ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಕಳೆದುಕೊಂಡದ್ದು-ಪಡೆದುಕೊಂಡದ್ದು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪ್ಯಾರಿಸ್ ಒಲಿಂಪಿಕ್ಸ್ ಸಮಾರೋಪಗೊಂಡಿದ್ದು, ಪದಕ ಬೇಟೆಯಲ್ಲಿ ಭಾರತ ಒಂದು ಬೆಳ್ಳಿ ಮತ್ತು ಐದು ಕಂಚುಗಳ ಜೊತೆಗೆ 71ನೆ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಕೇವಲ ಒಂದೇ ಒಂದು ಸ್ವರ್ಣ ಪದಕದೊಂದಿಗೆ ನೆರೆಯ ಪಾಕಿಸ್ತಾನ ಒಲಿಂಪಿಕ್ಸ್ ನಲ್ಲಿ 62ನೇ ಸ್ಥಾನವನ್ನು ಪಡೆದು ಭಾರತಕ್ಕಿಂತ ಮೇಲ್‌ಸ್ತರದಲ್ಲಿದೆ. ಮೋದಿ ನೇತೃತ್ವದ ಭಾರತದಲ್ಲಿ ಬಿಜೆಪಿಯ ಕ್ಷುದ್ರ ರಾಜಕೀಯ ಇಲ್ಲಿನ ಕ್ರೀಡಾ ಕ್ಷೇತ್ರವನ್ನೂ ಬಲಿತೆಗೆದುಕೊಂಡದ್ದೇ ವಿಶ್ವ ಒಲಿಂಪಿಕ್ಸ್‌ನಲ್ಲಿ ಭಾರತವು ಪಾಕಿಸ್ತಾನಕ್ಕಿಂತ ಹಿನ್ನಡೆ ಅನುಭವಿಸಲು ಕಾರಣವಾಯಿತು. ಇಲ್ಲವಾದರೆ, ಖಂಡಿತವಾಗಿಯೂ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಕುಸ್ತಿಯಲ್ಲಿ ಚಿನ್ನವನ್ನು ಪಡೆದು ಪಾಕಿಸ್ತಾನಕ್ಕಿಂತ ಎಷ್ಟೋ ಎತ್ತರದಲ್ಲಿ ಭಾರತ ಕಂಗೊಳಿಸಬಹುದಿತ್ತು. ಒಲಿಂಪಿಕ್ಸ್ ನಲ್ಲಿ ಭಾರತ ಕ್ರೀಡಾಳುಗಳು ಪಡೆದ ಪದಕಕ್ಕಿಂತಲೂ, ವಿನೇಶ್ ಫೋಗಟ್ ಕಳೆದುಕೊಂಡ ಚಿನ್ನವೇ ಅತಿ ಹೆಚ್ಚು ಚರ್ಚೆಗೊಳಗಾಗಿದ್ದು ವಿಶೇಷ. ವಿನೇಶ್ ಬೆಳ್ಳಿ ಪದಕಕ್ಕೆ ಅರ್ಹರೋ ಅಲ್ಲವೋ ಎನ್ನುವುದು ಮಂಗಳವಾರ ನಿರ್ಧಾರವಾಗಲಿದೆ. ಒಂದು ವೇಳೆ ಬೆಳ್ಳಿ ಪದಕ ಸಿಕ್ಕಿದ್ದೇ ಆದರೆ ವಿನೇಶ್‌ಗೆ ಕನಿಷ್ಠ ನ್ಯಾಯ ಸಿಕ್ಕಿದಂತಾಗುತ್ತದೆ. ಆದರೆ, ಚಿನ್ನ ಪಡೆಯುವ ಎಲ್ಲ ಅರ್ಹತೆಯಿರುವ ಒಬ್ಬ ಕ್ರೀಡಾಳುವಿಗೆ ಗರಿಷ್ಠ ಕಿರುಕುಳ ನೀಡಿ ಆಕೆಯ ಸಾಧನೆಯ ಹಾದಿಗೆ ಅಡ್ಡಿಯಾದ ಭಾರತದೊಳಗಿನ ಕ್ರೀಡಾ ರಾಜಕಾರಣಗಳನ್ನು ಕ್ರೀಡಾಭಿಮಾನಿಗಳು ಕ್ಷಮಿಸಲಾರರು. ಭಾರತದ ಕ್ರೀಡಾ ಇತಿಹಾಸದಲ್ಲಿ ವಿನೇಶ್‌ಗೆ ಆಗಿರುವ ಅನ್ಯಾಯ ಒಂದು ಕಪ್ಪು ಚುಕ್ಕೆಯಾಗಿಯೇ ಉಳಿಯಲಿದೆ.
ಕ್ರೀಡೆಗಳಿಗೆ ಜಾತಿ, ಧರ್ಮ, ದೇಶಗಳ ಗಡಿಗಳಿಲ್ಲ. ಒಡೆದ ಮನಸ್ಸುಗಳನ್ನು ಕ್ರೀಡಾ ಸ್ಫೂರ್ತಿ ಬೆಸೆಯುತ್ತದೆ. ಭಾರತದ ಕ್ರಿಕೆಟ್ ತಾರೆಯರಿಗೆ ಪಾಕಿಸ್ತಾನದಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಹಾಗೆಯೇ ಪಾಕಿಸ್ತಾನದ ಆಟಗಾರರನ್ನು ಮೆಚ್ಚುವ ಲಕ್ಷಾಂತರ ಆಟಗಾರರು ಭಾರತದಲ್ಲೂ ಇದ್ದಾರೆ. ಭಾರತ-ಪಾಕಿಸ್ತಾನದ ನಡುವೆ ಕ್ರಿಕೆಟ್ ಪಂದ್ಯ ನಡೆಯುವಾಗ, ಅದನ್ನು ಎರಡು ದೇಶಗಳ ನಡುವಿನ ಯುದ್ಧವಾಗಿ ಪರಿವರ್ತಿಸಿ ಮನಸ್ಸುಗಳನ್ನು ಒಡೆಯಲು ಕೆಲವು ಶಕ್ತಿಗಳು ಪ್ರಯತ್ನಿಸುತ್ತಾ ಬಂದಿವೆೆಯಾದರೂ, ಅಂತಿಮವಾಗಿ ಈ ಶಕ್ತಿಗಳ ವಿರುದ್ಧ ಕ್ರೀಡೆಯೇ ಗೆಲ್ಲುತ್ತಾ ಬಂದಿದೆ. ಪಾಕಿಸ್ತಾನ-ಭಾರತದ ಹೆಸರನ್ನು ಮುಂದಿಟ್ಟು ರಾಜಕೀಯ ನಡೆಸುವ ಉಭಯ ದೇಶಗಳ ರಾಜಕಾರಣಿಗಳಿಗೆ ಈ ಬಾರಿ ಒಲಿಂಪಿಕ್ಸ್‌ನಲ್ಲಿ ಚಿನ್ನ ಪಡೆದ ನದೀಮ್ ಮತ್ತು ಬೆಳ್ಳಿಯನ್ನು ಪಡೆದ ನೀರಜ್ ಛೋಪ್ರಾ ಅವರು ಪಾಠವಾಗಿದ್ದಾರೆ. ನೀರಜ್ ಕಳೆದ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ ತಂದು ಕೊಟ್ಟ ಹೆಮ್ಮೆಯ ಅತ್ಲೀಟ್. ಈ ಬಾರಿಯೂ ಅವರು ಚಿನ್ನವನ್ನು ತಮ್ಮದಾಗಿಸಿಕೊಳ್ಳುತ್ತಾರೆ ಎಂದು ಭಾರತ ನಿರೀಕ್ಷಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ಎಲ್ಲವೂ ಬದಲಾಯಿತು. ಪಾಕಿಸ್ತಾನದ ಅತ್ಲೀಟ್ ನದೀಮ್ ಅವರು ದಾಖಲೆಯೊಂದಿಗೆ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು. ನೀರಜ್ ಬೆಳ್ಳಿ ಪದಕದೊಂದಿಗೆ ಸಂತೃಪ್ತಿ ಪಡಬೇಕಾಯಿತು. ಆದರೆ ಇವರಿಬ್ಬರು ಮೆರೆದ ಕ್ರೀಡಾ ಸ್ಫೂರ್ತಿ ಯಾವುದೇ ಪದಕಗಳಿಗಿಂತ ಬೆಳೆಬಾಳುವಂತಹದ್ದು. ಕ್ರೀಡಾಳುಗಳಿಗೆ ಮಾತ್ರವಲ್ಲದೆ, ಉಭಯ ದೇಶಗಳ ರಾಜಕಾರಣಿಗಳಿಗೂ ಇದು ಮಾದರಿಯಾಗಬೇಕಾದುದು.
ಮುಖ್ಯವಾಗಿ ನೀರಜ್-ನದೀಮ್ ಪರಸ್ಪರ ಸ್ನೇಹಿತರು. ಅದಾಗಲೇ ಜಾವೆಲಿಂಗ್‌ನಲ್ಲಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದ ನೀರಜ್ ಅವರು ನದೀಮ್‌ಗೆ ಹಲವು ವಿಷಯದಲ್ಲಿ ಮಾರ್ಗದರ್ಶಿಯಾಗಿದ್ದರು. ಸ್ಫೂರ್ತಿ ತುಂಬಿದ್ದರು. ಒಲಿಂಪಿಕ್ಸ್‌ಗೆ ಕಾಲಿಡುವ ಮುನ್ನ ನದೀಮ್ ಅವರು ಹಲವು ಸಂಘರ್ಷಗಳನ್ನು ಎದುರಿಸಿದ್ದರು. ಭಾರತದ ಅತ್ಲೀಟ್‌ಗಳು ಎದುರಿಸುತ್ತಿರುವ ಸವಾಲುಗಳಿಗಿಂತ ಅದು ಭಿನ್ನವೇನೂ ಆಗಿರಲಿಲ್ಲ. ಉತ್ತಮ ಜಾವೆಲಿನ್ ಇಲ್ಲದೆ ಪರದಾಡುತ್ತಿದ್ದಾಗ, ಅವರ ಪರವಾಗಿ ಮಾತನಾಡಿದ್ದ ನೀರಜ್, ನೆರವಿಗೆ ಮುಂದಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ನೀರಜ್ ತಮ್ಮ ಅನಿಸಿಕೆಗಳನ್ನು ದಾಖಲಿಸಿದ ಬಳಿಕ, ಪಾಕಿಸ್ತಾನ ಸರಕಾರ ನದೀಮ್ ಕಡೆಗೆ ಕಣ್ಣು ಹೊರಳಿಸಿತ್ತು. ಇಂದು ನದೀಮ್ ಪಡೆದ ಚಿನ್ನದಲ್ಲಿ, ನೀರಜ್ ಅವರ ಕ್ರೀಡಾ ಸ್ಫೂರ್ತಿಯ ಪಾಲಿದೆ. ನದೀಮ್ ಚಿನ್ನ ಗೆದ್ದಾಗ ಅದಕ್ಕೆ ನೀರಜ್ ಅವರ ತಾಯಿ ಸ್ಪಂದಿಸಿದ ರೀತಿಯೂ ಭಾರತದ ಹಿರಿಮೆಯನ್ನು ಎತ್ತಿ ಹಿಡಿಯಿತು. ‘‘ನದೀಮ್ ಕೂಡ ನನ್ನ ಮಗನೇ ಆಗಿದ್ದಾನೆ. ಅವನು ಚಿನ್ನ ಪಡೆದಿರುವುದು ನನಗೆ ತುಂಬಾ ಸಂತೋಷ ನೀಡಿದೆ’’. ಇದೇ ಸಂದರ್ಭದಲ್ಲಿ ಅತ್ತ ನದೀಮ್ ತಾಯಿಯೂ ನೀರಜ್ ಸಾಧನೆಯ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದರು. ಧರ್ಮ, ದೇಶದ ಗಡಿಗಳನ್ನು ಮೀರಿದ ಈ ತಾಯಂದಿರ ಹೇಳಿಕೆ, ಉಭಯ ದೇಶಗಳ ರಾಜಕೀಯ ನಾಯಕರಿಗೂ ಒಂದು ಪಾಠವಾಗಿತ್ತು.ಭಾರತೀಯರಿಗೆ ಈ ಬಾರಿ ಚಿನ್ನ ಕಳೆದುಕೊಂಡ ಬಗ್ಗೆ ಬೇಸರವಿತ್ತಾದರೂ, ನೆರೆಯ ಪಾಕಿಸ್ತಾನದ ನದೀಮ್ ಅದನ್ನು ಪಡೆದುಕೊಂಡಿರುವ ಬಗ್ಗೆ ಖುಷಿಯೂ ಇತ್ತು. ಆತನ ಸಾಧನೆಗೆ ಭಾರತದಲ್ಲಿ ದೊಡ್ಡ ಸಂಖ್ಯೆ ಅಭಿನಂದನೆಗಳು ವ್ಯಕ್ತವಾಗಿದ್ದವು.
ನದೀಮ್-ನೀರಜ್ ತಾಯಂದಿರು ಪರಸ್ಪರ ಅಭಿನಂದಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ, ವಿನೇಶ್ ಫೋಗಟ್ ಅವರ ವೈಫಲ್ಯವನ್ನು ಭಾರತದಲ್ಲಿ ಕೆಲವು ಶಕ್ತಿಗಳು ಸಂಭ್ರಮಿಸಿರುವುದು ವಿಪರ್ಯಾಸವಾಗಿದೆ. ಬಹುಶಃ ದೇಶದ ಇತಿಹಾಸದಲ್ಲೇ, ನಮ್ಮ ಕ್ರೀಡಾಳುಗಳ ಸೋಲನ್ನು ನಮ್ಮವರೇ ಈ ಪರಿ ಸಂಭ್ರಮಿಸಿದ ಉದಾಹರಣೆಗಳಿಲ್ಲ. ನಮ್ಮ ಕ್ರೀಡಾಳುಗಳಿಗೆ ಅನ್ಯಾಯವಾದಾಗ ಅಥವಾ ಸಮಸ್ಯೆ ಎದುರಾದಾಗ ಕ್ರೀಡಾಳುಗಳ ಬೆನ್ನಿಗೆ ಇಡೀ ದೇಶವೇ ನಿಲ್ಲುತ್ತಿತ್ತು. ಆದರೆ ಈ ಬಾರಿ ವಿನೇಶ್ ಫೋಗಟ್ ಕಾಣದ ಕೈಗಳ ಸಂಚಿನಿಂದ ಅನರ್ಹತೆಯನ್ನು ಎದುರಿಸಿದಾಗ, ದೇಶದೊಳಗಿರುವ ಕೆಲವು ಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಡಿದವು. ರಾಜಕೀಯ ಹೇಗೆ ಕ್ರೀಡೆಯನ್ನು ಕೂಡ ಬಲಿತೆಗೆದುಕೊಳ್ಳುತ್ತಿದೆ ಎನ್ನುವುದನ್ನು ಇದು ಹೇಳುತ್ತಿದೆ. ಈ ನಿಟ್ಟಿನಲ್ಲಿ ಒಲಿಂಪಿಕ್ಸ್ ನಲ್ಲಿ ಈ ಬಾರಿ ಭಾರತದ ವೈಫಲ್ಯದಲ್ಲಿ ತನ್ನ ಪಾಲೆಷ್ಟು ಎನ್ನುವುದರ ಬಗ್ಗೆ ಸರಕಾರ ಆತ್ಮಾವಲೋಕನ ಮಾಡುವ ಅಗತ್ಯವಿದೆ. ಬೆಳ್ಳಿ ಮತ್ತು ಕಂಚುಗಳನ್ನು ಗೆದ್ದ ಅತ್ಲೀಟ್‌ಗಳನ್ನು ಅಭಿನಂದಿಸುವ ಕೆಲಸದ ಜೊತೆಗೇ, ದೇಶದಲ್ಲಿ ಕ್ರೀಡೆಯನ್ನು ರಾಜಕೀಯದಿಂದ ಪೂರ್ಣ ಪ್ರಮಾಣದಲ್ಲಿ ಮುಕ್ತವಾಗಿಸುವ ಕೆಲಸ ಮಾಡಬೇಕು. ಕ್ರೀಡೆಯ ಚುಕ್ಕಾಣಿಯನ್ನು ಹಿರಿಯ ಕ್ರೀಡಾಳುಗಳ ಕೈಗೆ ನೀಡಬೇಕು. ಕ್ರಿಕೆಟ್‌ಗೆ ನೀಡುವ ಬೆಂಬಲ, ಪ್ರೋತ್ಸಾಹ ಇತರ ಕ್ರೀಡೆಗಳಿಗೂ ಸಿಗಬೇಕು.
ಅತ್ಲೀಟ್‌ಗಳನ್ನು ಗುರುತಿಸುವ ಕೆಲಸ ನಗರ ಪ್ರದೇಶಗಳಲ್ಲಿ ನಡೆಯಬೇಕಾಗಿರುವುದಲ್ಲ, ಗ್ರಾಮೀಣ ಪ್ರದೇಶಗಳಲ್ಲಿ.ದುರದೃಷ್ಟಕ್ಕೆ ಗ್ರಾಮೀಣ ಪ್ರದೇಶ ಅಪೌಷ್ಟಿಕತೆಗಾಗಿ ಗುರುತಿಸಲ್ಪಡುತ್ತಿದೆ. ಕ್ರೀಡಾಳುಗಳನ್ನು ಎಳವೆಯಲ್ಲೇ ಗುರುತಿಸಿ ಅವರನ್ನು ಪ್ರೋತ್ಸಾಹಿಸುವ, ಅವರಿಗೆ ಯೋಗ್ಯ ಆಹಾರ, ಶಿಕ್ಷಣ, ಮಾರ್ಗದರ್ಶನ ನೀಡುವ ವ್ಯವಸ್ಥೆ ಇಲ್ಲಿಲ್ಲ. ಕ್ರೀಡೆಗಾಗಿ ರಾಜ್ಯಗಳಿಗೆ ಹಂಚುವ ಹಣದಲ್ಲೂ ಅಸಮಾನತೆ ಎದ್ದು ಕಾಣುತ್ತಿದೆ. ರಾಜಕೀಯ ಪ್ರಾತಿನಿಧ್ಯಕ್ಕೆ ಅನುಸಾರವಾಗಿ ಹಣ ಹಂಚಿಕೆಯಾಗುತ್ತಿದೆಯೇ ಹೊರತು, ಅದರಲ್ಲಿ ಕ್ರೀಡಾ ಹಿತಾಸಕ್ತಿಯಿಲ್ಲ. ಕ್ರೀಡೆಯಲ್ಲಿ ಏನೇನು ಸಾಧನೆ ಮಾಡದ ಗುಜರಾತ್, ಕ್ರೀಡೆಗೆ ಸಂಬಂಧಿಸಿ ಹೆಚ್ಚಿನ ಅನುದಾನವನ್ನು ತನ್ನದಾಗಿಸಿಕೊಂಡರೆ, ಅತ್ಲೆಟಿಕ್‌ಗೆ ಅಪಾರ ಕೊಡುಗೆಯನ್ನು ನೀಡುತ್ತಿರುವ ಹರ್ಯಾಣದಂತಹ ರಾಜ್ಯಗಳಿಗೆ ಅಲ್ಪ ಅನುದಾನಗಳು ದೊರಕುತ್ತಿವೆ. ಹಂಚಿಕೆಯಾಗಿರುವ ಈ ಹಣವೂ ರಾಜಕಾರಣಿಗಳು, ಅಧಿಕಾರಿಗಳ ಪಾಲಾಗುವುದೇ ಹೆಚ್ಚು. ಒಲಿಂಪಿಕ್ಸ್ ಅಸೋಸಿಯೇಶನ್ ಸೇರಿದಂತೆ ಎಲ್ಲ ಕ್ರೀಡಾ ಸಂಸ್ಥೆಗಳೂ ರಾಜಕಾರಣಿಗಳ ಹಂಗಿನಿಂದ ಮುಕ್ತವಾಗಿ ಕಾರ್ಯಾಚರಿಸಿದಾಗ, ಭಾರತವೂ ಒಲಿಂಪಿಕ್ಸ್‌ನಲ್ಲಿ ಹೆಚ್ಚಿನ ಸಾಧನೆಗಳನ್ನು ಮಾಡಲು ಸಾಧ್ಯವಾದೀತು. ಕನಿಷ್ಟ ಈ ದೇಶದ ಎಲ್ಲ ಗೋಶಾಲೆಗಳನ್ನು ಮುಚ್ಚಿಸಿ, ಅದಕ್ಕೆ ಪೋಲು ಮಾಡುತ್ತಿರುವ ಹಣವನ್ನು ವಿವಿಧ ರಾಜ್ಯಗಳ ಕ್ರೀಡಾಳುಗಳನ್ನು ಪ್ರೋತ್ಸಾಹಿಸಲು ಹಂಚಿದರೂ ದೇಶ ಒಲಿಂಪಿಕ್ಸ್‌ನಲ್ಲಿ ನಾಲ್ಕೈದು ಚಿನ್ನವನ್ನು ತನ್ನದಾಗಿಸುವುದರಲ್ಲಿ ಅನುಮಾನವಿಲ್ಲ.