ವೈದ್ಯರೇ ರೋಗ ಪೀಡಿತರಾದರೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ವೈದ್ಯರಿಗೆ ಭಾರತೀಯ ಪರಂಪರೆಯಲ್ಲಿ ಅತ್ಯುನ್ನತ ಸ್ಥಾನವಿದೆ. ಆಸ್ಪತ್ರೆಗಳು ಬೃಹತ್ ಉದ್ಯಮವಾಗಿ ಪರಿವರ್ತನೆಗೊಂಡಿರುವ ಈ ದಿನಗಳಲ್ಲೂ ವೈದ್ಯರ ವೃತ್ತಿಯನ್ನು ಸೇವೆ ಎಂದೇ ಸಮಾಜ ಪರಿಗಣಿಸುತ್ತದೆ. ವೈದ್ಯನೊಬ್ಬ ಅತ್ಯುತ್ತಮ ವೈದ್ಯನಾಗಿ ಗುರುತಿಸಿಕೊಳ್ಳಲು, ಆತನು ರೋಗಗಳನ್ನು ಗುರುತಿಸುವಲ್ಲಿ ಪರಿಣಿತನಾಗಿದ್ದರಷ್ಟೇ ಸಾಲದು. ಆಳದಲ್ಲಿ ಆತ ಅಂತಃಕರುಣಿಯಾಗಿರಬೇಕು. ಇನ್ನೊಬ್ಬರ ನೋವುಗಳನ್ನು ತನ್ನದಾಗಿಸಿಕೊಳ್ಳುವ, ಅದಕ್ಕೆ ಸ್ಪಂದಿಸುವ ಹೃದಯವಂತಿಕೆಯಿರಬೇಕು. ಸೇವಾಮನೋಭಾವವನ್ನು ಹೊಂದಿರಬೇಕು. ಮಾನವೀಯ ಮೌಲ್ಯಗಳನ್ನು ತನ್ನದಾಗಿಸಿಕೊಂಡಿರಬೇಕು. ವೈದ್ಯನಾಗುವ ಹಂತದಲ್ಲಿ ಆತನಿಗೆ ಈ ಮೌಲ್ಯಗಳನ್ನು ಕಲಿಸಿಕೊಡಲಾಗುತ್ತದೆ. ಅಷ್ಟೇ ಅಲ್ಲ , ಯಾವುದೇ ಭೇದಗಳನ್ನು ಎಣಿಸದೇ ರೋಗಿಯನ್ನು ಚಿಕಿತ್ಸೆ ಮಾಡುವ ಪ್ರತಿಜ್ಞೆಯನ್ನು ವೈದ್ಯರು ಮಾಡಿರುತ್ತಾರೆ. ಈ ಪ್ರತಿಜ್ಞೆಗೆ ಅನುಸಾರವಾಗಿ ಸೇವೆಯನ್ನು ಮಾಡಿದ ಸಾವಿರಾರು ವೈದ್ಯರು ಇತಿಹಾಸದಲ್ಲಿ ದಾಖಲಾಗಿದ್ದಾರೆ. ಯುದ್ಧಭೂಮಿಯಲ್ಲಿ ಗಾಯಾಳುಗಳನ್ನು ಚಿಕಿತ್ಸೆ ಮಾಡುತ್ತಾ ಪ್ರಾಣಾರ್ಪಣೆ ಮಾಡಿದ ವೈದ್ಯರಿದ್ದಾರೆ. ಸಾಂಕ್ರಾಮಿಕ ರೋಗಗಳನ್ನು ಎದುರಿಸುತ್ತಾ ಅದೇ ರೋಗಗಳಿಗೆ ಬಲಿಯಾದ ವೈದ್ಯರಿದ್ದಾರೆ. ಎರಡು ವರ್ಷಗಳ ಹಿಂದೆ ಕೊರೋನ ಕಾಲದಲ್ಲಿ ಪ್ರಾಣವನ್ನು ಒತ್ತೆಯಿಟ್ಟು ಕೆಲಸ ಮಾಡಿದ ನೂರಾರು ವೈದ್ಯರು ಮಾಧ್ಯಮಗಳಲ್ಲಿ ಸುದ್ದಿಯಾದರು. ವೈದ್ಯಕೀಯ ಕ್ಷೇತ್ರ ಅದೆಷ್ಟು ವಾಣಿಜ್ಯೀಕರಣಗೊಂಡಿದ್ದರೂ, ವೈದ್ಯರು ವೃತ್ತಿಯ ಘನತೆಯನ್ನು ಸಂಪೂರ್ಣ ಬಿಟ್ಟುಕೊಟ್ಟಿಲ್ಲ.
ವಿಪರ್ಯಾಸವೆಂದರೆ ಇಂತಹ ಅತ್ಯುನ್ನತ ಮೌಲ್ಯಗಳನ್ನು ಎತ್ತಿ ಹಿಡಿಯುವ ವೈದ್ಯಕೀಯ ವೃತ್ತಿಗೆ ದ್ರೋಹ ಬಗೆಯುವ ಕೆಲಸವನ್ನು ಉಡುಪಿಯ ವೈದ್ಯನೊಬ್ಬ ಮಾಡಿದ್ದಾನೆ. ಬ್ರಹ್ಮಾವರದ ಖಾಸಗಿ ಆಸತ್ರೆಯೊಂದರಲ್ಲಿ ವೈದ್ಯರಾಗಿರುವ, ಲ್ಯಾಪ್ರೋಸ್ಕೋಪಿ ತಜ್ಞ ಡಾ. ಕೀರ್ತನ್ ಉಪಾಧ್ಯ ಎಂಬಾತ, ಸಾಮಾಜಿಕ ಜಾಲತಾಣದಲ್ಲಿ ಒಂದು ನಿರ್ದಿಷ್ಟ ಧರ್ಮೀಯರ ಸಾಮೂಹಿಕ ನಾಶಕ್ಕೆ ಕರೆಕೊಟ್ಟು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾನೆ. ಟ್ವಿಟರ್‌ನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ‘‘ಮುಸ್ಲಿಮ್ ಸಮುದಾಯವನ್ನು ಜಗತ್ತಿನಿಂದ ಇಲ್ಲವಾಗಿಸಲು ಬಯಸುತ್ತೇನೆ’’ ಎಂದು ಆತ ಬರೆದಿದ್ದಾನೆ. ಹೀಗೆ ಟ್ವೀಟ್ ಮಾಡಿದ ಬೆನ್ನಿಗೇ ಅದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕೆಗಳಲ್ಲಿ ಭಾರೀ ಆಘಾತ ವ್ಯಕ್ತವಾಗಿದೆ. ವೈದ್ಯಕೀಯ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ನೀಡಿರುವ ಉಡುಪಿ ಜಿಲ್ಲೆಯಲ್ಲಿ ವೈದ್ಯನೊಬ್ಬ ಇಂತಹದೊಂದು ನೀಚ ಮನಸ್ಥಿತಿಯನ್ನು ಹೊಂದಿರುವುದರ ಬಗ್ಗೆ ರಾಜ್ಯ ಮಟ್ಟದಲ್ಲಿ ಕಳವಳ ವ್ಯಕ್ತವಾಗಿದೆ. ಸ್ವತಃ ವೈದ್ಯ ಸಮೂಹವೇ ಈತನ ಮನಸ್ಥಿತಿಗೆ ತಲೆತಗ್ಗಿಸಿದೆ. ಇಂಡಿಯನ್ ಮೆಡಿಕಲ್ ಅಸೋಸಿಯೇಶನ್‌ನ ರಾಜ್ಯಾಧ್ಯಕ್ಷರು ಈ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ‘‘ಎಂಬಿಬಿಎಸ್ ವೈದ್ಯನೊಬ್ಬ ಸೇವೆಗೆ ಮುನ್ನ ತೆಗೆದುಕೊಂಡ ಪ್ರತಿಜ್ಞೆಯ ಉಲ್ಲಂಘನೆಯಾಗಿದೆ ಇದು. ವೈದ್ಯರ ಪ್ರತಿನಿಧಿಯಾಗಿ ನಾನಿದನ್ನು ಒಪ್ಪಿಕೊಳ್ಳುವುದಿಲ್ಲ ಮಾತ್ರವಲ್ಲ, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ’’ ಎಂದಿದ್ದಾರೆ. ಕೆಲವು ಸಾಮಾಜಿಕ ಸಂಘಟನೆಗಳು ಜೊತೆಯಾಗಿ ಈತನ ವಿರುದ್ಧ ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿವೆ. ಹಲವು ಗಣ್ಯ ವೈದ್ಯರು ಈತನ ಹೇಳಿಕೆಯನ್ನು ಖಂಡಿಸಿದ್ದಾರೆ. ಪೊಲೀಸರು ಈತನ ವಿರುದ್ಧ ಏನು ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ರೋಗಿಗಳ ಕುಟುಂಬಸ್ಥರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದೇ ಆದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಠಿಣ ಕಾನೂನುಗಳನ್ನು ರೂಪಿಸಲಾಗಿದೆ. ಅನೇಕ ಸಂದರ್ಭದಲ್ಲಿ ವೈದ್ಯರ ಬೇಜವಾಬ್ದಾರಿಯಿಂದಾಗಿ ರೋಗಿಗಳು ಪ್ರಾಣ ಕಳೆದುಕೊಳ್ಳುವುದು ಅಥವಾ ಅಂಗಾಂಗಳು ಊನವಾಗುವ ಸಂದರ್ಭಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಪೋಷಕರು ಪ್ರತಿಭಟಿಸಿದರೆ ಅಥವಾ ತಮ್ಮ ನೋವನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗದೆ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದರೆ ಆ ಪೋಷಕರ ಮೇಲೆ ಗೂಂಡಾ ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಬಹುದಾಗಿದೆ. ಇದೇ ಸಂದರ್ಭದಲ್ಲಿ ವೈದ್ಯನೊಬ್ಬ ಸಾಮಾಜಿಕ ಜಾಲತಾಣದಲ್ಲಿ ನಿರ್ದಿಷ್ಟ ಸಮುದಾಯವೊಂದರ ಜನರ ಸಾಮೂಹಿಕ ಹತ್ಯಾಕಾಂಡಕ್ಕೆ ಪರೋಕ್ಷವಾಗಿ ಕರೆ ನೀಡುತ್ತಾನೆ. ಇಂತಹ ವೈದ್ಯನ ಕೈಗೆ ರೋಗಿಯೊಬ್ಬನನ್ನು ಕೊಟ್ಟರೆ ಅದರ ಪರಿಣಾಮ ಏನಾಗಬಹುದು? ಒಂದು ಸಮುದಾಯವನ್ನು ಸಾಮೂಹಿಕವಾಗಿ ಇಲ್ಲವಾಗಿಸುತ್ತೇನೆ ಎಂದು ಹೇಳುವ ಈ ವೈದ್ಯನ ಬಳಿ ಆ ಸಮುದಾಯದಿಂದ ಒಬ್ಬ ರೋಗಿ ಹೋದರೆ ಆತನ ಜೊತೆಗೆ ವೈದ್ಯ ಯಾವ ರೀತಿಯಲ್ಲಿ ವ್ಯವಹರಿಸಬಹುದು? ವೈದ್ಯ ವೃತ್ತಿಗೆ ಈತ ಎಷ್ಟರಮಟ್ಟಿಗೆ ನ್ಯಾಯ ನೀಡಲು ಸಾಧ್ಯ? ಸ್ವತಃ ರೋಗ ಪೀಡಿತನಾಗಿರುವ ಈ ವೈದ್ಯ, ಇನ್ನೊಬ್ಬ ರೋಗಿಯನ್ನು ಚಿಕಿತ್ಸೆ ಮಾಡಿ ಗುಣ ಪಡಿಸಲು ಸಾಧ್ಯವೆ? ಎನ್ನುವ ಪ್ರಶ್ನೆ ಎದ್ದಿದೆ.
ಕರಾವಳಿಯಲ್ಲಿ ಪೊಲೀಸ್ ಇಲಾಖೆಯೊಳಗೆ ಹರಡಿಕೊಂಡಿರುವ ಕೋಮು ವಿಷದ ಬಗ್ಗೆ ಆಗಾಗ ಚರ್ಚೆಯಾಗುವುದಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋಮು ವೈರಸ್ ವಿಜೃಂಭಿಸಲು ಮುಖ್ಯ ಕಾರಣವೇ, ಆ ಶಕ್ತಿಗಳ ಜೊತೆಗೆ ಪೊಲೀಸ್ ಇಲಾಖೆ ಅನೈತಿಕ ಸಂಬಂಧವನ್ನು ಹೊಂದಿರುವುದು. ಇದು ಹಲವು ಪ್ರಕರಣಗಳಲ್ಲಿ ಬಯಲಾಗಿದೆ. ಕೋಮುಗಲಭೆಗಳನ್ನು ನಿಯಂತ್ರಿಸಬೇಕಾದ, ಸಮಾಜದಲ್ಲಿ ಸೌಹಾರ್ದ ಸ್ಥಾಪನೆಗೆ ಶ್ರಮಿಸಬೇಕಾಗಿದ್ದ ಕಾನೂನು ಪಾಲಕರೇ ಪರೋಕ್ಷವಾಗಿ ಕೋಮು ವಿಭಜನೆಯಲ್ಲಿ ಪಾತ್ರ ವಹಿಸುತ್ತಾ ಬಂದಿರುವ ಕಾರಣದಿಂದ ಇಂದು ಕರಾವಳಿ ಗಲಭೆಗಳಿಗಾಗಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸುತ್ತಿದೆ. ಇದೀಗ ಅವರ ಸಾಲಿಗೆ ವೈದ್ಯರೂ ಸೇರ್ಪಡೆಗೊಳ್ಳುತ್ತಿರುವುದು ಅತ್ಯಂತ ಆತಂಕಕಾರಿಯಾಗಿದೆ. ಕೊರೋನ ವೈರಸ್, ಡೆಂಗಿ ಸೊಳ್ಳೆಗಿಂತಲೂ ಮಾರಕವಾದ ವೈರಸ್‌ಗಳಿಗೆ ವೈದ್ಯರು ಬಲಿಯಾಗುತ್ತಿರುವುದನ್ನು ಮೆಡಿಕಲ್ ಅಸೋಸಿಯೇಶನ್ ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳಬೇಕು. ಇಂತಹ ಒಂದೆರಡು ವೈದ್ಯರು ವೈದ್ಯಕೀಯ ಕ್ಷೇತ್ರದ ವಿಶ್ವಾಸಾರ್ಹತೆಯನ್ನೇ ನಾಶ ಮಾಡಬಹುದು. ಒಬ್ಬ ರೋಗಿಯನ್ನು ರೋಗಿಯಂತೆ ನೋಡಲು ಸಾಧ್ಯವಾಗದೆ ಇದ್ದರೆ ವೈದ್ಯನೊಬ್ಬ ವೈದ್ಯನಾಗುವ ಅರ್ಹತೆಯನ್ನೇ ಕಳೆದುಕೊಳ್ಳುತ್ತಾನೆ. ಈ ನಿಟ್ಟಿನಲ್ಲಿ ಡಾ. ಕೀರ್ತನ್ ಉಪಾಧ್ಯನ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆ ಮೂಲಕ ವೈದ್ಯ ವೃತ್ತಿಯ ಘನತೆಯನ್ನು ಕಾಪಾಡಬೇಕಾಗಿದೆ.
‘ಹರ ಕೊಲ್ವೊಡೆ ಪರ ಕಾಯ್ವನೆ’ ಎನ್ನುವ ಮಾತೊಂದಿದೆ. ರೋಗಿಯನ್ನು ರಕ್ಷಿಸಬೇಕಾದ ವೈದ್ಯನೇ ಕೊಲ್ಲುವ ಮಾತನಾಡಿದರೆ, ಒಂದು ಸಮುದಾಯವನ್ನೇ ಸರ್ವನಾಶ ಮಾಡುವ ಮನಸ್ಸನ್ನು ಹೊಂದಿದರೆ, ಈ ಸಮಾಜವನ್ನು ಕಾಯುವವರಾದರೂ ಯಾರು? ಉಡುಪಿಯ ವೈದ್ಯ ದ್ವೇಷದ ವೈರಸನ್ನು ಮೆದುಳಿಗೆ ಏರಿಸಿಕೊಂಡಿದ್ದಾನೆ. ಈ ವೈರಸ್‌ನಿಂದ ಈತನನ್ನು ಮುಕ್ತ ಮಾಡಬೇಕಾದರೆ ಈತನಿಗೆ ಖಂಡಿತವಾಗಿಯೂ ಸುದೀರ್ಘಾವಧಿಯ ಚಿಕಿತ್ಸೆಯ ಅಗತ್ಯವಿದೆ. ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಮತ್ತು ಕಾನೂನು ವ್ಯವಸ್ಥೆ ಜಂಟಿಯಾಗಿ ಆ ಚಿಕಿತ್ಸೆಯ ಹೊಣೆಯನ್ನು ಹೊತ್ತುಕೊಳ್ಳಬೇಕು. ಅಷ್ಟೇ ಅಲ್ಲ, ಈ ದ್ವೇಷದ ವೈರಸ್ ಅತಿ ವೇಗವಾಗಿ ಹರಡುವ ವೈರಸ್ ಆಗಿರುವುದರಿಂದ ಎಲ್ಲ ಆಸ್ಪತ್ರೆಗಳ ವೈದ್ಯರನ್ನೂ ಪರೀಕ್ಷೆ ನಡೆಸುವ ಅಗತ್ಯವಿದೆ ಹಾಗೂ ಈ ವೈರಸ್ ಯಾವ ಕಾರಣಕ್ಕೂ ವೈದ್ಯರ ಹತ್ತಿರ ಸುಳಿಯದಂತೆ ಮುಂಜಾಗ್ರತೆಯಾಗಿ ಅವರಿಗೆ ಮಾನವೀಯತೆಯ ಹೆಚ್ಚುವರಿ ಡೋಸ್ ಲಸಿಕೆಗಳನ್ನು ನೀಡುವುದು ಅತ್ಯಗತ್ಯವಾಗಿದೆ.