ಭಾರತದಲ್ಲಿ ಮಲ ಹೊರುವ ವ್ಯವಸ್ಥೆ ಇಲ್ಲವಾಗಿಸುವುದು ಯಾಕೆ ಅಸಾಧ್ಯ?
Photo: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಈ ದೇಶದಲ್ಲಿ ಮಲ ಹೊರುವ ಪದ್ಧತಿ ಇದೆ ಎನ್ನುವುದು ಒಂದು ಲಜ್ಜೆಯ ವಿಷಯವಾದರೆ, ಅದನ್ನು ಸರಕಾರದ ನೇತೃತ್ವದಲ್ಲೇ ಮುಚ್ಚಿಡಲು ಪ್ರಯತ್ನಿಸುತ್ತಿರುವುದು ಇನ್ನೊಂದು ಲಜ್ಜೆಯ ವಿಷಯವಾಗಿದೆ. ಗಾಯವನ್ನು ಮುಚ್ಚಿಡುವ ಮೂಲಕ ಅದನ್ನು ಗುಣ ಪಡಿಸುವುದಕ್ಕೆ ಸಾಧ್ಯವೆ? ಹಾಗೆ ಮುಚ್ಚಿಟ್ಟು ಗಾಯವೇ ಇಲ್ಲ ಎಂದು ವಾದಿಸುತ್ತಾ ಕೂತರೆ, ಗಾಯ ಉಲ್ಬಣಿಸಿ ಕೊಳೆಯ ತೊಡಗುತ್ತದೆ. ಭಾರತದಲ್ಲಿ ಮಲಹೊರುವ ಪದ್ಧತಿಯನ್ನು ಇಲ್ಲವಾಗಿಸುವ ಸುಲಭೋಪಾಯವೆಂದರೆ, ಅದು ಹೊರಗಿನ ಜಗತ್ತಿಗೆ ಗೊತ್ತಾಗದಂತೆ ರಹಸ್ಯವಾಗಿಡುವುದು. ಯಾವುದೇ ಜಿಲ್ಲೆಯಲ್ಲಿ ಮಲಹೊರುವ ಪದ್ಧತಿ ಕಂಡು ಬಂದರೆ ಮೊದಲು ಅಲ್ಲಿನ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಆದುದರಿಂದ ಅಧಿಕಾರಿಗಳು ಅಂತಹ ಘಟನೆಗಳು ಬಹಿರಂಗವಾಗದಂತೆ ನೋಡಿಕೊಳ್ಳುವ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಾರೆ. ಅಂತಹ ಘಟನೆಗಳು ಬಹಿರಂಗವಾಗದೇ ಇರುವುದರಿಂದ ಅದು ಸಾರ್ವಜನಿಕವಾಗಿ ಈ ಆಚರಣೆ ಚರ್ಚೆಯಾಗುವುದಿಲ್ಲ ಮಾತ್ರವಲ್ಲ, ಅದರ ನಿವಾರಣೆಗೆ ಬಲವಾದ ಯೋಜನೆಯನ್ನು ರೂಪಿಸುವುದು ಸರಕಾರಕ್ಕೂ ಸಾಧ್ಯವಾಗುವುದಿಲ್ಲ.
ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ದೈಹಿಕವಾಗಿ ಮಲಹೊರುವ ಪ್ರಕರಣಗಳ ಒಟ್ಟು ಸಂಖ್ಯೆಯನ್ನು ಬಹಿರಂಗಪಡಿಸುವಂತೆ ರಾಜ್ಯ ಸಭಾ ಸದಸ್ಯ ಸಾಕೇತ್ ಗೋಖಲೆ ಸದನದಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಸಚಿವ ರಾಮದಾಸ ಅಠಾವಳೆ ಅವರು, ಕಳೆದ ಐದು ವರ್ಷಗಳಲ್ಲಿ ಇಂತಹ ಯಾವುದೇ ಘಟನೆಗಳು ದೇಶದಲ್ಲಿ ನಡೆದಿಲ್ಲ ಎಂದು ತಿಳಿಸಿದ್ದರು. ಮ್ಯಾನುವಲ್ ಸ್ಕ್ಯಾವೆಂಜಿಂಗ್ ಕಾಯ್ದೆ ೨೦೧೩ ಜಾರಿಗೊಂಡ ಬಳಿಕ ದೈಹಿಕವಾಗಿ ಮಲಹೊರುವ ಪದ್ಧತಿಯನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಅವರು ವಿವರಿಸಿದ್ದರು. ಸಚಿವಾಲಯವು ಮ್ಯಾನುವಲ್ ಸ್ಕಾವೆಂಜರ್ಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ೨೦೨೦ರಲ್ಲಿ ಮೊಬೈಲ್ ಆ್ಯಪ್ನ್ನು ಆರಂಭಿಸಿತ್ತು. ಇದರಲ್ಲಿ ನೂರಕ್ಕೂ ಅಧಿಕ ಜಿಲ್ಲೆಗಳಿಂದ ೬,೦೦೦ಕ್ಕೂ ಅಧಿಕ ದೂರುಗಳು ಬಂದಿದ್ದವು. ಆದರೆ ಸರಕಾರ ಇವೆಲ್ಲವುಗಳನ್ನು ಪರಿಶೀಲಿಸಿ ಈ ದೂರುಗಳು ವಿಶ್ವಾಸಾರ್ಹವಲ್ಲ ಎಂದು ತಿಳಿಸಿದೆ. ಆದರೆ ಸರಕಾರದ ಹೇಳಿಕೆಗಳಿಗೆ ವ್ಯತಿರಿಕ್ತವಾಗಿ ಹಲವು ವರದಿಗಳು ಮಲಹೊರುವ ಪದ್ಧತಿ ಜೀವಂತವಿರುವುದನ್ನು ಬಹಿರಂಗಪಡಿಸಿವೆೆ. ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನದಂತಹ ರಾಜ್ಯಗಳಲ್ಲಿ ದೈಹಿಕವಾಗಿ ಮಲಹೊರುವ ಪದ್ಧತಿ ಜೀವಂತವಾಗಿವೆ ಎನ್ನುವುದನ್ನು ಸ್ಪಷ್ಟಪಡಿಸಿವೆ. ಸಫಾಯಿ ಕರ್ಮಚಾರಿ ಆಯೋಗದ ಹೇಳಿಕೆಯಂತೆ ಕರ್ನಾಟಕವೊಂದರಲ್ಲೇ ೨೦೨೦ರಿಂದ ೯೦ ಮಂದಿ ಶೌಚ ಕಾರ್ಮಿಕರು ಮೃತಪಟ್ಟಿದ್ದಾರೆ. ಇಷ್ಟಾದರೂ, ಸರಕಾರ ಕಳೆದ ಐದು ವರ್ಷಗಳಿಂದ ಮಲಹೊರುವ ಪ್ರಕರಣ ನಡೆದೇ ಇಲ್ಲ ಎನ್ನುತ್ತಿದೆ. ಸಚಿವ ರಾಮದಾಸ ಅಠಾವಳೆ ದಲಿತ ಸಮುದಾಯದಿಂದ ಬಂದವರು. ತನ್ನ ಸಮುದಾಯವನ್ನು ಈ ಕೆಟ್ಟ ವೃತ್ತಿಯಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ, ಅವರು ಈ ಬಗ್ಗೆ ಪರಿಶೀಲಿಸಿ ಉತ್ತರವನ್ನು ನೀಡಬೇಕಾಗಿತ್ತು. ಆದರೆ ಅವರಿಗೆ ತನ್ನ ಸಮುದಾಯದ ಹಿತಾಸಕ್ತಿಗಿಂತ ಸರಕಾರದ ಹಿತಾಸಕ್ತಿಯೇ ಮುಖ್ಯವೆನಿಸಿದೆ. ಸರಕಾರದ ಹೇಳಿಕೆ ಲಜ್ಜೆಗೇಡಿತನದಿಂದ ಕೂಡಿದೆ ಎಂದು ಸಾಕೇತ್ ಗೊಕಲೆ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಾರೆ.
ಕರ್ನಾಟಕದ ಕೋಲಾರ ಚಿನ್ನದ ಗಣಿಗಾಗಿ ಮಾತ್ರ ಖ್ಯಾತಿ ಪಡೆದಿರುವುದಲ್ಲ, ಮಲಹೊರುವ ಪದ್ಧತಿಗಾಗಿಯೂ ಕುಖ್ಯಾತಿಯನ್ನು ಪಡೆದಿದೆ. ಇದೇ ಕೋಲಾರದಲ್ಲಿರುವ ಮೊರಾರ್ಜಿ ದೇಸಾಯಿ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳನ್ನು ಮಲದಗುಂಡಿಗೆ ಇಳಿಸಿರುವುದು ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಮಲಹೊರುವ ಪದ್ಧತಿ ರಾಜ್ಯದಲ್ಲಿ ಜೀವಂತವಿದೆ ಎಂದು ಸ್ವತಃ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿತ್ತು ಮಾತ್ರವಲ್ಲ, ಮಲಹೊರುವ ವ್ಯವಸ್ಥೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಭಾರತದಲ್ಲಿ ಶೇ. ೩೪ರಷ್ಟು ಜಿಲ್ಲೆಗಳಲ್ಲಿ ಮಲಹೊರುವ ಪದ್ಧತಿಯಿದೆ ಎನ್ನುವ ಅಂಶವನ್ನು ೨೦೨೩ರಲ್ಲಿ ಕೇಂದ್ರ ಸಮಾಜ ಕಲ್ಯಾಣ ಇಲಾಖೆ ಒಪ್ಪಿಕೊಂಡಿತ್ತು. ೭೬೬ ಜಿಲ್ಲೆಗಳ ಪೈಕಿ ೫೦೮ ಜಿಲ್ಲೆಗಳಲ್ಲಿ ಮಲಹೊರುವ ಪದ್ಧತಿಯಿಲ್ಲ ಎಂದು ಕೇಂದ್ರ ಸರಕಾರ ಹೇಳಿಕೆಯಲ್ಲಿ ತಿಳಿಸಿತ್ತು. ೧೯೯೩ರಿಂದ ೨೦೧೪ರವರೆಗೆ ಗುಜರಾತಿನಲ್ಲಿ ೧೪ ಮಂದಿ ಶೌಚಗುಂಡಿಯಲ್ಲಿ ಮೃತಪಟ್ಟಿದ್ದರು. ಆದರೆ ಸರಕಾರ ಅವರು ಶೌಚಗುಂಡಿಯಲ್ಲಿ ಮೃತಪಟ್ಟಿಲ್ಲ ಎನ್ನುವುದನ್ನು ಸಾಬೀತು ಮಾಡಲು ಶತಾಗತಾಯ ಹೋರಾಟ ನಡೆಸಿತು. ಈ ಸ್ವಚ್ಛತಾ ಕಾರ್ಮಿಕರ ಕುಟುಂಬಕ್ಕೆ ಪರಿಹಾರ ನೀಡದೇ ಇರುವುದಕ್ಕಾಗಿ ಕಳೆದ ವರ್ಷ ಗುಜರಾತ್ ಹೈಕೋರ್ಟ್ ಸರಕಾರಕ್ಕೆ ಛೀಮಾರಿ ಹಾಕಬೇಕಾಗಿ ಬಂತು. ಇಂದಿಗೂ ಸ್ವಚ್ಛತಾ ಕಾರ್ಮಿಕರು ಮಲದಗುಂಡಿಯಲ್ಲಿ ಮೃತಪಟ್ಟರೆ ಅದನ್ನು ಬೇರೆ ಅವಘಡವಾಗಿ ಗುರುತಿಸಿ ಪ್ರಕರಣವನ್ನು ಮುಚ್ಚಿ ಹಾಕಲು ಸರಕಾರ ಯತ್ನಿಸುತ್ತದೆ. ಸಾಮಾಜಿಕ ಸಂಘಟನೆಗಳು ಸಂತ್ರಸ್ತರ ಪರವಾಗಿ ನ್ಯಾಯಾಲಯದ ಮೊರೆ ಹೋಗುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗುತ್ತದೆ. ತನ್ನ ಮಾನ ಉಳಿಸಿಕೊಳ್ಳುವ ಭಾಗವಾಗಿ ಸರಕಾರ, ಅದು ಮಲದಗುಂಡಿ ಶುಚಿಗೊಳಿಸುವ ಸಂದರ್ಭದಲ್ಲಿ ನಡೆದ ಅವಘಡವಲ್ಲ ಎನ್ನುವುದನ್ನು ನಿರೂಪಿಸಲು ಸರ್ವ ಪ್ರಯತ್ನವನ್ನು ಮಾಡುತ್ತದೆ.
ಅನೇಕ ಸಂದರ್ಭದಲ್ಲಿ ಕೇಸು ದಾಖಲಿಸಲು ಸಂತ್ರಸ್ತರು ಮುಂದಾಗುವುದೇ ಇಲ್ಲ.ಸಂತ್ರಸ್ತರು ಕೆಳಜಾತಿಗೆ ಸೇರಿದವರು ಮಾತ್ರವಲ್ಲ, ಬಡವರೂ ಆಗಿರುತ್ತಾರೆ. ಅವರಿಂದ ಶೌಚಗುಂಡಿಯನ್ನು ಶುಚಿಗೊಳಿಸಲು ಒತ್ತಾಯಿಸುವವರು ಮೇಲ್ಜಾತಿಗೆ ಸೇರಿರುತ್ತಾರೆ ಮಾತ್ರವಲ್ಲ, ಶ್ರೀಮಂತರೂ ಕೂಡ ಆಗಿರುತ್ತಾರೆ. ಉತ್ತರ ಭಾರತದ ಗ್ರಾಮೀಣ ಪ್ರದೇಶದಲ್ಲಿ ಇಂತಹ ಪ್ರಕರಣಗಳು ಜರುಗಿದರೆ, ಜಮೀನ್ದಾರರ ಅಥವಾ ಮೇಲ್ಜಾತಿಗಳ ವಿರುದ್ಧ ಪೊಲೀಸ್ ಠಾಣೆಯನ್ನು ತುಳಿಯಲು ಸಂತ್ರಸ್ತರು ಹೆದರುತ್ತಾರೆ. ಒಂದು ವೇಳೆ ಪೊಲೀಸ್ ಠಾಣೆಗೆ ಹೋದರು ಪೊಲೀಸರು ಪ್ರಕರಣವನ್ನು ಮುಚ್ಚಿಹಾಕಲು ಸರ್ವ ಪ್ರಯತ್ನವನ್ನು ನಡೆಸುತ್ತಾರೆ. ಜಿಲ್ಲಾಡಳಿತಕ್ಕೂ ಪ್ರಕರಣ ಬಹಿರಂಗವಾಗುವುದು ಇಷ್ಟವಿರುವುದಿಲ್ಲ. ಆದುದರಿಂದ ಸಂತ್ರಸ್ತರಿಗೆ ಅಲ್ಪಪರಿಹಾರವನ್ನು ಕೊಟ್ಟು ಅವರ ಬಾಯಿ ಮುಚ್ಚಿಸಲಾಗುತ್ತದೆ. ಈ ಕಾರಣದಿಂದಲೇ, ಸರಕಾರದ ದಾಖಲೆ ಪುಸ್ತಕಗಳಲ್ಲಿ ಪ್ರಕರಣಗಳು ದಾಖಲಾಗುವುದಿಲ್ಲ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ೨೦೨೧ರಲ್ಲಿ ಸರಕಾರದ ಹೇಳಿಕೆಗಳಿಗೆ ವಿರುದ್ಧವಾಗಿ, ದೈಹಿಕವಾಗಿ ಮಲಹೊರುವ ಪದ್ಧತಿ ಭಾರತದಲ್ಲಿ ಇನ್ನೂ ಜೀವಂತವಾಗಿದೆ ಎಂದು ಸ್ಪಷ್ಟಪಡಿಸಿತ್ತು. ಅದು ನಿವಾರಣೆಯಾಗುವ ದಾರಿ ದೂರದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿತ್ತು. ಮಾಧ್ಯಮ ವರದಿಗಳನ್ನು ಆಧರಿಸಿ ೨೦೧೮ ಮತ್ತು ೨೦೨೩ರ ನಡುವೆ ಒಳಚರಂಡಿಗಳು ಮತ್ತು ಸೆಪ್ಟಿಕ್ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸುವಾಗ ೩೩೯ ವ್ಯಕ್ತಿಗಳು ಮೃತಪಟ್ಟಿದ್ದಾರೆ ಎಂದು ಸರಕಾರಿ ದತ್ತಾಂಶಗಳು ತೋರಿಸಿವೆ ಮತ್ತು ಇದನ್ನು ಅಂದು ಸ್ವತಃ ಸಚಿವ ಅಠಾವಳೆ ಅವರೇ ಒಪ್ಪಿಕೊಂಡಿದ್ದರು.
ಇಂದು ದೈಹಿಕವಾಗಿ ಮಲಹೊರುವ ವ್ಯವಸ್ಥೆ ತನ್ನ ರೂಪವನ್ನು ಬದಲಾಯಿಸಿಕೊಂಡಿದೆ. ಆಧುನಿಕ ದಿನಗಳಲ್ಲಿ ಶೌಚ ಕಾರ್ಮಿಕರನ್ನು ಬೇರೆ ಬೇರೆ ಹೆಸರಿನಲ್ಲಿ ಮತ್ತೆ ಮಲಹೊರುವ ವ್ಯವಸ್ಥೆಗೆ ಬಳಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಎಲ್ಲ ಬಗೆಯ ಮಲಹೊರುವ ಪದ್ಧತಿಯನ್ನೂ ಗುರುತಿಸುವ ಕೆಲಸವಾಗಬೇಕು. ಮಲಹೊರುವ, ಅಥವಾ ಮಲದಗುಂಡಿಯನ್ನು ಶುಚಿಗೊಳಿಸುವ ಕೆಲಸವನ್ನೇ ಜೀವನೋಪಾಯವಾಗಿ ಅಳವಡಿಸಿಕೊಂಡಿರುವ ಸಮುದಾಯಗಳು ಇನ್ನೂ ಹಳ್ಳಿಗಳಲ್ಲಿ ಜೀವಂತವಾಗಿವೆ. ಇವರಿಗೆ ಈ ಕೆಲಸವಲ್ಲದೆ ಬೇರೆ ಕೆಲಸವನ್ನು ಹಳ್ಳಿಗಳಲ್ಲಿರುವ ವ್ಯವಸ್ಥೆ ನೀಡುವುದೂ ಇಲ್ಲ. ಈ ವೃತ್ತಿ ಇಲ್ಲ ಎಂದರೆ ಇವರಿಗೆ ಉಪವಾಸ ಅಥವಾ ಇವರು ವೃತ್ತಿಯನ್ನು ನಿರಾಕರಿಸಲು ಮುಂದಾದರೆ ಇವರನ್ನು ಸಾಮಾಜಿಕವಾಗಿ ಬಹಿಷ್ಕಾರ ಮಾಡುವ ಸ್ಥಿತಿ ಗ್ರಾಮೀಣ ಪ್ರದೇಶದಲ್ಲಿದೆ. ಭಾರತದಲ್ಲಿ ಮಲ ಹೊರುವ ಪದ್ಧತಿಯ ವಿರುದ್ಧ ಹೋರಾಟ ಎಂದರೆ, ಜಾತಿಯ ಹೆಸರಿನಲ್ಲಿ ನಡೆಯುವ ಶೋಷಣೆಯ ವಿರುದ್ಧ ಹೋರಾಟ. ಜಾತಿ ಅಸಮಾನತೆಯೆಂಬ ಮಲವನ್ನು ಹೊತ್ತು ತಿರುಗುತ್ತಿರುವವರು ತಮ್ಮ ತಲೆಯಿಂದ ಅದನ್ನು ಕೆಳಿಗಿಳಿಸದೆ ಈ ದೇಶದಲ್ಲಿ ಮಲಹೊರುವ ವ್ಯವಸ್ಥೆಯನ್ನು ಸಂಪೂರ್ಣ ಇಲ್ಲವಾಗಿಸುವುದು ಸಾಧ್ಯವಿಲ್ಲ.