌ನೆಟ್ ನಿಲುಗಡೆಯನ್ನು ರದ್ದುಪಡಿಸಲಿಲ್ಲ. ಆದರೆ, ಇಂಟರ್‌ನೆಟ್ ಸೇವೆಗಳ ಅನಿರ್ದಿಷ್ಟಾವಧಿ ನಿಲುಗಡೆಗೆ ಭಾರತೀಯ ಕಾನೂನುಗಳು ಅವಕಾಶ ನೀಡುವುದಿಲ್ಲ ಎಂದು ಹೇಳಿತು. ಹಾಗೂ, ಇಂಟರ್‌ನೆಟ್ ನಿಲುಗಡೆ ಆದೇಶಗಳು ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತವೆ ಎಂದಿತು.
ನಿಯಮದಂತೆ ‘ಸಾರ್ವಜನಿಕ ತುರ್ತು’, ‘ಸಾರ್ವಜನಿಕ ಸುರಕ್ಷತೆ’, ‘ಸಾರ್ವಜನಿಕ ವ್ಯವಸ್ಥೆ’, ಭದ್ರತೆಯನ್ನು ನಿರ್ವಹಿಸಲು, ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆ, ವಿದೇಶಗಳೊಂದಿಗಿನ ಬಾಂಧವ್ಯವನ್ನು ರಕ್ಷಿಸಲು ಅಥವಾ ಅಪರಾಧಕ್ಕೆ ಪ್ರಚೋದನೆ ನೀಡುವುದನ್ನು ತಡೆಯಲು ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಬಹುದು. ಈ ಆದೇಶಗಳನ್ನು ಲಿಖಿತವಾಗಿ ನೀಡಬೇಕು. ಇಂಥ ನಿರ್ದೇಶನಕ್ಕೆ ಕಾರಣಗಳನ್ನು ಆದೇಶದಲ್ಲಿ ನೀಡಬೇಕು. ಈ ಕಾರಣಗಳನ್ನು ಮೂವರು ಹಿರಿಯ ಅಧಿಕಾರಿಗಳ ಸಮಿತಿಯೊಂದು ಐದು ದಿನಗಳ ಒಳಗೆ ಪರಿಶೀಲನೆ ನಡೆಸಬೇಕು. ಆದರೆ, ‘ಸಾರ್ವಜನಿಕ ಶಾಂತಿ ಭಂಗ’ ಮತ್ತು ‘ಯಾವುದೇ ವ್ಯಕ್ತಿಗೆ ಆಗುವ ತೊಂದರೆಯನ್ನು ನಿವಾರಿಸುವುದು’ ಹಾಗೂ ‘ಸಾರ್ವಜನಿಕ ತುರ್ತು’ ಮತ್ತು ‘ಸಾರ್ವಜನಿಕ ಸುರಕ್ಷತೆ’ ಮುಂತಾದ ಪದಗಳನ್ನು ಆದೇಶಗಳಲ್ಲಿ ಬಳಸಲಾಗುತ್ತದೆಯಾದರೂ, ಈ ಪದಗಳನ್ನು ಯಾವಾಗ ಬಳಸಬೇಕು ಎನ್ನುವುದರ ಬಗ್ಗೆ ಅಸ್ಪಷ್ಟತೆಗಳಿವೆ. ಇಂತಹ ಅಸ್ಪಷ್ಟತೆಗಳನ್ನು ಸರಕಾರ ದುರುಪಯೋಗ ಪಡಿಸುತ್ತಾ ಬಂದಿದೆ. 2020ರ ತೀರ್ಪಿನಲ್ಲಿ ಇಂಥ ಅಸ್ಪಷ್ಟತೆಯನ್ನು ನಿವಾರಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ‘ಇಂಟರ್‌ನೆಟ್ ನಿಲುಗಡೆ ಆದೇಶಗಳು 15 ದಿನಗಳಿಗಿಂತ ಹೆಚ್ಚು ಅವಧಿ ಜಾರಿಯಲ್ಲಿರಬಾರದು ಎನ್ನುವ ಅಂಶವನ್ನು ಸೇರ್ಪಡೆಗೊಳಿಸುವುದಕ್ಕಾಗಿ’ 2020 ನವೆಂಬರ್‌ನಲ್ಲಿ ಕೇಂದ್ರ ಸರಕಾರವು 2017ರ ನಿಯಮಗಳಿಗೆ ತಿದ್ದುಪಡಿಯನ್ನು ತಂದಿತು.ಆದರೆ, ಮಣಿಪುರದಲ್ಲಿ ಈಗ ಇಂಟರ್‌ನೆಟ್ ನಿಲುಗಡೆ ಅವಧಿ 60 ದಿನಗಳನ್ನೂ ಮೀರಿದೆ. ಪ್ರತೀ ಐದು ದಿನಗಳಿಗೊಮ್ಮೆ ಇಂಟರ್‌ನೆಟ್ ನಿಲುಗಡೆ ಆದೇಶವನ್ನು ಹೊರಡಿಸಲಾಗುತ್ತಿದೆ. ಮಣಿಪುರ ಇಂಟರ್‌ನೆಟ್ ನಿಲುಗಡೆಯು ಸುಪ್ರೀಂಕೋರ್ಟ್ ಮಾರ್ಗದರ್ಶಿ ಸೂತ್ರಗಳನ್ನು ಸಾರಾ ಸಗಟಾಗಿ ಉಲ್ಲಂಘಿಸುತ್ತದೆ. 2022ರಲ್ಲಿ ಜಗತ್ತಿನಾದ್ಯಂತ ಹೇರಲಾದ ಅಧಿಕೃತ ಇಂಟರ್‌ನೆಟ್ ನಿಲುಗಡೆಯ ಶೇ.44.9 ಭಾರತದಲ್ಲಿ ದಾಖಲಾಗಿತ್ತು ಎಂದು ಎಕ್ಸೆಸ್ ನೌ ಫೆಬ್ರವರಿಯಲ್ಲಿ ಬಿಡುಗಡೆಗೊಳಿಸಿದ ವರದಿಯೊಂದು ಹೇಳುತ್ತದೆ. 2021ರಲ್ಲಿ ಜಗತ್ತಿನಾದ್ಯಂತ ಹೇರಿಕೆಯಾದ ಅಧಿಕೃತ ಇಂಟರ್‌ನೆಟ್ ನಿಲುಗಡೆಯ ಶೇ.58.1 ಮತ್ತು 2020ರಲ್ಲಿ ಜಗತ್ತಿನಾದ್ಯಂತ ಹೇರಿಕೆಯಾದ ಅಧಿಕೃತ ಇಂಟರ್‌ನೆಟ್‌ನ ಶೇ.68.5 ಭಾರತದಲ್ಲೇ ಹೇರಲಾಗಿತ್ತು ಎಂದು ಆ ವರದಿ ತಿಳಿಸುತ್ತದೆ. 2020 ಜನವರಿಯಿಂದ 2022 ಡಿಸೆಂಬರ್ 31ರವರೆಗೆ 127 ಬಾರಿ ಇಂಟರ್‌ನೆಟ್ ನಿಲುಗಡೆಗಳನ್ನು ಘೋಷಿಸಲಾಗಿತ್ತು ಎಂದು ಮಾನವಹಕ್ಕುಗಳ ಸಂಘಟನೆ ಹ್ಯೂಮನ್ ರೈಟ್ಸ್ ವಾಚ್ ಮತ್ತು ಇಂಟರ್‌ನೆಟ್ ಫ್ರೀಡಮ್ ಫೌಂಡೇಶನ್ ಜಂಟಿಯಾಗಿ ಜೂನ್‌ನಲ್ಲಿ ಪ್ರಕಟಿಸಿದ ವರದಿಯೊಂದು ತಿಳಿಸಿದೆ.
ಆಂತರಿಕ ಭದ್ರತೆಗಳಿಗೆ ಧಕ್ಕೆಯುಂಟಾಗುವ ಅನಿವಾರ್ಯ ಸಂದರ್ಭದಲ್ಲಿ ಇಂಟರ್‌ನೆಟ್ ಸ್ಥಗಿತಗೊಳ್ಳುವುದಕ್ಕೂ, ಹಿಂಸಾಚಾರಗಳನ್ನು ಮುಚ್ಚಿ ಹಾಕುವುದಕ್ಕಾಗಿಯೇ ಇಂಟರ್‌ನೆಟ್‌ಗಳನ್ನು ಸ್ಥಗಿತಗೊಳಿಸಿ ರಾಜ್ಯಗಳನ್ನು ದಿಗ್ಬಂಧನಕ್ಕೊಳಪಡಿಸುವುದಕ್ಕೂ ವ್ಯತ್ಯಾಸವಿದೆ. ಇದು ಸ್ಥಳೀಯ ಜನರ ದೈನಂದಿನ ಬದುಕನ್ನೂ ಅಸ್ತವ್ಯವಸ್ತಗೊಳಿಸುತ್ತದೆ. ಇಂದು ಇಂಟರ್‌ನೆಟ್‌ಗಳಿಲ್ಲದೆ ಯಾವ ಕೆಲಸ ಕಾರ್ಯಗಳನ್ನೂ ಮಾಡುವಂತಿಲ್ಲ. ಸರಕಾರವೊಂದು ತನಗೆ ಮನಬಂದಂತೆ ಅವುಗಳನ್ನು ಸ್ಥಗಿತಗೊಳಿಸುವುದೆಂದರೆ, ಪರೋಕ್ಷವಾಗಿ ಒಂದು ರಾಜ್ಯದ ಮೇಲೆ, ಪ್ರದೇಶದ ಮೇಲೆ ಲಾಕ್‌ಡೌನ್ ವಿಧಿಸಿದಂತೆ. ಇಂಟರ್‌ನೆಟ್ ಸ್ಥಗಿತಗೊಳಿಸುವುದಕ್ಕೆ ಸರಕಾರ ತೋರಿಸುವ ಆಸಕ್ತಿಯನ್ನು, ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹರಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಲ್ಲಿ ತೋರಿಸಬೇಕಾಗಿದೆ. ವದಂತಿಗಳು ಹರಡುವುದನ್ನು ತಡೆದರೆ, ಮುಂದೆ ನಡೆಯಬಹುದಾದ ಹಿಂಸಾಚಾರಗಳನ್ನು ತಡೆದಂತೆಯೇ. ಯಾರು ವದಂತಿಗಳನ್ನು ಹರಡುತ್ತಾರೆಯೋ ಅವರೇ ಹಿಂಸಾಚಾರದ ಹಿಂದಿರುವ ನಿಜವಾದ ರೂವಾರಿಗಳು. ಅವರ ಮೇಲೆ ಕಠಿಣ ಕೈಗೊಳ್ಳುವುದು ಇಂದಿನ ಅಗತ್ಯವೇ ಹೊರತು, ಇಂಟರ್‌ನೆಟ್ ಸ್ಥಗಿತವಲ್ಲ.