ವಿವಿ ಪ್ಯಾಟ್ ರಶೀದಿ ಎಣಿಕೆ: ಬೆಕ್ಕಿಗೆ ಗಂಟೆ ಕಟ್ಟುವವರಾರು?
Photo: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ಮದುವೆ ದಿನಾಂಕ ಘೋಷಣೆಯಾದ ಬಳಿಕ ಮದುಮಗನ ಚಾರಿತ್ರ್ಯದ ಬಗ್ಗೆ ವಿಚಾರಣೆ ನಡೆಸಿದಂತೆ’ ಮೊದಲ ಹಂತದ ಚುನಾವಣೆಗೆ ದೇಶ ಸಜ್ಜಾಗಿರುವ ಸಂದರ್ಭದಲ್ಲಿ, ಅತ್ತ ಇವಿಎಂ ವಿಶ್ವಾಸಾರ್ಹತೆ ನ್ಯಾಯಾಲಯದ ಕಟಕಟೆಯಲ್ಲಿ ನಿಂತಿದೆ. ಇವಿಎಂನಲ್ಲಿ ಚಲಾಯಿಸಿದ ಮತಗಳನ್ನು ವಿವಿಪ್ಯಾಟ್ಗಳ ಮೂಲಕ ದೊರೆಯುವ ಪೇಪರ್ ಸ್ಲಿಪ್ಗಳ ಜೊತೆಗೆ ತಾಳೆ ಮಾಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ. ವಿವಿ ಪ್ಯಾಟ್ಗಳನ್ನು ತಿರುಚಲಾಗುತ್ತಿದೆ ಎನ್ನುವ ಆರೋಪಗಳನ್ನು ಹಲವು ಪಕ್ಷಗಳು ಹಲವು ವರ್ಷಗಳಿಂದ ಮಾಡುತ್ತಾ ಬಂದಿವೆಯಾದರೂ, ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಚುನಾವಣಾ ಆಯೋಗ ಈವರೆಗೆ ಸಂಪೂರ್ಣ ವಿಫಲವಾಗಿದೆ. ಎಲ್ಲ ಆರೋಪಗಳನ್ನೂ ಚುನಾವಣಾ ಆಯೋಗ ಸಾರಾಸಗಟಾಗಿ ತಿರಸ್ಕರಿಸುತ್ತಾ ಬಂದಿದ್ದು, ‘ಇವಿಎಂನಲ್ಲಿ ಅಕ್ರಮ ಸಾಧ್ಯವೇ ಇಲ್ಲ. ಇವಿಎಂ ವಿರುದ್ಧ ಆರೋಪ ಮಾಡುವ ಮೂಲಕ ದೇಶದ ಪ್ರಜಾಸತ್ತೆಯನ್ನು ಬುಡಮೇಲು ಗೊಳಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ವಿರೋಧ ಪಕ್ಷಗಳ ಬಾಯಿ ಮುಚ್ಚಿಸುತ್ತಾ ಬಂದಿದೆ. ಇದೇ ಸಂದರ್ಭದಲ್ಲಿ ‘‘ನಾವು ಇವಿಎಂನ್ನು ಸಂಪೂರ್ಣವಾಗಿ ಬದಲಾಯಿಸಬೇಕು ಎಂದು ಹೇಳುತ್ತಿಲ್ಲ. ಬದಲಿಗೆ, ನೂರು ಶೇಕಡ ವಿವಿ ಪ್ಯಾಟ್ ಸ್ಲಿಪ್ಗಳ ಅಳವಡಿಕೆ ಮಾಡಿ ಅದನ್ನು ತಾಳೆ ನೋಡುವಂತಾಗಬೇಕು’’ ಎಂದು ವಿರೋಧ ಪಕ್ಷಗಳು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದವು. ಇದಕ್ಕೂ ಆಯೋಗ ಕಿವುಡಾಗುತ್ತಾ ಬಂದಿದೆ. ಇದೀಗ ವಿವಿ ಪ್ಯಾಟ್ ಎಣಿಕೆ ವಿಚಾರಣೆ ನ್ಯಾಯಾಲಯದ ಮೆಟ್ಟಿಲನ್ನೇರಿದೆ.
ಭಾರತದಂತಹ ಬಹುದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವುದು ಶ್ಲಾಘನೀಯವೇ ಆಗಿದೆ. ಚುನಾವಣೆಯನ್ನು ಅತ್ಯಂತ ಪಾರದರ್ಶಕವಾಗಿ, ಯಶಸ್ವಿಯಾಗಿ ನಡೆಸಲು ತಂತ್ರಜ್ಞಾನ ನೆರವಾಗುತ್ತದೆಯಾದರೆ ಅದನ್ನು ಬಳಸುವಲ್ಲಿ ನಾವು ಹಿಂಜರಿಯ ಬಾರದು. ಆದರೆ ಯಾವಾಗ ಬಳಸುತ್ತಿರುವ ತಂತ್ರಜ್ಞಾನವೇ ಪ್ರಶ್ನೆಗೊಳಾಗಾಗುತ್ತದೆಯೋ ಆಗ ಅದನ್ನು ಪುನರ್ ಪರಿಶೀಲಿಸುವುದು ಪ್ರಜಾಸತ್ತೆಯ ಅಳಿವು ಉಳಿವಿನ ದೃಷ್ಟಿಯಿಂದ ಅನಿವಾರ್ಯವಾಗಿದೆ. ಈ ಹಿಂದೆ ಮತ ಪತ್ರಗಳ ಮೂಲಕ ಚುನಾವಣಾ ಪ್ರಕ್ರಿಯೆ ಸುದೀರ್ಘ ಸಮಯವನ್ನು ತೆಗೆದುಕೊಳ್ಳುತ್ತಿತ್ತು. ಆದರೆ ಇಂದು ಇವಿಎಂನಿಂದಾಗಿ ಶೀಘ್ರದಲ್ಲಿ ಚುನಾವಣೆಯನ್ನು ಮುಗಿಸಲು ಸಾಧ್ಯವಾಗುತ್ತಿದೆ ಎನ್ನುವುದು ಆಯೋಗದ ವಾದ. ಪ್ರಜಾಸತ್ತೆಯ ಯಶಸ್ಸು ಚುನಾವಣೆಯನ್ನು ಎಷ್ಟು ಬೇಗ ಮುಗಿಸಲಾಯಿತು ಎನ್ನುವುದರ ಆಧಾರದಲ್ಲಿ ನಿರ್ಧಾರವಾಗುವುದಿಲ್ಲ. ಯಾವುದೇ ಅಕ್ರಮಗಳಿಲ್ಲದೆ ಚುನಾವಣೆ ನಡೆದು ಫಲಿತಾಂಶ ಹೊರಬಿದ್ದಾಗ ಮಾತ್ರ ಅದು ಪ್ರಜಾಸತ್ತೆಯ ಗೆಲುವಾಗುತ್ತದೆ. ಆಯೋಗವು ಮತದಾನಕ್ಕೆ ಬಳಸುವ ಮತಯಂತ್ರವನ್ನು ತಿರುಚಬಹುದು ಎಂದು ವಿರೋಧ ಪಕ್ಷಗಳು ದೊಡ್ಡ ಧ್ವನಿಯಲ್ಲಿ ಆರೋಪಿಸುತ್ತಿರುವಾಗ, ಆ ಅನುಮಾನಗಳನ್ನು, ಶಂಕೆಗಳನ್ನು ನಿವಾರಿಸಿದ ಬಳಿಕವೇ ಚುನಾವಣೆಗೆ ಆಯೋಗ ಸಿದ್ಧತೆಯನ್ನು ನಡೆಸಬೇಕು. ಮದುವೆ ಗಂಡಿನ ಚಾರಿತ್ರ್ಯವೇ ಪ್ರಶ್ನಾರ್ಹವಾಗಿರುವಾಗ, ಬಲವಂತದಿಂದ, ಆತುರಾತುರವಾಗಿ ಆತನನ್ನು ವಧುವಿನ ಕೊರಳಿಗೆ ಕಟ್ಟಲು ಮುಂದಾಗುವುದು ಅನುಮಾನಕ್ಕೆ ಕಾರಣವಾಗುತ್ತದೆ. ಮತಯಂತ್ರದ ಬಗ್ಗೆ ಇರುವ ಅನುಮಾನಗಳನ್ನು
ನಿವಾರಿಸಲು ಚುನಾವಣಾ ಆಯೋಗಕ್ಕೆ ಬಹಳಷ್ಟು ಸಮಯವಿತ್ತು. ವಿರೋಧ ಪಕ್ಷಗಳ ಜೊತೆಗೆ ಆಯೋಗ ಮುಕ್ತ ಮಾತುಕತೆ ನಡೆಸಿ ಅವರಿಗೆ ತೃಪ್ತಿಕರ ಉತ್ತರಗಳನ್ನು ನೀಡುವುದು ಚುನಾವಣಾ ಆಯೋಗದ ಕರ್ತವ್ಯವಾಗಿತ್ತು. ಆದರೆ, ಇಲ್ಲಿನ ದುರಂತವೆಂದರೆ, ಇವಿಎಂನ ಬಗ್ಗೆ ಮಾತ್ರವಲ್ಲ, ಚುನಾವಣಾ ಆಯೋಗದ ಬಗ್ಗೆಯೇ ವಿರೋಧ
ಪಕ್ಷಗಳಿಗೆ ಅಸಮಾಧಾನಗಳಿವೆ. ಚುನಾವಣಾ ಆಯೋಗವು ಬಿಜೆಪಿ ನೇತೃತ್ವದ ಸರಕಾರ ಹೇಳಿದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಈಗಾಗಲೇ ವಿಪಕ್ಷ ನಾಯಕರು ಮಾಧ್ಯಮಗಳಲ್ಲಿ ಆರೋಪಿಸಿದ್ದಾರೆ. ತನ್ನ ಮೇಲಿರುವ ಎಲ್ಲ ಆರೋಪಗಳಿಂದ ಮುಕ್ತವಾಗದೆ ಚುನಾವಣಾ ಆಯೋಗ ನಡೆಸುವ ಯಾವುದೇ ಚುನಾವಣೆ ಪ್ರಶ್ನೆಗೊಳಗಾಗುವುದು ಸಹಜ.
‘ತಂತ್ರಜ್ಞಾನದಿಂದ ವಿಮುಖರಾಗುವುದು ಮೂರ್ಖತನ’ ಎನ್ನುವ ಅಭಿಪ್ರಾಯವನ್ನು ಹಲವರು ಮಂಡಿಸಿ ಇವಿಎಂನ್ನು ಸಮರ್ಥಿಸುತ್ತಿದ್ದಾರೆ. ಆದರೆ ವಿರೋಧ ಪಕ್ಷಗಳು ಇವಿಎಂನ್ನು ಸಂಪೂರ್ಣವಾಗಿ ಬದಲಾಯಿಸಬೇಕು ಎಂದು ಒತ್ತಾಯಿಸುತ್ತಿಲ್ಲ. ಬದಲಿಗೆ ಇವಿಎಂ ಜೊತೆಗೇ ಕೆಲವು ಬೇಡಿಕೆಗಳನ್ನು ಇಟ್ಟಿವೆ. ಅದರಲ್ಲಿ ಮುಖ್ಯವಾದುದು ನೂರು ಶೇಕಡ ವಿವಿ ಪ್ಯಾಟ್ ಯಂತ್ರದ ಸ್ಲಿಪ್ಗಳ ಎಣಿಕೆ. ತಾನು ಪ್ರಾಮಾಣಿಕನೇ ಆಗಿದ್ದಿದ್ದರೆ, ವಿರೋಧ ಪಕ್ಷಗಳ ಈ ಬೇಡಿಕೆಯನ್ನು ಮಾನ್ಯ ಮಾಡುವುದು ಆಯೋಗಕ್ಕೆ ಕಷ್ಟವಾಗುತ್ತಿರಲಿಲ್ಲ. ಇವಿಎಂನ್ನು ತಿರುಚುವುದು ಎಂದರೆ ಪ್ರಜಾಸತ್ತೆಯನ್ನು ದಮನಿಸಿ ಅಕ್ರಮ ದಾರಿಯಲ್ಲಿ ದೇಶದ ಚುಕ್ಕಾಣಿಯನ್ನು ಕೈಗೆತ್ತಿಕೊಳ್ಳುವುದು ಎಂದರ್ಥ.
ನಡೆಯುವ ಚುನಾವಣೆಯ ಬಗ್ಗೆ ಬಹುಸಂಖ್ಯಾತ ನಾಯಕರು ಅನುಮಾನ ವ್ಯಕ್ತಪಡಿಸುತ್ತಿರುವಾಗ, ಅದನ್ನು ನಿರ್ಲಕ್ಷಿಸಿ ಚುನಾವಣೆ ನಡೆಸುವುದೆಂದರೆ ಪ್ರಜಾಸತ್ತೆಯನ್ನು ಬುಡಮೇಲುಗೊಳಿಸಿ ಆಯೋಗದೊಳಗಿರುವ ಅಧಿಕಾರಿಗಳು ತಮಗೆ ಬೇಕಾದವರನ್ನು ಅಧಿಕಾರಕ್ಕೇರಿಸುವುದೆಂದೇ ಅರ್ಥ. ವಿಶ್ವಾಸಾರ್ಹತೆಯಿಲ್ಲದ ಮತಯಂತ್ರದಿಂದ ಆಯ್ಕೆಯಾದ ಸರಕಾರದ ಮೇಲೆ ಜನಸಾಮಾನ್ಯರು ವಿಶ್ವಾಸವನ್ನು ಹೊಂದಲು ಹೇಗೆ ಸಾಧ್ಯ? ಇದು ಅಂತಿಮವಾಗಿ ಅರಾಜಕತೆಗೆ ಕಾರಣವಾಗಬಹುದು. ಆದುದರಿಂದ, ಮತಯಂತ್ರವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲದೇ ಇದ್ದರೂ ನೂರು ಶೇಕಡ ವಿವಿಪ್ಯಾಟ್ ಬೇಡಿಕೆಯನ್ನು ಈಡೇರಿಸುವುದು ಪ್ರಜಾಸತ್ತೆಯ ಉಳಿವಿನ ದೃಷ್ಟಿಯಿಂದ ಅತ್ಯಗತ್ಯವಾಗಿದೆ.
ಯುದ್ಧ ಘೋಷಣೆಯಾದ ಬಳಿಕ, ಹತ್ಯಾರುಗಳ ಹರಿತದ ಬಗ್ಗೆ ವಿಚಾರಣೆ ನಡೆಸುವಂತೆಯೇ ಸುಪ್ರೀಂಕೋರ್ಟ್ ವಿವಿ ಪ್ಯಾಟ್ ಅಳವಡಿಕೆಯ ಬಗ್ಗೆ ವಿಚಾರಣೆ ನಡೆಸುತ್ತಿದೆ. ವಿವಿಪ್ಯಾಟ್ ಎಣಿಕೆಯ ಆಗ್ರಹದ ಬಗ್ಗೆ ಮೌಖಿಕವಾಗಿ ಸುಪ್ರೀಂಕೋರ್ಟ್ ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದೆ. ಚುನಾವಣಾ ಆಯೋಗ ಚುನಾವಣಾ ವ್ಯವಸ್ಥೆಯನ್ನು ಕೆಡಿಸಲು ನಡೆಸುತ್ತಿರುವ ಪ್ರಯತ್ನಗಳಿಗೆ ಕುರುಡಾಗಿರುವ ಸುಪ್ರೀಂಕೋರ್ಟಿಗೆ ವಿವಿಪ್ಯಾಟ್ ಎಣಿಕೆ ಆಗ್ರಹವೇ ಚುನಾವಣಾ ವ್ಯವಸ್ಥೆಯನ್ನು ಕೆಡಿಸಲು ನಡೆಸುತ್ತಿರುವ ಪ್ರಯತ್ನವಾಗಿ ಕಂಡಿದೆ. ‘ನಾವು ಯಾರನ್ನಾದರೂ ನಂಬಲೇ ಬೇಕು. ಮತಪತ್ರಗಳ ಮೂಲಕ ಚುನಾವಣೆಗಳು ನಡೆಯುತ್ತಿದ್ದಾಗ ಏನು ನಡೆಯುತ್ತಿತ್ತು ಎನ್ನುವುದು ನಮಗೆಲ್ಲರಿಗೂ ಗೊತ್ತಿದೆ....ಯಂತ್ರಗಳು ಸಾಮಾನ್ಯವಾಗಿ ಮಾನವ ಹಸ್ತಕ್ಷೇಪವಿಲ್ಲದೆ ನಿಖರವಾದ ಫಲಿತಾಂಶಗಳನ್ನು ನೀಡುತ್ತವೆ’’ ಎಂದು ನ್ಯಾಯಾಲಯ ಮೌಖಿಕವಾಗಿ ಹೇಳಿದೆ. ಬೇರೆ ಉಪಾಯವಿಲ್ಲ ಎನ್ನುವ ಕಾರಣಕ್ಕಾಗಿ ನಾವು ಇವಿಎಂನ್ನು ನಂಬಬೇಕೆ? ಎನ್ನುವ ಪ್ರಶ್ನೆ ಈಗ ಎದುರಾಗುತ್ತದೆ. ಮತಪತ್ರಗಳ ಕಾಲದಲ್ಲಿ ಅಕ್ರಮಗಳು ನಡೆಯುತ್ತಿತ್ತು ಎನ್ನುವ ಕಾರಣಕ್ಕಾಗಿ, ಇವಿಎಂ ಹೆಸರಿನಲ್ಲಿ ನಡೆಯುವ ಅಕ್ರಮಗಳನ್ನು ಸಹಿಸಿಕೊಳ್ಳಬೇಕು ಅಥವಾ ಇದನ್ನು ಪ್ರಶ್ನಿಸಬಾರದು ಎಂದು ಸುಪ್ರೀಂಕೋರ್ಟ್ ಬಯಸುವುದು ಯಾವ ರೀತಿಯ ನ್ಯಾಯ?. ಮೊದಲ ಹಂತದ ಚುನಾವಣೆ ಶುಕ್ರವಾರ ದೇಶಾದ್ಯಂತ ನಡೆಯುತ್ತಿರುವಾಗ, ಸುಪ್ರೀಂಕೋರ್ಟ್ ವಿವಿಪ್ಯಾಟ್ ಕುರಿತ ತೀರ್ಪನ್ನು ಕಾದಿರಿಸಿದೆ. ಅಂದರೆ ಸುಪ್ರೀಂಕೋರ್ಟ್ ತೀರ್ಪು ಈ ಬಾರಿಯ ಚುನಾವಣೆಯಲ್ಲಿ ಯಾವ ರೀತಿಯಲ್ಲೂ ತನ್ನ ಪರಿಣಾಮವನ್ನು ಬೀರುವುದಿಲ್ಲ ಎಂದಾಯಿತು. ಈ ದೇಶದ ಪ್ರಜಾಸತ್ತೆಯ ಕುರಿತಂತೆ ಸುಪ್ರೀಂಕೋರ್ಟ್ ಕೂಡ ಇಷ್ಟು ಹಗುರ ತೀರ್ಮಾನಕ್ಕೆ ಬಂದರೆ, ಜನರ ಅಪನಂಬಿಕೆಗಳನ್ನು ನಿವಾರಿಸುವವರು ಯಾರು? ‘ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ಕಾಪಾಡಿ’ ಎಂದು ಚುನಾವಣಾ ಆಯೋಗಕ್ಕೆ ಕಿವಿ ಮಾತು ಹೇಳುವುದರಿಂದ ಪ್ರಜಾಸತ್ತೆಗೆ ನ್ಯಾಯಕೊಡಲು ಸಾಧ್ಯವಿಲ್ಲ. ಯಾಕೆಂದರೆ ಜನರು ಚುನಾವಣಾ ಆಯೋಗ ಮತ್ತು
ಇವಿಎಂ ಎರಡರ ಬಗ್ಗೆಯೂ ಶಂಕೆಯನ್ನು ಹೊಂದಿದ್ದಾರೆ. ಆದುದರಿಂದ, ಇವಿಎಂ ಎನ್ನುವ ಬೆಕ್ಕಿಗೆ ಗಂಟೆ ಕಟ್ಟುವ ಹೊಣೆಗಾರಿಕೆಯನ್ನು ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗಿದೆ.