ಕರ್ನಾಟಕದ ಹೊಸ ಶಿಕ್ಷಣ ನೀತಿ ಹೇಗಿರಬೇಕು?
ರಾಜ್ಯದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಮತ್ತು ಮುಂಗಡ ಪತ್ರದಲ್ಲಿ ಭರವಸೆ ನೀಡಿದಂತೆ ರಾಜ್ಯದ ಹೊಸ ಶಿಕ್ಷಣ ನೀತಿಯ ಕರಡು ರೂಪಿಸಲು ಹದಿನೈದು ಸದಸ್ಯರನ್ನು ಒಳಗೊಂಡ ‘ರಾಜ್ಯ ಶಿಕ್ಷಣ ನೀತಿ ಆಯೋಗ’ವನ್ನು ರಚಿಸಿದೆ. ವಿಶ್ವವಿದ್ಯಾನಿಲಯಗಳ ಧನಸಹಾಯ ಆಯೋಗ(ಯುಜಿಸಿ)ದ ಮಾಜಿ ಅಧ್ಯಕ್ಷರಾಗಿದ್ದ ಪ್ರೊ. ಸುಖದೇವ್ ಥೋರಟ್ ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಈ ಸಮಿತಿ 2024ರ ಫೆಬ್ರವರಿ 25ರೊಳಗೆ ಸರಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಸಮಿತಿಯ ಸ್ವರೂಪದ ಬಗ್ಗೆ ಕೆಲ ವಿಮರ್ಶೆಗಳಿದ್ದರೂ ಸಿದ್ದರಾಮಯ್ಯನವರ ಸರಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಕ್ಕಾಗಿ ಇದನ್ನು ಸ್ವಾಗತಿಸಬೇಕಾಗಿದೆ.
ನರೇಂದ್ರ ಮೋದಿಯವರ ನೇತೃತ್ವದ ಒಕ್ಕೂಟ ಸರಕಾರ ರಾಜ್ಯಗಳ ಅಭಿಪ್ರಾಯವನ್ನು ಕೇಳದೆ, ಸಂಸತ್ತಿನ ಉಭಯ ಸದನಗಳಲ್ಲಿ ಚರ್ಚಿಸದೆ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯನ್ನು ರೂಪಿಸಿತ್ತು.ಸಂವಿಧಾನದ ಪ್ರಕಾರ ಶಿಕ್ಷಣ ಕೇಂದ್ರ ಮತ್ತು ರಾಜ್ಯಗಳ ಜಂಟಿ (Concurrent List) ಪಟ್ಟಿಯಲ್ಲಿದೆ. ಆದ್ದರಿಂದ ಒಕ್ಕೂಟ ಸರಕಾರ ಏಕಪಕ್ಷೀಯವಾಗಿ ಯಾವುದೇ ರಾಜ್ಯದ ಮೇಲೆ ಹೊಸ ಶಿಕ್ಷಣ ನೀತಿಯನ್ನು ಹೇರಲು ಆಗುವುದಿಲ್ಲ. ಅದರಲ್ಲೂ ಮೋದಿ ಸರಕಾರದ ಹೊಸ ಶಿಕ್ಷಣ ನೀತಿ ಶಿಕ್ಷಣವನ್ನು ಇನ್ನಷ್ಟು ಕೋಮುವಾದೀಕರಣಗೊಳಿಸುವ ಹಾಗೂ ವ್ಯಾಪಾರೀಕರಣಗೊಳಿಸುವ ಅಪಾಯ ಇರುವುದರಿಂದ ಕರ್ನಾಟಕ ಸರಕಾರ ತನ್ನದೇ ಆದ ಹೊಸ ಶಿಕ್ಷಣ ನೀತಿಯನ್ನು ರೂಪಿಸಲು ಮುಂದಾಗಿರುವುದು ಸಮರ್ಥನೀಯವಾಗಿದೆ. ಇಂತಹ ವಿನಾಶಕಾರಿ ಶಿಕ್ಷಣ ನೀತಿಯನ್ನು ರಾಜ್ಯದ ಹಿಂದಿನ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರಕಾರ ಅಂಗೀಕರಿಸಿ ಜಾರಿಗೆ ತಂದಿತ್ತು. ಆದರೆ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿಯನ್ನು ಸೋಲಿಸಿದ್ದಾರೆ.
ರಾಜ್ಯದ ಹಿಂದಿನ ಬಿಜೆಪಿ ಸರಕಾರ ಶಿಕ್ಷಣವನ್ನು ಸಂಪೂರ್ಣವಾಗಿ ತನ್ನ ರಾಜಕೀಯ ಹಿತಾಸಕ್ತಿಗಳನ್ನು ರಕ್ಷಿಸಲು ಬಳಸಿಕೊಂಡಿತಲ್ಲದೆ ಗೊತ್ತುಗುರಿಯಿಲ್ಲದೆ ಸಾಕಷ್ಟು ಗೊಂದಲವನ್ನು ಉಂಟು ಮಾಡಿತ್ತು. ಅಂಧ ರಾಷ್ಟ್ರೀಯತೆಯ ಹೆಸರಿನಲ್ಲಿ ಎಳೆ ಮಕ್ಕಳ ಮೆದುಳಿಗೆ ವಿಷ ತುಂಬುವ ಅಪಾಯಕಾರಿ ಕೆಲಸಕ್ಕೆ ಕೈ ಹಾಕಿತ್ತು. ಇದರಿಂದ ಒಟ್ಟು ಶೈಕ್ಷಣಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಶಿಕ್ಷಣವನ್ನು ಸಾಮಾಜಿಕ ಒಳಿತಿನ ಮತ್ತು ಪರಿವರ್ತನೆಯ ಸಾಧನವೆಂದು ಪರಿಗಣಿಸಿ ಹೊಸ ಶಿಕ್ಷಣ ನೀತಿಯನ್ನು ರೂಪಿಸಲು ಮುಂದಾಗಿದೆ.
ವಾಸ್ತವವಾಗಿ ಭಾರತದ ಸಂವಿಧಾನವು ಒಪ್ಪಿರುವ ಮೌಲ್ಯಗಳಾದ ಬಹುತ್ವ, ಬಹು ಸಂಸ್ಕೃತಿ, ಬಹುಧರ್ಮ, ಬಹುಭಾಷೆ, ಭ್ರಾತೃತ್ವ, ಸಹಬಾಳ್ವೆ, ಸಮಾನತೆ, ಸಾಮರಸ್ಯ ಹಾಗೂ ಸಾಮಾಜಿಕ ನ್ಯಾಯದ ಮೂಲಕ ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ, ಪ್ರಜಾಪ್ರಭುತ್ವ ಗಣತಂತ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಶಿಕ್ಷಣವನ್ನು ಒಂದು ಸಾಧನವಾಗಿ ಬಳಸಿಕೊಳ್ಳಬೇಕಾಗಿದೆ.ಸಾಂವಿಧಾನಿಕ ದೃಷ್ಟಿಯ ರಾಷ್ಟ್ರೀಯತೆ, ದೇಶಪ್ರೇಮ ಮುಂತಾದ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕಿದೆ. ಆದರೆ ಮೋದಿ ಸರಕಾರ ಇದಕ್ಕೆ ತಿಲಾಂಜಲಿ ನೀಡಿ, ಸಾಂವಿಧಾನಿಕ ಮೌಲ್ಯಗಳನ್ನು ಧಿಕ್ಕರಿಸಿ ಅಂಧ ಧಾರ್ಮಿಕತೆ, ಕೋಮುವಾದ, ಜ್ಯೋತಿಷ್ಯ, ಕಂದಾಚಾರ ಮುಂತಾದವುಗಳ ಮೂಲಕ ಸಂವಿಧಾನೇತರ ಶಕ್ತಿಗಳ ರಹಸ್ಯ ಕಾರ್ಯಸೂಚಿಯನ್ನು ಹೊಸ ಶಿಕ್ಷಣ ನೀತಿಯಲ್ಲಿ ಅಳವಡಿಸಿ ಜಾತ್ಯತೀತ, ಜನತಾಂತ್ರಿಕ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡುವ ದುಸ್ಸಾಹಸಕ್ಕೆ ಮುಂದಾಗಿದೆ. ಹಾಗಾಗಿಯೇ ಇದನ್ನು ತಿರಸ್ಕರಿಸಿರುವುದು ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರಕಾರದ ದಿಟ್ಟ ಕ್ರಮವಾಗಿದೆ.
ಮನುವಾದಿ ಪ್ರೇರಿತ, ಸಂಘಪರಿವಾರ ನೇತೃತ್ವದ ಬಿಜೆಪಿ ಸರಕಾರದ ಹೊಸ ಶಿಕ್ಷಣ ನೀತಿ ಮೌಢ್ಯ, ಕಂದಾಚಾರಗಳಿಗೆ ನೀರೆರೆದು ಪೋಷಿಸುವ ಉದ್ದೇಶದಿಂದ ಕೂಡಿದೆ. ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬ್ರಾಹ್ಮಣೇತರ ಸಮುದಾಯಗಳ ಕೊಡುಗೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತದೆ. ಭಾರತದ ದಾರ್ಶನಿಕ ಪರಂಪರೆಯ ಲೋಕಾಯತ ಮತ್ತು ಚಾರ್ವಾಕಾ ಚಿಂತನೆಗಳಿಗೆ ಮೋದಿ ಸರಕಾರದ ಶಿಕ್ಷಣ ನೀತಿಯಲ್ಲಿ ಅವಕಾಶವಿಲ್ಲ. ಮಧ್ಯಕಾಲೀನ ಭಾರತದ ಇಸ್ಲಾಮಿಕ್ ಸಂಪ್ರದಾಯಗಳು ಹಿಂದೂ ಸಂಪ್ರದಾಯಗಳ ಜೊತೆ ಸಂವಹನ ನಡೆಸುವ ಮೂಲಕ ಹುಟ್ಟಿದ ಸೂಫಿವಾದ ಕಟ್ಟಿಕೊಟ್ಟ ಹೊಸ ಬಗೆಯ ಆಡಳಿತ, ವಾಣಿಜ್ಯ, ವಾಸ್ತುಶಿಲ್ಪ, ಸಾಹಿತ್ಯ, ಸಂಗೀತ, ಇಂಜಿನಿಯರಿಂಗ್, ಕಲೆ ಮುಂತಾದ ಜ್ಞಾನ ಕ್ಷೇತ್ರಗಳಲ್ಲಿ ತಂದ ಹೊಸ ಚಲನಶೀಲತೆಯನ್ನು, ಮಧ್ಯಕಾಲದ ಪ್ರಸ್ತುತತೆಯನ್ನು ಸಂಪೂರ್ಣವಾಗಿ ಕೇಂದ್ರದ ಹೊಸ ಶಿಕ್ಷಣ ನೀತಿಯಲ್ಲಿ ಕಡೆಗಣಿಸಲಾಗಿದೆ. ಇದಲ್ಲದೆ ಬುದ್ಧ, ಮಹಾವೀರ, ಬಸವಣ್ಣ, ಜೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಅಂಬೇಡ್ಕರ್, ಪೆರಿಯಾರ್, ನಾರಾಯಣಗುರು ಮುಂತಾದವರ ಆರೋಗ್ಯಕರ ಚಿಂತನೆ ಮತ್ತು ವಿಚಾರಧಾರೆಗಳನ್ನು ಮೋದಿ ಸರಕಾರದ ಹೊಸ ಶಿಕ್ಷಣ ನೀತಿ ಹೊರಗಿಟ್ಟಿದೆ. ಭಾರತದ ದಲಿತ, ದಮನಿತ ಸಮುದಾಯಗಳು, ಪೂರ್ವ ಭಾರತದ ಬುಡಕಟ್ಟು ಸಮುದಾಯಗಳು, ಈಶಾನ್ಯ ಭಾರತದ ನೈಸರ್ಗಿಕ ಸಂಪನ್ಮೂಲಗಳ ಕೊಡುಗೆ ಇವುಗಳನ್ನೆಲ್ಲ ಕಡೆಗಣಿಸಿ ಕೇವಲ ಮನುವಾದ, ಸಂಸ್ಕೃತ ಮತ್ತು ಪುರೋಹಿತಶಾಹಿ ಮಾತ್ರ ಭಾರತದ ಉಪಖಂಡದ ಸಂಸ್ಕೃತಿ ಎಂದು ಕೇಂದ್ರದ ಹೊಸ ಶಿಕ್ಷಣ ನೀತಿ ಪ್ರತಿಪಾದಿಸುವುದರಿಂದ ರಾಜ್ಯ ಸರಕಾರ ತನ್ನದೇ ಹೊಸ ಶಿಕ್ಷಣ ನೀತಿಯನ್ನು ರೂಪಿಸಲು ಮುಂದಾಗಿರುವುದು ಇತರ ರಾಜ್ಯಗಳಿಗೆ ಮಾದರಿಯಾಗಿದೆ.
ಶಿಕ್ಷಣ ನೀತಿ ರೂಪಿಸಬೇಕಾದವರು ಬಹುತ್ವದಲ್ಲಿ ನಂಬಿಕೆ ಇರುವ, ಭಾರತದ ಸಂವಿಧಾನದ ಆಶಯಗಳಿಗೆ ಬದ್ಧವಾಗಿರುವ ಶಿಕ್ಷಣ ತಜ್ಞರೇ ಹೊರತು, ಸಂವಿಧಾನೇತರ ಶಕ್ತಿಗಳಲ್ಲ. ವಾಸ್ತವವಾಗಿ ಶಿಕ್ಷಣ ಎಂಬುದು ಇರುವುದಾದರೂ ಯಾತಕ್ಕಾಗಿ? ಶಿಕ್ಷಣದ ಗುರಿ ಕೇವಲ ಜೀವನೋಪಾಯದ ನೌಕರಿ, ಉದ್ಯೋಗ ಪಡೆಯಲು ಅಗತ್ಯವಿರುವ ಪದವಿಯನ್ನು ಗಿಟ್ಟಿಸಲು ಅಲ್ಲ, ಅದರ ಬದಲಾಗಿ ಒಟ್ಟು ಬದುಕನ್ನು ಅರ್ಥಪೂರ್ಣವಾಗಿಸಲು, ಆರೋಗ್ಯಕರವಾಗಿಸಲು ಶಿಕ್ಷಣದ ಅಗತ್ಯವಿದೆ.ಪರಂಪರಾಗತ ಅವೈಜ್ಞಾನಿಕ ನಂಬಿಕೆಗಳನ್ನು, ಮೌಢ್ಯವನ್ನು, ಅನಿಷ್ಟ ಸಾಮಾಜಿಕ ಕಟ್ಟುಪಾಡುಗಳನ್ನು ಎದೆಗಾರಿಕೆಯಿಂದ ಪ್ರಶ್ನಿಸುವ ವ್ಯಕ್ತಿತ್ವವನ್ನು ರೂಪಿಸುವುದು ಶಿಕ್ಷಣದ ನಿಜವಾದ ಗುರಿಯಾಗಿರಬೇಕು. ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವವರಿಂದ ಇದನ್ನೆಲ್ಲ ನಿರೀಕ್ಷಿಸುವುದು ಅಸಾಧ್ಯ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಹೊಸ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚಿಸಿರುವುದು ಸೂಕ್ತವಾಗಿದೆ. ಆದರೆ ಕರ್ನಾಟಕದ ಹೊರಗಿನ ಕನ್ನಡ ಬಾರದ ಹಾಗೂ ಹವಾ ನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಕಾರ್ಯನಿರ್ವಹಿಸುವ ತಜ್ಞರಿಗಿಂತ ಸ್ಥಳೀಯ ನೆಲ ಮೂಲದ ಪರಿಣಿತರಿಗೆ ಹೆಚ್ಚಿನ ಅವಕಾಶವನ್ನು ನೀಡಬೇಕಾಗಿತ್ತು. ಸಮಿತಿಯಲ್ಲಿ ಶಾಲಾ ಹಂತದಲ್ಲಿ ಶ್ರಮಿಸಿದ ಶಿಕ್ಷಣ ತಜ್ಞರು, ಶಿಕ್ಷಣದ ಮೂಲ ವಾರಸುದಾರರಾದ ಶಿಕ್ಷಕರು, ವಿದ್ಯಾರ್ಥಿ ಪ್ರತಿನಿಧಿಗಳು, ಲಿಂಗತ್ವ ಅಲ್ಪಸಂಖ್ಯಾತರ ಪ್ರತಿನಿಧಿಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಇರಬೇಕಾಗಿತ್ತು. ಹೊಸ ಶಿಕ್ಷಣ ನೀತಿಯನ್ನು ರೂಪಿಸುವ ಮುನ್ನ ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಕ್ಕಳ ಒಡಂಬಡಿಕೆಗಳು, ಸುಸ್ಥಿರ ಅಭಿವೃದ್ಧಿಯ ಗುರಿಗಳು, ಜ್ಞಾನ ಆಯೋಗ ಸೇರಿದಂತೆ ವಿವಿಧ ಸಮಿತಿಗಳು ಮಾಡಿದ ಶಿಫಾರಸುಗಳನ್ನು, ಸಂವಿಧಾನದ ಮೂಲ ಆಶಯಗಳನ್ನು ಆಯೋಗ ಪರಿಗಣಿಸಬೇಕು. ರಾಜ್ಯ ಸರಕಾರದ ಹೊಸ ಶಿಕ್ಷಣ ನೀತಿಯನ್ನು ರೂಪಿಸುವ ಆಯೋಗದ ಸಾರಥ್ಯವನ್ನು ವಹಿಸಿರುವ ಪ್ರೊ. ಸುಖದೇವ್ ಥೋರಟ್ ನಿಜಕ್ಕೂ ಸಮರ್ಥ ವ್ಯಕ್ತಿ. ಅವರ ಸಾಮಾಜಿಕ ಕಾಳಜಿ ಪ್ರಶ್ನಾತೀತ. ಆದರೆ ಕರ್ನಾಟಕದ ಸಂದರ್ಭದಲ್ಲಿ ಇಲ್ಲಿ ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಮತ್ತು ಶಿಕ್ಷಣದ ಕೇಸರೀಕರಣದ ವಿರುದ್ಧ ಹೋರಾಡುತ್ತಾ ಬಂದ ಸ್ಥಳೀಯ ಅನುಭವಿಕ ಪರಿಣಿತರ ಕೊಡುಗೆಯನ್ನು ಗಮನಿಸಬೇಕಾಗಿತ್ತು. ಕನ್ನಡ ಭಾಷೆಯನ್ನು ತಿಳಿದವರು ಮತ್ತು ಕರ್ನಾಟಕದ ಸಾಂಸ್ಕೃತಿಕ ಹಿನ್ನೆಲೆಯನ್ನು ಅರಿತವರಿಗೆ ಈ ಆಯೋಗದಲ್ಲಿ ಹೊಣೆಗಾರಿಕೆ ಸೇರಿದಂತೆ ಇನ್ನಷ್ಟು ಆದ್ಯತೆಯನ್ನು ನೀಡಬೇಕಾಗಿತ್ತು. ಅದೇನೇ ಇರಲಿ, ಹೊಸ ಶಿಕ್ಷಣ ನೀತಿ ರೂಪಿಸುವ ಸಿದ್ದರಾಮಯ್ಯನವರ ಸರಕಾರದ ಕ್ರಮ ಶ್ಲಾಘನೀಯವಾಗಿದೆ.
ಕರ್ನಾಟಕ ಸರಕಾರ ರಚಿಸಿರುವ ನೂತನ ಆಯೋಗ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟ ಸುಧಾರಿಸಲು, ಕಲಿಕಾ ಮಾಧ್ಯಮ ಮತ್ತು ವಿಧಾನದ ಬಗ್ಗೆ, ಅದರಲ್ಲೂ ವಿಶೇಷವಾಗಿ ಸರಕಾರಿ ಶಾಲೆಗಳನ್ನು ಬಲಪಡಿಸುವ ಬಗ್ಗೆ, ಶೈಕ್ಷಣಿಕ ಪಠ್ಯಕ್ರಮದಲ್ಲಿ ವೈಜ್ಞಾನಿಕ ಅಂಶಗಳನ್ನು ಒಡಮೂಡಿಸುವ ಬಗ್ಗೆ ಸೂಕ್ತ ಸಲಹೆಗಳನ್ನು ನೀಡಿ ನಾಳಿನ ನಾಗರಿಕರ ಮತ್ತು ಅವರ ಮೂಲಕ ಬಹುತ್ವ ಭಾರತದ ಉನ್ನತಿಗೆ ನೆರವಾಗಲಿ.