ಶಾಲೆಯೇ ‘ನರಬಲಿ’ಯನ್ನು ಕೇಳಿದರೆ?
ಬಾಲಕನ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪಿಗಳೊಂದಿಗೆ ಹತ್ರಾಸ್ ಪೊಲೀಸರು PC: X/@hathraspolice
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಶಾಲೆಗಳು ವಿದ್ಯಾರ್ಥಿಗಳನ್ನು ಮೌಢ್ಯಗಳಿಂದ, ಅಜ್ಞಾನದಿಂದ ಮೇಲೆತ್ತುತ್ತವೆ ಎಂದು ನಾವು ನಂಬಿಕೊಂಡು ಬಂದಿದ್ದೇವೆ. ಶಿಕ್ಷಕರು ಮಕ್ಕಳಲ್ಲಿ ವಿಜ್ಞಾನ, ವಿಚಾರಗಳನ್ನು ಬಿತ್ತಿ ಅವರನ್ನು ಸುಜ್ಞಾನದೆಡೆಗೆ ಕರೆದೊಯ್ಯುತ್ತಾರೆ. ಆದರೆ ಉತ್ತರ ಪ್ರದೇಶದ ಹಾಥರಸ್ ಎಂಬಲ್ಲಿ ಇದಕ್ಕೆ ವ್ಯತಿರಿಕ್ತವಾದ ಘಟನೆಯೊಂದು ನಡೆದಿದೆ. ಶಾಲೆಯೊಂದರ ಅಭಿವೃದ್ಧಿಗಾಗಿ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರು ಜೊತೆಯಾಗಿ ಎರಡನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ನರಬಲಿ ನೀಡಿದ ಬರ್ಬರ ಘಟನೆ ಬೆಳಕಿಗೆ ಬಂದಿದ್ದು, ಕೃತ್ಯಕ್ಕೆ ದೇಶವೇ ಬೆಚ್ಚಿ ಬಿದ್ದಿದೆ. ಶಾಲೆಯೇ ತನ್ನ ಉನ್ನತಿಗಾಗಿ ಮೌಢ್ಯವನ್ನು ನೆಚ್ಚಿಕೊಂಡ ಮೇಲೆ ಈ ಶಾಲೆಯು ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಣದ ಗುಣಮಟ್ಟ ಹೇಗಿರಬಹುದು? ನರಬಲಿಯಲ್ಲಿ ಶಿಕ್ಷಕರೂ ಭಾಗವಹಿಸಿದ್ದಾರೆ ಎಂದ ಮೇಲೆ, ಇಂತಹ ಶಿಕ್ಷಕರು ಎಂತಹ ಸಮಾಜವನ್ನು ನಿರ್ಮಾಣ ಮಾಡಬಹುದು? ಎನ್ನುವ ಪ್ರಶ್ನೆ ತಲೆಯೆತ್ತುತ್ತದೆ. ಚಂದ್ರ, ಮಂಗಳನಲ್ಲಿಗೆ ತಲುಪುವ ಕನಸು ಕಾಣುತ್ತಿರುವ ದೇಶದಲ್ಲಿ, ಇನ್ನೂ ನರಬಲಿಯಂತಹ ಅನಿಷ್ಟಗಳು ಅಸ್ತಿತ್ವದಲ್ಲಿದೆ ಎನ್ನುವುದೇ ನಾಚಿಕೆಗೇಡಿನ ವಿಷಯವಾಗಿದೆ.
ದೇಶದಲ್ಲಿ ಇಂತಹ ನರಬಲಿ ಘಟನೆಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಉತ್ತರ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಇದೊಂದು ಪಿಡುಗಾಗಿ ಪರಿಣಮಿಸಿದೆ. ದಕ್ಷಿಣ ಭಾರತದಲ್ಲಿಯೂ ಆಗಾಗ ಮಕ್ಕಳ ಮೃತದೇಹಗಳು ಪತ್ತೆಯಾಗಿ, ನರಬಲಿಯಂತಹ ಘಟನೆಗಳು ನಡೆದಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಿದೆ. ನಿಧಿಯ ಆಸೆಗಾಗಿ, ರೋಗ ನಿವಾರಣೆಗಾಗಿ, ಮನೆಯಲ್ಲಿ ನೆಮ್ಮದಿಗಾಗಿ ಹೀಗೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಮಂತ್ರವಾದಿಗಳ ಸಲಹೆ ಪಡೆದು ನರಬಲಿ ನೀಡಿದ ಉದಾಹರಣೆಗಳಿವೆ. ಕೆಲವು ವರ್ಷಗಳ ಹಿಂದೆ ಚಿಂತಾಮಣಿ ಸಮೀಪದ ಯರ್ರಯ್ಯಗಾರಹಳ್ಳಿಯಲ್ಲಿ ಬಾಲಕಿಯೊಬ್ಬಳನ್ನು ಬಲಿಕೊಡುವ ಪ್ರಯತ್ನ ಕೊನೆಯ ಕ್ಷಣದಲ್ಲಿ ವಿಫಲಗೊಂಡಿತ್ತು. ಸ್ವತಃ ಕುಟುಂಬಸ್ಥರೇ ಇಷ್ಟಾರ್ಥ ಸಿದ್ಧಿಗಾಗಿ ಹತ್ತು ವರ್ಷದ ಬಾಲಕಿಯನ್ನು ಬಲಿಕೊಡುವ ಸಂಚು ನಡೆಸಿದ್ದರು. ಈ ಸಂಬಂಧ ಮಂತ್ರವಾದಿಯನ್ನು ಪೊಲೀಸರು ಬಂಧಿಸಿದ್ದರು. ಯಾದಗಿರಿಯಲ್ಲಿ ಮಗುವಿನ ಅಜ್ಜನೇ ಒಂದೂವರೆ ವರ್ಷದ ಮಗುವನ್ನು ಬಲಿಕೊಟ್ಟ ಘಟನೆ ನಡೆದಿತ್ತು. ಕೆಲವು ವರ್ಷಗಳ ಹಿಂದೆ ಮುಂಡಗೋಡಿನಲ್ಲಿ 17 ವರ್ಷದ ಬಾಲಕನ ತಲೆಯನ್ನು ಚೆಂಡಾಡಿ ಬಲಿಕೊಡಲಾಗಿತ್ತು. ರಮೇಶ್ ದಾಸ್ ಗೊಲ್ಲರ್ ಎಂಬಾತನನ್ನು ಈ ಸಂಬಂಧ ಬಂಧಿಸಿದ್ದರು. ದುರ್ಗಾದೇವಿಯೇ ಈತನ ಕನಸಿನಲ್ಲಿ ಬಂದು ಬಾಲಕನನ್ನು ಬಲಿಕೊಡಬೇಕು ಎಂದು ಕೇಳಿಕೊಂಡಿದ್ದಳು ಎಂದು ಈತ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದ. ಅಸ್ಸಾಂ, ಜಾರ್ಖಂಡ್ನಂತಹ ಪ್ರದೇಶಗಳಲ್ಲಿ ಕಪಟ ಬಾಬಾಗಳು, ಮಂತ್ರವಾದಿಗಳ ಕುತಂತ್ರದಿಂದ ಇಂತಹ ನರಬಲಿಗಳು ವ್ಯಾಪಕವಾಗಿ ನಡೆಯುತ್ತವೆ. ಇದೇ ಸಂದರ್ಭದಲ್ಲಿ ಕಾಯಿಲೆ ಕಸಾಲೆಗಳಿಗೆ, ಆರ್ಥಿಕ ಸಂಕಟಗಳಿಗೆ ಮಾಟ ಮಂತ್ರಗಳನ್ನು ನೆಚ್ಚಿಕೊಂಡಿರುವವರ ಸಂಖ್ಯೆಯೂ ಭಾರೀ ಪ್ರಮಾಣದಲ್ಲಿವೆ. ತಮ್ಮ ಕುಟುಂಬ ಆರೋಗ್ಯ, ಆರ್ಥಿಕ ವಿಷಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ತಮ್ಮ ಕುಟುಂಬಕ್ಕೆ ಯಾರೋ ಮಾಟ ಮಾಡಿದ್ದಾರೆ ಎಂದು ನಕಲಿ ಬಾಬಾಗಳು, ಮಂತ್ರವಾದಿಗಳ ಮೊರೆ ಹೋಗುವುದಿದೆ. ಮಂತ್ರವಾದಿಗಳ ಮಾತುಕೇಳಿ ಕುಟುಂಬದೊಳಗೆ ಕಲಹಗಳು ಏರ್ಪಟ್ಟು ಸಾವು ನೋವುಗಳಿಗೆ ಕಾರಣವಾದ ಪ್ರಕರಣಗಳೂ ಇವೆ.
ಈಶಾನ್ಯ ಭಾರತದಲ್ಲಿ ಒಬ್ಬಂಟಿ ಮಹಿಳೆಯನ್ನು ಮಾಟಗಾತಿ ಎಂದು ಸಂಶಯಿಸಿ ಗ್ರಾಮಸ್ಥರೇ ಒಟ್ಟುಗೂಡಿ ಸಾಯಿಸುವ ಪ್ರಕರಣಗಳು ಆಗಾಗ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತವೆ.ಕಳೆದ ಸೆಪ್ಟಂಬರ್ನಲ್ಲಿ ಜಾರ್ಖಂಡ್ನಲ್ಲಿ ಮೂವರು ಮಹಿಳೆಯರೂ ಸೇರಿದಂತೆ ಒಟ್ಟು ಐವರನ್ನು ಗ್ರಾಮಸ್ಥರೇ ಸೇರಿ ಥಳಿಸಿ ಕೊಂದು ಹಾಕಿದ ಘಟನೆ ನಡೆದಿದೆ. ಛತ್ತೀಸ್ಗಡದ ಸುಕ್ಮಾ ಜಿಲ್ಲೆಯ ಹಳ್ಳಿಯಲ್ಲಿ ಈ ಕೃತ್ಯ ನಡೆದಿದ್ದು, ಈ ಕುಟುಂಬ ವಾಮಾಚಾರ ನಡೆಸುತ್ತಿದೆ ಎಂದು ಆರೋಪಿಸಿ ಎಲ್ಲರನ್ನೂ ಕೊಂದು ಹಾಕಿದ್ದರು. ಅನೇಕ ಸಂದರ್ಭದಲ್ಲಿ ವೈಯಕ್ತಿಕ ದ್ವೇಷವಿದ್ದರೆ, ವಾಮಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಊರಿನ ಜನರನ್ನು ಕುಟುಂಬದ ವಿರುದ್ಧ ಎತ್ತಿ ಕಟ್ಟುವುದಿದೆ. ಹಾಗೆಯೇ ಒಂಟಿ ಮಹಿಳೆಯ ಆಸ್ತಿ ಕಬಳಿಸುವುದಕ್ಕಾಗಿಯೇ ಆಕೆಯ ತಲೆಯ ಮೇಲೆ ಮಾಟಗಾತಿ ಆರೋಪ ಹೊರಿಸಿ ಕೊಂದು ಹಾಕುವುದಿದೆ. ಆದರೆ, ಶಾಲೆಯೊಂದು ತನ್ನ ಉನ್ನತಿಗಾಗಿ ತನ್ನದೇ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬನನ್ನು ಕೊಂದು ಹಾಕಿರುವುದು ಮಾತ್ರ ಇತ್ತೀಚಿನ ದಿನಗಳಲ್ಲಿ ಹೊಸತಾಗಿದೆ. ಇದರಲ್ಲಿ ಶಿಕ್ಷಕರೂ ಭಾಗಿಯಾಗಿದ್ದಾರೆ ಎನ್ನುವುದು ನಮ್ಮ ಶಿಕ್ಷಣ ವ್ಯವಸ್ಥೆಯ ದುರಂತವನ್ನು ಹೇಳುತ್ತದೆ.
ಶಾಲೆಯಲ್ಲಿಯೇ ಜಾತೀಯತೆಯನ್ನು ಪಾಲಿಸುವುದು ಆಗಾಗ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುತ್ತವೆ. ಶಾಲೆಗಳು ಎಲ್ಲ ಭೇದಭಾವಗಳನ್ನು ಅಳಿಸಿ ಮಕ್ಕಳಲ್ಲಿ ಸಮಾನತೆಯನ್ನು ಬೆಳೆಸಬೇಕು. ಆದರೆ, ದಲಿತ ವಿದ್ಯಾರ್ಥಿಯೊಬ್ಬ ನೀರಿನ ಮಡಕೆಯನ್ನು ಮುಟ್ಟಿದ್ದಕ್ಕಾಗಿ ಶಿಕ್ಷಕನೇ ಥಳಿಸಿ ಆತನ ಸಾವಿಗೆ ಕಾರಣವಾಗುತ್ತಾನೆ. ತನ್ನ ಮೆದುಳಲ್ಲಿ ಜಾತೀಯತೆಯ ಹೊಲಸನ್ನು ತುಂಬಿಕೊಂಡು ವಿದ್ಯಾರ್ಥಿಗಳಿಗೆ ಯಾವ ರೀತಿಯ ಶಿಕ್ಷಣವನ್ನು ನೀಡಿಯಾನು? ಒಬ್ಬ ಶಿಕ್ಷಕನ ಸ್ಥಿತಿಯೇ ಇಷ್ಟು ಭೀಕರವಾಗಿದ್ದರೆ, ಆ ಊರಿನ ಇತರರ ಸ್ಥಿತಿ ಏನಾಗಿರಬೇಕು? ಇವನಿಂದ ಕಲಿತ ವಿದ್ಯಾರ್ಥಿಗಳ ಭವಿಷ್ಯ ಏನಾಗಬೇಕು? ಶಿಕ್ಷಕರು ಜಾತಿವಾದಿಗಳು ಮಾತ್ರವಲ್ಲ, ಕೋಮುವಾದಿಗಳಾಗಿಯೂ ಇಂದು ಸುದ್ದಿಯಲ್ಲಿದ್ದಾರೆ. ವಿದ್ಯಾರ್ಥಿಗಳಲ್ಲಿ ಕೋಮು ವಿಷವನ್ನು ತುಂಬುವಲ್ಲಿ ಇವರ ಪಾತ್ರ ಬಹುದೊಡ್ಡದು. ಇಂತಹ ಶಾಲೆಗಳು ಪರೋಕ್ಷವಾಗಿ ಮುಗ್ಧ ವಿದ್ಯಾರ್ಥಿಗಳ ಬಲಿಯನ್ನು ಕೇಳುತ್ತವೆೆ. ಇಲ್ಲಿಂದ ಹೊರಬಿದ್ದ ವಿದ್ಯಾರ್ಥಿಗಳು ಸಮಾಜಕ್ಕೆ ಮಾರಕವಾಗಿ ಪರಿವರ್ತನೆಗೊಂಡಿರುತ್ತಾರೆ. ನರಬಲಿಯಿಂದ ಶಾಲೆಯನ್ನು ಉದ್ಧರಿಸಬಹುದು ಎಂದು ನಂಬುವ ಶಿಕ್ಷಕರಿಗಿಂತ ಈ ಕೋಮುವಾದಿ, ಜಾತಿವಾದಿ ಶಿಕ್ಷಕರು ಭಿನ್ನವೇನೂ ಅಲ್ಲ.
ಉತ್ತರ ಪ್ರದೇಶದಲ್ಲಿ ನಡೆದ ನರಬಲಿ ಪ್ರಕರಣವನ್ನು ಕೇವಲ ಮೌಢ್ಯಕ್ಕಷ್ಟೇ ಸೀಮಿತಗೊಳಿಸಬಾರದು. ಇದರಲ್ಲಿ ಶಿಕ್ಷಕರೂ ಭಾಗಿಯಾಗಿರುವುದರಿಂದ ನಮ್ಮ ಶಿಕ್ಷಣ ವ್ಯವಸ್ಥೆ ಜನರೊಳಗಿನ ಮೌಢ್ಯಗಳನ್ನು, ಜಾತೀಯತೆಯನ್ನು ಅಳಿಸುವಲ್ಲಿ ಯಾಕೆ ಸೋಲುತ್ತಿದೆ ಎನ್ನುವುದರ ಬಗ್ಗೆ ಆತ್ಮವಿಮರ್ಶೆ ನಡೆಸಬೇಕು. ಶಾಲೆ ಕಾಲೇಜುಗಳಲ್ಲಿ ಕಲಿಸುವ ಶಿಕ್ಷಕರನ್ನು ವೈಚಾರಿಕವಾಗಿ ಶಿಕ್ಷಿತರನ್ನಾಗಿಸುವ ಕೆಲಸ ನಡೆಯಬೇಕಾಗಿದೆ ಎನ್ನುವುದನ್ನು ಇದು ಹೇಳುತ್ತದೆ. ಇದೇ ಸಂದರ್ಭದಲ್ಲಿ ಮೌಢ್ಯಗಳನ್ನು, ಕಂದಾಚಾರಗಳನ್ನು ಧರ್ಮದ ಮುಖವಾಡದಲ್ಲಿ ಪೋಷಿಸುವ ಕೆಲಸ ಎಲ್ಲ ಧರ್ಮೀಯರಿಂದಲೂ ನಡೆಯುತ್ತಿದೆ. ಮೌಢ್ಯದ ವಿರುದ್ಧ ಕಠಿಣ ಕಾನೂನನ್ನು ಜಾರಿಗೊಳಿಸಿದಾಕ್ಷಣ, ‘ಧರ್ಮದ ಮೇಲೆ ದಾಳಿ’ ಎಂದು ಇವರು ಹುಯಿಲೆಬ್ಬಿಸುತ್ತಾರೆ. ಹಿಂದೆ ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮೌಢ್ಯ ವಿರೋಧಿ ಕಾನೂನನ್ನು ಜಾರಿಗೊಳಿಸಲು ಮುಂದಾದಾಗ ‘ಇದು ಹಿಂದೂ ಧರ್ಮದ ಮೇಲೆ ನಡೆಯುತ್ತಿರುವ ದಾಳಿ’ ಎಂದು ಆರೋಪಿಸಲಾಗಿತ್ತು. ಧಾರ್ಮಿಕ ನಂಬಿಕೆ ಮತ್ತು ಮೌಢ್ಯ ಇವೆರಡು ಬೇರೆ ಬೇರೆ ಎನ್ನುವುದನ್ನು ಜನಸಾಮಾನ್ಯರಿಗೆ ಧಾರ್ಮಿಕ ಮುಖಂಡರೇ ತಿಳಿಸಿಕೊಡುವ ಕೆಲಸವನ್ನು ಮಾಡಬೇಕು. ಮಾಟ ಮಂತ್ರದ ಹೆಸರಿನಲ್ಲಿ ಯಾರೇ ಕಾರ್ಯಾಚರಣೆ ನಡೆಸುತ್ತಿದ್ದರೂ ಅವರ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡುವ ಕೆಲಸವಾಗಬೇಕು ಮತ್ತು ಈ ಮೌಢ್ಯಗಳ ವಿರುದ್ಧ ಒಂದು ಕಠಿಣ ಕಾನೂನನ್ನು ಜಾರಿಗೊಳಿಸಲು ಕೇಂದ್ರ ಸರಕಾರ ಇನ್ನಾದರೂ ಮುಂದಾಗಬೇಕು. ಈ ಮೂಲಕ ಅಮಾಯಕ ಮಕ್ಕಳ ಜೀವವನ್ನು ಉಳಿಸಬೇಕು ಮಾತ್ರವಲ್ಲ, ವಾಮಾಚಾರದ ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆಯುವ ಬರ್ಬರ ದೌರ್ಜನ್ಯಗಳನ್ನು ತಡೆಯಬೇಕು.