ಜಾತಿಗಣತಿಗೆ ಹಿಂಜರಿಕೆ ಯಾಕೆ?
ಬಿಹಾರ ಜಾತಿ ಗಣತಿ ವರದಿಯನ್ನು ಸ್ವೀಕರಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದಾಗ ‘ಕರ್ನಾಟಕದಲ್ಲಿ ನಡೆದ ಸಮೀಕ್ಷೆಯನ್ನು ಸರಕಾರ ಯಾಕೆ ಅಧಿಕೃತವಾಗಿ ಸ್ವೀಕರಿಸುತ್ತಿಲ್ಲ?’ ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿತ್ತು. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಈ ಸಮೀಕ್ಷೆಗೆ ಆದೇಶ ನೀಡಿತ್ತು. ಮತ್ತು ಇದೀಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದೆ. ಕೆಲವು ತಿಂಗಳ ಹಿಂದೆ ‘ಶೀಘ್ರದಲ್ಲೇ ಕಾಂತರಾಜು ವರದಿಯನ್ನು ಸ್ವೀಕರಿಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಆದರೆ ಇದೀಗ ಆ ಬಗ್ಗೆ ಸರಕಾರ ತುಟಿ ಬಿಚ್ಚುತ್ತಿಲ್ಲ. ಈ ನಾಡಿನ ಬಲಾಢ್ಯ ಜಾತಿಗಳು ‘ಜಾತಿ ಗಣತಿಯನ್ನು ಸ್ವೀಕರಿಸಬಾರದು, ಅದನ್ನು ಜಾರಿಗೊಳಿಸಬಾರದು ಎನ್ನುವ ಒತ್ತಡ’ ಹೇರುತ್ತಿರುವ ಕಾರಣದಿಂದ ಸರಕಾರ ವರದಿಯನ್ನು ಸ್ವೀಕರಿಸಲು ಮೀನಾಮೇಷ ಎಣಿಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇಷ್ಟಕ್ಕೂ ಈ ಬಲಾಢ್ಯ ಜಾತಿಗಳೆಂದು ಕರೆಸಿಕೊಂಡವರು ಕೂಡ ‘ಹಿಂದುಳಿದ ವರ್ಗ’ಗಳಲ್ಲೇ ಗುರುತಿಸಲ್ಪಡುತ್ತಿದ್ದಾರೆ. ಹಿಂದುಳಿದ ಜಾತಿಯ ಹೆಸರಲ್ಲಿ ಸಂವಿಧಾನದ ಸಕಲ ಸವಲತ್ತುಗಳನ್ನು ಅನುಭವಿಸುತ್ತಾ, ಇದೀಗ ಜಾತಿಗಣತಿಯನ್ನು ‘ತಮ್ಮ ವಿರುದ್ಧ ನಡೆಸುತ್ತಿರುವ ಸಂಚು’ ಎಂದು ಭಾವಿಸಿ, ತಮ್ಮ ರಾಜಕೀಯ ಬಲ, ಹಣ ಬಲವನ್ನು ಮುಂದಿಟ್ಟು ತಡೆಯಲು ಹೊರಟಿದ್ದಾರೆ. ಮೇಲ್ಜಾತಿಯ ಜನರು ಇವರನ್ನು ತಮ್ಮ ಕಾಲಾಳುಗಳನ್ನಾಗಿ ಬಳಸುತ್ತಿದ್ದಾರೆ. ಮಹಾರಾಷ್ಟ್ರದಂತಹ ರಾಜ್ಯದಲ್ಲಿ ರಾಜಕೀಯವಾಗಿ, ಆರ್ಥಿಕವಾಗಿ ಹೆಚ್ಚು ಬಲಾಢ್ಯರಾಗಿರುವ ಮರಾಠಾ ಸಮುದಾಯ ‘ಮೀಸಲಾತಿಗಾಗಿ’ ಬೀದಿಗಿಳಿದು ಹೋರಾಡುತ್ತಿವೆ. ನಿಜಕ್ಕೂ ಮೀಸಲಾತಿಯ ಅರ್ಹತೆಯಿರುವ ತಳಸ್ತರದ ಜನರ ಹೋರಾಟದ ಧ್ವನಿಯನ್ನೇ ಅದುಮಿ ಹಿಡಿಯಲಾಗಿದೆ. ಹಣಬಲ, ತೋಳ್ಬಲ, ಜನಬಲ ಇರುವ ಜನರಿಗೆ ಮೀಸಲಾತಿಯ ಹೆಚ್ಚು ಪಾಲುಗಳು ದೊರಕುತ್ತಿರುವ ಈ ಸಂದರ್ಭದಲ್ಲಿ, ಜಾತಿ ಗಣತಿಯ ಮೂಲಕ ನಿಜವಾದ ದುರ್ಬಲರು, ಬಡವರು ಯಾರು ಎನ್ನುವ ಸಮೀಕ್ಷೆ ನಡೆಸಲು ಹೊರಟರೆ ಅದಕ್ಕೆ ಆಕ್ಷೇಪಗಳು ಎದುರಾಗುವುದು ಸಹಜ.
ಜಾತಿ ಗಣತಿಯ ವಿರೋಧಿಗಳ ನೇತೃತ್ವವನ್ನು ಸ್ವತಃ ಪ್ರಧಾನಿ ಮೋದಿಯವರೇ ವಹಿಸಿಕೊಂಡಿರುವುದು ವಿಪರ್ಯಾಸವಾಗಿದೆ. ‘ಜಾತಿ ಗಣತಿಯಿಂದ ಸಮಾಜ ಒಡೆಯುತ್ತದೆ’ ಎಂದು ಹೇಳುವ ಅವರು, ‘ಜಾತಿಯಿಂದ ಈಗಾಗಲೇ ಭಾರತದ ಸಮಾಜ ಛಿದ್ರವಾಗಿರುವುದರ ಬಗ್ಗೆ’ ಮೌನ ತಳೆದಿದ್ದಾರೆ. ‘ಜಾತಿ ಗಣತಿಯ ಮೂಲಕ ಯಾರು ನಿಜವಾದ ಶೋಷಿತರು, ಯಾರು ಹೆಚ್ಚು ಸಬಲರು ಎನ್ನುವುದನ್ನು ಗುರುತಿಸಿ ಅವರಿಗೆ ಸವಲತ್ತನ್ನು ನ್ಯಾಯಬದ್ಧವಾಗಿ ಹಂಚುವ ಮೂಲಕ’ ಜಾತಿಯಿಂದ ಛಿದ್ರವಾಗಿರುವ ಸಮಾಜವನ್ನು ಜೋಡಿಸುವ ಕೆಲಸ ತುರ್ತಾಗಿ ನಡೆಯಬೇಕಾಗಿದೆ. ಜಾತಿ ಗಣತಿಯನ್ನು ವಿರೋಧಿಸುವ ಪ್ರಧಾನಿ ಮೋದಿಯವರೇ ‘‘ನಾನೂ ಕೂಡ ಒಬ್ಬ ಹಿಂದುಳಿದ ವರ್ಗದ ಸಮುದಾಯದಿಂದ ಬಂದಿದ್ದೇನೆ’’ ಎಂದು ಸಾರ್ವಜನಿಕವಾಗಿ ಕಣ್ಣೀರು ಸುರಿಸುತ್ತಾರೆ. ಅವರು ಯಾವ ಜಾತಿಯನ್ನು ಪ್ರತಿನಿಧಿಸುತ್ತಾರೆಯೋ ಆ ಜಾತಿಯನ್ನು ‘ಹಿಂದುಳಿದ ವರ್ಗ’ ಎಂದು ಯಾಕೆ ಗುರುತಿಸಲಾಗುತ್ತಿದೆ? ಎನ್ನುವ ಪ್ರಾಥಮಿಕ ಅರಿವೂ ಅವರಿಗೆ ಇದ್ದಂತಿಲ್ಲ. ಸಂವಿಧಾನ ಅವರ ಸಮುದಾಯದ ಶೋಷಿತ ಸ್ಥಿತಿಗತಿಯನ್ನು ಗುರುತಿಸಿ ಮೇಲೆತ್ತಿದ ಕಾರಣಕ್ಕಾಗಿಯೇ ಇಂದು ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾಗಲು ಸಾಧ್ಯವಾಯಿತು. ಸಂವಿಧಾನದ ಆಶಯ ಇನ್ನಷ್ಟು ಪರಿಣಾಮಕಾರಿಯಾಗಿ ಈಡೇರಬೇಕಾದರೆ, ಹೊಸದಾಗಿ ಹಿಂದುಳಿದ ಮತ್ತು ದಲಿತ ಜಾತಿಗಳ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ನಡೆಯಬೇಕು. ಇದು ದುರ್ಬಲ ಸಮುದಾಯ ಮುಖ್ಯವಾಹಿನಿಗೆ ಬರುವುದಕ್ಕೆ ನೆರವಾಗುತ್ತದೆ. ಹಿಂದುಳಿದ ವರ್ಗದಿಂದ ಬಂದ ಕಾರಣಕ್ಕಾಗಿಯೇ ಜಾತಿ ಗಣತಿಯ ವಿಷಯದಲ್ಲಿ ಪ್ರಧಾನಿ ಮೋದಿಯವರ ಹೊಣೆಗಾರಿಕೆ ಬಹುದೊಡ್ಡದಿದೆ.
ಯಾವುದೇ ಗಣತಿ, ಸಮೀಕ್ಷೆಗಳನ್ನು ನಡೆಸದೆಯೇ ಈ ದೇಶದ ಮೇಲ್ಜಾತಿಯ ‘ಬಡವರಿಗೆ’ ಶೇ. ೧೦ ಮೀಸಲಾತಿಯನ್ನು ಸರಕಾರ ನೀಡಿತು. ಒಂದು ಕಾಲದಲ್ಲಿ ಮೀಸಲಾತಿಯಿಂದ ಪ್ರತಿಭೆಗಳಿಗೆ ಅನ್ಯಾಯವಾಗುತ್ತದೆ ಎನ್ನುವ ಹುಯೆಲೆಬ್ಬಿಸಿ, ದಲಿತರು ಮತ್ತು ತಳಸ್ತರದ ಶೂದ್ರರ ವಿರುದ್ಧ ಬಲಾಢ್ಯ ಜಾತಿಗಳನ್ನು ಎತ್ತಿಕಟ್ಟಿದ ಜನರು ಇಂದು ಈ ಶೇ. ೧೦ ಮೀಸಲಾತಿಯನ್ನು ಸದ್ದಿಲ್ಲದೆ ಅನುಭವಿಸಲು ಮುಂದಾಗಿದ್ದಾರೆ. ದಲಿತರು ಮತ್ತು ಹಿಂದುಳಿದವರ್ಗದ ಮೀಸಲಾತಿಯನ್ನು ಪ್ರಶ್ನಿಸುತ್ತಿದ್ದ ಈ ‘ಮೀಸಲಾತಿ ವಿರೋಧಿ’ಗಳು ಯಾರೂ ಸಾರ್ವಜನಿಕವಾಗಿ ಮುಂದೆ ಬಂದು ‘‘ದೇಶದ ಪ್ರತಿಭೆಗಳಿಗೆ ಅನ್ಯಾಯ ಮಾಡುವ ಈ ಮೀಸಲಾತಿ ನಮಗೆ ಬೇಡ’’ ಎಂದು ಘೋಷಿಸಲಿಲ್ಲ. ಶೇ. ೧೦ ಮೀಸಲಾತಿಯಿಂದಾಗಿ ಜಾತಿಯಾಧಾರದಲ್ಲಿ ನೀಡಲಾಗುತ್ತಿರುವ ಮೀಸಲಾತಿಯ ಉದ್ದೇಶವೇ ಅರ್ಥಕಳೆದುಕೊಂಡಿತು. ಸಂವಿಧಾನ ಮೀಸಲಾತಿಯನ್ನು ಜಾರಿಗೊಳಿಸಿರುವುದು ‘ಬಡವರನ್ನು ಉದ್ಧಾರ ಮಾಡುವುದಕ್ಕಾಗಿ’ ಅಲ್ಲ. ಬಡವರನ್ನು ಮೇಲೆತ್ತಲು ಸರಕಾರ ಈಗಾಗಲೇ ನೂರಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಜಾತಿ ಭೇದ ನೋಡದೆ ಬಡ ವರ್ಗಕ್ಕೆ ಬಿಪಿಎಲ್ ಕಾರ್ಡ್ಗಳನ್ನೂ ವಿತರಿಸಿದೆ. ಆದರೆ ಸಂವಿಧಾನ ಮೀಸಲಾತಿಯನ್ನು ನೀಡಿರುವುದು, ಜಾತಿಯ ಕಾರಣದಿಂದ, ತಮ್ಮ ಹುಟ್ಟಿನ ಕಾರಣದಿಂದ ಶತಶತಮಾನಗಳಿಂದ ಸಾಮಾಜಿಕ, ರಾಜಕೀಯ, ಆರ್ಥಿಕ ಅವಕಾಶಗಳಿಂದ ವಂಚಿತರಾದವರಿಗಾಗಿ. ಆದರೆ ಇಂದು ಈ ಶೋಷಿತರ ಹೆಸರಿನಲ್ಲಿ ಶೋಷಕರು ಸವಲತ್ತುಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ತೋಳಗಳಿಗೆ ಇನ್ನೆರಡು ಕೋರೆಹಲ್ಲುಗಳನ್ನು ನೀಡಿ ಅವುಗಳನ್ನು ಸಬಲರನ್ನಾಗಿಸುವ ಪ್ರಯತ್ನ ಇಂದು ನಡೆಯುತ್ತಿದೆ. ಇದು ನಿಲ್ಲಬೇಕಾದರೆ ಯಾವ ಯಾವ ಜಾತಿಗಳು ಪ್ರಾತಿನಿಧ್ಯದ ವಿಷಯದಲ್ಲಿ ಯಾವ ಮಟ್ಟದಲ್ಲಿದೆ ಎನ್ನುವ ನಿಖರ ಅಂಕಿಅಂಶ ಗಳು ಬಹಿರಂಗವಾಗಬೇಕಾಗಿದೆ. ಈ ನಿಖರ ಅಂಕಿಅಂಶಗಳಿಗಾಗಿ ಜಾತಿ ಗಣತಿ ಅನಿವಾರ್ಯವಾಗಿದೆ.
ಮುಖ್ಯವಾಗಿ ಜಾತಿ ಗಣತಿಯ ಬಗ್ಗೆ ಬಿಜೆಪಿಯೊಳಗಿರುವ ದಲಿತ ಮತ್ತು ಹಿಂದುಳಿದ ವರ್ಗದ ಸಂಸದರು ಮತ್ತು ಶಾಸಕರು ಧ್ವನಿಯೆತ್ತಬೇಕಾದ ಸಮಯ ಬಂದಿದೆ. ಕೇಂದ್ರ ಸಾಮಾಜಿಕ ನ್ಯಾಯ, ಸಬಲೀಕರಣ ರಾಜ್ಯ ಸಚಿವ ಎ. ನಾರಾಯಣ ಸ್ವಾಮಿಯವರು ‘‘ಜಾತಿ ಗಣತಿ ನಡೆಯಲೇಬೇಕು’’ ಎಂದು ಮಾಧ್ಯಮಗಳ ಮೂಲಕ ಆಗ್ರಹಿಸಿರುವುದು ಈ ನಿಟ್ಟಿನಲ್ಲಿ ಶ್ಲಾಘನೀಯ. ‘‘ಜಾತಿವಾರು ಜನಸಂಖ್ಯೆ ಗಣಿಸಿದರೆ ಸಾಲದು, ಕಳೆದ ೭೫ ವರ್ಷಗಳಲ್ಲಿ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಏನೆಲ್ಲ ಪ್ರಗತಿಯಾಗಿದೆ, ಯಾವೆಲ್ಲ ಯೋಜನೆಗಳ ಫಲ ಅರ್ಹರಿಗೆ ತಲುಪಿದೆ ಎನ್ನುವ ಮಾಹಿತಿ ಜಾತಿಗಣತಿಯಿಂದ ಬಹಿರಂಗವಾಗಲಿದೆ. ಆದುದರಿಂದ ಇಡೀ ದೇಶದಲ್ಲಿ ಜಾತಿ ಗಣತಿ ನಡೆಯುವ ಅಗತ್ಯವಿದೆ’’ ಎಂದು ಅವರು ಒತ್ತಿ ಹೇಳಿದ್ದಾರೆ. ನಾರಾಯಣ ಸ್ವಾಮಿ ತೋರಿದ ಈ ಧೈರ್ಯವನ್ನು ಬಿಜೆಪಿಯೊಳಗಿರುವ ಎಲ್ಲ ಶೋಷಿತ ಸಮುದಾಯದ ಜನಪ್ರತಿನಿಧಿಗಳೂ ಪ್ರದರ್ಶಿಸಬೇಕಾಗಿದೆ. ಇದೇ ಸಂದರ್ಭದಲ್ಲಿ ಹಿಂದುತ್ವವನ್ನು ಪ್ರತಿಪಾದಿಸುವ ಬಿಜೆಪಿಯೊಳಗೂ ‘ಹಿಂದುಳಿದ ವರ್ಗಗಳ ಮೋರ್ಚಾ’ಗಳಿವೆ. ಇವುಗಳು ಬರೇ ಹಿಂದುಳಿದ ವರ್ಗಗಳ ಮತಗಳನ್ನು ಬಿಜೆಪಿಗೆ ತಂದುಕೊಡುವ ಕೆಲಸವನ್ನು ಮಾಡುವುದಕ್ಕಷ್ಟೇ ಬಳಕೆಯಾಗುತ್ತಿದೆ. ಜಾತಿ ಗಣತಿಗೆ ಸಂಬಂಧಿಸಿದಂತೆ ಬಿಜೆಪಿಯೊಳಗಿರುವ ಹಿಂದುಳಿದ ವರ್ಗಗಳ ಮೋರ್ಚಾಗಳು ದೊಡ್ಡ ಧ್ವನಿಯಲ್ಲಿ ಮಾತನಾಡಬೇಕು. ದುರದೃಷ್ಟವಶಾತ್ ಜಾತಿ ಗಣತಿಯ ವಿರುದ್ಧ ಈ ಮೋರ್ಚಾಗಳನ್ನೇ ಎತ್ತಿ ಕಟ್ಟುವ ಕೆಲಸ ಆರೆಸ್ಸೆಸ್ನ ಮೇಲ್ಜಾತಿಯ ಮುಖಂಡರಿಂದ ನಡೆಯುತ್ತಿದೆ. ಬಿಜೆಪಿಯೊಳಗಿರುವ ದಲಿತ, ಹಿಂದುಳಿದ ವರ್ಗದ ಜನರ ಉದ್ಧಾರವೆಂದರೆ ಪರೋಕ್ಷವಾಗಿ ಹಿಂದೂಗಳ ಉದ್ಧಾರವೇ ಆಗಿದೆ. ಮತಯಾಚನೆ ಸಂದರ್ಭದಲ್ಲಿ ಹಿಂದೂಗಳ ಉದ್ಧಾರದ ಬಗ್ಗೆ ಮಾತನಾಡುವ ಆರೆಸ್ಸೆಸ್, ಹಿಂದೂಗಳ ಉದ್ಧಾರಕ್ಕಾಗಿಯೇ ನಡೆಸುತ್ತಿರುವ ಜಾತಿ ಗಣತಿಯನ್ನು ಯಾಕೆ ವಿರೋಧಿಸುತ್ತಿದೆ? ಎನ್ನುವ ಪ್ರಶ್ನೆಯನ್ನು ಕೇಳುವುದಕ್ಕೆ ಇದು ಯೋಗ್ಯ ಸಮಯವಾಗಿದೆ. ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾಗಳ ಮುಖಂಡರು ಈ ಪ್ರಶ್ನೆಯನ್ನು ಬಿಜೆಪಿ ವರಿಷ್ಠರಿಗೆ ಕೇಳಬೇಕಾಗಿದೆ.