ಬಾಲ್ಯ ವಿವಾಹಕ್ಕೆ ಕೊನೆ ಯಾವಾಗ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ವಿಜ್ಞಾನ, ತಂತ್ರಜ್ಞಾನಗಳು ಇಷ್ಟೆಲ್ಲ ಮುಂದುವರಿದಿದ್ದರೂ, ಆಧುನಿಕ ಜೀವನಶೈಲಿ ಸಮಾಜದಲ್ಲಿ ಕ್ರಮೇಣ ಬೇರು ಬಿಡುತ್ತಿರುವಾಗಲೂ, ಜಾಗತೀಕರಣಕ್ಕೆ ಭಾರತ ಒಗ್ಗಿಕೊಂಡು ಬಹುತೇಕ ಭಾರತಿಯರು ಮಾರುಕಟ್ಟೆ ಆರ್ಥಿಕತೆಯನ್ನು ಒಪ್ಪಿಕೊಂಡ ಮೇಲೂ ಅಜ್ಞಾನ ಮೌಢ್ಯಗಳು, ಶತಮಾನಗಳ ಹಿಂದಿನ ಕಂದಾಚಾರಗಳು ನಮ್ಮ ಸಮಾಜವನ್ನು ಇಂದಿಗೂ ನಿಯಂತ್ರಿಸುತ್ತಿರುವುದು ದುರಂತವಾಗಿದೆ. ಇಂತಹ ಅತ್ಯಂತ ಅಪಾಯಕಾರಿ ಕಂದಾಚಾರಗಳಲ್ಲಿ ಬಾಲ್ಯ ವಿವಾಹ ಪದ್ಧತಿಯೂ ಒಂದು. ಇದರ ಸಂಪೂರ್ಣ ನಿಯಂತ್ರಣಕ್ಕಾಗಿ ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ ಈ ಬಾಲ್ಯ ವಿವಾಹಗಳು ದೇಶದಲ್ಲಿ ಅಲ್ಲಲ್ಲಿ ನಡೆಯುತ್ತಲೇ ಇವೆ ಎಂಬುದು ಆತಂಕಕಾರಿ ಸಂಗತಿಯಾಗಿದೆ.
ಬಾಲ್ಯ ವಿವಾಹ ಪದ್ಧತಿಯನ್ನು ತಡೆಯಲು ಸರಕಾರ ಕಾಯ್ದೆಗಳನ್ನು ಮಾಡಿ, ಆಗಾಗ ಈ ಕಾಯ್ದೆಗಳಿಗೆ ತಿದ್ದುಪಡಿ ತಂದು ಇನ್ನಷ್ಟು ಬಿಗಿಯಾದ ಕ್ರಮಗಳನ್ನು ಕೈಗೊಂಡಿದ್ದರೂ ಕೂಡ ಇವುಗಳು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ. ಹೀಗಾಗಿ ಬಾಲ್ಯ ವಿವಾಹಗಳು ನಡೆಯುತ್ತಲೇ ಇವೆ ಎಂದು ಸುಪ್ರೀಂ ಕೋರ್ಟ್ ಕೂಡ ಇತ್ತೀಚೆಗೆ ಕಳವಳವನ್ನು ವ್ಯಕ್ತಪಡಿಸಿದೆ. ಬೆಳೆಯುವ ಬಾಲಕರು ಹಾಗೂ ಬಾಲಕಿಯರ ಮೇಲೆ ಇದು ಅತ್ಯಂತ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ ಎಂದು ಕೋರ್ಟ್ ಹೇಳಿದೆ.
ಏನೂ ತಿಳಿಯದ ವಯಸ್ಸಿನಲ್ಲಿ ಆಟೋಟಗಳ ಲೋಕದಲ್ಲಿ ಇರುವ ಬಾಲಕಿಯರು ಮತ್ತು ಬಾಲಕರ ಇಷ್ಟಕ್ಕೆ ವಿರುದ್ಧವಾಗಿ ಈ ಬಾಲ್ಯ ವಿವಾಹಗಳು ನಡೆಯುತ್ತಿವೆ. ಇಂತಹ ಮಕ್ಕಳು ತಮ್ಮ ಬಾಲ್ಯವನ್ನು ಕಳೆದುಕೊಳ್ಳುವ ಜೊತೆಗೆ ಬದುಕಿನಲ್ಲಿ ಗೊಂದಲಕ್ಕೀಡಾಗುತ್ತಾರೆ. ವಿಶೇಷವಾಗಿ ಮದುವೆಯಾಗುವ ಗಂಡು ಮಕ್ಕಳು ಹೆಚ್ಚಿನ ಜವಾಬ್ದಾರಿಯನ್ನು ಹೊರ ಬೇಕಾಗುತ್ತದೆ. ಈ ಬಾಲ್ಯ ವಿವಾಹಗಳು ಮಕ್ಕಳ ಸ್ವಾತಂತ್ರ್ಯ, ಸಂತೋಷವನ್ನು ಕಸಿದುಕೊಳ್ಳುತ್ತವೆ. ಹಾಗಾಗಿ ಇವುಗಳನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳನ್ನು ನೇಮಕ ಮಾಡ ಬೇಕಾಗಿದೆ ಎಂದು ಹೇಳಿದ ಸುಪ್ರೀಂ ಕೋರ್ಟ್, ವಿಶೇಷವಾಗಿ ಬಾಲ್ಯ ವಿವಾಹವನ್ನು ತಡೆಯಲು ವಿಶೇಷ ಪೊಲೀಸ್ ಘಟಕಗಳನ್ನು ಬಳಸಿಕೊಳ್ಳಬೇಕು ಹಾಗೂ ಇಂತಹ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಲು ವಿಶೇಷವಾದ ತ್ವರಿತ ನ್ಯಾಯಾಲಯಗಳನ್ನು ಆರಂಭಿಸಬೇಕಾಗಿದೆ ಎಂದು ಸರಕಾರಕ್ಕೆ ಸೂಚನೆ ನೀಡಿದೆ.
ಬಾಲ್ಯ ವಿವಾಹಗಳನ್ನು ತಡೆಯಲು ಸರಕಾರ ಎಷ್ಟೇ ಕ್ರಮಗಳನ್ನು ಕೈಗೊಂಡಿದ್ದರೂ ಪೊಲೀಸರ ಕಣ್ಣುತಪ್ಪಿಸಿ ಇಂತಹ ಮದುವೆಗಳು ನಡೆಯತ್ತಲೇ ಇವೆ. ಕಾನೂನನ್ನು ಇನ್ನಷ್ಟು ತಿದ್ದುಪಡಿ ತಂದು ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ನಿಶ್ಚಿತಾರ್ಥವನ್ನು ನಿಷೇಧಿಸುವ ಕುರಿತು ಪರಿಶೀಲನೆ ನಡೆಸಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ಸಲಹೆ ನೀಡಿದೆ. ಈ ಕಾಯ್ದೆಯ ಅಡಿಯಲ್ಲಿ ದಂಡವನ್ನು ತಪ್ಪಿಸಿಕೊಳ್ಳಲು ನಿಶ್ಚಿತಾರ್ಥವನ್ನು ಬಳಸಿಕೊಳ್ಳಲಾಗುತ್ತಿದೆ. ಅವುಗಳನ್ನು ತಡೆಯಲು ನಿರ್ದಿಷ್ಟವಾದ ಕ್ರಮವನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಕೋರ್ಟ್ ಹೇಳಿದೆ.
ಕೆಲವೆಡೆ ಸಾಮೂಹಿಕ ಮದುವೆಗಳು ನಡೆಯುವ ಸಂದರ್ಭಗಳಲ್ಲೂ ಆಯೋಜಕರ ಕಣ್ತಪ್ಪಿಸಿ ಇಂತಹ ಮದುವೆಗಳು ನಡೆಯುತ್ತವೆ. ಪ್ರಭಾವಿ ರಾಜಕಾರಣಿಗಳು ಹಾಗೂ ಉದ್ಯಮಪತಿಗಳು ನಡೆಸುವ ಮದುವೆಗಳ ಸಂದರ್ಭಗಳಲ್ಲೂ ಪೊಲೀಸರ ಹಾಗೂ ಸಮಾಜದ ಹಿರಿಯರ ಕಣ್ಣು ತಪ್ಪಿಸಿ ಇಂತಹ ಮದುವೆಗಳು ನಡೆಯುತ್ತವೆ. ಕೆಲವು ಕಡೆ ರಾಜಕಾರಣಿಗಳು ತಮ್ಮ ರಾಜಕೀಯಕ್ಕೆ ಅನುಕೂಲವಾಗಲೆಂದು ಸಾಮೂಹಿಕ ಮದುವೆ ನಡೆಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಪೊಲೀಸರು ಕೂಡ ನಿಷ್ಕ್ರಿಯರಾಗುತ್ತಾರೆ.
ಕಾಯ್ದೆಯ ಪ್ರಕಾರ 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗಂಡು ಮಕ್ಕಳು ಹಾಗೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳನ್ನು ವಿವಾಹ ಯೋಗ್ಯರಲ್ಲ ಎಂದು ಪರಿಗಣಿಸಲಾಗುತ್ತದೆ. ಆದರೆ ಇಂತಹ ಕಾಯ್ದೆಗೆ ಮತ್ತಷ್ಟು ತಿದ್ದುಪಡಿ ತರಲು ಸಂಸತ್ತಿನಲ್ಲಿ ವಿಧೇಯಕವನ್ನು ತಂದಿದ್ದರೂ ಸ್ಥಾಯಿ ಸಮಿತಿಗೆ ಪರಿಶೀಲಿಸಲು ಅದನ್ನು ವರ್ಗಾಯಿಸಲಾಗಿದೆ. ಆದರೆ ಇದನ್ನು ತ್ವರಿತವಾಗಿ ಪರಿಶೀಲನೆ ನಡೆಸದೆ ಮುಂದೂಡಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಮೋದಿ ಸರಕಾರ ಪದೇ ಪದೇ ಏಕರೂಪ ನಾಗರಿಕ ಸಂಹಿತೆ ಹಾಗೂ ತ್ರಿವಳಿ ತಲಾಖ್ ನಿಷೇಧ ಜಾರಿಗೆ ಕ್ರಮ ಮುಂತಾದವುಗಳ ಬಗ್ಗೆ ಪ್ರಚಾರ ಮಾಡುತ್ತ ತನ್ನ ಬೆನ್ನನ್ನು ತಾನೇ ತಟ್ಟಿಕೊಳುತ್ತಿದ್ದರೂ ಬಾಲ್ಯ ವಿವಾಹಗಳನ್ನು ಕಟ್ಟು ನಿಟ್ಟಾಗಿ ನಿರ್ಬಂಧಿಸಲು ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿಲ್ಲ.
ಬಾಲ್ಯ ವಿವಾಹಗಳು ಯಾವುದೋ ಒಂದು ಪ್ರದೇಶಕ್ಕೆ, ಯಾವುದೋ ಧರ್ಮ ಹಾಗೂ ಜಾತಿಗೆ ಸೀಮಿತವಾಗಿಲ್ಲ. ಎಲ್ಲ ಸಮುದಾಯಗಳಲ್ಲೂ ಇದು ವ್ಯಾಪಕವಾಗಿ ನಡೆಯುತ್ತಿವೆ. ಇಂತಹ ವಿಚಾರಗಳಲ್ಲಿ ನ್ಯಾಯಾಲಯಗಳು ಸರಕಾರಕ್ಕೆ ನಿರ್ದೇಶನವನ್ನು ಮಾತ್ರ ನೀಡಬಹುದು. ಆದರೆ ಈ ಸಮಸ್ಯೆಗಳಿಗೆ ನಿಜವಾದ ಪರಿಹಾರವನ್ನು ಕೋರ್ಟ್‌ನ ಹೊರಗೆ ಸಾಮಾಜಿಕ ಜೀವನದಲ್ಲಿ ಹುಡುಕಬೇಕಾಗಿದೆ.
ವಾಸ್ತವವಾಗಿ ಬಡತನ, ಹಿಂದುಳಿದಿರುವಿಕೆ ಮತ್ತು ಶಿಕ್ಷಣದ ಕೊರತೆಯಿಂದಾಗಿ ಬಾಲ್ಯ ವಿವಾಹಗಳು ನಡೆಯುತ್ತಿವೆ. ಹಾಗಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸ್ವಾವಲಂಬನೆಯಿಂದ ಇಂತಹ ಅನಿಷ್ಟ ಪದ್ಧತಿಗಳನ್ನು ತೊಲಗಿಸಬಹುದು.
ಬಾಲ್ಯವಿವಾಹ, ವರದಕ್ಷಿಣೆ, ಜಾತಿಪದ್ಧತಿಯಂತಹ ಅನಿಷ್ಟ ಮಾತ್ರವಲ್ಲ, ಅಮಾನವೀಯ ಕಂದಾಚಾರಗಳನ್ನು ತೊಲಗಿಸಲು ಸರಕಾರದ ಕ್ರಮಗಳು ಮಾತ್ರ ಸಾಲದು. ನಮ್ಮ ಸಮಾಜದ ಪ್ರಗತಿಪರ ಮಠಾಧೀಶರು, ಧಾರ್ಮಿಕ ನಾಯಕರು ಹಾಗೂ ಚಿಂತಕರು, ಪತ್ರಕರ್ತರು ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕು. ಆಗ ಮಾತ್ರವೇ ಮೌಢ್ಯ ಮತ್ತು ಕಂದಾಚಾರಗಳನ್ನು ಒದ್ದೋಡಿಸಿ ಹೊಸ ಭಾರತದ ನಿರ್ಮಾಣಕ್ಕೆ ಮಾರ್ಗ ಸುಗಮಗೊಳಿಸಬಹುದು.