ರಾಜ್ಯ ಬಿಜೆಪಿಯೊಳಗೆ ನಡೆಯುತ್ತಿರುವುದು ಒಳಜಗಳವಲ್ಲ, ಆತ್ಮವಿಮರ್ಶೆ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
'ಕೊಂದ ಪಾಪ ತಿಂದು ಪರಿಹಾರ' ಗಾದೆಯನ್ನು ನಿಜಗೊಳಿಸುವ ನಿಟ್ಟಿನಲ್ಲಿ, ಬಿಜೆಪಿ ತಾನು ಕೊಂದದ್ದನ್ನು ತಾನೇ ತಿಂದು ಮುಗಿಸುವ ಸ್ಥಿತಿಗೆ ಬಂದು ತಲುಪಿದೆೆ. ವಿಧಾನಸಭಾ ಚುನಾವಣೆಯ ಭರ್ಜರಿ ಸೋಲನ್ನು 'ಕಾಂಗ್ರೆಸ್‌ನ 'ಗ್ಯಾರಂಟಿ'ಗಳ ತಲೆಗೆ ಕಟ್ಟಿ' ಪಾರಾಗುವ ಬಿಜೆಪಿ ನಾಯಕರ ಪ್ರಯತ್ನ ವಿಫಲವಾಗಿದೆ. 'ಕಾಂಗ್ರೆಸ್ ಸುಳ್ಳು ಗ್ಯಾರಂಟಿಗಳನ್ನು ನೀಡಿ ಜನರನ್ನು ವಂಚಿಸುವ ಮೂಲಕ ಅಧಿಕಾರ ಹಿಡಿಯಿತು' ಎಂದು ನಂಬಿಸುವ ಪ್ರಯತ್ನವನ್ನು ಆರಂಭದಲ್ಲಿ ನಡೆಸಿತ್ತು. ಆದರೆ ಕಾಂಗ್ರೆಸ್ ಪಕ್ಷ ನೀಡಿದ ಭರವಸೆಗಳನ್ನು ಈಡೇರಿಸಲು ಒಂದೊಂದೇ ಹೆಜ್ಜೆಗಳನ್ನು ಮುಂದಿಡುತ್ತಿದ್ದಂತೆಯೇ, ಬಿಜೆಪಿಯ ಧ್ವನಿ ಅಡಗಿತು. ಸರಕಾರ ರಚನೆಯಾಗುತ್ತಿದ್ದಂತೆಯೇ, ಡಿಕೆಶಿ-ಸಿದ್ದರಾಮಯ್ಯ ಬಣಗಳ ಕಡೆಗೆ ಕೈ ತೋರಿಸಿ ಬಿಜೆಪಿ ತನಗಾದ ಹೀನಾಯ ಸೋಲಿನ ಅವಮಾನಗಳಿಂದ ರಕ್ಷಣೆ ಪಡೆಯಲು ಹವಣಿಸಿತ್ತು. ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಸ್ಥಾನವನ್ನು ಸರಕಾರದ ವರ್ಚಸ್ಸಿಗೆ ಧಕ್ಕೆ ಬರದ ರೀತಿಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಹಂಚಿಕೊಂಡಿರುವುದು ಫಲಿತಾಂಶದ ಬಳಿಕ ಬಿಜೆಪಿಗಾದ ಇನ್ನೊಂದು ಆಘಾತವಾಗಿತ್ತು. ಕನಿಷ್ಠ ಗ್ಯಾರಂಟಿಗಳನ್ನು ಜಾರಿಗೊಳಿಸುವ ವಿಷಯದಲ್ಲಾದರೂ ಕಾಂಗ್ರೆಸ್ ಹಿಂದೇಟು ಹಾಕುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು ಬಿಜೆಪಿ ನಾಯಕರು. ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು ಬಿಜೆಪಿಗೆ ಇನ್ನೊಂದು ಆಘಾತ. ಕೊನೆಗೂ ಅವರು ವಾಸ್ತವವನ್ನು ಒಪ್ಪಿಕೊಳ್ಳಲು ಮುಂದಾದಂತಿದೆ. ಬಿಜೆಪಿಯ ಸೋಲಿಗೆ ಕಾರಣ ಹೊರಗಿಲ್ಲ, ಒಳಗೇ ಇದೆ ಎನ್ನುವುದನ್ನು ಅವರು ಮನಗಂಡು ಆತ್ಮವಿಮರ್ಶೆಗೆ ಇಳಿದಿದ್ದಾರೆ. ಆದರೆ ಮಾಧ್ಯಮಗಳ ಕಣ್ಣಿಗೆ ಮಾತ್ರ ಅದು ಕೆಸರೆರಚಾಟದಂತೆ ಕಾಣುತ್ತಿದೆ.
ಕಳೆದ ಚುನಾವಣೆಯ ಸಂದರ್ಭದಲ್ಲಿ ಆರೆಸ್ಸೆಸ್‌ನ ಬ್ರಾಹ್ಮಣ್ಯ ಲಾಬಿಗೆ ಬೊಮ್ಮಾಯಿ, ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಜಿಗುಪ್ಸೆ ಗೊಂಡಿದ್ದರು. ಬಿಜೆಪಿಯನ್ನು ಕಟ್ಟಿ ಬೆಳೆಸಿದ ನಾಯಕರನ್ನು ಮೂಲೆಗುಂಪು ಮಾಡಿ, ಆರೆಸ್ಸೆಸ್ ಹಿನ್ನೆಲೆಯಿರುವ ಬ್ರಾಹ್ಮಣ ಸಮುದಾಯದ ನಾಯಕರನ್ನು ಮುನ್ನೆಲೆಗೆ ತರುವ ಪ್ರಯತ್ನವನ್ನು ಕಂಡೂ ಕಾಣದವರಂತೆ ಅವರೆಲ್ಲ ಸಹಿಸಿದ್ದರು. ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ ಹೀನಾಯ ಸೋಲು ಆರೆಸ್ಸೆಸ್‌ನೊಳಗಿರುವ ಸಂತೋಷ್, ಜೋಶಿ ಮೊದಲಾದವರ ವೈಯಕ್ತಿಕ ಸೋಲು ಎನ್ನುವುದು ಬಿಜೆಪಿಯೊಳಗಿರುವ ಹಿರಿಯರಿಗೆ ಸ್ಪಷ್ಟವಿದೆ. ಆದುದರಿಂದಲೇ, ಬಿಜೆಪಿಯ ಯಾವ ಹಿರಿಯ ನಾಯಕರೂ ಈವರೆಗೆ ಸೋಲಿನ ಹೊಣೆಯನ್ನು ಹೊರಲು ಮುಂದಾಗಿಲ್ಲ. 'ಸೋಲಿನ ಹೊಣೆಯನ್ನು ನಾನು ಹೊರುತ್ತೇನೆ' ಎಂದು ಮಾಜಿ ಮುಖ್ಯಮಂತ್ರಿ ಬೊಮ್ಮಾಯಿಯವರು ಬಾಯಿ ಮಾತಿಗಷ್ಟೇ ಹೇಳಿದ್ದರು. ಯಡಿಯೂರಪ್ಪ ಅವರಂತೂ ಬಿಜೆಪಿ ಸೋಲಿನ ಕುರಿತಂತೆ ಯಾವ ಹೇಳಿಕೆಗಳನ್ನು ಮಾಧ್ಯಮಗಳಿಗೆ ನೀಡಿಲ್ಲ. ಅವರ ಪುತ್ರ ಸಿದ್ದರಾಮಯ್ಯ ಕುರಿತಂತೆ ಔದಾರ್ಯದ ಮಾತುಗಳನ್ನಾಡಿದರು. ಬೊಮ್ಮಾಯಿಯವರು ಸಿದ್ದರಾಮಯ್ಯರ ಜೊತೆಗೆ ಕುಶಲ ಮಾತುಕತೆ ನಡೆಸಿದರು. ಇದೆಲ್ಲವನ್ನು ಕಂಡ ಸಂಸದರೊಬ್ಬರು ''ಬಿಜೆಪಿ ನಾಯಕರು ಕಾಂಗ್ರೆಸ್ ಸರಕಾರದ ಜೊತೆಗೆ ಒಳಒಪ್ಪಂದ ಮಾಡಿಕೊಂಡಿದ್ದಾರೆ'' ಎಂದು ಮಾಧ್ಯಮಗಳಿಗೆ ಹೇಳಿಕೆಯನ್ನೂ ಕೊಟ್ಟು ಬಿಟ್ಟರು. ಇದೀಗ ಸೋಲಿನ ಹೊಣೆಯನ್ನು ಯಾರದಾದರೂ ತಲೆಗೆ ಕಟ್ಟಲೇ ಬೇಕು ಎನ್ನುವ ಅನಿವಾರ್ಯ ಸ್ಥಿತಿಗೆ ಬಂದು ನಿಂತಿದೆ ಆರೆಸ್ಸೆಸ್. ಅನ್ಯಾಯವಾಗಿ ಆ ಶಿಲುಬೆಯನ್ನು ಹೊರುವುದಕ್ಕೆ ಯಾರೂ ಸಿದ್ಧರಿದ್ದಂತೆ ಇಲ್ಲ. ಪರಿಣಾಮವಾಗಿ ಸೋಲಿನ ಬಗ್ಗೆ ಒಬ್ಬೊಬ್ಬರೇ ಬಾಯಿ ಬಿಡುತ್ತಿದ್ದಾರೆ. ಈ ಹಿಂದೆ ಬಿಜೆಪಿ ಸರಕಾರ ಅಧಿಕಾರ ಹಿಡಿದದ್ದು ಪ್ರಜಾಸತ್ತಾತ್ಮಕ ದಾರಿಯ ಮೂಲಕ ಆಗಿರಲಿಲ್ಲ. ಮೈತ್ರಿ ಸರಕಾರವನ್ನು ಉರುಳಿಸಿ, ಆಪರೇಷನ್ ಕಮಲದ ಮೂಲಕ ಶಾಸಕರನ್ನು ಕೊಂಡು ನೂತನ ಸರಕಾರವನ್ನು ರಚಿಸಿತ್ತು. ಅನೈತಿಕ ದಾರಿಯ ಮೂಲಕ ಅಧಿಕಾರ ಹಿಡಿದ ಸರಕಾರ ಅಂತಿಮವಾಗಿ ಅನೈತಿಕ ಕೆಲಸಗಳಿಗಾಗಿಯೇ ಮಾಧ್ಯಮಗಳಲ್ಲಿ ಸುದ್ದಿಯಾಗ ತೊಡಗಿತು. ಶಾಸಕರ ಅಶ್ಲೀಲ ಸಿಡಿಗಳು ಒಂದರ ಮೇಲೆ ಒಂದರಂತೆ ಬಹಿರಂಗವಾಗತೊಡಗಿದವು. ಶೇ. 40 ಕಮಿಷನ್‌ಗಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು. ಸರಕಾರದ ಲಂಚಕ್ಕೆ ಬೇಸತ್ತು ಗುತ್ತಿಗೆದಾರನೊಬ್ಬ ಸಚಿವನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ. ಜನರ ಅಭಿವೃದ್ಧಿಗಾಗಿ ಬಳಕೆಯಾಗ ಬೇಕಾದ ಹಣವನ್ನು ಸಚಿವರು, ಶಾಸಕರು ಹಾಡಹಗಲೇ ಲೂಟಿ ಮಾಡತೊಡಗಿದ್ದರು. ಬೊಮ್ಮಾಯಿ ನೇತೃತ್ವದ ಸರಕಾರದಿಂದ 'ಹಿಜಾಬ್' 'ಹಲಾಲ್-ಜಟ್ಕಾ' 'ಪಠ್ಯ ಪರಿಷ್ಕರಣೆ' 'ಗೋ ರಕ್ಷಣೆ' 'ಲವ್ ಜಿಹಾದ್' ಇವುಗಳೇ ಜನರ ಪಾಲಿಗೆ ಗ್ಯಾರಂಟಿಗಳಾದವು. ಭ್ರಷ್ಟ ಆಡಳಿತವೇ ಅಂತಿಮವಾಗಿ ಬಿಜೆಪಿ ಸರಕಾರವನ್ನು ಬಲಿತೆಗೆದುಕೊಂಡಿತು. ಅದನ್ನು ಬಿಜೆಪಿ ನಾಯಕರೇ ಮಾಧ್ಯಮಗಳ ಮೂಲಕ ಒಪ್ಪಿಕೊಳ್ಳುತ್ತಿದ್ದಾರೆ. ಆದುದರಿಂದಲೇ, ಸದ್ಯಕ್ಕೆ ರಾಜ್ಯ ಬಿಜೆಪಿಯೊಳಗೆ ನಡೆಯುತ್ತಿರುವುದು ಒಳಜಗಳವಲ್ಲ. ಅಧಿಕಾರ ಕೈಯಲ್ಲಿದ್ದಾಗ ತಾವು ಮಾಡಿದ ಪ್ರಮಾದಗಳನ್ನು ಕೆಲವು ನಾಯಕರು ಒಪ್ಪಿಕೊಳ್ಳುವ ಧೈರ್ಯ ಮಾಡುತ್ತಿದ್ದಾರೆ. ಇದು ಬಿಜೆಪಿಯ ಪಾಲಿಗೆ ಒಳ್ಳೆಯ ನಡೆಯೇ ಆಗಿದೆ.
''ಯಡಿಯೂರಪ್ಪರನ್ನು ಅಧಿಕಾರದಿಂದ ಅನ್ಯಾಯವಾಗಿ ಕೆಳಗಿಳಿಸಿದ್ದೇ ಸೋಲಿಗೆ ಕಾರಣ'' ಎಂದು ರೇಣುಕಾಚಾರ್ಯ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಹಾಗೆಯೇ ಚುನಾವಣೆಯಲ್ಲಿ ಹಿರಿಯ ನಾಯಕರಿಗೆ ಟಿಕೆಟ್ ನೀಡುವಾಗ ಮಾಡಿರುವ ಅನ್ಯಾಯವೂ ಸೋಲಿಗೆ ಕಾರಣ ಎಂದಿದ್ದಾರೆ. ಅವರು ನಿಜವನ್ನೇ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಈಶ್ವರಪ್ಪನವರು 'ಸೋಲಿನ ಹೊಣೆಯನ್ನು ವಲಸಿಗರ ತಲೆಗೆ' ಕಟ್ಟಲು ಯತ್ನಿಸಿದ್ದಾರೆ. ಅದು ಕೂಡ ನಿಜವೇ. ಆದರೆ, ಈ ವಲಸಿಗರಿಲ್ಲದೇ ಇದ್ದರೆ ಬಿಜೆಪಿ ಕಳೆದ ಬಾರಿ ಸರಕಾರ ರಚನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈಶ್ವರಪ್ಪ ಅವರಿಗೆ ಶೇ. 40 ಕಮಿಷನ್ ಹೊಡೆಯುವುದೂ ಸಾಧ್ಯವಾಗುತ್ತಿರಲಿಲ್ಲ. ಕೆಲವರಂತೂ ಪರೋಕ್ಷವಾಗಿ ಆರೆಸ್ಸೆಸ್ ಕಡೆಗೆ ಕೈ ತೋರಿಸಿದ್ದಾರೆ. ಬಿಜೆಪಿಯ ಆತ್ಮವಿಮರ್ಶೆ ಇಲ್ಲಿಗೆ ಮುಗಿಯುವ ಲಕ್ಷಣವಿಲ್ಲ. ಹಿರಿಯ ಲಿಂಗಾಯತ ನಾಯಕರನ್ನೆಲ್ಲ ಹೊರಗಿಟ್ಟು ಆ ಜಾಗಕ್ಕೆ ಆರೆಸ್ಸೆಸ್ ಹಿನ್ನೆಲೆಯಿರುವ ನಾಯಕರನ್ನು ಮುನ್ನೆಲೆಗೆ ತರುವ ಆರೆಸ್ಸೆಸ್‌ನ 'ಆಪರೇಷನ್' ಮುಂದುವರಿದಿದೆ. ಕಾಂಗ್ರೆಸ್‌ನ ಅಭಿವೃದ್ಧಿ ರಾಜಕಾರಣಕ್ಕೆ ಎದುರಾಗಿ, ದ್ವೇಷ ರಾಜಕಾರಣವನ್ನು ನಿಲ್ಲಿಸುವುದಕ್ಕಾಗಿ ಅದು ಯೋಗ್ಯ ಶೂದ್ರ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಶೂದ್ರರ ಬೆನ್ನ ಮೇಲೆ ಕೋವಿಯಿಟ್ಟು ಅಧಿಕಾರದ ಬೇಟೆಯಾಡುವುದು ಆರೆಸ್ಸೆಸ್ ತಂತ್ರ. ಅದೀಗ ತುರ್ತಾಗಿ ಹರಕುವ ಬಾಯಿಯ ಶೂದ್ರ ನಾಯಕನ ಹುಡುಕಾಟದಲ್ಲಿದೆ. ಆದರೆ ಆರೆಸ್ಸೆಸ್‌ನ ಈ ಪ್ರಯತ್ನ ಭವಿಷ್ಯದಲ್ಲಿ ಬಿಜೆಪಿಯನ್ನು ರಾಜ್ಯದಲ್ಲಿ ಇನ್ನಷ್ಟು ಹೀನಾಯ ಸ್ಥಿತಿಗೆ ತಂದು ನಿಲ್ಲಿಸಲಿದೆ. ಆರೆಸ್ಸೆಸ್‌ನ ತಂತ್ರ ಆರೆಸ್ಸೆಸ್‌ಗೇ ತಿರುಗುಬಾಣವಾಗಲಿದೆ.