ಅನುಪಯುಕ್ತ ಜಾನುವಾರುಗಳನ್ನು ಇಸ್ಕಾನ್ ಕಸಾಯಿಖಾನೆಗೆ ಮಾರಬಾರದೇಕೆ?
‘‘ಗೋರಕ್ಷಣೆಯ ಮುಖವಾಡದಲ್ಲಿ ಇಸ್ಕಾನ್ ಗೋವುಗಳನ್ನು ಕಸಾಯಿ ಖಾನೆಗೆ ಮಾರಾಟ ಮಾಡುತ್ತಿದೆ’’ ಎಂದು ‘ಇಸ್ಕಾನ್’ ಸಂಸ್ಥೆಯ ಮೇಲೆ ಬಿಜೆಪಿಯ ಸಂಸದೆ ಮೇನಕಾ ಗಾಂಧಿ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ‘‘ಗೋವುಗಳನ್ನು ಪಾಲನೆ ಮಾಡುವ ಹೆಸರಿನಲ್ಲಿ ಅವುಗಳನ್ನು ಕಸಾಯಿ ಖಾನೆಗೆ ಮಾರಾಟ ಮಾಡುವ ಇಸ್ಕಾನ್ ದೇಶದ ಅತಿ ದೊಡ್ಡ ಮೋಸಗಾರ ಸಂಸ್ಥೆ’’ ಎಂದು ಅವರು ಟೀಕಿಸಿದ್ದಾರೆ. ಪ್ರಾಣಿ ಹಕ್ಕುಗಳ ಹೋರಾಟಗಾತಿ ಮೇನಕಾಗಾಂಧಿ ಆಂಧ್ರ ಪ್ರದೇಶದ ಅನಂತಪುರ ನಗರದಲ್ಲಿರುವ ಇಸ್ಕಾನ್‌ನ ಗೋಶಾಲೆಗೆ ಭೇಟಿ ನೀಡಿದ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾ ಈ ಆರೋಪವನ್ನು ಮಾಡಿದ್ದಾರೆ. ಇಸ್ಕಾನ್ ಗೋಶಾಲೆಗೆ ಭೇಟಿ ನೀಡಿದಾಗ ಅಲ್ಲಿ ಒಂದೇ ಒಂದು ವಯಸ್ಸಾದ ಅಥವಾ ಮುದಿ ಗೋವುಗಳು ಇರಲಿಲ್ಲ. ಕರುಗಳು ಕೂಡ ಇರಲಿಲ್ಲ. ಹಾಲು ಕೊಡುವ ಗೋವುಗಳನ್ನು ಮಾತ್ರ ಇರಿಸಲಾಗಿದೆ. ಇದರಿಂದ ಗೋವುಗಳನ್ನು ಮಾರಾಟ ಮಾಡಿರುವುದು ಸ್ಪಷ್ಟವಾಗುತ್ತದೆ’’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ‘‘ಇಸ್ಕಾನ್ ಸಂಸ್ಥೆ ಹಾಲನ್ನು ಅವಲಂಬಿಸಿದೆ ಎಂದು ಹೇಳುತ್ತಾರೆ. ಆದರೆ ಇಸ್ಕಾನ್ ಕಸಾಯಿ ಖಾನೆಗಳಿಗೆ ಮಾರಾಟ ಮಾಡಿರುವಷ್ಟು ಗೋವುಗಳನ್ನು ಇತರ ಯಾರೂ ಮಾಡಿರಲು ಸಾಧ್ಯವಿಲ್ಲ’’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಇಸ್ಕಾನ್ ಆರೋಪವನ್ನು ನಿರಾಕರಿಸಿದೆ.
ಭಾರತದ ಸದ್ಯದ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಯ ಸಂದರ್ಭದಲ್ಲಿ ಮೇನಕಾ ಗಾಂಧಿ ಮಾಡಿದ ಆರೋಪ ಗಂಭೀರವಾದುದೇ ಆಗಿದೆ. ಆದರೆ ‘ಜಗತ್ತಿನ ಯಾವುದೇ ಹೈನೋದ್ಯಮ ಸಂಸ್ಥೆ’ಗಳಲ್ಲಿ ವೃದ್ಧ ಅಥವಾ ಹಾಲು ಕೊಡದ ಗೋವುಗಳನ್ನು ಹಟ್ಟಿಯಲ್ಲಿಟ್ಟು ಸಾಕುವ ಪರಿಪಾಠವೇ ಇಲ್ಲ. ಭಾರತ ತಲೆ ತಲಾಂತರಗಳಿಂದ ಹೈನೋದ್ಯಮವನ್ನು ನೆಚ್ಚಿಕೊಂಡು ಬಂದಿದೆ. ಇಲ್ಲಿನ ರೈತರು ಗೋಸಾಕಣೆಯ ಮೂಲಕವೇ ಆರ್ಥಿಕವಾಗಿ ಸದೃಢರಾಗಿದ್ದಾರೆ. ಹಟ್ಟಿಯಲ್ಲಿರುವ ಹಾಲು ಕೊಡದ ಗೋವುಗಳನ್ನು ಮಾರಾಟ ಮಾಡಿ ಅವುಗಳಿಂದ ದೊರಕಿದ ಹಣವನ್ನು ಹಾಲು ಕೊಡುವ ಹಸುಗಳಿಗೆ ಆಹಾರ ಪದಾರ್ಥಗಳನ್ನು ಕೊಳ್ಳುವುದಕ್ಕೆ, ಇನ್ನಿತರ ಮೂಲಭೂತ ಅಗತ್ಯಗಳನ್ನು ಈಡೇರಿಸಿಕೊಳ್ಳುತ್ತಾ ಬಳಸುತ್ತಾ ಬಂದಿದ್ದಾರೆ. ಈ ಮೂಲಕ ಹೈನೋದ್ಯಮ ನಷ್ಟೋದ್ಯಮವಾಗುವುದನ್ನು ಅವರು ತಡೆಯುತ್ತಾ ಬಂದಿದ್ದಾರೆ. ಹೈನೋದ್ಯಮ ಕೇವಲ ಹಾಲು, ತುಪ್ಪವನ್ನಷ್ಟೇ ನೆಚ್ಚಿಕೊಂಡಿಲ್ಲ. ಚರ್ಮ, ಮಾಂಸ ಅಷ್ಟೇ ಏಕೆ ಅದರ ಎಲುಬುಗಳಿಗೂ ಮಾರುಕಟ್ಟೆಯಲ್ಲಿ ಬೇಡಿಕೆಗಳಿವೆ. ಇವೆಲ್ಲವೂ ಗೋಸಾಕಣೆಗೆ ಪೂರಕವಾಗಿವೆ. ಗೋಸಾಕಣೆಯಿಂದ ರೈತರು ನಷ್ಟಕ್ಕೀಡಾಗದಂತೆ ತಡೆಯಲು ಇವು ಸಹಾಯ ಮಾಡುತ್ತಾ ಬಂದಿವೆ. ಆದರೆ ಯಾವಾಗ ಗೋಸಾಕಣೆಯೊಂದಿಗೆ ಸಂಬಂಧವಿಲ್ಲದ ರಾಜಕೀಯ ಜನರು ಅದರೊಳಗೆ ಮೂಗು ತೂರಿಸ ತೊಡಗಿದರೋ ಅಲ್ಲಿಂದ ಗೋ ಸಾಕಣೆ ರೈತರಿಗೆ ನಷ್ಟದಾಯಕವಾಯಿತು. ಗೋವುಗಳನ್ನು ಸಾಕಿ, ಹೈನೋದ್ಯಮಕ್ಕೆ ಕೊಡುಗೆ ಸಲ್ಲಿಸುತ್ತಿರುವವರು ಬದಿಗೆ ಸರಿದು, ರಸ್ತೆಗಳಲ್ಲಿ ವಾಹನಗಳನ್ನು ತಡೆದು ಗೋ ಸಾಗಾಟಕ್ಕೆ ಅಡ್ಡಿ ಪಡಿಸುವವರು, ಜಾನುವಾರು ವ್ಯಾಪಾರಕ್ಕೆ ತಡೆಯೊಡ್ಡುವವರು, ಗೋಶಾಲೆಗಳ ಹೆಸರಿನಲ್ಲಿ ಸರಕಾರದ ದುಡ್ಡುಗಳನ್ನು ದೋಚುವವರು ‘ಗೋರಕ್ಷಕರು’ ಎಂದು ಗುರುತಿಸಲ್ಪಟ್ಟರು.
ಇಸ್ಕಾನ್ ಆರ್ಥಿಕವಾಗಿ ಹಾಲನ್ನು ಅವಲಂಬಿಸುತ್ತದೆ ಎಂದಾದರೆ ಖಂಡಿತವಾಗಿಯೂ ಅನುತ್ಪಾದಕ ಗೋವುಗಳನ್ನು ಕಸಾಯಿಖಾನೆಗೆ ಮಾರಲೇಬೇಕು. ಇದರಲ್ಲಿ ತಪ್ಪೇನೂ ಇಲ್ಲ. ಆದರೆ ಈ ದೇಶದ ಲಕ್ಷಾಂತರ ರೈತರಿಗೆ ಜಾನುವಾರು ಮಾರಾಟ ಕಾಯ್ದೆ ಅನ್ವಯವಾಗುತ್ತದೆಯಾದರೆ ಅದು ಇಸ್ಕಾನ್ ಸಂಸ್ಥೆಗೂ ಅನ್ವಯವಾಗಬೇಕು. ಅರ್ಥ ಶಾಸ್ತ್ರದ ಭಾಗವಾಗಿರುವ ಹೈನೋದ್ಯಮದೊಳಗೆ ಧರ್ಮ ಶಾಸ್ತ್ರವನ್ನು ನುಗ್ಗಿಸುವ ಪ್ರಯತ್ನದಿಂದಾಗಿ ರೈತರಿಗೆ ತಮ್ಮ ಜಾನುವಾರುಗಳನ್ನು ಮಾರಾಟ ಮಾಡುವ ಹಕ್ಕು ಇಲ್ಲದಂತಾಗಿದೆ. ಇಂದು ರೈತರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡದಂತೆ ಅವರ ಕೈಗಳನ್ನು ಕಟ್ಟಿ ಹಾಕುವಲ್ಲಿ ಇಸ್ಕಾನ್‌ನಂತಹ ಧಾರ್ಮಿಕ ಸಂಘಟನೆಗಳ ಪಾತ್ರ ಬಹುದೊಡ್ಡದಿದೆ. ಸಾರ್ವಜನಿಕವಾಗಿ ಗೋವುಗಳನ್ನು ದೇವರೆಂದು ಕರೆಯುತ್ತಾ, ಅನುಪಯುಕ್ತ ಗೋವುಗಳ ಮಾರಾಟಗಳ ವಿರುದ್ಧ ಮಾತನಾಡುತ್ತಾ ಜನರನ್ನು ಯಾಮಾರಿಸಿಕೊಂಡು ಬಂದಿರುವ ಇಸ್ಕಾನ್ ಗುಟ್ಟಾಗಿ ಗೋವುಗಳನ್ನು ಕಸಾಯಿಖಾನೆಗೆ ಮಾರುತ್ತಿದೆ ಎಂದಾದರೆ ಅದು ರೈತರಿಗೆ, ಈ ದೇಶದ ಬಹುಸಂಖ್ಯಾತರಾಗಿರುವ ಗೋಮಾಂಸಾಹಾರಿಗಳಿಗೆ, ಜೊತೆಗೆ ಇಸ್ಕಾನ್‌ನ್ನು ಮುಗ್ಧವಾಗಿ ಅನುಸರಿಸುತ್ತಿರುವ ಭಕ್ತರಿಗೆ ಮಾಡಿದ ಬಹುದೊಡ್ಡ ವಂಚನೆ. ಈ ಆರೋಪವನ್ನು ಬಿಜೆಪಿಯ ನಾಯಕಿಯೊಬ್ಬರು ಮಾಡಿರುವುದರಿಂದ ಇಸ್ಕಾನ್ ಒಂದು ವಾಕ್ಯದ ಸ್ಪಷ್ಟೀಕರಣ ನೀಡಿ ಜಾರಿಕೊಳ್ಳುವಂತಿಲ್ಲ. ತನ್ನಲ್ಲಿರುವ ಅನುಪಯುಕ್ತ ಗೋವುಗಳನ್ನು ಸಾಕುವುದಕ್ಕೆ ಪರ್ಯಾಯ ವ್ಯವಸ್ಥೆ ಏನು ಮಾಡುತ್ತಿದೆ ಎನ್ನುವುದರ ಪೂರ್ಣ ವಿವರಗಳನ್ನು ಅದು ನೀಡಬೇಕು. ಒಂದು ವೇಳೆ ಅದು ಕಸಾಯಿಖಾನೆಗಳಿಗೆ ಮಾರುತ್ತದೆಯಾದರೆ, ಅದನ್ನೇ ಈ ದೇಶದ ರೈತರು ಮಾಡಿದರೆ ಯಾಕೆ ತಪ್ಪು? ಎನ್ನುವ ಪ್ರಶ್ನೆಗಳಿಗೆ ಇಸ್ಕಾನ್‌ನ ಮುಖಂಡರು ಸ್ಪಷ್ಟೀಕರಣ ನೀಡಬೇಕು.
ಜಾನುವಾರು ಮಾರಾಟಕ್ಕೆ ಸರಕಾರ ಕಾನೂನು ರೂಪಿಸಿದ ದಿನಗಳಿಂದ ಹೈನೋದ್ಯಮಗಳಲ್ಲಿ, ಗೋಸಾಕಣೆಯಲ್ಲಿ ತೊಡಗಿಸಿಕೊಂಡ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಗೋಸಾಕಣೆಗಳಿಂದ ದೂರವಾಗುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಗೋಸಾಕಣೆಯೊಂದಿಗೆ ಸಂಬಂಧವೇ ಇಲ್ಲದ ‘ನಕಲಿ ಗೋರಕ್ಷಕರು’, ಮಠಗಳು, ಸ್ವಾಮೀಜಿಗಳು, ಸರಕಾರೇತರ ಸಂಸ್ಥೆಗಳ ಮುಖ್ಯಸ್ಥರು ಸರಕಾರದ ದುಡ್ಡನ್ನು ಬಾಚಿಕೊಳ್ಳುತ್ತಿದ್ದಾರೆ. ಒಂದೆಡೆ ಸಂಘಪರಿವಾರದ ಕಾರ್ಯಕರ್ತರೆಂದು ಗುರುತಿಸಿಕೊಂಡ ಕೆಲವು ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳು ರೈತರು ಜಾನುವಾರುಗಳನ್ನು ಮಾರಾಟ ಮಾಡದಂತೆ ತಡೆಯುತ್ತಿದ್ದಾರೆ. ಜಾನುವಾರುಗಳನ್ನು ಸಾಗಿಸುವ ವಾಹನಗಳನ್ನು ತಡೆದು ದಾಂಧಲೆಗೈದು, ಅವರನ್ನು ದರೋಡೆ ಮಾಡುತ್ತಾ ಜೀವನ ನಡೆಸುತ್ತ್ತಿದ್ದಾರೆ. ಇನ್ನೊಂದೆಡೆ, ಜಾನುವಾರು ಮಾರಾಟಕ್ಕೆ ಒಡ್ಡಿದ ನಿಯಂತ್ರಣದಿಂದಾಗಿ ರೈತರು ಒಂದೋ ಅನುಪಯುಕ್ತ ಹಸುಗಳನ್ನು ಹಟ್ಟಿಯಲ್ಲಿಟ್ಟು ಸಾಕಬೇಕು ಅಥವಾ ಅವುಗಳನ್ನು ಗೋಶಾಲೆಗಳಿಗೆ ಉಚಿತವಾಗಿ ನೀಡಬೇಕು. ಅವುಗಳನ್ನು ಮಾರಾಟ ಮಾಡಿದರೆ ಕನಿಷ್ಠ ೫ರಿಂದ ೧೦,೦೦೦ ರೂ.ಯನ್ನು ಅವರು ಗಳಿಸಬಹುದಿತ್ತು. ಅದರಿಂದ ಅವರ ಜೀವನಾಶ್ಯಕತೆಗಳನ್ನು ಈಡೇರಿಸಿಕೊಳ್ಳಬಹುದಿತ್ತು. ಇಂದು ಗಲ್ಲಿಗಲ್ಲಿಗಳಲ್ಲಿ ಈ ಅನುಪಯುಕ್ತ ಗೋವುಗಳನ್ನು ಸಾಕಲು ‘ಗೋಶಾಲೆಗಳು’ ತಲೆಯೆತ್ತಿವೆ. ಸರಕಾರ ಇವುಗಳಿಗೆ ಪ್ರತಿವರ್ಷ ಕೋಟ್ಯಂತರ ರೂ. ಅನುದಾನಗಳನ್ನು ಬಿಡುಗಡೆ ಮಾಡುತ್ತಿದೆೆ. ಈ ಹಣದಿಂದ ಹೈನೋದ್ಯಮಕ್ಕೆ ಯಾವ ಲಾಭವೂ ಇಲ್ಲ. ಇತ್ತ ಗೋಶಾಲೆಗಳಲ್ಲಿ ಜಾನುವಾರುಗಳು ಆಹಾರವಿಲ್ಲದೆ ಹಸಿವಿನಿಂದ, ರೋಗರುಜಿನಗಳಿಂದ ಸಾಯುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ ಜಾನುವಾರುಗಳು ಅಕ್ರಮವಾಗಿ ಕಸಾಯಿಖಾನೆಗಳಿಗೆ ಸಾಗಾಟವಾಗುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಗೋಶಾಲೆಗಳೆನ್ನುವುದು ಬೃಹತ್ ಅಕ್ರಮ ಶಾಲೆಗಳಾಗಿ ಪರಿವರ್ತನೆಗೊಂಡಿವೆ. ಇಂದು ಇಸ್ಕಾನ್ ಮಾತ್ರವಲ್ಲ, ದೇಶಾದ್ಯಂತ ಇರುವ ಗೋಶಾಲೆಗಳಲ್ಲಿ ಬಹುತೇಕ ಸಂಸ್ಥೆಗಳು ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಕಳುಹಿಸಿ ಕೋಟ್ಯಂತರ ರೂ. ಲಾಭ ಮಾಡಿಕೊಳ್ಳುತ್ತಿರುವ ಬಗ್ಗೆ ಆರೋಪಗಳಿವೆ. ಗೋವಿನ ನಿಜವಾದ ಹಕ್ಕುದಾರ ನಷ್ಟಕ್ಕೀಡಾಗಿ ಸಾಲದ ಶೂಲದಿಂದ ತಿವಿಸಿಕೊಳ್ಳುತ್ತಿದ್ದಾನೆ. ಆದುದರಿಂದ ಮೇನಕಾಗಾಂಧಿಯ ಆರೋಪಗಳನ್ನು ಕೇಂದ್ರ ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಇಸ್ಕಾನ್ ಮಾತ್ರವಲ್ಲ, ಈ ದೇಶದಲ್ಲಿರುವ ಎಲ್ಲ ಗೋಶಾಲೆಗಳಲ್ಲಿ ಅನುಪಯುಕ್ತ ಗೋವುಗಳನ್ನು ಸಾಕುವ ಹೆಸರಿನಲ್ಲಿ ನಡೆಯುವ ಅಕ್ರಮ ತನಿಖೆಗೊಳಗಾಗಬೇಕು. ಸರಕಾರದ ಹಣ ಇಂತಹ ಗೋಶಾಲೆಗಳಿಗೆ ವರ್ಗಾವಣೆಯಾಗುವ ಬದಲು ಗೋಸಾಕಣೆಯಲ್ಲಿ ತೊಡಗಿಕೊಂಡ ನಿಜವಾದ ರೈತರಿಗೆ ತಲುಪಬೇಕು.