ವ್ಯರ್ಥ ಕಾಲಹರಣ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪ್ರಜಾಪ್ರಭುತ್ವದಲ್ಲಿ ಸಂಸತ್ತು ಮತ್ತು ರಾಜ್ಯಗಳ ಶಾಸನ ಸಭೆಗಳ ಇತ್ತೀಚಿನ ಕಲಾಪಗಳನ್ನು ಗಮನಿಸಿದರೆ ಸ್ವತಂತ್ರ ಭಾರತದಲ್ಲಿ ಪ್ರಜಾಪ್ರಭುತ್ವದ ಭವಿಷ್ಯದ ಬಗ್ಗೆ ಆತಂಕ ಉಂಟಾಗುತ್ತದೆ. ಯಾವುದೇ ಸದನದಲ್ಲಿ ಜನಸಾಮಾನ್ಯರ ದೈನಂದಿನ ಬದುಕಿನ ಬಗ್ಗೆ ಚರ್ಚೆಯಾಗುವುದು ಅಪರೂಪವಾಗಿದೆ. ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟಿರುವ ದೇಶದ ಆಡಳಿತ ಪಕ್ಷ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷದ ಸದಸ್ಯರಿಗೆ ಮಾತಾಡಲು ಅವಕಾಶವನ್ನು ನೀಡುತ್ತಿಲ್ಲ. ಹೀಗಾಗಿ ಸಂಸತ್ ಕೋಲಾಹಲದ ತಾಣವಾಗಿ ಬಿಟ್ಟಿದೆ.
ಸಂಘಪರಿವಾರದ ಹಿನ್ನೆಲೆಯಿಂದ ಬಂದ ಲೋಕಸಭೆಯ ಲೋಕಸಭಾ ಸ್ಪೀಕರ್ ಹಾಗೂ ರಾಜ್ಯಸಭೆಯ ಸಭಾಪತಿಗಳು ಆಡಳಿತ ಪಕ್ಷದ ಪರವಾಗಿ ನಿಂತು ಪ್ರತಿಪಕ್ಷ ಸದಸ್ಯರು ಮಾತಾಡುವುದಕ್ಕೆ ಕಡಿವಾಣ ಹಾಕುತ್ತಿದ್ದಾರೆ. ಸ್ಪೀಕರ್ ಸ್ಥಾನವೆಂಬುದು ಪಕ್ಷಾತೀತ ಎಂಬುದನ್ನು ಪರಿಗಣಿಸದೆ ಸದನದಲ್ಲಿ ಕೋಲಾಹಲ ಉಂಟು ಮಾಡಲು ಕಾರಣರಾಗಿದ್ದಾರೆ. ಈ ಬಾರಿ ಸಂಸತ್ತಿನಲ್ಲಿ ಹೊಸದಾಗಿ ಚುನಾಯಿತರಾದ ಸದಸ್ಯರ ಪ್ರಮಾಣ ವಚನದ ಅತ್ಯಂತ ಮಹತ್ವದ ಕಲಾಪವನ್ನು ಬಿಟ್ಟರೆ ಸದನದ ಕಲಾಪ ನಡೆಯಲಿಲ್ಲ. ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಕೂಡ ಇದಕ್ಕಿಂತ ಭಿನ್ನವಾಗುವ ಸಾಧ್ಯತೆಗಳಿಲ್ಲ.
ಲೋಕಸಭೆಯಲ್ಲಿ ಆಡಳಿತ ಪಕ್ಷ ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುತ್ತಿದೆ. ಆಡಳಿತ ಪಕ್ಷವು ಕಾಂಗ್ರೆಸನ್ನು ಪದೇ ಪದೇ ಕೆಣಕಿ ಸದನದ ಕಲಾಪ ನಡೆಯದಂತೆ ಮಾಡುತ್ತಿದೆ. ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸದೇ ಸದನದ ದಾರಿ ತಪ್ಪಿಸುತ್ತಿದೆ. ಇದನ್ನು ದೇಶ ಅಸಹಾಯಕವಾಗಿ ನೋಡುತ್ತಿದೆ. ಸಂಸತ್ತಿನ ಎರಡೂ ಸದನಗಳಲ್ಲಿ ಈ ಬಾರಿ ಹಲವಾರು ಮಹತ್ವದ ವಿಷಯಗಳ ಬಗ್ಗೆ ಕಲಾಪದಲ್ಲಿ ಚರ್ಚೆ ನಡೆಸಬೇಕಾಗಿತ್ತು. ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿಯವರ ಆಪ್ತಮಿತ್ರ ಗೌತಮ್ ಅದಾನಿ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಬೇಕಾಗಿತ್ತು. ಉದ್ಯಮಪತಿಯಾದ ಅದಾನಿ ವಿರುದ್ಧ ಅಮೆರಿಕದಲ್ಲಿ ಆರೋಪ ಪಟ್ಟಿ ದಾಖಲಾಗಿರುವುದು ಹಾಗೂ ಮಣಿಪುರದಲ್ಲಿ ಕಳೆದ ಒಂದು ವರ್ಷದಿಂದ ನಿಯಂತ್ರಿಸಲಾಗದ ಹಿಂಸಾಚಾರ ಹಾಗೂ ಉತ್ತರ ಪ್ರದೇಶದ ಸಂಭಲ್‌ನಲ್ಲಿ ಮಸೀದಿ ಸಮೀಕ್ಷೆಯ ನಂತರ ಪೊಲೀಸರಿಂದ ನಡೆದ ಗೋಲಿಬಾರ್ ಮೊದಲಾದ ಮಹತ್ವದ ವಿಷಯಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಬೇಕಾಗಿತ್ತು. ಆದರೆ ಅದಾನಿಯವರ ಹಗರಣದ ಬಗ್ಗೆ ಚರ್ಚೆ ನಡೆಸಲು ಸರಕಾರ ತಯಾರಿಲ್ಲ. ಈ ಮಹತ್ವದ ವಿಷಯಗಳ ಬಗ್ಗೆ ನಿಲುವಳಿ ಮಂಡಿಸಲು ಕೂಡ ಅವಕಾಶ ನೀಡಲಿಲ್ಲ. ಇದು ಸುಗಮ ಕಲಾಪ ನಡೆಯಲು ಬಹುದೊಡ್ಡ ತಡೆಯಾಯಿತು.
ಮೋದಿಯವರ ನೇತೃತ್ವದ ಬಿಜೆಪಿ ಸರಕಾರಕ್ಕೆ ಅದಾನಿ ಬಗ್ಗೆ ಚರ್ಚೆಯಾಗುವುದು ಬೇಕಾಗಿರಲಿಲ್ಲ. ಒಂದು ವೇಳೆ ಚರ್ಚೆಯಾದರೆ ಸರಕಾರದಲ್ಲಿ ಮಹತ್ವದ ಸ್ಥಾನದಲ್ಲಿ ಇರುವ ಪ್ರಮುಖ ವ್ಯಕ್ತಿಗಳು ಪೇಚಿಗೆ ಸಿಲಕುತ್ತಿದ್ದರು. ಗೌತಮ್ ಅದಾನಿ ಮತ್ತು ಅವರ ಸಹಚರರು ಭಾರತ ಸರಕಾರದ ಉನ್ನತ ಅಧಿಕಾರಿಗಳಿಗೆ 25 ಕೋಟಿ ಡಾಲರ್ ಲಂಚ ನೀಡಿದ್ದಾರೆ ಮತ್ತು ಅಮೆರಿಕದ ಹೂಡಿಕೆದಾರರು ಮತ್ತು ಬ್ಯಾಂಕ್‌ಗಳಿಗೆ ಸುಳ್ಳು ಹೇಳಿದ್ದಾರೆ ಎಂದು ಅಮೆರಿಕದಲ್ಲಿ ದೂರು ದಾಖಲಿಸಲಾಗಿದೆ.
ಹಲವಾರು ಮಹತ್ವದ ಕ್ಷೇತ್ರದಲ್ಲಿ ಬಂಡವಾಳ ಹೂಡಿರುವ ಅದಾನಿ ಉದ್ಯಮ ಸಮೂಹವು ಭಾರತದ ಪ್ರಮುಖ ಉದ್ಯಮ ಸಂಸ್ಥೆಗಳಲ್ಲಿ ಒಂದಾಗಿದೆ. ಭಾರತದಲ್ಲಿ ತಮ್ಮ ಕೆಲಸಗಳನ್ನು ಈಡೇರಿಸಲು ಭಾರೀ ಪ್ರಮಾಣದ ಲಂಚ ನೀಡಲಾಗಿದೆ ಎಂಬುದು ಗಂಭೀರ ಆರೋಪವಾಗಿದೆ. ಇದರಲ್ಲಿ ಭಾರತದ ಹಿತಾಸಕ್ತಿಯೂ ಅಡಕವಾಗಿರುವುದರಿಂದಾಗಿ ಭಾರತದ ಸಾರ್ವಜನಿಕರಿಗೆ ಸಹಜವಾಗಿ ಆಸಕ್ತಿ ಇದೆ.
ಭಾರತದ ಶೇರು ಪೇಟೆಯ ನಿಯಂತ್ರಣ ಮಂಡಳಿಯ ( ಸೆಬಿ) ಮತ್ತು ಅದರ ಅಧ್ಯಕ್ಷರ ನಡೆ ಸಂಶಯಾಸ್ಪದವಾಗಿದೆ. ಈ ಎಲ್ಲಾ ಅಂಶಗಳು ಸಂಸತ್ತಿನಲ್ಲಿ ಚರ್ಚೆಯಾಗುವುದು ಮಾತ್ರವಲ್ಲ, ವಿಶ್ವಾಸಾರ್ಹ ತನಿಖೆ ನಡೆಯುವುದು ಅಗತ್ಯವಾಗಿದೆ.
ಅದಾನಿ ಹಗರಣ ಮಾತ್ರವಲ್ಲ ಮಣಿಪುರದಲ್ಲಿ ನಿಯಂತ್ರಿಸಲಾಗದ ಹಿಂಸಾಚಾರ ಹಾಗೂ ಹತ್ಯೆಗಳ ಪರಿಣಾಮವಾಗಿ ಅಲ್ಲಿ ಅರಾಜಕತೆ ಉಂಟಾಗಿದೆ. ಇಂಥ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾದರೂ ಪ್ರಧಾನಿ ನರೇಂದ್ರ ಮೋದಿಯವರು ಯಾಕೆ ಮಣಿಪುರಕ್ಕೆ ಭೇಟಿ ನೀಡಲಿಲ್ಲ ಎಂಬುದರ ಬಗೆಗೂ ಸಂಸತ್ ಕಲಾಪದಲ್ಲಿ ಚರ್ಚೆಗೆ ಅವಕಾಶ ನೀಡಬೇಕಾಗಿತ್ತು. ಹಾಗೂ ಉತ್ತರ ಪ್ರದೇಶದ ಸಂಭಲ್‌ನಲ್ಲಿ ನಡೆದ ಗೋಲಿಬಾರ್ ಕುರಿತು ಚರ್ಚೆಗೆ ಸರಕಾರ ಅವಕಾಶ ನೀಡಬೇಕಾಗಿತ್ತು. 1991ರ ಧಾರ್ಮಿಕ ಸ್ಥಳಗಳ ಕಾಯ್ದೆ ಹಾಗೂ ಜಿಲ್ಲಾಡಳಿತದ ವೈಫಲ್ಯದ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡದ ಮೋದಿ ಸರಕಾರದ ನಡೆ ಬಗ್ಗೆ ಸಹಜವಾಗಿ ಆಕ್ಷೇಪ ವ್ಯಕ್ತವಾಗಿದೆ. ಇಂಥ ಮಹತ್ವದ ವಿಷಯಗಳು ಚರ್ಚೆಯಾದರೆ ಕೇಂದ್ರ ಸರಕಾರ ಇಕ್ಕಟ್ಟಿಗೆ ಸಿಲುಕುತ್ತಿತ್ತು. ಹೀಗಾಗಿ ಮೋದಿ ಸರಕಾರ ಚರ್ಚೆಗೆ ಅವಕಾಶ ನೀಡಲಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲದಿಲ್ಲ.
ಸಂಸತ್ ಕಲಾಪ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದು ಸರಕಾರದ ಹೊಣೆಗಾರಿಕೆಯಾಗಿದೆ. ಮೋದಿ ಸರಕಾರವು ಪ್ರಾಮಾಣಿಕವಾಗಿದ್ದರೆ ಸಂಸತ್ತಿನಲ್ಲಿ ಚರ್ಚೆಯಿಂದ ತಪ್ಪಿಸಿಕೊಳ್ಳುವ ಬದಲಾಗಿ ಚರ್ಚೆಯನ್ನು ಸ್ವಾಗತಿಸಬೇಕಾಗಿತ್ತು. ಯಾವುದೇ ಸೂಕ್ಷ್ಮ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗೆ ಸರಕಾರದಿಂದ ಸ್ಪಷ್ಟ ಉತ್ತರ ಬಯಸುವುದು ಸಹಜವಾಗಿದೆ. ಪ್ರತಿಪಕ್ಷಗಳ ಪ್ರಶ್ನೆ ಗಳಿಗೆ ಉತ್ತರ ನೀಡುವುದು ಸರಕಾರದ ಕರ್ತವ್ಯವಾಗಿದೆ. ಆದರೆ ಸರಕಾರ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಿತು. ಸಂಸತ್ತಿನ ಉಭಯ ಸದನಗಳು ಸುಗಮವಾಗಿ ನಡೆಯಲು ಆಡಳಿತ ಹಾಗೂ ಪ್ರತಿಪಕ್ಷಗಳು ಪರಸ್ಪರ ಸಹಕಾರದಿಂದ ನಡೆದುಕೊಳ್ಳಬೇಕಾಗಿದೆ. ಇಲ್ಲವಾದರೆ ಪ್ರಜಾಪ್ರಭುತ್ವದ ಆಶಯಗಳಿಗೆ ಅಪಚಾರ ಮಾಡಿದಂತಾಗುತ್ತದೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ ಕೂಡ ಸುಗಮವಾಗಿ ನಡೆಯಲು ಆಡಳಿತ ಪಕ್ಷ ಸಹಕರಿಸಬೇಕು. ಇದೇ ಸಂದರ್ಭದಲ್ಲಿ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ ಮಹತ್ವದ ಪ್ರಶ್ನೆಗಳನ್ನು ಎತ್ತಿ ವಿರೋಧ ಪಕ್ಷಗಳು ಚರ್ಚಿಸಬೇಕು. ತಮ್ಮ ದ್ವೇಷ ರಾಜಕಾರಣಕ್ಕೆ ಅಧಿವೇಶನದ ಸಮಯವನ್ನು ವಿರೋಧ ಪಕ್ಷಗಳು ಬಲಿ ತೆಗೆದುಕೊಳ್ಳಬಾರದು. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಹಾಗೂ ಜನಸಾಮಾನ್ಯರ ಮೂಲಭೂತ ಅಗತ್ಯಗಳಾಗಿರುವ ಆರೋಗ್ಯ, ಶಿಕ್ಷಣ, ಹದಗೆಟ್ಟ ರಸ್ತೆಗಳ ಕುರಿತು ಸದನದಲ್ಲಿ ಚರ್ಚೆ ನಡೆಯಲಿ. ಆ ಮೂಲಕ ಬೆಳಗಾವಿ ಅಧಿವೇಶ ಒಂದು ಮಾದರಿಯಾಗಿ ಮೂಡಿ ಬರಲಿ.