ಚುನಾವಣಾ ಆಯೋಗ ಎಂಬುದು ಯಾಕಿರಬೇಕು?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಈದೇಶದಲ್ಲಿ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಇದನ್ನು ನಿರ್ವಹಿಸಲು ಚುನಾವಣಾ ಆಯೋಗ ಎಂಬುದಿದೆ. ಚುನಾವಣಾ ವೇಳಾಪಟ್ಟಿಯನ್ನು ನಿಗದಿ ಪಡಿಸಿ ಪ್ರಕ್ರಿಯೆಗೆ ಚಾಲನೆ ನೀಡುವುದು ಮಾತ್ರವಲ್ಲ ಚುನಾವಣೆ ಸುಸಂಬದ್ಧವಾಗಿ ನಡೆಯುವಂತೆ ನೋಡಿಕೊಳ್ಳುವುದು ಆಯೋಗದ ಸಾಂವಿಧಾನಿಕ ಹೊಣೆಗಾರಿಕೆ. ಇದು ಸ್ವಾಯತ್ತ ಸಾಂವಿಧಾನಿಕ ಸಂಸ್ಥೆ. ಸರಕಾರದಲ್ಲಿರುವವರು ಸೇರಿದಂತೆ ಯಾರದೇ ಮುಲಾಜಿಗೆ ಇದು ಒಳಗಾಗಬಾರದು. ಆದರೆ ಕಳೆದ ಬಾರಿಗಿಂತ ಈ ಸಲ ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಅತ್ಯಂತ ಆಕ್ಷೇಪಾರ್ಹವಾಗಿದೆ. ವೇಳಾಪಟ್ಟಿಯನ್ನು ಪ್ರಕಟಿಸಿ ಐದು ಹಂತದ ಚುನಾವಣಾ ಪ್ರಕ್ರಿಯೆಯನ್ನು ನಿಭಾಯಿಸಿದರೆ ಮಾತ್ರ ಸಾಲದು. ಅದಕ್ಕಿಂತ ಮಿಗಿಲಾದ ಜವಾಬ್ದಾರಿ ತನಗಿದೆ ಎಂಬುದನ್ನು ಆಯೋಗ ಮರೆತಂತೆ ಕಾಣುತ್ತದೆ, ಇಲ್ಲವೇ ಮರೆತಂತೆ ನಟಿಸುತ್ತಿದೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಯಾವುದೇ ಭಾಷಣಕಾರರು ಕೋಮು ಪ್ರಚೋದನಕಾರಿ ಮಾತುಗಳನ್ನು ಆಡಬಾರದು, ವಿವಿಧ ಸಮುದಾಯಗಳ ನಡುವೆ ದ್ವೇಷದ ವಿಷಬೀಜ ಬಿತ್ತುವ ಭಾಷಣವನ್ನು ಮಾಡಬಾರದು ಎಂಬುದು ಚುನಾವಣಾ ಆಯೋಗದ ನಿಯಮಾವಳಿಯ ಬಹುಮುಖ್ಯ ಅಂಶ. ಆದರೆ ಹಿಂದಿನಂತೆ ಈ ಸಲ ಚುನಾವಣೆಯಲ್ಲೂ ದ್ವೇಷ ಭಾಷಣಗಳ ಸುರಿಮಳೆಯಾಯಿತು. ಎಲ್ಲ ಪ್ರಜೆಗಳನ್ನು ತಾರತಮ್ಯವಿಲ್ಲದೆ ಸಮಾನವಾಗಿ ನೋಡಬೇಕಾದ ಪ್ರಧಾನ ಮಂತ್ರಿಗಳೇ ಆಡಬಾರದ ಮಾತುಗಳನ್ನು ಆಡುತ್ತಿದ್ದಾರೆ. ಈ ಬಗ್ಗೆ ಪ್ರತಿಪಕ್ಷಗಳು ಮತ್ತು ನಾಗರಿಕ ಹಕ್ಕುಗಳ ಸಂಘಟನೆಗಳು ಆಕ್ಷೇಪಿಸಿದ ನಂತರ ಚುನಾವಣಾ ಆಯೋಗ ಕಾಟಾಚಾರದ ನೋಟಿಸ್ ನೀಡಿದರೂ ಅದು ಕೈ ಸೇರಿದ ನಂತರವೂ ಮೋದಿಯವರು ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ನಂಜು ಕಾರುತ್ತಲೇ ಇದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಬಗ್ಗೆ ದೂರು ಸಲ್ಲಿಕೆಯಾದ 27 ದಿನಗಳ ನಂತರ ಬಹುತೇಕ ಮತದಾನ ಪ್ರಕ್ರಿಯೆ ಮುಗಿದ ಬಳಿಕ ಚುನಾವಣಾ ಆಯೋಗ ಜಾಣ ನಿದ್ರೆಯಿಂದ ಎಚ್ಚೆತ್ತಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ತಾರಾ ಪ್ರಚಾರಕರ ದ್ವೇಷ ಭಾಷಣಗಳ ಬಗ್ಗೆ ಕಾಟಾಚಾರದ ನಿರ್ದೇಶನಗಳನ್ನು ನೀಡಿದೆ. ಇದರಿಂದ ಒಂದು ಅಂಶ ಸ್ಪಷ್ಟವಾಗುತ್ತದೆ. ಚುನಾವಣಾ ಆಯೋಗವು ಎಲ್ಲ ಪಕ್ಷಗಳನ್ನು ಸಮಾನವಾಗಿ ನೋಡುವ ಹಾಗೂ ಮುಕ್ತ ನ್ಯಾಯಸಮ್ಮತ ಚುನಾವಣೆಗಳು ನಡೆಯುವಂತೆ ನೋಡಿಕೊಳ್ಳುವ ಮತ್ತು ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳುವ ಹೊಣೆಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ
ಈ ಬಾರಿ ಚುನಾವಣಾ ಪ್ರಚಾರದಲ್ಲಿ ಕೋಮು ಧ್ರುವೀಕರಣ ವನ್ನುಂಟುಮಾಡುವ ಭಾಷಣಗಳನ್ನು ಮಾಡುವಲ್ಲಿ ಯಾರು ಮುಂಚೂಣಿಯಲ್ಲಿ ದ್ದಾರೆಂಬುದು ಭಾರತದ ಜನರಿಗೆ ಮಾತ್ರವಲ್ಲ ಜಗತ್ತಿನ ಜನರಿಗೆಲ್ಲ ಗೊತ್ತಿದೆ. ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಸಲ್ಮಾನರ ವಿರುದ್ಧ ಮಾತ್ರವಲ್ಲ ದಕ್ಷಿಣ ಭಾರತದ ಜನರ ವಿರುದ್ಧ ವಿಷವನ್ನು ಕಾರುತ್ತಲೇ ಇದ್ದಾರೆ. ಚುನಾವಣಾ ಪ್ರಚಾರ ಆರಂಭವಾದ ದಿನದಿಂದಲೇ ಅವರು ದ್ವೇಷದ ಹೊಳೆಯನ್ನು ಹರಿಸುತ್ತಿದ್ದಾರೆ. ತಳಬುಡವಿಲ್ಲದ ಆರೋಪಗಳನ್ನು ಮಾಡುತ್ತಲೇ ಇದ್ದಾರೆ.ಇದನ್ನು ಕಂಡೂ ಕೇಳಿಯೂ ಚುನಾವಣಾ ಆಯೋಗ ಜಾಣ ಕುರುಡುತನ ಮತ್ತು ಜಾಣ ಕಿವುಡುತನ ಪ್ರದರ್ಶಿಸುತ್ತಿದೆ. ಪ್ರಚೋದನಕಾರಿ ಭಾಷಣಗಳ ಬಗ್ಗೆ ಈ ಹಿಂದೆ ಬಿಜೆಪಿಯ ಶೋಭಾ ಕರಂದ್ಲಾಜೆ, ದಿಲೀಪ್ ಘೋಷ್, ಕಾಂಗ್ರೆಸ್‌ನ ರಣದೀಪ್ ಸುರ್ಜೇವಾಲ, ಬಿಆರ್‌ಎಸ್‌ನ ಕೆ.ಚಂದ್ರಶೇಖರ ರಾವ್, ವೈಎಸ್‌ಆರ್ ಕಾಂಗ್ರೆಸ್‌ನ ಜಗನ್ ಮೋಹನ್ ರೆಡ್ಡಿ ಮುಂತಾವರ ವಿರುದ್ಧ ಕ್ರಮ ಕೈಗೊಂಡ ಚುನಾವಣಾ ಆಯೋಗ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮಾತ್ರ ಜಾಣ ಮೌನ ತಾಳಿದೆ. ಇಲ್ಲವೇ ಕಾಟಾಚಾರದ ನೋಟಿಸ್ ನೀಡುತ್ತಾ ಬಂದಿದೆ.
ಟಿ.ಎನ್. ಶೇಷನ್ ಅವರು ಚುನಾವಣಾ ಆಯುಕ್ತರಾಗಿದ್ದಾಗ ಮಾದರಿ ನೀತಿ ಸಂಹಿತೆಯನ್ನು ಪಾಲಿಸದ ರಾಜಕಾರಣಿಗಳನ್ನು ಅವರು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಸುಮ್ಮನೆ ಬಿಡುತ್ತಿರಲಿಲ್ಲ. ಆದರೆ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ನಂತರ ಉಳಿದೆಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ನಿಷ್ಕ್ರಿಯಗೊಳಿಸಿದಂತೆ ಚುನಾವಣಾ ಆಯೋಗವನ್ನೂ ಹಲ್ಲು ಕಿತ್ತ ಹಾವನ್ನಾಗಿ ಮಾಡಿದರೆಂಬುದು ಈಗ ಬರೀ ಆರೋಪವಾಗಿ ಉಳಿದಿಲ್ಲ. ಮೋದಿಯವರಿಗೆ ಚುನಾವಣೆಗಳನ್ನು ನಡೆಸುವ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ಬಗ್ಗೆ ಗೌರವವಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಈ ಬಾರಿ ಲೋಕಸಭಾ ಚುನಾವಣೆ ಘೋಷಣೆಯಾಗಿ ಪ್ರಕ್ರಿಯೆ ಆರಂಭವಾಗುವ ಮುನ್ನವೇ ಇಬ್ಬರು ಚುನಾವಣಾ ಆಯುಕ್ತರು ಏಕಾಏಕಿ ರಾಜೀನಾಮೆ ನೀಡಿದರು. ಅವರು ರಾಜೀನಾಮೆ ನೀಡಿದ ನಂತರ ಪ್ರಧಾನಿಯವರನ್ನೊಳಗೊಂಡ ಮೂವರ ಆಯ್ಕೆ ಸಮಿತಿ ನೂತನ ಚುನಾವಣಾ ಆಯುಕ್ತರನ್ನು ನೇಮಕ ಮಾಡಿತು. ಈ ಸಮಿತಿಯಲ್ಲಿ ಮುಂಚೆ ಇದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಸಂಸತ್ತಿನಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಹೊರಗಿಡಲಾಗಿತ್ತೆಂಬುದನ್ನು ಇಲ್ಲಿ ಗಮನಿಸಬಹುದಾಗಿದೆ.
ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳುವಲ್ಲಿ ಮತ್ತು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯುವಂತೆ ಕರ್ತವ್ಯ ನಿಭಾಯಿಸುವಲ್ಲಿ ವಿಫಲಗೊಂಡ ಅಧಿಕಾರದಲ್ಲಿ ಇರುವ ಪಕ್ಷದ ಸೂತ್ರದ ಗೊಂಬೆಯಂತೆ ನರ್ತಿಸುವ ಚುನಾವಣಾ ಆಯೋಗದ ಅವಶ್ಯಕತೆಯಾದರೂ ಏನಿದೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ.
ಪ್ರತಿಪಕ್ಷಗಳ ಆಕ್ಷೇಪದ ನಂತರ ಚುನಾವಣಾ ಆಯೋಗ ತುಂಬಾ ತಡಮಾಡಿ ಲೋಕಸಭಾ ಚುನಾವಣೆಯ ಮೊದಲ ಐದು ಹಂತದ ಮತದಾನದ ಸಂದರ್ಭದಲ್ಲಿ ಚಲಾವಣೆಯಾಗಿರುವ ಮತಗಳ ನಿಖರವಾದ ಅಂಕಿಅಂಶಗಳನ್ನು ನೀಡಿದೆ. ಆದರೆ ಆಕ್ಷೇಪ ಬಂದ ನಂತರ ತುಂಬಾ ತಡವಾಗಿ ಅಂಕಿಅಂಶ ನೀಡಿದ್ದು ಎಷ್ಟು ಸೂಕ್ತ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ.