ಮಡಿಲ ಮಾಧ್ಯಮಗಳ ಯುಗ ಮುಗಿಸಲು ಸ್ವತಂತ್ರ ಮಾಧ್ಯಮಗಳ ಜೊತೆ ನಿಲ್ಲೋಣ
ವಾರ್ತಾಭಾರತಿಗೆ 21ನೇ ವರ್ಷದ ಸಂಭ್ರಮ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಇಂದು ನಿಮ್ಮ ‘ವಾರ್ತಾ ಭಾರತಿ’ ತನ್ನ ಸಾಹಸದ ಪ್ರಯಾಣದಲ್ಲಿ 21ನೇ ವರ್ಷ ಅಂದರೆ ಮೂರನೆಯ ದಶಕವನ್ನು ಪ್ರವೇಶಿಸುತ್ತಿದೆ.
ಪ್ರೀತಿ ವಾತ್ಸಲ್ಯದೊಂದಿಗೆ ನಿತ್ಯವೂ ಮನಸಾರೆ ‘ವಾರ್ತಾಭಾರತಿ’ ಬಳಗದ ಬೆನ್ನು ತಟ್ಟುತ್ತಲೇ ಇರುವ ಹಿತೈಷಿಗಳು ಇಂದು ಗಣ್ಯ ಸಂಖ್ಯೆಯಲ್ಲಿರುವುದರಿಂದ, ಸಂಭ್ರಮದ ಈ ಸಂದರ್ಭದಲ್ಲಿ ನಾವೇ ನಮ್ಮ ಬೆನ್ನು ತಟ್ಟಿಕೊಳ್ಳಬೇಕಾದ ಅಗತ್ಯ ಉಳಿದಿಲ್ಲ. ಹಾಗೆಯೇ, ತೀರಾ ಪ್ರತಿಕೂಲ ಸನ್ನಿವೇಶಗಳ ಜೊತೆ ಸೆಣಸುತ್ತಾ ಎರಡು ದಶಕಗಳ ಕಾಲ ಬದುಕಿದ್ದು ಮತ್ತು ಘನತೆಯೊಂದಿಗೆ ಬೆಳೆಯುತ್ತಾ, ತನ್ನ ಘೋಷಿತ ಗುರಿಯೆಡೆಗೆ ಮುನ್ನಡೆಯುತ್ತಾ ಬದುಕಿದ್ದೊಂದೇ ನಮ್ಮ ಬಳಗದ ಸಾಧನೆಯಲ್ಲ. ನಾಡಿನ ಜನತೆ ಈ ಸಂಸ್ಥೆ ಮತ್ತು ಈ ಬಳಗದ ಪ್ರಯಾಣದಲ್ಲಿ ಇನ್ನೂ ಅನೇಕಾರು ಅನನ್ಯ ವಿಶೇಷತೆ, ಸಾಧನೆ ಮತ್ತು ಕೊಡುಗೆಗಳನ್ನು ಸ್ಪಷ್ಟವಾಗಿ ಗುರುತಿಸಿ, ಪ್ರಶಂಸಿಸಿದ್ದಾರೆ. ಆದ್ದರಿಂದ ಅವುಗಳನ್ನು ಪ್ರಸ್ತಾಪಿಸಬೇಕಾದ ಅಗತ್ಯವೂ ಉಳಿದಿಲ್ಲ.
ಆದರೆ ‘ವಾರ್ತಾಭಾರತಿ’ ಎಂಬ ಒಂದು ಮಾಧ್ಯಮ ಬಳಗ ಮತ್ತು ಅದರ ಅಭಿಮಾನಿಗಳು ಹರ್ಷಿಸುತ್ತಿರುವ ಈ ಸಂದರ್ಭದಲ್ಲಿ, ದೇಶದ ಮಾಧ್ಯಮರಂಗದಲ್ಲಾಗಲಿ, ಸಾಕ್ಷಾತ್ ದೇಶದಲ್ಲಾಗಲಿ ಎಲ್ಲವೂ ಸಂಭ್ರಮಯೋಗ್ಯವಾಗಿಲ್ಲ. ಇಲ್ಲಿಜನತೆಯ ಎಲ್ಲ ಹಿತಾಸಕ್ತಿಗಳು ಅಪಾಯದಲ್ಲಿವೆ.ಮೂಲಭೂತ ಮಾನವ ಹಕ್ಕುಗಳು, ಎಲ್ಲ ಬಗೆಯ ಮಾನವೀಯ ಸ್ವಾತಂತ್ರ್ಯಗಳು ಮತ್ತು ವಿಶೇಷವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಶ್ನಿಸುವ ಸ್ವಾತಂತ್ರ್ಯ ಮತ್ತು ಮಾಧ್ಯಮ ಸ್ವಾತಂತ್ರ್ಯಗಳನ್ನು ದೋಚಲಾಗಿದೆ.ಸತ್ಯಹೇಳಿದ ಅಪರಾಧಕ್ಕಾಗಿ ಮತ್ತು ತಮ್ಮನ್ನು ಮಾರಿಕೊಳ್ಳಲು ನಿರಾಕರಿಸಿದ ತಪ್ಪಿಗಾಗಿಎಷ್ಟೋ ಪತ್ರಕರ್ತರು ಮತ್ತು ಬರಹಗಾರರು ಹತರಾಗಿದ್ದಾರೆ. ಎಷ್ಟೋ ಪತ್ರಕರ್ತರು ಜೈಲಲ್ಲಿದ್ದಾರೆ. ಎಷ್ಟೋ ಮಂದಿ ವಿವಿಧ ಬಗೆಯ ಹಿಂಸೆ, ಕಿರುಕುಳ ಮತ್ತು ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಈ ಕುರಿತು ಕಾಳಜಿಯುಳ್ಳ, ಭಾರತದ ಪ್ರಜ್ಞಾವಂತ ನಾಗರಿಕರೆಲ್ಲಾ ತೀವ್ರ ಶೋಕ, ಆಘಾತ, ನಿರಾಶೆ ಮತ್ತು ಆಕ್ರೋಶದ ಸ್ಥಿತಿಯಲ್ಲಿದ್ದಾರೆ. ಅವರಿಗೆ ಸಂಭ್ರಮದ ಬದಲು ಘೋರ ರೋದನಕ್ಕೆ ಮಾತ್ರ ಸಾವಿರ ಕಾರಣಗಳು ಎದ್ದು ಕಾಣುತ್ತಿವೆ.
ಪ್ರಜೆಯೇ ಪ್ರಭು ಎಂದು ನಂಬುವ ಸುಮಾರು ಶತಕೋಟಿ ಅಮಾಯಕ ಮತದಾರರಿರುವ ನಮ್ಮ ದೇಶದಲ್ಲಿ ಹಲವು ಜಾಣ ವಿಧಾನಗಳಿಂದ ಪ್ರಜೆಗಳನ್ನು ದಾಸ್ಯಕ್ಕೆ ತಳ್ಳಲಾಗುತ್ತಿದೆ. ಮಾತ್ರವಲ್ಲ, ಪ್ರಜೆಗಳು ತಮ್ಮ ದಾಸ್ಯವನ್ನೇ ಪ್ರಭುತ್ವವೆಂದು ನಂಬಿ ವಿಜೃಂಭಿಸುವಂತೆ ಅವರನ್ನು ಮಂಕುಗೊಳಿಸಲಾಗಿದೆ. ಈ ಪ್ರಕ್ರಿಯೆ ಬಹುದೊಡ್ಡ ಪ್ರಮಾಣದಲ್ಲಿ, ಬಹಳ ಯೋಜನಾಬದ್ಧವಾಗಿ, ತುಂಬಾ ನಾಜೂಕಾಗಿ ನಡೆದಿದೆ. ನಡೆಯುತ್ತಲೇ ಇದೆ. ಮಹಾ ದುರಂತವೇನೆಂದರೆ, ಸಾಕ್ಷಾತ್ ವ್ಯವಸ್ಥೆಯೇ ತನ್ನ ಶತಕೋಟಿ ನೈಜ ಪ್ರಭುಗಳ ಕೈಯಿಂದ ಅವರ ಹಕ್ಕು, ಅಧಿಕಾರ, ಅವಕಾಶ ಮತ್ತು ಸಂಪನ್ಮೂಲಗಳನ್ನೆಲ್ಲಾ ಒಂದೊಂದಾಗಿ ಕಿತ್ತುಕೊಂಡು ಅವೆಲ್ಲವನ್ನೂ ಕೆಲವೇ ಮಂದಿ ಅತಿಶ್ರೀಮಂತರ ಕಪಿಮುಷ್ಟಿಗೆ ಒಪ್ಪಿಸುತ್ತಿದೆ. ಇದರ ಪರಿಣಾಮವಾಗಿ ಎಲ್ಲ ಕ್ಷೇತ್ರಗಳಲ್ಲೂಕೇವಲ ಕೆಲವೇ ದೈತ್ಯರ ಏಕಸ್ವಾಮ್ಯ ಮತ್ತು ಉಳಿದೆಲ್ಲರ ಅಸಹಾಯಕತೆ ಮೆರೆಯುತ್ತಿದೆ.
ಸಾಮಾಜಿಕ ಮತ್ತು ಆರ್ಥಿಕ ರಂಗದಲ್ಲಿ ಘೋರ ಸ್ವರೂಪದ ಅಸಮಾನತೆ, ಅಸಮತೋಲನ ಮತ್ತು ಅನ್ಯಾಯಗಳನ್ನು ಹಲವು ಸಹಸ್ರಮಾನಗಳಿಂದ ಬಹಳ ಮುತುವರ್ಜಿಯಿಂದ ಪೋಷಿಸುತ್ತಾ ಬಂದಿರುವ ಸಮಾಜ ನಮ್ಮದು. ಈ ಸಮಾಜದ ಪಾಲಿಗೆ, 1950ರಲ್ಲಿ ನಾವು ನಮಗೆ ಕೊಟ್ಟು ಕೊಂಡ, ಹೊಸ ಭಾರತದ ಹೊಸ ಸಂವಿಧಾನವು ಒಂದು ದೊಡ್ಡ ಆಶಾದೀಪವಾಗಿತ್ತು. ಹೊಸ ಸಂವಿಧಾನವು ಎಲ್ಲವನ್ನೂ ಬದಲಿಸಿ ಬಿಡುತ್ತದೆ, ಎಲ್ಲ ಹಳೆಯ ಅನಿಷ್ಟಗಳಿಂದ ಮುಕ್ತಿ ಒದಗಿಸುತ್ತದೆ ಮತ್ತು ಅದು ನಮಗೆ ಸಮಾನತೆ, ನ್ಯಾಯ, ಕಲ್ಯಾಣ ಮತ್ತು ಅಭ್ಯುದಯವನ್ನು ತಂದುಕೊಡುತ್ತದೆ ಎಂದು ನಂಬಿದ್ದವರೆಲ್ಲಾ ಇಂದು ನಂಬಲಾಗದಷ್ಟು ಹತಾಶ ಸ್ಥಿತಿಯಲ್ಲಿದ್ದಾರೆ. ಇಲ್ಲೀಗ ರಾಜಮಹಾರಾಜರು, ಈಸ್ಟ್ ಇಂಡಿಯಾ ಕಂಪೆನಿ, ಬ್ರಿಟಿಷ್ ಸರಕಾರ ಇತ್ಯಾದಿ ಯಾವುದೂ ಕಾಣಿಸುತ್ತಿಲ್ಲವಾದರೂ ಅವರು ಪ್ರತಿನಿಧಿಸುತ್ತಿದ್ದ ಶೋಷಣೆ, ದಬ್ಬಾಳಿಕೆ, ತುಳಿತ, ದರೋಡೆಗಳೆಲ್ಲಾ ಬಾನೆತ್ತರಕ್ಕೆ ಬೆಳೆದು ನಿಂತು, ಜನತೆಯನ್ನು ಅಣಕಿಸುತ್ತಿವೆ. ಹಳೆಯಕಾಲದ ಒಡೆಯರ ಜಾಗದಲ್ಲಿ, ಅವರಿಗಿಂತ ಸಾವಿರ ಪಾಲು ಕ್ರೂರ ಹಾಗೂ ಚಾಣಾಕ್ಷರಾದ ಅವರ ಉತ್ತರಾಧಿಕಾರಿಗಳು ಎಲ್ಲೆಂದರಲ್ಲಿ ತಾಂಡವವಾಡುತ್ತಿದ್ದಾರೆ. ಸಂವಿಧಾನವನ್ನು ನಂಬಿ ಕೂತಿದ್ದವರ ನಿರೀಕ್ಷೆಗಳೆಲ್ಲಾ ಸಂಪೂರ್ಣ ಹುಸಿಯಾಗಿವೆ. ಇಂತಹ ಸನ್ನಿವೇಶದಲ್ಲಿ ಸಂಭ್ರಮಕ್ಕೆ ಅವಕಾಶವೆಲ್ಲಿದೆ?
ವಿವಿಧ ರಂಗಗಳಲ್ಲಿ ಯಾವ ಸಮಾಜ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಜಗತ್ತಿಗೆ ತಿಳಿಸುವ ಬೇರೆ ಬೇರೆ ಜಾಗತಿಕ ಮಾಪಕಗಳು ಜಗತ್ತಿನ ಮುಂದೆ ಭಾರತೀಯ ಸಮಾಜದ ಮಾನ ಮರ್ಯಾದೆಗಳನ್ನು ಚಿಂದಿಯಾಗಿಸಿವೆ. 2023ರ ಎಲೆಕ್ಟೋರಲ್ ಡೆಮಾಕ್ರಸಿ ಇಂಡೆಕ್ಸ್ ನಲ್ಲಿ ಭಾರತ 108ನೇ ಸ್ಥಾನಕ್ಕೆ ಕುಸಿದಿದೆ.ಜಾಗತಿಕ ಮಟ್ಟದ ಹಲವು ಅಧ್ಯಯನಗಳು, ಭಾರತದಲ್ಲಿ ಚುನಾಯಿತ ಪ್ರಜಾಭುತ್ವ ವ್ಯವಸ್ಥೆ ಅಸ್ತಿತ್ವದಲ್ಲಿದ್ದರೂ ಇಲ್ಲಿ ಪ್ರಜಾಸತ್ತೆಯು ತುಂಬಾ ದುರ್ಬಲವಾಗಿದ್ದು, ದೇಶವು ಕ್ರಮೇಣ ಸರ್ವಾಧಿಕಾರದತ್ತ ವಾಲುತ್ತಿರುವುದನ್ನು ಗುರುತಿಸಿವೆ. 2023ರ ಜಾಗತಿಕಮಾಧ್ಯಮ ಸ್ವಾತಂತ್ರ್ಯದ ಮಾಪಕದಲ್ಲಿ ಜಗತ್ತಿನ 180 ದೇಶಗಳ ಪೈಕಿ ಭಾರತ 161ನೇ ಸ್ಥಾನದಲ್ಲಿದೆ. 2022ರಗ್ಲೋಬಲ್ ಹಂಗರ್ ಇಂಡೆಕ್ಸ್ ಪ್ರಕಾರ ಜಗತ್ತಿನ 121 ಬಡ ದೇಶಗಳ ಪೈಕಿ ಭಾರತ 107ನೇ ಸ್ಥಾನದಲ್ಲಿದೆ. 2022ರ ಜಾಗತಿಕ ಮಾನವ ಸ್ವಾತಂತ್ರ್ಯ (ಹ್ಯೂಮನ್ ಫ್ರೀಡಮ್) ಇಂಡೆಕ್ಸ್ ಪ್ರಕಾರ ಭಾರತವು ಜಗತ್ತಿನ 165 ದೇಶಗಳ ಪೈಕಿ 112ನೇ ಸ್ಥಾನದಲ್ಲಿದೆ.2021ರ ಗ್ಲೋಬಲ್ ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್ ಪ್ರಕಾರ ಭಾರತವು ಜಗತ್ತಿನ 191 ದೇಶಗಳ ಪೈಕಿ 132ನೇ ಸ್ಥಾನದಲ್ಲಿದೆ. ಹೀಗೆ, ಅನೇಕ ನಿರ್ಣಾಯಕ ರಂಗಗಳಲ್ಲಿ ನಮ್ಮ ದೇಶವು ಉನ್ನತಿಯ ಬದಲು ಅವನತಿಯಲ್ಲಿ ‘ವಿಶ್ವಗುರು’ ಆಗುವ ಹಂತದಲ್ಲಿದೆ.
ಮಹಾ ದುರಂತವೇನೆಂದರೆ ಹಿಂದೊಂದು ಕಾಲದಲ್ಲಿ ಜನಸಾಮಾನ್ಯರ ಕೊರಳನ್ನು ರಾಜರು ಮತ್ತು ಯಜಮಾನರ ಕೈಗೊಪ್ಪಿಸಲು ಧರ್ಮ, ದೇವರು ಮತ್ತು ಪುರೋಹಿತರನ್ನು ಅಸ್ತ್ರವಾಗಿ ಬಳಸಲಾಗಿದ್ದರೆ ಇಂದು ಅದೇ ಕಾರ್ಯಕ್ಕಾಗಿ ಮಾಧ್ಯಮ ಎಂಬ, ತಂತ್ರಜ್ಞಾನ ಸಜ್ಜಿತವಾದ, ಪರಿಣಾಮಕಾರಿ ಆಧುನಿಕ ಅಸ್ತ್ರವನ್ನು ಯಶಸ್ವಿಯಾಗಿ ಬಳಸಲಾಗುತ್ತಿದೆ.ಆಳುವವರು ಅತಿ ಶ್ರೀಮಂತರ ಮಡಿಲಲ್ಲಿ ಆಶ್ರಯ ಪಡೆದಿದ್ದು, ಇದನ್ನು ಉಗ್ರವಾಗಿ ವಿರೋಧಿಸಬೇಕಾಗಿದ್ದ ಮಾಧ್ಯಮಗಳು ಮತ್ತು ಮಾಧ್ಯಮ ರಂಗದ ಪ್ರವರ್ತಕರು ಪ್ರಸ್ತುತ ಆಳುವವರ ಮಡಿಲಲ್ಲಿ ಸುಖ ಮತ್ತು ಸಾರ್ಥಕತೆಯನ್ನು ಅರಸುತ್ತಿದ್ದಾರೆ. ಜನತೆಯಿಂದ ಅವರ ಎಲ್ಲ ಹಕ್ಕು ಮತ್ತು ಸ್ವಾತಂತ್ರ್ಯಗಳನ್ನು ಕ್ರಮೇಣ ಕಿತ್ತುಕೊಳ್ಳುವ ಅಮಾನುಷ ಪ್ರಕ್ರಿಯೆಯಲ್ಲಿ ಮಾಧ್ಯಮಗಳು ಸಕ್ರಿಯ ಸಹಭಾಗಿಗಳಾಗಿವೆ. ಎಲ್ಲ ಜನವಿರೋಧಿ ಕ್ರಮಗಳು ಮತ್ತು ಧೋರಣೆಗಳಿಗೆ ಜನರ ಮೌನ ಸಮ್ಮತಿಯನ್ನು ತಂದೊದಗಿಸುವ ಹೊಣೆಯನ್ನು ಮಡಿಲ ಮೀಡಿಯಾಗಳು ವಹಿಸಿಕೊಂಡಿವೆ. ಆದ್ದರಿಂದಲೇ ಹಿಂದೆ ಈಸ್ಟ್ ಇಂಡಿಯಾ ಕಂಪೆನಿಯ ಬಗ್ಗೆ, ಬ್ರಿಟಿಷ್ ಸರಕಾರದ ಬಗ್ಗೆ ಮತ್ತು ರಾಜಮಹಾರಾಜರ ದಬ್ಬಾಳಿಕೆಯ ಬಗ್ಗೆ ಸಮಾಜದಲ್ಲಿ ಎದ್ದು ಕಾಣುತ್ತಿದ್ದ ಸಂಶಯ, ಆಕ್ರೋಶ ಮತ್ತು ಪ್ರತಿರೋಧವು ನವಯುಗದ ಸ್ವದೇಶಿ ಅತಿಶ್ರೀಮಂತ ಪಾಳೆಯಗಾರರ ವಿರುದ್ಧವಾಗಲಿ ಅವರ ಆಜ್ಞಾಪಾಲಕ ಸರಕಾರಗಳ ವಿರುದ್ಧವಾಗಲಿ ಕಂಡು ಬರುತ್ತಿಲ್ಲ. ಇದು, ಮಾಹಿತಿ ಮತ್ತು ಮಾರ್ಗದರ್ಶನಕ್ಕಾಗಿ ಜನರು ನಂಬುವ ಮಾಧ್ಯಮಗಳು ಜನರಲ್ಲಿ ಜಾಗೃತಿ ಬೆಳೆಸುವ ಬದಲು ಅವರಲ್ಲಿ ಮೌಢ್ಯವನ್ನು ಬಿತ್ತಿ ಅಮಲಿನ ಸ್ಥಿತಿಯಲ್ಲಿಡುತ್ತಿರುವುದರ ನೇರ ಪರಿಣಾಮ.
ಇದೇ ವರ್ಷ ಎಪ್ರಿಲ್ ತಿಂಗಳಲ್ಲಿ ಪ್ರಕಟವಾದ ಆಕ್ಸ್ ಫಾಮ್ ವರದಿಯೊಂದರ ಪ್ರಕಾರ ಭಾರತದ ಒಟ್ಟು ಸಂಪತ್ತಿನ 60 ಶೇ.ದಷ್ಟು ಮೊತ್ತವು ಕೇವಲ 5 ಶೇ. ಜನರ ಕೈಯಲ್ಲಿದೆ. ಅದೇ ವೇಳೆ 50 ಶೇ.ದಷ್ಟಿರುವ ಬಡ ಭಾರತೀಯರ ಬಳಿ ಇರುವುದು ದೇಶದ ಒಟ್ಟು ಸಂಪತ್ತಿನ ಕೇವಲ 3 ಶೇ.ದಷ್ಟು ಮಾತ್ರ. 5 ಶೇ. ಜನರ ಬಳಿ 60 ಶೇ. ಸಂಪತ್ತು ಮತ್ತು 50 ಶೇ. ಜನರ ಬಳಿ 3 ಶೇ. ಸಂಪತ್ತು. ಈ ಭಯಾನಕ ವೈಪರೀತ್ಯ ಆಕಸ್ಮಿಕವಾಗಿ ಸಂಭವಿಸಿಲ್ಲ. ಇದೇ ವರದಿಯಲ್ಲಿ ವಿಶ್ಲೇಷಿಸಿರುವಂತೆ, ಭಾರತ ಸರಕಾರವು ಪ್ರಸ್ತುತ ಅತಿ ಶ್ರೀಮಂತರ ಒಟ್ಟು ಸಂಪತ್ತಿನ ಮೇಲೆ ಕೇವಲ ಒಂದು ಬಾರಿ 2 ಶೇ. ತೆರಿಗೆ ಹೇರಿದರೆ ಮುಂದಿನ ಮೂರು ವರ್ಷಗಳ ಕಾಲ ದೇಶದಲ್ಲಿ ಯಾವೊಬ್ಬ ಪ್ರಜೆಕೂಡಾ ಪೋಷಕಾಂಶದ ಕೊರತೆಯಿಂದ ನರಳದಂತೆ ನೋಡಿಕೊಳ್ಳಬಹುದು. (ಸದ್ಯ ದೇಶದಲ್ಲಿ ಸುಮಾರು 15 ಶೇ. ಜನರು ಪೋಷಕಾಂಶದ ಕೊರತೆಯಿಂದಾಗಿ ವಿವಿಧ ಬಗೆಯ ಮಾರಕ ರೋಗಗಳಿಂದ ನರಳುತ್ತಿದ್ದಾರೆ.)
ಆರ್ಥಿಕರಂಗದ ಈ ಏಕಸ್ವಾಮ್ಯಕ್ಕೆ ಮಾಧ್ಯಮರಂಗದ ಮಾಲಕತ್ವದಲ್ಲಿ ಅತಿ ಶ್ರೀಮಂತರು ಸಾಧಿಸಿರುವ ಏಕ ಸ್ವಾಮ್ಯದ ಜೊತೆ ನೇರ ಸಂಬಂಧವಿದೆ. ಈ ಕುರಿತು ಕೇವಲ ಒಂದು ಪ್ರಾತಿನಿಧಿಕ ಉದಾಹರಣೆ ಮುಂದಿಡಬೇಕೆಂದರೆ, ಭಾರತದಲ್ಲಿ ಸುಮಾರು 80 ಕೋಟಿ ಬಳಕೆದಾರರಿರುವ 70 ಮಾಧ್ಯಮ ಸಂಸ್ಥೆಗಳು ಮುಕೇಶ್ ಅಂಬಾನಿ ಎಂಬ ಕೇವಲ ಒಬ್ಬ ಅತಿ ಶ್ರೀಮಂತನ ರಿಲಯನ್ಸ್ ಸಮೂಹ ಕಂಪೆನಿಯ ಕೈಯಲ್ಲಿದೆ. ಅತಿಶ್ರೀಮಂತರು ನೇರ ಆರ್ಥಿಕ ಲಾಭನಷ್ಟಗಳನ್ನು ಲೆಕ್ಕಿಸದೆ ತಮ್ಮ ಮಡಿಲಲ್ಲಿ ಪೋಷಿಸುವ ಈ ಬಗೆಯ ಮಾಧ್ಯಮಗಳು ಸಲ್ಲಿಸುವ ಅತ್ಯಂತ ಪ್ರಧಾನ ಸೇವೆ ಎಂದರೆ, ದೇಶದ ಜನತೆ ಸ್ವತಃ ತಮ್ಮ ನೈಜ ಸಮಸ್ಯೆಗಳ ಕಡೆಗೆ ಗಮನ ಹರಿಸದಂತೆ ಹಾಗೂ ಆ ಕುರಿತು ಚರ್ಚಿಸದಂತೆ ನೋಡಿಕೊಳ್ಳುವುದು. ಯಾವುದೇ ಅನಿಷ್ಟವನ್ನು ನಾವೂ ಕಣ್ಣೆತ್ತಿ ನೋಡುವುದಿಲ್ಲ ಮತ್ತು ಅವುಗಳನ್ನು ನೋಡಲು ಸಮಾಜಕ್ಕೂ ಅವಕಾಶ ನೀಡುವುದಿಲ್ಲ ಎಂದು ಈ ಮಾಧ್ಯಮಗಳು ಪಣತೊಟ್ಟಿರುತ್ತವೆ. ಈ ಮಡಿಲ ಮಾಧ್ಯಮಗಳು ಜನರನ್ನು ಅವರ ಹಿತಾಸಕ್ತಿಗಳೊಂದಿಗೆ ಯಾವುದೇ ಸಂಬಂಧ ಇಲ್ಲದ ಸುದ್ದಿ ಹಾಗೂ ಚರ್ಚೆಗಳಲ್ಲೇ ಸದಾ ನಿರತರಾಗಿಡುವ ಮೂಲಕ ಪ್ರಜಾಸತ್ತೆ, ಸ್ವಾತಂತ್ರ್ಯ, ಸಮಾನತೆ, ನ್ಯಾಯ, ಹಕ್ಕು, ಅಧಿಕಾರ, ಭ್ರಷ್ಟಾಚಾರ, ನಿರುದ್ಯೋಗ, ಬೆಲೆಯೇರಿಕೆ, ದುರಾಡಳಿತ, ಹಿಂಸಾಚಾರ, ಹಿಂದುಳಿಕೆ, ಮೀಸಲಾತಿ, ಪೌರೋಹಿತ್ಯ, ಜಾತಿವ್ಯವಸ್ಥೆ, ಅರಾಜಕತೆ, ಸರಕಾರದ ವೈಫಲ್ಯಗಳು, ಜನವಿರೋಧಿ ನೀತಿಗಳು, ಹಸಿವು, ದಟ್ಟದಾರಿದ್ರ್ಯ, ಭಿಕ್ಷಾಟನೆ, ಆಶ್ರಯ ರಹಿತರು, ಬಾಲಕಾರ್ಮಿಕರು, ಆತ್ಮಹತ್ಯೆಗಳು, ಲಿಂಗ ತಾರತಮ್ಯ, ಮಹಿಳೆಯರ ವಿರುದ್ಧ ಅಪರಾಧಗಳು - ಇವೇ ಮುಂತಾದ ನಿರ್ಣಾಯಕ ವಿಷಯಗಳ ಕುರಿತು ಗಮನಹರಿಸುವುದಕ್ಕೆ ಜನರಿಗೆ ಬಿಡುವೇ ಇಲ್ಲದಂತೆ ಮಾಡಿಬಿಡುತ್ತವೆ. ಅವೆಲ್ಲಾ ಚರ್ಚೆಗೆ ಯೋಗ್ಯವೇ ಅಲ್ಲದ ವಿಷಯಗಳೆಂಬಂತೆ ಮಾಧ್ಯಮಗಳು ನಟಿಸುವುದು ಮಾತ್ರವಲ್ಲ, ಹಾಗೆಂದು ಸಮಾಜವನ್ನು ನಂಬಿಸುತ್ತವೆ. ಅತಿಶ್ರೀಮಂತರು ಈ ಮಾಧ್ಯಮಗಳನ್ನು ತಮ್ಮ ಮಡಿಲಲ್ಲಿ ಪೋಷಿಸುವುದು ಇದೇ ಕಾರಣಕ್ಕಾಗಿ. ಜನರು ಈ ರೀತಿ ಕ್ರಿಕೆಟ್ ಮ್ಯಾಚ್, ಲವ್ ಜಿಹಾದ್, ಹಲಾಲ್, ಹಿಜಾಬ್, ಸಿನೆಮಾ ತಾರೆಯರು, ಸನ್ನಿ ಡಿಯೋಲ್ನ ಬಂಗಲೆ, ಕಾಜೋಲ್ ಹೇಳಿಕೆ, ಸೀಮಾ ಹೈದರ್ ಪ್ರೇಮಕಥೆ ಇತ್ಯಾದಿಗಳನ್ನು ಚರ್ಚಿಸುವುದರಲ್ಲೇ ಮಗ್ನರಾಗಿರುವ ತನಕ ತಮ್ಮೆಲ್ಲಾ ದುಷ್ಟ ಯೋಜನೆಗಳನ್ನು ಸುಗಮವಾಗಿ ಅನುಷ್ಠಾನಿಸಲು ಅತಿ ಶ್ರೀಮಂತರಿಗೆ ಸಾಧ್ಯವಾಗುತ್ತದೆ. ಅತಿಶ್ರೀಮಂತರ ಮತ್ತು ಅವರನ್ನು ರಕ್ಷಿಸುವ ವ್ಯವಸ್ಥೆಯ ಮಡಿಲಲ್ಲಿ ಸುಖ ಕಾಣಲಾರಂಭಿಸುವ ಮಾಧ್ಯಮಗಳು ಪ್ರಥಮವಾಗಿ ಸಾಕ್ಷಾತ್ ಮಾಧ್ಯಮ ಹಿತಾಸಕ್ತಿಗಳನ್ನು ಮತ್ತು ಮಾಧ್ಯಮಗಳಿಗೆ ಸಂಬಂಧಿಸಿದ ಎಲ್ಲ ಮೌಲ್ಯಗಳನ್ನು ತಮ್ಮ ಮಾಲಕರಿಗೆ ಬಲಿಯರ್ಪಿಸಿ ಬಿಡುತ್ತವೆ. ಅವು ಅಪ್ಪಿತಪ್ಪಿ ಕೂಡ ಸ್ವತಃ ತಮ್ಮ ಸ್ವಾತಂತ್ರ್ಯದ ಬಗ್ಗೆ ಮಾತನಾಡುವುದಿಲ್ಲವೆಂದ ಮೇಲೆ ಜನತೆಯ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತವೆಂದು ನಿರೀಕ್ಷಿಸುವುದಕ್ಕೆ ಅವಕಾಶವೇ ಎಲ್ಲಿದೆ?
ಒಂದು ವೇಳೆ ಮಾಧ್ಯಮಗಳು ಸಂಪೂರ್ಣ ಸ್ವತಂತ್ರವಾಗಿದ್ದರೂ ಎಲ್ಲ ಸಮಸ್ಯೆಗಳ ಪರಿಹಾರ ಅವುಗಳ ಕೈಯಲ್ಲಿ ಇಲ್ಲವೆಂಬುದು ನಿಜ. ಆದರೆ ಮಾಧ್ಯಮಗಳು ಸ್ವಸ್ಥವಾಗಿದ್ದರೆ, ಸಮಾಜದಲ್ಲಿನ ಅಸ್ವಾಸ್ಥ್ಯಗಳನ್ನು ಗುರುತಿಸುವುದು, ಪ್ರಸ್ತಾಪಿಸುವುದು, ವಿವರಿಸುವುದು, ಚರ್ಚಿಸುವುದು, ಅವುಗಳನ್ನು ಸಮಾಜದ ಗಮನಕ್ಕೆ ತರುವುದು, ಪರಿಹಾರಗಳ ಕುರಿತು ಗಮನ ಸೆಳೆಯುವುದು, ಸರಕಾರೀ ಧೋರಣೆಗಳನ್ನು ವಿಮರ್ಶಿಸುವುದು, ತಿದ್ದಲು ಯತ್ನಿಸುವುದು - ಇವೇ ಮುಂತಾದ ಹಲವು ಪರಿಣಾಮಕಾರಿ ಕಾರ್ಯಗಳನ್ನು ಮಾಡಲು ಅವುಗಳಿಗೆ ಸಾಧ್ಯವಿದೆ. ಇಂದು ನಮ್ಮ ದೇಶದಲ್ಲಿ ಉಳಿದುಕೊಂಡಿರುವ ಕೆಲವೇ ಸ್ವತಂತ್ರ ಮಾಧ್ಯಮಗಳು ಆ ಕೆಲಸವನ್ನು ಮಾಡುತ್ತಿವೆ ಮತ್ತು ಅದಕ್ಕಾಗಿ ಸಾಕಷ್ಟು ಬೆಲೆಯನ್ನೂ ತೆರುತ್ತಿವೆ. ಅದೇ ವೇಳೆ, ಮಡಿಲ ಮಾಧ್ಯಮಗಳ ವಿಶ್ವಾಸಾರ್ಹತೆ ತೀವ್ರವಾಗಿ ಕುಸಿದಿದೆ. ಅವು ಜನರ ಮಧ್ಯೆ ತಮಗಿದ್ದ ಗೌರವವನ್ನು ಬಹುಮಟ್ಟಿಗೆ ಕಳೆದುಕೊಂಡಿವೆ. ಸಂವಿಧಾನವನ್ನು ಮೂಲೆಗೆ ತಳ್ಳಿ ಮನುಸ್ಮತಿಯನ್ನು ದೇಶದ ಮೇಲೆ ಹೇರುವ ಪ್ರಯತ್ನಗಳು, ದಿನಗಳೆದಂತೆ ಬಲಿಷ್ಠವಾಗುತ್ತಿರುವ ಪೌರೋಹಿತ್ಯ, ವ್ಯಾಪಿಸುತ್ತಿರುವ ದ್ವೇಷಭಾಷಣದ ಸಂಸ್ಕೃತಿ, ಗುಂಪು ಹತ್ಯೆ, ಸಾಮೂಹಿಕ ಹತ್ಯಾಕಾಂಡ, ಸಾಮೂಹಿಕ ಅತ್ಯಾಚಾರ, ಸಂಘಟಿತ ಹಲ್ಲೆ, ಅಪಮಾನ, ಬಡವರ ವಿರುದ್ಧ ಬುಲ್ಡೋಜರ್ ಪರಾಕ್ರಮ, ಸಾರ್ವಜನಿಕ ಸಂಪತ್ತು ಮತ್ತು ಸಂಪನ್ಮೂಲಗಳ ಮೇಲೆ ಸ್ಥಾಪಿತವಾಗುತ್ತಿರುವ ಅತಿಶ್ರೀಮಂತರ ಖಾಸಗಿ ಸ್ವಾಮ್ಯ, ಪ್ರಜಾಭುತ್ವವನ್ನೇ ಏಣಿಯಾಗಿ ಬಳಸಿ ಸರ್ವಾಧಿಕಾರಿ ನಿರಂಕುಶ ವ್ಯವಸ್ಥೆಯನ್ನು ತರುವ ಕಸರತ್ತುಗಳು, ನ್ಯಾಯಾಂಗವನ್ನು ಬಲಿಷ್ಠರ ಹಿತಾಸಕ್ತಿಗಳಿಗೆ ವಿಧೇಯವಾಗಿಸುವ ಸಂಚುಗಳು, ಎಳೆಯ ಮನಸ್ಸುಗಳಲ್ಲಿ ವಿಷ ತುಂಬಲಿಕ್ಕಾಗಿ ಪಠ್ಯಪುಸ್ತಕಗಳನ್ನು ಬಳಸುವ ಹುನ್ನಾರ, ಸಂಸ್ಕೃತಿಯ ಹೆಸರಲ್ಲಿ ಗೊಡ್ಡು ಸಂಪ್ರದಾಯಗಳನ್ನು ವೈಭವೀಕರಿಸುವ ಶ್ರಮ ಹೀಗೆ ಅತ್ಯಂತ ಘೋರ ಹಾಗೂ ಬೀಭತ್ಸ ಬೆಳವಣಿಗೆಗಳು ನಮ್ಮ ಸಮಾಜದಲ್ಲಿ ಎದ್ದುಕಾಣುತ್ತಿವೆ. ಆದರೆ ಇವಾವುದನ್ನೂ ಮಾಧ್ಯಮಗಳು ಗಣ್ಯ ರೀತಿಯಲ್ಲಿ ಪ್ರಸ್ತಾಪಿಸುತ್ತಿಲ್ಲ ಮತ್ತು ಸಮಾಜ ಕೂಡ ಆ ಕುರಿತು ದೊಡ್ಡ ಪ್ರಮಾಣದಲ್ಲಿ, ಸತತವಾಗಿ ಚರ್ಚಿಸಲು ತಯಾರಿಲ್ಲ ಎಂದಾದರೆ ಈ ಎಲ್ಲ ಅನಿಷ್ಟಗಳನ್ನು ಸ್ವಾಗತಿಸುವುದಕ್ಕೆ ಸಮಾಜವು ಸಜ್ಜಾಗಿದೆ ಎಂದೇ ಅರ್ಥ. ಇಂತಹ ಕಳವಳಕಾರಿ ವಾತಾವರಣ ಎಲ್ಲೂ ತನ್ನಿಂತಾನೇ ನಿರ್ಮಾಣವಾಗುವುದಿಲ್ಲ. ಅದನ್ನು ಕೆಲವರು ಬಹಳ ಯೋಜನಾಬದ್ಧವಾಗಿ ನಿರ್ಮಿಸಿರುತ್ತಾರೆ. ಇಂತಹ ಶಕ್ತಿಗಳನ್ನು ಸೋಲಿಸಿ ಹಿಮ್ಮೆಟ್ಟಿಸಬೇಕಿದ್ದರೆ, ಸಮಾಜದಲ್ಲಿನ ಪ್ರಜ್ಞಾವಂತರು ಬಹಳ ನಿರ್ಣಾಯಕ ಪಾತ್ರ ವಹಿಸಬೇಕಾಗುತ್ತದೆ. ಅವರು ಕನಿಷ್ಠ ತಮ್ಮದೇ ದೂರಗಾಮಿ ಸಾಮೂಹಿಕ ಹಿತಾಸಕ್ತಿಗಳ ರಕ್ಷಣೆಗಾಗಿ, ಸ್ವತಃ ಸಕ್ರಿಯರಾಗಬೇಕಾಗಿದೆ.ಮಡಿಲ ಮಾಧ್ಯಮಗಳ ಪಾತ್ರವನ್ನು ಮೊಟಕುಗೊಳಿಸಿ ಸ್ವತಂತ್ರ ಮಾಧ್ಯಮಗಳ ಬೆಂಬಲಕ್ಕೆ ನಿಲ್ಲಬೇಕಾಗಿದೆ. ಭಾರತದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮದ ರಂಗದಲ್ಲೂ ಅನೇಕಾರು ಹೊಣೆಯರಿತ, ಸಂವೇದನಾಶೀಲ ಸಂಸ್ಥೆಗಳು ಅರಳಿದ್ದು ಅವುಗಳ ಪಾತ್ರವನ್ನು ಗುರುತಿಸಿ ಸೂಕ್ತ ಪ್ರೋತ್ಸಾಹ ಒದಗಿಸಬೇಕಾಗಿದೆ.
‘ವಾರ್ತಾಭಾರತಿ’ಯ ಪ್ರಯಾಣದುದ್ದಕ್ಕೂ ನಮ್ಮ ಜೊತೆಗೆ ನಿಂತು ನಮಗೆ ಶಕ್ತಿ ತುಂಬಿದ ತಮ್ಮೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು.
ಅಬ್ದುಸ್ಸಲಾಮ್ ಪುತ್ತಿಗೆ, ಪ್ರಧಾನ ಸಂಪಾದಕ
‘ವಾರ್ತಾಭಾರತಿ’ ಬಳಗದ ಪರವಾಗಿ