ನ್ಯಾಯಾಂಗದಲ್ಲಿ ಪಾರದರ್ಶಕತೆ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸಾರ್ವಜನಿಕ ಜೀವನದಲ್ಲಿ ಇರುವವರು, ಅದರಲ್ಲೂ ಮಹತ್ವದ ಅಧಿಕಾರ ಸ್ಥಾನ ಮಾನಗಳನ್ನು ಹೊಂದಿರುವವರ ಬದುಕು ಪಾರದರ್ಶಕವಾಗಿರಬೇಕು ಎಂಬುದು ವಿವಾದಾತೀತ ಅಭಿಪ್ರಾಯ. ಹಾಗಾಗಿಯೇ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು, ತಮ್ಮ ಆಸ್ತಿಗೆ ಸಂಬಂಧಿಸಿದ ವಿವರಗಳನ್ನು ಘೋಷಿಸಿಕೊಳ್ಳುವುದು ಕಡ್ಡಾಯವಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಮಾತ್ರವಲ್ಲ, ಚುನಾಯಿತ ಪ್ರತಿನಿಧಿಗಳು ಕೂಡ ತಮ್ಮ ಆಸ್ತಿಗೆ ಸಂಬಂಧಿಸಿದ ವಿವರಗಳನ್ನು ಬಹಿರಂಗಪಡಿಸಬೇಕಾಗುತ್ತದೆ. ಹೀಗೆ ಬಹಿರಂಗಪಡಿಸಿದಾಗ ಸಾರ್ವಜನಿಕರು ಈ ಬಗ್ಗೆ ಚರ್ಚೆ ನಡೆಸಿದ ಉದಾಹರಣೆಗಳೂ ಸಾಕಷ್ಟಿವೆ. ಈ ವರೆಗೆ ನ್ಯಾಯಾಧೀಶರಿಗೆ ಇಂತಹ ಕಟ್ಟುಪಾಡುಗಳು ಇರಲಿಲ್ಲ. ಆದರೆ ದಿಲ್ಲಿಯ ಹೈಕೋರ್ಟ್ ನ್ಯಾಯಾಧೀಶರೊಬ್ಬರ ಮನೆಯಲ್ಲಿ ಭಾರೀ ಪ್ರಮಾಣದ ನಗದು ಪತ್ತೆಯಾದ ನಂತರ ಈ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆ, ಸಂವಾದಗಳು ನಡೆಯುತ್ತಿವೆ.
ದಿಲ್ಲಿಯ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿತ್ತು. ಈ ನ್ಯಾಯಮೂರ್ತಿಗಳ ದಿಲ್ಲಿಯ ಅಧಿಕೃತ ನಿವಾಸದಲ್ಲಿ ಮಾರ್ಚ್ 14ರಂದು ಬೆಂಕಿ ಅವಘಡ ಸಂಭವಿಸಿತ್ತು. ಅಂದು ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಊರಿನಲ್ಲಿರಲಿಲ್ಲ. ಒಮ್ಮೆಲೇ ಬೆಂಕಿ ಕಾಣಿಸಿಕೊಂಡಾಗ ಅವರ ಕುಟುಂಬದ ಇತರ ಸದಸ್ಯರು ಅಗ್ನಿಶಾಮಕ ದಳಕ್ಕೆ ಫೋನ್ ಮಾಡಿ ತಿಳಿಸಿದ್ದರು. ಆಗ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ದಿಲ್ಲಿಯ ಪೊಲೀಸರು ಸ್ಥಳಕ್ಕೆ ಬಂದು ಬೆಂಕಿಯನ್ನು ಆರಿಸಿದ್ದರು. ಆ ಸಂದರ್ಭದಲ್ಲಿ ಸದರಿ ಮನೆಯ ಕೋಣೆಯೊಂದರಲ್ಲಿ ಭಾರೀ ಪ್ರಮಾಣದ ಹಣ ಪತ್ತೆಯಾಗಿತ್ತು. ದಿಲ್ಲಿಯ ಪೊಲೀಸರು ಕೇಂದ್ರ ಗೃಹ ಸಚಿವಾಲಯಕ್ಕೆ ಈ ಬಗ್ಗೆ ವರದಿಯನ್ನು ಸಲ್ಲಿಸಿದ್ದರು. ಗೃಹ ಸಚಿವಾಲಯ ಈ ಕುರಿತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಮಾರ್ಚ್ 20ರಂದು ಕೊಲಿಜಿಯಂ ಸಭೆಯನ್ನು ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಿತ್ತು. ಪ್ರಕರಣದ ಕುರಿತು ವರದಿ ನೀಡುವಂತೆ ದಿಲ್ಲಿಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರಿಗೆ ಸೂಚಿಸಲಾಗಿತ್ತು.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಕೂಡ ತಮ್ಮ ಆಸ್ತಿಯ ವಿವರಗಳನ್ನು ಬಹಿರಂಗ ಪಡಿಸಬೇಕು ಎಂಬ ತೀರ್ಮಾನವನ್ನು ಸದರಿ ಕೋರ್ಟಿನ ಪೂರ್ಣ ಪೀಠ ಕೈಗೊಂಡಿದೆ. ಇದು ಬಹು ಹಿಂದೆಯೇ ಕೈಗೊಳ್ಳಬೇಕಾಗಿದ್ದ ಸ್ವಾಗತಾರ್ಹ ಕ್ರಮವಾಗಿದೆ. ಈ ತೀರ್ಮಾನದ ಪ್ರಕಾರ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ತಮ್ಮ ಆಸ್ತಿಪಾಸ್ತಿಯ ವಿವರಗಳನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸಬೇಕಾಗುತ್ತದೆ. ನ್ಯಾಯಮೂರ್ತಿಗಳು ಹೆಚ್ಚಿನ ಕಿಮ್ಮತ್ತಿನ ಯಾವುದೇ ಆಸ್ತಿಯನ್ನು ಖರೀದಿ ಮಾಡಿದರೆ ಅದರ ಕುರಿತೂ ವರದಿ ನೀಡಬೇಕಾಗುತ್ತದೆ. ಇದು ಮುಖ್ಯ ನ್ಯಾಯಮೂರ್ತಿಗಳಿಗೂ ಅನ್ವಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಸೇರಿದಂತೆ ಮೂವತ್ತು ಮಂದಿ ನ್ಯಾಯಾಧೀಶರು ತಮ್ಮ ಆಸ್ತಿಪಾಸ್ತಿಯ ವಿವರಗಳನ್ನು ಈಗಾಗಲೇ ಘೋಷಿಸಿದ್ದಾರೆ.
ನ್ಯಾಯಮೂರ್ತಿಗಳು ತಮ್ಮ ಆಸ್ತಿಪಾಸ್ತಿಯ ವಿವರಗಳನ್ನು ಘೋಷಿಸಬೇಕು ಎಂಬ ವಿಚಾರ ಹಲವಾರು ವರ್ಷಗಳಿಂದ ಚರ್ಚೆಯಲ್ಲಿ ಇದೆ. 1997ರಲ್ಲಿ ಈ ಕುರಿತಂತೆ ಒಂದು ನಿರ್ಣಯವನ್ನು ಕೈಗೊಂಡಿದ್ದ ಸುಪ್ರೀಂ ಕೋರ್ಟ್ ಎಲ್ಲಾ ನ್ಯಾಯಮೂರ್ತಿಗಳು ತಮ್ಮ ಆಸ್ತಿಯ ವಿವರಗಳನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸಬೇಕೆಂದು ಶಿಫಾರಸು ಮಾಡಿತ್ತು. ಹೈಕೋರ್ಟ್ ನ್ಯಾಯಾಧೀಶರು ತಮ್ಮ ಆಸ್ತಿಯ ವಿವರಗಳನ್ನು ಅವರು ಕಾರ್ಯನಿರ್ವಹಿಸುವ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸಬೇಕಾಗಿತ್ತು. ಆದರೆ ಇದು ನ್ಯಾಯಾಂಗದ ಪರಿಶೀಲನೆಗೆ ಮಾತ್ರ ಲಭ್ಯವಾಗಿರುತ್ತಿತ್ತು. ಸದರಿ ವಿವರಗಳು ಸಾರ್ವಜನಿಕರ ಗಮನಕ್ಕೆ ತರುವ ಅಂಶ ಆ ಶಿಫಾರಸಿನಲ್ಲಿ ಇರಲಿಲ್ಲ. ಈ ಶಿಫಾರಸಿನ ಪ್ರಕಾರ ಆಸ್ತಿಯ ವಿವರ ಸಲ್ಲಿಸುವುದು ಕೂಡ ಐಚ್ಛಿಕವಾಗಿರುತ್ತಿತ್ತು. ಆಸ್ತಿಯ ವಿವರಗಳನ್ನು ಗೌಪ್ಯವಾಗಿ ಇರಿಸಲಾಗುತ್ತಿತ್ತು. 2005ರ ಮಾಹಿತಿ ಹಕ್ಕು ಕಾಯ್ದೆಯ ಸಾರ್ವಜನಿಕ ಹಿತಾಸಕ್ತಿಯ ಅಂಶಗಳ ಪ್ರಕಾರ ಸಾರ್ವಜನಿಕ ಹಿತಾಸಕ್ತಿ ಇಲ್ಲದಿದ್ದರೆ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕಗೊಳಿಸುವುದು ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಹೀಗಾಗಿ ಆಸ್ತಿಯ ವಿವರಗಳನ್ನು ಬಹಿರಂಗ ಪಡಿಸುವುದು ಅಗತ್ಯವಿಲ್ಲದಿದ್ದಾಗ ಅದನ್ನು ಗೌಪ್ಯವಾಗಿ ಇರಿಸಿಕೊಳ್ಳಬಹುದೆಂದು ಎಂದು ಕೋರ್ಟು ಹೇಳಿತ್ತು. ಆದರೆ ಸುಪ್ರೀಂ ಕೋರ್ಟಿನ ಪೂರ್ಣ ಪೀಠ ನೀಡಿದ ಇತ್ತೀಚಿನ ತೀರ್ಪು ಭಿನ್ನವಾಗಿದೆ.
ನ್ಯಾಯಮೂರ್ತಿಗಳು ತಮ್ಮ ಆಸ್ತಿಪಾಸ್ತಿಗಳ ವಿವರಗಳನ್ನು ಕಡ್ಡಾಯವಾಗಿ ಘೋಷಿಸಿಕೊಳ್ಳಬೇಕೆಂಬುದು ಕಾನೂನು ಕುರಿತ ಸಂಸದೀಯ ಸಮಿತಿಯ ಸಮಿತಿ 2003ರಲ್ಲಿಯೇ ಶಿಫಾರಸು ಮಾಡಿತ್ತು. ಆದರೆ ಈ ಶಿಫಾರಸನ್ನು ಆಧರಿಸಿ ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ.
ಸಾರ್ವಜನಿಕ ಜೀವನದಲ್ಲಿ ಇರುವವರು ತಮ್ಮ ಆಸ್ತಿಪಾಸ್ತಿಯ ವಿವರಗಳನ್ನು ನೀಡಲು ಹಿಂಜರಿಯಬಾರದು. ಆದರೆ ಸಾರ್ವಜನಿಕ ಜೀವನದಲ್ಲಿ ಇರುವ ವ್ಯಕ್ತಿಗಳು ತಮ್ಮ ಆಸ್ತಿಪಾಸ್ತಿಯ ವಿವರಗಳನ್ನು ಘೋಷಿಸುವಂತೆ ನ್ಯಾಯಮೂರ್ತಿಗಳು ಹೆೇಳಿದ್ದರೂ ಅಂಥವರ ಮೇಲೆ ಕ್ರಮ ಕೈಗೊಳ್ಳುವುದು ಸುಲಭವಲ್ಲ. ಆದ್ದರಿಂದ ಸುಪ್ರೀಂ ಕೋರ್ಟು ನ್ಯಾಯಾಂಗದಲ್ಲಿ ಪಾರದರ್ಶಕತೆ ಉತ್ತರದಾಯಿತ್ವ ತರಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಇಲ್ಲದಿದ್ದರೆ ಸಾರ್ವಜನಿಕರು ನ್ಯಾಯಾಂಗದ ವಿದ್ಯಮಾನಗಳನ್ನು ಸಂಶಯದ ಕಣ್ಣುಗಳಿಂದ ನೋಡಬೇಕಾಗುತ್ತದೆ.
ಭ್ರಷ್ಟ ರಾಜಕಾರಣಿಗಳು, ಕೆಲವು ಮಠಾಧೀಶರು ತಮ್ಮ ಮೇಲೆ ಕ್ರಿಮಿನಲ್ ಆರೋಪಗಳಿದ್ದಾಗಲೂ ರಾಜಾರೋಷವಾಗಿ ಓಡಾಡುತ್ತಾರೆ. ಗುರುತರವಾದ ಕೆಲವು ಪ್ರಕರಣಗಳಲ್ಲಿ ಆರೋಪಿಗಳಾಗಿ ಬರುವ ಇವರು ನ್ಯಾಯಾಂಗದ ಕೆಲವೊಂದು ಲೋಪಗಳಿಂದಾಗಿ ನಿರಪರಾಧಿಯಾಗಿ ಹೊರಗೆ ಬರುತ್ತಾರೆ. ಬಾಬಾ ರಾಮ್‌ದೇವ್‌ರಂಥ ಕೆಲವು ಆಷಾಢ ಭೂತಿಗಳನ್ನು ಬಾಯಿ ಮುಚ್ಚಿಸುವಲ್ಲಿ ನ್ಯಾಯಾಂಗ ಯಶಸ್ವಿಯಾಗಿದೆ. ಹಾಗೆಂದು ಮೈ ಮರೆತು ಕುಳಿತುಕೊಳ್ಳಬಾರದು. ಈ ಹಿನ್ನೆಲೆಯಲ್ಲಿ ನ್ಯಾಯಾಂಗದ ಪಾರದರ್ಶಕತೆ ಸದ್ಯದ ತುರ್ತು ಅಗತ್ಯವಾಗಿದೆ.