ಫೆಲೆಸ್ತೀನ್ ಪರವಾಗಿ ಧ್ವನಿಯೆತ್ತುವುದು ಕರ್ನಾಟಕದಲ್ಲೇಕೆ ಅಪರಾಧ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಜಗತ್ತಿನಲ್ಲಿ ನಡೆಯುವ ಅನ್ಯಾಯಗಳನ್ನು ಖಂಡಿಸುವುದು, ಪ್ರತಿರೋಧಿಸುವುದು, ಅನ್ಯಾಯ, ಅಕ್ರಮಗಳಲ್ಲಿ ತೊಡಗಿರುವ ದೇಶಗಳ ಮುಂದೆ ತನ್ನ ಪ್ರತಿಭಟನೆಯನ್ನು ದಾಖಲಿಸುವುದು ‘ವಿಶ್ವಗುರು’ವಾಗುವ ಹಂಬಲಿಕೆಯುಳ್ಳ ದೇಶವೊಂದರ ಪ್ರಧಾನ ಗುಣವಾಗಿದೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತ ವಿಶ್ವ ಗುರುವಾಗಿದೆಯೋ ಇಲ್ಲವೋ, ಆದರೆ ನೆಹರೂ ಅವರು ನೆಚ್ಚಿಕೊಂಡ ಅಲಿಪ್ತ ನೀತಿಯ ಕಾರಣದಿಂದಾಗಿ ಈ ದೇಶ ಜಗತ್ತಿನ ತೃತೀಯ ಶಕ್ತಿಯಾಗಿ ಸದಾ ತನ್ನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದೆ. ದುರ್ಬಲ ದೇಶಗಳ ಮೇಲೆ ಅಕ್ರಮಗಳು ನಡೆದಾಗ ತನ್ನ ಪ್ರತಿರೋಧವನ್ನು ವ್ಯಕ್ತಪಡಿಸಲು ಯಾವತ್ತೂ ಹಿಂಜರಿಕೆ ವ್ಯಕ್ತಪಡಿಸಿಲ್ಲ. ವಿಶ್ವದ ದಮನಿತ ಜನರ ಮಾನವ ಹಕ್ಕುಗಳಿಗಾಗಿ ಸದಾ ಮಿಡಿಯುತ್ತಾ ಬಂದ ದೇಶವಾಗಿದೆ ಭಾರತ. ಆದರೆ ಇತ್ತೀಚಿನ ದಿನಗಳಲ್ಲಿ ಗೆದ್ದೆತ್ತಿನ ಬಾಲ ಹಿಡಿಯುವುದನ್ನೇ ತನ್ನ ವಿದೇಶಾಂಗ ನೀತಿಯಾಗಿ ಭಾವಿಸಿಕೊಂಡಿರುವ ಕೇಂದ್ರ ಸರಕಾರ, ವಿಶ್ವಗುರುವಾಗುವುದೆಂದರೆ ತನ್ನ ಸ್ವಂತಿಕೆಯನ್ನು ಕಳೆದುಕೊಂಡು ಬಲಿಷ್ಠ ದೇಶಗಳನ್ನು ಹಿಂಬಾಲಿಸುವುದು ಎಂದು ತಪ್ಪು ತಿಳಿದುಕೊಂಡಿದೆ. ಬಲಿಷ್ಠ ದೇಶಗಳ ಸ್ನೇಹವೆಂದರೆ, ಅವುಗಳು ಹಾಕಿದ ಉರುಳಿಗೆ ತನ್ನ ಕೊರಳನ್ನು ಒಡ್ಡಿಕೊಳ್ಳುವುದಲ್ಲ. ಅಮೆರಿಕದ ಸ್ನೇಹ ಮಾಡಿ ಪಾಕಿಸ್ತಾನದ ಗತಿಯೇನಾಯಿತು ಎನ್ನುವ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ. ಇಂತಹ ಹೊತ್ತಿನಲ್ಲಿ ಅಮೆರಿಕದಂತಹ ಶ್ರೀಮಂತ ದೇಶಗಳ ಓಲೈಕೆಗಾಗಿ ತನ್ನ ಹಿತಾಸಕ್ತಿಯನ್ನು ಬಲಿಕೊಡುವುದು ಭಾರತದ ಸಮಗ್ರತೆಗೆ ಭಾರೀ ಧಕ್ಕೆಯನ್ನುಂಟು ಮಾಡಲಿದೆ.
ಜರ್ಮನಿಯು ಯೆಹೂದಿಗಳ ಮೇಲೆ ಎಸಗಿದ ದೌರ್ಜನ್ಯಗಳಿಂದಲೂ ಭೀಕರವಾದ ನರಮೇಧ, ಇದೀಗ ಯೆಹೂದಿಗಳಿಂದ ಫೆಲೆಸ್ತೀನ್ ಮಕ್ಕಳ ಮೇಲೆ ನಡೆಯುತ್ತಿದೆ. ಜಗತ್ತು ದೊಡ್ಡ ಧ್ವನಿಯಲ್ಲಿ ಇದರ ವಿರುದ್ಧ ಮಾತನಾಡುತ್ತಿದೆ. ಅಮೆರಿಕದಂತಹ ಒಂದೆರಡು ಬಲಿಷ್ಠ ದೇಶಗಳನ್ನು ಹೊರತು ಪಡಿಸಿದರೆ ಈ ಅಮಾನವೀಯ ದೌರ್ಜನ್ಯಗಳ ಜೊತೆಗೆ ಯಾವ ದೇಶಗಳೂ ಗುರುತಿಸಿಕೊಳ್ಳಲು ಮುಂದಾಗುತ್ತಿಲ್ಲ. ಯಾಕೆಂದರೆ, ಮನುಷ್ಯ ಇತಿಹಾಸಕ್ಕೆ ಕಳಂಕವಾಗಿರುವ ಈ ನರಮೇಧ, ಹಿಟ್ಲರ್ ಜರ್ಮನಿಯಲ್ಲಿ ನಡೆಸಿದ ನರಮೇಧಕ್ಕಿಂತಲೂ ಭೀಕರವಾದುದು ಎನ್ನುವುದು ಅವುಗಳಿಗೆ ಗೊತ್ತಿದೆ. ಇದರ ಜೊತೆಗೆ ನಿಂತು ಇತಿಹಾಸ ಪುಸ್ತಕದಲ್ಲಿ ಆಧುನಿಕ ಹಿಟ್ಲರ್‌ನಾಗಿ ದಾಖಲಾಗಲು ಯಾವ ದೇಶಗಳಿಗೂ ಇಷ್ಟವಿಲ್ಲ. ಆದರೆ ಭಾರತ ಮಾತ್ರ ಈ ಹಿಟ್ಲರ್ ಕೃತ್ಯದಲ್ಲಿ ಅನಗತ್ಯವಾಗಿ, ಅತ್ಯುತ್ಸಾಹದಿಂದ ಪಾಲು ಪಡೆಯಲು ಮುಂದಾಗಿದೆ. ವಿಶ್ವಸಂಸ್ಥೆಯ ‘ಕದನ ವಿರಾಮ’ ನಿರ್ಣಯದಿಂದ ದೂರ ಉಳಿದುದು ಮಾತ್ರವಲ್ಲ, ಗಾಝಾದಲ್ಲಿ ನಡೆಯುತ್ತಿರುವ ಅಮಾಯಕ ಮಕ್ಕಳ ಸಾವು ನೋವುಗಳ ವಿರುದ್ಧ ಸ್ಪಷ್ಟವಾದ ಖಂಡನಾ ಹೇಳಿಕೆಯನ್ನು ಈವರೆಗೆ ಭಾರತ ಬಿಡುಗಡೆ ಮಾಡಿಲ್ಲ. ವಿಪರ್ಯಾಸವೆಂದರೆ, ಇಸ್ರೇಲ್‌ನ ಕೃತ್ಯಗಳ ವಿರುದ್ಧ ಭಾರತದೊಳಗಿನ ಧ್ವನಿಯನ್ನೇ ಅದುಮಿ ಇಸ್ರೇಲ್ ಸರಕಾರದ ಕಾವಲಿಗೆ ನಿಂತಿದೆ ಭಾರತದ ಸರಕಾರ. ವಿಶ್ವದ ಯಾವುದೇ ಮೂಲೆಯಲ್ಲಿ ನಡೆಯುವ ಮಾನವ ಹಕ್ಕುಗಳ ಮೇಲಿನ ದಮನವನ್ನು ಒಂದು ದೇಶ ಪ್ರತಿಭಟಿಸುತ್ತದೆಯೆಂದರೆ ಆ ದೇಶದಲ್ಲಿ ಜೀವ ಉಳಿಸಿಕೊಂಡಿರುವ ಮನುಷ್ಯ ಹಕ್ಕುಗಳನ್ನು ಅದು ಎತ್ತಿ ಹಿಡಿಯುತ್ತದೆ.
ದುರದೃಷ್ಟಕ್ಕೆ, ದೇಶದ ಹಲವು ರಾಜ್ಯಗಳಲ್ಲಿ ಫೆಲೆಸ್ತೀನ್ ಪರವಾದ ಪ್ರತಿಭಟನೆಗಳಿಗೆ ಪೊಲೀಸರು ಅನುಮತಿಯನ್ನು ನೀಡುತ್ತಿಲ್ಲ. ಫೆಲೆಸ್ತೀನ್ ಪರವಾಗಿ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ದಾಖಲಿಸಿದ ತಪ್ಪಿಗಾಗಿ ಅಮಾಯಕರನ್ನು ಬಂಧಿಸುತ್ತಿರುವ ಘಟನೆಗಳು ಭಾರತದಲ್ಲಿ ನಡೆಯುತ್ತಿವೆ. ಈ ದಬ್ಬಾಳಿಕೆಗಾಗಿ ಕರ್ನಾಟಕವೂ ಸುದ್ದಿಯಲ್ಲಿರುವುದು ವಿಪರ್ಯಾಸವಾಗಿದೆ. ‘ಮಕ್ಕಳು, ನಾಗರಿಕರ ಮೇಲೆ ನಡೆಯುವ ನರಮೇಧ ನಿಲ್ಲಲಿ’ ಎಂದು ಧ್ವನಿಯೆತ್ತುವುದು ಪ್ರಜಾಸತ್ತಾತ್ಮಕವಾದ ದೇಶದಲ್ಲಿ ಅಪರಾಧವಾಗುವುದು ಹೇಗೆ? ಎನ್ನುವ ಪ್ರಶ್ನೆಗೆ ಈವರೆಗೆ ಪೊಲೀಸ್ ಇಲಾಖೆಗಳು ಉತ್ತರಿಸುವಲ್ಲಿ ವಿಫಲವಾಗಿದೆ. ಫೆಲೆಸ್ತೀನ್ ಯಾವತ್ತೂ ಭಾರತದ ಶತ್ರು ದೇಶವಾಗಿ ಗುರುತಿಸಿಕೊಂಡಿಲ್ಲ. ಭಾರತದ ಹಲವು ಮಿತ್ರ ದೇಶಗಳು ಫೆಲೆಸ್ತೀನ್‌ನಲ್ಲಿ ನಡೆಯುತ್ತಿರುವ ಸಾವು ನೋವುಗಳಿಗೆ ಸ್ಪಂದಿಸಿವೆ. ಭಾರತದ ಮಟ್ಟಿಗೆ ಇಸ್ರೇಲ್ ಅನಿವಾರ್ಯವಾಗಿರುವ ಮಿತ್ರ ದೇಶವೇನೂ ಅಲ್ಲ. ಇಲ್ಲಿನ ದ್ವೇಷ ರಾಜಕಾರಣಕ್ಕೆ ಪೂರಕವಾದ ಇಂಧನಗಳು ಇಸ್ರೇಲ್ ಜೊತೆಗೆ ಸಮ್ಮಿಳಿತಗೊಂಡಿರುವುದರಿಂದ ಇಸ್ರೇಲ್ ಜೊತೆಗಿನ ಸ್ನೇಹ ಬಾಂಧವ್ಯವನ್ನು ಸ್ವತಃ ಮೋದಿ ನೇತೃತ್ವದ ಸರಕಾರ ಹೇರಿಕೊಂಡಿದೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇಸ್ರೇಲ್‌ನ ಜೊತೆಗಿನ ‘ದ್ವೇಷ’ ಸಂಬಂಧ’ವನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಈ ದೇಶದ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನಿಸಲು ಹೊರಟಿದೆ.
ಭಾರತದ ಜನತೆ ವಿರೋಧ ವ್ಯಕ್ತಪಡಿಸುತ್ತಿರುವುದು ಇಸ್ರೇಲ್‌ನ ಸರಕಾರ ಫೆಲೆಸ್ತೀನ್‌ನಲ್ಲಿ ನಡೆಯುತ್ತಿರುವ ಹತ್ಯಾಕಾಂಡಗಳ ವಿರುದ್ಧವೇ ಹೊರತು, ಇಸ್ರೇಲ್ ದೇಶದ ವಿರುದ್ಧವಲ್ಲ. ಇದೇ ಸಂದರ್ಭದಲ್ಲಿ ವಿಶ್ವ ಖಂಡಿಸುತ್ತಿರುವುದು ಹಮಾಸ್ ಹೋರಾಟಗಾರರ ಮೇಲಿನ ದಾಳಿಯನ್ನಲ್ಲ. ಹಮಾಸ್‌ನ್ನು ಮುಂದಿಟ್ಟುಕೊಂಡು ಇಸ್ರೇಲ್ ಗಾಝಾದಲ್ಲಿರುವ ಅಮಾಯಕ ನಾಗರಿಕರನ್ನು ಕೊಲ್ಲುತ್ತಿರುವುದರ ವಿರುದ್ಧ ತಮ್ಮ ಪ್ರತಿಭಟನೆಗಳನ್ನು ವಿಶ್ವ ದಾಖಲಿಸುತ್ತಿದೆ. ಭಾರತದ ಜನತೆಯೂ ಇದರ ಜೊತೆಗೆ ತಮ್ಮ ಧ್ವನಿಯನ್ನು ಸೇರಿಸಿದ್ದಾರೆ. ಆದರೆ, ಈ ಧ್ವನಿಯನ್ನು ದಮನಿಸುವ ಪ್ರಯತ್ನವನ್ನು ಭಾರತದ ಸರಕಾರವೇ ನಡೆಸುತ್ತಿದೆ. ಕರ್ನಾಟಕದಲ್ಲಿ ಇತ್ತೀಚೆಗೆ ಪ್ರಗತಿಪರರು ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ಯತ್ನಿಸಿದಾಗ ಪೊಲೀಸ್ ಇಲಾಖೆ ಅನುಮತಿ ನೀಡಲಿಲ್ಲ. ಮಾತ್ರವಲ್ಲ, ಬಲವಂತವಾಗಿ ಪ್ರತಿಭಟನೆಯನ್ನು ಹತ್ತಿಕ್ಕಲಾಯಿತು. ಹಾಗೆಯೇ ಬೆಂಗಳೂರಿನಲ್ಲಿ ನವೆಂಬರ್ ೫ರಂದು ಫೆಲೆಸ್ತೀನ್ ಪರವಾಗಿ ಪ್ರತಿಭಟನೆ ನಡೆಸಿದ ಹಲವರ ಮೇಲೆ ಪೊಲೀಸರು ಕೇಸು ದಾಖಲಿಸಿದ್ದಾರೆ. ‘ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ್ದಾರೆ’ ಎನ್ನುವುದು ಪೊಲೀಸರ ಆರೋಪವಾಗಿದೆ. ಅನುಮತಿ ಕೇಳಿದರೆ ಪೊಲೀಸರು ಕೊಡುತ್ತಿದ್ದರೆ? ಎನ್ನುವುದು ಇನ್ನೊಂದು ಪ್ರಶ್ನೆ. ಪ್ರತಿಭಟನೆಯಿಂದ ಸಾರ್ವಜನಿಕರಿಗೆ ಯಾವುದೇ, ಹಾನಿ ತೊಂದರೆಯಾಗದೇ ಇದ್ದರೂ, ಸಂಘಪರಿವಾರದ ಕಾರ್ಯಕರ್ತನೊಬ್ಬ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಶಾಂತಿ ಕೆಡಿಸಲು ಯತ್ನಿಸಿದ ಮಾಡಿದ ಸಂಘಪರಿವಾರ ಕಾರ್ಯಕರ್ತನ ವಿರುದ್ಧ ಯಾವುದೇ ಕ್ರಮವನ್ನು ಪೊಲೀಸರು ತೆಗೆದುಕೊಂಡಿಲ್ಲ.
ಎಲ್ಲಕ್ಕಿಂತಲೂ ಅಚ್ಚರಿಯ ವಿಷಯವೆಂದರೆ ರಾಜ್ಯ ಸರಕಾರದ ಮೌನ. ಕೇಂದ್ರ ಸರಕಾರದ ಇಸ್ರೇಲ್ ಪ್ರಣೀತವಾಗಿರುವ ಹಿಂಸಾ ರಾಜಕೀಯದ ಜೊತೆಗೆ ರಾಜ್ಯ ಸರಕಾರವೂ ಕೈಜೋಡಿಸಲು ಮುಂದಾಗಿರುವುದು ಆಘಾತಕಾರಿಯಾಗಿದೆ. ಸರಕಾರದ ಬೆಂಬಲವಿಲ್ಲದೆ, ರಾಜ್ಯ ಪೊಲೀಸರು ಪ್ರತಿಭಟನೆಗಳಿಗೆ ತಡೆಯೊಡ್ಡುವುದು, ಪ್ರಜಾಸತ್ತಾತ್ಮಕವಾಗಿ, ಶಾಂತವಾಗಿ ಪ್ರತಿಭಟಿಸಿದ ನಾಗರಿಕರ ಮೇಲೆ ಎಫ್‌ಐಆರ್ ದಾಖಲಿಸುವುದು ಸಾಧ್ಯವಿಲ್ಲ. ಫೆಲೆಸ್ತೀನ್ ಪರವಾಗಿ ಪ್ರತಿಭಟನೆ ನಡೆಸಲು ಅವಕಾಶ ನೀಡದೇ ಇರುವ ಪೊಲೀಸ್ ಇಲಾಖೆಯ ವಿರುದ್ಧ ನಾಡಿನ ಪ್ರಗತಿಪರರು ದೊಡ್ಡ ಧ್ವನಿಯಲ್ಲಿ ಖಂಡಿಸುತ್ತಿದ್ದರೂ, ರಾಜ್ಯ ಸರಕಾರ ಜಾಣ ಕಿವುಡು ಪ್ರದರ್ಶಿಸುತ್ತಿದೆ. ಶೋಷಿತ ಸಮುದಾಯದಿಂದ ನಾಯಕರಿಗೆ ಗೃಹ ಸಚಿವ ಸ್ಥಾನವನ್ನು ನೀಡಿದಾಗ ಅವರು ನೊಂದವರ ಪರವಾಗಿ ಪೊಲೀಸ್ ಇಲಾಖೆಯನ್ನು ಸಜ್ಜುಗೊಳಿಸುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ನೊಂದವರ ಪರವಾಗಿ ಕೆಲಸ ಮಾಡುವುದು ಪಕ್ಕಕ್ಕಿರಲಿ, ನೊಂದವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನದಲ್ಲಿದೆ ಪೊಲೀಸ್ ಇಲಾಖೆ. ಇದು ನಿಜಕ್ಕೂ ರಾಜ್ಯದ ಪಾಲಿಗೆ ಒಳಿತನ್ನುಂಟು ಮಾಡುವುದಿಲ್ಲ. ಗೃಹ ಸಚಿವರು ತಕ್ಷಣ ಈ ಬಗ್ಗೆ ಪೊಲೀಸ್ ಇಲಾಖೆಗೆ ಸೂಚನೆಗಳನ್ನು ನೀಡಬೇಕಾಗಿದೆ.
ಫೆಲೆಸ್ತೀನ್ ಮಕ್ಕಳ ಪರವಾಗಿ ಧ್ವನಿಯೆತ್ತುವುದೆಂದರೆ ಪರೋಕ್ಷವಾಗಿ ಈ ನಾಡಿನ ಶೋಷಿತ ಮಕ್ಕಳ ಪರವಾಗಿ ಧ್ವನಿಯೆತ್ತುವುದೆಂದೇ ಅರ್ಥ. ಫೆಲೆಸ್ತೀನ್‌ನಲ್ಲಿ ಜನಾಂಗೀ ಯತೆಯ ಬಾಂಬಿಗೆ ಸಿಲುಕಿ ಸಾಯುತ್ತಿರುವ ಮಕ್ಕಳಿಗೂ, ಇಲ್ಲಿ ಅಸ್ಪಶ್ಯತೆ, ಜಾತೀಯತೆಯ ಕಾರಣಕ್ಕಾಗಿ ದೌರ್ಜನ್ಯಕ್ಕೊಳಗಾಗುವ ಮಕ್ಕಳಿಗೂ ದೊಡ್ಡ ವ್ಯತ್ಯಾಸವಿಲ್ಲ ಎನ್ನುವ ಸತ್ಯವನ್ನು ಗೃಹ ಸಚಿವರು ಅರ್ಥ ಮಾಡಿಕೊಂಡು ಪೊಲೀಸ್ ಇಲಾಖೆಗೆ ಮಾನವ ಹಕ್ಕಿನ ಬಗ್ಗೆ ಪ್ರಾಥಮಿಕ ಅರಿವನ್ನು ಮೂಡಿಸಲು ತರಗತಿಗಳನ್ನು ಹಮ್ಮಿಕೊಳ್ಳಬೇಕು.