ರಾಜಕೀಯ ಲಾಭಕ್ಕಾಗಿ ಏಕರೂಪ ನಾಗರಿಕ ಸಂಹಿತೆಯ ಕಸರತ್ತು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕಳೆದ ಒಂಭತ್ತು ವರ್ಷಗಳ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಂಡು ಮತ್ತೆ ಮತದಾರರ ಮನಸ್ಸು ಗೆಲ್ಲಲು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ನಾನಾ ಕಸರತ್ತುಗಳನ್ನು ಮಾಡುತ್ತಿದೆ. ಬೆಲೆಏರಿಕೆ, ಹಣದುಬ್ಬರ, ಭ್ರಷ್ಟಾಚಾರ ಮತ್ತು ನಿರುದ್ಯೋಗದ ಹೊಡೆತದಿಂದ ತತ್ತರಿಸಿದ ಕರ್ನಾಟಕದ ಜನತೆ ಸ್ವತಃ ಮೋದಿಯವರು ಬಂದು ನಾನಾ ಕಸರತ್ತುಗಳನ್ನು ಮಾಡಿದರೂ ಬಿಜೆಪಿಯನ್ನು ತಿರಸ್ಕರಿಸಿದರು. ಈ ಹಿನ್ನೆಲೆಯಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಮುಖಭಂಗವಾಗಬಾರದೆಂದು ಬಿಜೆಪಿ ರಾಷ್ಟ್ರೀಯ ನಾಯಕತ್ವ ಮತ್ತೆ ಜನರನ್ನು ಜಾತಿ, ಮತದ ಆಧಾರದಲ್ಲಿ ವಿಭಜಿಸಿ ಬಹುಸಂಖ್ಯಾತ ಹಿಂದೂ ವೋಟ್ ಬ್ಯಾಂಕ್ ನಿರ್ಮಿಸಲು ಭಾರೀ ಕಸರತ್ತು ನಡೆಸಿದೆ.ಅಯೋಧ್ಯೆಯ ರಾಮ ಮಂದಿರ ವಿವಾದ ಮುಗಿಯಿತು, ಈಗ ಜನರನ್ನು ಒಡೆಯುವ ಹೊಸ ವಿಷಯ ಬೇಕು. ಅದಕ್ಕಾಗಿ ಬಿಜೆಪಿ ತನ್ನ ಬತ್ತಳಿಕೆಯ ಹಳೆಯ ಅಸ್ತ್ರವಾದ ಏಕರೂಪ ನಾಗರಿಕ ಸಂಹಿತೆಯ ಪ್ರಸ್ತಾಪವನ್ನು ಮತ್ತೆ ತೇಲಿ ಬಿಟ್ಟಿದೆ.
ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಕಾನೂನು ಆಯೋಗ ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಲು ಮುಂದಾಗಿದೆ. ಅದು ತಾನಾಗಿ ಇದನ್ನು ಮಾಡಲಿಲ್ಲ. ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಆಯೋಗದ ಅಭಿಪ್ರಾಯ ಏನು ಎಂದು ಮೋದಿ ಸರಕಾರ ಕಾನೂನು ಆಯೋಗವನ್ನು ಕೇಳಿತ್ತು. ಹೀಗಾಗಿ ಕಾನೂನು ಆಯೋಗ ಸಾರ್ವಜನಿಕ ಸಮಾಲೋಚನಾ ಪ್ರಕ್ರಿಯೆಯನ್ನು ಆರಂಭಿಸಿದೆ. ಏಕರೂಪ ನಾಗರಿಕ ಸಂಹಿತೆಯು ಸರಕಾರದ ನೀತಿ, ಧೋರಣೆಗಳ ನಿರ್ದೇಶನಾತ್ಮಕ ತತ್ವಗಳ ಭಾಗವಾಗಿದೆ. ಹಾಗಾಗಿ ಏಕರೂಪ ನಾಗರಿಕ ಸಂಹಿತೆಯನ್ನು ರೂಪಿಸಿ ಜಾರಿಗೆ ತರುವುದು ತನ್ನ ಕರ್ತವ್ಯವಾಗಿದೆ ಎಂದು ಸುಪ್ರೀಂ ಕೋರ್ಟಿಗೆ ಕಳೆದ ವರ್ಷ ತಿಳಿಸಿತ್ತು.
ಆದರೆ ಇಂಥ ಸೂಕ್ಷ್ಮ ವಿಷಯದಲ್ಲಿ ತರಾತುರಿಯಲ್ಲಿ ಕಾಟಾಚಾರದ ಸಮಾಲೋಚನೆ ನಡೆಸಿ ದುಡುಕಿನ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ. ಇದು ಅತ್ಯಂತ ಮಹತ್ವದ ವಿಚಾರ. ಈ ಹಿಂದಿನ ಕಾನೂನು ಆಯೋಗವು 2018ರಲ್ಲಿ ಸಮೀಕ್ಷೆ ನಡೆಸಿ, ಸಾಕಷ್ಟು ಅಧ್ಯಯನ ಮಾಡಿ ಈ ಹಂತದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದು ಸರಿಯಲ್ಲ. ಅದರ ಅಗತ್ಯವೂ ಈಗಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು. ಆನಂತರ ಅಂಥ ಹೊಸ ಬೆಳವಣಿಗೆಗಳೇನೂ ಆಗಿಲ್ಲ. ಹೀಗಿರುವಾಗ ಮೋದಿ ಸರಕಾರಕ್ಕೆ ಏಕರೂಪ ನಾಗರಿಕ ಸಂಹಿತೆಯ ನೆನಪಾಗಿರುವುದು ಅಚ್ಚರಿಯ ಸಂಗತಿಯಲ್ಲ. ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇದನ್ನು ಮುಂದಿಟ್ಟು ಮತದಾರರ ಬಳಿ ಹೋಗುವ ತಂತ್ರವನ್ನು ಅದು ರೂಪಿಸಿದೆ.
ಏಕರೂಪ ನಾಗರಿಕ ಸಂಹಿತೆಯು ಸರಕಾರದ ನಿರ್ದೇಶನಾತ್ಮಕ ತತ್ವಗಳ ಭಾಗವಾಗಿರುವುದರಿಂದ ಸಂಹಿತೆಯನ್ನು ರೂಪಿಸಿ ಜಾರಿಗೆ ತರುವುದು ತನ್ನ ಕರ್ತವ್ಯ ವಾಗಿದೆ ಎಂದು ಕಳೆದ ವರ್ಷ ಮೋದಿ ಸರಕಾರ ಸುಪ್ರೀಂ ಕೋರ್ಟಿಗೆ ತಿಳಿಸಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳುವುದು ಇದರ ಹಿಂದಿರುವ ಮಸಲತ್ತು.
ವಿಭಿನ್ನ ಧರ್ಮ, ಜಾತಿ, ಭಾಷೆ, ಸಂಸ್ಕೃತಿಗಳ, ಆಚಾರ, ವಿಚಾರಗಳ ತಾಣವಾದ ಭಾರತದಲ್ಲಿ ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಏಕಾಏಕಿ ಇಂಥ ಸಂಹಿತೆಯನ್ನು ಹೇರುವುದರಿಂದ ಅನುಕೂಲಕ್ಕಿಂತ, ಅನನುಕೂಲವೇ ಜಾಸ್ತಿ ಆಗುತ್ತದೆ. ಯಾವುದೇ ಕಾನೂನನ್ನು ಜನ ಮಾನಸಿಕವಾಗಿ ಒಪ್ಪಿಕೊಳ್ಳಬೇಕು. ಸರಕಾರ ತನ್ನ ಹಿತಾಸಕ್ತಿಗಾಗಿ ದಿಢೀರನೆ ಯಾವುದೇ ಶಾಸನವನ್ನು ಹೇರುವುದು ಸರಿಯಲ್ಲ.
ಭಾರತದ ಇಂದಿನ ಪರಿಸ್ಥಿತಿಯಲ್ಲಿ ಸರಕಾರ ಏಕರೂಪ ನಾಗರಿಕ ಸಂಹಿತೆಯ ಹೆಸರಿನಲ್ಲಿ ಯಾವುದೇ ತೀರ್ಮಾನ ಕೈಗೊಂಡರೂ ಅದರಿಂದ ಬಹುತ್ವ ಭಾರತದ ವಿವಿಧ ಸಮುದಾಯಗಳ ಮೇಲೆ ಬಹುಸಂಖ್ಯಾತ ಸಮುದಾಯದ ಯಜಮಾನಿಕೆಯನ್ನು ಹೇರಿದಂತಾಗುತ್ತದೆ. ಇದರಿಂದ ಸಮುದಾಯಗಳ ನಡುವೆ ಮನಸ್ತಾಪಗಳು ಬೆಳೆದು ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ಉಂಟಾಗುತ್ತದೆಯೆಂದರೆ ಅತಿಶಯೋಕ್ತಿಯಲ್ಲ.
ಭಾರತದಲ್ಲಿ ವೈಯಕ್ತಿಕ ಕಾನೂನುಗಳು ಧಾರ್ಮಿಕ ಶ್ರದ್ಧೆಗಳ ಜೊತೆ ಸೇರ್ಪಡೆಯಾಗಿವೆ. ವಿವಾಹ ವಿಚ್ಛೇದನ, ಉತ್ತರಾಧಿಕಾರ, ದತ್ತು, ಪಾಲಕತ್ವ ಹೀಗೆ ಹಲವಾರು ವಿಷಯಗಳು ಧಾರ್ಮಿಕ ಕಟ್ಟುಪಾಡುಗಳ ಜೊತೆ ಬೆಸೆದುಕೊಂಡಿವೆ. ಧಾರ್ಮಿಕ ಸ್ವಾತಂತ್ರ್ಯ, ಲಿಂಗತ್ವ ಹಕ್ಕುಗಳು ಮತ್ತು ತಮ್ಮದೇ ಆದ ನಂಬಿಕೆ ಮತ್ತು ಜೀವನ ಶೈಲಿಯನ್ನು ಹೊಂದಿರುವ ಆದಿವಾಸಿಗಳು ಹಾಗೂ ಅಲೆಮಾರಿಗಳ ಮೇಲೆ ಏಕರೂಪ ನಾಗರಿಕ ಸಂಹಿತೆಯ ಹೆಸರಿನಲ್ಲಿ ಬಹುಸಂಖ್ಯಾತರ ಆಚಾರ, ವಿಚಾರಗಳನ್ನು ಹೇರುವುದು ನ್ಯಾಯ ಸಮ್ಮತವಲ್ಲ.
ಆದ್ದರಿಂದ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಯಾವುದೇ ಸಂಹಿತೆಯನ್ನು ಬಲವಂತವಾಗಿ ಹೇರುವ ಬದಲಿಗೆ ಈ ಬಗ್ಗೆ ವ್ಯಾಪಕವಾದ ಚರ್ಚೆ, ಸಮಾಲೋಚನೆ ನಡೆಸಬೇಕು, ರಾಜಕೀಯ ಪಕ್ಷಗಳ ಜೊತೆಗೆ ಚರ್ಚೆ ಮಾಡಬೇಕು. ಇದಾವುದನ್ನೂ ಮಾಡದೆ ಕಾನೂನು ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಏಕಾಏಕಿ ಏಕರೂಪ ನಾಗರಿಕ ಸಂಹಿತೆ ಹೇರುವುದು ಸರ್ವಾಧಿಕಾರದ ನಡೆಯಾಗುತ್ತದೆ.
ರಾಮಜನ್ಮಭೂಮಿ, ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ರದ್ದತಿ, ಗೋಹತ್ಯೆ ನಿಷೇಧ, ಏಕರೂಪ ನಾಗರಿಕ ಸಂಹಿತೆ ಬಿಜೆಪಿಯ ಅತ್ಯಂತ ಹಳೆಯ ಕಾರ್ಯಸೂಚಿ. ಈ ಪೈಕಿ ರಾಮಜನ್ಮ ಭೂಮಿ ಮತ್ತು ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿಯ ಅಜೆಂಡಾ ಈಡೇರಿದೆ. ಈಗ ಉಳಿದುದು ಏಕರೂಪ ನಾಗರಿಕ ಸಂಹಿತೆ ಮಾತ್ರ. ಅದನ್ನು ಜಾರಿಗೆ ತಂದರೆ ಬಹುಸಂಖ್ಯಾತರ ವೋಟು ಸಿಗಬಹುದೆಂಬ ಲೆಕ್ಕಾಚಾರದಲ್ಲಿ ಈ ಕೆಲಸಕ್ಕೆ ಮುಂದಾಗಿದೆ.
ಆದರೆ ಇಂಥ ಸೂಕ್ಷ್ಮ ಶಾಸನಗಳನ್ನು ತರಾತುರಿಯಲ್ಲಿ ತರದೇ ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಿ ಸಂಸತ್ತಿನ ಒಪ್ಪಿಗೆಯನ್ನು ಪಡೆಯುವುದು ಸೂಕ್ತ.