ಇದೇನ ಸಂಸ್ಕೃತಿ?
PC: fb.com
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ನೂಲಿನಂತೆ ಸೀರೆ ಎನ್ನುವ ಮಾತಿದೆ. ದಿಲ್ಲಿಯ ಸಂಸತ್ನಲ್ಲಿ ಬಿಜೆಪಿ ನಾಯಕ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿ ಸುದ್ದಿಯಲ್ಲಿರುವ ಹೊತ್ತಿನಲ್ಲೇ, ಇತ್ತ ಬೆಳಗಾವಿಯ ಅಧಿವೇಶನದಲ್ಲಿ ಬಿಜೆಪಿ ನಾಯಕರೊಬ್ಬರು ಸದನದಲ್ಲಿ ಸಚಿವೆಯೊಬ್ಬರ ಬಗ್ಗೆ ಅವಾಚ್ಯ ಮಾತನಾಡಿ ಬಂಧನಕ್ಕೊಳಗಾಗಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ರನ್ನು ಅವಮಾನಿಸಿರುವುದನ್ನು ಸಮರ್ಥಿಸುವ ಭರದಲ್ಲಿ ಬಿಜೆಪಿಯ ಮುಖಂಡ, ಶಾಸಕ ಸಿ. ಟಿ. ರವಿ ಅವರು ಲಕ್ಷ್ಮೀ ಹೆಬ್ಬಾಳ್ಕಕರ್ ವಿರುದ್ಧ ಮಾನಹಾನಿ ಪದ ಬಳಸಿದ್ದಾರೆ. ಅಮಿತ್ ಶಾ ನಡವಳಿಕೆಯನ್ನು ಆಡಳಿತ ಪಕ್ಷದ ನಾಯಕರು ಖಂಡಿಸಿದಾಗ, ಸಿ. ಟಿ. ರವಿ ಅವರು ರಾಹುಲ್ ಗಾಂಧಿಯನ್ನು ‘ಮಾದಕ ವ್ಯಸನಿ’ ಎಂದು ನಿಂದಿದ್ದಾರೆ. ಇದು ಸಹಜವಾಗಿಯೇ ಆಡಳಿತ ಪಕ್ಷದ ನಾಯಕರನ್ನು ಕೆರಳಿಸಿದೆ. ಈ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ‘‘ಮಾದಕ ವ್ಯಸನಿ ಯಾರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಚಿಕ್ಕಮಗಳೂರಿನಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸಿ ಇಬ್ಬರು ಯುವಕರ ಸಾವಿಗೆ ಕಾರಣರಾದವರು ಯಾರು ಎನ್ನುವುದು ಗೊತ್ತಿದೆ’’ ಎಂಬರ್ಥದಲ್ಲಿ ಪ್ರತಿ ಆರೋಪ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಸಿ. ಟಿ. ರವಿ, ಸಚಿವೆಯನ್ನು ‘ಅವಾಚ್ಯ ಶಬ್ದ’ದಿಂದ ಕರೆದಿದ್ದಾರೆ. ಇದು ವೀಡಿಯೊಗಳಲ್ಲೂ ದಾಖಲಾಗಿದ್ದು, ರವಿ ವಿರುದ್ಧ ಎಫ್ಐಆರ್ ದಾಖಲಾಗಿದೆ ಮಾತ್ರವಲ್ಲ, ಅವರ ಬಂಧನವೂ ಆಗಿದೆ. ನಾಡಿನ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಯಬೇಕಾದ ಸ್ಥಳದಲ್ಲಿ ಆಡಬಾರದ್ದನ್ನು ಆಡಿ ಸದನದ ದಾರಿ ತಪ್ಪಿಸಿದ್ದು ಮಾತ್ರವಲ್ಲ, ಅದಕ್ಕಾಗಿ ಶಾಸಕರು ಜೈಲು ಸೇರಿರುವುದು ನಿಜಕ್ಕೂ ಪ್ರಜಾಸತ್ತೆಯ ದುರಂತವೇ ಆಗಿದೆ.
ಅಂಬೇಡ್ಕರ್ ಬಗ್ಗೆ ಆಡಿದ ಮಾತುಗಳಿಗಾಗಿ ಗೃಹ ಸಚಿವ ಅಮಿತ್ ಶಾ ತಕ್ಷಣವೇ ಕ್ಷಮೆಯಾಚಿಸುತ್ತಿದ್ದಿದ್ದರೆ ಪರಿಸ್ಥಿತಿ ಇಷ್ಟೊಂದು ವಿಷಮಿಸುತ್ತಿರಲಿಲ್ಲವೇನೋ. ಇದು ದಿಲ್ಲಿಯ ಸಂಸತ್ನಲ್ಲಿ ಗುರುವಾರ ಪ್ರತಿಭಟನೆ ತಳ್ಳಾಟಗಳಿಗೆ ಕಾರಣವಾಗಿದೆ. ಅಷ್ಟೇ ಅಲ್ಲ, ಅಮಿತ್ ಶಾ ವಿರುದ್ಧದ ಆಕ್ರೋಶ ಇತರ ರಾಜ್ಯಗಳಿಗೂ ವ್ಯಾಪಿಸಿದೆ. ಇದೇ ಸಂದರ್ಭದಲ್ಲಿ ತಮ್ಮ ನಾಯಕನನ್ನು ಸಮರ್ಥಿಸಲು ಹೋಗಿ ರಾಜ್ಯಗಳಲ್ಲಿ ಬಿಜೆಪಿಯ ನಾಯಕರೂ ಇನ್ನಷ್ಟು ಪಾತಾಳಕ್ಕೆ ಇಳಿಯುತ್ತಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಅಂಬೇಡ್ಕರ್ಗೆ ನಡೆದಿರುವ ಅವಮಾನವನ್ನು ಕಾಂಗ್ರೆಸ್ ನಾಯಕರು ತೀವ್ರವಾಗಿ ವಿರೋಧಿಸಿದ್ದರು. ಸದನದಲ್ಲಿ ಅಂಬೇಡ್ಕರ್ ಭಾವಚಿತ್ರಗಳು ಎಲ್ಲೆಡೆಯೂ ರಾರಾಜಿಸುತ್ತಿದ್ದವು. ಇಂತಹ ಸಂದರ್ಭದಲ್ಲಿ ಬಿಜೆಪಿಯ ಮುಖಂಡರು ಅತ್ಯಂತ ಪ್ರಬುದ್ಧತೆಯಿಂದ, ಮುತ್ಸದ್ದಿತನದಿಂದ ವರ್ತಿಸಬೇಕಾಗಿತ್ತು. ಯಾಕೆಂದರೆ, ಕಾಂಗ್ರೆಸ್ ನಾಯಕರು ಅಂಬೇಡ್ಕರ್ರನ್ನು ಗುರಾಣಿಯಾಗಿಟ್ಟುಕೊಂಡು ಬಿಜೆಪಿಯ ಮೇಲೆ ದಾಳಿ ನಡೆಸುತ್ತಿದ್ದರು. ಬಿಜೆಪಿ ನಡೆಸುವ ಯಾವುದೇ ಪ್ರತಿದಾಳಿಗೆ ಮೊದಲು ಬಲಿಯಾಗುವುದು ಅಂಬೇಡ್ಕರ್. ಇದು ಪರಿಸ್ಥಿತಿಯನ್ನು ಬಿಜೆಪಿ ಪಾಲಿಗೆ ಇನ್ನಷ್ಟು ಕೆಟ್ಟದಾಗಿಸಬಹುದು. ವಿಪರ್ಯಾಸವೆಂದರೆ, ಕಾಂಗ್ರೆಸಿಗರು ತೋಡಿದ ಖೆಡ್ಡಾಕ್ಕೆ ಬಿಜೆಪಿ ನಾಯಕರು ಸುಲಭದಲ್ಲಿ ಹೋಗಿ ಬಿದ್ದರು. ಆದುದರಿಂದಲೇ ಅವರು ತಮ್ಮ ನಾಯಕರು ಬಳಸಿರುವುದಕ್ಕಿಂತ ಕೆಟ್ಟ ಭಾಷೆಯಲ್ಲಿ ಸಮರ್ಥಿಸಿಕೊಳ್ಳಲು ಮುಂದಾದರು. ಈ ಮೂಲಕ ತಮ್ಮ ಅಂತರಂಗ, ಬಹಿರಂಗವನ್ನು ದೇಶದ ಮುಂದೆ ತೆರೆದಿಟ್ಟರು.
ರಾಹುಲ್ ಗಾಂಧಿಯನ್ನು ‘ಮಾದಕ ವ್ಯಸನಿ’ ಎಂದು ಕರೆದಾಕ್ಷಣ ಅಂಬೇಡ್ಕರ್ ಕುರಿತಂತೆ ಅಮಿತ್ ಶಾ ಆಡಿದ ಮಾತುಗಳು ಸಮರ್ಥನೀಯವಾಗುವುದಿಲ್ಲ. ಎರಡೂ ಬೇರೆ ಬೇರೆ ವಿಷಯಗಳು. ಅಂಬೇಡ್ಕರ್ ಈ ದೇಶವನ್ನು ರೂಪಿಸಿದವರು. ಅವರು ಬರೆದ ಸಂವಿಧಾನದ ಮಾರ್ಗದರ್ಶನದಲ್ಲಿ ಪ್ರಜಾಸತ್ತೆ ಮುನ್ನಡೆಯುತ್ತಿದೆ. ಇಷ್ಟಕ್ಕೂ ರಾಹುಲ್ ಗಾಂಧಿ ಮಾದಕ ವ್ಯಸನಿ ಎಂದು ಸಿ.ಟಿ. ರವಿ ಯಾವ ಆಧಾರದಲ್ಲಿ ಆರೋಪಿಸಿದ್ದಾರೆ? ರಾಹುಲ್ ಡ್ರಗ್ಸ್ ಸೇವಿಸಿದ ಕುರಿತಂತೆ ಎಲ್ಲಾದರೂ ದೂರುಗಳು ದಾಖಲಾಗಿವೆಯೆ? ಆ ಬಗ್ಗೆ ಅವರಲ್ಲಿ ಯಾವುದಾದರೂ ಸಾಕ್ಷ್ಯಗಳು ಇವೆಯೆ? ಅಂತಹದು ಇಲ್ಲ ಎಂದಾದರೆ, ರಾಹುಲ್ಗಾಂಧಿಯ ವಿರುದ್ಧ ಮಾಡಿರುವ ಆರೋಪಕ್ಕೆ ಪ್ರತ್ಯೇಕವಾಗಿ ದೂರು ಸಲ್ಲಿಸುವ ಅವಕಾಶ ಕಾಂಗ್ರೆಸಿಗರಿಗಿದೆ. ಇದೇ ಸಂದರ್ಭದಲ್ಲಿ, ರಾಹುಲ್ ವಿರುದ್ಧ ಮಾಡಿದ ಆರೋಪಕ್ಕೆ ಪ್ರತಿಯಾಗಿ ‘ಚಿಕ್ಕಮಗಳೂರು ಸಮೀಪ ಮಾಜಿ ಸಚಿವ ಸಿ.ಟಿ. ರವಿ ಅವರು ವಾಹನ ಅಪಘಾತವೊಂದರಲ್ಲಿ ಇಬ್ಬರು ಯುವಕರ ಸಾವಿಗೆ ಕಾರಣವಾದ ಪ್ರಕರಣ’ವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಸ್ತಾಪಿಸಿದ್ದಾರೆ. ಈ ಆರೋಪದಲ್ಲಿ ಕೆಲವು ಸತ್ಯಗಳಿವೆೆ. ಅಂದು ಅಪಘಾತಕ್ಕೀಡಾದ ವಾಹನದಲ್ಲಿ ಬಿಜೆಪಿ ಮುಖಂಡ ಸಿ. ಟಿ. ರವಿ ಆಸೀನರಾಗಿದ್ದರು. ಅಷ್ಟೇ ಅಲ್ಲ ಅವರೇ ವಾಹನ ಚಾಲನೆ ಮಾಡುತ್ತಿದ್ದರು ಎನ್ನುವ ಆರೋಪಗಳನ್ನು ಸಂತ್ರಸ್ತ ಕುಟುಂಬ ಮಾಡಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಸಿ.ಟಿ. ರವಿ ಅವರು ಅಂದು ಪಾನಮತ್ತರಾಗಿದ್ದರು ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಯಾವುದೇ ದಾಖಲೆಗಳು, ದೂರುಗಳು ಇಲ್ಲದೆಯೂ ರಾಹುಲ್ ಗಾಂಧಿಯ ವಿರುದ್ಧ ‘ಡ್ರಗ್ಸ್ ವ್ಯಸನಿ’ ಎಂದು ಆರೋಪಿಸುವ ಮುನ್ನ ಇದರ ಬಗ್ಗೆ ರವಿ ಅವರಿಗೆ ಅರಿವಿರಬೇಕಾಗಿತ್ತು. ಸಹಜವಾಗಿಯೇ ರವಿ ವಿರುದ್ಧ ಸಚಿವೆ ಈ ಘಟನೆಯನ್ನು ಬಳಸಿದ್ದಾರೆ. ‘ಇದ್ದುದನ್ನು ಇದ್ದ ಹಾಗೆ ಹೇಳಿದರೆ ಎದೆಗೆ ಬಂದು ಒದೆಯುತ್ತಾರೆ’ ಎನ್ನುವ ಮಾತಿನಂತೆ, ಈ ದುರಂತವನ್ನು ಕೆದಕಿದ ಸಚಿವೆಯ ವಿರುದ್ಧ ಒಮ್ಮೆಲೆ ಸ್ಫೋಟಗೊಂಡು ‘ಮಾನಹಾನಿ’ಯಾಗುವಂತೆ ನಿಂದಿಸಿದ್ದಾರೆ.
ರಾಮನನ್ನು ಜಪಿಸುವ ಬಾಯಿ, ಸದನದಂತಹ ಗೌರವಯುತ ಜಾಗದಲ್ಲಿ ಇಂತಹ ಹೊಲಸು ಮಾತನ್ನು ಹೆಣ್ಣಿನ ವಿರುದ್ಧ ಬಳಸಲು ಸಾಧ್ಯವಿಲ್ಲ. ಎದೆಯೊಳಗೆ ರಾವಣನನ್ನು ಇಟ್ಟುಕೊಂಡವರಷ್ಟೇ ಈ ರೀತಿ ಕೆಟ್ಟ ಪದಗಳನ್ನು ಬಳಸಲು ಸಾಧ್ಯ. ವಿಪರ್ಯಾಸವೆಂದರೆ, ಸಂಸ್ಕೃತಿಯ ಗುತ್ತಿಗೆ ತೆಗೆದುಕೊಂಡಂತೆ ವರ್ತಿಸುವ ಬಿಜೆಪಿ ಸಿ.ಟಿ. ರವಿಯ ವರ್ತನೆಯನ್ನು ಅದು ಹೇಗೆ ಸಮರ್ಥಿಸಿಕೊಳ್ಳುತ್ತದೆ? ಮಾತು ಮಾತಿಗೆ ‘ಆರೆಸ್ಸೆಸ್ ನನ್ನ ತಾಯಿ’ ಎಂದು ಹೇಳುವ ಸಿ.ಟಿ. ರವಿ ಅವರು ತನ್ನ ವರ್ತನೆಯ ಮೂಲಕ ಆರೆಸ್ಸೆಸ್ನ ಮಾನವನ್ನೂ ಹರಾಜು ಹಾಕಿದ್ದಾರೆ. ಅದರ ಜೊತೆಜೊತೆಗೇ ಸದನದ ಗೌರವವನ್ನ್ನೂ ಮಣ್ಣುಪಾಲು ಮಾಡಲು ಯತ್ನಿಸಿದ್ದಾರೆ. ಮುಖ್ಯವಾಗಿ ಸದನಗಳಲ್ಲಿ ಶಾಸಕರು ಬಳಸುವ ಭಾಷೆಯ ಬಗ್ಗೆ ಸ್ಪೀಕರ್ ಇನ್ನೊಮ್ಮೆ ಹೊಸದಾಗಿ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎನ್ನುವುದನ್ನು ಇದು ಎತ್ತಿ ಹಿಡಿದಿದೆ. ಈ ಹಿಂದೆ ಸ್ಪೀಕರ್ ನೇತೃತ್ವದಲ್ಲಿ ಹೊಸದಾಗಿ ಆಯ್ಕೆಯಾಗಿರುವ ಶಾಸಕರಿಗೆ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ನಿಜಕ್ಕೂ ತರಬೇತಿ ಬೇಕಾಗಿರುವುದು ಹೊಸಬರಿಗಲ್ಲ, ಹಳಬರಿಗೆ ಎನ್ನುವುದನ್ನು ಸಿ.ಟಿ. ರವಿ ಪ್ರಕರಣ ಸಾಬೀತು ಪಡಿಸಿದೆ. ಹಳಬರಿಂದ ಹೊಸಬರು ಕೆಟ್ಟು ಹೋಗದಂತೆ ನೋಡಿಕೊಳ್ಳುವುದು ಸ್ಪೀಕರ್ ಜವಾಬ್ದಾರಿಯಾಗಿದೆ. ಹಾಗೆಯೇ, ಹೆಣ್ಣಿನ ಬಗ್ಗೆ ಏನು ಮಾತನಾಡಬೇಕು, ಏನು ಮಾತನಾಡಬಾರದು ಎನ್ನುವುದರ ಬಗ್ಗೆ ಬಿಜೆಪಿ ಶಾಸಕರಿಗೆ ಆರೆಸ್ಸೆಸ್ ನಾಯಕರು ಪ್ರತ್ಯೇಕ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಬೇಕು. ಇಲ್ಲವಾದರೆ, ಇವರಾಡುವ ಮಾತುಗಳೆಲ್ಲವೂ ಆರೆಸ್ಸೆಸ್ ಸಂಸ್ಕೃತಿಯ ಭಾಗ ಎಂದು ಜನರು ತಿಳಿದುಕೊಳ್ಳುವ ಸಾಧ್ಯತೆಗಳಿವೆ.