ಭಾರತಕ್ಕೆ ಯಾವುದು ಅವಮಾನಕರ?

PC: x.com/TimesAlgebraIND
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ತನ್ನ ದೇಶದೊಳಗೆ ಅಕ್ರಮವಾಗಿ ವಾಸಿಸುತ್ತಿರುವ ಭಾರತೀಯರ ಮೊದಲ ತಂಡವನ್ನು ಅಮೆರಿಕದ ಸೇನಾ ವಿಮಾನವು ಅಮೃತಸರದಲ್ಲಿ ತಂದಿಳಿಸಿದ್ದು, ಎರಡನೆಯ ಬಾರಿಗೆ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ತನ್ನ ಸ್ನೇಹಿತ ನರೇಂದ್ರ ಮೋದಿಯವರಿಗೆ ಈ ಮೂಲಕ, ತನ್ನ ಮೊದಲ ಉಡುಗೊರೆಯನ್ನು ಕಳುಹಿಸಿಕೊಟ್ಟಂತಾಗಿದೆ. ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ‘ತನ್ನ ಮಿತ್ರ’ ಎಂದು ಬಹಿರಂಗ ಸಮಾವೇಶದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸ್ವಯಂಘೋಷಿಸಿಕೊಂಡಿದ್ದರು. ಕೊರೋನ ಕಾಲದಲ್ಲಿ ಸಾಂಕ್ರಾಮಿಕ ವೈರಸ್ನ್ನು ಕಡೆಗಣಿಸಿ ತನ್ನ ಮಿತ್ರನಿಗಾಗಿ ಗುಜರಾತ್ನಲ್ಲಿ ಮೋದಿ ‘ನಮಸ್ತೆ ಟ್ರಂಪ್’ ಸಮಾವೇಶವನ್ನು ಹಮ್ಮಿಕೊಂಡಿದ್ದರು. 2020ರಲ್ಲಿ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಅಮೆರಿಕಕ್ಕೆ ಪ್ರವಾಸಗೈದು, ಅನಿವಾಸಿ ಭಾರತೀಯರ ಸಮಾವೇಶದಲ್ಲಿ ಗೆಳೆಯನ ಪರವಾಗಿ ‘ಅಬ್ ಕಿ ಬಾರ್ ಟ್ರಂಪ್ ಸರಕಾರ್’ ಎಂದು ಪ್ರಚಾರ ನಡೆಸಿ ಮೋದಿಯವರು ಭಾರತವನ್ನು ಮುಜುಗರಕ್ಕೆ ಸಿಲುಕಿಸಿದ್ದರು. ಇದೀಗ ಎರಡನೇ ಬಾರಿ ಅಧ್ಯಕ್ಷರಾದ ಬೆನ್ನಿಗೇ ಡೊನಾಲ್ಡ್ ಟ್ರಂಪ್, ಭಾರತದ ಮಿತ್ರನಿಗೆ ತನ್ನ ಸೇನಾ ವಿಮಾನದಲ್ಲಿ ಮೊದಲ ಉಡುಗೊರೆಯನ್ನು ರವಾನಿಸಿ ತನ್ನ ಋಣ ಸಂದಾಯ ಮಾಡಿದ್ದಾರೆ. ಅಮೆರಿಕವು 100ಕ್ಕೂ ಅಧಿಕ ಅಕ್ರಮ ವಲಸಿಗರನ್ನು ಭಾರತಕ್ಕೆ ರವಾನಿಸಿದ್ದು, ಅವರ ಕೈ ಮತ್ತು ಕಾಲುಗಳಿಗೆ ಕೋಳಗಳನ್ನು ಹಾಕಿ ಬಂಧಿಸಿ ಅಮಾನವೀಯವಾಗಿ ನಡೆಸಿಕೊಂಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಇದು ಭಾರತಕ್ಕೆ ಮಾಡಿದ ಭಾರೀ ಅಪಮಾನವೆಂದು ವಿರೋಧ ಪಕ್ಷಗಳ ನಾಯಕರು ಟೀಕಿಸುತ್ತಿದ್ದಾರೆ.
ಅತ್ಯಂತ ಅಮಾನವೀಯವಾಗಿ ಅಮೆರಿಕದಿಂದ ಭಾರತಕ್ಕೆ ಗಡಿಪಾರು ಮಾಡಲ್ಪಟ್ಟ ಹಲವು ಅಕ್ರಮ ವಲಸಿಗರು ತಮ್ಮ ಅನುಭವಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ಪಂಜಾಬಿನ ಹೋಷಿಯಾರ್ ಪುರದ ತಹ್ಲಿ ಗ್ರಾಮದ ನಿವಾಸಿಯೊಬ್ಬರು ‘‘ನನ್ನೊಂದಿಗೆ ವಿಮಾನದಲ್ಲಿದ್ದ ಎಲ್ಲರ ಕೈಗಳಿಗೆ ಕೋಳಗಳನ್ನು ಮತ್ತು ಕಾಲುಗಳಿಗೆ ಸಂಕೋಲೆಗಳನ್ನು ತೊಡಿಸಲಾಗಿತ್ತು ಮತ್ತು ಪ್ರಯಾಣದುದ್ದಕ್ಕೂ ಆಸನಗಳಲ್ಲಿಯೇ ಕುಳಿತಿರಬೇಕಾಯಿತು. ದಮ್ಮಯ್ಯ ಗುಡ್ಡೆ ಹಾಕಿದ ಬಳಿಕ ವಾಷ್ರೂಮ್ಗೆ ಕೈಕೋಳಗಳ ಜೊತೆಗೇ ತೆರಳಲು ಅವಕಾಶ ನೀಡಲಾಯಿತು. ಈ ಸಂದರ್ಭದಲ್ಲಿ ನಮ್ಮೊಂದಿಗೆ ತುಂಬಾ ಕೆಟ್ಟದಾಗಿ ವರ್ತಿಸಿದ್ದರು. ಕೈಕೋಳಗಳ ಜೊತೆಗೇ ಊಟ ಮಾಡಬೇಕಾಯಿತು’’ ಎಂದು ತಮ್ಮ ದಯನೀಯ ಸ್ಥಿತಿಯನ್ನು ಹಂಚಿಕೊಂಡಿದ್ದಾರೆ. ಅಮೆರಿಕ ಭಾರತದ ಪಾಲಿಗೆ ಯಾವತ್ತೂ ಮಿತ್ರ ದೇಶವಾಗಿರಲಿಲ್ಲ. ಅದು ತನ್ನ ಹಿತಾಸಕ್ತಿಯನ್ನು ಮರೆತು ಯಾವತ್ತೂ ಭಾರತದೊಂದಿಗೆ ಸ್ನೇಹಹಸ್ತವನ್ನು ಜೋಡಿಸಿರಲಿಲ್ಲ. ಅಮೆರಿಕದ ಸ್ನೇಹಕ್ಕೆ ಹಂಬಲಿಸಿದ ಅಭಿವೃದ್ಧಿ ಶೀಲ ದೇಶಗಳ ಸ್ಥಿತಿ ಏನಾಗಿದೆ ಎನ್ನುವುದನ್ನು ನಾವು ನೋಡುತ್ತಲೇ ಬಂದಿದ್ದೇವೆ. ಅದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ನೆರೆಯ ಪಾಕಿಸ್ತಾನ ನಮ್ಮ ಕಣ್ಣೆದುರಿಗಿದೆ. ಭಾರತವು ತನ್ನ ಹಿತಾಸಕ್ತಿಯನ್ನು ಬಿಟ್ಟುಕೊಡದೆ ರಶ್ಯ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳ ಜೊತೆಗೆ ಸಂಬಂಧಗಳನ್ನು ಬೆಸೆದಿರುವುದು, ಅಮೆರಿಕದ ಹಿತಾಸಕ್ತಿಗೆ ಪೂರಕವಾಗಿ ಮಾರುಕಟ್ಟೆಗಳನ್ನು ತೆರೆದುಕೊಡದೇ ಇರುವುದು ಟ್ರಂಪ್ನನ್ನು ಕೆರಳಿಸಿದೆ. ಈಗಾಗಲೇ ಅಮೆರಿಕದ ಉತ್ಪನ್ನಗಳಿಗೆ ವಿಧಿಸಿದ ಸುಂಕಗಳಿಗೆ ಸಂಬಂಧಿಸಿ ಚೀನಾ, ಭಾರತದಂತಹ ದೇಶಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಅಮೆರಿಕದ ಅಕ್ರಮ ವಲಸೆಗಾರರನ್ನು ಹೊರದಬ್ಬುವ ಹೆಸರಿನಲ್ಲಿ ಅಲ್ಲಿನ ಸರಕಾರ ನಡೆಸುತ್ತಿರುವ ಪ್ರಹಸನಗಳು ಭಾರತದ ಮೇಲೆ ಹೇರುತ್ತಿರುವ ಪರೋಕ್ಷ ಒತ್ತಡವೇ ಆಗಿದೆ. ಭಾರತದ ಎಲ್ಲ ಹಿತಾಸಕ್ತಿಗಳನ್ನು ಬದಿಗಿಟ್ಟು ಅಮೆರಿಕವನ್ನು ಓಲೈಸಲು ಅತ್ಯಂತ ಕೆಳಮಟ್ಟಕ್ಕೆ ಪ್ರಧಾನಿ ಮೋದಿಯವರು ಇಳಿದ ಪರಿಣಾಮವನ್ನು ಇಂದು ಭಾರತ ಅನುಭವಿಸುತ್ತಿದೆ. ಒಂದು ರೀತಿಯಲ್ಲಿ ಈ ಅವಮಾನಗಳನ್ನೆಲ್ಲವನ್ನು ಪ್ರಧಾನಿ ಮೋದಿಯವರು ಬೇಡಿ ಪಡೆದುಕೊಂಡದ್ದಾಗಿದೆ.
ಅಕ್ರಮ ವಲಸಿಗರ ರವಾನೆಯ ಸಂದರ್ಭದಲ್ಲಿ ಕೈಕೋಳ ಕಟ್ಟಿರುವುದನ್ನೇ ಭಾರತಕ್ಕೆ ತೀವ್ರ ಅವಮಾನವಾಗಿದೆ ಎಂದು ವಿರೋಧ ಪಕ್ಷದ ನಾಯಕರು ಟೀಕಿಸುತ್ತಿದ್ದಾರೆ. ಅಕ್ರಮವಲಸಿಗರನ್ನು ಅಮೆರಿಕ ನಡೆಸುತ್ತಿರುವ ರೀತಿಯನ್ನು ಟೀಕಿಸುವ ಯಾವ ನೈತಿಕ ಹಕ್ಕನ್ನೂ ಭಾರತ ಹೊಂದಿಲ್ಲ. ಭಾರತ ಅಕ್ರಮ ವಲಸಿಗರ ವಿಷಯದಲ್ಲಿ ಇದಕ್ಕಿಂತಲೂ ಕೇವಲವಾಗಿ ವರ್ತಿಸಿದೆ ಮತ್ತು ವರ್ತಿಸುತ್ತಿದೆ. ತಲೆತಲಾಂತರಗಳಿಂದ ಭಾರತದಲ್ಲಿ ವಾಸಿಸುತ್ತಿರುವ ಭಾರತೀಯ ಪ್ರಜೆಗಳಿಂದಲೇ ಅವರ ಪೌರತ್ವವನ್ನು ಕಿತ್ತುಕೊಂಡು ಅವರಿಗೆ ಮಾಡುತ್ತಿರುವ ಅವಮಾನಗಳ ಮುಂದೆ ಟ್ರಂಪ್ ವರ್ತನೆ ಏನೇನು ಅಲ್ಲ. ಈ ಕಾರಣಕ್ಕಾಗಿಯೇ ಪ್ರಧಾನಿ ಮೋದಿಯವರ ಬಾಯಿ ಕಟ್ಟಿದೆ. ಈಶಾನ್ಯ ರಾಜ್ಯಗಳಲ್ಲಿ ಎನ್ಆರ್ಸಿ ಹೆಸರಿನಲ್ಲಿ ಈಗಲೂ ನೂರಾರು ಜನರು ದಿಗ್ಬಂಧನ ಕೇಂದ್ರದಲ್ಲಿ ಕಾಲ ಕಳೆಯುತ್ತಿದ್ದಾರೆ. ಏಳೆಂಟು ದಶಕಗಳಿಂದ ಭಾರತದಲ್ಲಿ ನೆಲೆಸಿದವರಿಂದಲೂ ಬೇರೆ ಬೇರೆ ನೆಪ ತೆಗೆದು, ಅವರ ಪೌರತ್ವವನ್ನು ಅನುಮಾನಿಸಿ ದಿಗ್ಬಂಧನ ಕೇಂದ್ರಕ್ಕೆ ತಳ್ಳಲಾಗಿದೆ. ರೊಹಿಂಗ್ಯಾ ನಿರಾಶ್ರಿತರ ಕುರಿತಂತೆಯೂ ಭಾರತ ಅತ್ಯಂತ ಹೀನಾಯವಾಗಿ ನಡೆದುಕೊಳ್ಳುತ್ತಿದೆ. ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಲು ಪ್ರಯತ್ನಿಸಿದ ಯಾರೂ ಭಾರತದಲ್ಲಿ ಹಿಂಸೆ, ದಂಗೆ ಅಥವಾ ಪ್ರಕೃತಿ ವಿಕೋಪದಿಂದ ನಿರಾಶ್ರಿತರಾದವರು ಅಲ್ಲ ಎನ್ನುವ ಅಂಶವನ್ನು ಗಮನಿಸಬೇಕಾಗಿದೆ. ಇವರೆಲ್ಲರೂ ಭಾರತದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಆರ್ಥಿಕ ಬಿಕ್ಕಟ್ಟು ಇವುಗಳಿಂದ ರೋಸಿ ಅಮೆರಿಕದಲ್ಲಿ ಅತ್ಯುತ್ತಮ ಜೀವನ ನಡೆಸುವ ಕನಸು ಕಾಣುತ್ತಾ ಭಾರತದಿಂದ ಪಲಾಯನಗೈದವರು. ಅಮೆರಿಕದಲ್ಲಿ ಸುಖದ ಬದುಕಿನ ಲಾಲಸೆಗಾಗಿ ತೆರಳಿದವರು. ಇವರಲ್ಲಿ ಬಹುಸಂಖ್ಯಾತರು ಗುಜರಾತ್ ಮತ್ತು ಪಂಜಾಬಿಗೆ ಸೇರಿದವರು. ಅವರಲ್ಲೂ ಬಹುಸಂಖ್ಯಾತರು ಮೇಲ್ಜಾತಿಗೆ ಸೇರಿದವರಾಗಿದ್ದಾರೆ. ಅಮೆರಿಕ ಇಂದು ಅಕ್ರಮವಾಗಿ ಹೊರ ಹಾಕುತ್ತಿರುವವರಲ್ಲಿ ದಲಿತರು, ದುರ್ಬಲ ಸಮುದಾಯಕ್ಕೆ ಸೇರಿದವರಿಲ್ಲ. ಈ ದೇಶದಲ್ಲಿ ತಲೆತಲಾಂತರಗಳಿಂದ ಜಾತೀಯತೆ, ಅಸಮಾನತೆಯ ಹಿಂಸೆಯನ್ನು ಅನುಭವಿಸುತ್ತಿರುವ ಹೊತ್ತಿನಲ್ಲೂ ದುರ್ಬಲ ಜಾತಿಗೆ ಸೇರಿದ ಜನರು ದೇಶ ತೊರೆಯುವ ಪ್ರಯತ್ನವನ್ನು ಮಾಡಿರಲಿಲ್ಲ ಎನ್ನುವುದನ್ನು ನಾವು ಗಮನಿಸಬೇಕಾಗಿದೆ.
ಶ್ರೀಮಂತ ದೇಶಗಳ ಪೌರತ್ವ ಗಳಿಸುವವರಲ್ಲಿ ಭಾರತೀಯರೇ ಮುಂಚೂಣಿಯಲ್ಲಿದ್ದಾರೆ ಎನ್ನುವ ಅಂಶವನ್ನು ‘ಅಂತರ್ರಾಷ್ಟ್ರೀಯ ವಲಸೆ ಮುನ್ನೋಟ-2023’ರ ಸಮೀಕ್ಷೆ ತಿಳಿಸುತ್ತದೆ. ಕೆನಡಾದಲ್ಲಿ ಪೌರತ್ವ ನೀಡುವಿಕೆಯು 2021ಮತ್ತು 2022 ನಡುವೆ ಶೇ. 174ರಷ್ಟು ಏರಿಕೆಯಾಗಿದೆ. 2022ರಲ್ಲಿ ಒಇಸಿಡಿ ದೇಶಗಳ ಪೌರತ್ವವನ್ನು ಪಡೆದ ದೇಶಗಲ್ಲಿ ಭಾರತ ನಂ. 1 ಆಗಿ ಗುರುತಿಸಲ್ಪಟ್ಟಿತ್ತು. ಕಳೆದ ಹತ್ತು ವರ್ಷಗಳಲ್ಲಿ ಅಂದರೆ ಮೋದಿ ಆಳ್ವಿಕೆಯ ಕಾಲದಲ್ಲಿ ವಿದೇಶಗಳ ಪೌರತ್ವ ಆಕಾಂಕ್ಷಿಗಳ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ನಿಜಕ್ಕೂ ಭಾರತಕ್ಕೆ ಅವಮಾನಕರ ವಿಷಯ ಇದಾಗಿದೆ. ಈ ದೇಶದ ಮೇಲೆ ಭರವಸೆಯನ್ನು ಕಳೆದುಕೊಂಡು ಅಕ್ರಮವಾಗಿಯಾದರೂ ಅಮೆರಿಕದಂತಹ ದೇಶದಲ್ಲಿ ಬದುಕಬೇಕು ಎಂದು ಬಯಸುವ ನಾಗರಿಕರೇ ಈ ದೇಶದ ಪಾಲಿನ ಅತಿ ದೊಡ್ಡ ಅವಮಾನವಾಗಿದ್ದಾರೆ. ಅಂತಹ ನಾಗರಿಕರನ್ನು ಕಳೆದ ಹತ್ತು ವರ್ಷಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸೃಷ್ಟಿಸಿದ ಹೆಮ್ಮೆ ನರೇಂದ್ರ ಮೋದಿ ಸರಕಾರಕ್ಕೆ ಸೇರಬೇಕು. ನಾವಿಂದು ಈ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಬೇಕೇ ಹೊರತು, ಕೈಕೋಳ ಹಾಕಿದ ಕಾರಣಕ್ಕಾಗಿಯಲ್ಲ. ಅವರನ್ನು ಅಮೆರಿಕ ಹಾರ ಹಾಕಿ ಕಳುಹಿಸಬೇಕು ಎಂದು ನಿರೀಕ್ಷಿಸುವುದು ಕೂಡ ಸರಿಯಲ್ಲ. ಯಾಕೆಂದರೆ ಅವರ್ಯಾರೂ ಯುದ್ಧ, ದಂಗೆ, ಪ್ರಕೃತಿ ವಿಕೋಪದ ಅಸಹಾಯಕ ಸಂತ್ರಸ್ತರು ಅಲ್ಲ.
‘ಪ್ಯೂ’ ಅಧ್ಯಯನದಂತೆ ಅಮೆರಿಕದಲ್ಲಿ ಈಗಲೂ 6 ಲಕ್ಷಕ್ಕೂ ಅಧಿಕ ಅಕ್ರಮ ವಲಸಿಗರು ನೆಲೆಸಿದ್ದಾರೆ. ಯಾವ ಗುಜರಾತ್ನ್ನು ಅಭಿವೃದ್ಧಿಗೆ ಮಾದರಿಯೆಂದು ಸರಕಾರ ಬಿಂಬಿಸುತ್ತಿದೆಯೋ ಅದೇ ಗುಜರಾತ್ನ ದೊಡ್ಡ ಸಂಖ್ಯೆಯ ಜನರು ಈ ಅಕ್ರಮ ವಲಸಿಗರ ಪಟ್ಟಿಯಲ್ಲಿದ್ದಾರೆ. ಅಕ್ರಮ ವಲಸಿಗರಲ್ಲ 18,000 ಜನರನ್ನು ಹೊರದಬ್ಬಲು ಈಗಾಗಲೇ ಅಮೆರಿಕ ಸಿದ್ಧತೆ ನಡೆಸಿದೆ. ಉಳಿದವರನ್ನು ಹಂತಹಂತವಾಗಿ ಹೊರದಬ್ಬುವ ಯೋಜನೆಯನ್ನು ಹಾಕಿಕೊಂಡಿದೆ. ಇಷ್ಟು ಪ್ರಮಾಣದಲ್ಲಿ ಜನರು ಬೇರೆ ದೇಶದ ಪೌರತ್ವದ ಆಸೆಯಲ್ಲಿ ಭಾರತವನ್ನು ಯಾಕೆ ತೊರೆದು ಹೋದರು ಎನ್ನುವುದರ ಬಗ್ಗೆ ಈಗ ಚರ್ಚೆ ನಡೆಯಬೇಕೇ ಹೊರತು, ಅಮೆರಿಕ ಹಾಕಿದ ಕೈಕೋಳಗಳಲ್ಲ.